ಕುಷ್ಠರೋಗಿಯ ಉದ್ಧಾರ
🌺 ಕುಷ್ಠರೋಗಿಯ ಉದ್ಧಾರ 🌺
ಹೀಗೆ ಕೆಲವು ದಿವಸ ಕಳೆದ ನಂತರ ತನ್ನ ತಾಯಿ ರಿಂದೂಬಾಯಿಯನ್ನು ಕರೆದುಕೊಂಡುನರಸೋಬನವಾಡಿಯ ಗುರುದರ್ಶನಕ್ಕೆ ಹೋದನು. ತನ್ನ ಮೈಗೆ ಕುಷ್ಟರೋಗವಿದ್ದು ದೇವರ ಬಾಗಿಲಿಗೆ ಹೋಗಬಾರದು. ಗುರುಪೂಜೆಯನ್ನೂ ಮಾಡಬಾರದು. ಹೀಗಿದ್ದು ಈ ನಿಯಮ ಗೊತ್ತಾಗದೆ ಕೃಷ್ಣೆಯಲ್ಲಿ ಸ್ನಾನ ಮಾಡಿ ತನ್ನ ತಾಯಿಯನ್ನು ಕರೆದುಕೊಂಡು ಮಂದಿರದಲ್ಲಿ ಯಥಾವಿಧಿ ಪೂಜೆ ಮಾಡಿ ಎರಡು ದಿವಸ ಅಲ್ಲಿ ಇದ್ದು ಪುನಃ ಹುಬ್ಬಳ್ಳಿಗೆ ಬಂದನು. ಕೆಲವು ದಿವಸ ಕಳೆದ ನಂತರ ಕುಷ್ಟರೋಗವು ಮೊದಲಿಗಿಂತ ಹೆಚ್ಚಾಯಿತು. ಕೈ ಕಾಲುಗಳು ಬೆಳ್ಳಗಾದವು. ಇದನ್ನು ನೋಡಿದ ಜನರು ಮನಬಂದಂತೆ ಮಾತಾಡುತ್ತಿದ್ದರು. ನರಸಿಂಹರಾಯರು ವಿಚಾರ ಮಾಡುತ್ತ ಮೊದಲೇ ಕುಷ್ಟರೋಗವಿದ್ದರೂ ಅದು ತಿಳಿಯದಲೆ ವಾಡಿಯ ನರಸೋಬನ ಪಾದುಕೆಗಳನ್ನು ಸ್ಪರ್ಶಮಾಡಿದಂದಿನಿಂದ ಮತ್ತೆ ಹೆಚ್ಚಾಯಿತಲ್ಲ, ಏನು ಮಾಡಬೇಕೆಂದು ಚಿಂತಿತನಾದನು. ಅನೇಕ ಔಷಧೋಪಚಾರ ಮಾಡಿದರೂ ಕಡಿಮೆಯಾಗಲಿಲ್ಲ. ಜನರು ಅವನನ್ನು ಮುಟ್ಟುತ್ತಿರಲಿಲ್ಲ. ಆದ್ದರಿಂದ ಅವನು ಬಹಳ ದುಃಖಿತನಾದನು.
