ಶ್ರೀ ರುದ್ರಮುನಿಗಳಿಗೆ ಜ್ಞಾನಭೋದೆ
🌺 ಶ್ರೀ ರುದ್ರಮುನಿಗಳಿಗೆ ಜ್ಞಾನಭೋದೆ 🌺
ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಹೊಂದಿದ ಪೋತನ ಹಾಳು ಗ್ರಾಮದಲ್ಲಿ ವೇದಾಗಮ ಶಾಸ್ತ್ರ ಗಳಲ್ಲಿ ವಿಶ್ವಾಸವುಳ್ಳ ಕರವೀರ ಭದ್ರಸ್ವಾಮಿ ಗಳಿದ್ದರು. ಅವರ ಪತ್ನಿ ಮಹಾದೇವಮ್ಮ ಅತಿಥಿ ಸತ್ಕಾರ ಪರಾಯಣೆಯಾಗಿದ್ದು ಸ್ತ್ರೀ ಸಮಾಜದಲ್ಲಿ ಆದರ್ಶಪ್ರಾಯಳಾಗಿದ್ದಳು. ಇವರಿಗೆ ಐದು ಹೆಣ್ಣು, ಓರ್ವ ಗಂಡು ಮಗನಿದ್ದನು. ಎಷ್ಟು ಮಕ್ಕಳಿದ್ದರೇನು? ಓರ್ವ ಮಹಾಪುರುಷನು ತಮ್ಮ ಗರ್ಭದಲ್ಲಿ ಜನಿಸಬೇಕೆಂದು ಪರಮಾತ್ಮ ನಲ್ಲಿ ಪ್ರಾರ್ಥಿಸುತ್ತಿದ್ದರು. ಪರಮಾತ್ಮನ ಕೃಪೆಯಿಂದ ಮಹಾದೇವಮ್ಮ ಗರ್ಭವತಿಯಾಗಿ ಶಾಲಿವಾಹನ ಶಕೆ, ಹದಿನೇಳು ನೂರಾ ತೊಂಭತೈದು ಶ್ರೀಮುಖನಾಮ ಸಂವತ್ಸರ ಶ್ರಾವಣಮಾಸ ಶುಕ್ಲಪಕ್ಷ ಪಂಚಮಿ ಸೋಮವಾರ ಬ್ರಾಹ್ಮ ಮುಹೂರ್ತದಲ್ಲಿ (ಕ್ರಿ.ಶ. ಹದಿನೆಂಟುನೂರಾ ಎಪ್ಪತ್ತಮೂರು) ಸುಪುತ್ರನನ್ನು ಪಡೆದಳು.
ಆ ಮಗುವಿಗೆ ರುದ್ರಮುನಿಯೆಂದು ಹೆಸರಿಟ್ಟರು. ಮಗುವು ಬೆಳೆಯುತ್ತ ಮಳಲನ್ನು ಶಿವಲಿಂಗವನ್ನಾಗಿ ಮಾಡಿ ಪೂಜಿಸಿ ಅದಕ್ಕೆ ಪ್ರದಕ್ಷಿಣೆ ಹಾಕುತ್ತ ಓಂ ನಮಃ ಶಿವಾಯ ಮಂತ್ರ ಉಚ್ಚರಿಸುತ್ತಿದ್ದನು. ಇಂಥ ಧಾರ್ಮಿಕ ಆಟಗಳನ್ನಾಡುತ್ತ ಸ್ನೇಹಿತರಿಗೂ ಕಲಿಸುತ್ತಿದ್ದನು. ಅವನ ತಂದೆ ತಾಯಿಗಳು ಶಾಲೆಗೆ ಕಳಿಸಿದಾಗ ಐದನೆಯ ತರಗತಿಯವರೆಗೆ ಓದಿ ಮುಗಿಸಿದನು.
ಪೋತನಹಾಳ ಗ್ರಾಮದ ಹೆಣ್ಣು ಮಕ್ಕಳು ಬಳ್ಳಾರಿ ಜಿಲ್ಲಾ ಎಮ್ಮಿಗನೂರು ಗ್ರಾಮದ ಅವಧೂತ ಜಡಸ್ವಾಮಿಗಳ ದರ್ಶನ ಪಡೆಯಲು ಚಕ್ಕಡಿಯಲ್ಲಿ ಹೊರಟಾಗ ಬಾಲಕ ರುದ್ರಮುನಿಯು ತಾನು ಉನ್ಮತಯೋಗಿಯ ದರ್ಶನ ಪಡೆಯದೆ ಊಟ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಹೊರಟನು. ಎಮ್ಮಿಗನೂರಿನಲ್ಲಿ ಅವನ ಅಕ್ಕ ಚನ್ನಮ್ಮ ಮತ್ತು ಮಾವ ನಾಗಯ್ಯನ ಮನೆಗೆ ಬಂದು ತನ್ನ ವಿಚಾರ ತಿಳಿಸಿದನು. ಆಗ ಅವರು `ರುದ್ರಮುನಿ, ಜಡೆಸ್ವಾಮಿಗಳು ಯಾವಾಗ ಎಲ್ಲಿರುವರೋ ಯಾರಿಗೂ ಗೊತ್ತಾಗುವುದಿಲ್ಲ. ಎಷ್ಟೋ ಜನರು ದರ್ಶನವಾಗದೆ ನಿರಾಶರಾಗಿ ಹೋಗುತ್ತಾರೆ. ನೀನು ಊಟ ಮಾಡು' ಎಂದಾಗ `ಮಾವಯ್ಯ, ಅವರ ದರ್ಶನವಿಲ್ಲದೆ ಊಟ ಮಾಡುವುದಿಲ್ಲ' ಎಂದು ಹಟ ಹಿಡಿದನು.
ಅಷ್ಟರಲ್ಲಿ ಜಡಸ್ವಾಮಿಗಳು ಅಲ್ಲಿಯೇ ಬಂದರು. ಆಗ ರುದ್ರಮುನಿಯು ಸಾಷ್ಟಾಂಗ ನಮಿಸಿದಾಗ ಸ್ವಾಮಿಗಳು ಅವನನ್ನು ಎತ್ತಿ ಹಿಡಿದು ನನಗೆ ಬಾಳೆಹಣ್ಣು ಕೊಡುವೆಯಾ?' ಎಂದಾಗ ಮುನಿಯು ತಂದು ಕೊಟ್ಟನು. ಇದರಂತೆ ಅವರು ಬೇಡಿದ ಹಾಗೆ ಎಲ್ಲವನ್ನೂ ತಂದು ಕೊಟ್ಟನು. ಇದನ್ನು ನೋಡಿದ ಮಾವ ನಾಗಯ್ಯ `ಅಳಿಯನೇ, ಅವನು ಕೇಳಿದಂತೆ ತಂದು ಕೊಟ್ಟರೆ ಅವನು ಬೇಡುವುದನ್ನು ಬಿಡುವುದಿಲ್ಲ. ಅವನು ಕೇಳಿದಾಗ ಆಗಲಿ ಸ್ವಾಮಿ ಎಂದರೆ ಮತ್ತೆ ಕೇಳುವುದಿಲ್ಲ' ಎಂದನು. ಸ್ವಾಮಿಗಳು ಮತ್ತೆ ಕೇಳಿದಾಗ ರುದ್ರಮುನಿಯು 'ಆಗಲಿ ಸ್ವಾಮಿ' ಎಂದಾಗ ಸ್ವಾಮಿಗಳು ಹೊರಟುಹೋದರು. ಸ್ವಾಮಿಗಳು ಇನ್ನೊಮ್ಮೆ ದರ್ಶನ ನೀಡಿದಾಗ ರುದ್ರಮುನಿಯನ್ನು ಹತ್ತಿರ ಕರೆದು ತಮ್ಮ ಜೇಬಿನಿಂದ ಕಾಗದ ತೆಗೆದು ಅದರ ಮೇಲೆ ಸೀಸುಕಡ್ಡಿಯಿಂದ `ಅಣ್ಣಿಗೇರಿ ಅಳಹಳ್ಳಿ' ಎಂದು ಬರೆದು ಒಂದು ಬಟ್ಟೆಯಲ್ಲಿಟ್ಟು ರುದ್ರಮುನಿಯ ತಲೆಗೆ ಕಟ್ಟ `ನಿನ್ನ ಸ್ವಗ್ರಾಮದಲ್ಲಿ ಬಿಚ್ಚು' ಎಂದು ಹೇಳಿ ಹೋದರು. ಆಮೇಲೆ ಪೋತನಹಾಳು ಗ್ರಾಮಕ್ಕೆ ಬಂದರು. ಆಗ ರುದ್ರಮುನಿಯು ಸ್ವಾಮಿಗಳು ಕಟ್ಟಿದ ಬಟ್ಟೆ ಬಿಚ್ಚಿದಾಗ ಹಣೆಯ ಭಾಗದಲ್ಲಿ ಒಂದು ಗಡುವು (ಗಂಟು) ಕಂಡಿತು. ಅದು ಅವರಿಗೆ ಕಡೆಯತನಕ ಬಾಧಿಸಲಿಲ್ಲ. ಆ ಚೀಟಿಯಲ್ಲಿ ಅಣ್ಣಿಗೇರಿ ಅಳಹಳ್ಳಿ ಎಂದು ಬರೆದಿತ್ತು. ಈಗ ಅಣ್ಣಿಗೇರಿ ಗ್ರಾಮದಲ್ಲಿ ಮುನಿಗಳ ಮಠವಿದೆ .
