ವಿಶಾಲಾಕ್ಷಿಯ ಹೊಟ್ಟೆನೋವು, ಭೂತ ಬಿಟ್ಟು ಹೋದವು
🌺 ವಿಶಾಲಾಕ್ಷಿಯ ಹೊಟ್ಟೆನೋವು, ಭೂತ ಬಿಟ್ಟು ಹೋದವು 🌺
ಬಳ್ಳಾರಿಯ ವಿಶಾಲಾಕ್ಷಿಯು ಪೂರ್ವದಲ್ಲಿ ನಾಸ್ತಿಕಳಾಗಿದ್ದಳು. ಭಗವದ್ಭಕ್ತಿ ಮಾಡುವವರನ್ನು ಕಂಡರೆ ಅವಳಿಗೆ ಸಹನೆಯಾಗುತ್ತಿರಲಿಲ್ಲ. ಯಾರಾದರೂ ಭಜನೆ ಕೀರ್ತನೆಗಳಿಗೆ ಬರುವೆಯಾ? ಎಂದು ಕರೆದರೆ ಅವಳಿಗೆ ಅಪಮಾನವಾದಂತಾಗಿ ಅವರನ್ನು ದ್ವೇಷಿಸುತ್ತಿದ್ದಳು. ಇಷ್ಟೇ ಅಲ್ಲ, ಮನೆಯಲ್ಲಿ ಕುಲಧರ್ಮ ಕಾರ್ಯಗಳು ಮಾಡಿದ್ದು ನೋಡಿದರೆ ಸಾಕು, ಮನೆಯ ಯಜಮಾನರಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಳು. ಲೌಕಿಕ ಸಂಪತ್ತು ಸಾಕಷ್ಟಿದ್ದರೂ ಮನುಗೆ ಸಮಾಧಾನವಿರಲಿಲ್ಲ. ವಿಷಯ ಚಿಂತನೆಯಲ್ಲಿ ತೊಡಗಿದ ಅವಳ ಮನಸ್ಸು ದೇವರ ಕಡೆಗೆ ತಿರುಗಲೇ ಇಲ್ಲ. ಮುಂದೆ ಅವಳಿಗೆ ಅಸಾಧ್ಯ ಹೊಟ್ಟೆನೋವು ಪ್ರಾರಂಭವಾಯಿತು. ಹಗಲು ರಾತ್ರಿ ನೋವಿನಿಂದ ಬಳಲುತ್ತಿದ್ದು ಊಟ ವ್ಯರ್ಜವಾಯಿತು. ನಿದ್ರೆಯೂ ಬರಲಿಲ್ಲ. ಇಂಥ ರೋಗದಿಂದ ಬಳಲುವುದಕ್ಕಿಂತ ಸಾಯುವುದೇ ಲೇಸು ಎನಿಸತೊಡಗಿತು. ಈ ವ್ಯಾಧಿಯಿಂದ ಮುಕ್ತಳಾಗಬೇಕೆಂದು ಅನೇಕ ವೈದ್ಯರಿಗೆ ತೋರಿಸಿದರೂ ಸ್ವಲ್ಪವೂ ಗುಣವಾಗಲಿಲ್ಲ. ಇದೂ ಅಲ್ಲದೆ ಒಂದು ಭೂತವು ಬಡಿದುಕೊಂಡಿತು. ಅದಕ್ಕಾಗಿ ಮಂತ್ರ ತಂತ್ರ ಮಾಡಿಸಲು ಸಾಕಷ್ಟು ಹಣ ವ್ಯಯವಾದರೂ ಉಪಯೋಗವಾಗಲಿಲ್ಲ.
