ಗುರುಕೃಪೆಗೆ ಪಾತ್ರಳಾದ ಕೃಷ್ಣಾಬಾಯಿ
🌺 ಗುರುಕೃಪೆಗೆ ಪಾತ್ರಳಾದ ಕೃಷ್ಣಾಬಾಯಿ 🌺
ಆ ಕಾಡಿನಲ್ಲಿ ಹತ್ತೊಂಭತ್ತುನೂರಾ ಮೂರನೆಯ ಇಸ್ವಿಯಲ್ಲಿ ಸಪ್ಟೆಂಬರ್ ಹತ್ತನೆಯ ತಾರೀಖು ಆದಿತ್ಯವಾರ ಸರ್ವಪಿತೃ ಶ್ರಾದ್ಧದಿನ ಅಂದರೆ ಮಹಾಲಯ ಅಮಾವಾಸ್ಯೆಯ ದಿನ ಒಂಭತ್ತು ಗಂಟೆಗೆ ಕೃಷ್ಣಾಬಾಯಿಯ ಜನನವಾಯಿತು. ಅವಳ ಜನ್ಮಕಾಲದ ಗ್ರಹಗಳು ತಂದೆ ತಾಯಿಗಳಿಗೆ ಅಮಂಗಳಕರವಾದ್ದರಿಂದ ಶಿಶುವಾದ ಅವಳನ್ನು ದಾನವಾಗಿ ಕೊಡಬೇಕೆಂದು ಜೋಯಿಸರು ಹೇಳಿದರು. ಇದಕ್ಕೆ ತಂದೆ ತಾಯಿಗಳು ಒಪ್ಪಲಿಲ್ಲ. ಅದಕ್ಕಾಗಿ ಒಂದು ಆಕಳಿನ ಇಬ್ಬದಿಗಳಲ್ಲಿ ಇಬ್ಬರು ಹೆಂಗಸರು ನಿಂತು ಶಿಶುವಾದ ಅವಳನ್ನು ಒಬ್ಬಾಕೆಯು ಎತ್ತಿ ಹಸುವಿನ ಹೊಟ್ಟೆಯ ಕೆಳಭಾಗದಿಂದ ತಂದು ಇನ್ನೊಬ್ಬಳ ಕೈಗೆ ಕೊಟ್ಟು ಅವಳು ಪುನಃ ಆಕಳಿನ ಹೊಟ್ಟೆಯ ಕೆಳಗಡೆ ಮೊದಲನೆಯವಳ ಕೈಗೆ ಕೊಟ್ಟಳು. ಈ ಪ್ರಕಾರ ಮೂರು ಸಲ ಮಾಡಿ ದುಷ್ಟಗ್ರಹದ ಬಾಧೆ ತಪ್ಪಿತೆಂದು ಆ ಆಕಳನ್ನು ದಾನವಾಗಿ ಕೊಟ್ಟರು. ಮುಂದೆ ಅವಳಿಗೆ ಕೃಷ್ಣಾಬಾಯಿಯೆಂದು ಹೆಸರಿಟ್ಟರು.
ಅವರ ಮನೆಗೆ ಆಗಾಗ ಭಿಕ್ಷೆ ಬೇಡಲು ಬರುತ್ತಿರುವ ಸನ್ಯಾಸಿನಿಯೋರ್ವಳು, ಮನೆಯವರು ಕೃಷ್ಣಾಬಾಯಿಯ ವಿಷಯವಾಗಿ ಆಡುತ್ತಿದ್ದ ಮಾತುಗಳನ್ನು ಕೇಳಿ 'ಈ ಮಗು ನಿಮಗೆ ಬೇಡವಾದರೆ ನನಗೆ ಕೊಡಿರಿ ಜೊಪಾನ ಮಾಡುತ್ತೇನೆ' ಎಂದಳು. ಆಗ ತಂದೆ ತಾಯಿಗಳು ಆಕೆಯಿಂದ ಬತ್ತದ ತವಡನ್ನು ತೆಗೆದುಕೊಂಡು ಮಗುವನ್ನು ಅವಳಿಗೆ ಕೊಟ್ಟರು. ಆ ಮೇಲೆ ಸನ್ಯಾಸಿನಿಗೆ ಎರಡು ರೂಪಾಯಿ ಕೊಟ್ಟು ಪುನ: ಪಡೆದುಕೊಂಡರು. ಮಗು ಬೆಳೆದ ನಂತರ ಅವಳನ್ನು ಶಾಲೆಗೆ ಕಳಿಸಿದರು. ಚಿಕ್ಕಂದಿನಿಂದಲೂ ಅವಳಿಗೆ ದೇವರಲ್ಲಿ ಅಪಾರ ಪ್ರೀತಿಯಿತ್ತು. ದೇವರ ಚಿತ್ರದ ಮುಂದೆ ನಿಂತು ಸ್ತೋತ್ರಗಳನ್ನು ಹೇಳುವುದೆಂದರೆ ಬಹಳ ಇಷ್ಟವಾಗಿತ್ತು. ದೇವರ ಚಿತ್ರಗಳನ್ನು ನೆಟ್ಟ ದೃಷ್ಟಿಯಿಂದ ನೋಡುತ್ತ ತನ್ಮಯವಾಗಿ ಎಲ್ಲವನ್ನೂ ಮರೆತು ಬಿಡುತ್ತಿದ್ದಳು. ಶಾಲೆಯ ಒಬ್ಬ ಅಧ್ಯಾಪಕರ ಬಿರುನುಡಿಗೆ ನೊಂದು ಶಾಲೆ ಬಿಟ್ಟು ಮನೆಗೆಲಸಗಳನ್ನು ಮಾಡುವುದಲ್ಲದೆ ನೆರೆಮನೆಯವರ ಕೆಲಸಗಳಲ್ಲಿಯೂ ನೆರವಾಗುತ್ತಿದ್ದಳು. ಅವಳ ಹತ್ತನೆಯ ವಯಸ್ಸಿನಲ್ಲಿ ತಂದೆ ತೀರಿಕೊಂಡರು. ನಂತರ ತಾಯಿ, ಸೋದರ ಸೋದರಿಯವರೊಂದಿಗೆ ಭಟ್ಕಳದ ಅವರ ಸೋದರ ಮಾವನ ಮನೆಗೆ ಬಂದು ನೆಲೆಸಿದರು.
ಕೃಷ್ಣಾಬಾಯಿಗೆ ಹದಿಮೂರನೆಯ ವಯಸ್ಸಿನಲ್ಲಿ ಮುಂಬೈಯಲ್ಲಿ ಉದ್ಯೋಗದಲ್ಲಿದ ಕಲ್ಲೆ ಲಕ್ಷ್ಮಣರಾಯರೊಂದಿಗೆ ವಿವಾಹವಾಯಿತು. ಮುಂಬೈಯಲ್ಲಿ ಏಳು ವರ್ಷಗಳ ದಾಂಪತ್ಯ ಜೀವನದ ಕಾಲದಲ್ಲಿ ಅವಳಿಗೆ ಮೂರು ಮಕ್ಕಳಾದವು. ಕೃಷ್ಣಾಬಾಯಿಯು ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಮಕ್ಕಳನ್ನು ಕರೆದುಕೊಂಡು ಭಟ್ಕಳಕ್ಕೆ ಬಂದ ಮೇಲೆ ಅನಿರೀಕ್ಷಿತವಾಗಿ ಮುಂಬೈಯಲ್ಲಿ ಪತಿ ತೀರಿಕೊಂಡನು. ಅವರ ಮರಣಗಾಲದಲ್ಲಿ ನಾನು ಅವರ ಜೊತೆಗಿರಲಿಲ್ಲವೆಂಬ ಕೊರಗಿನಿಂದ ಬಹಳ ದುಃಖಗೊಂಡಳು. ಆಗ ಜೀವನದಲ್ಲಿ ಮಹತ್ತರ ಬದಲಾವಣೆಯಾಯಿತು. ಬೆಳಗಾವಿಯ ಸರಕಾರಿ ವೈದ್ಯಾಧಿಕಾರಿ ಅವಳ ಪತಿಯ ಅಣ್ಣ ಕೆ. ರಾಮರಾಯರು ಅವಳನ್ನು ಅವಳ ಮಕ್ಕಳನ್ನೂ ಕರೆದುಕೊಂಡು ಬಂದು ಆಶ್ರಯ ನೀಡಿದನು. ಆಗ ಅವಳು ಜೀವನದಲ್ಲಿ ಜಿಗುಪ್ಸೆ ತಾಳಿ ಮನಶ್ಯಾಂತಿಯಿಲ್ಲದ್ದರಿಂದ ಸತ್ತು ಹೋಗಬೇಕೆಂದು ಬಯಸಿದಳು. ಸ್ವಲ್ಪ ಸಮಯದಲ್ಲಿಯೇ ಅವಳ ಭಾವನಿಗೆ ಮಾಳರಾಶಿಗೆ ವರ್ಗವಾಯಿತು. ಅಲ್ಲಿ ಒಂದು ವರ್ಷ ಕಳೆದಳು.
