ಶ್ರೀ ಸಿದ್ಧರ ಮುದ್ದು ಶಿಷ್ಯ ಕರ್ಮಯೋಗಿ ರೋಣದ ಚನ್ನಪ್ಪ

 🌺 ಶ್ರೀ ಸಿದ್ಧರ ಮುದ್ದು ಶಿಷ್ಯ  ಕರ್ಮಯೋಗಿ ರೋಣದ  ಚನ್ನಪ್ಪ 🌺


ವಿಶ್ವಕರ್ಮ ಸಮಾಜದಲ್ಲಿ ಹುಟ್ಟಿ ತನ್ನ ಕುಲಕಸುಬಾದ ಕಮ್ಮಾರಿಕೆ ಮತ್ತು ಬಡಿಗತನದಲ್ಲಿ ಪ್ರಸಿದ್ಧಿ ಪಡೆದ ಶುದ್ಧಾಂತಃಕರಣಿಯಾದ ಶ್ರೀ ಚನ್ನಪ್ಪ ಬಡಿಗೇರ ಇವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಅದ್ವೈತ  ಸಿದ್ಧಾಂತದ ಉಪದೇಶವನ್ನು ಅವರ ಭಕ್ತಿಯಿಂದ ತಿಳಿದು ಸದ್ಗುರುಗಳಲ್ಲಿ ಹೋಗಿ ತತ್ವಜ್ಞಾನ ತಿಳಿದು ಪುನೀತರಾಗಬೇಕೆಂದು ಸಂಕಲ್ಪ ಮಾಡಿ ಸುಮಾರು ಹತ್ತೊಂಭತ್ತು ನೂಠಾ ಏಳನೆಯ ಇಸ್ವಿಯಲ್ಲಿ ಹುಬ್ಬಳ್ಳಿಗೆ ಹೋಗಿ ಸದ್ಗುರುಗಳಿಗೆ ದೀರ್ಘದಂಡವತ್ ನಮನಗಳನ್ನು ಸಲ್ಲಿಸಿ ಅವರ ತತ್ಪಾಮೃತವನ್ನು ತದೇಕ ಚಿತ್ತದಿಂದ ಆಲಿಸುತ್ತ ಹಸಿವು ತೃಷೆ ನಿದ್ರೆಗಳನ್ನದೆ ಮೂರು ದಿವಸ ತತ್ವಾಮೃತ  ಪಾನಮಾಡುತ್ತ ಕುಳಿತಿದ್ದರು.
ಆ ಸಮಯದಲ್ಲಿ ಸದ್ಗುರುಗಳ ಸನ್ನಿಧಿಯಲ್ಲಿ ಅವರ ತತ್ವಜ್ಞಾನ ಕೇಳಲು ನಾನಾ ಭಾಗಗಳಿಂದ ಸಾವಿರಾರು ಭಕ್ತರು ಸಂತೋಷದಿಂದ ಕೇಳುತ್ತಿದ್ದರು. ಕಾಲ ಜ್ಞಾನಿಗಳಾದ ಸದ್ಗುರುಗಳು ತಮ್ಮ ಉಪದೇಶವನ್ನು ಕ್ಷಣಕಾಲ ತಡೆದು ಸೇರಿದ ಭಕ್ತ ಸಮೂಹದ ಮಧ್ಯದಲ್ಲಿ ಲಗುಬಗೆಯಿಂದ ನಡೆದು ಬಂದು ಕೊನೆಯಲ್ಲಿ ಕುಳಿತ ಚನ್ನಪ್ಪನ ಮೈದಡವಿ ಕೈಹಿಡಿದುಕೊಂಡು ತಾಯಿಯು ಮಗುವನ್ನು ಕರೆದುಕೊಂಡು ಹೋಗುವಂತೆ ನೇರವಾಗಿ ಅಡುಗೆಯ ಮನೆಗೆ ಕರೆದುಕೊಂಡು ಹೋದರು. ಈ ಚಮತ್ಕಾರವನ್ನು ನೆರೆದ ಭಕ್ತರು ಮೂಕ ವಿಸ್ಮಿತರಾಗಿ ನೋಡುತ್ತ ಕುಳಿತರು. ಇತ್ತ ಕೈ ಹಿಡಿದು ತಂದ ಚನ್ನಪ್ಪನಿಗೆ ಪ್ರೀತಿಯಿಂದ ತಮ್ಮ ಅಮೃತ ಹಸ್ತದಿಂದ ಹೊಟ್ಟೆ ತುಂಬ ಊಟ ಮಾಡಿಸಿದರು. ಆಗ ಭಕ್ತನಿಗೆ ತಾನು ಎಷ್ಟು ಊಟ ಮಾಡಿದನೆಂದು ತಿಳಿಯದೆ ಗುರುಗಳ ಆಜ್ಞೆಯಂತೆ ಊಟ ಮಾಡುತ್ತಲೇ ಇದ್ದ. ಊಟ ಮುಗಿದ ನಂತರ ಸದ್ಗುರುಗಳು ನೇರವಾಗಿ ಅವನನ್ನು ಮತ್ತೆ ನೆರೆದ ಭಕ್ತ ಸಮೂಹದಲ್ಲಿ ಕರೆದುಕೊಂಡು ಹೋಗಿ ಆವರೆಗೆ ನಡೆದ ದೃಷ್ಟಾಂತವನ್ನೆಲ್ಲ ಸದ್ಗುರುಗಳು ಭಕ್ತರಿಗೆ ತಿಳಿಸಿದಾಗ ಎಲ್ಲರೂ ಒಟ್ಟಾಗಿ ಓಂ ನಮಃ ಶಿವಾಯ ಮಂತ್ರ ಜಪಿಸಿ ಶ್ರೀ ಗುರು ಸಿದ್ಧಾರೂಢರ ಜಯಜಯಕಾರ ಮಾಡಿದರು. ಅಂದಿನಿಂದ ಚನ್ನಪ್ಪನವರ ಬದುಕಿನ ದಿಕ್ಕು ಬದಲಾಯಿಸಿ ತಾನು ನಂಬಿದ ದೈವಕ್ಕೆ ಶಿರಬಾಗಿ ಸದ್ಗುರುವೇ ನಿಜವಾಗಿ ನಡೆದಾಡುವ ದೇವರು ಎಂದು ನಂಬಿ ತನ್ನ ಬದುಕನ್ನು ಸಾರ್ಥಕಗೊಳಿಸಲು ಅಣಿಯಾದರು.
ಮುಂದೆ  ಸದ್ಗುರುಗಳನ್ನು ತನ್ನ ಜೀವನ ಪರ್ಯಂತ ನಂಬಿದ ಚನ್ನಪ್ಪನವರು ಪ್ರತಿವರ್ಷ ಮಠದಲ್ಲಿ ನಡೆವ ವಿಶೇಷ ಕಾರ್ಯಕ್ರಮಗಳಿಗೆ ತಪ್ಪದೇ ಬಂದು ಗುರುಗಳ ಉಪದೇಶಾಮೃತವನ್ನು ಪಾನ ಮಾಡಿ ಜೀವನ ಸಾರ್ಥಕಗೊಳಿಸಹತ್ತಿದರು. ಈ ರೀತಿ ಹಲವು ಕಾಲ ಗತಿಸಲು ಒಂದು ಸಲ ತನ್ನಲ್ಲಿ ಸಂಕಲ್ಪ ಮಾಡಿಕೊಂಡು ತನ್ನ ಕಾಯಕದಿಂದ ಬಂದ ಆದಾಯದ ಕೆಲ ಅಂಶಗಳನ್ನು ಸದ್ಗುರುಗಳ ಚರಣಗಳಿಗೆ ಅರ್ಪಿಸಿ ಧನ್ಯರಾಗಬೇಕೆಂಬ ಹೆಬ್ಬಯಕೆಯನ್ನು ಹೊತ್ತು ಹುಬ್ಬಳ್ಳಿಗೆ ಬಂದು ಗುರುವಿನಲ್ಲಿ ತನ್ನ ಬಯಕೆಗಳನ್ನು ಅರುಹಿದಾಗ ತ್ರಿಕಾಲ ಜ್ಞಾನಿಗಳಾದ ಶ್ರೀ ಸಿದ್ಧಾರೂಢರು ತನ್ನ ಶಿಷ್ಯನ ಬಯಕೆಯನ್ನು ಸಂತೋಷದಿಂದ ಸ್ವೀಕರಿಸಿ ಕ್ಷಣಕಾಲ ತೂಷ್ಣ0 ಸ್ಥಿತಿಯಲ್ಲಿ ಕುಳಿತು ಮತ್ತೆ ಜಾಗ್ರತ ಸ್ಥಿತಿಗೆ ಬಂದು ತಮ್ಮ ಹತ್ತಿರ ಕೂಡಿಸಿಕೊಂಡು ಮಂತ್ರೋಪದೇಶ ಮಾಡಿ ಮಠದ ಒಂದು ಭಾಗದಲ್ಲಿ ಹೋಗಿ ಹೊರಬಂದು ಒಂದು ಸುಂದರವಾದ ಕಳಸವನ್ನು ತನ್ನ ಪ್ರೀತಿಯ ಶಿಷ್ಯ ಚನ್ನಪ್ಪನವರಿಗೆ ಕೊಡುತ್ತ ಚನ್ನಪ್ಪ ಈ ಕಳಸವನ್ನು ತೆಗೆದುಕೊಂಡು ಹೋಗು. ಇದರ ಸ್ಥಾನ ರೋಣದಲ್ಲಿಯೇ ಇದೆ. ಇದು ಅಲ್ಲಿ ಸದಾಕಾಲ ವಿಜೃಂಭಿಸುತ್ತಿರಲಿ. ಇದರಿಂದ ನಿಮ್ಮ ವಂಶ ಉದ್ಧಾರವಾಗುತ್ತದೆ. ಸದ್ಗುರುಗಳ ನಂಬಿದ ಇತರರೂ  ಉದ್ದಾರವಾಗುತ್ತಾರೆ' ಎಂದು ಆಶೀರ್ವದಿಸಿದರು.
ಆಗ ಚನ್ನಪ್ಪ, ಕ್ಷಣಕಾಲ ಈ ಘಟನೆಯ ಗೂಡಾರ್ಥ ಅರಿಯದವನಾಗಿ ಸುಮ್ಮನೇ ಕುಳಿತ. ಆಗ ಸದ್ಗುರುಗಳು ಇವನ ಚಿಂತೆಗೆ ಉಪಾಯ ಸೂಚಿಸಿ ಆಶೀರ್ವದಿಸಿದಾಗ ಚನ್ನಪ್ಪ ಸಂತೋಷದಿಂದ ತನ್ನ ಅಂತರಾತ್ಮದ ಬಯಕೆಗೆ ಸೂಕ್ತಕಾಲ ಬಂದಿದೆಯೆಂದು ತಿಳಿದು ಗುರುಗಳಿಗೆ ವಂದಿಸಿ ಸುಂದರವಾದ ಕಳಸವನ್ನು ಭಕ್ತಿಯಿಂದ ಹೊತ್ತು ರೋಣಕ್ಕೆ ಬಂದು ತನ್ನ ಬಂಧು ಬಾಂಧವರಿಗೆ ತಿಳಿಸಿದಾಗ ಎಲ್ಲರೂ ಸಂತೋಷಗೊಂಡು ನಂತರ ಎಲ್ಲರ ಸಹಕಾರದಿಂದ ರೋಣದಲ್ಲಿ ಶ್ರೀ ಸಿದ್ಧಾರೂಢರ ಮಠ ಸ್ಥಾಪನೆಯಾಯಿತು.
ಗುರುಗಳ ಅಪೇಕ್ಷೆಯಂತೆ ಶ್ರೀ ಚನ್ನಪ್ಪನವರು ಹತ್ತೊಂಭತ್ತು ನೂರಾ ಹತ್ತನೆಯ ಇಸ್ವಿಯಲ್ಲಿ ರೋಣದಲ್ಲಿ ತಮ್ಮ ಸ್ವಂತ ಜಾಗೆಯಲ್ಲಿಯೇ ಹಂದರ ಹಾಕಿ ಸಪ್ತಾಹ ಪ್ರಾರಂಭಿಸಿ ಭಕ್ತರಿಗೆ, ಜ್ಞಾನಿಗಳಿಂದ ತತ್ವಜ್ಞಾನದ ಸವಿಯನ್ನು ಉಣಬಡಿಸಹತ್ತಿದರು. ಈ ರೀತಿ ಪ್ರಾರಂಭವಾದ ಸಪ್ತಾಹಕ್ಕೆ ಬಹುಬೇಗನೆ ರೋಣ ಹಾಗೂ ಸುತ್ತಮುತ್ತಲಿನ ಭಕ್ತರು ಆಕರ್ಷಿತರಾಗಿ ತಮ್ಮ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳ ಹತ್ತಿದರು. ಈ ಸತ್ಕಾರ್ಯದ ಸುವಾರ್ತೆಯು ಎಲ್ಲ ದಿಕ್ಕುಗಳಲ್ಲಿ ಪಸರಿಸಿ ಜ್ಞಾನಿಗಳಿಗೆ ಪ್ರೇರಣೆ ನೀಡಿ ಅವರನ್ನು ರೋಣಕ್ಕೆ ಬರುವಂತೆ ಮಾಡಿತು. ಅಲ್ಲದೆ ಸದ್ಗುರು ಸಿದ್ಧಾರೂಢರು ತಮ್ಮ ಶಿಷ್ಯರಾದ ಶ್ರೀ ಪರಶುರಾಮ ಪಂತ ಕರಮರಕರ ಮುಂತಾದವರನ್ನು ಸಪ್ತಾಹದ ಸೇವೆಯ ಕಾರ್ಯಕ್ಕೆ ಕಳಿಸಿಕೊಡುತ್ತಿರುವುದರಿಂದ ಸಪ್ತಾಹಕ್ಕೆ ಒಂದು ಶೋಭೆ ಬಂದಿತು.
ರೋಣದಲ್ಲಿ ಸಪ್ತಾಹ ಹತ್ತೊಂಭತ್ತು ನೂರಾ ಹದಿಮೂರರಿಂದ ಪ್ರಾರಂಭವಾದಂದಿನಿಂದ ಗುರುಗಳು ನೀಡಿದ ಕಳಸವನ್ನು ಸೇರಿಸಿ ಮೊದಲು ಹಂದರ ನಮೂನೆಯ ತೇರನ್ನು ಎಳೆಯಹತ್ತಿದರು. ಈ ಸಂಪ್ರದಾಯ ಮುಂದುವರೆಯಬೇಕೆಂಬ ಬಯಕೆಯಿಂದ ಚನ್ನಪ್ಪನವರು ಮಠ ಸ್ಥಾಪಿಸಿ ಮತ್ತು ತಮ್ಮ ಬಡಿಗತನದ ಕುಶಲತೆಯನ್ನು ಬಳಸಿ ಸುಂದರವಾದ ತೇರು ನಿರ್ಮಿಸಬೇಕೆಂದು ವಿಚಾರಿಸಿ ಒಂದು ದಿನ ಹುಬ್ಬಳ್ಳಿಗೆ ಬಂದು ಸದ್ಗುರುಗಳನ್ನು ಕಂಡು ತಮ್ಮ ಮನಸ್ಸಿನ ಹೆಬ್ಬಯಕೆಯನ್ನು ಗುರುಗಳ ಮುಂದೆ ಇಟ್ಟಾಗ ಸದ್ಗುರುಗಳು ಆನಂದದಿಂದ ಹೇಳಿದರು `ಚನ್ನಪ್ಪಾ ನೀನು ಗೈಯ್ಯುವ ಕಾರ್ಯ ಮಹತ್ತರವಾಗಿದ್ದು ಅದನ್ನು ಮಚ್ಚಿಕೊಂಡಿದ್ದೇನೆ. ನಿನ್ನ ಇಚ್ಛೆ ಪೂರ್ಣವಾಗಿ ನೆರವೇರಲಿ. ಇದರಿಂದ ಜನರಲ್ಲಿ ಧರ್ಮಜಾಗೃತಿಯುಂಟಾಗುವುದಲ್ಲದೆ ಸದ್ಗುರುವಿನ ಲೀಲೆ ತಮ್ಮ ಪ್ರಚಾರದಿಂದ ಪಾಮರರೂ ತಮ್ಮ ಜನ್ಮ ಸಾರ್ಥಕಗೊಳಿಸುವಂತಾಗುವುದಲ್ಲದೆ ನಿನ್ನ ಕೀರ್ತಿಯೂ ಮರೆಯುವಂತಾಗಲಿ ಎಂದು ಆಶೀರ್ವದಿಸಿ ಕಳಿಸಿದರು.
