ಗಜೇಂದ್ರಗಡದಲ್ಲಿ ಮಠ ಸ್ಥಾಪನೆ




ನಡೆದೇವಯಾತ್ರೆನಿಂದೆಡೆ ವಾರಣಾಸಿ ಮನಪಿಡಿದುದೇ ಸುಮತವಹುರು ಯೋಗೀಶ್ವರಂ ನುಡಿದುದೇ ಮಂತ್ರವೆನಿಸುವುದು ಎಂಬ ನಿಜಗುಣರ ವಾಕ್ಯದಂತೆ  ಒಬ್ಬ ಬ್ರಹ್ಮನಿಷ್ಠ ಯೋಗೀಪುರುಷನು ನಿಂದುದೇ ಪುಣ್ಯಕ್ಷೇತ್ರ ಎಂಬುದಕ್ಕೆ ಒಂದು ಉದಾಹರಣೆ.
ಶ್ರೀ ಸಿದ್ಧಾರೂಢರ ಶಿಷ್ಯರಾದ ಬಸವಾನಂದರು ತಮ್ಮ ಗುರುವಿನ ಆಜ್ಞಾನುಸಾರ ಗಜೇಂದ್ರಗಡಕ್ಕೆ ಬಂದಾಗ, ಶ್ರೀ ಸಿದ್ಧಾರೂಢರ ಭಕ್ತರಾದ ಆ ಊರಿನ ಆಗಿನ ಘೋರ್ಪಡೆ ಮಹಾರಾಜ ಅಪ್ಪಾಸಾಹೇಬರು ಅವರಿಗಾಗಿ ಊರಿನ ಪೂರ್ವಭಾಗದ ಜಾಗೆಯಲ್ಲಿ ಆಶ್ರಮ ಮತ್ತು ಒಂದು ಬಾವಿಯನ್ನು ಕಟ್ಟಿಸಿ, ಏಳು ಎಕರೆ ಭೂಮಿಯನ್ನು ಆಶ್ರಮಕ್ಕಾಗಿ ದಾನವಾಗಿ ಕೊಟ್ಟಿದ್ದರು. ಶ್ರೀ ಬಸವಾನಂದರು ಅಲ್ಲಿದ್ದು ದಿನಾಲು ಶಾಸ್ತ್ರ ಪ್ರವಚನ ಭಜನೆ ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತ, ಅಲ್ಲಿಯೇ ಮಹಾಸಮಾಧಿಯಾದರು. ನಂತರ ಅವರ ಭಕ್ತರು ಅವರ ಗದ್ದುಗೆಯನ್ನು ಕಟ್ಟಿಸಿದರು.
ಕಾಲಾಂತರದಲ್ಲಿ ದಿನಾಂಕ ಇಪ್ಪತ್ತೇಳು ಐದನೆಯ ತಿಂಗಳು ಹತ್ತೊಂಭತ್ತು ಐವತ್ತೊಂಭತ್ತನೆಯ ಇಸ್ವಿಯಂದು, ಗಜೇಂದ್ರಗಡಕ್ಕೆ ಹುಬ್ಬಳ್ಳಿಯ ಮೌನಯೋಗಿ ಶ್ರೀ ಗುರುನಾಥಾರೂಢ ಸ್ವಾಮಿಗಳನ್ನು, ಅಲ್ಲಿಯ ಪುಣ್ಯಾತ್ಮರಾದ ಶ್ರೀರಾಯಬಾಗಿ ಮನೆತನದ ಎಂದರೆ ಶ್ರೀ ಸಿದ್ಧಾರೂಢರ ಆಗಿನ ಭಕ್ತರಾದ ಕಡೇಮನೆಯವರೆಂದೆ ಪ್ರಸಿದ್ಧರಾದ ಗೋವಿಂದಪ್ಪನವರು ಮತ್ತು ಸಂಬಂಧಿಕರು, ಸದ್ಗುರು ಗುರುನಾಥ ಸ್ವಾಮಿಗಳನ್ನು ಗಜೇಂದ್ರಗಡಕ್ಕೆ ಭಕ್ತಿಯಿಂದ ಕರೆದುಕೊಂಡು ಬಂದಾಗ, ಬಸವಾನಂದ ಗದ್ದುಗೆಯ ಆಶ್ರಮದಲ್ಲಿ ಶ್ರೀಗಳ ಪಾದಪೂಜೆಯಾದ ನಂತರ ಶ್ರೀ ಶಿವಲಿಂಗಪ್ಪ ಬಸಪ್ಪ ಸವಣೂರ ಇವರು, ಶ್ರೀ ಗುರುನಾಥಾರೂಢರನ್ನು ತಮ್ಮ ಅವಿಭಕ್ತ ಕುಟುಂಬದ ಮನೆಗೆ ಬರಮಾಡಿಕೊಂಡು ಮಹಾತ್ಮರಿಗೆ ಪೂಜೆ ಸಲ್ಲಿಸಿದರು.