ಈ ರೋಗವು ಕೇವಲ ಶ್ರೀ ಸಿದ್ಧಾರೂಢರಿಂದ ಮಾತ್ರ ವಾಸಿಯಾಗುತ್ತದೆಂದು ಒಬ್ಬರು ಹೇಳಿದ್ದರಿಂದ ಅವರ ಆಗ್ರಹದ ಮೇರೆಗೆ ಅವರ ಜೊತೆಗೆ ಶ್ರೀ ರಾಮನವಮಿಯ ದಿವಸ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಸನ್ನಿಧಿಗೆ ಹೋಗಲೇಬೇಕಾಯಿತು. ಅತಿ ಶ್ರೇಷ್ಟ ಸಿದ್ಧಾರೂಢರ ದರ್ಶನಕ್ಕೆ ಹೋದರೂ ಚಿಕ್ಕಂದಿನಿಂದ ಯಾವ ಒಳ್ಳೆಯ ಸಂಸ್ಕಾರವಿರದ್ದರಿಂದ ಅವರ ಜೊತೆಗೆ ಯಾವ ರೀತಿಯಿಂದ ನಡೆದುಕೊಳ್ಳಬೇಕೆಂಬ ಕಲ್ಪನೆಯಿರಲಿಲ್ಲ. ದಿನದಲ್ಲಿ ಎರಡು ಸಲ ಸದ್ಗುರುಗಳ ದರ್ಶನ ಪಡೆದುಕೊಂಡು ಇತರ ವೇಳೆಯಲ್ಲಿ ಹೆಣ್ಣು ಮಕ್ಕಳ ಜೊತೆಗೆ ಹರಟೆ ಹೊಡೆಯುತ್ತಿದ್ದಳು. ವೈದ್ಯರ ಹತ್ತಿರ ರೋಗಿಗಳು ಹೋಗುವಂತೆ ಸಿದ್ದರಲ್ಲಿ ರೋಗ ನಿವಾರಣೆಗೆ ಬಂದಿದ್ದೇನೆಂಬ ಭಾವವಿತ್ತು.
ಅಲ್ಲಿ ಸಂತ ಕಲಾವತಿದೇವಿಯವರಿದ್ದು ಯಾವಾಗಲೂ ಜಪಮಾಲೆ ಹಿಡಿದು ಭಗವನ್ನಾಮಸ್ಮರಣೆಯಲ್ಲಿ ತಲ್ಲೀನಳಾಗಿ ಯಾರ ಜೊತೆಗೂ ಮಾತಾಡುತ್ತಿರಲಿಲ್ಲ. ಹೀಗೆ ಅವಳ ನೇಮವಾಗಿತ್ತು. ಇದನ್ನು ನೋಡಿದ ವಿಶಾಲಾಕ್ಷಿಗೆ ಆಶ್ಚರ್ಯವಾಗುತ್ತಿತ್ತು. ಒಂದು ದಿವಸ ಕಲಾವತಿಯು ಸಿದ್ದರ ಆಜ್ಞೆಯಂತ ಕೀರ್ತನ ನಿರೂಪಿಸುವಾಗ ಹೀಗೆ ಹೇಳಿದಳು `ಪ್ರತಿಯೊಬ್ಬನು ದುಃಖದಿಂದ ಪಾರಾಗಬೇಕೆನ್ನುತ್ತಾನೆ. ಆದರೆ ಸಂತರು ಹೇಳಿದಂತೆ ಭಗವಂತನ ಅನನ್ಯ ಭಕ್ತಿ ಮಾಡದಿದ್ದರೆ ದುಃಖದಿಂದ ಮುಕ್ತನಾಗುವುದು ಸಾಧ್ಯವಿಲ್ಲ' ಹೀಗೆ ಅನೇಕ ರೀತಿಯಿಂದ ನಿರೂಪಿಸಿದಾಗ ಇದನ್ನು ಕೇಳಿದ ವಿಶಾಲಾಕ್ಷಿಯ ಮನಸ್ಸು ಪರಿವರ್ತನೆಯಾಗಿ ಮಾತಾಜಿ ಕಲಾವತಿಯವರಲ್ಲಿ ಮತ್ತು ಸಿದ್ಧಾರೂಢರಲ್ಲಿ ಪೂಜ್ಯ ಭಕ್ತಿ ಭಾವನೆ ನಲೆ ನಿಂತಿತು.
