ಸಿದ್ಧರ ಪ್ರಿಯ ಶಿಷ್ಯ ಕಬೀರದಾಸರು

ಸಿದ್ಧರ ಪ್ರಿಯ ಶಿಷ್ಯ ಕಬೀರದಾಸರು



1880ರ ಕಾಲ ಇರಬೇಕು. ಒಂದು ದಿನ ಸಿದ್ದಾರೂಢರು ಚಿದ್ಘಾನಾನಂದ ಸ್ವಾಮಿಗಳ ಸಮಾಧಿ ಮಂದಿರದ ಮುಂದೆ ಹಾಕಿದ್ದ ಚಪ್ಪರದಲ್ಲಿ ಶಾಸ್ತ್ರ ಹೇಳುತ್ತಿದ್ದಾಗ

ಅಲ್ಲಿಗೆ ಒಬ್ಬ ಮಹಮ್ಮದೀಯ ತರುಣ ಬಂದ. ಅವನ ಮೊದಲ ಹೆಸರು ಸಯ್ಯದ ಅಮೀನ. ಅವನು ಬಳ್ಳಾರಿ ಕಡೆಯವ : ಹೈದ್ರಾಬಾದ ನವಾಬರ ಸಂಬಂಧಿಕನಾಗಿದ್ದನೆಂದು ಹೇಳಿಕೆ.  ಅವನು ಸ್ವಾಮಿಗಳ ಪಾದಗಳಲ್ಲಿ ಭಕ್ತಿಯಿಂದ ಮಣಿದನು. ಅವನನ್ನು ನೋಡಿ

ಸ್ವಾಮಿಗಳು, 'ನೀನು ಯಾರು ? ಎಂದು ಪ್ರಶ್ನಿಸಿದರು. ಅವನು ಬಲು ವಿನಮ್ರನಾಗಿ, ದೇವಾ, ನಾನು ಯಾರು ಎನ್ನುವದೇ ನನಗೆ ತಿಳಿಯದು. ಅದನ್ನು ಅರಿಯಲೆಂದೇ

ತಮ್ಮಲ್ಲಿಗೆ ಬಂದಿದ್ದೇನೆ. ಆತ್ಮೋದ್ಧಾರ ಹಂಬಲ ಹೊತ್ತ ನಾನು ಹಲವಾರು ಮಠ ಮಂದಿರಗಳಿಗೆ ಹೋದೆ. ಆಶ್ರಮಗಳಿಗೆ ಭೇಟಿಕೊಟ್ಟೆ. ಆಶ್ರಯ ಬೇಡಿದೆ, ಅನ್ಯಧರ್ಮಿಯ ನಾದ ನಿನಗೆ ಇಲ್ಲಿ ಅವಕಾಶ ಇಲ್ಲ ಎಂದು ನುಡಿದರು. ಆತ್ಮ ಜಿಜ್ಞಾಸುಗಳಿಗೆ ತಮ್ಮ ಪಾದದಲ್ಲಿ ಅವಕಾಶವಿದೆ ಎಂದು ತಿಳಿದು ತಮ್ಮ ಬಳಿಗೆ ಬಂದೆ' ಎಂದು ಅವನು ನುಡಿದನು. ಸ್ವಾಮಿಗಳು ಅವನನ್ನು ಮನದಲ್ಲಿ ತೂಗಿದರು. ಇವನು ಒಂದು ವಸ್ತು ಆಗುತ್ತಾನೆ ; ಕಾಪಾಡಬೇಕು' ಎಂದು ಚಿಂತಿಸಿ, 'ಆಗಲಿ ಇರು' ಎಂದು ನುಡಿದರು. ಅವನು ಮನಸಾರೆ ಮಠದಲ್ಲಿ ಸೇವೆ ಮಾಡಿದ, ಸ್ವಾಮಿಗಳು ಎತ್ತಿ ಕೊಟ್ಟಾಗ ಮಾತ್ರ ಪ್ರಸಾದ ಸ್ವೀಕರಿಸುತ್ತಿದ್ದ, ಅವನ ಶುದ್ಧ ಬುದ್ದಿ,ಆತ್ಮೋದ್ಧಾರದ ಪ್ರಬಲ ಹಂಬಲ, ಅಗಾಧ ಗುರುಭಕ್ತಿ, ದಾಸಸೇವಾ ಭಾವಕ್ಕೆ ಒಲಿದ ಸ್ವಾಮಿಗಳು ಅವನಿಗೆ, 'ಕಬೀರದಾಸ' ಎಂದು ಮರುನಾಮಕರಣ

ಮಾಡಿದರು.


ಕಬೀರದಾಸರಿಗೆ ಸಂಸ್ಕೃತದ ಆಗಾಧ ಜ್ಞಾನವಿತ್ತು. ಅವರಿಗೆ ಆಳವಾದ ಸಂಗೀತದ ಅಧ್ಯಯನವಾಗಿತ್ತು. ಎಲ್ಲ ಬಗೆಯ ವಾದ್ಯಗಳನ್ನೂ ಅವರು ಸಂಗ್ರಹಿಸಿದ್ದರು. ಅಂದಿನ ಭಾರತದ ಪ್ರಸಿದ್ಧ ಗವಾಯಿಗಳು ಶ್ರೀಮಠದಲ್ಲಿ ಸದ್ಗುರು  ಶ್ರೀ ಸಿದ್ಧಾರೂಢರ ಸನ್ನಿಧಾನದಲ್ಲಿ, ಕಬೀರದಾಸರ ಸಮ್ಮುಖದಲ್ಲಿ ಸಂಗೀತ ಕಚೇರಿಯನ್ನು ನಡೆಸಲು ಅಪೇಕ್ಷೆ ಪಡುತ್ತಿದ್ದರಂತೆ. ರಾಜಮನೆತನಕ್ಕೆ ಸೇರಿದವರಾದುದರಿಂದ ಅವರ ಉಡುಪು ರಾಜರ ಉಡುಪಾಗಿತ್ತು. ಮುತ್ತು, ವಜ್ರ, ವೈಡೂರ್ಯ, ಹವಳ, ಮಾಣಿಕ್ಯಗಳಿಗೆ ಅವರಲ್ಲಿ ಕೊರತೆ ಇರಲಿಲ್ಲ. ಅವರ ಹತ್ತು ಬೆರಳಲ್ಲಿಯೂ ವಜ್ರದ ಉಂಗುರಗಳಿರುತ್ತಿದ್ದವು.

