ಮುದಕಿಯ ಭಕ್ತಿಯನ್ನು ಸಮಸ್ತ ಜನಸಮೂಹ ಸವೆಯಿತು
🌺 ಮುದಕಿಯ ಭಕ್ತಿಯನ್ನು ಸಮಸ್ತ ಜನಸಮೂಹ ಸವೆಯಿತು 🌺
1920 ರ ಶಿವರಾತ್ರಿ ಜಾತ್ರೆಯ ಸಮಯ. ಜಾತ್ರೆಗೆ ಬಂದ ಭಕ್ತರಿಗೆ ಹುಬ್ಬಳ್ಳಿಯ ರಸ್ತೆ, ನೆಲ ಸಾಲದಾಯಿತು. ಸಮಾಧಿ ಮಂದಿರದ ಎದುರಿಗೇ ಹಾಕಿದ್ದ ಭವ್ಯ ಸಭಾಮಂಟಪದಲ್ಲಿ ಹಲವಾರು ಜನ ಮಹಾತ್ಮರು ಆಸೀನರಾಗಿದ್ದರು. ಸಾವಿರ ಸಾವಿರ ಭಕ್ತಜನರು ಮಹಾತ್ಮರ ದೇವವಾಣಿಯನ್ನು ಆಲಿಸಲು ಮೈಯೆಲ್ಲ ಕಿವಿಯಾಗಿ ಕುಳಿತಿದ್ದರು. ಲಕ್ಷಗಟ್ಟಲೆ ಹಣ ತಂದ ರಾಜರ ಬಗ್ಗೆ ಯಾವ ಹೆಚ್ಚಿನ ಮೆಹರಬಾನಿಕೆ ಸಿದ್ಧರು ಮಾಡಿರಲಿಲ್ಲ. ಶಾಸ್ತ್ರ ವಿಷಯ ನಡೆದಿತ್ತು. ಭಕ್ತರಷ್ಟೇ ಶಾಂತರೀತಿಯಿಂದ ಮಠದಲ್ಲಿನ ಗಾಳಿಯೂ ಮಹಾಂತರ ವಾಣಿಯನ್ನು ಆಸಕ್ತಿಯಿಂದ ಆಲಿಸುತ್ತಿದೆಯೆಂಬಂತೆ ಶಾಂತತೆ ನೆಲಸಿತ್ತು. ಆಗ ದೇವಸಭೆಗೆ ಕೊಲ್ಲಾಪುರ, ಮಿರಜ ಸಾಂಗ್ಲಿಯ ರಾಜರಾಣಿಯರು ಬಂದರು. ಎಲ್ಲೆಡೆಯಲ್ಲಿ ಭಕ್ತರೇ ಕುಳಿತಿದ್ದರು. ಆಗ ಅಕ್ಕಲಕೋಟ ಶರಣಪ್ಪನವರು ಸಿದ್ದಾರೂಢರ ಬಳಿ ಹೋಗಿ, 'ದೇವಾ ಸಾಂಗ್ಲಿ, ಮಿರಜ ಕೊಲ್ಲಾಪುರದ ರಾಜರಾಣಿಯರು ಬಂದರು, ಅವರನ್ನು ಎಲ್ಲಿ ಕೂಡ್ರಿಸಲಿ?" ಎಂದು ಕೇಳಿದರು. ಆಗ ಸಿದ್ಧರು ಎಲ್ಲರಿಗೂ ಕೇಳುವಂತೆ " ಏ ಶರಣಪ್ಪ ಎಲ್ಲಿ ಕುಡ್ರಿಸಲಿ ಅಂತ ಯಾಕ ಕೇಳತಿಯೋ, ಎಲ್ಲಿ ಜಾಗ ಇದೆಯೋ ಅಲ್ಲಿ ಕೂಡ್ರಿಸು, ಶಾಸ್ತ್ರ ನಡೆದಿದ, ನಡುವೆ ಮಾತಾಡಿ ಗದ್ದಲ ಮಾಡಬ್ಯಾಡ' ಎಂದು ಹೇಳಿದರಂತೆ. ಮಠಕ್ಕೆ ಬಹಳಷ್ಟು ಬೆಳ್ಳಿ ಬಂಗಾರ ಕೊಡುವರಾಜರು ಬಂದಿದ್ದಾರೆ, ಅವರಿಗೆ ಹೆಚ್ಚಿನ ಪರಾಮಲಿಕೆ ಮಾಡಬೇಕು ಎಂದು ಸಿದ್ಧರು ತಮ್ಮ ಸ್ಥಾನದಿಂದ ಗಡಬಡಿಸಿ ಕೆಳಗಿಳಿದು ಬರಲಿಲ್ಲ. ರಾಜಾಧಿರಾಜಮಹಾರಾಜ ಭೋಪರಾಕ ಬರಬೇಕು ಬರಬೇಕು ಎಂದು ಸಲಾಮು ಹೊಡೆಯಲಿಲ್ಲ. ಲಕ್ಷಗಟ್ಟಲೇ ಸೇರಿದ್ದ ಆ ಜಾತ್ರೆಯಲ್ಲಿ ಸಿದ್ದರ ಲಕ್ಷ ಆಗ ಏನನ್ನೋ ಅರಸುತ್ತಿರುವಂತೆ ಇತ್ತು. ಅವರ ಮುಖಭಾವ ಯಾರಿಗಾಗಿಯೋ ಕಾಯುತ್ತಿರುವಂತಿತ್ತು. ಆಗ ಅವರ ಬಳಿಗೆ ಒಬ್ಬಳುಮುದುಕಿ ಬಂದಳು. ಅವಳ ಅರಿವೆಯೇ ಅವಳು ಬಡವಳೆಂದು ಸಾರುತ್ತಿದ್ದವು. ಅವಳು ದೂರದಿಂದ ನಡೆದು ಬಂದವಳೆಂದು ಕಾಲಮೇಲಿನ ಧೂಳು ಹೇಳುತ್ತಿತ್ತು. ದೇಹ ದಣಿದಿದ್ದರೂ, ನಡೆದು ಬಂದಿದ್ದರೂ, ಅವಳ ಮುಖದಲ್ಲಿ ಲವಲವಿಕೆ ನಲಿಯುತ್ತಿತ್ತು. ಸಿದ್ದರನ್ನು ಕಂಡ ಮೇಲೆಯೇ ಅನ್ನದ ಅಗಳು ಕಚ್ಚಬೇಕು; ನೀರಕಾಳು ಬಾಯಿಯಲ್ಲಿ ಮುಕ್ಕಳಿಸಬೇಕೆಂದು ಅವಳು ಸಂಕಲ್ಪ ಮಾಡಿಕೊಂಡಿದ್ದಳು. ಆ ಧೃಡ ನಿಷ್ಠೆಯೇ ಅವಳನ್ನು ಊರಿನಿಂದ ನಡೆಸುತ್ತ ತಂದಿತ್ತು. ಅವಳು ಸಿದ್ಧರನ್ನು ನೋಡಿದಳು. ಕಂಗಳ ಬರವು ಹಿಂಗಿತು, ಮನವು ತುಂಬಿ ತುಳುಕಾಡಿತು. ಜೀವ ಹಿಗ್ಗಿ ನಲಿದಾಡಿತು. ಅವಳು ಆತುರತೆಯಿಂದ ಸಿದ್ಧರ ಬಳಿಗೆ ಬಂದಳು. ನೆಲಕ್ಕೆ ಹಾಸಿದ ರತ್ನಗಂಬಳಿಯ ಮೇಲೆ ಅವಳ ಹೂಡಿಗಾಲಿನ ಗುರುತು ಮೂಡಿತು. ಉಳಿದವರು ಅಸಹ್ಯ ಪಟ್ಟುಕೊಂಡರು. ಒಬ್ಬನು ಎದ್ದವನೇ ಆ ಮುದುಕಿಯನ್ನು ಹೊರಗೆ ತಳ್ಳಲು ಮುಂದಾದನು. ಸಿದ್ದರೇ ಎದ್ದು ಹೋಗಿ ಆ ಮುದುಕಿಯನ್ನು ಕೈ ಹಿಡಿದು ಕರೆತಂದರು. ತಮ್ಮ ಬಳಿಯಲ್ಲಿ ಕೂಡ್ರಿಸಿಕೊಂಡರು. ಆ ಮುದುಕಿಯ ಆನಂದಕ್ಕೆ ಎಣೆಯೇ ಉಳಿಯಲಿಲ್ಲ. ಕಂಬನಿ ತುಳುಕಾಡಿದವು. ಅವಳು ಪಾದದ ಮೇಲೆ ಹೊರಳಿಡಿದಳು. ಸಿದ್ಧರಿಗೆ ಆವಳ ಮೈಯ್ಯ ಬೆವರಿನ ವಾಸನೆ ಬಡಿಯಲಿಲ್ಲ. ಅವಳ ಹರಿದ ಕುಪ್ಪಸದಲ್ಲಿಯ ಗೂಡುಗಟ್ಟಿದ ಎದೆ ಕಾಣಿಸಲಿಲ್ಲ. ಕಾಲಿನ ಹುಡಿ ತೋರಲಿಲ್ಲ. ಕೇವಲ ಅವಳ ಭಕ್ತಿ ತುಂಬಿ ತುಳುಕಾಡುವ ಅಂತಃಕರಣವನ್ನು ಕಂಡರು. ಆಗ ಅವಳು ಸ್ವಾಮಿಗಳಿಗೆ, “ಅಪ್ಪಾ ! ನಾನು ಇಡೀಫರಸಿಗೆ ಪ್ರಸಾದ ನೀಡಬೇಕೆಂದು ಸಂಕಲ್ಪ ಮಾಡಿದ್ದೇನೆ” ಎಂದಳು. ಆಗ ಸಿದ್ದರು, ನಿನ್ನದು ಒಳ್ಳೆ ವಿಚಾರ. ಮಠದೊಳಗಣ ಪ್ರಸಾದವೆಲ್ಲ ನಿನ್ನ ದೇಅಂತ ತಿಳಿದುಕೋ. ನಿನ್ನ ಸಂಕಲ್ಪ ಸಿದ್ಧಿಸುತ್ತದೆ' ಎಂದು ಸ್ವಾಮಿಗಳು ಅವಳಿಗೆ ಹೇಳಿದರು. ಆಗ ಆ ಮುದಿಕಿ, “ದೇವಾ! ಅದು ಯಾರಾರೋ ತಂದು ಕೊಟ್ಟದ್ದು ಅದು ನನ್ನದು ಹ್ಯಾಂಗ ಆಗತದ' ಎಂದಳು. ನನ್ನ ಹತ್ತಿರ ನಾನು ದುಡಿದು ತಂದ ಒಂದು ಘಟ್ಟ ದುಡ್ಡು ಇದೆ ಎನ್ನುತ್ತ ಆ ಮುದುಕಿ ತನ್ನ ಹರಕು ಸೀರೆಯ ಚುಂಗಿನ ಗಂಟನ್ನು ಬಿಚ್ಚಿ ತೊಡಗಿದಳು. ಒಂದು ಘಟ್ಟಿ ದುಡ್ಡನ್ನು ಅವಳು ಹೊರದೆಗೆದಳು. ಸಿದ್ದರ ಕೈಯಲ್ಲಿಡುತ್ತ " ದೇವಾ,ನಾನು ಬಡವಿ, ರಟ್ಟಮ್ಯಾಲ ಹೊಟ್ಟಿ ತುಂಬಿಕೊಳ್ಳುವಾಕಿ. ಒಂದು ದುಡ್ಡನ್ನು ದುಡಿದು ತಂದೀನಿ. ಈ ದುಡ್ಡನ್ನು ಸಮಸ್ತ ದೈವಕ್ಕೆ ಮುಟ್ಟುವಂತೆ ನೀನು ಬಳಕೆ ಮಾಡಬೇಕು ನೋಡು” ಎಂದು ಅವಳು ಹೇಳಿದಳು. ಜನರು ಅವಳ ಮಾತನ್ನು ಕೇಳಿ ಅಚ್ಚರಿಪಟ್ಟರು, “ಯಾರೀ ಮುದಿಕಿ? ಸಿದ್ಧರಿಗೆ ಕೊಟ್ಟಿದ್ದು ಒಂದು ದುಡ್ಡು, ಅವರಿಗೆ ಆಜ್ಞೆ ಮಾಡುತ್ತಾಳಲ್ಲ” ಎಂದು ಭಕ್ತರು ಚಿಂತಿಸಿದರು.