ಒಂದು ದಿವಸ ವಿಶಾಲಾಕ್ಷಿಯು ಸಮಯ ಸಾಧಿಸಿ ಸಿದ್ದರಲ್ಲಿ ಬಂದು ತನ್ನ ದುಃಖ ತೋಡಿಕೊಂಡಳು. ಆಗ ಸದ್ಗುರುಗಳು ಅಲ್ಲಿಯೇ ಇದ್ದ ಕಲಾವತಿಯವರ ಕಡೆಗೆ ಬೆರಳು ತೋರಿಸಿ 'ಹೇ ದೇತೀಲ ತುಲಾ ಔಷಧಿ (ಇವಳು ನಿನಗೆ ಔಷಧಿ ಕೊಡುತ್ತಾಳೆ)' ಎಂದರು. ಆ ದಿವಸ ಗುರುವಾರವಿದ್ದು ಸಾಯಂಕಾಲ ಯಾರೋ ಒಬ್ಬರು ಶಿರಾ ತಂದು ಆರೂಢರ ಮುಂದೆಯಿಟ್ಟರು. ಸದ್ಗುರುಗಳು ಆ ಡಬ್ಬಿಯಲ್ಲಿಯ ಸ್ವಲ್ಪ ಶಿರಾ ತಗೆದುಕೊಂಡು ಕಲಾವತಿಯ ಕೈಯಲ್ಲಿಟ್ಟು ತೂ ವಿಶಾಲಾಕ್ಷಿಲಾ ದೇವೂನ ತೂ ಬಾ (ನೀನು ವಿಶಾಲಾಕ್ಷಿಗೆ ಕೊಟ್ಟು ನೀನೂ ತಿನ್ನು) ಎಂದರು. ಅವರ ಆದೇಶದಂತೆ ಕಲಾವತಿಯು ವಿಶಾಲಾಕ್ಷಿಗೆ ಶಿರಾ ಕೊಟ್ಟು ತಾನೂ ತಿಂದಳು. ಅದು ಕೇವಲ ಶಿರಾ ಆಗಿರದೆ ದುಃಖ ನಿವಾರಕ ರಾಮಬಾಣ ಔಷಧಿಯಾಗಿತ್ತು. ಅದನ್ನು ವಿಶಾಲಾಕ್ಷಿಯು ತಿಂದು ಅದು ಹೊಟ್ಟೆಯಲ್ಲಿ ಇಳಿಯುತ್ತಿರುವಾಗಲೇ ಅವಳ ಹೊಟ್ಟೆನೋವು ಮಾಯವಾಯಿತು. ಅದರಂತೆ ಅವಳಿಗೆ ಹಿಡಿದ ಭೂತವೂ ಓಡಿ ಹೋಗಿದ್ದರಿಂದ ಆರೋಗ್ಯವಂತಳಾದಳು. ಅಂದಿನಿಂದ ಸಂತರ ಸಂಗದಿಂದ ಯಾವ ಲಾಭವಾಗುವುದೆಂದು ಪ್ರತ್ಯಕ್ಷ ಅನುಭವವಾಯಿತು. ಅಂದಿನಿಂದ ಅವಳು ಮೂರು ತಿಂಗಳು ಅಲ್ಲಿಯೇ ವಾಸವಾದಳು.
ಈ ಅವಧಿಯಲ್ಲಿ ದಿನಾಲು ಮುಂಜಾನೆ ಐದು ಗಂಟೆಯಿಂದ ಆರು ಗಂಟೆಯವರೆಗೆ ಮತ್ತು ರಾತ್ರಿ ಒಂಭತ್ತು ಗಂಟೆಯಿಂದ ಹತ್ತು ಗಂಟೆಯವರೆಗೆ ಮಾತಾಜಿ ಕಲಾವತಿಯವರು ತಮ್ಮ ಖೋಲಿಯಲ್ಲಿ ಭಜನ ನಾಮಸ್ಮರಣೆ ಮಾಡುತ್ತಿದ್ದರು. ಮಾತಾಜಿಯ ಖೋಲಿಯ ಹತ್ತಿರವೇ ವಿಶಾಲಾಕ್ಷಿಯ ಖೋಲಿಯಿದ್ದು ಮಾತಾಜಿಯವರ ಭಜನೆ ಸ್ಪಷ್ಟವಾಗಿ ಕೇಳಿ ಬರುತ್ತಿತ್ತು. ಆ ಭಜನೆಯಲ್ಲಿ ಮಾತಾಜಿಯವರು `ಸದ್ಗುರುನಾಥ ಮಾಝೇ ಆಯೀ ಮಜಲಾಠಾವ ದ್ಯಾವಿ ಪಾಯಿ' (ಸದ್ಗುರುನಾಥ ನನ್ನ ತಾಯಿ ನಿನ್ನ ಪಾದದಲ್ಲಿ ನನಗೆ ಸ್ನಾನ ನೀಡು) ಹೀಗೆ ಅನೇಕ ಪ್ರಕಾರದಿಂದ ಹಾಡುತ್ತಿದ್ದಳು. ಇದನ್ನು ಕೇಳಿದ ವಿಶಾಲಾಕ್ಷಿಗೆ ಸಂಶಯ ಬಂದು ಕಲಾವತಿಯವರಿಗೆ ಸಿದ್ದಾರೂಢರನ್ನು ಬಿಟ್ಟು ಬೇರೆ ಯಾರಾದರೂ ಗುರುಗಳಿರಬಹುದೆ ಎಂಬ ಸಂಶಯ ನಿವಾರಣೆಗಾಗಿ ಪ್ರಶ್ನೆ ಮಾಡಿದಾಗ ಕಲಾವತಿಯವರು ಹೀಗೆ ಹೇಳಿದರು ವಿಶಾಲಾಕ್ಷಿ ತಿಳಿದುಕೋ ಸದ್ಗುರುವಂದರೆ ಅವರೇ ನಿಜವಾದ ತಾಯಿ, ಜನ್ಮ ಕೊಟ್ಟ ತಾಯಿಯ ಗರ್ಭದಲ್ಲಿ ಮಗುವಿದ್ದಾಗ ಒಂಭತ್ತು ತಿಂಗಳು ತುಂಬಿ ಹೆರಿಗೆಯಾಗಿ ಈ ಉದರದ ಭಾರ ಯಾವಾಗ ಕಡಿಮೆಯಾಗುವುದೋ ಎಂದು ದಾರಿ ಕಾಯುತ್ತಾಳೆ. ನಾಲ್ಕು ದಿವಸ ಹೆರಿಗೆ ತಡವಾದರೆ ಈ ಗರ್ಭದಲ್ಲಿರುವ ಕೂಸು ಯಾವಾಗ ಹೊರಗೆ ಹೋದೀತೋ ಎಂದು ದುಃಖಪಡುತ್ತಾಳೆ.
