ಸಿದ್ಧನು ಕಲೆಕ್ಟರನಿಗೆ ಲೆಕ್ಕ ತೋರಿಸಿದ ಕಥೆ

 🌺 ಸಿದ್ಧನು ಕಲೆಕ್ಟರನಿಗೆ ಲೆಕ್ಕ ತೋರಿಸಿದ 🌺



ಬೆಳಗಾವ ಜಿಲ್ಲೆಯ ಸವದತ್ತಿ ತಾಲೂಕಿನ ಯಡಳ್ಳಿ ಗ್ರಾಮದ ಮಲ್ಲನಗೌಡ ಪಾಟೀಲ ಎಂಬವರು ದೇವಿ ಉಪಾಸಕರಾಗಿದ್ದು ಶ್ರೀ ಸಿದ್ಧಾರೂಢರ ಪರಮ ಭಕ್ತರಾಗಿದ್ದರು. ಪ್ರತಿ ಅಮವಾಸ್ಯೆಗೆ ಕಾಲ್ನಡಿಗೆಯಿಂದಲೇ ಹುಬ್ಬಳ್ಳಿಯ ಸಿದ್ಧಾರೂಢರ ದರ್ಶನ ಮಾಡಿಕೊಂಡು ಒಂದು ದಿವಸ ಮಠದಲ್ಲಿದ್ದು ಕಾಲ್ನಡಿಗೆಯಿಂದಲೆ ಯಡಳ್ಳಿಗೆ ಹೋಗುತ್ತಿದ್ದರು. ಹೀಗೆ ಪ್ರತಿ ಅಮವಾಸ್ಯೆಗೆ ತಪ್ಪದೆ ಬಂದು ಭಕ್ತಿ ಸಲ್ಲಿಸಿ ಹೋಗುತ್ತಿರುವುದರಿಂದ ಸಿದ್ದರ ಕೃಪೆಗೆ ಪಾತ್ರರಾಗಿದ್ದರು. ಅವರು ಯಡಳ್ಳಿಯ ದೇಸಾಯಿಯವರಲ್ಲಿ ಕುಲಕರ್ಣಿ ಕೆಲಸ ಮಾಡುತ್ತಿದ್ದು ಭಕ್ತರಿಗೆ ಅದ್ವೈತ ಶಾಸ್ತ್ರವನ್ನು ಬೋಧಿಸುತ್ತಿದ್ದರು. ಒಂದು ಅಮವಾಸ್ಯೆಗೆ ಸಿದ್ದಾರೂಢರ ಮಠಕ್ಕೆ ಬಂದಾಗ ಅಕಸ್ಮಾತ್ ಕಲೆಕ್ಟರ್ ಸಾಹೇಬರು ಬಂದು ಅಲ್ಲಿಯ ದೇಸಾಯಿಯವರ ವಾಡಾದಲ್ಲಿ ಲೆಕ್ಕ ಪರಿಶೀಲನೆ ಮಾಡಬೇಕೆಂದು ಹೇಳಿದರು. ಆಗ ದೇಸಾಯಿಯವರಿಗೆ ಏನು ತಿಳಿಯದಂತಾಗಿ ಮನದಲ್ಲಿ ಸಿದ್ದಾರೂಢರನ್ನು ನೆನೆದರು. ಸ್ವಲ್ಪ ಸಮಯದಲ್ಲಿಯೇ ಸಿದ್ಧಾರೂಢರೇ ಮಲ್ಲನಗೌಡರ ರೂಪ ತಾಳಿ ಬಂದು ದಪ್ತರಗಳನ್ನು ಕಲೆಕ್ಟರರಿಗೆ ತೋರಿಸಿ ತಪಾಸಣೆ ಮಾಡಿಸಿದರು. ನಂತರ ಕಲೆಕ್ಟರರು ತಪಾಸು ಮಾಡಿದ ಬುಕ್ಕುಗಳಿಗೆ ಸಹಿ ಮಾಡಿ ಹೋದರು. ಅದರಂತೆ ಮಲ್ಲನಗೌಡರ ರೂಪದಲ್ಲಿದ್ದ ಸಿದ್ದರೂ ಹೋದರು.
ಇತ್ತ ಸಿದ್ಧರ ಮಠದಲ್ಲಿದ್ದ ಮಲ್ಲನಗೌಡರು ಸಿದ್ಧರ ಸೇವೆ ಮಾಡಿ ಮರುದಿನ ಗುರುಗಳ ಆಶೀರ್ವಾದ ಪಡೆದು ಕಾಲ್ನಡಿಗೆಯಿಂದ ಸಂಗ್ರೇನಕೊಪ್ಪಗೆ ಬಂದಾಗ ಯಡಳ್ಳಿಗೆ ಕಲೆಕ್ಟರ ಸಾಹೇಬರು ಬಂದು ಹೋದ ಸುದ್ದಿ ತಿಳಿಯಿತು. ಆಗ ಗೌಡರು ತೀವ್ರವಾಗಿ ಯಡಳ್ಳಿಗೆ ಬಂದು ದೇಸಾಯಿಯವರ ಮನೆಗೆ ಹೋಗಿ ಪುಸ್ತಕಗಳನ್ನು ನೋಡುತ್ತಾರೆ ಅದರಲ್ಲಿ ಕಲೆಕ್ಟರರು ಹೀಗೆ ಬರೆದಿದ್ದರು `ಕುಲಕರ್ಣಿಯವರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಪರಿಶೀಲನೆಯ ಕಾಲಕ್ಕೆ ಅವರು ಹಾಜರು ಇದ್ದರು' ಎಂದು ಬರೆದಿದ್ದರು. ಇದನ್ನು ನೋಡಿದ ಮಲ್ಲನಗೌಡರು ಅಚ್ಚರಿಗೊಂಡು ದೇಸಾಯಿಯವರಿಗೆ ವಿಚಾರಿಸಿದಾಗ ಅವರೆಂದರು 'ಗೌಡರೇ ಕಲೆಕ್ಟರರು ಬಂದಾಗ ನೀವೇ ಹಾಜರು ಇದ್ದು ದಫ್ತರಗಳನ್ನು ಪರಿಶೀಲನೆ ಮಾಡಿಸಿ ಅವರು ಹೋದ ಮೇಲೆ ನೀವೂ ಹೋದಿರಲ್ಲ' ಎಂದರು. ಆಗ ಮಲ್ಲನಗೌಡರು ಇದು ಸಿದ್ದರ ಮಹಿಮೆಯೆಂದು ಎಲ್ಲರಿಗೂ ತಿಳಿಸಿದರು.
ಇನ್ನೊಂದು ಸಲ ಸಂಪ್ರದಾಯದಂತೆ ಅಮವಾಸ್ಯೆಗೆ ಸಿದ್ಧಾರೂಢರ ಮಠಕ್ಕೆ ಬಂದು ಒಂದು ದಿವಸವಿದ್ದು ಮರುದಿವಸ ಸದ್ಗುರುಗಳ ದರ್ಶನ ಪಡೆದು ಮರಳಿ ಊರಿಗೆ ಹೋಗುವಾಗ ಯಾದವಾಡವೆಂಬ ಗ್ರಾಮದಲ್ಲಿ ಶ್ರೀ ನಂಜಪ್ಪ ಎಂಬ ಗುರುಗಳು ಇವರನ್ನು ಬಿಡಲಿಲ್ಲ. ಒಂದು ದಿವಸ ನಮ್ಮ ಮಠದಲ್ಲಿ ಇದ್ದು ಹೋಗು ಎಂದು ಆಗ್ರಹಪಡಿಸಿದರು. ಏಕೆಂದರೆ ಅವರೂ ದೇವಿಯ ಉಪಾಸಕರಾಗಿದ್ದು, ಗೌಡರ ಆತ್ಮೀಯ ಮಿತ್ರರಾಗಿದ್ದರು. ಆದ್ದರಿಂದ ಅವರ ಮಾತನ್ನು ಮೀರದೆ ಅಲ್ಲಿಯೇ ಉಳಿದರು. ಸ್ವಲ್ಪ ಸಮಯದ ನಂತರ ತಿರುಗಾಡಿ ಬರಲು ಮಠದ ಹೊರಗಡೆ ಬಂದ ವೇಳೆಯಲ್ಲಿ ಒಬ್ಬ ಮುದುಕಿ ಬಂದು 'ಏ ಗೌಡಾ, ನಿನಗೆ ಕೆಲಸವಿಲ್ಲೇನು? ಊರಿಗೆ ಹೋಗು. ಅಲ್ಲಿ ನಿನಗೆ ತುರ್ತು ಕೆಲಸವಿದೆ. ಇಲ್ಲಿ ವಸತಿ ಮಾಡಬೇಡ' ಎಂದು ಹೇಳಿ ಅದೃಶ್ಯಳಾದಳು.
