ಅಕ್ಕಲಕೋಟಿ ಮಹಾರಾಣಿ ಆರೂಢರ ದರ್ಶನ
🌺 ಅಕ್ಕಲಕೋಟಿ ಮಹಾರಾಣಿ ಆರೂಢರ ದರ್ಶನ 🌺
'ಶರಣಪ್ಪನು ಪರೋಪಕಾರಿಯಾಗಿದ್ದು, ಅನೇಕ ರಾಜವಾಡೆಗಳಲ್ಲಿ ಹೋಗಿ ಶಿಷ್ಟ ಸಂಪ್ರದಾಯವನ್ನು ಊರ್ಜಿತಗೊಳಿಸಿ ಪಂಚಾಕ್ಷರಿ ಮಂತ್ರವನ್ನು ಉಪದೇಶಿಸಿದನು. ಪನ್ನಾಲಾಲ ಮಹಾರಾಜರಿಗೆ ಬೆಳ್ಳಿಯ ರಥ ಸಹಿತ ಶಿವರಾತ್ರಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದನು. ಯಡಳ್ಳಿ ಮತ್ತು ಚಿಮ್ಮಗವಾಡ ಮಹಾರಾಜರು ಮತ್ತು ಅನೇಕ ಸತ್ಪುರುಷರನ್ನು ಸದ್ಗುರುಗಳ ಭೇಟಿಗಾಗಿ ಕರೆದುಕೊಂಡು ಬಂದಿದ್ದನು. ಶಿವರಾತ್ರಿಯಲ್ಲಿ ಸದ್ಗುರುಗಳನ್ನು ರುದ್ರಾಕ್ಷಿ ಮಂಟಪದಲ್ಲಿ ಕೂಡಿಸಿ ಪೂಜಿಸಿ ಧನ್ಯನಾದನು. ಶರಣಪ್ಪನವರು ದೇಶ ಸಂಚಾರ ಮಾಡುತ್ತ ಅಕ್ಕಲಕೋಟೆಗೆ ಹೋಗಿ ಮಾಯನಾಳ ಮಳಸಿದ್ದಪ್ಪ, ಡಿಗ್ರೆ ವತ್ತಪ್ಪ ಮೊದಲಾದವರು ಮತ್ತು ಮೈಂದರಗಿ ಹೋಳಿಕಟ್ಟಿಯವರ ಸಹಾಯದಿಂದ ಐದು ಸಾವಿರ ರೂಪಾಯಿಗಳಿಗೆ ಒಂದು ತೋಟವನ್ನು ಖರೀದಿ ಮಾಡಿ ತಗಡುಗಳನ್ನು ತಕ್ಕೊಂಡು ಕಟ್ಟಡ ಕಟ್ಟಿ ಮಠ ಸ್ಥಾಪಿಸಿದನು. ಅದರಲ್ಲಿ ಹುಬ್ಬಳ್ಳಿಯ ಸಿದ್ಧಾರೂಢರ ಪ್ರತಿಮೆಯನ್ನು ಸ್ಥಾಪಿಸಿ ದಿನಾಲು ಶಿವಭಜನೆ, ಅನ್ನ ಸಂತರ್ಪಣೆ ನಡೆಸುತ್ತಿದ್ದರು. ಮಠ ಸ್ಥಾಪಿಸಲು ಫತೇಸಿಂಹ ಮಹಾರಾಜರು ಅನುಮತಿ ನೀಡಿದರು. ಮುಂದೆ ದೊಡ್ಡ ಮಠವಾಗಿ ಪ್ರತಿವರ್ಷ ಸಪ್ತಾಹ, ತೇರಿನ ಉತ್ಸವ ನಡೆಯಹತ್ತಿತು.
