ಮೂಲ ನಕ್ಷತ್ರದಲ್ಲಿ ಜನನವಾದರೆ ತಂದೆ ತಾಯಿಗೆ ಅನಿಷ್ಟವೇ?? ಸಿದ್ಧಾರೂಢ ಮಹಿಮೆ
🌺ಮೂಲ ನಕ್ಷತ್ರದಲ್ಲಿ ಜನನವಾದರೆ ತಂದೆ ತಾಯಿಗೆ ಅನಿಷ್ಟವೇ?? ಸಿದ್ಧಾರೂಢ ಮಹಿಮೆ 🌺
ಸಿದ್ಧರಿಗೆ ಇಷ್ಟ, ಅನಿಷ್ಟವೆಂಬುದು ಗೊತ್ತಿರಲೇ ಇಲ್ಲ. ಅದರಲ್ಲಿ ಆ ಅನಿಷ್ಟಗಳೆಲ್ಲ ಇಷ್ಟಗಳಾದವು. ಇಂಥ ನೂರು ಉದಾಹರಣೆಗಳನ್ನು ಸಿದ್ಧರ ಬದುಕಿನಲ್ಲಿ ನಾವು ಗುರುತಿಸುತ್ತೇವೆ. ಮುಂಬಯಿಯ ಕಡೆಯ ಕೋಟ್ಯಾಧೀಶರೊಬ್ಬರಿಗೆ ಸಂತತಿ ಭಾಗ್ಯವಿರಲಿಲ್ಲ. ದಂಪತಿಗಳಿಗೆ ಸಕಲ ಸೌಭಾಗ್ಯವಿದ್ದರೂ ಮಕ್ಕಳ ಸೌಭಾಗ್ಯವಿಲ್ಲದ್ದಕ್ಕೆ ಅವರಿಗೆ ಸುಖವಿರಲಿಲ್ಲ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮನೆ ಮಾರು, ಬೆಳ್ಳಿ ಬಂಗಾರ, ರೊಕ್ಕ ರೂಪಾಯಿ ಅವರಿಗೆ ಯಾವ ಸಂತಸವನ್ನು ನೀಡದಾಯಿತು. 'ಏನಿದ್ದರೇನು? ನಮ್ಮ ಬಾಳಿಗೆ ನಮ್ಮದೆನ್ನುವ ವಂಶದೀಪ ಇಲ್ಲವಾಯಿತಲ' ಎಂದು ಆ ಶ್ರೀಮಂತ ದಂಪತಿಗಳು ಮನದಲ್ಲಿ ಮರುಗಿದರು. ದೇಹದಲ್ಲಿ ಕೊರಗಿದರು. ಕಂಡ ಕಂಡ ದೇವರಿಗೆ ಕೈ ಮುಗಿದರು. ಹೇಳಿದ ಗಿಡಕ್ಕೆ ಸುತ್ತು ಹೊಡೆದರು. ಎದುರಾದ ಕೆರೆ ಭಾವಿಗಳಲ್ಲಿ ಮುಳುಗಿ ಎದ್ದರು. ದಾನಧರ್ಮ ಮಾಡಿದರು. ಬಡಬಗ್ಗರಿಗೆ ಉಣಿಸಿದರು. ಗುಡಿಗುಂಡಾರ ಕಟ್ಟಿಸಿದರು. ಆದರೂ ಮುಚ್ಚಿದ ಕಣ್ಣನ್ನು ದೇವರು ಬೇಗ ತೆರೆಯಲಿಲ್ಲ ಆ ಶ್ರೀಮಂತ ದಂಪತಿಗಳಿಗೆ ಅನ್ನ ನೀರುಗಳಲ್ಲಿ ರುಚಿ ಉಳಿಯಲಿಲ್ಲ. ಜೀವನದಲ್ಲಿ ಸೊಗಸು ಎನ್ನುವದು ಸೋರಿಹೋದಂತೆನಿಸಿತು. ಬದುಕು ಬಿಕೋ ಎನ್ನುವಂತಾಯಿತು. ಅಂಥ ಕಾಲದಲ್ಲಿ ಅವರ ದೇವಭಕ್ತಿ ಇನ್ನಷ್ಟು ಧೃಡಗೊಂಡಿತು. ಭಾವ ಬಲಿಯಿತು. ನಿಷ್ಠೆ ನಿಂತಿತು. ಆ ದಂಪತಿಗಳಿಗೆ ದೇವಕರುಣೆ ಆಯಿತೆನ್ನುವಂತೆ ಅವನ ಹೆಂಡತಿ ಗರ್ಭ ಧರಿಸಿದಳು. ಅವನಿಗೆ ನಂಬಿಕೆಯಾಗಲಿಲ್ಲ. ವೈದ್ಯಕೀಯ ಪರೀಕ್ಷೆಯಿಂದ ಅದು ಧೃಡಪಟ್ಟಾಗಲೇ ಆ ಧನಿಕನಿಗೆ ಮುಗಿಲು ಮೂರೇಗೇಣು ಉಳಿಯಿತು. ದೇವರಲ್ಲಿ ಎಂದಿಲ್ಲದ ಭಕ್ತಿ ಉಕ್ಕಿತು. ದಾನಗುಣ ವೃದ್ದಿ ಯಾಯಿತು. ಮನೆ ಬಾಗಿಲಿಗೆ ಬೇಡಿ ಬಂದವರು, 'ಧನಿ ಸಾಕು.ನಾ; ಎನ್ನುವಂತಾಯಿತು. ಹೀಗೆ ಸಂಭ್ರಮ ಸೂಸುವಾಗ, ಸಂತಸ ಉಕ್ಕುವಾಗ ಆ ದಂಪತಿಗಳಿಗೆ ಗಂಡು ಮಗು ಹುಟ್ಟಿತ್ತು, ಅವರಿಗೆ ಆನಂದಕ್ಕೆ ಪಾರವೇ ಇಲ್ಲದಾಯಿತು. ಜೀವನದ ನಂದಾದೀವಿಗೆ ಉದಯಿಸಿತು, ಕತ್ತಲೆ ತುಂಬಿದ ಬಾಳಿನಲ್ಲಿ ಸೂರ್ಯ ಉದಯಿಸಿದ ಎಂದು ಹಿಗ್ಗಿದರು. ಕುರುಡನಿಗೆ ಏಕಾಏಕಿ ಕಣ್ಣು ಬಂದಂತೆ; ಹೆಳವನಿಗೆ ಕಾಲ ಬಂದಂತೆ, ಸತ್ತವನು ಎದ್ದು ಕುಳಿತಂತೆ; ಅವರಿಗೆ ಆನಂದವಾಯಿತು. ಮನೆಯ ಗೋಡೆ ಬಾಗಿಲ ಕಿಡಕಿಗಳೂ ಸಂತೋಷದಿಂದ ಕುಣಿದಾಡಿದವು. ಅವರ ಮನೆಗೆ ಹಿರಿಯ ಜ್ಯೋತಿಷಿಗಳ ಬಂದರು. ಮಗುವಿನ ಜನನ ಗಳಿಗೆಯ ಶುಭಾಶುಭಗಳನ್ನು ಲೆಕ್ಕ ಹಾಕಿದರು. ಜ್ಯೋತಿಷಿಗಳ ಮುಖದಲ್ಲಿ ಕಪ್ಪು ಛಾಯೆ ಕಂಡಾಗ ಆ ಶ್ರೀಮಂತನಿಗೆ ಹುದಲಿನಲ್ಲಿ ಕೊಳೆತ ಮುಳ್ಳು ತುಳಿದಷ್ಟು ನೋವಾಯಿತು. ಕತ್ತಲಲ್ಲಿ ದಾರಿ ನಡೆಯುವಾಗ ಒಮ್ಮೆಲೇ ಆಳವಾದ ಬಾವಿಗೆ ಧಡಾರನೆ ಬಿದ್ದಂತೆ ಭಾಸವಾಯಿತು. ಜನನ ಗಳಿಗೆಯನ್ನು ಹೇಳಲು ಬಂದ ಜ್ಯೋತಿಷಿಯ ಹೃದಯವು ದುಃಖದಿಂದ ಬಿರಿಯುವಂತಾಯಿತು. ಅವನಿಗೆ 'ಅಯ್ಯೋ ದೇವಾ ನಿನ್ನ ಕರುಣೆಯಿಲ್ಲದಾಯಿತೇ' ಎನ್ನುವಂತಾಯಿತು. ಆಗ ಆ ಧನಿಕನು ಗಾಬರಿಯಾಗಿ, 'ಏನ್ನು ಜ್ಯೋತಿಷಿಗಳೇ, ಏನಾಯಿತು? ಮಗು ಜನಿಸಿದ ಗಳಿಗೆಯಲ್ಲಿ ಏನಾದರೂ ದೋಷ ಉಂಟೆ? ಎಂದು ಮರುಕದಿಂದ ಮಾತಾಡಿಸಿದರು. ಏನಾದರೂ ದೋಷವಿದ್ದರೆ, ಲೋಪವಿದ್ದರೆ, ಇಡೀ ಬದುಕನ್ನು ಬಲಿಕೊಟ್ಟು ನಿವಾರಿಸಲು ನಾನು ಸಿದ್ಧ ಎನ್ನುವ ಆತ್ಮವಿಶ್ವಾಸದಿಂದ ಅವರು ಮುಂದೆ ಬಂದರು. ಜ್ಯೋತಿಷಿಯು ಕಂಬನಿ ಸುರಿಸಿದನು. 'ದೇವರು ಹೀಗೆ ಮಾಡಬಾರದಿತ್ತು. ಮಗು ಮೂಲಾನಕ್ಷತ್ರದಲ್ಲಿ ಜನಿಸಿದೆ. ವರ್ಷ ತುಂಬುವದರೊಳಗೆ ತಂದ ತಾಯಿಗಳನ್ನು ಬಲಿ ತಕ್ಕೋಳ್ಳುತ್ತದೆ' ಎಂದು ಹೇಳಲಾರದೆ ಹೇಳಿ, ಹೊರಟು ಹೋದನು.
ಹೊಳೆಯಾಗಿ ಹರಿಯುವ ದಂಪತಿಗಳ ಹರ್ಷ ಒಮ್ಮೆಗೇ ಬಾಡಿಬತ್ತಿತು. 'ದೇವಾ ನೀನು ಕೊಟ್ಟದ್ದು ಸ್ವಾರ್ಥಕವಾಗದಂತೆ ಮಾಡಿದಿಯಾ ? ಕೊಡುವ ದೇವಾ, ನಿನಗೆ ಕರುಣೆ ಬತ್ತಿಹೋಯಿತೇ?” ಎಂದು ದಂಪತಿಗಳು ಹಲುಬಿದರು. ಮಗುವಾದಾಗ ಇದ್ದ ಸಂತೋಷ ಮಾಯವಾಗಿ ಹೋಯಿತು. ಮಗುವು ಇಲ್ಲದಾಗ, ಇಲ್ಲವೆನ್ನುವ ಒಂದೇ ಒಂದು ಕೊರಗು ಇತ್ತು. ಮಗುವು ಹುಟ್ಟಿ ಬರೀ ಒಂದು ವರ್ಷಕ್ಕೆ ನಮ್ಮಿಬ್ಬರನ್ನೂ ಬಲಿ ತಕ್ಕೊಳ್ಳುತ್ತದಲ್ಲ ಎಂದು ತಿಳಿದಾಗ, ಅವರಿಗೆ ತಾವು ನಿಂತ ನೆಲವೇ ಕುಸಿದಂತಾಯಿತು; ಉಂಡ ಅಮೃತವೇ ಹೊಟ್ಟೆಯಲ್ಲಿ ವಿಷವಾಗಿ ಪರಿಣಮಿಸಿತು. ಮಗುವನ್ನು ನೋಡಿದಾಗ ಮಮತೆ ಉಕ್ಕುವ ಬದಲು ಕಹಿಭಾವನೆಯ ಬುಗ್ಗೆಯೇ ಚಿಮ್ಮತೊಡಗಿತು. ಇದು ಹೊಟ್ಟೆಯಲ್ಲಿ ಹುಟ್ಟಿದ ನಮ್ಮ ವಂಶದ ಕುಡಿಯಲ್ಲ. ನಮ್ಮನ್ನು ಬಲಿ ತೆಗೆದುಕೊಳ್ಳಲು ಹುಟ್ಟಿದ ವಿಷಜಂತು ಎನ್ನುವ ಭಾವನೆ ಬಂದಿರು, ಮಗುವನ್ನು ಕೊಲ್ಲಿಸಿದರೆ, ಬರಬಹುದಾದ ಅನಾಹುತ ತಪ್ಪಬಹುದೇ ? ಎಂದು ಆ ಧನಿಕನ ದುನಸ್ಸು ವ್ಯಗ್ರವಾಗಿ ಚಿಂತಿಸಿತು; ಮಗುವನ್ನು ಕೊಂದರೆ, ತಮಗೆ ವರ್ಷ ತುಂಬುವದರೊಳಗಾಗಿ ಬರುವ ಸಾವು ತಪ್ಪುವದೆಂದು ಯಾರಾದರೂ ಹೇಳಿದ್ದರೆ, ಆ ದಂಪತಿಗಳು ಮಗುವನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವದಕ್ಕೂ ಹಿಂದೆ ಮುಂದೆ ನೋಡುತ್ತಿರಲಿಲ್ಲವೇನೋ ! ಮಗುವನ್ನು ಕೊಂದ ಮಾತ್ರಕ್ಕೆ ಅದು ಹುಟ್ಟಿದ ಅನಿಷ್ಟ ಗಳಿಗೆಯನ್ನು ಕೊಂದಂತಾಗಬಲ್ಲುದೇ ? ತಮ್ಮ ಕೆಟ್ಟ ಗಳಿಗೆಗೆ ಆ ಬಡಪಾಯಿ ಮಗು ಏನು ಮಾಡೀತು ಎಂದು ಅವರು ತಮ್ಮ ಹಣೇಬರಹವನ್ನೇ ಬಲವಾಗಿ ಹಳಿದುಕೊಂಡರು. ಕಲ್ಲಿನಿಂದ ಹಣೆಯನ್ನು ಜಜ್ಜಿಕೊಂಡರೆ, ಹಣೇಬರಹವು ಹೊಸದಾಗಬಲ್ಲುದೇ ? ಕಡಿದ ಹುಚ್ಚು ನಾಯಿಯನ್ನು ಕೊಂದರೆ, ಮೈಯಲ್ಲಿ ಸೇರಿದ ವಿಷಮಾಯವಾದೀತೇ? ಎನಿಸಿತು. ಇದಕ್ಕೆ ಏನಾದರೂ ಉಪಾಯವಿದೆಯೇ? ದೇವತಾ ಪೂಜೆ, ಅನ್ನದಾನ, ಗೋದಾನಗಳಾದರೂ ಬರುವ ಅನಿಷ್ಟದ ಪ್ರಭಾವವನ್ನು ಕುಗ್ಗಿಸಬಹುದೇ? ಎಂದು ಚಿಂತಿಸಿದರು. ಯಾರು ಏನನ್ನೇ ಹೇಳಿದರೂ ಅದನ್ನು ಅವರು ನಂಬಿದರು. ಎಲ್ಲಾದರೂ ತಮಗೆ ಬರುವ ಸಾವನ್ನು ದೂರ ಮಾಡುವ ದೇವನು ಸಿಗಬಹುದೇ ? ಎಂದು ಹಳಹಳಿಸಿದರು. ತಮ್ಮ ಸಾವು ದಿನಗಳೆದಂತೆ ಹತ್ತಿರ ಹತ್ತಿರಕ್ಕೆ ಬರುತ್ತದೆ ಎಂದು ತಿಳಿದಾಗ ಅವರ ಹೃದಯದ ಬಡಿತ ಹೆಚ್ಚಾಯಿತು. ತಮ್ಮ ಸಮಸ್ತ ಐಶ್ವರ್ಯವನ್ನೇ ತಕ್ಕೊಂಡು ತಮ್ಮನ್ನು ಮತ್ತು ತಮ್ಮ ಮಗುವನ್ನು ಉಳಿಸುವ ದೇವ ಎಲ್ಲಾದರೂ ಸಿಗಬಹುದೇ? ಎಂದು ಚಿಂತಿಸತೊಡಗಿದರು. ಆಗ ಆ ಧನಿಕನ ಮನೆಗೆ ಒಬ್ಬ ಸಾಧು ಬಂದನು. ಆ ಮನೆಯೊಡೆಯನ ದುಗುಡವನ್ನು ಅರಿತನು. 'ಒಡೆಯಾ, ತಮ್ಮ ದುಃಖ ದೇವರಿಗೆ ಅರಿಕೆಯಾಗಿದೆ. ತಾವು ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳಲ್ಲಿ ಗೆ ಹೋದರೆ, ತಮ್ಮ ದುಃಖ ಪರಿಹಾರವಾಗುವದು. ತಮ್ಮ ಮಗನೂ ಉಳಿಯುತ್ತಾನೆ. ತಾವೂ ನೆಮ್ಮದಿಯಿಂದ ಇರುತ್ತೀರಿ' ಎಂದು ಹೇಳಿದನು. ಹತ್ತಾರು ಮಂದಿ ಸಾಧುಗಳು ಈ ರೀತಿ ಆಸಾವುಕಾರನಿಗೆ ಹೇಳಿದ್ದರು. ಹತ್ತೆಂಟು ಉಪಾಯ ಸೂಚಿಸಿದ್ದರು. ಯಾವುದೂ ಮನಸ್ಸಿಗೆ ನೆಮ್ಮದಿ ತಂದಿರಲಿಲ್ಲ, ಈ ಸಾಧುವಿನ ಮಾತು ನಂಬಬೇಕೋ ಬೇಡವೋ ಎಂದು ಚಿಂತಿಸುವಾಗಲೇ, ಇದೊಂದು ಮಾತನ್ನು ಯಾಕೆ ನಂಬಬಾರದು? ಎಂದು ಆ ಶ್ರೀಮಂತನು ಮನಸ್ಸಿನಲ್ಲಿ ಯೋಚಿಸಿದನು. ನೀರಲ್ಲಿ ಮುಳಗಿ ಸಾಯುವವನು ಎದುರಿಗೆ ಅಬ್ಬರಿಸಿ ಬರುವ ಹಾವನ್ನೂ ಆಸರೆಯಾಗಿ ಅಪ್ಪಿಕೊಳ್ಳುವಂತೆ, ಧನಿಕ ಸಾಧುವಿನ ಮಾತನ್ನು ಅಪ್ಪಿಕೊಂಡನು. ಸಾಧುವೇ ಸಾವುಕಾರರನ್ನು ಹುಬ್ಬಳ್ಳಿಗೆ ಆ ಕರೆತಂದನು. ಅವರೆಲ್ಲರೂ ಟಾಂಗಾದಲ್ಲಿ ಕುಳಿತು ಮಠದ ಸಮೀಪಕ್ಕೆ ಬಂದಾಗ ಆ ಸಾಧು ಕೈಲಾಸ ಮಂಟಪದ ಎದುರಿನಲ್ಲಿ ಕುಳಿತಿದ್ದ ಸಿದ್ಧಾರೂಢರ ಕಡೆಗೆ ಕೈಮಾಡಿ ತೋರಿಸುತ್ತ