ಆಗ ಮಲ್ಲನಗೌಡರು ನಂಜಪ್ಪಸ್ವಾಮಿಗಳ ಕಡೆಗೆ ಹೋಗಿ `ನಂಜಪ್ಪನವರೇ, ಒಬ್ಬ ಮುದುಕಿ ಹೀಗೆ ಹೇಳಿದಳು. ನಾನು ಊರಿಗೆ ಹೋಗಲೇಬೇಕು' ಎಂದು ಹೇಳಿ ಊರಿಗೆ ಹೋದರು. ಮರುದಿನ ಬೆಳಿಗ್ಗೆ ಅಕಸ್ಮಾತ್ ಕಲೆಕ್ಟರ್ ಸಾಹೇಬರು ಭೇಟಿ ನೀಡಿದಾಗ ಮಲ್ಲನಗೌಡರು ದಫ್ತರ ತೋರಿಸಿದರು. ಆಗ ಸಾಹೇಬರು ಎಲ್ಲವನ್ನೂ ಪರಿಶೀಲಿಸಿ ಸರಿಯಾಗಿದೆಯೆಂದು ಬರೆದಿಟ್ಟು ಹೋದರು. ಇದೇ ಮಲ್ಲನಗೌಡರು (ಮಲ್ಲಿಕಾರ್ಜುನ ಶಿವಯೋಗಿ) ಮುಂದೆ ಯಡಳ್ಳಿಯಲ್ಲಿ ಶ್ರೀ ಜಗದಂಬಾ ಮಠ ಕಟ್ಟಿಸಿದರು. ಅದನ್ನು ಈಗಲೂ ನೋಡಬಹುದು. ಅವರ ನಂತರ ಅವರ ವಂಶಜರೂ ಮತ್ತು ಅವರ ಮಕ್ಕಳಾದ ಶ್ರೀ ಸಿದ್ದನಗೌಡರು ಈಗಲೂ ಸಿದ್ದಾರೂಢರ ಭಕ್ತರಾಗಿದ್ದು ಅಂಬಾ ಮಠದ ಉತ್ತರಾಧಿಕಾರಿಗಳಾಗಿದ್ದಾರೆ.
