ಗುರುನಾಥರೂಢರಿಂದ ಬಸವಲಿಂಗಪ್ಪ ಉದ್ದಾರನಾದ




ವೇದವ್ಯಾಸರ ಮಗ ಶುಕಮುನಿಯಂತೆ ಶ್ರೀಗುರುನಾಥಾರೂಢರು ಅಚಲ ಸಮಾಧಿ ಸ್ಥಿತಿಯಲ್ಲಿದ್ದು, ತಮ್ಮ ದೃಷ್ಟಿ ಹಾಗೂ ಸ್ಪರ್ಶದಿಂದ ಸದ್ಭಕ್ತರನ್ನು ಉದ್ಧಾರ ಮಾಡಿದ ಮಹಿಮಾನ್ವಿತ ಯೋಗೀ ಪುರುಷರಾಗಿದ್ದರು. ಯಡಳ್ಳಿಪುರದ ಬಸವಲಿಂಗಪ್ಪ ಬೂದನೂರ ಎಂಬವರು ಹುಬ್ಬಳ್ಳಿಯ ಶ್ರೀಸಿದ್ದಾರೂಢರ ಮಠಕ್ಕೆ ಬಂದು, ಸಿದ್ದಾರೂಢರ ಗದ್ದುಗೆಯ ದರ್ಶನಪಡೆದುಕೊಂಡು, ಅಂದು ರಾತ್ರಿ ಅಲ್ಲಿಯೇ ಉಳಿದರು. ಬೆಳಗಿನ ಜಾವದ ಸಮಯದಲ್ಲಿ ಮೌನಯೋಗಿ ಶ್ರೀಗುರುನಾಥರನ್ನು, ಅವರು ದೇವರೆಂದೇ ನಂಬಿರುವ ಭಕ್ತರು ಶ್ರೀಗುರುನಾಥ ಸ್ವಾಮಿಗಳನ್ನು ದೊಡ್ಡ ಅಡುಗೆ ಮನೆಯಲ್ಲಿ ಕರೆದುಕೊಂಡು ಹೋಗಿ ಅಲ್ಲಿರುವ ಬಯಲು ಬಚ್ಚಲಲ್ಲಿ ಸ್ನಾನಮಾಡಿಸುವ ಸಿದ್ಧತೆಯಲ್ಲಿದ್ದರು. ಪ್ರಥಮದಲ್ಲಿ ಅವರ ಬಾಯಿಯಲ್ಲಿ ನೀರು ಹಾಕಿ, ಬಾಯಿತೊಳೆದ ನೀರನ್ನು ಒಂದು ತಾಟಿನಲ್ಲಿ ಸಂಗ್ರಹಿಸಿ, ಆ ನೀರನ್ನು ಮಹಾಪ್ರಸಾದವೆಂದು ತಿಳಿದು ಸೇವಿಸುತ್ತಿದ್ದರು. ಇದು ಯಾವಾಗಲೂ ಪ್ರತಿದಿನ ನಡೆಯುತ್ತಿತ್ತು. ಅಂದುಕೂಡ ಅವರ ಬಾಯಿಯಲ್ಲಿ ಭಕ್ತರು ನೀರು ಹಾಕಿ, ಅವರು ಉಗುಳಿದ ನೀರನ್ನು ಒಂದು ತಾಟಿನಲ್ಲಿ ಹಿಡಿಯಲು ಸ್ವಾಮಿಗಳ ಎದುರಿಗೆ ನಿಂತಿದ್ದ ಬಸವಲಿಂಗರ ಕೈಯ್ಯಲ್ಲಿ ಕೊಟ್ಟರು. ಆಗ ಸ್ವಾಮಿಗಳು ಕುಲು ಕುಲು ನಗುತ್ತಿದ್ದರು. ಆಗ ಭಕ್ತರು ಸ್ವಾಮಿಗಳ ಬಾಯಲ್ಲಿ ನೀರು ಹಾಕಿದರು. ಅದನ್ನು ಸ್ವಾಮಿಗಳು ಉಗುಳಿದರು. ಹೀಗೆ ನಾಲೈದುಸಲ ಆಯಿತು. ಕೊನೆಗೆ ಅವರ ಮುಖದಲ್ಲಿ ಹಾಕಿದ ನೀರನ್ನು ಪುರ್ ಫುರ್‌ ಎಂದು ತಾಟು ಹಿಡಿಕೊಂಡಿದ್ದ ಬಸವಲಿಂಗಪ್ಪನವರ ಮುಖಕ್ಕೆ, ಮೈಗೆ ಉಗುಳಿದರು.
ಆಗ ತಾಟಿನಲ್ಲಿ ಸಂಗ್ರಹವಾದ ನೀರನ್ನು ಕರುಣಾಪ್ರಸಾದವೆಂದು ಕುಡಿದರು. ಪೂಜ್ಯರ ಕರುಣಾಪೂರ್ಣ ದೃಷ್ಟಿ ಅವರ ಮೇಲೆ ಪಾತ್ರವಾಯಿತು. ಆಗವರು ಜನ್ಮಸಾರ್ಥಕವಾಯಿತೆಂದು ಅರಿತು, ಹರ್ಷಾತಿರೇಕದಿಂದ ಬಸವಲಿಂಗಪ್ಪನವರ ಕಣ್ಣುಗಳಿ೦ದ ಸ೦ತೋಷದ ನೀರು ಸುರಿದವು. ಈ ಘಟನೆಯ ಪೂರ್ವದಲ್ಲಿ ಬಸವಲಿಂಗಪ್ಪನವರ ಮೈತುಂಬ ವ್ಯಾಪಿಸಿದ್ದ ಬಿಳಿಯ ಚಿಬ್ಬು (ಚರ್ಮರೋಗ) ಕೇವಲ ಒಂದೇ ವಾರದಲ್ಲಿ ವಾಸಿಯಾಯಿತು. ಅಲ್ಲದೆ ಶ್ರೀಗುರುನಾಥರ ಬಗ್ಗೆ ಅಚಲ ಶ್ರದ್ದೆ ಅವರ ಹೃನ್ಮಂದಿರದಲ್ಲಿ ಸ್ಥಾಪಿತವಾಯಿತು.

🌺 ಹುಬ್ಬಳ್ಳಿಯಲ್ಲಿದ್ದ ಗುರುನಾಥರೂಢರು  ಯಡಳ್ಳಿಯಲ್ಲಿ ಪ್ರಕಟವಾದರೂ 🌺
ಹತ್ತೊಂಬತ್ತು ನೂರಾ ಐವತ್ತೇಳನೆಯ ಇಸ್ವಿ, ಶ್ರಾವಣಮಾಸ ಸಮಯದಲ್ಲಿ ಆಗ ಬಸಲಿಂಗಪ್ಪ ಬೂದನೂರ ಅವರು ಯಡಳ್ಳಿಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಮಠದಲ್ಲಿ ನೆಲಸಿ, ದೇವಿ ಜಗನ್ಮಾತೆಯ ಆರಾಧನೆ ಗೈಯುತ್ತಿರುವ ಶುಭ ಸಮಯದಲ್ಲಿ ಒಂದು ದಿನ ಬೆಳಗಿನ ಐದು ಗಂಟೆಯ ಸಮಯದಲ್ಲಿ ಸಣ್ಣ ಕಂದೀಲು (ಕೈದೀಪ ಹಿಡಿದುಕೊಂಡು ಪತ್ರಿಗಿಡವನ್ನೇರಿ ದಳಗಳನ್ನು ಹರಿದು ಒಂದು ಸಣ್ಣ ಹೂವಿನ ಬುಟ್ಟಿಯಲ್ಲಿ ಹಾಕಿಕೊಳ್ಳುತ್ತಿದ್ದರು. ಆಗ ಗಿಡದಡಿಯಲ್ಲಿ ಜಗ್ಗನೆ ಪ್ರಕಾಶ ಹೊಳೆಯಿತು.ಆಗ  ಬಸವಲಿಂಗಪ್ಪನವರು ಅತ್ಯಾಶ್ಚರ್ಯದಿಂದ ಕೆಳಗೆ ನೋಡಿದರು . ಆ ದಿವ್ಯ ಯೋಗಿಗಳು ಗಿಡದಡಿಯಲ್ಲಿ ನಿಂತಿದ್ದರು. ಹಣೆಗೆ ವಿಭೂತಿ ಧರಿಸಿದ, ಮಡಿಯನ್ನು ಹೊದ್ದ, ಕೆಂಪು ಪೇಟ  ಸುತ್ತಿದ ಶ್ರೀ ಗುರುನಾಥಾರೂಢ ಸ್ವಾಮಿಗಳು ಅಪೂರ್ವ ತೇಜಯಕ್ಷರಾಗಿ ಶೋಭಿಸುತ್ತಿದ್ದರು. ಆಗ ಬಸವಲಿಂಗಪ್ಪನವರು ಗಿಡದಿಂದ ಕೆಳಗಿಳಿದು, ಅವರ ಸನ್ನಿಧಿಯಲ್ಲಿ ಭಯಭಕ್ತಿಯಿಂದ ನಿಂತ ಸಮಯದಲ್ಲಿಯೇ, ಅವರ ದಕ್ಷಿಣ ಕರ್ಣದಲ್ಲಿ ಉಸುರಿ, ಬಲಹಸ್ತವನ್ನು ಅವರ ಶಿರದ ಮೇಲಿರಿಸಿ ತಕ್ಷಣ ಅದೃಶ್ಯರಾದರು. ಆಗ ಜರುಗಿದ ಘಟನೆಯ ದೃಶ್ಯ ಸದಾ ಬಸವಲಿಂಗಪ್ಪನವರ ಚಿತ್ತದಲ್ಲಿ ನೆಲಸಿ ಪರಮಶಾಂತಿಯಗೈಯಲು, ಮುಂದೆ ಪರಮ ಶ್ರೇಯಸ್ಸು ಸಾಧಿಸಲು ಕಾರಣೀಭೂತವಾಯಿತು. ಯೋಗಸಾಮರ್ಥ್ಯದಿಂದ ಯೌಗಿಕ ಕಾರ್ಯ ರಚಿಸಿ ಅನುಗ್ರಹಿಸುತ್ತಿದ್ದ ಅವರ ಸಂಪೂರ್ಣ ದಯಾದೃಷ್ಟಿ ಆತುಲಿತ! ಹಾಗೂ ರೋಮಾಂಚನಕಾರಿಯಾಗಿತ್ತು.