ಇದರ ನಿವಾರಣೆಗಾಗಿ ಗೋಕರ್ಣ ಕ್ಷೇತ್ರಕ್ಕೆ ಹೋಗಿ ಹಗಲು ರಾತ್ರಿ ಸೇವೆ ಮಾಡಿದನು. ರೋಗವು ಸ್ವಲ್ಪವೂ ಕಡಿಮೆಯಾಗಲಿಲ್ಲ. ಅಲ್ಲಿಯ ಜನರು ದೇವಪೂಜೆಗೆ ನಿಷೇಧಿಸುತ್ತಿದ್ದುದರಿಂದ ಮನಸ್ಸಿಗೆ ಬಹಳ ದುಃಖವಾಗಿ ಅಳತೊಡಗಿದನು. ಅಯ್ಯೋ ದೇವರೆ, ಈ ಕುಷ್ಟರೋಗವನ್ನು ನನಗೇಕೆ ತಂದೆ ಎಂದು ದುಃಖಗೊಂಡು ಅಲ್ಲಿಂದ ಮನೆಗೆ ಬಂದನು. ನಂತರ ರೋಗದಿಂದ ಮುಕ್ತನಾಗಲು ಕೇವಲ ಹಾಲನ್ನೇ ತೆಗೆದುಕೊಂಡು ಗುರುಚರಿತ್ರೆಯ ಪಾರಾಯಣ ಪ್ರಾರಂಭ ಮಾಡಿದನು. ಕೊನಯ ದಿವಸ ಮಲಗಿದಾಗ ಒಂದು ಸ್ಪಷ್ಟ ಬಿದ್ದಿತು. ಅದರಲ್ಲಿ ಕೃಷ್ಣಂದ್ರ ಗುರುಗಳು ಬಂದು ಹೇಳಿದರು `ನರಸಿಂಹಾ, ಏಕೆ ಚಿಂತಿಸುತ್ತಿರುವೆ? ನಿನ್ನ ರೋಗ ನಿವಾರಣೆಗಾಗಿ ಶ್ರೀ ಸಿದ್ಧಾರೂಢರಲ್ಲಿ ಅನನ್ಯಭಾವದಿಂದ ಶರಣಾಗತನಾಗು. ಅವರ ತೀರ್ಥಪ್ರಸಾದ ತೆಗೆದುಕೊ ನೀನು ಮೊದಲಿನಂತಾಗುವಿ'
ಎಂದರು.
ಆಗ ನರಸಿಂಹರಾಯರು ಕೈ ಮುಗಿದು `ಸ್ವಾಮಿಗಳೇ, ಶ್ರೀ ಸಿದ್ಧಾರೂಢರು ಬ್ರಾಹ್ಮಣರಲ್ಲ. ನಾನು ನಮಸ್ಕರಿಸಿದರೆ ನನ್ನ ಸಣ್ಣತನವನಿಸುತ್ತದೆ. ನಾವು ಬ್ರಾಹ್ಮಣರು' ಎಂದನು. ಆಗ ಕೃಷ್ಣಂದ್ರ ಗುರುಗಳು ನಗುತ್ತ `ಬ್ರಾಹ್ಮಣರೆಂದು ಯಾರಿಗೆ ಹೇಳಬೇಕು? ಆ ಶಬ್ದದ ಅರ್ಥವೇ ನಿನಗೆ ಗೊತ್ತಿಲ್ಲ. ಬ್ರಹ್ಮಜಾನಾತೀತಿ ಬ್ರಾಹ್ಮಣಃ ಈ ವಾಕ್ಯದ ಪ್ರಕಾರ ಯಾರಿಗೆ ಬ್ರಹ್ಮಜ್ಞಾನವಾಗಿದೆಯೋ ಅವರೇ ಬ್ರಾಹ್ಮಣರೆಂದು ತಿಳಿಯಬೇಕು. ಸಿದ್ದಾರೂಢರು ಬ್ರಹ್ಮಜ್ಞಾನಿಗಳಾಗಿದ್ದಾರೆ. ನಾನೇ ಆ ಸ್ವರೂಪದಿಂದ ಅವತರಿಸಿದ್ದೇನೆ. ಅವರಿಗೆ ಶರಣಾಗತನಾಗು. ಸಂಶಯಪಡಬೇಡ. ರೋಗಮುಕ್ತನಾಗು' ಎಂದು ಹೇಳಿ ಅದೃಶ್ಯನಾದನು.