ಅಕ್ಕಲಕೋಟೆಯ ಶರಣಪ್ಪನವರು ಅಕ್ಕಲಕೋಟೆಯ ಮಹಾರಾಜ ಫತೇಸಿಂಹರ ನಿಧನದ ಸುದ್ದಿ ಕೇಳಿ ಅಕ್ಕಲಕೋಟೆಗೆ ಹೋದಾಗ ರಾಣಿಸಾಹೇಬರು ಬಹಳ ದುಃಖದಲ್ಲಿದ್ದರು. ಅವರನ್ನು ಕುರಿತು `ಮಹಾರಾಣಿಯವರೇ, ಮಹಾತ್ಮರು ಜಗತ್ತಿನಲ್ಲಿ ಲೋಕೋದ್ಧಾರಕ್ಕಾಗಿ ಅವತರಿಸುತ್ತಾರೆ. ಅಂಥವರ ಹಸ್ತಸ್ಪರ್ಶದಿಂದ ದುಃಖ ಸಾಗರದಲ್ಲಿ ಮುಳುಗಿದ ಅಜ್ಞಾನಿಗಳ ಜನ್ಮ ಸಾರ್ಥಕವಾಗುತ್ತದೆ. ಆದ್ದರಿಂದ ಅಂಥ ಸಾಮರ್ಥ್ಯವುಳ್ಳ ದಯಾಮೂರ್ತಿಗಳು ಹುಬ್ಬಳ್ಳಿಯಲ್ಲಿದ್ದಾರೆ. ಅವರ ಸ್ಪರ್ಶದಿಂದ ನಿಮ್ಮ ದುಃಖ ನಿವೃತ್ತಿಯಾಗುತ್ತದೆ' ಎಂದಾಗ, ರಾಣಿಯವರು ಶರಣರ ವಚನದಲ್ಲಿ ವಿಶ್ವಾಸವಿಟ್ಟು ಒಪ್ಪಿಕೊಂಡರು.
ಆಗ ಶರಣರು ರಾಣಿಸಾಹೇಬರ ಕೂಡ ಕೆಲವು ದಾಸಿಯರನ್ನು ಕರೆದುಕೊಂಡು ಹುಬ್ಬಳ್ಳಿಗೆ ಹೋಗಿ ಫಲಪುಷ್ಪಗಳನ್ನು ತೆಗೆದುಕೊಂಡು ಸಿದ್ದರ ಹತ್ತಿರ ಕರೆದುಕೊಂಡು ಹೋದರು. ನಂತರ ರಾಣಿ ಸಾಹೇಬರು ಸಿದ್ಧರಿಗೆ ಉಪಹಾರ ಕಾರಣಿಕೆಗಳನ್ನಿತ್ತು ಹೂಮಾಲೆ ಹಾಕಿ ಕಣ್ಣೀರು ಸುರಿಸುತ್ತ ಸಾಷ್ಟಾಂಗ ನಮಿಸಿ 'ಅಪಾ, ನನಗೆ ಪತಿವಿರಹದಿಂದ ಅತ್ಯಂತ ದುಃಖವಾಗಿದೆ. ಈ ಜನ್ಮಕ್ಕೆ ಏಕೆ ಬಂದನೋ ಎನಿಸುತ್ತದೆ. ತಮಗೆ ಶರಣು ಬಂದಿದ್ದೇನೆ, ಏನಾದರೂ ಉಪಾಯ ಮಾಡಿರಿ' ಎಂದು ಬೇಡಿಕೊಂಡರು. ಆಗ ಸಿದ್ಧಾರೂಢರು ಅವಳನ್ನು ಕೃಪಾದೃಷ್ಟಿಯಿಂದ ನೋಡಿ ಮಸ್ತಕದ ಮೇಲೆ ಹಸ್ತವನ್ನಿರಿಸಿದರು. ಅದೇ ಕ್ಷಣ ಅವಳು ಕಣ್ಣು ಮುಚ್ಚಿ ಸ್ವಲ್ಪ ಹೊತ್ತು ಸುಮ್ಮನೇ ಕುಳಿತು, ಪುನಃ ಕಣ್ಣು ತೆರೆದು ಆನಂದದಿಂದ ಹೀಗೆ ಹೇಳಿದಳು