ಸಿದ್ದರು ಅವಳು ಕೊಟ್ಟ ಘಟ್ಟಿ ದುಡ್ಡನ್ನು ತೆಗೆದುಕೊಂಡರು. ಅವಳು ಹೇಳುದುದನ್ನು ಆಲಿಸಿದರು. ಲಕ್ಷಗಟ್ಟಲೆ ತಂದು ಸುರುವಿದ್ದ ಮಹಾರಾಜರು ಮಗ್ಗುಲಿಗೇ ಕುಳಿತಿದ್ದರೂ ಸಿದ್ಧರ ಲಕ್ಷ್ಯ ಅವರ ಕಡೆಗೆ ಹರಿದಿರಲಿಲ್ಲ. ಆ ಬಡ ಮುದಿಕಿ ಕೊಟ್ಟ ದುಡ್ಡು ಅವರಿಗೆ ಮುಖ್ಯವಾಯಿತು. ಎಂದೂ ಕೈಯಿಂದ ದುಡ್ಡನ್ನು ಮುಟ್ಟದ ಸಿದ್ಧರು ಆ ಮುದುಕಿ ಕೊಟ್ಟ ದುಡ್ಡನ್ನು ಕೈಯಲ್ಲಿ ಹಿಡಿದುಕೊಂಡರು. ಅದನ್ನು ಹಣೆಗೆ ಹಚ್ಚಿಕೊಂಡರು. ಶ್ರಮ, ಭಕ್ತಿ, ಪರಿಶುದ್ಧ ಮನದ ಪ್ರತೀಕವಾಗಿತ್ತು ಆ ದುಡ್ಡು. ಹಣಕ್ಕಿಂತ ಹಣಕೊಟ್ಟವರ ಅಂತಃಕರಣದತ್ತ ಸಿದ್ಧಾರೂಢರ ಗಮನ ಹರಿಯುತ್ತಿತ್ತು. ಈ ಮುದಿಕಿ ಕೊಟ್ಟಿದ್ದು ಒಂದು ದುಡ್ಡು. ಲಕ್ಷಗಟ್ಟಲೆ ಸೇರಿದ ಈ ಜಾತ್ರೆಯ ಜನಕ್ಕೆಲ್ಲ ಮುಟ್ಟುವಂತೆ ಈ ದುಡ್ಡನ್ನು ಸಿದ್ಧರು ಹೇಗೆ ಸಾರ್ಥಕವಾಗಿ ಬಳಸುತ್ತಾರೆ ನೋಡೋಣ ಎಂದು ಭಕ್ತರು ಹಾತೊರದರು. ಎಲ್ಲರಿಗೂ ಈ ದುಡ್ಡು ಹೇಗೆ ಮುಟ್ಟಬೇಕು! ಇವರು ಹೇಗೆ ಬಳಕೆ ಮಾಡುತ್ತಾರೆ ಎಂದು ನೋಡಲು ಕಾಯ್ದರು. ಸಿದ್ಧರು ಅಡಿಗೆಮನೆಯಲ್ಲಿ ಸೇವೆ ಮಾಡುತ್ತಿದ್ದ ಮಂಟೂರ ರಾಚಪ್ಪನನ್ನು ಕರೆದರು. ಅವನು ಓಡಿ ಬಂದು ಸಿದ್ಧರ ಬಳಿಯಲ್ಲಿ ಕೈಮುಗಿದು ನಿಂತನು. “ರಾಚಪ್ಪ, ಈ ತಾಯಿ ನಮಗ ಒಂದು ದುಡ್ಡನ್ನು ನೀಡಿದ್ದಾಳೆ. ಈ ದುಡ್ಡು ಜಾತ್ರೆಯ ಜನಕ್ಕೆಲ್ಲ ಮುಟ್ಟುವಂತೆ ಬಳಸಬೇಕೆಂದು ಅಪ್ಪಣೆ ಮಾಡಿದ್ದಾಳೆ. ಹೇಗೆ ಬಳಸಬೇಕೋ?” ಎಂದು ಅವನಿಗೆ ಕೇಳಿದರು. 'ದೇವಾ, ನೀನೇ ಅಪ್ಪಣೆ ಮಾಡಬೇಕು' ಎಂದು ರಾಚಪ್ಪ ನುಡಿದು ನಿಂತನು. ಆಗ ಸಿದ್ದರು ಮಠದ ಮುಂದಿನ ದಿನ್ನೆಯ ಮೇಲೆ ಕುಳಿತ ಹೆಣ್ಣು ಮಗಳ ಕಡೆಗೆ ಕೈ ಮಾಡಿ , ರಾಚಪ್ಪ, ಆ ಹೆಣ್ಣು ಮಗಳು ಕೋತಂಬರಿ ಸೂಡುಗಳನ್ನು ಮಾರುತ್ತಿದ್ದಾಳೆ. ಈ ದುಡ್ಡನ್ನು ಕೊಟ್ಟು ಕೋತಂಬರಿ ಸೂಡುಗಳನ್ನು ಕೊಂಡುಕೊಂಡು ಬಾ, ಆ ಕೋತಂಬರಿಯ ಸೂಡುಗಳನ್ನು ಅರೆದು ಸಾರಿನ ಎಲ್ಲ ಕೊಳಗಳಲ್ಲಿ ಹಾಕು. ಈ ತಾಯಿಯ ದುಡ್ಡು ಸಮಸ್ತ ದೈವಕ್ಕೆ ಮುಟ್ಟುತ್ತದೆ. ಎಂದು ಹೇಳಿದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