ಮಾಳರಾಶಿಯಲ್ಲಿ ಅನೇಕರು ಆಫೀಮು ಸೇವಿಸುವ ಚಟದಲ್ಲಿದ್ದರು. ಅದನ್ನು ಶೇಖರಿಸಿಕೊಂಡು ಇಟ್ಟಿದ್ದಳು. ಒಂದು ದಿನ ತಾನು ಮಲಗುವಾಗ ತನ್ನ ಮಕ್ಕಳಾದ ಗಣೇಶ ಮತ್ತು ನಾರಾಯಣನ ಮಧ್ಯದಲ್ಲಿ ಮಲಗುವ ರೂಢಿಯಂತೆ ಅಲ್ಲಿ ಮಲಗದೆ ಒಂದು ಕಾಗದದಲ್ಲಿ ನಾನು ಹಾವು ಕಚ್ಚಿದ್ದರಿಂದ ಮಡಿದೆ' ಎಂದು ಬರೆದು ಮಕ್ಕಳ ಮಧ್ಯದಲ್ಲಿ ತಲೆದಿಂಬು ಇಟ್ಟು ಬಟ್ಟೆ ಹೊದಿಸಿ ದಿಂಬಿನ ಅಡಿಯಲ್ಲಿ ಚೀಟಿಯಿಟ್ಟಳು. ತಾನು ಬೇರೆಡೆಗೆ ಹಾಸಿಗೆ ಹಾಸಿ ತನ್ನ ತಲೆಯ ಹಿಂದೆ ಸ್ವಲ್ಪ ದೂರದಲ್ಲಿ ಶ್ರೀ ಸಿದ್ಧಾರೂಢರ ಭಾವಚಿತ್ರವಿಟ್ಟು ಮೇಲ್ಗಡೆಯಿರುವ ಸರ್ವ ಮಹಾತ್ಮರ ಭಾವಚಿತ್ರಗಳಿಗೆ ನಮಿಸಿದಾಗ ಕೊನೆಯಲ್ಲಿರುವ ಸಮರ್ಥ ರಾಮದಾಸರ ಭಾವಚಿತ್ರಕ್ಕೂ ನಮಿಸಿ ಅಫೀಮು ಸೇವಿಸಿ ಮಲಗಿದಳು.
ಸಾಯುವುದಕ್ಕೆ ಬೇಕಾದುದಕ್ಕಿಂತಲೂ ಹೆಚ್ಚಿಗೆ ಆಫೀಮು ತಿಂದರೂ ನಿದ್ರೆ ಬರಲಿಲ್ಲ. ಆಗ ಸಮರ್ಥ ರಾಮದಾಸರು (ಅವರ ವೇಷದ ಸಿದ್ಧಾರೂಢರು) ಅವಳ ತಲೆಯ ಬಳಿ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತಿರುವುದನ್ನು ಕಂಡಳು. ಸಾಯುವ ಇಚ್ಛೆಯಿದ್ದರೂ ಅವರನ್ನು ನೋಡಿದಾಗ ಅತೀವ ಆನಂದವನಿಸುತ್ತಿತ್ತು. ಹೀಗೆ ಹದಿನೈದು ನಿಮಿಷ ನಡೆಯಿತು. ಅಷ್ಟರಲ್ಲಿ ಎಚ್ಚರಗೊಂಡ ಮಗು ಗಣೇಶನು ಎದ್ದು ಕುಳಿತು ಅವನ ಅತ್ತೆ ಅನಸೂಯಾಳನ್ನು ಕೂಗಿ `ನನ್ನ ಅಮ್ಮ ಎಲ್ಲಿಗೆ ಹೋದಳು?' ಎಂದು ಕೇಳಿದನು. ಅದರಿಂದ ಸಮರ್ಥ ರಾಮದಾಸರು ಅದೃಶ್ಯರಾದರು. ತರುವಾಯ ಗೊಂದಲವಾಗಿ ಎಲ್ಲರೂ ಬಂದು ವಿಚಾರಿಸಿದಾಗ ಕೃಷ್ಣಾಬಾಯಿಯು ಅಫೀಮು ಸೇವಿಸಿರುವುದು ಗೊತ್ತಾಗಿ ರಾಮರಾಯರು ವಾಂತಿಯ ಔಷಧ ಕೊಟ್ಟು ಸಾವಿನಿಂದ ಬದುಕಿಸಿದರು. ಅವಳ ತಲೆದಿಂಬಿನ ಹಿಂದೆಯಿದ್ದ ಶ್ರೀ ಸಿದ್ಧಾರೂಢರ ಭಾವಚಿತ್ರ ನೋಡಿದ ರಾಮರಾಯರು ಅವಳಿಗೆ ಶ್ರೀ ಸಿದ್ಧಾರೂಢರಲ್ಲಿ ಬಹಳ ಭಕ್ತಿಯಿದೆಯೆಂದು ಭಾವಿಸಿ ಅವಳನ್ನೂ ಮತ್ತು ಪತ್ನಿ ಅನಸೂಯಾಬಾಯಿಯನ್ನು ಸಿದ್ಧಾರೂಢರ ಮಠಕ್ಕೆ ಕಳಿಸಿಕೊಟ್ಟರು. ಅವರು ಹೋಗಿ ಸಿದ್ಧರಲ್ಲಿ ಶರಣಾಗತರಾದಾಗ ಅನಸೂಯಾ ಬಾಯಿಯು ಸ್ವಾಮಿಗಳಿಗೆ ಕೃಷ್ಣಾಬಾಯಿಯ ವಿಷಯ ತಿಳಿಸಿದರು.
ಸ್ವಾಮಿಗಳು ಅವಳಿಗೆ ನಾಲ್ಕು ತಿಂಗಳು ಮಠದಲ್ಲಿರಲು ಹೇಳಿದರು. ಆಗ ಅಲ್ಲಿ ಕೃಷ್ಣಾಬಾಯಿಯಲ್ಲಿದ್ದ ಜಾತಿ ಮತ್ತು ಆಹಾರ ಭೇದಗಳು ನಾಶವಾದವು ಚಿಕ್ಕ ಮಗುವಿನಂತೆ ಆನಂದದಿಂದ ಭಗವನ್ನಾಮ ಸ್ಮರಿಸುತ್ತ ಸೇವೆ ಮಾಡುತ್ತಿದ್ದಳು ನಂತರ ಅವಳ ದುಃಖವನ್ನು ಹೋಗಲಾಡಿಸಿ ಶಾಂತಿಯಿಂದಿರಲು ಅಚಳ ಜೊತೆಯಲ್ಲಿದ್ದ ಚಂದರಗಿರಿ ಶಿವರಾಮರ ಪತ್ನಿ ರಾಧಾಬಾಯಿಯು ಅವಳನ್ನು ಸಿದ್ಧಾರೂಢರಲ್ಲಿ ಕರೆದುಕೊಂಡು ಹೋದಳು. ಕೃಷ್ಣಾಬಾಯಿಯು ಸ್ವಾಮಿಗಳ ಕೋಣೆಯಿಂದ ಸುಮಾರು ಐವತ್ತು ಅಡಿಗಳ ದೂರವಿರುವಾಗ 'ನಿನಗೆ ನಿನ್ನ ಇಚ್ಛೆಯಂತೆ ಸಾರಸ್ವತ ಗುರುವೇ ದೂರಕಿ ನಿನ್ನ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂಬ ವಾಣಿ ಕೇಳಿಸಿತು. ಆ ಧ್ವನಿಯು ಸಿದ್ಧಾರೂಢರಂತೆಯೇ ಇತ್ತು. ಆದ್ದರಿಂದ ಸ್ವಾಮಿಯವರೊಡನೆ ತನ್ನ ದುಃಖವನ್ನು ಏಕೆ ತೋಡಿಕೊಳ್ಳಬೇಕೆಂದು ಹಿಂತಿರುಗಿ ಹೋದಳು. ನಂತರ ಅನಸೂಯಾಬಾಯಿಯು ಸಿದ್ಧರಲ್ಲಿ ಬಂದು ಕೃಷ್ಣಾಬಾಯಿಗೆ ಮಂತ್ರೋಪದೇಶ ಮಾಡಬೇಕೆಂದು ಕೇಳಿಕೊಂಡಾಗ ಸದ್ಗುರುಗಳು ಓಂ ನಮಃ ಶಿವಾಯ ಮಂತ್ರದೀಕ್ಷೆ ಕೊಟ್ಟರು. ಮಹಾತ್ಮರ ಸನ್ನಿಧಿಯಲ್ಲಿ ನಿರಂತರ ದೇವರ ಸ್ಮರಣೆ ಮಾಡುತ್ತಿದ್ದುದರಿಂದ ಅವಳ ಜೀವನದಲ್ಲಿ ಮಹತ್ತರ ಬದಲಾವಣೆಯಾಗಿ ಅಂದಿನಿಂದ ದೇಹತ್ಯಾಗ ಮಾಡುವ ಬಯಕೆ ಎಂದೂ ಬರಲಿಲ್ಲ,