🌺 ಶ್ರೀ ಗುರುನಾಥರೂಢರ  ದಿವ್ಯದರ್ಶನ ಮತ್ತೊಮ್ಮೆ ಕಂಡ ಬಸವಲಿಂಗಪ್ಪ 🌺
 ಹತ್ತೊಂಭತ್ತುನೂರಾ ಅರವತ್ತೆರಡು ಮೇ ತಿಂಗಳು ಹದಿಮೂರನೆಯ ದಿನಾಂಕ ಅಂದು ಬೆಳಗಿನ ನಾಲ್ಕು ಗಂಟೆಯ ಸಮಯ ಶ್ರೀಗುರುನಾಥರನ್ನು ಸ್ಮರಿಸುತ್ತ ಬಸವಲಿಂಗಪ್ಪನವರು ಏಕಾಂತದಲ್ಲಿ ಧ್ಯಾನಸ್ಥರಾಗಿ ಕುಳಿತಿದ್ದರು : ಕುಳಿತಿದ್ದ ಸ್ಥಳ ದನಗಳನ್ನು ಕಟ್ಟುವ ಮನೆ, ಅಲ್ಲಿ ಒಂದು ಕಡೆಯಲ್ಲಿ ಹಾಸಿಗೆಯ ಮೇಲೆ ಕುಳಿತಿರುವ ಪ್ರಸಂಗ. ಆಗ ಎದುರುಗಡೆಯಲ್ಲಿ ಕೋಲ್ಕಿಂಚಿನಂತೆ ಪ್ರಕಾಶ ಹೊಳೆಯಿತು, ಆ ಪ್ರಕಾಶ ವಲಯದಲ್ಲಿ ಶ್ರೀ ಗುರುನಾಥರು ನಿಂತುಕೊಂಡಿದ್ದರು. ಅವರನ್ನು ಕುರಿತು ಭಕ್ತಿ ಭಾವದಿಂದ ಅವರ ಸಮೀಪ ಬಸವಲಿಂಗಪ್ಪನವರು ನಿಂತುಕೊಂಡರು.
ಆಗ ಗುರುಗಳು ತಮ್ಮ ಪವಿತ್ರ ಹಸ್ತವನ್ನು ಅವರ ಮಸ್ತಕದಲ್ಲಿಟ್ಟು ಅನುಗ್ರಹಿಸಿ ಅದೃಶ್ಯರಾದರು. ಆಗ ಬಸವಲಿಂಗಪ್ಪನವರು ಹರ್ಷ ಪುಳಕಿತರಾದರು. ಆಶ್ಚರ್ಯವೆಂದರೆ ಅದೇ ದಿನ ಶ್ರೀ ಗುರುನಾಥಾರೂಢ ಸ್ವಾಮಿಗಳು ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿ ಬ್ರಹ್ಮಲೀನರಾದರು. ಅಲೌಕಿಕ ಜ್ಯೋತಿ ಇಹಲೋಕ ದಿಂದ ಕಣ್ಮರೆಯಾಯಿತು. ಜನಸಾಗರದ ಮಧ್ಯದಲ್ಲಿ ಸವಿಕಲ್ಪ ನಿರ್ವಿಕಲ್ಪ ಸಮಾಧಿ ದ್ವಯಗಳಿಂದ ಲೋಕೋದ್ಧಾರಗೈದು ಪಾವನಗೊಳಿಸಿದ ಪರಮಪುರುಷ. ಬ್ರಹಸ್ಥಿತಿಯನ್ನು ವಿಶ್ವಕ್ಕೆ ಪರಿಚಯಗೈದ ಪರಮಾರೂಢ ಶಿವಯೋಗಿಗಳನ್ನು ವರ್ಣಿಸಲಸದಳ.

__________________________
ಮುಂದಿನ ಕಥೆ
👇👇👇

Facebook ಅಲ್ಲಿ share ಮಾಡಲು ಕೆಳಗಿನ ಲಿಂಕ್ use ಮಾಡಿ 
👇




👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