ತಂದೆ ಕರವೀರಸ್ವಾಮಿಗಳ ಕಾಯಕವೆಂದರೆ ಮುಳ್ಳಾವುಗೆ (ಕಟ್ಟಿಗೆಯ ಪಾದುಕೆಗಳಿಗೆ ಮೊಳೆ ಬಡೆದಂಥವುಗಳು)ಯ ಮೇಲೆ ಬಜಾರದಲ್ಲಿ ನಿಂತು ಹಟದಿಂದ ಹಣ ವಸೂಲಿ ಮಾಡುವುದು. ಇದರಿಂದ ಸಂಸಾರ ಸಾಗಿತ್ತು. ಆ ಕಾಯಕವನ್ನೇ ರುದ್ರಮುನಿಯೂ ಸಾಗಿಸಿದ್ದನು. ಮುಂದೆ ಇಪ್ಪತೈದು ವರ್ಷದವನಾದಾಗ ತಂದೆ ತಾಯಿಗಳು ಹರ್ಲಾಪುರದ ಸಿದ್ದಮ್ಮನೆಂಬ ಕನ್ಯೆಯ ಜೊತೆಗೆ ಲಗ್ನ ಮಾಡಲು ಸಿದ್ಧತೆ ನಡೆಸಿದಾಗ ಅದನ್ನು ಕಂಡು ರುದ್ರಮುನಿಗೆ ಇಚ್ಚೆಯಿಲ್ಲದಿದ್ದರೂ ಅದಕ್ಕೆ ಅಂಟಿಕೊಳ್ಳದೆ ಪುರಾಣ ಪುಣ್ಯಕತೆಗಳನ್ನು ಹೇಳುತ್ತಿದ್ದನು. ಮೂವತ್ತು ವರ್ಷದವನಾದಾಗ ಬಸವಯ್ಯನೆಂಬ ಮಗ ಹುಟ್ಟಿದನು. ಅದರ ಬಗ್ಗೆ ಅವನಿಗೆ ಯಾವ ಹಿನ್ನೂ ಇರಲಿಲ್ಲ. ಸ್ವಬುದ್ಧಿಯಿಂದ ಗ್ರಂಥದ ಜ್ಞಾನ ಮಾಡಿಕೊಂಡರೆ ನಿಷ್ಪಲವೆಂದು ಗುರುಶೋಧನೆಯಲ್ಲಿದ್ದನು.
ಆ ಹೊತ್ತಿಗೆ ಎಮ್ಮಿಗನೂರು ಜಡೆಸ್ವಾಮಿಗಳು ಶಿವಾಧೀನರಾಗಿದ್ದರು. ಅವರ ಸಮಾಧಿಯ ದರ್ಶನ ಪಡೆಯಲು ಹೋದಾಗ ಅವರ ಸಮಾಧಿಯನ್ನು ಕಟ್ಟಿಸುತ್ತಿರುವ ಶ್ರೋತ್ರೀಯ ಬ್ರಹ್ಮನಿಷ್ಟ ಶ್ರೀ ಶಂಕರೇಂದ್ರ ಸ್ವಾಮಿಗಳ ದರ್ಶನವಾಯಿತು. ಅವರು ಮದ್ರಾಸ ಸೀಮೆಗೆ ಸೇರಿದ ನಂದ್ಯಾಲ ಪಟ್ಟಣದವರು. ಇವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಶಿಷ್ಯ ಖಾಸಗತ ಯೋಗಿಗಳ ಶಿಷ್ಯರು. ಬೆಳಗಾವಿ ಜಿಲ್ಲೆಯ ಇಟ್ಟಣಗಿ ಗ್ರಾಮದಲ್ಲಿ ಇವರ ಸಮಾಧಿಯಿದ. ಶಂಕರೇಂದ್ರರು ತಮ್ಮ ಜೀವಿತ ಕಾಲದಲ್ಲಿ ಅನೇಕ ಮುಮುಕ್ಷುಗಳಿಗೆ ಬ್ರಹ್ಮವಿದ್ಯೆಯ ಮೂಲಕ ಉದ್ಧರಿಸಿದವರು ಇರಲಿ.
ಶ್ರೀ ಶಂಕರೇಂದ್ರ ಸ್ವಾಮಿಗಳು ರುದ್ರಮುನಿಯ ವಿವೇಕ ವಿನಯಾದಿ ಗುಣಗಳನ್ನು ಕಂಡು "ಅಯ್ಯಾ ನಿನ್ನ ಹೆಸರೇನು? ನೀನು ಮುಳ್ಳಾವುಗೆಯ ಜಂಗಮನಂತೆ ತೋರುತ್ತಿರುವಿ. ನಿನ್ನ ಗ್ರಾಮವಾವುದು?' ಎಂದಾಗ ರುದ್ರಮುನಿಯು ತನ್ನ ಜೀವನ ವೃತ್ತಾಂತ ತಿಳಿಸಿ ನನ್ನನ್ನು ಉದ್ದರಿಸಬೇಕೆಂದು ಬೇಡಿಕೊಂಡನು. ಆಗ ಸ್ವಾಮಿಗಳು ಬರುವ ಶಿವರಾತ್ರಿಗೆ ನಿಮ್ಮೂರಿಗೆ ಬರುತ್ತೇನೆ. ನೀನು ಹೋಗು ಎಂದು ಹೇಳಿ ಕಳಿಸಿದರು. ಜಡಿಸ್ಸಾಮಿಗಳ ಸಮಾಧಿ ಕಟ್ಟಡ ಮುಗಿದ ನಂತರ ಶಂಕರೇಂದ್ರರು ಪೋತನಹಾಳು ಗ್ರಾಮಕ್ಕೆ ಬಂದಾಗ ರುದ್ರಮುನಿಗಳು ತಮ್ಮ ಮನೆಯಲ್ಲಿರಿಸಿಕೊಂಡು ಸೇವೆ ಮಾಡಿದರು. ರುದ್ರಮುನಿಗಳ ಅಧಿಕಾರತ್ವ ತಿಳಿದು ಸ್ವಾಮಿಗಳು ತತ್ವಮಸಿ ಮಹಾವಾಕ್ಕ ಬೋಧಿಸಿ ಅವರನ್ನು ಹತ್ತಿರ ಕರೆದು ಬಲಗಿವಿಯಲ್ಲಿ ಸೋಹಂ ಮಂತ್ರ ಬೋಧಿಸಿದರು.
ಶಂಕರೇಂದ್ರರು ಅಲ್ಲಿ ಎರಡು ಮೂರು ತಿಂಗಳಿದ್ದು ಜ್ಞಾನಸಿಂಧು ಮೊದಲಾದ ಗ್ರಂಥಗಳನ್ನು ಬೋಧಿಸುತ್ತಿರುವುದರಿಂದ ಬಹಳಷ್ಟು ಜನ ಕೇಳಿ ಧನ್ಯರಾದರು. ಸ್ವಾಮಿಗಳು ಆ ಗ್ರಾಮ ಬಿಟ್ಟು ಹೋಗುವಾಗ ರುದ್ರಮುನಿಗಳು ನಾನೂ ನಿಮ್ಮ ಜೊತೆಗೆ ಬರುತ್ತೇನೆಂದಾಗ ಸ್ವಾಮಿಗಳು 'ಶಿಷ್ಯನೇ ಇನ್ನು ನಾಲ್ಕು ತಿಂಗಳು ಬಿಟ್ಟು ಬರುತ್ತೇನೆ' ಎಂದು ಹೇಳಿ ಹೊರಟರು. ಅಲ್ಲಿಂದ ಸಮೀಪದಲ್ಲಿರುವ ಬಾಗಲವಾಡ ಗ್ರಾಮಕ್ಕೆ ಬಂದು ಅಲ್ಲಿಯ ಮುಕ್ಕಣ್ಣನೆಂಬ ಶಿಷ್ಯನ ಮನೆಯಲ್ಲಿದ್ದರು. (ಶಂಕರೇಂದ್ರರು ಪೋತನಹಾಳು ಗ್ರಾಮದಲ್ಲಿದ್ದಾಗ ಮುಕ್ಕಣ್ಣ ತನ್ನ ಪತ್ನಿ ಸಹಿತ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದರಿಂದ ತಾವಿಬ್ಬರೂ ಅಣ್ಣ ತಂಗಿಯರೆಂದು ಭಾವಿಸಿ ಕೆಲವು ಕಾಲ ನಡೆದು ಕೊನೆಗೆ ಮುಕ್ಕಣ್ಣನು ಅನೇಕ ಮಹಿಮೆಗಳನ್ನು ತೋರಿಸಿ ಗದಗ ಬೆಟಗೇರಿಯ ಮಧ್ಯದಲ್ಲಿರುವ ಕರಿಯಮ್ಮನ ಕಲ್ಲು ಎಂಬ ಸ್ಥಾನದಲ್ಲಿ ಮಹಾಸಮಾಧಿ ಹೊಂದಿದನು. ಆ ಸಮಾಧಿಗೆ ನಡೆದುಕೊಳ್ಳುವವರೂ ಉಂಟು.) ಶಂಕರೇಂದ್ರ ಸ್ವಾಮಿಗಳು ಮುಕ್ಕಣ್ಣನನ್ನು ಜೊತೆಗೆ ಕರೆದುಕೊಂಡು ಗೋಕರ್ಣಕ್ಕೆ ಬಂದರು.
ಇತ್ತ ನವಲಗುಂದ ತಾಲೂಕು ಅಣ್ಣೀಗೇರಿ ಗ್ರಾಮದಲ್ಲಿ ತೋಟಪ್ಪ ದೇಸಾಯಿಯೆಂಬ ದೊಡ್ಡ ಶ್ರೀಮಂತರಿದ್ದರು. ಅವರು ಧಾರ್ಮಿಕರಾಗಿದ್ದು ಸತ್ಸಂಗದಲ್ಲಿರುತ್ತಿದ್ದರು. ತಮ್ಮ ಪತ್ನಿ ದಿವಂಗತರಾದಾಗ ಅವರು ವೈರಾಗ್ಯಶಾಲಿಗಳಾಗಿದ್ದು, ತನ್ನ ಮಿತ್ರರೊಂದಿಗೆ ಗೋಕರ್ಣಕ್ಕೆ ಬಂದರು. ಅಲ್ಲಿ ಒಂದೆಡೆ ಶಂಕರೇಂದ್ರ ಸ್ವಾಮಿಗಳು ಪ್ರವಚನ ನೀಡುತ್ತಿರುವಾಗ ಅದನ್ನು ಕೇಳಿದ ದೇಸಾಯಿಯವರು ಅವರ ತತ್ವಜ್ಞಾನ ತಿಳಿದು ಅವರ ಶಿಷ್ಯರಾದರು. ಅಲ್ಲಿ ಒಂದು ತಿಂಗಳು ಕಳೆದ ನಂತರ ಪೋತನಹಾಳು ಗ್ರಾಮದ ಶಿಷ್ಯ ರುದ್ರಮುನಿಗೆ ಕೊಟ್ಟ ಮಾತಿನಂತೆ ಸ್ವಾಮಿಗಳು ಮತ್ತು ದೇಸಾಯಿಯವರು ಪೋತನಹಾಳು ಗ್ರಾಮಕ್ಕೆ ಹೋದಾಗ ಗುರುಗಳ ಬರುವಿಕೆಗಾಗಿ ಕಾಯುತ್ತಿದ್ದ ರುದ್ರಮುನಿಗಳು ಸ್ವಾಮಿಯವರನ್ನೂ ದೇಸಾಯಿಯವರನ್ನೂ ತಮ್ಮ ಮನೆಗೆ ಕರೆದು ಸ್ನಾನ ಭೋಜನಾದಿಗಳನ್ನು ಮಾಡಿಸಿದರು. ಆಗ ದೇಸಾಯಿಯವರು ರುದ್ರಮುನಿಗಳು ಮಹಾಮಹಿಮರಾಗುವರೆಂದು ಗುರುತಿಸಿದರು.
ಮುಂದೆ ಅಲ್ಲಿಂದ ಮೂವರೂ ಕಾಶಿ ಮೊದಲಾದ ಕ್ಷೇತ್ರಗಳ ಯಾತ್ರೆ ಮಾಡಿ ಅಣ್ಣೀಗೇರಿಗೆ ಬಂದು ಶಂಕರೇಂದ್ರರು ಈಶ್ವರ ಸ್ವಾಮಿಯ ಮಠದಲ್ಲಿ ಶಾಸ್ತ್ರ ನಡೆಸುತ್ತಿದ್ದರು. ಆ ಮರದ ಸಮೀಪದ ಬಯಲಿನಲ್ಲಿ ಮಠ ಸ್ಥಾಪಿಸಬೇಕೆಂಬ ಶಂಕರೇಂದ್ರರ ಆದೇಶದಂತೆ ದೇಸಾಯಿಯವರು ಹಣ್ಣು ಕಾಯಿ ಮುಂತಾದವುಗಳನ್ನು ತಂದು ಆ ಜಾಗೆಯಲ್ಲಿ ತಗ್ಗು ತೋಡಿ ದಾಸೋಹಮಠವೆಂದು ನಾಮಕರಣ ಮಾಡಿ ಚಪ್ಪರ ಹಾಕಿಸಿದರು. ನಂತರ ಶಂಕರೇಂದ್ರ ಸ್ವಾಮಿಗಳು ದೇಸಾಯಿಯವರನ್ನು ಕುರಿತು `ತೋಟಪ್ಪ, ಇಲ್ಲಿ ಮಠವಂತೂ ಸ್ಥಾಪನೆಯಾಯಿತು. ಇನ್ನು ಮುಂದೆ ರುದ್ರಮುನಿಗಳನ್ನು ಗುರುವೆಂದು ಭಾವಿಸು. ಅವನು ಇಲ್ಲಿಯೇ ನೆಲೆಗೊಳ್ಳಲಿ' ಎಂದು ಆಶೀರ್ವದಸಿದರು. ಬೆಳಗಾವ ಜಿಲ್ಲೆಯ ಇಟ್ಟಣಗಿ ಗ್ರಾಮದ ಜನರು ಶಂಕರೇಂದ್ರರನ್ನು ಕರೆದುಕೊಂಡು ಹೋದರು. ಅಲ್ಲಿ ಶಂಕರೇಂದ್ರರು ಮಹಾಸಮಾಧಿ ಹೊಂದಿದರು. ಇದನ್ನು ತಿಳಿದ ರುದ್ರಮುನಿಗಳು ದೇಸಾಯರು ಮತ್ತು ಇನ್ನಿತರರು ಅಲ್ಲಿಗೆ ಹೋಗಿ ಪುಣ್ಯಾರಾಧನೆ ತೀರಿಸಿ ಸ್ವಗ್ರಾಮಕ್ಕೆ ಬಂದರು. ಅವರ ಸಮಾಧಿ ಇನ್ನೂ ಅಲ್ಲಿದೆ.
ಈ ಮುಂಚೆ ಕಾಶಿಗೆ ಹೋಗುವಾಗ ರುದ್ರಮುನಿಗಳ ಪತ್ನಿ ಸಿದ್ಧಮ್ಮನಿಗೆ ವಚನ ಕೊಟ್ಟಂತೆ ದೇಸಾಯಿಯವರು ಅವಳನ್ನು ಕರೆದುಕೊಂಡು ಬರುತ್ತೇನೆಂದು ತಿಳಿಸಿದಾಗ ಅವರು ನಿರಾಕರಿಸಿದರು. ಆಗ ಅವರ ಮನವೊಲಿಸಿ ಪೋತನಹಾಳು ಗ್ರಾಮಕ್ಕೆ ಹೋಗಿ ಸಿದ್ಧಮ್ಮನಿಗೆ ಅಣ್ಣಿಗೇರಿಗೆ ಬರಲು ಕರೆದಾಗ ತನ್ನ ಜೊತೆಗೆ ತನ್ನ ಮಗನನ್ನು ಕಳಿಸಲು ಪತಿಯ ಅಣ್ಣ ಬಿಡದಿದ್ದಾಗ ಮಗುವನ್ನು ಬಿಟ್ಟು, ಅಣ್ಣೀಗೇರಿಗೆ ಬಂದು ಅಳುತ್ತ ಪತಿಗೆ ನಮಸ್ಕರಿಸಿದಾಗ ಸ್ವಾಮಿಗಳು ಹೇಳಿದರು `ನೋಡು, ಈ ಹಿಂದಿನ ಎಲ್ಲ ಸಂಬಂಧಗಳನ್ನು ಮರೆತು ಪ್ರತಿದಿನ ಊರಲ್ಲಿಯ ಭಿಕ್ಷಾನ್ನ ತಂದು ಅತಿಥಿ ಸತ್ಕಾರ ಮಾಡಬೇಕು. ಇಲ್ಲವಾದರೆ ನಿನ್ನ ಸ್ವಗ್ರಾಮಕ್ಕೆ ಹೋಗಬಹುದು' ಎಂದಾಗ ಪತಿವೃತಾ ಶಿರೋಮಣಿ ಸಿದ್ದಮ್ಮ ಅವರು ಹೇಳಿದಂತೆ ಸೇವೆ ಸಲ್ಲಿಸುತ್ತ ಮುಂದೆ ಅಲ್ಲಿಯೇ ದೇಹತ್ಯಾಗ ಮಾಡಿದಳು.
ಮುಂದೆ ತೋಟಪ್ಪ ದೇಸಾಯರು ಸುಂದರ ಮಠ ಕಟ್ಟಿ ದಾಸೋಹ ನಡೆಸಲು ಮಠಕ್ಕೆ ನಾಲ್ಕು ಎಕರೆ ಭೂಮಿ ಒಂದು ತೋಟವನ್ನು ದಾನ ಕೊಟ್ಟು ಕಾಗದಪತ್ರ ಮಾಡಿಸಿದರು. ಮುಂದೆ ಶಾಸ್ತ್ರ ಪುರಾಣ ಪ್ರವಚನ ನಡೆಯಹತ್ತಿದವು. ಕೆಲವು ದಿವಸ ಕಳೆದ ನಂತರ ರುದ್ರಮುನಿ ಸ್ವಾಮಿಗಳು ಪರಮಾನುಭವಬೋಧೆ ಶಾಸ್ತ್ರ ನಡೆಸುತ್ತಿದ್ದರು. ಆಗ ಇಬ್ಬರೂ ಫಲಪುಷ್ಪಗಳನ್ನು ಸಮರ್ಪಿಸಿ ಒಂದೆಡೆಗೆ ಕುಳಿತರು. ತಮ್ಮ ಶಾಸ್ತ್ರ ಮುಗಿಸಿ ಸಿದ್ಧರು, ರುದ್ರಮುನಿಗಳಿಗೆ ಸ್ವಲ್ಪ ಹೊತ್ತು ಪ್ರವಚನ ಮಾಡಲು ತಿಳಿಸಿದಾಗ ಅವರು ಗುರುಭಕ್ತಿ ವಿಷಯ ಪ್ರತಿಪಾದನೆ ಮಾಡಿದರು. ಇದನ್ನು ಕೇಳಿ ಸಂತೋಷಗೊಂಡು ಸಿದ್ಧರ ಪೂಜೆಯ ನಂತರ ರುದ್ರಮುನಿಗಳಿಗೆ ಊಟಕ್ಕೆ ಕರೆದರು. ಆಗ ಮುನಿಗಳು ಈಗ ಬರುತ್ತೇನೆಂದು ಹೇಳಿ ಕೆರೆಯಲ್ಲಿ ಸ್ನಾನ ಮಾಡಿ ಒಂದೆಡೆ ಕುಳಿತು ದೇವಿಮೂರ್ತಿಯನ್ನು ಮನೋಪೀಠದಲ್ಲಿ ಕೂಡಿಸಿ ಪೂಜಿಸಿ, ಅಷ್ಟೋತ್ತರ ಶತನಾಮಾವಳಿ ಸ್ಮರಿಸುತ್ತ ಚಿತ್ತಲೀನ ಮಾಡಿ ಕುಳಿತರು.
ಅತ್ತ ಸಿದ್ಧಾರೂಢರು ಮುನಿಗಳು ಬರಲಿಲ್ಲವೆಂದು ಕೆರೆಯ ದಂಡೆಯಲ್ಲಿಯ ರುದ್ರಮುನಿಗಳನ್ನು ನೋಡಿ ಮರಳಿ ಬಂದರು. ಎರಡು ತಾಸಿನ ನಂತರ ಬಂದಾಗ ಅವರಿಗೆ ಊಟ ಮಾಡಿಸಿ ಕೇಳಿದರು 'ರುದ್ರಮುನಿಯೇ, ದೇವೀ ಉಪಾಸನೆಯನ್ನು ಮಾಡುತ್ತಿರುವ ಅದರ ಫಲವೇನು?' ಎಂದಾಗ ಮುನಿಗಳು `ಸದ್ಗುರುವೇ, ದೇವಿ ಉಪಾಸನೆಯನ್ನು ಚಿಕ್ಕಂದಿನಿಂದ ಮಾಡುತ್ತಿರುವೆನು. ಇದಕ್ಕೆ ಫಲವೇನೆಂದರ ಚಿದಾನಂದಾವಧೂತರು ಜ್ಞಾನಸಿಂಧು ದೇವಿ ಪುರಾಣ ಮೊದಲಾದವುಗಳನ್ನು ಆ ದೇವಿಯ ಉಪಾಸನೆಯಿಂದಲೇ ಅವರಿಗೆ ಬರೆಯಲು ಸಾಧ್ಯವಾಯಿತು. ನಿಜಗುಣರು ದೇವಿಯನ್ನು ಅನಂತರೀತಿಯಿಂದ ಕೊಂಡಾಡಿದ್ದಾರೆ' ಎಂದಾಗ ಸಿದ್ಧರು 'ಮುನಿಯೇ ನೀನು ಹೇಳಿದ್ದು ನಿಜ. ಸಾಧಕನು ತನ್ನ ಮಲವಿಕ್ಷೇಪಾದಿ ದೋಷಗಳನ್ನು ಕಳೆದುಕೊಳ್ಳಲು ವೇದೋಕ್ತ ಕರ್ಮೋಪಾಸನೆಗಳನ್ನು ಮಾಡಬೇಕು. ನೀನು ಆ ದೋಷವಿಲ್ಲದ ಬ್ರಹ್ಮನಿಷ್ಕನಿರುವಿ. ಚಿದಾನಂದರು ಸಾಕ್ಷಾತ್ ದೇವಿಯೇ ಅವರು. ಉಪಾಸಕರಲ್ಲ. ಸಾಮಾನ್ಯ ಜನರ ಕಾಮನೆಗಳು ಕೈಗೂಡಲೆಂದು ಗ್ರಂಥಗಳನ್ನು ಬರೆದಿದ್ದಾರೆ. ಅವರು ಭಗವತ್ ಸ್ವರೂಪರು. ಉಪಾಸನೆಯಿಂದ ನಿನಗೇನು ಬೇಕಾಗಿದೆ? ಅದರಿಂದ ಜನರಿಗೇನು ಪ್ರಯೋಜನ? ಎಂದಾಗ ಮುನಿಗಳು ಹೇಳಿದರು.