ನಂತರ ರೋಣಕ್ಕೆ ಬಂದ ಚನ್ನಪ್ಪನವರು ತಾನು ಪ್ರಾಂಜಲ ಮನಸ್ಸಿನಿಂದ ಗಳಿಸಿದ ಧನವು ಸತ್ಪಾತ್ರಕ್ಕೆ ವಿನಿಯೋಗವಾಗಲಿಯೆಂದು ವಿಚಾರಿಸಿ ಹತ್ತೊಂಭತ್ತು ನೂರಾ ಹದಿಮೂರನೆಯ ಇಸ್ವಿಯಲ್ಲಿ ಅವಿರತವಾಗಿ ತೇರು ನಿರ್ಮಿಸುವ ಕಾರ್ಯ ಪ್ರಾರಂಭಿಸಿ ಹತ್ತೊಂಭತ್ತುನೂರಾ ಇಪ್ಪತ್ತರಲ್ಲಿ ಕಲೆಯ ಆಗರವನ್ನೇ ಹೊತ್ತ ವರ್ಣಿಸಲಸಾಧ್ಯವಾದ ಸುಂದರ ತೇರು ನಿರ್ಮಾಣವಾಯಿತು. ಆ ತೇರಿನಲ್ಲಿ ಜೋಡಿಸಲ್ಪಟ್ಟ ಪ್ರತಿಯೊಂದು ಭಾಗದ ಕೆತ್ತನೆಯ ಮೂರ್ತಿಗಳನ್ನು ಸ್ವತಃ ಚನ್ನಪ್ಪನವರು ಹುಬ್ಬಳ್ಳಿಗೆ ತೆಗೆದುಕೊಂಡು ಹೋಗಿ ಸದ್ಗುರುಗಳಿಗೆ ತೋರಿಸಿ ಅವರ ಅಮೃತ ಹಸ್ತ ಸ್ಪರ್ಶವಾದ ನಂತರವೇ ಅವುಗಳನ್ನು ರೋಣಕ್ಕೆ ತಂದು ಗುರುಗಳು ಸೂಚಿಸಿದ ತೇರಿನ ದಿಕ್ಕಿನಲ್ಲಿ ಜೋಡಿಸುತ್ತಿದ್ದರು. ಇದಕ್ಕೆ ಒಪ್ಪುವಂತೆ  ತಮ್ಮ ಸ್ವಂತ ಕುಲುಮೆಯಲ್ಲಿ ತಯಾರಿಸಿದ ಜಾಕನ್ನು ಕೂಡಿಸಿದ್ದಾರೆ. ಅದು ಗಜಗಾತ್ರದ ಕಲ್ಲಿನ ಗಾಲಿಗಳಿಂದ ಕೂಡಿದ ತೇರು ತೊಂಭತ್ತು ಟನ್ ಭಾರವಾಗಿದ್ದು, ಇದನ್ನು ಜಾಕಿನ ಸಹಾಯದಿಂದ ಮೂರು ನಾಲ್ಕು ಜನ ಸರಾಗವಾಗಿ ಮೇಲೆತ್ತಿ ತಿರುಗಿಸಬಹುದಾಗಿದೆ.