ಆದರೆ ಸದ್ಗುರುಗಳು ಹಾಗಲ್ಲ. ನಮ್ಮ ಅನಂತ ಅಪರಾಧಗಳನ್ನು ತಮ್ಮ ಹೊಟ್ಟೆಯಲ್ಲಿ ಹಾಕಿಕೊಂಡು ಜನ್ಮಾಂತರ ಪಾಪಗಳನ್ನು ಕಳೆದು ಪರಿಪರಿಯಿಂದ ಬೋಧಿಸಿ ಭವಮುಕ್ತರನ್ನಾಗಿ ಮಾಡುತ್ತಾರೆ. ಆದ್ದರಿಂದ ಸಿದ್ದರನ್ನು ನಾನು ತಾಯಿಯೆಂದು ತಿಳಿದಿದ್ದೇನೆ' ಎಂದಾಗ ವಿಶಾಲಾಕ್ಷಿಯು ಗುರುವಿನ ಸತ್ಸಂಗದ ಮಹತ್ವವೇನು ಎಂಬುದನ್ನು ಅರ್ಥ ಮಾಡಿಕೊಂಡಳು. ಒಂದು ದಿವಸ ವಿಶಾಲಾಕ್ಷಿಯು ಯಾವುದೋ ಒಂದು ಚಿಂತೆಯಿಂದ ಬಾಡಿದ ಮುಖದಿಂದಿರುವುದನ್ನು ಕಂಡು ಮಾತಾಜಿ ಹೇಳಿದರು “ಕೇಳು ವಿಶಾಲಾಕ್ಷಿ, ಮನುಷ್ಯನು ದುಃಖ ಭಗಿಸುವುದಕ್ಕಾಗಿ ಜನ್ಮಕ್ಕೆ ಬಂದಿಲ್ಲ. ಅಖಂಡ ಆನಂದವನ್ನು ಅನುಭವಿಸುವುದಕ್ಕಾಗಿ ಮನುಷ್ಯ ಜನ್ಮ ಬಂದಿದೆ' ಎಂದು ಸರಳವಾಗಿ ತಿಳಿಸಿದಳು. ಇದನ್ನು ಕೇಳಿದ ಅವಳಿಗೆ ಮಾತಾಜಿಯವರಲ್ಲಿ ಭಕ್ತಿಯುಂಟಾಗಿ ಒಂದು ಕ್ಷಣ ಅವಳನ್ನು ಬಿಟ್ಟು ಇರಬಾರದೆಂಬ ಭಾವನೆಯುಂಟಾಯಿತು.