ಆಮೇಲೆ ನರಸಿಂಹರಾಯರು ಮಠಕ್ಕೆ ಹೋಗಿ ಸಿದ್ದರಿಗೆ ಸಾಷ್ಟಾಂಗ ನಮಿಸಿ ರೋಗ ಬಂದ ಕಾರಣ ತಿಳಿಸಿದರು. ಆಗ ಶ್ರೀಗಳು ಹೇಳಿದರು. ನೀವು ಸತ್ಕರ್ಮಗಳನ್ನು ಆಚರಿಸುತ್ತ ಸಂತಸಂಗವನ್ನು ಬಿಡದೆ ಗುರುಗಳಲ್ಲಿ ಅಖಂಡ ವಿಶ್ವಾಸವಿಟ್ಟರೆ ರೋಗಮುಕ್ತರಾಗುವಿರಿ' ಹೀಗೆ ಹೇಳಿ ಅವರ ಮೇಲೆ ಕೈಯಾಡಿಸಿ ಪ್ರಸಾದ ಕೊಟ್ಟು ಕಳಿಸಿದರು. ನರಸಿಂಹರಾಯರು ಸೇವೆ ಮಾಡುತ್ತ ಕಾಲ ಕಳೆದಂತೆ ಕುಷ್ಟರೋಗವು ನಿವಾರಣೆಯಾಗತೊಡಗಿತು. ಮೈಮೆಲೆ ಅಲ್ಲಲ್ಲಿ ಸ್ವಲ್ಪ ಉಳಿದಿತ್ತು. ಆಗ ಸಿದ್ದರ ದರ್ಶನ ತೆಗೆದುಕೊಂಡು `ಗುರುಗಳೇ, ನಾನು ಕಾಶೀಯಾತ್ರೆ ಮಾಡಬೇಕೆಂದಿದ್ದೇನೆ. ಹೇಗೆ ಮಾಡಲಿ?' ಎಂದಾಗ ಗುರುಗಳು "ಯಾತ್ರೆ ಮಾಡುವುದು ಚಿತ್ತಶುದ್ಧಿಗಾಗಿ, ಗಂಗಾಸ್ನಾನದಿಂದ ಪಾಪ ನಿವಾರಣೆಯಾಗುತ್ತದೆ. ನೀವು ಹೋಗಿಬರಬೇಕು' ಎಂದು ಆಶೀರ್ವದಿಸಿದರು.
ನರಸಿಂಹರಾಯರು ಕಾಶಿಗೆ ಹೋಗಿ ಒಬ್ಬ ಪುರೋಹಿತರ ಮನೆಯಲ್ಲಿ ವಸತಿ ಮಾಡಿದರು. ಆಗ ಅವರಿಗೆ ಮತ್ತೊಂದು ಸಂಶಯ ಬಂದಿತು. ಅದೇನೆಂದರೆ ಸಿದ್ದರ ಕೃಪೆಯಿಂದ ಕುಷ್ಠರೋಗವು ತೊಲಗಿತು. ಮೈಮೇಲೆ ಸ್ವಲ್ಪ ಉಳಿದಿದೆ. ಈಗ ವಿಶ್ವನಾಥನ ದರ್ಶನ ಪೂಜನ ಮಾಡಬೇಕೋ ಬಿಡಬೇಕೋ?' ಎಂಬ ಸಂಶಯ ಬಂದು ಬಹಳ ಚಿಂತೆಗೊಳಗಾದನು. ಒಂದು ದಿವಸ ರಾತ್ರಿ ಅವನ ಕನಸಿನಲ್ಲಿ ಸಿದ್ಧಾರೂಢರು ವಿಶ್ವನಾಥನ ಮಂದಿರದಲ್ಲಿ ಕುಳಿತಿದ್ದಾರೆ, ಹಣೆಗೆ ಭಸ್ಮ ಧರಿಸಿ ಕೊರಳಿಗೆ ರುದ್ರಾಕ್ಷ ಮಾಲೆ ತಲೆಯಲ್ಲಿ ಜಡೆಯಿದ್ದು ಕೈಯಲ್ಲಿ ತ್ರಿಶೂಲವಿದೆ. ಮಠದಲ್ಲಿ ಶಿವರಾತ್ರಿಯ ಸಮಯದಲ್ಲಿ ರುದ್ರಾಕ್ಷಿ ಮಂಟಪ ಪೂಜೆಯಲ್ಲಿ ಹೇಗೆ ಕಾಣಿಸುತ್ತಿದ್ದರೂ ಹಾಗೇ ವಿಶ್ವನಾಥನ ಮಂದಿರದಲ್ಲಿ ಕಾಣಿಸುತ್ತಿದ್ದರು.