ಶಿವರಾತ್ರಿ ಮುಗಿದ ತರುವಾಯ ಕೃಷ್ಣಾಬಾಯಿ ಮತ್ತು ಮಕ್ಕಳು ಅನಸೂಯಾಬಾಯಿಯವರು ಮಾಳರಾಶಿಯಲ್ಲಿರುವ ರಾಮರಾಯರ ಮನೆಗೆ ಹೋದರು. ಅಲ್ಲಿ ದೇವರ ಮಂತ್ರಗಳನ್ನು ಜಪಿಸುತ್ತ ಮನಸ್ಸಿನಲ್ಲಿ ಯಾವುದೇ ವಿಚಾರ ಬಂದರೂ ಚಿತ್ರರೂಪದಲ್ಲಿದ್ದ ದೇವತೆಗಳ ಮತ್ತು ಮಹಾಪುರುಷರ ಮೂಲಕ ವಿಶ್ವವ್ಯಾಪಕನಾದ ಪರಮಾತ್ಮನೇ ಅವಳೊಡನೆ ಸಂಭಾಷಿಸುವಂತೆ ಭಾಸವಾಗುತ್ತಿತ್ತು. ಈ ಸಮಯದಲ್ಲಿ ರಾಮರಾಯರಿಗೆ ಶಿರ್ಸಿಗೆ ವರ್ಗವಾಯಿತು. ಅಲ್ಲಿ ಒಂದು ವರ್ಷ ಕಳೆದ ನಂತರ ಶಸ್ತ್ರ ಚಿಕಿತ್ಸೆಯಲ್ಲಿ ವಿಶೇಷ ವ್ಯಾಸಂಗಕ್ಕಾಗಿ ಡಾಕ್ಟರ ರಾಮರಾಯರು ವಿದೇಶಕ್ಕೆ ಹೋಗಬೇಕಾಯಿತು. ಆಗ ರಾಮರಾಯರ ಸಂಸಾರ, ಕೃಷ್ಣಾಬಾಯಿ ಮತ್ತು ಮಕ್ಕಳು ಹತ್ತೊಂಭತ್ತುನೂರಾ ಇಪ್ಪತ್ತೆಂಟು ಜೂನ್ ಏಳನೆಯ ತಾರೀಖಿಗೆ ಕಾಸರಗೋಡಿನಲ್ಲಿದ್ದ ರಾಮರಾಯರ ಮಾವನ ಮನೆಗೆ ಬಂದು ವಾಸವಾದರು.
ಅಲ್ಲಿ ಕೃಷ್ಣಾಬಾಯಿಯು ವೈರಾಗ್ಯ ಜೀವನ ನಡೆಸಿ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಬಯಕೆ ದಿನೇ ದಿನೇ ಹೆಚ್ಚಾಗತೊಡಗಿತು. ಕಾಸರಗೋಡಿಗೆ ಬಂದು ಕೆಲ ಸಮಯದಲ್ಲಿ ಪಟ್ಟಣಕ್ಕೆ ಸಮೀಪವಾದ ಗುಡ್ಡದ ಬುಡದಲ್ಲಿ ಹೊಸದಾದ ರಾಮದಾಸ ಸ್ವಾಮಿಗಳ ಆಶ್ರಮವಿದ್ದು, ಅವರ ದರ್ಶನಕ್ಕಾಗಿ ಮನೆಯವರ ಸಂಗಡ ಹೋದಳು. ಆಶ್ರಮ ಸಮೀಪಿಸಿದಂತೆ ಉತ್ಕಟ ಆನಂದ ಉಂಟಾಯಿತು. ಆಶ್ರಮದಲ್ಲಿ ಬಂದಾಗ ರಾಮದಾಸ ಸ್ವಾಮಿಗಳಿಗೆ ಕೃಷ್ಣಾಬಾಯಿಯು ಪ್ರಕಾಶ, ಪಾವಿತ್ರ, ಕರುಣೆಯ ಸಾಕಾರ ಮೂರ್ತಿಯಾಗಿ ಕಂಡರು.