ಒಂದು ಅರ್ಥದಲ್ಲಿ ಅವರು ಬಲು ವಿಲಾಸಿ ಸಾಧುವಾಗಿದ್ದರು. ಅವರು ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದ ಬಂಗಾರ, ಬೆಳ್ಳಿಯ ಅಣಸಿನ ಬಡಿಗೆಗಳೇ ಒಂದು ಹೊರೆಯಷ್ಟು ಇದ್ದವ೦ತೆ. ಅವರು ರಾಜರಂತೆ ಮೆರೆದರೂ, ಅ೦ತಃಕರಣ ತಿಳಿಗೊಳದಂತೆ ನಿರ್ಮಲವಾಗಿತ್ತು. ಕಣ್ಣೊಳಗೆ ಹಾಕಿಕೊಂಡನೆಂದರೂ ಅಲ್ಲಿ ಕಸರು ಇರಲಿಲ್ಲ. ಸಿದ್ದಲ್ಲ ಮಠದಲ್ಲಿ ಕಬೀರರು ಒಂದು ಅಪ್ಪಟ ಘಟ್ಟಿ  ಚೀಜ ಆಗಿದ್ದರು. ಯಾರೇ ಗಂಡುಮಕ್ಕಳು ಅವರ ಬಳಿಗೆ ಹೋದರೂ ಅಕ್ಕರತೆಯಿಂದ ಅವರು 'ಬಾ ನನ್ನ ದೊರೆ' ಎಂದೇ  ಕರೆಯುತ್ತಿದ್ದರು, ಹೆಣ್ಣು ಮಕ್ಕಳು ಮಠಕ್ಕೆ ಬಂದರೆ, 'ಬಾ ತಾಯೇ ಎನ್ನದ ಹೊರತು ಅವರು ಬಾಯಿ ತೆರೆಯುತ್ತಿರಲಿಲ್ಲ. ವಿಲಾಸಿ ಸಾಧು ಎನಿಸಿದರೂ ಅವರ ಕಚ್ಚಿ ಬಹಳ ಭದ್ರವಾಗಿತ್ತು, ಕಬೀರರು ಗುರುವಿಗೆ ಒಳ್ಳೇ ಘಟ್ಟ ಶಿಷ್ಯ ಎನಿಸಿದ್ದರು. ಅವರು ಬರೀ ಶಿಷ್ಯರಷ್ಟೇ ಆಗಿರಲಿ, ಸಿದ್ದರಿಗೆ ಅವರು ನಾಲ್ಕು ಆನೆಬಲದ ಶ್ರೀರಕ್ಷೆಯಾಗಿದ್ದರು. ಸಿದ್ದರ ಹತ್ತಿರ ವಾದಮಾಡಲು, ಬರುವವರು ಮೊದಲು ಕಬೀರರನ್ನು ಕಂಡು, ಅವರನ್ನು ಎದುರಿಸಬೇಕಾಗುತ್ತಿತ್ತು. ಕಬೀರ ಅಂಥವರನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತಿದ್ದರು. ಯೋಗ್ಯರೆನಿಸಿದರೆ ಮಾತ್ರ ಸಿದ್ಧರ ಬಳಿಗೆ ಕಳಿಸಿಕೊಡುತ್ತಿದ್ದರು. ಇಲ್ಲವಾದರೆ ತಾವೇ ಉತ್ತರ ಕೊಟ್ಟು ಕಳುಹಿಸುತ್ತಿದ್ದರು. ಕೈ ಬಾಯಿ, ಕಚ್ಚಿ ಮೂರು ಸ್ವಚ್ಛವಾಗಿದ್ದ ಕಬೀರರಿಗೆ ಮನುಷ್ಯರಷ್ಟೇ ಅಲ್ಲ ; ದೇವತೆಗಳೂ  ಹೆದರುತ್ತಿದ್ದರೆಂದು ಹಿರಿಯರ ಹೇಳಿಕೆಯಾಗಿದೆ.


ಒಮ್ಮೆ ಒಬ್ಬನು ಒಳ್ಳೆ ಡೌಲಿನಿಂದ ಮಠಕ್ಕೆ ಬಂದನು. ಬಲು ಆಡ್ಯತೆಯಿಂದ 'ಸಿದ್ಧಾರೂಢರು ಎಲ್ಲಿ ? ನಾದ, ಬಿಂದು ಕಲೆ ಅಂದರೆ ಏನು ? ಎನ್ನುವದನ್ನು ನಾವು ಅವರಿಂದ ಕೇಳಿ ತಿಳಿಯಬೇಕಾಗಿದೆ' ಎಂದು ಕಬೀರರಿಗೇ ಕೇಳಿದನು. ಅವನ ಸೊಕ್ಕಿನ ಬುದ್ಧಿಗೆ ತಕ್ಕ ಪಾಠ ಕಲಿಸಬೇಕೆಂದು ಕಬೀರರು ಅವನನ್ನು ಹತ್ತಿರಕ್ಕೆ ಕರೆದರು. ಏನೆಂದೂ ವಿಚಾರಿಸದೆ, ಕೈ ಸಡಿಲು ಬಿಟ್ಟು ಅವನ ಕೆನ್ನೆಗೆ ಎರಡೇಟು ಬಿಗಿದರು. ಹೊಡೆಸಿಕೊಂಡವನು ಧಕ್ಕಾಗಿ ಹೋದನು, ಇದೇನ್ರಿ  ಪ್ರಶ್ನೆ ಕೇಳಲು ಬಂದರೆ, ನೀವು ಹೊಡೆಯಬೇಕೇ? ಎಂದು ಅವನು ಅಳತೊಡಗಿದನು. ಕಬೀರರು, 'ಅಪ್ಪಾ, ನಾನು ಹೊಡೆದಿಲ್ಲ. ನಿನಗೆ ಉತ್ತರ ಕೊಟ್ಟಿದ್ದೇನೆ, ಇದು ನಿನಗೇ ತಿಳಿಯದಿದ್ದರೆ, ಅದಕ್ಕೆ ನಾನೇನು ಮಾಡಲಿ? ಎಂದು ನುಡಿದರು. ನೀನು ನಾದ, ಬಿಂದು, ಕಲೆಗಳೆಂದರೆ ಏನು ಎಂದು ಕೇಳಲಿಲ್ಲವೇ? ಕೆನ್ನೆಗೆ ಬಲವಾಗಿ ಬಿಗಿದಾಗ ಸಪ್ಪಳ ಕೇಳಿಸಿತಲ್ಲವೇ? ಅದೇ ನಾದ ; ಹೊಡೆತದಿಂದ ಕಣ್ಣಲ್ಲಿ ನೀರು, ಮೂಗಿನಲ್ಲಿ ತಿಳಿಯಾದ ಮಲಾಮು ಬಂದಿತಲ್ಲವೇ? ಅದೇ ಬಿಂದು, ಕೆನ್ನೆಯ ಮೇಲೆ ಮೂಡಿದ ಬಾಸುಂಡೆಗಳ ಕಲೆ, ನೀನು ಕೇಳಿದ್ದಕ್ಕೆ ನಾನು ಹೇಳಿದ್ದು ಇದು' ಎಂದರು, ಆ ಗರ್ವಿಯನ್ನು ಅಲುಗಾಡಿಸುತ್ತ, 'ಎಲೋ, ಹುಲ್ಲು ಹೊರೆಯನ್ನೆ ಕೊಳ್ಳುವ ಯೋಗ್ಯತೆ ಇಲ್ಲದ ನಿಮ್ಮ೦ಥವರು ಒಮ್ಮೆ ಗೆ ಮುತ್ತು, ರತ್ನಗಳ ಖರೀದಿಗೆ ಹೋಗಬಾರದಪ್ಪ'' ಎಂದು ಅವನಿಗೆ ತಿಳಿಹೇಳಿದರು.


ಮಠದಲ್ಲಿಯೇ ಇದ್ದ ಕೆಲವರಿಗೆ ಸಿದ್ದರ ಬಗ್ಗೆ ಗೌರವವಿರಲಿಲ್ಲ. ಇವರು ಸಾಲಿ ಕಲಿತಿಲ್ಲ. ಹಳ್ಳಿಯ ಹುಂಬ, ಸಂಸ್ಕೃತದ ಗಂಧವಿಲ್ಲ. ರಾತ್ರಿ ಹೊತ್ತು ನನ್ನ ಬಳಿಯಲ್ಲಿ ಶಾಸ್ತ್ರ ಹೇಳಿಸಿಕೊಂಡು, ಅದನ್ನೇ ಮರುದಿವಸ ಮುಂಜಾನೆ ಇವರು ಹೇಳುತ್ತಾರೆ ಎಂದು ಒಬ್ಬ ಹೇಳಿಕೊಳ್ಳುತ್ತಿದ್ದನು. ಸಿದ್ಧರ ಶಿವಸ್ಥಿತಿ ಆಗ ಕೆಲವರಿಗೆ ಸಹನೆ ಆಗಲಿಲ್ಲವೆಂದು ತೋರುತ್ತದೆ. ಕಬೀರರಿಗೆ ಮಾತ್ರ ಸಿದ್ಧರು ಮೂರು ಮೊಳ ಕೈಪೆಯ ಬಡಸಾಧುವಾಗಿರದೆ ಪ್ರತ್ಯಕ್ಷ ಪರಶಿವನೇ ಆಗಿದ್ದರು. ಸಿದ್ದರ ನುಡಿ ದೇವವಾಣಿ ಎನಿಸಿತು. ಆತ್ಮಾನಂದದ ಅಮೃತವೇ ತುಂಬಿ ತುಳುಕುತ್ತಿದ್ದಂಥ ಸಿದ್ದರ ಶಿವ ಸಂದೇಶವನ್ನು ಕಬೀರರು ಮನಸಾರೆ ಸವಿದರು. ತಮಗಾದ ಆ ಆನಂದ ಪರವಶತೆಯಲ್ಲಿ, ಸಮಸ್ತ ದೈವಕ್ಕೆ ಕಬೀರರು, ಮಹಾತ್ಮರೇ! ಮುತ್ತು, ರತ್ನ, ವಜ್ರ, ವೈಡೂರ್ಯ ಅಪ್ಪನ ಬಾಯಿಯೊಳಗಿಂದ ಉಚ್ಚಿ ಬೀಳತಾವ, ಅಧಿಕಾರಿಗಳಾದವರು ಮಾತ್ರ ಬಳಕೊಂಡು ಬುಟ್ಟಿ ತುಂಬಿಕೊಳ್ಳಿರಪ್ಪ. ಈ ಕಾಲ ಇನ್ನೊಮ್ಮೆ ಬರಲಾರದು. ಏನು ಕೊಟ್ಟರೂ ಸಿಗಲಾರದು' ಎಂದು ಕುಣಿಕುಣಿದಾಡಿ ಹೇಳುತ್ತಿದ್ದರು. ತತ್ತ್ವ  ತಿಳಿದವರಿಗೆ ಸಿದ್ಧರ ಮಾತು ಮನುಷ್ಯನ ಮಾತಾಗಿರಲಿಲ್ಲ. ಮಹಾದೇವರ ಮಾತಾಗಿತ್ತು.


'ವಿಲಾಸಿ ಸಾಧು' ಎನಿಸಿದ ಕಬೀರರಿಗೆ ಯಾವುದರ ಕೊರತೆ ಇರಲಿಲ್ಲ. ಅವರ ಸ್ನಾನಕ್ಕೆಂದು ರಾಜರು ಹೇರಳವಾಗಿ ಸುಗಂಧ ದ್ರವ್ಯಗಳನ್ನು ಕಳಿಸುತ್ತಿದ್ದರು, ಹಂಡೆಗಟ್ಟಲೆ ನೀರು ಕಾಯಿಸಿ, ಅದರಲ್ಲಿ ಅತ್ತರು ಹಾಕಿ ಕಬೀರರು ಸ್ನಾನ ಮಾಡುತ್ತಿದ್ದರು. ಆ ಸುಂಗಧಿತ ನೀರು ಹರಿದು ಹರಿದು ಬರುತ್ತಿರುವಾಗ ಅಷ್ಟೂ ಪ್ರದೇಶವೆಲ್ಲ ಘಮ ಘಮಿಸುತ್ತಿತ್ತು. ಬರಗಾಲದ ದಿನಗಳಲ್ಲಿ ಜನಕ್ಕೆ ಕುಡಿಯುವ ನೀರೇ ಸಾಕಷ್ಟು ಸಿಗದಿರುವಾಗ, ಕಬೀರರು ಹಂಡೆಗಟ್ಟಲೆ ನೀರು ಸ್ನಾನಮಾಡುವದನ್ನು ಸಿದ್ಧರು ಒಮ್ಮೆ ಕಂಡರು. 'ಇದೇನು ಕಬೀರಾ, ತತ್ತ್ವ ತಿಳಿದ ನೀನು ತೊಗಲ ತೊಳೆಯುವದಕ್ಕೆ ಇಷ್ಟು ನೀರು ಚೆಲ್ಲಬೇಕೆ ? ಈ ನೀರು ಎಷ್ಟು ಜನಕ್ಕೆ, ದನಕ್ಕೆ, ಪಶುಪಕ್ಷಿಗಳಿಗೆ ಕುಡಿಯಲು ಅವಶ್ಯ ಬರುತ್ತಿತ್ತು ಎಂದು ಸಿದ್ದರು  ನುಡಿದರು. ಈ ಮಾತು ಕಬೀರರ ಕಿವಿಗೆ ಮುಟ್ಟಿತು. 'ಗುರುವೇ, ಇನ್ನು ಸ್ನಾನವೇ ಸಾಕು ' ಎಂದು ನುಡಿದರು. ಆ ನಂತರ ಕಬೀರರು ಬದುಕಿರುವಷ್ಟು ಕಾಲ ಒಂದು ತಂಬಿಗೆ ನೀರನ್ನು  ತಾವಾಗಿ ಮೈ ಮೇಲೆ ಹಾಕಿಕೊಳ್ಳಲಿಲ್ಲ, ಕಬೀರರು ಅಂಥ ಗಟ್ಟ ನಿಷ್ಠೆಯ ವಜ್ರದ  ಬಂಡೆಯಾಗಿದ್ದರು. ಅವರು ಗಿಲೀಟು ಇಲ್ಲದ ಅಪ್ಪಟ ಅಪರಂಜಿ ಎನಿಸಿದ್ದರು.


ಕಬೀರರು ಕೇವಲ ಸಿದ್ದರ ಪಾದ ಸೇವೆಯನ್ನು ಮಾತ್ರ ನಂಬಿಕೊಂಡಿದ್ದರು, ಅವರಿಗೆ ಎಲ್ಲ ಸೌಕರ್ಯವಿದ್ದರೂ ಅವರು ಏನೂ ಇಲ್ಲದ ಬಡ ಭಿಕಾರಿಯ ತೆರನಾಗಿಯೇ  ಇರುತ್ತಿದ್ದರು. ಅವರು ತಮಗಾಗಿ ಒಂದು ಒಡಕ ಕವಡಿಯನ್ನೂ ಕೂಡಿಟ್ಟು ಕೊಳ್ಳಲಿಲ್ಲ ತಮ್ಮ ಸ್ಥಾನ ಮಾನ, ಪ್ರತಿಷ್ಠೆ ಯನ್ನು ಅವರು ಬೆಳೆಸಿಕೊಳ್ಳಲಿಲ್ಲ. ಗುರುಗಳನ್ನು ಹಿಂದಿಟ್ಟ ತಮ್ಮದೇ ಮನೆಮಠ ಕಟ್ಟಿಕೊಳ್ಳಲು ಇಷ್ಟಪಡಲಿಲ್ಲ. ಗುಡಿಗೋಪುರ ಆಗಬೇಕೆಂದು ಆಶೆ  ಪಡಲಿಲ್ಲ. ಬಂಗಾರ ಗಿಲೀಟಿನ ಕಳಸದ ಕನಸನ್ನು ಅವರು ಎಂದೂ ಕಾಣಲಿಲ್ಲ. 'ಕಬೀರ ಇದು ಅಗ್ನಿಕುಂಡ, ನೀನು ಇದರಲ್ಲಿ ಹಾರಬೇಕು' ಎಂದು ಸಿದ್ಧರು ಹೇಳಿದರೆ, ಹಿಂದು ಮುಂದೆ ನೋಡದೆ, ದಡ್ಡನೇ ಹಾರಿಕೊಳ್ಳುವ ತಾಕತ್ತಿನ ನಿಷ್ಠೆ ಕಬೀರರಲ್ಲಿತ್ತು. ಗುರುವಿನ ಒಂದು ಮಾತು ಅವರಿಗೆ ಮಂತ್ರವಾಗಿತ್ತು. ಕಬೀರರು ತಮ್ಮದೆನ್ನುವದೆಲ್ಲವನ್ನೂ ಸಿದ್ದರ ಶ್ರೀಚರಣಕ್ಕೆ ಸಮರ್ಪಿಸಿಕೊಂಡದ್ದರು. ಅಪಾರವಾದ ಆಸ್ತಿ, ಸಿರಿಸಂಪತ್ತಿಗೆ ಒಡೆಯರಾಗಿದ್ದ ಕಬೀರರು ಯಾವುದಕ್ಕೂ ಇಚ್ಛೆ ಪಡಲಿಲ್ಲ. ಕಬೀರರ ಸಂಬಂಧಿಕರು ಹುಬ್ಬಳ್ಳಿಗೆ ಬಂದು ಲಕ್ಷಾಂತರ ರೂಪಾಯಿ ಆಸ್ತಿಯ ವ್ಯವಹಾರ ಊರಿಗೆ ಬಂದು ಮುಗಿಸಿಕೊಳ್ಳರಿ' ಎಂದು ಹೇಳಿದರು. ಆಗ ಕಬೀರರು ಗುರುಗಳ ಬಳಿಗೆ ಹೋಗಿ, ನನ್ನ ಪಾಲಿನ ಆಸ್ತಿ ಕೊಡಲಿಕ್ಕೆ ಬಂದಿದ್ದಾರೆ. ದೇವಾ, ಏನು ಮಾಡಲಿ? ಎಂದು ಕೇಳಿದರು. ಆಗ ಸಿದ್ಧರು ನಕ್ಕರಂತೆ, 'ಕಬೀರ ನನ್ನದೆನ್ನುವದನ್ನೆಲ್ಲ ಒಮ್ಮೆ ವಾಂತಿ ಮಾಡಿಕೊಂಡಿರುವಿ ಮತ್ತೆ ಯಾಕೆ ಅದನ್ನು ತಕ್ಕೊಂಡು ಬಾಯಿಯೊಳಗೆ ಹಾಕಿಕೊಳ್ಳುತ್ತೀ? ಎಂದು ಹೇಳಿದರು. ಕಬೀರರು ತಮ್ಮ ಸಂಪತ್ತು ಎನ್ನುವ ವಿಷಯವನ್ನೇ ಸುಟ್ಟು ಹಾಕಿದರು. ಅವರ ಮನ ಭಾವ, ಬುದ್ಧಿಯಲ್ಲಿ ಗುರುಗಳೇ ತುಂಬಿಕೊಂಡಿದ್ದರು.