ಮುಂದೆ ತನ್ನೂರಿಗೆ ಹೋಗಬೇಕಾದ ಸಂದರ್ಭ ಬಂದಾಗ ಸಿದ್ಧರನ್ನು ಕುರಿತು `ಮಹಾರಾಜರೇ, ತಾವು ಬಳ್ಳಾರಿಯ ನಮ್ಮ ಮನೆಗೆ ಬರುವಿರಾ?' ಎಂದಾಗ ಗುರುಗಳು ಕಲಾವತಿಯ ಕಡೆಗೆ ಬೆರಳು ಮಾಡಿ 'ನನ್ನ ಶಿಷ್ಕಳು ಬರುತ್ತಾಳೆ' ಎಂದರು. ಮುಂದೆ ಗುರುಪೌರ್ಣಿಮೆಯ ಕಾರ್ಯಕ್ರಮ ಮುಗಿಸಿ ಊರಿಗೆ ಹೋದಳು. ನಂತರ ಒಂದು ತಿಂಗಳಲ್ಲಿಯೇ ಶ್ರೀ ಸಿದ್ಧಾರೂಢರು ಮಹಾಸಮಾಧಿ ತಗೆದುಕೊಂಡ ಸುದ್ದಿ ತಿಳಿದು ಬಹಳ ದುಃಖಿತಳಾದಳು. ಏಕೆಂದರೆ ಕಾರ್ತಿಕ ಪೌರ್ಣಿಮೆಯ ದಿವಸ ಪುನಃ ಸಿದ್ದರ ದರ್ಶನ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದಳು. ಅದಕ್ಕಾಗಿ ಅದೇ ಚಿಂತನೆಯಲ್ಲಿ ಒಂದು ದಿವಸ ಸಹಜ ಕುಳಿತಾಗ ತೂಕಡಿಕೆ ಬಂದು ಮಲಗಿದಳು. ಆಗ ಸಿದ್ಧಾರೂಢರು ಕನಸಿನಲ್ಲಿ ಬಂದು `ವಿಶಾಲಾಕ್ಷಿ, ಈ ದೇಹ ಜರ್ಜರಿತವಾಗಿತ್ತು. ಅದನ್ನು ವಿಸರ್ಜಿಸಲೇಬೇಕಾಯಿತು. ಈಗ ನಾನು ಕಲಾವತಿಯ ರೂಪದಲ್ಲಿದ್ದೇನೆ. ನಿನ್ನ ಇಚ್ಛೆಯನ್ನು ಅವಳಿಂದ ಪೂರೈಸಿಕೊ' ಎಂದು ಹೇಳಿ ಅದೃಶ್ಯರಾದರು.
ಅಂದಿನಿಂದ ಅವಳಲ್ಲಿ ಮಾತಾಜಿಯವರಲ್ಲಿ ವಿಶೇಷ ಪ್ರೀತಿಯುಂಟಾಗಿ ಯಾವಾಗ ಅವಳ ದರ್ಶನ ಪಡೆದುಕೊಂಡು ಅವಳ ಸೇವೆಯಲ್ಲಿ ತೊಡಗುವನೋ ಎಂಬ ಲವಲವಿಕೆಯುಂಟಾಯಿತು. ಕೆಲವು ದಿವಸ ಕಳೆದ ನಂತರ ಮಾತಾಜಿ ಕಲಾವತಿಯವರು ಕೀರ್ತನಕಾರ್ಯಕ್ಕಾಗಿ ಶಿವಮೊಗ್ಗಾ ಶಹರಕ್ಕೆ ಹೋಗಿರುವ ಸುದ್ದಿ ತಿಳಿದು ಅಲ್ಲಿಗೆ ಹೋಗಿ ಅವರ ಮನವೊಲಿಸಿ ಬಳ್ಳಾರಿಗೆ ಕರೆದುಕೊಂಡು ಬಂದಳು. ಕಲಾವತಿಯ ರೂಪದಿಂದ ನಾನಿದ್ದೇನೆಂದು ಸದ್ಗುರು ಸಿದ್ದಾರೂಢರು ದೃಷ್ಟಾಂತ ನೀಡಿದ್ದರೂ, ಪ್ರತ್ಯಕ್ಷ ಅನುಭವಕ್ಕೆ ಬರಬೇಕು ಎಂಬ ಭಾವನ ವಿಶಾಲಾಕ್ಷಿಯ ಮನಸ್ಸಿನಲ್ಲಿ ಉಳಿದಿತ್ತು.