ಗುರುಗಳೆ, ಯುದ್ಯದಾಚರತಿ ಶ್ರೇಷ್ಠ ಸತ್ತ ದೇವೇತರೋಜನಃ | ಸಯತ್ಪ್ರಮಾಣಂ ಕುರುತೆ ಲೋಕಸ್ತನುವರ್ತತೆ ಅಂದರೆ ಜ್ಞಾನಿಯು ಯಾವುದನ್ನು ಅಂಗೀಕರಿಸುವನೋ ಅದನ್ನೇ ಲೋಕದ ಜನರು ಅಂಗೀಕರಿಸುತ್ತಾರೆ ಎಂದು ಭಗವದ್ಗೀತೆಯ ವಾಕ್ಯವಿದೆ. ಈಗ ನಾನು ಆಚರಿಸುವ ಉಪಾಸನೆಯು ಜಗತ್ಕಲ್ಯಾಣಕಾರಣವಾಗಿದೆ ಎಂದನು.
ಆಗ ಸಿದ್ದಾರೂಢರು `ಮುನಿಯೇ, ಗಿತಾವಾಕ್ಯವು ಸತ್ಯವಾಗಿದೆ. ಉಪಾಸನೆಯ ಫಲನ್ನು ಚಿತ್ತೇಕಾಗ್ರತೆಯನ್ನು ತಂದು ಕೊಡುತ್ತದೆ. ಅದರಿಂದ ಅಜ್ಞಾನಾವರಣ ನಿವಾರಣೆಯಾಗುವುದಿಲ್ಲ. ಆ ದೋಷವು ಸುಜ್ಞಾನದಿಂದ ನಿವೃತ್ತಿಯಾಗುತ್ತದೆ. ಮಲ, ವಿಕ್ಷೇಪ, ಆವರಣ, ದೋಷ ಈ ಮೂರು ಬಗೆಯ ದೋಷಗಳಿಂದ ಕೂಡಿದ ಜನರಿದ್ದಾರೆ. ಅವರೆಲ್ಲರನ್ನೂ ಉದ್ಧರಿಸಬೇಕಾದರೆ ಜಗತ್ಕಲ್ಯಾಣ ಮಾರ್ಗದಲ್ಲಿ ತೊಡಗಬೇಕಾಗುತ್ತದೆ. ಒಂದು ಉಪಾಸನೆಯಿಂದ ಸಾಧ್ಯವಾಗಲಾರದು. ಸರ್ವರೂ ಉದ್ಧಾರವಾಗಬೇಕಾದರೆ ಶಿವಭಜನಾ ಸಪ್ತಾಹವೆಂಬ ಕಾರ್ಯವಿದೆ. ಅದು ನಿನ್ನಿಂದ ಸಾಧ್ಯ. ಅದರಲ್ಲಿ ನೀನು ತೊಡಗು. ಸಪ್ತಾಹವೆಂದರೆ ಏಳು ಹಗಲು ಎಂಬ ಅರ್ಥವಾಗುತ್ತದೆ. ಪ್ರತಿಯೊಂದು ದಿವಸ ಮಾಡುವ ಅದರ ಅಂಗಗಳೆಂದರೆ ಭಜನೆ ಶಾಸ್ತ್ರ ಪ್ರತಿಪಾದನೆ, ಉಪನ್ಯಾಸ, ಬ್ರಹ್ಮಜಿಜ್ಞಾಸೆ, ಪುರಾಣ, ಪ್ರತಿಪಾದನೆ, ಕೀರ್ತನ, ಅನ್ನಸಂತರ್ಪಣೆ ಇವೇ ಸಪ್ತಾಹದ ಅಂಗಗಳು.
ಭಜನೆಯನ್ನು ನಿಲ್ಲದೆ ನಡೆಸುವುದರಿಂದ ಸರ್ವಪಾಪ ನಿವಾರಣೆಯಾಗಿ ಚೀತ್ರೈಕಾಗ್ರ ನೆಲೆಯಾಗುತ್ತದೆ. ಶಾಸ್ತ್ರ ಪ್ರತಿಪಾದನೆಯೆಂದರೆ ವೆದಾಂತ ಗ್ರಂಥವನ್ನು ಕ್ರಮದಿಂದ ಬೋಧಿಸಬೇಕು. ಇದರಿಂದ ಮುಮುಕ್ಷುಗಳಿಗೆ ಆತ್ಮಜ್ಞಾನವಾಗುತ್ತದೆ. ಉಪನ್ಯಾಸವೆಂದರೆ ಸಭೆಯಲ್ಲಿ ಭಕ್ತಿ, ಜ್ಞಾನ, ವೈರಾಗ್ಯ ವಿಷಯಗಳನ್ನು ಉಪಮಾನ ಉಪಮೇಯಗಳಿಂದ ಬೋಧಿಸುವುದು. ಬ್ರಹ್ಮ ಜಿಜ್ಞಾಸೆಯೆಂದರೆ ಬ್ರಹ್ಮಾತ್ಮಕ ಜ್ಞಾನದಲ್ಲಿ ಉಂಟಾಗುವ ಸಂದೇಹಗಳನ್ನು ಕಳೆಯುವುದರಿಂದ ಜ್ಞಾನ ದೃಢಗೊಳ್ಳುತ್ತದೆ. ಪುರಾಣ ಪ್ರತಿಪಾದನೆಯೆಂದರೆ ಹದಿನೆಂಟು ಪುರಾಣಗಳಲ್ಲಿ ಒಂದು ಪುರಾಣದ ವಿಷಯ ವಿವರಿಸುವುದು. ಕೀರ್ತನೆಯೆಂದರೆ ಸಂಗೀತ ಸಾಹಿತ್ಯದೊಂದಿಗೆ ಪೂರ್ವದ ಮಹಾತ್ಮರ ಚರಿತ್ರೆ ಪ್ರತಿಪಾದಿಸುವುದು. ಅನ್ನ ಸಂತರ್ಪಣೆಯೆಂದರೆ ಭಗವನ್ನಾಮಸ್ಮರಣೆಯಿಂದ ಮಾಡಿದ ಮಹಾ ಪ್ರಸಾದವನ್ನು ಉಣಬಡಿಸುವುದು. ಇದರಿಂದ ಶಮ ದಮಾದಿ ಸದ್ಗುಣಗಳು ಉಂಟಾಗುತ್ತವೆ.
ಸಪ್ತಾಹದಲ್ಲಿ ಒಂದೆರಡು ಅಂಗಗಳು ಇರದೇ ಇದ್ದರೂ ಭಜನಾಂಗದಲ್ಲಿ ಕೊರತೆಯಾಗಬಾರದು. ಶಿವಮಂತ್ರವನ್ನು ಹಗಲಿರುಳೂ ಪಠಿಸುತ್ತಿರಬೇಕು. ಬ್ರಾಹೀಮುಹೂರ್ತದಲ್ಲಿ ಶಿವಮಹಿಮ್ನ ಸ್ತೋತ್ರ ಪಠಿಸಿ ಸಪ್ತಾಹ ಪ್ರಾರಂಭಿಸಬೇಕು. ಕೊನೆಗೆ ಮಂಗಲದಿಂದ ಮುಕ್ತಾಯಗೊಳಿಸಬೇಕು. ಇದು ಸರ್ವ ಜನರ ಕಲ್ಯಾಣಕಾರಕವಾಗಿದೆ. ಇಂಥ ಸಪ್ತಾಹದಲ್ಲಿ ತೊಡಗು ಸಹಾಯಕರಾಗಿ ದೇಸಾಯಿಯವರು ಇರುತ್ತಾರೆ' ಎಂದು ಹೇಳಿದರು. ಆಗ ರುದ್ರಮುನಿಗಳು `ಗುರುನಾಥನೇ, ಇಂದಿನಿಂದ ದೇವೀ ಉಪಾಸನೆಯನ್ನು ಬಿಟ್ಟಿದ್ದೇನೆ' ಎಂದು ಸಾಷ್ಟಾಂಗ ನಮಿಸಿದರು. ಆಗ ಸಿದ್ದರು ಆಶೀರ್ವದಿಸಿ `ಮುನಿಯೇ ಪ್ರತಿವರ್ಷ ಶಿವರಾತ್ರಿಗೆ ಇಲ್ಲಿಗೆ ಬರಬೇಕು ಮತ್ತು ಪ್ರತಿವರ್ಷ ಅಣ್ಣಿಗೇರಿ ಮಠದಲ್ಲಿ ಕಾರ್ತಿಕ ಮಾಸ ಬಹುಳ ನವಮಿಯಲ್ಲಿ ಸಪ್ತಾಹ ಪ್ರಾರಂಭಿಸಬೇಕು' ಎಂದು ಹೇಳಿ ಕಳಿಸಿದರು.