ಒಬ್ಬ ಪಂಡಿತನು ಮಠಕ್ಕೆ ಬಂದನು. 'ಸಿದ್ಧಾರೂಢ ಸ್ವಾಮಿಗಳೇ, ನೀವು ಬ್ರಹ್ಮನ ಬಗೆಗೆ ಇಷ್ಟು ಹೇಳುತ್ತೀರಿ. ಬ್ರಹ್ಮನು ಹೇಗಿರುತ್ತಾನೆಂಬುದನ್ನು ತೋರಿಸಬಲ್ಲಿರಾ? ಎಂದು ಕೇಳಿದನು. ಆಗ ಕಬೀರರು ದೊಡ್ಡ ಅಡಿಗೆಮನೆಯಲ್ಲಿ ದಿಗಂಬರರಾಗಿ ಸ್ನಾನ ಮಾಡುತ್ತಿದ್ದರು. ಸಿದ್ದರು ಕೂಡಲೇ, 'ಕಬೀರಾ' ಎಂದು ಕೂಗಿದರು. ಶಿವಮಂತ್ರವನ್ನು ಜಪಿಸುತ್ತ ದೇಹದ ಪರಿವೆ ಮರೆತು, ತಮ್ಮೊಳಗೇ ತಾವಾಗಿ ಸ್ನಾನ ಮಾಡುತ್ತಿದ್ದ ಕಬೀರರಿಗೆ : ಗುರುಗಳ ಮಾತು ಕೇಳಿತು. ತಂಬಿಗೆಯನ್ನು ಅಲ್ಲೇ ಚಲ್ಲಿದವರೇ, 'ದೇವಾ ಬಂದೆ' ಎಂದವರೇ ದಿಗಂಬರ ಸ್ಥಿತಿಯಲ್ಲಿಯೇ ಓಡಿಬಂದು ಗುರುಗಳೆದುರಿನಲ್ಲಿ ನಿಂತರು. ಆಗ ಸಿದ್ಧರು ಪ್ರಶ್ನೆ ಕೇಳಿದ ಪಂಡಿತನಿಗೆ, 'ಬ್ರಹ್ಮ ಅಂದರ ಹೀಂಗ ಇರತಾನ ನೋಡು' ಎಂದು ಹೇಳಿದರು. ತಮ್ಮ ಹೆಗಲ ಮೇಲಿನ ಸೆಲ್ಲೆಯನ್ನು ತೂರಿ, 'ಕಬೀರಾ ಮೈ ಒರೆಸಿಕೊ' ಎಂದು ನುಡಿದರು. ಆಮೇಲೆ ಕಬೀರರಿಗೆ ಮೈಮೇಲೆ ಎಚ್ಚರ ಬಂದಿತು. ಅವರ ಮನವು ಅವರ ಶರೀರದಂತೆ ಎಂದೋ ಬತ್ತಲೆಯಾಗಿತ್ತು. ಯಾವುದಕ್ಕೂ ಆಸೆ ಪಡದ, ಎಂಥದ್ದಕ್ಕೂ ಮನಸೋಲದ ಅವರು ಶ್ರೀಮಠದಲ್ಲಿ ಒಂದು ಅನರ್ಘ್ಯ  ರತ್ನವಾಗಿದ್ದರು.


ಕಬೀರರು ವಿನೋದ ಪ್ರಕೃತಿಯವರೂ ಆಗಿದ್ದರು. ಒಮ್ಮೆ ಹಳೇಹುಬ್ಬಳ್ಳಿಯ ಒಬ್ಬಳು ತಾಯಿ ಬಗ್ಗಿ ಮನೆಯಲ್ಲಿ ಕಸಗೂಡಿಸುತ್ತಿದ್ದಾಗ, ಅವಳ ಬೆನ್ನ ಮೇಲೆ ಒಂದು ಹಲ್ಲಿ ಬಿತ್ತಂತೆ. ಮೈಮೇಲೆ ಹಲ್ಲಿ ಬಿದ್ದರೆ ಶುಭವಾಗುವದೊ, ಏನು ಅಶುಭವಾಗುವದೋ ಎಂದು ತಿಳಿಯಲು ಉತ್ಸುಕಳಾದ ಅವಳು ಕೂಡಲೇ ಮಠಕ್ಕೆ ಓಡಿ ಬಂದಳು, ಸ್ವಾಮಿಗಳಿಗೆ ನಮಸ್ಕರಿಸಿದ್ದೇ ತಡ ; “ಯಪ್ಪಾ, ಮೈ ಮ್ಯಾಲ ಹಲ್ಲಿ ಬಿತ್ತು. ಏನಾಗತೈತಿ ಗಡಾನ ಹೇಳು' ಎಂದು ದುಂಬಾಲ ಬಿದ್ದಳು. ಸ್ವಾಮಿಗಳು ಅವಳಿಗೆ, “ಹೀಗೋ, ಅಲ್ಲಿ ಕಬೀರನಿದ್ದಾನೆ. ಅವನ ಬಳಿಗೆ ಹೋಗು' ಎಂದು ಹೇಳಿ ಕಳುಹಿಸಿದರು. ಆ ತಾಯಿ ಕಬೀರರಲ್ಲಿಗೆ ಓಡೋಡಿ ಬಂದಳು. ತನ್ನ ಗೋಳನ್ನು ಹೇಳಿಕೊಂಡಳು. ಅವರು ಅವಳ ಉದ್ವೇಗ, ಆತುರತೆಯನ್ನು ಕಂಡು ಅಚ್ಚರಿಪಟ್ಟರು. ಅವಳ ಮೂಢನಂಬಿಕೆಗೆ ಮರುಕವೂ ಉಂಟಾಯಿತು. ಅವಳಿಗೆ ಸಮಾಧಾನ ಮಾಡುವ ಬುದ್ದಿಯಿಂದ, ಒಂದು ಕಡ್ಡಿ ತಂದು ತಾವು ಓದುತ್ತಿದ್ದ ಪುಸ್ತಕದ ಯಾವುದೋ ಪುಟದಲ್ಲಿ ಸೇರಿಸುವಂತೆ ಹೇಳಿದರು. ತಾವು ಕಣ್ಣು ಮುಚ್ಚಿದರು. ಪುಸ್ತಕವನ್ನು ಶ್ರದ್ಧೆಯಿಂದ ಹಣೆಗೆ ಒತ್ತಿಕೊಂಡರು. ಮೆಲ್ಲಗೆ ಕಣ್ತೆರೆದು  ಕಡ್ಡಿ ಇಟ್ಟಿದ್ದ ಪುಟವನ್ನು ತೆರೆದರು. ಸಂತೋಷದಿಂದ, 'ಅಬ್ಬಬ್ಬ! ಅಬ್ಬಬ್ಬ! ಏನ ಭಾಗ್ಯ ! ಇಂಥ ಭಾಗ್ಯದ ಮುಂದ ಭಾಗ್ಯವೇ ಇಲ್ಲ' ಎಂದು ಹೇಳತೊಡಗಿದರು. ಅವರ ಮಾತಿನಿಂದ ಅವಳು ಉಬ್ಬಿ ಹೋದಳು. ತನಗೆ ದ್ರವ್ಯ ಸಿಗಬಹುದೋ ! ಬಂಗಾರ ಗಟ್ಟಿಗಳು ಸಿಗಬಹುದೋ ! ನಿಧಿ ದೊರಕಬಹುದೋ ಎಂದು ಏನೇನೋ ಕನಸು ; ಕಬೀರದಾಸರು, 'ಒಳ್ಳೆಯದಾಯಿತು, ಒಳ್ಳೆಯದಾಯಿತು' ಎಂದು ಮತ್ತೆ ಮತ್ತೆ ಹೇಳಿದರು. ಆಗ ಅವಳು ತುಂಬ ಕುತೂಹಲದಿಂದ ಒಳ್ಳೆಯದಾಯಿತು ಎಂದು ಕೇಳಿದಳು. ಆಗ ಕಬೀರದಾಸರು ಅವಳಿಗೆ, 'ತಾಯಿ,  ಕಸಗೂಡಿಸುವಾಗ ಆ ಬಡಪ್ರಾಣಿ ಹಲ್ಲಿ ನಿನ್ನ ಬೆನ್ನ ಮೇಲೆ ಬಿದ್ದುದಕ್ಕೆ ಅದಕ್ಕೆ ಒಳ್ಳೆಯದಾಯಿತು. ಅದು ಉಳಿಯಿತು. ಅದು ನಿನ್ನ ಮೇಲೆ ಬೀಳುವ ಬದಲು, ನೀನು ಅದರ ಮೇಲೆ ಬಿದ್ದಗಿದ್ದಿದ್ದರೆ, ಅದು ಸತ್ತೇ ಹೋಗುತ್ತಿತ್ತು. ಅದು ಉಳಿಯಿತು. ಅದರಿಂದ ಹಲ್ಲಿಗೆ ಒಳಿತಾಯಿತು ಎಂದು ಹೇಳಿದರು.