ಆಸಾವುಕಾರನಿಗೆ, ಧಣಿ ನೀವು ಸಿದ್ದಾರೂಢರ ಬಳಿಗೆ ನಡೆಯಿರಿ, ನನಗೆ ಇಲ್ಲಿ ವಂದಿಷ್ಟು ಕೆಲಸವಿದೆ. ನಾನು ಆ ಬಳಿಕ ಬರುತ್ತೇನೆ ಎಂದು ಹೇಳಿದವನೇ ಇಳಿದು ಮರೆಯಾಗಿದ್ದ ಆ ಟಾಂಗಾ ಮಠದಿಂದ ಇನ್ನೂ ಅರ್ಧ ಪಲಾರಂಗಿನಷ್ಟು ದೂರ ಇರುವಾಗ ಸಿದ್ದಾರೂಡರು ತಮ್ಮ ಮೆಚ್ಚಿನ ಶಿಷ್ಯ ಗೋವಿಂದ ಸ್ವಾಮಿಗಳಿಗೆ, ಗೋವಿಂದಾ ಮುಂಬಯಿಯಿಂದ ಒಬ್ಬರು ದೊಡ್ಡ ಶ್ರೀಮಂತರು ಮಠಕ್ಕೆ ಬರುತ್ತಿದ್ದಾರೆ. ಇಲ್ಲಿ ಬಂದು ಚಾಪೆ ಹಾಸು ಎಂದು ಹೇಳುವಾಗಲೇ ಟಾಂಗಾ ಮಠಕ್ಕೆ ಬಂದಿತು. ಸಿದ್ದರನ್ನು ಶ್ರೀಮಂತನು ನೋಡಿದನು. ನೋಡೆ ನೋಡಿದನು, ಆ ನೋಟದಲ್ಲಿ ಅವನ ಹೊಗೆಯಾಡುವ ಮನಕ್ಕೆ ಶಾಂತಿ ದೊರಕುತ್ತದೆನ್ನುವ ನಂಬಿಕೆ ಮೂಡಿತು. ಅವನ ಭಾಷೆಯಲ್ಲಿ ಸಿದ್ದರು ಆ ಶ್ರೀಮಂತನನ್ನು ಹತ್ತಿರಕ್ಕೆ ಕರೆದರು. ಶ್ರೀಮಂತನು ಸಿದ್ಧರ ಪಾದಕ್ಕೆರಗಿ ಮಗುವನ್ನು ಪದತಲದಲ್ಲಿ ಹಾಕಿದನು, 'ದೇವಾ ಕಾಪಾಡಬೇಕು' ಎಂಬ ಬೇಡಿದನು. ಸಾವುಕಾರನ ಜೊತೆಯವರು, ಮಗು ಮೂಲಾನಕ್ಷತ್ರದಲ್ಲಿ ಜನಿಸಿದೆ. ಅದರಿಂದ ತಂದೆ-ತಾಯಿಗಳಿಬ್ಬರನ್ನೂ ಬಲಿ ತೆಗೆದುಕೊಳ್ಳುತ್ತದಂತೆ, ಸಾವುಕಾರರಿಗೆ ತಾವು ಮಾರ್ಗದೋರಬೇಕೆಂದು ಸಿದ್ದರಲ್ಲಿ ಬಿನ್ನವಿಸಿದರು. ಆಗ ಸಿದ್ಧರು ನಕ್ಕರು. ಮಗ ಅಮೃತಸಿದ್ದಿ ಯೋಗದಲ್ಲಿ ಜನಿಸಿದೆ. ಇವನಿಂದ ನಿನಗೆ ಉತ್ತರೋತ್ತರ ಕಲ್ಯಾಣವಾಗುವದು. ಇವನಿಂದ ನಿನ್ನ ಕುಲಕೋಟಿಗಳು ಉದ್ಧಾರವಾಗುವವು. ಮೂಲಾ ನಕ್ಷತ್ರದಲ್ಲಿ ಜನಿಸಿದ ಎಂದು ಯಾರು ಹೇಳುತ್ತಾರೆ? ಎಂದು ಸಿದ್ಧರು ಸಾಹುಕಾರರನ್ನೇ ಪ್ರತಿಯಾಗಿ ಪ್ರಶ್ನಿಸಿದರು. ದೇವಾ, ಜ್ಯೋತಿಷಿಗಳೇ ಈ ರೀತಿ ತಿಳಿಸಿದರು. ಅಲ್ಲದೆ ಬರೆದೂ ಕೊಟ್ಟಿದ್ದಾರೆ' ಎಂದು ಆ ಶ್ರೀಮಂತನು ಹೇಳಿದನು. ಸಿದ್ಧರು ಮುಂಬಯಿಯವನು ಬರೆದ ಕುಂಡಲಿಯನ್ನು ಕಣ್ಣೆತ್ತಿ ನೋಡಲಿಲ್ಲ; 'ಅಪ್ಪಾ ! ಇದನ್ನು ಬರೆದವನು ಮಗು ತಾಯಿಯ ಹೊಟ್ಟೆಯಿಂದ ಭೂಮಿಗೆ ಬಿದ್ದ ಗಳಿಗೆಯನ್ನು ಬರೆದಿದ್ದಾನೆ. ತಾಯಿಯ ಉದರದಲ್ಲಿ ಮಗು ಮೊದಲು ಮೂಡಿದ್ದ ಗಳಿಗೆ ಅಮೃತಗಳಿಗೆಯಾಗಿತ್ತು. ನೀನು ಇದನ್ನು ನಂಬಬೇಡ ಗುರು ಕಾಯುತ್ತಾನೆ. ಶಿವನು ನಿನಗೆ ಕಲ್ಯಾಣವನ್ನುಂಟು ಮಾಡುತ್ತಾನೆ. ಒಳ್ಳೆ ಗಳಿಗೆಯಲ್ಲಿ ಮೂಡಿ ಬಂದ ಮಗುವಿನಿಂದ ನಿನಗೆ ಉತ್ತರೋತ್ತರ ಕಲ್ಯಾಣವಾಗುವದು' ಎಂದು ಸಿದ್ದರು ನುಡಿದರು, ಮಗುವಿನ ಮೈತುಂಬ ಆಶೀರ್ವಾದದ ಅಭಯ ವರಹಸ್ತವನ್ನು ಆಡಿಸಿದರು. ತಂದೆ-ತಾಯಿಗಳನ್ನು ಹರಸಿದರು. ಆ ಧನಿಕ ದಂಪತಿಗಳು ಸಿದ್ಧರ ಸೇವೆಯಲ್ಲಿ ಕೆಲಕಾಲ ಮಠದಲ್ಲಿಯೇ ಉಳಿದರು. ಅವರ ಪೀಡೆ ತೊಲಗಿತು, ಅವರಿಗೆ ಆದ ಆನಂದ ಅವರ್ಣನೀಯವಾಗಿತ್ತು. ಮನವನ್ನು ಮುತ್ತಿ ಹೊಗೆಯಾಡುತ್ತಿದ್ದ ಸಂಶಯದ ಪೀಡೆ ತೊಲಗಿತು. ಜೀವಕ್ಕೆ ಬಂದ ಅನಿಷ್ಟವನ್ನ ಸಿದ್ದರು ಅರ್ಧ ನಿಮಿಷದಲ್ಲಿ ಇಷ್ಟವನ್ನಾಗಿ ಮಾಡಿದರು. ಅದರಿಂದ ಅಳಿವು ಉಳಿವಿನ
ದವಡೆಯಲ್ಲಿ ಸಿಕ್ಕು ನರಳಿ, ನುಗ್ಗಾಗಿದ್ದ ಆ ನೊಂದ ಜೀವಿಗಳಿಗೆ ಸಿದ್ದರು ಮರು ಜನ್ಮ ನೀಡಿದರು. ಆ ಶ್ರೀಮಂತನಿಗೆ ಸಿದ್ಧರ ಮೇಲೆ ಎಣೆಯಿಲ್ಲದ ಭಕ್ತಿ ಭಾವ ಬೆಳೆಯಿತು, ಬಲಿಯಿತು. ಸಿದ್ಧರ ಕೀರ್ತಿ ಮುಂಬಯಿಯತ್ತ ಹರಿಯುವದಕ್ಕೆ ಇದೂ ಒಂದು ಕಾರಣವಾಯಿತು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