ನಂತರ ತೋಟಪ್ಪ ದೇಸಾಯರು ರುದ್ರಮುನಿಗಳಿಗೆ ಗೊತ್ತಿಲ್ಲದಂತೆ ಸಪ್ತಾಹದಲ್ಲಿ ರುದ್ರಮುನಿಗಳಿಗೆ ಅಗ್ರಪೂಜೆ ಸಲ್ಲಿಸಲು ಪೂಜಾ ಮಂಟಪ, ಒಂದು ಪಲ್ಲಕ್ಕಿ ಮತ್ತು ಒಂದು ತೇರನ್ನು ಸಿದ್ಧ ಮಾಡಿದರು. ಕಾರ್ತಿಕ ಮಾಸದಲ್ಲಿ ಪ್ರಾರಂಭಿಸುವ ಸಪ್ತಾಹಕ್ಕಾಗಿ ಆಮಂತ್ರಣ ಪತ್ರಿಕೆಗಳನ್ನು ಒಂದು ತಿಂಗಳ ಮುಂಚೆ ಎಲ್ಲ ಕಡೆಗೆ ವಿತರಿಸಿದರು. ಅದರ ಒಂದು ಪ್ರತಿ ರುದ್ರಮುನಿಗಳಿಗೆ ಸಿಕ್ಕಾಗ ದೇಸಾಯಿಯವರನ್ನು ಕರೆದು `ದೇಸಾಯಿಯವರೇ, ನಾನು ಪಲ್ಲಕ್ಕಿಯಲ್ಲಿ ರಥದಲ್ಲಿ ಕೊಡುವುದಿಲ್ಲ. ಇಂಥ ಆಡಂಬರ ನನಗೆ ಬೇಕಿಲ್ಲ. ಸಿದ್ದರ ಆಜ್ಞೆಯಂತೆ ಸಪ್ತಾಹ ಆಚರಿಸಬಹುದು' ಎಂದು ಖಡಾಖಂಡಿತವಾಗಿ ಹೇಳಿದರು. ಆಗ ದೇಸಾಯಿಯವರು ಶ್ರೀ ಸಿದ್ಧಾರೂಢರಿಗೆ ತಿಳಿಸಿದಾಗ ಅವರು ರುದ್ರಮುನಿಗಳನ್ನು ಕರೆಸಿ 'ಮುನಿಯೇ, ಜಗತ್ತಿನಲ್ಲಿ ಶಿಷ್ಯರು, ಭಕ್ತರು, ಉದಾಸೀನುರು, ಪಾಪಿಗಳೆಂಬ ನಾಲ್ಕು ಬಗೆಯ ಜನರಿದ್ದಾರೆ. ಶಿಷ್ಯರು ತತ್ವಜ್ಞಾನ ತಿಳಿದು ಮುಕ್ತರಾಗುತ್ತಾರೆ. ಜ್ಞಾನಿಯನ್ನು ಆರಾಧಿಸುವ ಭಕ್ತರು ಸುಕೃತಾದಿ ಸಾಧನ ದೊರೆತು ಕೃತಾರ್ಥರಾಗುತ್ತಾರೆ. ಉದಾಸೀನರು ಜ್ಞಾನಿಗಳ ಸಚ್ಚಾರಿತ್ರ್ಯ ಸತ್ಕರ್ಮಗಳನ್ನು ಕಂಡು ಪುಣ್ಯ ಕಾರ್ಯಗಳಲ್ಲಿ ತೊಡಗಿ ಧನ್ಯರಾಗುತ್ತಾರೆ. ಪಾಪಿಗಳು ಜ್ಞಾನಿಯ ದರ್ಶನ ಪಡೆದು ಪಾಪ ಕಳೆದುಕೊಳ್ಳುತ್ತಾರೆ. ಇವೆಲ್ಲಕ್ಕೂ ಜ್ಞಾನಿಯೇ ಕಾರಣನಾಗಿದ್ದಾನೆ.
ನಿರಾಡಂಬರವು ಜ್ಞಾನಿಯ ಹುಟ್ಟುಗುಣವಾದರೂ ಜನರ ಉದ್ಧಾರಕ್ಕಾಗಿ ಸ್ವಲ್ಪ ಮಟ್ಟಿಗೆ ಲೀಲಾಮಾತ್ರ ಬಾಹ್ಯಾಡಂಬರವಿಲ್ಲದ ಆತನ ಬಳಿಗೆ ಜನರು ಸೇರಲಾರರು. ಉತ್ತಮ ಬಾಹ್ಯಾಡಂಬರವಿರುವುದರಿಂದ ಸಮಸ್ತ ಜನರು ಸೇರಿ ಕೃತಾರ್ಥರಾಗುತ್ತಾರೆ. ಇನ್ನು ಮುಂದೆ ಪಲ್ಲಕ್ಕಿ ಮತ್ತು ರಥವನ್ನೇರು. ಇದೆಲ್ಲವೂ ಭಕ್ತರ ಉದ್ದಾರಕ್ಕಾಗಿಯೆಂದು ತಿಳಿ, ನಿನಗೆ ಎಲ್ಲಿಯಾದರೂ ಕೂಡಿಸಿ ಮೆರಸಲಿ. ಅದು ನಿನಗೆ ಸಂಬಂಧವಿಲ್ಲವೆಂದು ತಿಳಿದು ಭಕ್ತರ ಇಚ್ಛೆಯಂತೆ ವರ್ತಿಸು' ಎಂದು ಹೇಳಿದಾಗ ಅವರ ಮಾತಿಗೆ ಸಮ್ಮತಿಸಿ ಅಣ್ಣಿಗೇರಿಗೆ ಬಂದರು. ಸಕಾಲಕ್ಕೆ ಸಪ್ತಾಹ ಪ್ರಾರಂಭವಾಯಿತು. ಇದನ್ನು ಸಹಿಸದ ಕುಹಕಿಗಳು ಪೌಜದಾರನಿಗೆ ದೂರು ಕೊಟ್ಟಿದ್ದು ಹೀಗೆ ಇನ್ನೊಬ್ಬನು ದಾಸೋಹ ಮಠ ಸ್ಥಾಪಿಸಿ ಕುಲಾಚಾರ ಬಿಟ್ಟು ಎಲ್ಲ ಜಾತಿಯವರನ್ನು ಕೂಡಿಸಿ ಅನೇಕರ ಬುದ್ದಿ ಕೆಡಿಸುತ್ತಿದ್ದಾನೆ. ನಿನ್ನೆ ಅವನನ್ನು ಪಲ್ಲಕ್ಕಿಯಲ್ಲಿ ಮೆರೆಸಿದರು. ಇದಕ್ಕೆಲ್ಲ ದೇಸಾಯಿಯವರೇ ಕಾರಣ. ಇದಕ್ಕೆ ಸರಕಾರದ ಅಪ್ಪಣೆಯಿಲ್ಲ' ಎಂದು ಚಾಡಿ ಹೇಳಿ ರಥೋತ್ಸವ ನಿಲ್ಲಿಸಲು ಕೇಳಿಕೊಂಡರು. ಆಗ ಪೌಜದಾರನು ರಥೋತ್ಸವ ಮಾಡಬಾರದೆಂದು ಆಜ್ಞೆ ವಿಧಿಸಿ ಉತ್ಸವ ತಡೆಹಿಡಿದನು.