ಮುಂದೆ ಚನ್ನಪ್ಪನವರ ಭಕ್ತಿಯ ಪ್ರತೀಕವಾಗಿ ನಿರ್ಮಾಣಗೊಂಡ ತೇರು ಹತ್ತೊಂಬತ್ತುನೂರಾ ಇಪ್ಪತ್ತರಿಂದ ರೋಣದಲ್ಲಿ ಯುಗಾದಿಯ ಪ್ರತಿಪದೆಯಿಂದ ಸಪ್ತಾಹ ಪ್ರಾರಂಭವಾಗಿ ನಿತ್ಯದಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಬ್ರಹ್ಮ ಜಿಜ್ಞಾಸೆ, ಶಾಸ್ತ್ರ, ಕೀರ್ತನೆಗಳು, ಅನ್ನ ಸಂತರ್ಪಣೆ ನಡೆದು ರಥೋತ್ಸವದೊಂದಿಗೆ ಪರಿಸಮಾಪ್ತಿಯಾಗುತ್ತಿತ್ತು. ಚನ್ನಪ್ಪನವರು ತಾವು ನಿರ್ಮಿಸಿದ ತೇರಿನಲ್ಲಿ ಸದ್ಗುರುಗಳು ಕುಳಿತುಕೊಳ್ಳಲಿ ಎಂಬ ಆಕಾಂಕ್ಷೆಯಿಂದ ಒಮ್ಮೆ ಹುಬ್ಬಳ್ಳಿಗೆ ಬಂದು ತಮ್ಮ ಮನದಿಂಗಿತವನ್ನು ಸದ್ಗುರುಗಳ ಮುಂದೆ ಬಿನ್ನವಿಸಿಕೊಂಡಾಗ ತ್ರಿಕಾಲ ಜ್ಞಾನಿಗಳಾದ ಸದ್ಗುರುಗಳು ಚನ್ನಪ್ಪನವರನ್ನು ಕುರಿತು `ಭಕ್ತ ಚನ್ನಪ್ಪಾ, ನಿನ್ನ ಮನದ ಇಂಗಿತವು ಒಳ್ಳೆಯದಾಗಿದೆ. ನಾನು ಬಂದು ಒಂದು ಸಲ ತೇರಿನಲ್ಲಿ ಕುಳಿತು ಪುನಃ ಬಂದ ಮೇಲೆ ಈ ಕಾರ್ಯವು ಕೊನೆಗೊಳ್ಳಬಹುದು. ಆದ್ದರಿಂದ ನಾನು ನಿನಗೆ ಆಶೀರ್ವಾದ ರೂಪದಲ್ಲಿ ಒಂದು ತೆಂಗಿನಕಾಯಿ ಕೊಡುತ್ತೇನೆ. ಅದನ್ನು ನೀನು ರಥೋತ್ಸವ ಕಾಲದಲ್ಲಿ ತೇರಿನಲ್ಲಿಟ್ಟು ಪೂಜಿಸಿ ತೇರನ್ನು ಸಾಗಿಸು. ಆಗ ಸದ್ಗುರುವಿನ ಮಹಿಮೆ ನಿನಗೆ ತಿಳಿಯುತ್ತದೆ' ಎಂದು ಒಂದು ತೆಂಗಿನಕಾಯಿಯನ್ನು ಕೊಟ್ಟು ಆಶೀರ್ವದಿಸಿ ಕಳಿಸಿದರು.