`ಸದ್ಗುರುವೇ, ತಮ್ಮ ಹಸ್ತ ಸ್ಪರ್ಶದಿಂದ ಶರೀರದ ಮೇಲೆ ಪ್ರಜ್ಞೆತಪ್ಪಿ ಕಣ್ಣುಗಳು ಮುಚ್ಚಿದವು. ಆಗ ಜಗವು ಪ್ರಕಾಶಮಯವಾಗಿ ಕಂಡಿತು. ತಿರುಗಿ ಪ್ರಕಾಶವಡಗಿ ಜಗವು ಕಾಣಹತ್ತಿತು. ಆದ್ದರಿಂದ ಸ್ವಪ್ನದಂತೆ ಜಗತ್ತು ಮಿಥೆಯಾಗಿದೆ ಎಂದ ಮೇಲೆ ಸುಳ್ಳು ಸಂಸಾರಕ್ಕಾಗಿ ಏಕೆ ಅಳಬೇಕೆಂದು ತಿಳಿದುಕೊಂಡೆ. ಶರಣ ಸ್ವಾಮಿಗಳ ಮತ್ತು ತಮ್ಮ ಕೃಪೆಯಿಂದ ನನ್ನ ದುಃಖ ನಿವಾರಣೆಯಾಗಿ ಆನಂದವಾಯಿತು' ಎಂದು ಹೇಗೆ ಅವರ ಆಶೀರ್ವಾದ ಪಡೆದು, ಅಲ್ಲಿ ಕೆಲವು ದಿವಸ ವಾಸಮಾಡಿ ಶರಣರ ಜೊತೆಗೆ ಅಕ್ಕಲಕೋಟೆಗೆ ಹೋದಳು. ಮುಂದೆ ಶರಣಪ್ಪನವರು ಹುಬ್ಬಳ್ಳಿಯಲ್ಲಿ ರಾಣಿಯವರ ಸಲುವಾಗಿ ತಾರಾ ವಿಜಯವೆಂಬ ಬಂಗೈ ಕಟ್ಟಿಸಿ ಜಾತ್ರೆಯಲ್ಲಿ ರಾಣಿಯವರನ್ನು ಕರೆದುಕೊಂಡು ಬಂದು ಅಲ್ಲಿರಿಸಿ, ಮರುದಿನ ರಾಣಿಯವರನ್ನು ಸಿದ್ದರಲ್ಲಿ ಕರೆದುಕೊಂಡು ಹೋಗಿ, ಅವರ ಹಸ್ತದಿಂದ ಸಿದ್ದರ ಪಾದಪೂಜೆ ಮಾಡಿಸಿ ಅವರ ಮಕ್ಕಳಿಗೂ ಆಶೀರ್ವಾದ ಕೊಡಿಸಿದರು. ಆಗ ರಾಣಿಯವರು ಸಿದ್ದರನ್ನು ಕುರಿತು `ಸದ್ಗುರುವೇ, ನನ್ನ ತಂಗಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ತಮ್ಮ ಕೃಪೆಯಿಂದ ಅವಳ ಆರೋಗ್ಯ ಸುಧಾರಿಸುವಂತೆ ಆಶೀರ್ವದಿಸಿರಿ' ಎಂದು ಬೇಡಿಕೊಂಡಳು. ಆಗಲಿಯೆಂದು ಸಿದ್ದರು ಆಶೀರ್ವದಿಸಿದರು. ಮುಂದೆ ರಾಣಿಯ ತಂಗಿಯು ಆರೋಗ್ಯವಂತಳಾದಾಗ ಫೇಡೆ ಮತ್ತು ವಸ್ತ್ರಗಳನ್ನು ತಂದು ಸಾಧುಗಳಿಗೆ ವಿತರಿಸಿ. ತೃಪ್ತಿ ಪಡಿಸಿದಳು.
ಕೆಲವು ದಿವಸ ಕಳೆದ ನಂತರ ರಾಣಿಯ ತಂಗಿಯ ಕನಸಿನಲ್ಲಿ ಸಿದ್ಧರು ಬಂದು, `ನಿನಗೆ ರಾಜೈಶ್ವರ್ಯ ಸಿಗುವುದಲ್ಲದೆ ಅಷ್ಟಪುತ್ರ ಸೌಭಾಗ್ಯವತಿಯಾಗು, ಪ್ರಸಾದ ತೆಗೆದುಕೊ' ಎಂದು ಹೇಳಿ ಅದೃಶ್ಯರಾದರು. ಆಗ ಅವಳು ಎಚ್ಚರಾಗಿ ನೋಡಿದಾಗ ವಿಭೂತಿ ರುದ್ರಾಕ್ಷಿಗಳನ್ನು ಕಂಡು ರಾಣಿಯ ಮುಂದೆ ಹೇಳಿದಳು. ಆಗ ರಾಣಿಯವರು ಶರಣಪ್ಪನವರು ಸಂತೋಷಗೊಂಡರು. ಮುಂದೆ ಸಿದ್ದರ ನುಡಿಯು ಸತ್ಯವಾಯಿತು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