ಸಿದ್ದರ ಉತ್ಸವ ನಡೆಯಿತೆಂದರೆ, ಅವರ ಪಲ್ಲಕ್ಕಿ ಹೊರಟರೆ, ಮುಂದೆ ಕಬೀರರು  ಇರಲೇಬೇಕು. ಕಬೀರರು ಬಿಳೇ ಕುದರಿ ಏರಿ, ರಾಜಠೀವಿಯಿಂದ ಹೊರಟರೆ, ಸಿದ್ಧರು  ಕುಲುಕುಲು ನಗುವರು. ಕಬೀರರ ವೈಭವ, ಅವರಿಗೆ ಸಿದ್ಧರು ಕೊಟ್ಟ ಸವಲತ್ತು ನೋಡಿ ಮನದೊಳಗಿನ ಕೆಲವರು ಚೂಪ ಬುದ್ದಿಯವರಿಗೆ ಹೊಟ್ಟೆಯಲ್ಲಿ ಖಾರ  ಕಲಸಿದಂತಾಯಿತು. ಅವರು ಸಮಯ ಸಿಕ್ಕಾಗಲೆಲ್ಲ ಕಬೀರರ ಬಗೆಗೆ ಇಲ್ಲದ ಸಲ್ಲದ  ವಿಚಾರ ಹೇಳತೊಡಗಿದರು. ಚಾಡಿ ಹೇಳಿದರು. ಸಿದ್ದರು ಆಗ ಅಪ್ಪಾ ! ಅವು ಹಣೆಯೊಳಗೆ ಇದನ್ನೆಲ್ಲ ಭೋಗಿಸುವ ಭಾಗ್ಯ ಬರೆದಿದೆ. ನನ್ನ ಹಣೇಬರಹದೊಳಗ ಈ  ಲಂಗೋಟಿಯನ್ನು ತೊಡುವದು ಬರೆದಿದೆ. ಅದಕ್ಕೆ ಯಾರೇನು ಮಾಡುವರು?' ಎಂದು ಚಾಡಿ ಹೇಳಿದವರ ಬಾಯಿಯನ್ನು ಸಿದ್ಧರು ಕಟ್ಟಿದರು. ಆದರೂ ಕೆಲವರು ಸ್ವಲ್ಪ ದೂರಕ್ಕೆ ಹೋಗಿ, 'ಅಪ್ಪಾ, ನಿನಗೆ ಹೊರುವದಕ್ಕೆ ಒಂದು ಹಳೇ ಕೌದಿಯಿದೆ. ನಿನ್ನ ಬಾಗಿಲದಲ್ಲಿ ಬಂದು ಬಿದ್ದಿರುವ ಈ ನಾಯಿಗೆ ಎಷ್ಟು ಸೊಕ್ಕು? ಏನು ಮಾತ ? ಏನು ಆಡಂಬರ, ಏನು ಡೌಲು : ಇದು ಅತಿಯಾಯಿತು' ಎಂದು ಹೇಳಿದರು.


ಸ್ನಾನಗೃಹದಲ್ಲಿದ್ದ ಕಬೀರರನ್ನು ಸಿದ್ದರು ಕರೆದರು. ಬರಿಮೈಯ್ಯಲ್ಲಿ ಕಬೀರರು ಬಂದರು, ಸಿದ್ದರೇ ಹೆಗಲ ಮೇಲಿನ ವಸ್ತ್ರ ತೂರಿದರು. 'ಕಬೀರಾ ಇದನ್ನು ತಗೊ ಸಂಚಾರಕ್ಕೆ ಹೋಗಿ ಬಿಡು' ಎಂದು ಸಿದ್ದರು ಹೇಳಿದರು. ಗುರುವೇ ನಿನ್ನಾಜ್ಞೆ  ಎಂದವರೆ  ಕಬೀರರು ಗುರುವಿನ ಪಾದಕ್ಕೆ ಬಿದ್ದರು, ಶಿವಾಯನಮಃ ಎನ್ನುತ್ತಲೇ ಕೇವಲ ಒಂದು ವಸ್ತ್ರದ ಮೇಲೆ ಮಠದಿಂದ ಹೊರಬಿದ್ದರು. ಮೈಯನ್ನೂ ಕೂಡ ಒರೆಸಿಕೊಳ್ಳುವ ಅವಕಾಶ  ಸಿಗಲಿಲ್ಲ. ಮಠದ ಮುಂದಿನ ಕಲಘಟಗಿ ರಸ್ತೆಯವರೆಗೆ ಕಬೀರರು ಬಂದರು. ಕಬೀರರು ವಸ್ತ್ರವಿಲ್ಲದೇ ಹೊರಟುದನ್ನು ಕಂಡು ಭಕ್ತರು ಕಂಗಾಲಾದರು. ಅವರ ಕರುಳಿಗೆ ಕಿಚ್ಚಟ್ಟಂತೆ ಆಯಿತು. ಓಡಿ ಹೋದವರೇ ಒಬ್ಬರು ರೇಷ್ಮೆಯ ಬಟ್ಟೆಯನ್ನು ಕೊಂಡು ತಂದರು. ಕಬೀರರ ಮೈಮೇಲೆ ಹಾಕಿದರು. ಮಾಲೆಗಳು ಬಂದವು. ಕೊರಳು ಹಿಡಿಸದಾಯಿತು. ಬೆರಳ ತುಂಬ ಉಂಗರುಗಳು ಅಲಂಕರಿಸಿದವು. ಇಡೀ ಭಕ್ತ ಕೋಟಿ ಕಬೀರರ ಸಂಗಡ ನಡೆದರು. ಹಾದಿ ತುಂಬ  ಭಕ್ತರೇ ಆದರು. ಮಾಲೆಯನ್ನು ತೆಗೆದರು. ಯಾರೋ ಬಂಗಾರದ ಸರ ಹಾಕಿದರು. ಹೊರಲಾರದಷ್ಟು ಆಭರಣಗಳಾದವು, ಹತ್ತಿರದಲ್ಲಿದ್ದವರು ಕಬೀರರ ಮುಖ ನೋಡಿದರು. ಯಾಕೆ? ಏನು? ಎಲ್ಲಿಗೆ ಹೊರಟಿದ್ದಾರೆ? ತಿಳಿಯದಾಯಿತು. ಎತ್ತಲೋ ಹೊರಟು ನಿಂತ ಕಬೀರರಿಗೆ  ಗುರುವಿನ ಕೂಗು ಕೇಳಿತು. 'ಅಪ್ಪ ಕರೆಯುತ್ತಿದ್ದಾನೆ ನಡೆಯಿರಿ' ಎಂದು ಕಬೀರರು ಹೇಳಿದರು. ಮಠಕ್ಕೆ ಬಂದರು. ಹೋಗುವಾಗ ವಸ್ತ್ರವಿಲ್ಲದೆ, ಮತ್ತೊಂದು ಮುಗುದೊಂದು ಇಲ್ಲದೆ ಹೋದ ಕಬೀರರು ಹೊರಲಾರದಷ್ಟು ಆಭರಣ, ವಸ್ತ್ರ ಉಡಿಗೆಯೊಂದಿಗೆ ಮಠಕ್ಕೆ ಬಂದದ್ದನ್ನು ಕಂಡು ಕೆಲವರಿಗೆ ಕೆನ್ನೆಗೆ ಬಡಿದಂತಾಯಿತು. ಹೊಟ್ಟೆ ಕಿಚ್ಚು ಪಡುವವರ ಹಸಿದ ಹೊಟ್ಟೆಯಲ್ಲಿ ತಣ್ಣನ್ನ ಗಾಳಿ ಬೀಸಿದಂತಾಯಿತು. ಸಿದ್ದರು 'ಅಪ್ಪಾ, ಅವನ ಪ್ರಾರಬ್ದದಲ್ಲಿ ಈ ರೀತಿ ರಾಜಭೋಗ ಭೋಗಿಸುವ ಭಾಗ್ಯವಿದ್ದರೆ ಅದನ್ನು ಯಾರು ತಪ್ಪಿಸಲಿಕ್ಕೆ ಬರುತ್ತದೆ?' ಎಂದರು. ಕಬೀರರದು ರಾಜಠೀವಿ. ರಾಜಭೋಗ. ಆದರೆ ಅಪ್ಪಟ ಸನ್ಯಾಸಿ. ದಾಸಭಾವ ನರನಾಡಿಗಳಲ್ಲಿ ಮಿಡಿಯುತ್ತಿತ್ತು. ದಾಸರೆಂದರೆ ಕಬೀರದಾಸ ಎನ್ನುವಂತಾಗಿತ್ತು. ಹೆಣ್ಣು ಮಕ್ಕಳು ಬಂದರೆ ದೂರದಿಂದಲೇ 'ತಾಯಿ' ಎಂದು ನಮಸ್ಕರಿಸುವರು. ಅವರೊಂದು ನಿರ್ಮಲ, ನಿಷ್ಕಲ್ಮಷ ಪುಣ್ಯ ಜೀವ, ಪಾಪದ ಸೋಂಕು ಮುಟ್ಟದ ಶುದ್ಧ ಚಿನ್ನದ ಗಟ್ಟಿ ಅವರಾಗಿದ್ದರು.