ಭಕ್ತರು ಚಿಂತಿತರಾಗಿ ಹೊರಟು ಹೋದರು. ಆಗ ತೋಟಪ್ಪನವರು ಮೌನೇಶ್ವರ ಮಠಾಧ್ಯಕ್ಷ ವಿರುಪಾಕ್ಷ ಸ್ವಾಮಿಗಳು ಸಿದ್ದಾರೂಢರಲ್ಲಿ ಬಂದು ವಿಷಯ ತಿಳಿಸಿದಾಗ ಆರೂಢರು ಹೇಳಿದರು 'ಭಕ್ತರೇ ನೀವು ಚಿಂತಿಸಬೇಡಿರಿ. ಯಾವ ಪೌಜದಾರನು ಪವಿತ್ರ ಕಾರ್ಯ ನಿಲ್ಲಿಸಿರುವನೋ ಅವನ ಸ್ಥಾನದಲ್ಲಿ ಮತ್ತೊಬ್ಬನು ಬಂದು ರಥೋತ್ಸವ ಜರುಗಿಸುತ್ತಾನೆ' ಎಂದಾಗ ಎಲ್ಲರೂ ಅಣ್ಣಿಗೇರಿಗೆ ಬಂದರು. ನಂತರ ಆ ಪೌಜದಾರನು ಬೇರೆಡೆಗೆ ವರ್ಗವಾಗಿ ಅದೇ ಸ್ಥಾನದಲ್ಲಿ ಇನ್ನೊಬ್ಬ ಗುರುಭಕ್ತ ಪೌಜದಾರನು ಬಂದು ಸ್ವಾಮಿಗಳಿಂದ ವಿಷಯ ತಿಳಿದು ಮುಂದಿನ ಸೋಮವಾರ ರಥೋತ್ಸವ ಜರುಗಿಸುತ್ತೇನೆ' ಎಂದು ಹೇಳಿ ಹೋದನು.
ಮುಂದೆ ರಥೋತ್ಸವದ ಆಮಂತ್ರಣ ಪತ್ರಿಕೆಗಳನ್ನು ಎಲ್ಲ ಕಡೆಗೆ ಕಳಿಸಿದಾಗ ಸಹಸ್ರಾರು ಸಂಖ್ಯೆಯಲ್ಲಿ ಜನರು ಬಂದರು. ಪೌಜದಾರನು ತನ್ನ ಸಿಬ್ಬಂದಿಯೊಡನೆ ಬಂದು ಸ್ವಾಮಿಗಳನ್ನು ರಥದಲ್ಲಿ ಕೂಡಿಸಿ ವೈಭವದಿಂದ ಉತ್ಸವ ಮಾಡಿಸಿದನು. ಈಗ ಸಿದ್ದಾರೂಢರ ವಚನ ಸತ್ಯವಾಗಿತ್ತು. ಅಂದಿನಿಂದ ಶ್ರೀ ರುದ್ರಮುನಿ ಸ್ವಾಮಿಗಳು ದಾಸೋಹ ಮಠದಲ್ಲಿ ಯಥಾಪ್ರಕಾರ ಶಾಸ್ತ್ರ ಪ್ರವಚನ ಅನ್ನಸಂತರ್ಪಣ ಮುಂತಾದ ಕಾರ್ಯಗಳನ್ನು ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆಸುತ್ತಿರುವುದರಿಂದ ಅವರ ಕೀರ್ತಿ ನಾಲ್ಕೂ ಕಡೆಗೆ ಹಬ್ಬಿತು.
ಒಂದು ದಿನ ಹುಣಸೆಕಟ್ಟಿ ಗ್ರಾಮದ ಮಲ್ಲಪ್ಪನೆಂಬವನು ವೈರಾಗ್ಯಶೀಲನಾಗಿ ಅಣ್ಣಿಗೇರಿಗೆ ಬಂದು ಗುರುಗಳಿಗೆ ಶರಣಾಗತನಾಗಿ ತನ್ನ ತಿಳಿದು ಅವರ ಆದೇಶ ಪಡೆದು ಆರೇಕುರಹಟ್ಟಿ ಗ್ರಾಮಕ್ಕೆ ಬಂದು ಅಲ್ಲಿ ರುದ್ರಮುನಿ ಸ್ವಾಮಿಗಳ ಹೆಸರಿನಿಂದ ಮಠ ಕಟ್ಟಿದನು. ಅವನೇ ಮುಂದೆ ಬ್ಯಾಹಟ್ಟಿ ಗ್ರಾಮಕ್ಕೆ ಬಂದು ಅಲ್ಲಿಯೂ ಮಠ ಕಟ್ಟಿ ಗುರುಗಳನ್ನು ಕರೆಸಿ ಭಕ್ತರಿಗೆ ದರ್ಶನಲಾಭ ದೊರಕಿಸಿಕೊಟ್ಟನು.
ಅದರಂತೆ ಕದರಮುಂಡಗಿ ಗ್ರಾಮದ ನಾಗಯ್ಯನು ರುದ್ರಮುನಿಗಳ ಶಿಷ್ಯನಾಗಿ ಅವರ ಆಜ್ಞೆಯಂತೆ ರಾಣೇಬೆನ್ನೂರಿಗೆ ಹೋಗಿ ಮಠ ಕಟ್ಟಿ ಗುರುಗಳಿಗೆ ಕರೆಸಿ ಭಕ್ತರಿಗೆ ದರ್ಶನ ನೀಡಿಸಿದನು. ಆಗ ಶ್ರೀ ರುದ್ರಮುನಿ ಸ್ವಾಮಿಗಳು ಸಿದ್ಧಾಶ್ರಮವೆಂದು ಹೆಸರಿಟ್ಟು ಸಪ್ತಾಹ ನಡೆಸಿ ಅಣ್ಣಿಗೇರಿಗೆ ಬಂದರು. ಬ್ಯಾಹಟ್ಟಿ ಗ್ರಾಮದ ಹನುಮಂತಪ್ಪನ ಹೆಂಡತಿಗೆ ಪಿಶಾಚಿ ಪ್ರವೇಶವಾಗಿದ್ದು ಮಂತ್ರ ತಂತ್ರ ಎಲ್ಲವೂ ಮುಗಿದವು. ಓರ್ವರು ನೀಡಿದ ಸಲಹೆಯ ಮೇರೆಗೆ ದಾಸೋಹ ಮಠಕ್ಕೆ ಹೋಗಿ ಗುರುಗಳಿಗೆ ತನ್ನ ಸಮಸ್ಯೆಯನ್ನು ತಿಳಿಸಿದನು. ಆಗ ರುದ್ರಸ್ವಾಮಿಗಳ ಮನ ಕರಗಿ ಬ್ಯಾಹಟ್ಟಿ ಗ್ರಾಮಕ್ಕೆ ಹೋಗಿ ಅವರ ಮನೆಯಲ್ಲಿ ಕುಳಿತಾಗ ಹನುಮಂತಪ್ಪನ ಹೆಂಡತಿ ಸೊರಗಿದ ಶರೀರವುಳ್ಳವಳಾಗಿ ಸ್ವಾಮಿಗಳಿಗೆ ವಂದಿಸಿದಾಗ ಮಲ್ಲಮ್ಮನಿಗೆ ಗುರುಗಳು ವಿಭೂತಿ ಹಚ್ಚಿದಾಗ ಅವಳ ಶರೀರದಲ್ಲಿದ್ದ ಭೂತ ಹೊರಬಂದು ನಾನು ಇನ್ನೆಂದಿಗೂ ಬರುವುದಿಲ್ಲವೆಂದು ತನ್ನ ಮುಂದಲೆಯ ನಾಲ್ಕು ಕೂದಲುಗಳನ್ನು ಕಿತ್ತು ಬಿಸಾಕಿ ಸ್ವಲ್ಪ ದೂರ ಹೋಗಿ ಬಿದ್ದಿತು. ಮಲ್ಲಮ್ಮ ಎಚ್ಚರಾಗಿ ಮಹಾತ್ಮರ ಪಾದಗಳಿಗೆರಗಿ ಪರಿಪರಿಯಾಗಿ ಸ್ತುತಿಸಿದಳು.