ಶಿವಲಿಂಗಪ್ಪನವರ ತಾಯಿ ಎಲ್ಲಮ್ಮ ಮತ್ತು ಅವರ ಮಕ್ಕಳು, ಬಂಧುಗಳು  ಶಿವಯೋಗಿಯ ದರ್ಶನ ಅವರ ಚರಣಕಮಲಗಳ ದರ್ಶನದಿಂದ ಆ ಬಡಕುಟುಂಬವು  ಪಾವನವಾಗಿದ್ದಲ್ಲದೆ, ಮುಂದೆ ಆ ಸ್ಥಳದಲ್ಲಿ ಶ್ರೀಗಳು ನಿಂತ ಸ್ಥಳವೇ ಪುಣ್ಯಕ್ಷೇತ್ರವಾಯಿತು ಶ್ರೀಗುರುನಾಥರು ಹುಬ್ಬಳ್ಳಿಗೆ ಹೋದ ಮರುದಿನವೇ, ಇತ್ತ ಬಾಗಿಲುಕೋಟೆಯ ಸದ್ಗುರು  ರಾಮಾರೂಢ ಸ್ವಾಮಿಗಳ ಅನುಗ್ರಹ ಮತ್ತು ಅವರ ಆಜ್ಞೆಯ ಮೇರೆಗೆ, ಅವರ ಪರಮ ಶಿಷ್ಯರಾದ ಸಹಜಾನಂದ ಸ್ವಾಮಿಗಳು ಗಜೇಂದ್ರಗಡಕ್ಕೆ ಬಂದು ಬಸವಾನಂದರ ಗದ್ದುಗೆಯ ಆಶ್ರಮದಲ್ಲಿ ಉಳಿದಿದ್ದರು.
ಆಗ ಆ ಮಹಾತ್ಮರನ್ನು ಶಿವಲಿಂಗಪ್ಪ ಸವಣೂರ ಅವರು ತಮ್ಮ ಮನೆಗೆ ಕರೆತಂದಾಗ, ಅವರ ಮನೆಯವರು ಮತ್ತು ತಾಯಿ ಶ್ರೀಮತಿ ಎಲ್ಲಮ್ಮನವರು ಅವರ ಪಾದಪೂಜಿಸಿ, ಅವರಿಗೆ ಒಂದು ರೂಪಾಯಿ ಕಾಣಿಕೆ ಕೊಡಲು ಹೋದಾಗ, ಸಹಜಾನಂದರು ಎಲ್ಲಮ್ಮನನ್ನು ಕುರಿತು, ತಾಯಿ ಎಲ್ಲಮ್ಮ ! ನಿನ್ನ ಭಕ್ತಿಗೆ ಮೆಚ್ಚಿದೆನು. ಇನ್ನು ಮುಂದೆ ನಾನು ಈ ಊರಲ್ಲಿ ಇರುವವರೆಗೆ, ನಿನ್ನ ಮನೆಯಿಂದ ನಿತ್ಯ ಒಂದು ರೊಟ್ಟಿ ಪ್ರಸಾದವನ್ನು ಆಶ್ರಮಕ್ಕೆ ಕಳಿಸಿಕೊಡು ಎಂದು ಹೇಳಿದಾಗ, ಎಲ್ಲಮ್ಮನವರು ಅವರ ಮಾತಿಗೆ ಒಪ್ಪಿ ಪ್ರತಿದಿನ ಸ್ವಾಮಿಗಳಿಗೆ ಸುಮಾರು ಒಂದು ತಿಂಗಳವರೆಗೆ ಪ್ರಸಾದವನ್ನು ಕೊಟ್ಟು ಕಳಿಸಿದಳು.