ಮುಂದೆ ಒಂದು ವಿಚಿತ್ರ ಘಟನೆ ನಡೆಯಿತು. ಅದೆಂದರೆ ಅದೇ ದಿವಸ ಸಾಯಂಕಾಲ ಗೋಪಾಳರಾವ ಖರೆ ಮತ್ತು ಅವರ ಪತ್ನಿ ಇಂದಿರಾಬಾಯಿವರು ಮಾತಾಜಿಯವರ ದರ್ಶನಕ್ಕೆ ಬಂದು ಹೀಗೆ ಪ್ರಶ್ನೆ ಮಾಡಿದರು 'ಮಾತಾಜಿಯವರ. ನನ್ನ ಮಗ ವಾಸು ಇಪ್ಪತೈದು ವರ್ಷದವನಿದ್ದು ಯಾವುದೇ ನೌಕರಿ ಅಥವಾ ಉದ್ಯೋಗದಲ್ಲಿ ತೊಡಗದೆ ಮುಂಜಾನೆಯಿಂದ ಸಾಯಂಕಾಲದವರೆಗೆ ಸುಮ್ಮನೇ ತಿರುಗುತ್ತಾನೆ. ನಾವು ಏನಾದರೂ ಹೇಳಲು ಹೋದರೆ ನಮಗೇ ತಿರುಗಿ ಮಾತನಾಡುತ್ತಾನೆ. ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ಅದಕ್ಕಾಗಿ ನಾವು ಹುಬ್ಬಳ್ಳಿಯ ಸಿದ್ದರ ಮಠದಲ್ಲಿ ಅನ್ನದಾನ ಸೇವೆ ಮಾಡಿದ್ದೇವೆ' ಎಂದಾಗ ಮಾತಾಜಿ ಹೇಳಿದರು ನೀವು ಅನ್ನದಾನ ಮಾಡಿರುವುದು ನನಗೆ ಹಿಡಿಸುವುದಿಲ್ಲ. ಬಹಳ ವರ್ಷಗಳ ಹಿಂದಿನ ಮಾತು. ನೀವು ಮನೆಗೆ ಹೋಗಿ ಅನ್ನದಾನ ಮಾಡಿದ ಬಗ್ಗೆ ಶಾಂತರೀತಿಯಿಂದ ವಿಚಾರ ಮಾಡಿರಿ' ಎಂದು ಹೇಳಿ ಕಳಿಸಿದರು. ಅವರು ತಮ್ಮ ಮನಗೆ ಹೋಗಿ ಮರುದಿವಸ ಮತ್ತೆ ಬಂದು ಹೇಳಿದರು.
ಮಾತಾಜಿಯವರೇ ಹತ್ತೊಂಭತ್ತುನೂರಾ ಇಪ್ಪತ್ತೇಳನೆಯ ಇಸ್ವಿಯಲ್ಲಿ ತಾವು ಸಿದ್ಧರ ಮಠದಲ್ಲಿರುವಾಗ ನಮ್ಮ ಹೊಲದಲ್ಲಿ ಈ ವರ್ಷ ವ್ಯವಸ್ಥಿತ ರೀತಿಯಿಂದ ಬತ್ತದ ಬೆಳೆ ಬಂದರೆ ಎರಡು ಚೀಲ ಅಕ್ಕಿಯನ್ನು ಶಿವರಾತ್ರಿಯ ಉತ್ಸವಕ್ಕಾಗಿ ಕೊಡುತ್ತೇವೆ ಎಂದು ಬೇಡಿಕೊಂಡಿದ್ದವು. ಆ ವರ್ಷ ಸಾಕಷ್ಟು ಬತ್ತದ ಬೆಳೆ ಬಂದರೂ ಆ ಹರಕೆ ಪೂರೈಸುವುದನ್ನು ಮರೆತು ಬಿಟ್ಟಿದ್ದೇವೆ. ಈಗ ನಾವೇನು ಮಾಡಬೇಕು ತಿಳಿಸಿರಿ ಎಂದಾಗ ಮಾತಾಜಿ ಹೇಳಿದರು `ನೀವು ಅನ್ನದಾನದ ಹರಕೆ ಹೊತ್ತಿದ್ದು ನಿಜವಾದರೆ ಶ್ರೀ ಸಿದ್ಧಾರೂಢರ ಪುಣ್ಯತಿಥಿಯ ದಿವಸ ಆ ಹರಕೆಯನ್ನು ಪೂರೈಸಿರಿ' ಎಂದು ಹೇಳಿ ಕಳಿಸಿದರು. ಅದರಂತೆ ಅವರು ಸಿದ್ಧರ ಮಠದಲ್ಲಿ ಹರಕೆ ಪೂರೈಸಿದ ನಂತರ ಅವರ ಮಗ ತನ್ನಿಂದ ತಾನೇ ನೌಕರಿಗೆ ಹತ್ತಿದನು. ಈ ಪ್ರಕಾರ ವಿಶಾಲಾಕ್ಷಿಯ ಮನಸ್ಸಿನಲ್ಲಿರುವ ಸಂಶಯವನ್ನು ಸಿದ್ಧಾರೂಢರು ಪರಿಹರಿಸಿದ ನಂತರ ಸಿದ್ದಾರೂಢರೇ ಮಾತಾಜಿ ಕಲಾವತಿಯ ರೂಪದಿಂದಿದ್ದಾರೆ ಎಂದು ನಿಶ್ಚಯ ಮಾಡಿದಳು.