ಚನ್ನಪ್ಪನು ಸದ್ಗುರುವಿನ ಆಣತಿಯಂತೆ ಆ ಆಶೀರ್ವಾದದ ತೆಂಗಿನಕಾಯಿಯನ್ನು ರೋಣಕ್ಕೆ ತಂದು ತೇರಿನಲ್ಲಿಟ್ಟು ಪೂಜಿಸಿ ತೇರು ಸಾಂಗಗೊಳಿಸಿದಾಗ ಶ್ರೀ ಸಿದ್ಧಾರೂಢರು ಸಕಲಾಭರಣ ಸಹಿತವಾಗಿ ತೇರಿನಲ್ಲಿ ಕುಳಿತಿರುವುದನ್ನು ಪ್ರತ್ಯಕ್ಷ ಕಂಡ ಭಕ್ತಕೋಟಿಯು ಆಶ್ಚರ್ಯಚಕಿತರಾಗಿ ಭಕ್ತಿಯನ್ನು ಸಲ್ಲಿಸಿ ತಮ್ಮ ಜನ್ಮ ಸಾರ್ಥಕವಾಯಿತು ಎಂದು ಸಿದ್ದರ ಜಯಜಯಕಾರ ಮಾಡಿದರು. ಚನ್ನಪ್ಪನವರ ಕೃಪೆಯಿಂದ ರೋಣದಲ್ಲಿ ಸಿದ್ದರ ದರ್ಶನ ಪಡೆದು ನಾವು ಧನ್ಯರಾದವೆಂದು ಕೊಂಡಾಡಿದರು. ಈ ಪ್ರಕಾರ ಸಿದ್ಧಾರೂಢರು ತಾವು ಹುಬ್ಬಳ್ಳಿಯಲ್ಲಿದ್ದರೂ ತಾವು ನೀಡಿದ ವಚನದಂತೆ ರೋಣದ ರಥೋತ್ಸವದಲ್ಲಿ ಪ್ರತ್ಯಕ್ಷರಾಗಿ ದರ್ಶನ ನೀಡಿದರಲ್ಲಾ ಎಂಬ ಹರ್ಷ ಚನ್ನಪ್ಪನವರಿಗಾಯಿತು.ಈ ಪ್ರಕಾರ ರೋಣದಲ್ಲಿ ಸದ್ಗುರುವಿನ ಕೃಪಾಶೀರ್ವಾದದಿಂದ ಸ್ಥಾಪಿಸಲ್ಪಟ್ಟ ಶ್ರೀ ಮಠದಲ್ಲಿ ಜರುಗುವ ನಿತ್ಯ ಕಾರ್ಯದಲ್ಲಿ ರೋಣ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಬಂದು ಶಾಸ್ತ್ರ ಶರವಣ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತ ಭಕ್ತಿಮಾರ್ಗ ಕಂಡುಕೊಳ್ಳುತ್ತ ಸಫಲರಾದರು.
ಜೀವನದುದ್ದಕ್ಕೂ ಎಲೆಮರೆಯ ಕಾಯಿಯಂತಿದ್ದು ಚನ್ನಪ್ಪನವರು ಕಾರ್ಯನಿಷ್ಠರಾಗಿ ಪರರಿಗೆ ಉಪಕಾರ ಮಾಡುತ್ತ ಅವರನ್ನು ಸನ್ಮಾರ್ಗಕ್ಕೆ ಹಚ್ಚಿ ತಮ್ಮ ಒಂದುನೂರಾ ಹದಿನೆಂಟು ವಯಸ್ಸಿನಲ್ಲಿ ಎಂದರೆ ಹತ್ತೊಂಭತ್ತುನೂರಾ ಎಪ್ಪತ್ನಾಲ್ಕನೇ ಇಸ್ವಿಯಲ್ಲಿ ಸದ್ದುರುವಿನ ಚರಣ ಕಮಲಗಳಲ್ಲಿ ಲೀನ ಹೊಂದಿದರು. ಮುಂದೆ ಅವರ ಸುಪುತ್ರ ಬಸಪ್ಪ ಕಮ್ಮಾರ ಅವರು ತಮ್ಮ ತಂದೆಯಂತೆಯೇ ಶ್ರೀ ಸಿದ್ಧಾರೂಢರ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದರು. ಅವರು ದೇಹತ್ಯಾಗ ಮಾಡಿದ ನಂತರ ಅವರ ಮೊಮ್ಮಕ್ಕಳಾದ ಗುರುನಾಥಪ್ಪ, ರಾಮಚಂದ್ರಪ್ಪ, ಲಕ್ಷ್ಮಪ್ಪ, ಬಸಪ್ಪ ಕಮ್ಮಾರ ಅವರು ಭಕ್ತವೃಂದದವರನ್ನು ಕೂಡಿಸಿಕೊಂಡು ಅಜ್ಜ ಹಾಕಿಕೊಟ್ಟ ಸಿದ್ಧ ಸಂಪ್ರದಾಯವನ್ನು ಇಂದಿಗೂ ನಡೆಸುತ್ತಿರುವುದನ್ನು ರೋಣದಲ್ಲಿ ಇಂದಿಗೂ ನೋಡಬಹುದು.


 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಶ್ರೀ ಸಿದ್ಧರ ನಿಜಪತ್ನಿ ಮಹಾದೇವಿ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