ಹೀಗೆ ಸಾಮಾನ್ಯ ಭಕ್ತರಿಗೆ ಬರುವ ದುಃಖಗಳನ್ನು ನಿವಾರಿಸಿ ಮುಮುಕ್ಷುಗಳಿಗೆ ವೇದಾಂತಜ್ಞಾನ ಬೋಧಿಸಿ ಧನ್ಯರನ್ನಾಗಿ ಮಾಡುತ್ತಿದ್ದರು. ಶ್ರೀ ರುದ್ರಮುನಿ ಸ್ವಾಮಿಗಳ ಮಹಿಮೆಗಳು ಅನಂತವಾಗಿದ್ದು ಬರೆಯುತ್ತ ಹೋದರೆ ಗ್ರಂಥ ಬಾಹುಳ್ಯ ದೃಷ್ಟಿಯಿಂದ ಕೈಬಿಡಲಾಗಿದೆ. ಇರಲಿ, ಆಮೇಲೆ ಶ್ರೀ ಸಿದ್ಧಾರೂಢರು ಮಹಾಸಮಾಧಿ ಹೊಂದಿದ ನಂತರ ಶ್ರೀ ರುದ್ರಮುನಿ ಸ್ವಾಮಿಗಳು ಸಿದ್ಧರ ಸ್ಮಾರಕಾರ್ಥವಾಗಿ ಶ್ರಾವಣಬಹುಳ ನವಮಿ ತಿಥಿಗೆ ಸಪ್ತಾಹ ಜರುಗಿಸಲು ಏರ್ಪಡಿಸಿದರು.
ಧಾರವಾಡ ತಾಲೂಕು ಛಬ್ಬಿ ಗ್ರಾಮದ ಅಡಿವೆಯ್ಯ ಹಿರೇಮಠ ಇವರು ಸಿದ್ಧರ ಶಿಷ್ಯರಾಗಿದ್ದರು. ಮಠದಲ್ಲಿ ಶ್ರೀ ರುದ್ರಮುನಿ ಸ್ವಾಮಿಗಳ ಶಾಸ್ತ್ರ ಕೇಳಿ ಪ್ರಭಾವಿತರಾಗಿ ಅಣ್ಣಿಗೇರಿಗೆ ಹೋಗಿ ಅನೇಕ ವರ್ಷ ರುದ್ರಮುನಿಗಳ ಸೇವೆ ಮಾಡಿ ಶಾಸ್ತ್ರದಲ್ಲಿ ಪಾರಂಗತರಾದರು. ಪ್ರಾರಬ್ದದಂತೆ ಸಾಧಿ ನಾಗಮ್ಮಳ ಜೊತೆಗೆ ಲಗ್ನವಾಗಿ ಅವರಿಗೆ ಐದು ಗಂಡು ಮಕ್ಕಳಾದವು. ಅವರಲ್ಲಿ ಮೂರನೆಯವ ಶಿವಮೂರ್ತೆಯ್ಯನ ಜನನವು ತಾಯಿಯ ತವರು ಮನೆ ಅದರಗುಂಚಿಯಲ್ಲಾಯಿತು. ಮಗುವು ಅಲ್ಲಿಯೇ ಆರೇಳು ವರ್ಷದವನಾದನು. ಅಲ್ಲಿಯ ಬಸವಣ್ಣೆಮ್ಮ ಬಾಳಿಕಾಯಿಯೆಂಬವಳು ಪ್ರತಿವರ್ಷ ರುದ್ರಮುನಿಸ್ವಾಮಿಗಳನ್ನು ಗುರುನಾಥಾರೂಢರನ್ನು ಸಪ್ತಾಹಕ್ಕೆ ಕರೆಸಿದಾಗ ಬಾಲಕ ಶಿವಮೂರ್ತಿಯು ಗುಂಡಾ ಆಡುತ್ತಿದ್ದನು. ಆಗ ಗುರುನಾಥಾರೂಢರು ಬಾಲಕನ ಕಡೆಗೆ ತಮ್ಮ ಕಡೆಗಣ್ಣುಗಳಿಂದ ನೋಡಿ ಹೋದರು.
ಗುರುನಾಥರ ಕಣ್ಣುಗಳಿಂದ ಬಂದ ಒಂದು ಜ್ಯೋತಿ ಬಾಲಕನ ಮೇಲೆ ಬಿದ್ದು ಏನೂ ಕಾಣದೆ ಕೇವಲ ಪ್ರಕಾಶ ಉಳಿಯಿತು. ಮುಂದೆ ಮೊದಲಿನಂತಾಯಿತು. ಮತ್ತೊಂದು ವರ್ಷ ರುದ್ರಮುನಿ ಸ್ವಾಮಿಗಳು ಅದರಗುಂಚಿಯ ಸಪ್ತಾಹಕ್ಕೆ ಬಂದಾಗ ಅಡಿವೆಯ್ಯ ಸ್ವಾಮಿಗಳೂ ಬಂದಿದ್ದರು. ಆಗ ರುದ್ರಮುನಿಗಳು ಅವರನ್ನು ಕುರಿತು `ಅಡಿವೆಯ್ಯಾ, ನಿನ್ನ ಮೂರನೆಯ ಮಗ ಶಿವಮೂತೈಯ್ಯನನ್ನು ನನಗೆ ಕೊಡು ಎಂದಾಗ ಸಂತೋಷದಿಂದ ಒಪ್ಪಿಕೊಂಡರು. ನಂತರ ಬಾಲಕನನ್ನು ತಂದು ಸ್ವಾಮಿಗಳ ಪಾದಗಳಿಗೆ ಹಾಕಿದಾಗ ಸ್ವಾಮಿಗಳು ಅವನನ್ನು ಎಬ್ಬಿಸಿ ಅವನ ಮುಖದಲ್ಲಿ ಕಲ್ಲು ಸಕ್ಕರೆ ಹಾಕಿ ಆಶೀರ್ವದಿಸಿದರು. ಆಗ ಮಗುವು ಗುರುವನ್ನು ಬಿಟ್ಟು ಕದಲಲಿಲ್ಲ. ಮುಂದೆ ಮಗುವಿಗೆ ಶ್ರೀ ಸಿದ್ದರ ಗದ್ದುಗೆ ಮತ್ತು ಗುರುನಾಥಾರೂಢರ ದರ್ಶನ ಮಾಡಿಸಿದಾಗ ಗುರುನಾಥರು ಎರಡೂ ಕೈಗಳನ್ನೆತ್ತಿ ಹರುಷದಿಂದ ಯೋಗ್ಯ ಅಧಿಕಾರಿಯೆಂದು ಮೌನ ಸಮ್ಮತಿ ನೀಡಿದರು. ಆಮೇಲೆ ರುದ್ರಮುನಿಗಳು ಮಗುವನ್ನು ಅಣ್ಣಿಗೇರಿಗೆ ತಂದು ಅವನಿಗೆ ಮಂತ್ರೋಪದೇಶ ಮಾಡಿ ಶ್ರೀ ಶಂಕರೇಂದ್ರ ಸ್ವಾಮಿಗಳೆಂದು ನಾಮಕರಣ ಮಾಡಿ ಮಠದ ಉತ್ತರಾಧಿಕಾರಿಗಳನ್ನಾಗಿ ಮಾಡಿದರು. ರುದ್ರಮುನಿ ಸ್ವಾಮಿಗಳು ಮಹಾಸಮಾಧಿ ಹೊಂದಿದ ನಂತರ ಶಂಕರೇಂದ್ರ ಸ್ವಾಮಿಗಳು ಗುರುಪರಂಪರೆಯನ್ನು ತಪ್ಪದೆ ತಮ್ಮ ದಾಸೋಹ ಮಠದಲ್ಲಿ ನಡೆಸುತ್ತಿರುವುದನ್ನು ಇಂದಿಗೂ ನೋಡಬಹುದು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