ಸ್ವಾಮಿಗಳ ರಕ್ಷಕರಂತಿದ್ದ ಕಬೀರರನ್ನು ಕಾಣದೆ  ನೇರವಾಗಿ ಸಿದ್ದರಲ್ಲಿಗೆ ಹೋಗುವದು ದುಸ್ತರದ ಕಾರ್ಯವಾಗಿತ್ತು. ಕಬೀರರಿಗೆ ಜಡ್ಡಾಯಿತು. ಮೈ ಬಾತುಕೊಳ್ಳಲಾರಂಭಿಸಿತು. ರೋಗರುಜಿನಗಳು ಮನುಷ್ಯನಿಗೆ ಬಾರದೆ ಗಿಡಮರಗಳಿಗೆ ಬರಬೇಕೇ? ರೋಗದ ಆಗರವೆನಿಸಿದ ಈ ದೇಹವು ತನ್ನ ಕರ್ಮನುಸಾರವಾಗಿ ಅನುಭೋಗಿಸಬೇಕಾದುದನ್ನು ಅನುಭೋಗಿಸಲೇಬೇಕು. ಅದನ್ನು ಮೀರಲಳವಲ್ಲ, ಏನೇ ಆದರೂ ಅದು ದೇಹಕ್ಕೆ ಹೊರತು ನನಗಲ್ಲ. ಆತ್ಮಕ್ಕಲ್ಲವಲ್ಲ ಎಂದು ಕಬೀರರು ಧೃಡವಾಗಿ ನಂಬಿದ್ದರು. ಸಿದ್ದರ ಆತ್ಮ ಜ್ಞಾನದ ಮಹಾಗರಡಿ ಮನೆಯಲ್ಲಿ ಕಸರತ್ತು ಮಾಡಿದ ಕಬೀರರಿಗೆ ಈ ಲೋಕವು ಒಂದು ಬಾಡಿಗೆ ಮನೆಯಾಗಿತ್ತು. ಇಲ್ಲಿಗೆ ಎಲ್ಲಿಂದಲೋ ಬಂದಿದ್ದೇವೆ. ಬಂದ ತಪ್ಪಿಗಾಗಿ ಹೋಗಬೇಕು. ಬದುಕು ಒಂದು ರಾಟಾಳದ ಚಕ್ರವೆನಿಸಿತ್ತು. ಇದೊಂದು ಸಂತೆ, ಸಂತೆಗೆ ಬರಹೋಗುವ ಈ ತಿರುಗಾಟ ಒಂದು ತೀರಲೇಬೇಕು. ಅದು ನಿಲ್ಲಲೇಬೇಕು. ಇಲ್ಲಿ ನಾವು ನಂಬಿಕೊಂಡ ಲೌಕಿಕ ಸರ್ವಸ್ವವೆಲ್ಲವೂ ಕಲ್ಪಿತ, ಹುರುಳಿಲ್ಲದ್ದು, ಇದು ತಾರ್ಕಿಕ ಮಿಥ್ಯ, ದೇಹವು ಅನಿತ್ಯ; ಹಾಳಾಗುವ ಈ ಶರೀರದಲ್ಲಿ ಆ ಮಹಾದೇವ ಶಕ್ತಿ ಅಡಗಿದೆ. ಆ ಆಡಗಿದ ಶಕ್ತಿಯನ್ನು ಗುರುತಿಸಿ ಪಡೆದುಕೊಳ್ಳುವದೇ ಒಂದು ಸತ್ಯ ಕಾರ್ಯ, ಜಾತಿ, ಮತ, ಪಂಥ, ಕುಲಗೋತ್ರಗಳೆಲ್ಲ ಜೀವಕ್ಕೆ; ನಮ್ಮ ಈ ಜಗತ್ತು ಮೇಲಿನಿಂದ ನಮ್ಮ ಮೇಲೆ ಹೇರಿದ ಹೊರ ಬಳಕೆಯ ಥಳಕು  ಬೆಳಕು, ಅವು ಬರೀ ಗಿಲೀಟು, ಆತ್ಮಜ್ಞಾನದ ಬೆಳಕಿನಲ್ಲಿ ಈ ಗಿಲೀಟಿನ ವಸ್ತುಗಳೆಲ್ಲ ತಮ್ಮ  ಬಣ್ಣವನ್ನು ಕಳೆದು ಕೊಳ್ಳುವವು. ಇಂಥ ಖಚಿತ ಜ್ಞಾನವಾದ ಕಬೀರರಿಗೆ ಬಾಡಿಗೆ ಮನೆಯಾದ ದೇಹಕ್ಕೆ ರೋಗ ಬಂದಾಗ ಅವರಿಗೆ ವ್ಯಥೆ ಅನಿಸಲಿಲ್ಲ. ಉಪಚಾರಕ್ಕೆಂದು ಅಣ್ಣಿಗೇರಿಯ ಪ್ರಸಿದ್ಧ ಹಕೀಮರೊಬ್ಬರು ಕಬೀರರಲ್ಲಿಗೆ ಬಂದರು. ಅವರನ್ನು ಪರೀಕ್ಷಿಸಿದರು. ಜಡ್ಡಿನ ವಿಷಯವನ್ನು ಸಿದ್ಧರಿಗೆ ಹೇಳಲು ಬಂದರು. 'ಅಪ್ಪಾ, ಕಬೀರ ದಮ್ಮು ಬಹಳವಾಗಿದೆ. ಔಷಧಿ ಕೊಡತೀನಿ. ಅವನನ್ನು ಸಮುದ್ರ ತೀರಕ್ಕೆ ಕರೆದೊಯ್ಯಬೇಕು. ಆವಾತಾವರಣದಲ್ಲಿ ಕಬೀರನ ಜಡ್ಡು ನಿಚ್ಚಳವಾಗಿ ಸ್ವಚ್ಛವಾಗುವದು' ಎಂದು ಹೇಳಿದರು. “ಕಬೀರನು ಬಂದರೆ ಕರೆದುಕೊಂಡು ಹೋಗು, ರೋಗ ಬಂದದ್ದು ಅವನ ಶರೀರಕ್ಕೆ' ಎಂದು ಸಿದ್ಧರು ಹೇಳಿದರು. ಹಕೀಮನು ಮತ್ತೆ ಕಬೀರರ ಬಳಿಗೆ ಬಂದನು, 'ಕಬೀರಾ, ನೀನು ಸಮುದ್ರ ತೀರಕ್ಕೆ ನಡೆ, ನಾನು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಉಪಚಾರ ಮಾಡುತ್ತೇನೆ' ಎಂದು ಹಕೀಮನು ಪರಿಪರಿಯಾಗಿ ಬೇಡಿಕೊಂಡನು. ಕಬೀರರು ನಕ್ಕರು. ಹಕೀಮರೇ, ಈ ದೇಹವು ಅನಿಶ್ಚಿತ, ಅಶಾಶ್ವತ, ಸತ್ಯವಾದ ನಿತ್ಯವಾದ ಆ ಸಚ್ಚಿದಾನಂದ ಸ್ವರೂಪನಾದ ಆತ್ಮನಿಗೆ ಯಾವ ತರಹದ ರೋಗಗಳಿರುವುದಿಲ್ಲ. ಬಾಧೆಗಳಿಲ್ಲ. ಪರಮಾತ್ಮನೇ ಆಗಿರುವ ನನ್ನ ದೇವನ ಪಾದಧೂಳಿಯನ್ನು ಅಗಲಿ, ನಾನು ಒಂದು ಆರೆ ನಿಮಿಷವಾದರೂ ಇರಲಾರೆ. ನಿನ್ನ ಸಂಗಡ ಬರಲಾರೆ. ಈ ದೇಹವು ಇಲ್ಲಿಯೇ ಅವನ ಪಾದದಲ್ಲಿಯೇ ಉರುಳಬೇಕು. ಅವನು ಬೆಳಗಿಸಿದ ದೀಪ ಅವನಲ್ಲಿ ಯೇ ಅಡಗಬೇಕು. ಎಲ್ಲಿಗೂ ಬರಲಾರೆ' ಎಂದು ಖಂಡಿತವಾಗಿ ನುಡಿದರು. ಹಕೀಮ ಸುಮ್ಮಕ ಅಣ್ಣಿಗೇರಿಗೆ ಹೋದನು. ಕಬೀರರ ತಂಗಿ ಬಳ್ಳಾರಿಯಿಂದ ಬಂದು 'ಅಣ್ಣಾ ಊರಿಗೆ ಹೋಗೋಣ, ಇಲ್ಲಿ ಬಂದು ಎಲ್ಲರನ್ನು ಮರೆತು ಕುಂತಲ್ಲ' ಎಂದಳು. ಆಗ ಕಬೀರರು ನಾನು ಲೌತಿಕವಾಗಿ ಎಂದೋ ಸತ್ತೀನಿ. ನನ್ನ ಹತ್ತಿರ ನೀವು ಯಾಕ ಬರತೀರಿ' ಎಂದು ತಂಗಿಗೆ ನುಡಿದರಂತೆ.