ಆಗಳೊರ್ವ ಪುರುಷನು ಮೈಯಲ್ಲಿ ಎಲ್ಲ ಬಟ್ಟೆಗಳನ್ನು ಹಾಕಿಕೊಂಡು ಸಿದ್ಧರನ್ನು ಪೂಜಿಸುತ್ತಿದ್ದನು. ಇವನನ್ನು ನೋಡಿದ ನರಸಿಂಹರಾಯನು ಮನದಲ್ಲಿ ವಿಚಾರ ಮಾಡುತ್ತ ಈ ಕ್ಷೇತ್ರದಲ್ಲಿ ಈಶ್ವರನಿದ್ದಾನೆಂದು ಇಲ್ಲಿಗೆ ಬಂದರೆ ಇಲ್ಲಿಯೂ ಸಿದ್ಧಾರೂಢನೇ ಇದ್ದಾನೆ. ಏನಿದು ವಿಚಿತ್ರವೆನ್ನುತ್ತ ಸಿದ್ಧಾರೂಢರಿಗೆ ಕೇಳಿದ `ಸಿದ್ಧ ಗುರುವೇ, ನೀವು ಹುಬ್ಬಳ್ಳಿ ಬಿಟ್ಟು ಇಲ್ಲಿಗೇಕೆ ಬಂದಿರಿ' ಎಂದಾಗ ಗುರುಗಳು ಹೇಳಿದರು ನನ್ನ ವಸತಿ ಇಲ್ಲಿಯೇ ಇದೆ. ಈಗ ನೀನು ನನ್ನನ್ನೇ ಪೂಜಿಸಬೇಕು' ಎಂದರು.
ಆಗ ನರಸಿಂಹರಾಯರು ನಾನು ಸ್ನಾನ ಮಾಡಿಲ್ಲ. ನಿಮ್ಮನ್ನು ಹೇಗೆ ಪೂಜಿಸಲಿ' ಎಂದನು. ಸಿದ್ಧ ನಗುತ್ತ ಹೇಳಿದ ನೋಡು, ಈ ಮನುಷ್ಯ ಪೂಜೆ ಮಾಡಿಲ್ಲ. ಪೂರ್ಣ ಬಟ್ಟೆ ತೊಟ್ಟು ಪೂಜಿಸುತ್ತಾನೆ. ಹಾಗೆಯೇ ನೀನೂ ಮಾಡು' ಎಂದಾಗ ರಾಯರು, ನಾನೂ ಹಾಗೆಯೇ ಮಾಡುತ್ತೇನೆ ಎಂದು ಸ್ವಪ್ನದಲ್ಲಿ ಹೇಳುವಷ್ಟರಲ್ಲಿ ಎಚ್ಚರ ಬಂದಿತು. ಆಗ ವಿಶ್ವನಾಥ ಮಂದಿರದಲ್ಲಿ ಭಕ್ತರು ಬಟ್ಟೆ ಸಹಿತ ಪೂಜಿಸುತ್ತಿರುವುದನ್ನು ಕಂಡು ಸ್ವಪ್ನದಲ್ಲಿಯ ಆದೇಶದಂತೆ ರಾಯರು ವಿಶ್ವನಾಥನನ್ನು ಪೂಜಿಸಿ ಹುಬ್ಬಳ್ಳಿಗೆ ಬಂದು ಸಿದ್ಧಾರೂಢರಿಗೆ ಭೇಟಿಯಾಗಿ ನಡೆದ ಸಂಗತಿಯನ್ನು ತಿಳಿಸಿದಾಗ ಸಿದ್ದ ಹೇಳಿದ `ಗುರು ಮತ್ತು ಪರಮಾತ್ಮ ಬೇರೆಯಲ್ಲ ಎಂಬುದನ್ನು ನಿನಗೆ ತೋರಿಸಿಕೊಟ್ಟಿದ್ದೇನೆ. ಈಗ ನಿನ್ನ ಕುಷ್ಠರೋಗ ನಿವಾರಣೆಯಾಯಿತು' ಎಂದರು. ಅವರು ಹೇಳಿದಂತೆ ಕೆಲವೇ ದಿವಸಗಳಲ್ಲಿ ನರಸಿಂಹರಾಯರು ರೋಗಮುಕ್ತರಾದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
