ದೇವರಕೊಂಡದ ದೇವರು ಚನ್ನವೃಷಬೆಂದ್ರ ಸ್ವಾಮಿಗಳಿಂದ ಸಿದ್ಧರ ಪರೀಕ್ಷೆ
🌺 ದೇವರಕೊಂಡದ ದೇವರು ಚನ್ನವೃಷಬೆಂದ್ರ ಸ್ವಾಮಿಗಳಿಂದ ಸಿದ್ಧರ ಪರೀಕ್ಷೆ 🌺
ದೇವರಕೊಂಡದ ಜಂಗಮಗೌಡರ ಮಕ್ಕಳಾಗಿದ್ದ ಪೂಜ್ಯ ಶ್ರೀ ಚನ್ನವೃಷಭೇದ್ರ ಸ್ವಾಮಿಗಳು ಬಲು ಲೀಲಾಮೂರ್ತಿಗಳು. ಅವರು ಸದ್ಗುರು ಸಿದ್ಧಾರೂಢರನ್ನು ಪರಿಪರಿಯಾಗಿ ಪರೀಕ್ಷಿಸಿದರು. ಒಮ್ಮೆ ಜಾತ್ರೆಯ ಕಾಲಕ್ಕೆ ಬಂದಾಗ, ಸಿದ್ಧಾರೂಢರ ಜಾತ್ರೆಯ ವೈಭವ, ತೇರಿನ ಸಡಗರ ಸಂಭ್ರಮಗಳನ್ನು ಕಂಡು, 'ಸಿದ್ಧಾ, ತೆರೆ ಬ್ಯಾರೆ ಮಾಡಸೀಯ೦ತ, ತೇರಿನ ಮ್ಯಾಲೇರಿ ಕೂಡ್ರತಿಯಾ? ತೇರಿನ ಮ್ಯಾಲ ಕುಂತರ ದೊಡ್ಡವರಾಗತಾರೇನು ?......ನೀ ತೇರಿನ ಮ್ಯಾಲ ಕುಂತರ, ಕಾಗಿ ಕಳಸದ ಮ್ಯಾಲ ಕೂಡ್ರತದ ; ಅದೇನು ಮಾಡತಿ ಬಿಡು, ಘಟಾನೇ ಸ್ಥಿರವಲ್ಲದ ಮ್ಯಾಲ ಈ ಮಠ, ಈ ತೇರು ಏನ ಮಾಡತಾವ ಬಿಡು' ಎಂದರಂತೆ.
ತೇರಿನ ಮ್ಯಾಲ ಬಂಗಾರ ಕಿರೀಟ ಧರಿಸಿ ಕುಳಿತ ಸಿದ್ದಾರೂಢರಿಗೆ ಅವರು, ಸಿದ್ಧಾ ತಲೆಯ ಮ್ಯಾಲ ಮಲದ ಗಡಿಗೆ ಹೊತ್ತಿರುವಿಯಲ್ಲೋ? ಎಂದರಂತೆ. ಆಗ ಸಿದ್ದರು ಕೊಡಲೇ, ಮಹಾಸ್ವಾಮಿ, ಮಲಕ್ಕ ಮಲ ಹೊರಗೆ ಹತ್ತಿದೆ. ನಾನು ಒಳಗ ನಿರ್ಮಲ ಇದ್ದೇನೆ' ಎಂದು ನುಡಿದರು. ಸಿದ್ಧಾರೂಢರ ಶರೀರಕ್ಕ ಹೊರಗ ಬಂಗಾರ ಹತ್ತಿತ್ತು. ಅವರು ತಮಗಾಗಿ ಅಲ್ಲ; ತಮ್ಮ ಭಕ್ತರ ಪ್ರೀತ್ಯರ್ಥವಾಗಿ ಹೊತ್ತಿದ್ದರು. ತಾಯಿ ತನ್ನ ಮಗ ಮಗುವನ್ನು ಬಗೆಬಗೆಯಾಗಿ ಅಲಂಕರಿಸಿ, ತಾನು ಹರ್ಷ ಪಡುವಂತೆ, ಸದ್ಭಕ್ತರೇ ತಮ್ಮ ಪ್ರೀತಿ ಭಕ್ತಿಯಿಂದ ಅವರನ್ನು ಸಿಂಗರಿಸುತ್ತಿದ್ದರು. ಸ್ವಾಮಿಗಳಿಗೆ ಅದು ಏನೊಂದೂ ಬೇಕಾಗಿದ್ದಿಲ್ಲ. ನಾನು ಒಳಗ ನಿರ್ಮಲ ಇದ್ದೇನೆ ಎಂಬ ಅವರ ಮಾತು ಬರಿ ಮಾತಲ್ಲ ; ಅವರ ಅಂತಃಕರಣಕ್ಕೆ ಹಿಡಿದ ರನ್ನ ಗನ್ನಡಿ' ಎನ್ನ ಬೇಕು. ಸಿದ್ಧರು ಪದ್ಮ ಪತ್ರದ ಮೇಲಿನ ಜಲಬಿಂದು ಆಗಿದ್ದರು.
ತೇರಿನ ಮೇಲೆ ಕುಳಿತ ಸಿದ್ಧಾರೂಢರನ್ನು ಕಂಡ ಅದೇ ಸ್ವಾಮಿಗಳು, 'ಸಿದ್ದಾ ಬಂಗಾರ ಕಿರೀಟ ಧರಿಸಿದ ನಿನಗ ಈಗ ಬಲು ಖುಷಿಯಾಗಿರಬೇಕಲ್ಲವೇ? ಎಂದು ಪ್ರಶ್ನಿಸಿದರಂತೆ. ಆಗ ಶಾಂತ ಸಾಗರದಂತಿದ್ದ ಸಿದ್ಧಾರೂಢರು, 'ಸ್ವಾಮೀ ಹಿಂದೊಮ್ಮೆ ತಲೆಯ ಮೇಲೆ ಬೆಂಕಿ ಇಟ್ಟಾಗ ಯಾವ ಆನಂದ ಆಗಿತ್ತೋ, ಅದೇ ಆನಂದ ಈಗ ಆಗಿದೆ ನೋಡು'' ಎಂದರಂತೆ. ಸಿದ್ಧರಿಗೆ ಬೆಂಕಿ ಮತ್ತು ಬಂಗಾರಗಳ ನಡುವೆ ವ್ಯತ್ಯಾಸವ ಇರಲಿಲ್ಲ. ಸಿದ್ದಾರೂಢರ ವೈಭವದ ಪೂಜೆ, ಪಲ್ಲಕ್ಕಿ, ಬಂಗಾರ ಕಿರೀಟ ಛತ್ರಚಾಮರ ಭಕ್ತರ ಪರಾಕು, ದೇವರಯಂಥ ಸಭೆ ಅಸಂಖ ಭಕ್ತರ ಸಮೂಹ ಕಂಡು ದೇವರ ಕೋಡದ
ಅಪ್ಪಗಳು ಹರ್ಷಪಟ್ಟದ್ದುಂಟು. 'ಸಿದ್ಧಾ, ಮೆರಿತಾನೋ ಏನ ಮೆರಿತಾನೋ, ಅವನು ಶಿವನ ಅವತಾರ, ಭೂಮಿಗೆ ಬಂದ ಭಗವಂತ ಸ್ವರ್ಗ ಹಾಳಗೆಡವಿ, ಭೂಮಿಗೆ ಬಂದಾನ ! ಇವರ ಅವ್ವ ಅಪ್ಪ ಕೂಡಿದ ಗಳಿಗೆ ಬಹಳ ಚಲೋಗಳಿಗೆ, ಹುಟ್ಟಿದ ಗಣಂತ್ರ ಅದು. ಎಲ್ಲಾರಿಗೂ ಸಿಗುವಂಥದ್ದಲ್ಲ, ಎಲ್ಲರಿಗೂ ಅದು ದಕ್ಕುವಂಥಾದ್ದೂ ಅಲ್ಲ'' ಎಂದು ಹೊಗಳಿದ್ದೂ ಉಂಟು. “ಸಿದ್ದಾ, ಈ ಹಿಂಡಿನ ಮೆಚ್ಚುಗೆ ಶಾಶ್ವತವಲ್ಲ. ಅಪಾಯಕಾರಿ ಎಂದದ್ದುಂಟು. ಹತ್ತಿರುವ, ಹೊತ್ತಿರುವ, ಮಲಗಳಿಂದ ದೂರಾಗಿರಲು ಎಚ್ಚರಿಸಿದ್ದೂ ಉಂಟು. ಸಿದ್ಧಾರೂಢರಿಗೆ ಸರಿದೊರೆಯಾದ, ಸಮಬಲರಾದ ದೇವರಕೊಂಡದ ಅಪ್ಪಗಳಂಥ ಶಕ್ತಿಶಾಲಿಗಳಿಗೇ ಸಿದ್ಧರಂಥವರನ್ನು ಕೆಣಕುವ ತಾಕತ್ತು