ಆ ಮಹಾತಾಯಿ ನೀಡಿದ ಪ್ರಸಾದದ ಪುಣ್ಯದಿಂದ ಸದ್ಗುರು ಶ್ರೀ ಸಹಜಾನಂದರು ಪ್ರತಿ ವರುಷ ಗಜೇಂದ್ರಗಡಕ್ಕೆ ಬರುವಂತಾಯಿತು. ಶ್ರೀ ಬಸವಾನಂದರ ಗದ್ದುಗೆಯ ಆಶ್ರಮದಲ್ಲಿ ಶ್ರೀ ಸಹಜಾನಂದರ ಆಗಮನದಿಂದಾಗಿ ಅವರ ದರುಶನ, ಸ್ಪರ್ಶನ ಪಾದೋದಕ , ಕಂತಿ ಪ್ರಸಾದ ಮತ್ತು ಮುಂಜಾನೆ, ಸಾಯಂಕಾಲ ಪ್ರವಚನಗಳು ಸಪ್ತಾಹರೂಪದಲ್ಲಿ ನಡೆಯಹತ್ತಿದವು. ಹೀಗೆ ನಡೆಯುತ್ತಿರಲಾಗಿ ಕಾಲಾಂತರದಲ್ಲಿ ಶ್ರೀಮತಿ ಎಲ್ಲಮ್ಮನ ಕಿರಿಯ ಮಗನಾದ ಶ್ರೀವೀರಪ್ಪ ಬಸಪ್ಪ ಸವಣೂರ ಇವರು ತಮ್ಮ ಪಾಲಿಗೆ ಬಂದ ಜಾಗವನ್ನು, ತಮ್ಮ ತಾಯಿ ದಿವಂಗತ ಎಲ್ಲಮ್ಮನವರ ಸ್ಮರಣಾರ್ಥ, ತಮ್ಮ ಸಮಾಜ ಬಾಂಧವರಿಗೆ ಶ್ರೀ ಸಿದ್ಧಾರೂಢರ ಮಂದಿರ ಕಟ್ಟಲು ಹತ್ತೊಂಭತ್ತುನೂರಾ ಎಂಭತ್ತನೆಯ ಇಸ್ವಿಯಲ್ಲಿ ದಾನವಾಗಿ ಕೊಟ್ಟು ಕಾಣಿಕೆಯನ್ನು  ಸಲ್ಲಿಸಿದರು
ಮುಂದೆ ಆ ಜಾಗೆಯಲ್ಲಿ ಶ್ರೀಸಹಜಾನಂದ ಸ್ವಾಮಿಗಳ ಅಮೃತ ಹಸ್ತದಿಂದ ಪ್ರಮುಖ ನಾಗರಿಕರ ಸಮ್ಮುಖದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಂದಿರ ಅಡಿಗಲ್ಲ ಸಮಾರಂಭ ನೆರವೇರಿತು. ನಂತರ ಶ್ರೀಸವಣೂರ ಬಂಧುಗಳಿಂದ ಮತ್ತು ಸಕಲ ಭಕ್ತರಿಂದ ಶ್ರೀ ಸಿದ್ಧಾರೂಢ ಮಂದಿರ ನಿರ್ಮಾಣವಾಯಿತು. ಮುಂದೆ ಶ್ರೀ ಸಿದ್ಧಾರೂಢರ ಪುಣ್ಯಾರಾಧನೆಯಂದು ಅಮೃತ ಶಿಲೆಯ ಮೂರ್ತಿಯನ್ನು ಸಹಜಾನಂದರಿಂದ ಸ್ಥಾಪನೆ ಮಾಡಿಸಲಾಯಿತು. ಪೂಜ್ಯರ ಆಜ್ಞೆಯಂತೆ ಮಂದಿರದಲ್ಲಿ ನಿತ್ಯ ಮುಂಜಾನೆ ಸಾಯಂಕಾಲ ಪೂಜೆ ಭಜನೆ ಪ್ರವಚನ ಮುಂತಾದ ಕಾರ್ಯಕ್ರಮಗಳು ನಡೆಯಹತ್ತಿದವು. ಮುಂದೆ ಕಳಸಾರೋಹಣ ಜಯಂತಿ ಉತ್ಸವ ನಡೆಯಹತ್ತಿದವು.
ಆನಂತರ ಸಹಜಾನಂದರ ಸಲಹೆಯ ಮೇರೆಗೆ ಸುಂದರ ತೇರು ನಿರ್ಮಾಣವಾಗಿ ಶ್ರೀ ಸಿದ್ಧಾರೂಢರ ಜನೋತ್ಸವದಂದು, ಸಹಜಾನಂದರ ಉತ್ತರಾಧಿಕಾರಿಗಳಾದ ಸಹಜಾನಂದ ಸರಸ್ವತಿ ಸ್ವಾಮಿಗಳು ಚಿತ್ರಭಾನುಕೋಟೆ ಇವರ ಹಸ್ತದಿಂದ ಪ್ರಥಮ ರಥೋತ್ಸವ ಸಂಭ್ರಮದಿಂದ ನಡೆಯಿತು.
ಒಟ್ಟಿನಲ್ಲಿ ಮೌನ ಯೋಗಿ ಶ್ರೀಗುರುನಾಥ ಸ್ವಾಮಿಗಳು ಪವಿತ್ರ ಶ್ರೀಪಾದಗಳನ್ನಿಟ್ಟ ಸ್ಥಾನವು ಪವಿತ್ರ ಸ್ಥಾನವಾಗಿ ಮೆರೆಯುತ್ತಿರುವುದನ್ನು ಇಂದಿಗೂ ಕಾಣಬಹುದು.



ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