ಮಲ್ಲನಗೌಡರ ಧರ್ಮಪತ್ನಿ ಶ್ರೀಮತಿ ತಾಯವ್ವ ಕೂಡ ಸಿದ್ದರ ಪರಮ ಭಕ್ತಳಾಗಿದ್ದು ಪ್ರತಿ ಅಮವಾಸ್ಯೆಗೆ ತನ್ನ ಪತಿಯ ಜೊತೆಗೆ ಸಿದ್ಧರ ಮಠಕ್ಕೆ ಬಂದು ದರ್ಶನ ತೆಗೆದುಕೊಂಡು ಸೇವೆ ಸಲ್ಲಿಸಿ ಹೋಗುತ್ತಿದ್ದಳು. ಒಂದು ದಿವಸ ಸಿದ್ಧಾರೂಢರು ತಾಯವ್ವನನ್ನು ಕುರಿತು 'ತಾಯವ್ವ, ನಾಳೆ  ಮಠಕ್ಕೆ ಬಹಳ ಭಕ್ತರು ಬರುವವರಿದ್ದಾರೆ, ಅವರಿಗಾಗಿ ಇಂದೇ ರಾತ್ರಿ ಒಂದು ಚೀಲ ಜೋಳದ ರೊಟ್ಟಿ ಮಾಡಬೇಕವ್ವ' ಎಂದರು. ಆ ದಿವಸ ಇಬ್ಬರೇ ಹೆಣ್ಣುಮಕ್ಕಳು ಮಠದಲ್ಲಿ ಮಾಡಿದ್ದರು. ಇದನ್ನು ಕೇಳಿದ ತಾಯವ್ವ ಹೇಳುತ್ತ ತಂದೆ, ನಿನ್ನ ಆಶೀರ್ವಾದವೊಂದಿದ್ದರೆ ಸಾಕು, ನಾನು ಮಾಡುತ್ತೇನೆ' ಎಂದು ಹೇಳಿ ಎಲ್ಲ ಭಕ್ತರ ಊಟವಾದ ಮೇಲೆ ಒಲೆ ಸಾರಿಸಿಕೊಂಡು ಮನದಲ್ಲಿ ಸಿದ್ಧನನ್ನು ನೆನೆದು ಪ್ರಣವಮಂತ್ರ ಉಚ್ಚರಿಸುತ್ತ ರೊಟ್ಟಿ ಮಾಡತೊಡಗಿದಳು.
ಆರು ಒಲೆಗಳ ಮೇಲೆ ಆರು ಹಂಚುಗಳನ್ನಿಟ್ಟು ಒಬ್ಬಳೇ ಬಡಿದು ಆರೂ ಹಂಚುಗಳಿಗೆ ರೊಟ್ಟಿ ಹಾಕತೊಡಗಿದಳು. ಇನ್ನೊಬ್ಬಳಾದ ಮಲ್ಲಮ್ಮ ಬೇಯಿಸತೊಡಗಿದಳು. ಹೀಗೆ ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಒಂದು ಚೀಲ ಜೋಳದ ರೊಟ್ಟಿ ಮಾಡಿ ಮುಗಿಸಿ ಬುಟ್ಟಿ ತುಂಬಿಟ್ಟು ಒಲೆ ಸಾರಿಸಿ ಕುಳಿತಳು. ಆಗ ಸಿದ್ಧಾರೂಢರು ಬಂದು ಇಬ್ಬರೇ ಹೆಣ್ಣುಮಕ್ಕಳು ಕುಳಿತದ್ದನ್ನು ನೋಡಿ ತಾಯಿ, ತಾಯವ್ವ, ರೊಟ್ಟಿ ಮಾಡಲಿಲ್ಲೇನವ್ವ' ಎಂದು ಕೇಳಿದಾಗ ತಾಯವ್ವ ನಗುಮುಖದಿಂದ ಹೇಳಿದಳು `ರೊಟ್ಟಿ ಮಾಡಲಿಲ್ಲ ಬಿಡಪ್ಪ' ಎಂದಳು. ಆಗ ಅಲ್ಲಿಯೇ ಕುಳಿತಿದ್ದ ಮಲ್ಲವ್ವ `ಯಪಾ, ನಿನ್ನ ಆಶೀರ್ವಾದದಿಂದ ತಾಯವ್ವ ಒಬ್ಬಳೇ ನಾಲ್ಕು ತಾಸುಗಳಲ್ಲಿ ರೊಟ್ಟಿ ಮಾಡ್ಯಾಳ ನೋಡಪಾ' ಎಂದು ರೊಟ್ಟಿ ತುಂಬಿದ ಬುಟ್ಟಿಗಳನ್ನು ತೋರಿಸಿದಳು. ಅದನ್ನು ನೋಡಿ ಆರೂಢರು ಮುಗುಳು ನಗುತ್ತ ತಾಯವ್ವನ ಹತ್ತಿರ ಹೋಗಿ ಅವಳ ಮೈಮೇಲೆ ಕೈಯಾಡಿಸಿದಾಗ ಅವಳಿಗಾದ ದಣಿವು ಮಾಯವಾಯಿತು.