ಇರುತ್ತದೆ. ಉಳಿದವರಿಗದು ಆಗದು. ಸಿಂಹವನ್ನು ಇನ್ನೊಂದು ಸಿಂಹವೇ ಕೆಣಕಬಲ್ಲುದು. ಉಳಿದ ನರಿ ಕುರಿಗಳಿಗೆ ಅದು ಆಗದು. ಜಾತ್ರೆಯ ಕಾಲಕ್ಕೆ ಪಾಠಶಾಲೆಯಲ್ಲಿ ಸಿದ್ಧಾರೂಢರ ಪ್ರವಚನ ನಡೆದಿತ್ತು. ಅಲ್ಲಿಗೆ ದೇವರಕೊಂಡದ ದೇವರು ಗರ್ಜಿಸುತ್ತ ಬಂದರಂತೆ. ಆಗ ಸಿದ್ಧಾರೂಢರು ಅವರನ್ನು ಆದರದಿಂದ ಬರಮಾಡಿಕೊಂಡರು. “ಮಹಾಸ್ವಾಮೀ, ಭಕ್ತರಿಗೆ ತಮ್ಮ ಅನುಭವಾಮೃತ ಉಣಿಸಿ ಕೃತಾರ್ಥರನ್ನಾಗಿ ಮಾಡಬೇಕೆಂದು ಬಿನ್ನವಿಸಿದರು. ದೇವರಕೊಂಡದ ಅಪ್ಪಗಳ ಮಾತು ಎದೆಯಾಳದಿಂದ ಉದಿಸಿದ ಅಮೃತ ವಾಕ್ಕುಗಳನ್ನು ಕೇಳಿದ ಭಕ್ತರಿಗೆ ತತ್ವಜ್ಞಾನದ ಅಮೃತದ ಮಳೆಗರೆದಂತಾಯಿತು ಎಂದು ಹಿರಿಯರು ಈಗಲೂ ನೆನಪಿಸುತ್ತಾರೆ. ದೇವರಕೊಂಡದ ಸ್ವಾಮಿಗಳು ಆಗಾಗ ಸಿದ್ದಾರೂಢರ ಮಠಕ್ಕೆ ಬರುತ್ತಿದ್ದರಂತೆ. ಸಿದ್ಧರು ಮಠದಲ್ಲಿ ಭಕ್ತರ ಉಪಯೋಗಕ್ಕಾಗಿ ಅತೀ ಕಾಳಜಿ ವಹಿಸಿ ಕಾಳ ಕಾಳನ್ನು ಕೂಡಿ ಹಾಕುವದನ್ನು ಅವರು ಕಾಣುತ್ತಿದ್ದರು. ಹರಿದ ಬುಟ್ಟಿಯ ತಳವನ್ನು ತಾವೇ ಕೈಯಾರ ಹೊಲಿಯುವದನ್ನು ನೋಡುತ್ತಿದ್ದರು. ಎಲ್ಲವೂ ಭಕ್ತರಿಗಾಗಿ ಸಾರ್ಥಕವಾಗಿ ಉಪಯೋಗವಾಗಬೇಕೆಂಬುದು ಸಿದ್ಧರ ಆಶಯವಾಗಿತ್ತು. ಭಕ್ತರಿಗಾಗಿ ಸಂಗ್ರಹಿಸುವ ಈ ಬುದ್ಧಿಯನ್ನು ಕಂಡ ಚೆನ್ನವೃಷಭೇಂದ್ರಸ್ವಾಮಿಗಳು, '' ಬಣಜಿಗನಾಗಿದ್ದ ಸಿದ್ಧಾರೂಢಗ ಗಳಿಸುವ ವಾಸನಾ ಹೋಗಲಿಲ್ಲ. ಜಂಗಮ ಗೌಡನಾದ ನನ್ನೊಳಗಿನ ಸೊಕ್ಕು ಅಡಗಲಿಲ್ಲ” ಎಂದರಂತೆ.