ಸಿದ್ದರ' ಮಾನಸ ಪುತ್ರ' ಎಂದು ಹೆಸರು ಪಡೆದ ಕಬೀರರ ಬಗ್ಗೆ ಸ್ಥಳೀಕ ಕೆಲವು ಜನರಿಗೆ ಎಲ್ಲಿಲ್ಲದ ಗೌರವ ಇತ್ತು. ಸಿದ್ದರ ಅಂತಃಕರಣ ಗೆದ್ದ ಕಬೀರರನ್ನು ತಮ್ಮ ಕಡೆಗೆ ತೆಗೆದುಕೊಳ್ಳಬೇಕು. ಅವನ ಗೋರಿಯ ಮೇಲೆ ತಾಜಮಹಲಿನಂತಹ ಒಂದು ಭವ್ಯ ಕಟ್ಟಡ ಕಟ್ಟಬೇಕು. ಅದು ಯಾತ್ರಾ ಸ್ಥಳವೆನಿಸಬೇಕು ಎಂದು ಕೆಲವರು ಹಿರಿಯರು ಯೋಚಿಸಿದರು. ಈ ವಿಷಯ ಸಿದ್ದರ ಕಿವಿಯ ಮೇಲೆ ಇಡಲು ಹೋದರು. 'ಬಾಬಾ, ಕಬೀರದಾಸನು ನಮ್ಮ ವನು. ಅವನಿಗೆ ಅಂತ್ಯಕಾಲ ಸಮಿಸಿದೆ. ಅವನನ್ನು ನಮಗೆ ನೀಡಿರಿ, ನಾವು ಅವನನ್ನು ಕರೆದುಕೊಂಡು ಹೋಗುತ್ತೇವೆ' ಎಂದು ಕೇಳಿದರು. ಆಗ ಸಿದ್ದರು, ಕಬೀರನನ್ನು ನಾನು ಇಲ್ಲಿಗೆ ಕರೆದುಕೊಂಡೇ ಬಂದಿಲ್ಲ. ಕರೆದುಕೊಂಡು ಬಾರದವನನ್ನು ನಾನೇ ಹೇಗೆ ಕಳಿಸಿ ಕೊಡಲಿ? ಅವನೇ ಬರುತ್ತಿದ್ದರೆ, ನೀವೇ ಕರೆದುಕೊಂಡು ಹೋಗಿ' ಎಂದು ನುಡಿದರು.