ವಿಶಾಲಾಕ್ಷಿಯ ಪತಿ ದುರ್ವ್ಯಸನಿಯಾದ್ದರಿಂದ ಮೇಲಿಂದ ಮೇಲೆ ದೇವರನ್ನು ಟೀಕಿಸುತ್ತಿದ್ದನು. ತನ್ನ ಪತ್ನಿಯನ್ನು ಕುರಿತು ನೀವು ಸ್ತ್ರೀಯರು ಅವಿಚಾರಿಗಳಾಗಿದ್ದೀರಿ. ಲೋಕರೂಢಿಯಂತೆ ಅಂಧಶ್ರದ್ಧೆಯ ಬೆನ್ನು ಹತ್ತಿ ಒಂದು ಕಲ್ಲು ಕಂಡರೆ ಅದಕ್ಕೆ ಕುಂಕುಮ ಹಚ್ಚಿ ಕರ್ಪೂರ ಊದಿನಕಡ್ಡಿ ಬೆಳಗಿ ಅದರ ಮುಂದೆ ಮೂಗು ತಿಕ್ಕುತ್ತೀರಿ. ಇಷ್ಟೇ ನಿಮಗೆ ಗೊತ್ತು' ಎಂದು ಯಾವಾಗಲೂ ಬೈಯುತ್ತಿದ್ದನು. ಒಂದು ದಿವಸ ಪತ್ನಿಯನ್ನು ಕುರಿತು ನನ್ನ ಸ್ನೇಹಿತರು ದಿಲ್ಲಿ, ಕಲಕತ್ತಾ, ಆಗ್ರಾ ಮುಂತಾದ ಕ್ಷೇತ್ರಗಳನ್ನು ನೋಡಲು ಹೋಗುತ್ತಿದ್ದಾರೆ. ನಾನೂ ಹೋಗುತ್ತೇನೆ. ನೀನು ಬರುವುದಾದರೆ ಬಾ' ಎಂದನು. ಆಗ ವಿಶಾಲಾಕ್ಷಿ ಹೇಳಿದಳು ನಾನು ನಿಮ್ಮ ಜೊತೆಗೆ ಬರಬೇಕಾಗಿತ್ತು. ಆದರೆ ನನ್ನ ಗುರುಗಳಾದ ಮಾತಾಜಿ ಕಲಾವತಿಯವರು ಇಲ್ಲಿಯೇ ಇದ್ದಾರೆ. ಅವರಲ್ಲಿಯೇ ಎಲ್ಲ ಕ್ಷೇತ್ರಗಳಿವೆ. ನೀವು ಹೋಗಬೇಡಿರಿ' ಎಂದಳು.
ಆ ಮೇಲೆ ಈ ವಿಚಾರವನ್ನು ಮಾತಾಜಿಯವರಿಗೆ ತಿಳಿಸಿದಾಗ ಅವರು ಹೀಗೆ ಹೇಳಿದರು 'ನಿನ್ನ ಗಂಡ ಹೋಗಬಾರದು ಅವನ ಗ್ರಹಗತಿ ಚೆನ್ನಾಗಿಲ್ಲ. ಹೋಗಬೇಡವೆಂದರೆ ಮನಸ್ಸಿಗೆ ಹಚ್ಚಿಕೊಳ್ಳುತ್ತಾನೆ. ಆದರೂ ಅವನಿಗೆ ಯಾವುದೋ ಒಂದು ತೊಂದರೆ ಬಂದು ಕ್ಷೇತ್ರ ದರ್ಶನಕ್ಕೆ ಹೋಗುವುದಿಲ್ಲ. ದೇವರನ್ನು ಸ್ಮರಿಸುತ್ತ ಸುಮ್ಮನಿರು' ಎಂದಾಗ ವಿಶಾಲಾಕ್ಷಿಯು ರಾತ್ರಿ ದೇವರ ಪ್ರಾರ್ಥನೆ ಮಾಡಿದಳು. ಆಶ್ಚರ್ಯದ ಸಂಗತಿಯೆಂದರೆ ಎರಡನೆಯ ದಿವಸ ಮುಂಜಾನೆ ಗಂಡನ ಸೊಂಟ ಹಿಡಿದು ಬಹಳ ನೋವಾಗಿ ಏಳಲು ಬಾರದಂತಾಯಿತು. ಅದಕ್ಕಾಗಿ ಮಾತಾಜಿಯವರ ಹತ್ತಿರ ಔಷಧಿ ಬೇಡಿದನು. ಆಗ ಮಾತಾಜಿ ಹೇಳಿದರು ನೋಡಿರಿ, ಕರ್ಮಾನುಸಾರ ಮನುಷ್ಯನಿಗೆ ರೋಗ ಬರುವುದು ಸಹಜ. ಪರಂತು ಆ ರೋಗ ಯಾವ ದಿವಸ ನಿವಾರಣೆಯಾಗಬೇಕೆಂದು ನಿಶ್ಚಯವಾಗಿದೆಯೋ ಆಗ ಮಾತ್ರ ನಿವಾರಣೆಯಾಗುತ್ತದೆ. ನಾವು ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಿಲ್ಲ.