ಸಿದ್ಧಾರೂಢರ ಅದ್ವೈತವಾದವು ಅದು ಬರಿ ಶಾಸ್ತ್ರದಲ್ಲಿ ವ್ಯಾಖ್ಯಾನದಲ್ಲಿಯೇ ಇರಲಿಲ್ಲ. ನಿಜ ಜೀವನದ ಇಂಚು ಇಂಚಿನಲ್ಲಿ ಆ ತತ್ವ ಹಾಸುಹೊಕ್ಕಾಗಿದ್ದುದನ್ನು ಚನ್ನವೃಷಭೇಂದ್ರಸ್ವಾಮಿಗಳು ಕಣ್ಣಾರೆ ಕಂಡಿದ್ದರು. ತಾವು ಕಂಡ ಆ ದಿಗಂಬರ ಸತ್ಯವನ್ನು ಅವರು ಹೊರಹಾಕಿದರು. ಸಿದ್ಧಾರೂಢರ ಶಕ್ತಿ ಶ್ರೀಮಂತಿಕೆ, ಆಳೆತ್ತರಗಳನ್ನು ಜಗತ್ತಿಗೆ
ತಿಳಿಯಪಡಿಸಿದರು. ಅದಕ್ಕೊಂದು ಜೀವಂತ ನಿದರ್ಶನ ನೋಡಬಹುದು. ಒಂದು ದಿವಸ ಮಧ್ಯಾಹ್ನದ ಹೊತ್ತು ದೇವರಕೊಂಡದ ಸ್ವಾಮಿಗಳು ಸಿದ್ಧಾರೂಢರ ಮಠಕ್ಕೆ ಬಂದರು. ಅದೇ ಆಗ ಸಿದ್ದರ ಪ್ರಸಾದವಾಗಿತ್ತು. ಅವರು ವಿಶ್ರಾಂತಿಗಾಗಿ ಚಾಪೆಯ ಮೇಲೆ ಒರಗಿದ್ದರು. ಆಗ ದೇವರಕೊಂಡದವರು ಬಂದವರೇ ಸಿದ್ದರ ಮೈಮೇಲೆ ಒಂದು ಕಾಲು ಇಟ್ಟು, ಸಿದ್ದಾ, ಒಂದೇ ಕಾಲು ಇಟ್ಟನಿ. ಅದನ್ನೊಂದು ಇಡಲೇನು? ಎಂದು ಪ್ರಶ್ನಿಸಿದರು. ಮಾನಾಪಮಾನ, ಹೊಗಳಿಕೆ ತೆಗಳಿಕೆಗಳ ಮೇರೆಯನ್ನೇ ಮೀರಿದ್ದ ಸಿದ್ಧರು ಆ ಸ್ವಾಮಿಗಳಿಗೆ, ದೇವಾ, ನಿಮಗ ಇನ್ನೂ ಆ ಕಾಲು ಈ ಕಾಲು ಅಂತ ಕಾಲುಗಳ ನಡುವೆ ಅಂತರ, ವ್ಯತ್ಯಾಸವಾದರೂ ಇದೆ. ನನಗೆ ಅದೇನೂ ಇಲ್ಲ. ನನಗೆ ಎಡಾನೂ ಇಲ್ಲ. ಬಲಾನೂ ಇಲ್ಲ. ನನಗ ಎಲ್ಲಾನೂ ಒಂದೇ, ಎಲ್ಲವೂ ಪರಮಾತ್ಮಮಯ ; ಎಲ್ಲವೂ ಬ್ರಹ್ಮಮಯ, ಎಂದರು. ಸಿದ್ಧರನ್ನು ಪರೀಕ್ಷಿಸಿ, ಅವರ ಪರಮಾತ್ಮ ಪ್ರತಿಭೆಯನ್ನು ಪ್ರಪಂಚಕ್ಕೆ ಪ್ರಕಟಮಾಡಬೇಕೆಂದು ಬಂದಿದ್ದ ಚನ್ನವೃಷಭೇಂದ್ರಸ್ವಾಮಿಗಳ ಅಂತಃಕರಣ ಉಕ್ಕಿತು. ಅಭಿಮಾನ ನೂರ್ಮಡಿ ಹೆಚ್ಚಿತು. ಸಿದ್ದರನ್ನು ಅವರು ಬಲವಾಗಿ ಅಪ್ಪಿಕೊಂಡು, 'ಸಿದ್ದಾ, ನೀ ಸಾಕ್ಷಾತ್ ಶಿವನೋ, ಶಿವಲೋಕ ಹಾಳಗೆಡವಿ, ಈ ಲೋಕ ಉದ್ದಾರ ಮಾಡಾಕ ಬಂದ ಭಗವಂತನೋ ! ನೀನು ಧನ್ಯ ಧನ್ಯ ಎಂದು ಕುಣಿದಾಡಿದರು. ಸಿದ್ಧಾರೂಢರನ್ನು ತಿಕ್ಕಿ ತಿಕ್ಕಿ ಇವರು ನೂರಕ್ಕೆ ನೂರರಷ್ಟು ಚೊಕ್ಕ ಚಿನ್ನ ಎಂದು ಲೋಕಕ್ಕೆ ತಿಳಿಸಿದವರಲ್ಲಿ ದೇವರಕೊಂಡದ ಚನ್ನ ವೃಷಭೇಂದ್ರ ಸ್ವಾಮಿಗಳೂ ಮುಖ್ಯರು ಎನ್ನಬೇಕು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