ಇನ್ನೊಂದು ಸಲ ಆರೂಢರ ಮಠಕ್ಕೆ ಹೋದಾಗ ಭಕ್ತರು ಒಂದು ಚಕ್ಕಡಿ ಪೂಂಡಿಪಲ್ಲೆ ತಂದು ಸೋಸಿ ಇಟ್ಟಿದ್ದರು. ಇದನ್ನು ನೋಡಿದ ಸಿದ್ಧಾರೂಢರು ಹೇಳಿದರು `ಈ ಪುಂಡಿಪಲ್ಲೆಯನ್ನು ಒಂದು ಚೀಲ ಜೋಳದ ನುಚ್ಚಿನೊಂದಿಗೆ ಮುಗುಚಿ ಯಾರು ಅಡುಗೆ ಮಾಡುವರೋ ಅವರಿಗೆ ಒಂದು ಸೀರೆಯನ್ನು ಉಡಿಸಿ ಕಳಿಸುತ್ತೇನೆ' ಎಂದರು. ಆಗ ತಾಯವ್ವ ತಂದೆ ನಿನ್ನ ಆಶೀರ್ವಾದದಿಂದ ಮಾಡುತ್ತೇನೆ' ಎಂದು ಹೇಳಿ ಸಿದ್ಧರಿಗೆ ಸಾಷ್ಟಾಂಗ ಹಾಕಿ ಒಂದೆರಡು ತಾಸುಗಳಲ್ಲಿ ಒಂದು ಚಕ್ಕಡಿ ಪುಂಡಿಪಲ್ಲೆ ಮಾಡಿಟ್ಟಳು. ಆಗ ಸದ್ಗುರುಗಳು ಆ ತಾಯಿಗೆ ಒಂದು ಸೀರೆ ಕುಪ್ಪಸ ಉಡಿಸಿ ಆಶೀರ್ವದಿಸಿ ಊರಿಗೆ ಕಳಿಸಿದರು.
ಹೀಗೆ ಹೆಣ್ಣು ಮಕ್ಕಳಿಗೆ ಗಂಡನ ಮನೆಯಲ್ಲಿ ಕೆಲಸ ಮಾಡಿ ಮಾಡಿ ಬೇಸರ ಬಂದಾಗ ಅವರು ತವರು ಮನೆಗೆ ಹೋಗಿ ಬಂದರೆ ಹೇಗೆ ಬೇಸರ ಹೋಗುವುದೋ, ಅದರಂತೆ ಸಿದ್ದರ ಭಕ್ಷೆಯರಾದ ಹೆಣ್ಣು ಮಕ್ಕಳು ಸಿದ್ಧರ ಮಠಕ್ಕೆ ಬಂದು ದರ್ಶನ ಪಡೆದು ಗುರುಗಳ ಆಶೀರ್ವಾದ ಪಡೆದು ಅವರ ಸೇವೆ ಮಾಡಿ ಹೋದರೆಂದರೆ . ತವರು ಮನೆಗೆ ಹೋಗಿ ಬರುವುದಕ್ಕಿಂತಲೂ ನೂರು ಪಾಲು ಆನಂದವಾಗುತ್ತಿತ್ತು. ಇರಲಿ. ಮುಂದೆ ವಿದೇಹ ಮುಕ್ತರಾದ ಶ್ರೀ ಮಲ್ಲನಗೌಡರು ಮತ್ತು ಶ್ರೀಮತಿ ತಾಯವ್ವನವರ ಸಮಾಧಿಗಳನ್ನು ಯಡಳ್ಳಿ ಅಂಬಾಮಠದಲ್ಲಿ ಈಗಲೂ ನೋಡಬಹುದು.



ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