ಒಂದು ದಿವಸ ರಾಮಬಾಣದಂಥ ಔಷಧ ಸಿಕ್ಕು ರೋಗ ನಿವಾರಣೆಯಾದರೂ ಉಳಿದುದನ್ನು ಮತ್ತೆ ಭೋಗಿಸಲೇಬೇಕಾಗುತ್ತದೆ. ಆದ್ದರಿಂದ ಸಂಪೂರ್ಣ ಭೋಗಿಸುವುದು ಒಳ್ಳೆಯದು. ಸದ್ಯ ನೀವು ಓಂ ನಮಃ ಶಿವಾಯ ಮಂತ್ರ ಪಠಿಸುತ್ತ ಮಲಗಿರಿ' ಎಂದಳು. ಮೊದಲೇ ನಿಶ್ಚಯಪಡಿಸಿದಂತೆ ಅವನ ಸ್ನೇಹಿತರು ಯಾತ್ರೆಗೆ ಹೋದರು. ಅಂದಿನಿಂದ, ದಿವಸದಿಂದ ದಿವಸಕ್ಕೆ ಗಂಡನ ರೋಗ ನಿವಾರಣೆಯಾಗುತ್ತ ಪೂರ್ಣ ಗುಣ ಹೊಂದಿದನು. ಯಾತ್ರೆಗೆ ಹೋದವರ ಬಸ್ಸು ಗಂಗೋತ್ರಿಯ ಹತ್ತಿರ ಬಿದ್ದು ಎಲ್ಲರೂ ಸತ್ತರು. ಈ ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟನು. ಆಗ ವಿಶಾಲಾಕ್ಷಿ ಗಂಡನನ್ನು ಕುರಿತು `ನೋಡಿರಿ, ಮುಂದೆ ಗಂಡಾಂತರವಿರುವುದನ್ನು ಮಾತಾಜಿಯವರು ಮೊದಲೇ ತಿಳಿಸಿದ್ದರು. ಅವರು ನಮ್ಮಲ್ಲಿರುವುದರಿಂದ ನೀವು ಗಂಡಾಂತರದಿಂದ ಪಾರಾದಿರಿ' ಹೀಗೆ ಹೇಳಿದಾಗ ತನ್ನ ಪತಿಯು ಒಮ್ಮೆಲೇ ಎದ್ದು ಸ್ನಾನ ಮಾಡಿ ಮಾತಾಜಿಯವರಿಗೆ ಸಾಷ್ಟಾಂಗ ನಮಿಸಿ ಹೇಳಿದ 'ಮಾತಾಜಿ, ಇಂದಿನಿಂದ ನೀವು ಹೇಳಿದಂತೆ ನಡೆದುಕೊಳ್ಳಬೇಕೆಂದು ನಿಶ್ಚಯಿಸಿದ್ದೇನೆ. ಈವರೆಗೆ ನಾನು ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ. ಕ್ಷಮಿಸಿ ಮಾರ್ಗದರ್ಶನ ಮಾಡಿರಿ' ಎಂದು ಬೇಡಿಕೊಂಡಾಗ ಮಾತಾಜಿಯವರು ಅವನಿಗೆ ಕೆಲವು ಹಿತವಚನಗಳನ್ನು ಬೋಧಿಸಿದರು. ಆಗ ಅವನು ಎಲ್ಲ ದುರ್ವ್ಯಸನಗಳನ್ನು ಬಿಟ್ಟು ನಿಜ ಮನುಷ್ಯನಾದನು. ಇದೇ ವಿಶಾಲಾಕ್ಷಿಯು ಮುಂದ ತನ್ನ ಗುರುಗಳಾದ ಮಾತಾಜಿ ಕಲಾವತಿಯ ಚರಿತ್ರೆಯನ್ನು ಸುಂದರ ಶೈಲಿಯಲ್ಲಿ ಬ್ರಹತ ಗ್ರಂಥವನ್ನು ಮರಾಠಿ ಭಾಷೆಯಲ್ಲಿ ಬರೆದಿದ್ದಾಳೆ.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