ಆ ಹಿರಿಯರೆಲ್ಲ ಕಬೀರರ ಕೋಣೆಗೆ ಬಂದರು. ಅವರೆಲ್ಲ ತಮ್ಮ ಕಡೆಗೇ ಬರುತ್ತಿದ್ದಾರೆಂದು ತಿಳಿದ ಕಬೀರರು. ಎದ್ದು ಕುಳಿತರು. ಭಸ್ತ್ರ ಧರಿಸಿದರು. ರುದ್ರಾಕ್ಷಿ ಸರವನ್ನು ಕೊರಳ ತುಂಬ ಹಾಕಿಕೊಂಡರು. ಏಕದಾರಿ ಹಿಡಿದು ಹಾಡುತ್ತ ಕುಳಿತರು. ಆ ಹಿರಿಯರು ಅವರಲ್ಲಿಗೆ ಬಂದರು. ಕಬೀರರನ್ನು ನೋಡಿದರು, ಅವಾಕ್ಕಾದರು. 'ಕಬೀರಾ, ನೀನು ನಮ್ಮವ  ನಮ್ಮ ಕಡೆಗೇ ಬಂದು ಬಿಡು' ಎಂದರು. ಈ ದೇಹದ ಸ್ಥಿತಿ ಯಾವದು?” ನನ್ನ ದೇಹದ ಜಾತಿ ಯಾವದು? ಎಂದು ಕೇಳಿದರು. ನನ್ನ ದೇಹದ ಮೇಲೆಯೇ ನೀವು ಲಕ್ಷ ಇಟ್ಟುಕೊಂಡು ಬಂದಿದ್ದೀರಿ. ನಾನು ನಿಮ್ಮನ್ನು ನೋಡಿ ಈ ಹುಬ್ಬಳ್ಳಿಗೆ ಬಂದಿಲ್ಲ; ಆ ಪರಮಾತ್ಮನನ್ನು ನಂಬಿಕೊಂಡು ಬಂದಿದ್ದೇನೆ. ಅವನೇ ಈ ಮಣ್ಣ ಮನೆಯಲ್ಲಿ ಎಂದೂ ಆರದ ತತ್ವಜ್ಞಾನದ ದೀಪ ಹೊತ್ತಿಸಿದ್ದಾನೆ. ಅವನ ಪಾದಕ್ಕೇ ಈ ಶರೀರವನ್ನು ಹಾಕಿದ್ದೇನೆ. ಆ ದೇವ ಈ ದೇಹವನ್ನು ಎಲ್ಲಾ ದರೂ ತಿಪ್ಪಿಯಲ್ಲಿ ಚೆಲ್ಲಲಿ, ನನಗೆ ಅದೇ ಗೌರವ; ಅದೇ ಪ್ರೀತಿ, ನನಗೆ ಯಾವ ತಾಜಮಹಲ್ಲೂ ಬೇಕಾಗಿಲ್ಲ. ನಾನು ಈಗ ಕೇವಲ ಗುರುಪುತ್ರ, ಗುರುವಿನ ಪಾದದಲ್ಲಿಯೇ ಇರುತ್ತೇನೆ' ಎಂದರು. ಬಂದವರು ಸುಮ್ಮನೇ ಹೋದರು.' ೧೯೧೫ ನೆಯ ಇಸ್ವಿ ಡಿಸೆಂಬರ ೧ ನೆಯ ತಾರೀಖಿನ ದಿವಸ ಬೆಳಕಿನ ಸಮಯದಲ್ಲಿ ಕಬೀರರು ಸಿದ್ಧರ ಶ್ರೀಪಾದಗಳಲ್ಲಿ ಅಡಗಿದರು, ಕಬೀರರ ದೇಹವನ್ನು ಮಠದ ಹಿಂಭಾಗದಲ್ಲಿ ಮಣ್ಣಿಗಿಡುವಾಗ ಸಿದ್ಧರು ತಮ್ಮ ಆಶೀರ್ವಾದದ ಅಭಯ ವರ ಹಸ್ತವನ್ನು ಕಬೀರರ ತಲೆಯ ಮೇಲಿಟ್ಟರು. ಮೋಹ ಮಾಯೆಗಳನ್ನು ಗೆದ್ದ ಆ ಮಹಾದೇವನ ಕಣ್ಣು ಹನಿಗೂಡಿದವು. ದುಃಖವು ಒತ್ತರಿಸಿ ಬಂದಿತು. ಸಣ್ಣ ಮಗುವಿನಂತೆ ಸಿದ್ಧರು ಅತ್ತರು . ''ಕಬೀರಾ, ನಾನು ಈ ಮಠ ಕಟ್ಟಿ ತಪ್ಪು ಮಾಡಿದೆ, ಲೌಕಿಕ  ವ್ಯವಹಾರದೊಳಗೆ ಸಿಲುಕಬಾರದಾಗಿತ್ತು. ತಪ್ಪಾಯಿತು. ಬಹಳ ಜನರ ಬ್ರಹ್ಮಜ್ಞಾನಿಗಳಾಗಲಿ, ಮುಮೂಕ್ಷುಗಳು ತಯಾರಾಗಲಿ, ಜನರ ಬದುಕು ಹಸನಾಗಲಿ ಹಗುರಾಗಲಿ ಎಂದು ಆಶಿಸಿದೆ. ಕಿಂಕರರೆಲ್ಲರೂ ಶಂಕರರಾಗಬೇಕು ಎಂದು ಶ್ರಮಿಸಿದೆ. ಭಕ್ತರ ಪಾಪತಾಪಗಳು ಪರಿಹಾರವಾಗಬೇಕು ಎಂದು ಹಾರೈಸಿದೆ. ದೊಡ್ಡ ಸಂಸಾರವೇ ಕೊರಳಿಗೆ ಬಿದ್ದಂತಾಯಿತು. ಹಾಲುಜೇನು ಹಾಕಿ ಮಠದಲ್ಲಿ ಕೆಲವು ಹಾವು ಚೇಳು ಸಾಕಿದಂತಾಯಿತು. ಮೊದಲಲ್ಲಿ ಬಂದ ಕಬೀದ, ಖಾಸಗತ್, ಷಣ್ಮುಖಸ್ವಾಮಿ, ಶರಣಪ್ಪ ಮೊದಲಾದವರಿಗೆ ಹರನ  ಹಸಿವು ಆಗಿತ್ತು. ಅವರ ಹಸಿವಿಗೆ ಅನ್ನ ನೀಡಿದೆ'' ಎಂದು ಹೇಳಿದರು. ಸಿದ್ದರಂಥವರು  ಅಳುವದನ್ನು ರಾಮಪ್ಪ ಜಾಧವ ಎಂಬವನು ನೋಡಿದನು. ಸಿದ್ದರಂಥವರಿಗೂ  ಮೋಹವೆಂಬುದು ಬಿಟ್ಟಿಲ್ಲವಲ್ಲ ಎಂದು ಅವರಿಗೆ ಅಚ್ಚರಿ ಎನಿಸಿತು. 'ದೇವಾ, ನಿಮ್ಮ ಆತ್ಮಜ್ಞಾನಿಗಳು, ನೀವೇ ಅಳುತ್ತೀರಲ್ಲ'' ಎಂದು ಅವನು ಕೇಳಿದನು. ಆಗ ಸಿದ್ದರು, “ರಾಮಾ, ಸೂರ್ಯನಂಥ ಸೂರ್ಯನಿಗೂ ಮೋಡವೆಂಬುದು ನಿಮಿಷ ಕಾಲ ಬಂದು ಕವಿಯುತ್ತದೆ. ತಿಳಿದವರಿಗೆ ಮೋಹದ ಹೊದಿಕೆ ಅರೆ ನಿಮಿಷ ಮಾತ್ರ, ಅದು ಜ್ಞಾನಿಯಾದವನಿಗೂ ತಪ್ಪಿದ್ದಲ್ಲ, ಅವನಲ್ಲಿಯೂ ಇವು ಅತಿ ಸೂಕ್ಷ್ಮ ರೂಪದಲ್ಲಿ ಉಳಿದಿರುತ್ತವೆ' ಎಂದು ಹೇಳಿದರು. ಈಗ ಮಠದಲ್ಲಿ ಉಗ್ರಾಣವಾಗಿರುವ ಉದ್ದವಾದ ಕೋಣೆಯೇ ಕಬೀರರ ಕೋಣೆಯಾಗಿತ್ತು. ಅದರ ತುಂಬೆಲ್ಲ ವಸ್ತ್ರ, ಅವರು ಸಂಗ್ರಹಿಸಿದ್ದ ವಿವಧ ಬಗೆಯ ಹಲವಾರು ಸಂಗೀತ ವಾದ್ಯಗಳೇ ಅಲ್ಲಿ ಎದ್ದು ಕಾಣುತ್ತಿದ್ದವಂತೆ. ಅಲ್ಲಿ ಬಾಗಿಲ ಬಳಿ ಕಬೀರರು ಕುಳಿತಿರುತ್ತಿದ್ದರು. ಅವರ ಅಪ್ಪಣೆ ಇಲ್ಲದೆ ಯಾವನೂ ಸಿದ್ಧರ ಬಳಿಗೆ ಹೋಗುತ್ತಿರಲಿಲ್ಲ, ಮಠದ ವ್ಯವಹಾರದಲ್ಲಿ ಹೊರಗಿನ ವ್ಯಕ್ತಿಗಳು ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಇಲಿ, ಹೆಗ್ಗಣಗಳಿಗೆ ಅತ್ತ ಸುಳಿಯುವ ಅವಕಾಶ, ಆಸ್ಪದಗಳೇ ಇರಲಿಲ್ಲ. ಅವರ ಅಗಲಿಕೆ ಮಠಕ್ಕೆ ಸಹಿಸದ ಒಂದು ಪೆಟ್ಟು ಎನಿಸಿತು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ದೇವರಕೊಂಡದ ದೇವರು ಚನ್ನವೃಷಬೆಂದ್ರ ಸ್ವಾಮಿಗಳಿಂದ ಸಿದ್ಧರ ಪರೀಕ್ಷೆ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