ಈ ಹಿಂದೆ ತಮ್ಮಣ್ಣ ಶಾಸ್ತ್ರಿಗಳಿಂದ ಚಾಂದೇಕರ ಮಹಾರಾಜರಿಂದ ಮಂತ್ರೋಪದೇಶ ಪಡೆದ ಕೃಷ್ಣಾಬಾಯಿಯು ಶ್ರೀ ಸಿದ್ಧಾರೂಢರಿಂದಲೂ ಮಂತ್ರೋಪದೇಶ ಪಡೆದು ಅವರ ಅಮೃತವಾಣಿಯಿಂದ ನಿನಗೆ ಸಾರಸ್ವತ ಗುರುಗಳು ದೊರೆಯುತ್ತಾರೆ ಎಂದು ಆಶೀರ್ವದಿಸಿದ್ದರಿಂದ ಅವರ ವಚನದಂತೆ ಈಗ ಶ್ರೀ ರಾಮದಾಸರ ದರ್ಶನವಾಗಿ ಅವರ ಸತ್ಸಂಗ ದೊರೆಯಿತು. ಮೊದಲ ದರ್ಶನದ ನಂತರ ಪ್ರತಿದಿನ ಆಶ್ರಮಕ್ಕೆ ಬಂದು ನೆಲ ಗುಡಿಸುವುದು ಸಾರಿಸುವುದು ನೀರು ತರುವುದು ಬಟ್ಟೆ ಒಗೆಯುವುದು ಮೊದಲಾದ ಕೆಲಸಗಳನ್ನು ಮೌನದಿಂದ ಮಾಡುತ್ತಿದ್ದಳು. ಪವಿತ್ರ ರಾಮಮಂತ್ರವು ಯಾವಾಗಲೂ ಅವಳ ತುಟಿಯಲ್ಲಿ ನುಡಿಯುತ್ತಿತ್ತು. ಅವಳು ಯಾವುದರಲ್ಲೂ ತಲ್ಲೀನಳಾಗಿ ಮೈಮರೆತು ಕುಳಿತು ಬಿಡುತ್ತಿದ್ದಳು. ಸಂಜೆ ಮನೆಗೆ ಮರಳುವಾಗ ರಾಮದಾಸರೆ ಎಚ್ಚರಿಸಬೇಕಾಗುತ್ತಿತ್ತು. ಅವಳಿಗೆ ರಾಮದಾಸರ ಮೇಲಿದ್ದ ಪ್ರೇಮ, ಯಾವ ಮಾತಿನಿಂದಲೂ ವರ್ಣಿಸುವುದೂ ಅಸಾಧ್ಯ. ಅದಕ್ಕಾಗಿ ಅವಳು ತನ್ನೆಲ್ಲ ದೈಹಿಕ ಕೆಲಸಗಳನ್ನು ರಾಮದಾಸರಿಗೆ ಅರ್ಪಿಸಲು ಪ್ರಯತ್ನ ಪಡುತ್ತಿದ್ದಳು.
ಪ್ರತಿದಿನ ಆಶ್ರಮಕ್ಕೆ ಹೋಗುತ್ತಿದ್ದುದರಿಂದ ಅವಳ ಮೇಲೆ ಬಹಿರಂಗದ ಅಪಮಾನ ಮತ್ತು ನಿರ್ದಯ ನಿಂದೆಗಳ ಬಿರುಗಾಳಿ ಎದ್ದಿತು. ಅದಕ್ಕಾಗಿ ಗೊಣಗದೆ ಪರಮ ಸತ್ಯದ ಸಾಕ್ಷಾತ್ಕಾರಕ್ಕಾಗಿ ಎಲ್ಲ ಕಷ್ಟಗಳನ್ನು ನಗುನಗುತ್ತ ಸಹಿಸುತ್ತಿದ್ದಳು. ಕೆಲವು ಸಮಯ ರಾತ್ರಿಯೂ ಆಶ್ರಮದಲ್ಲಿ ಉಳಿಯುತ್ತಿದ್ದುದರಿಂದ ಬಾಹ್ಯ ಪ್ರಪಂಚದ ಪೀಡನೆಯು ಹೆಚ್ಚಾಗಿದ್ದರಿಂದ ಬಂಧು ಬಳಗದವರಿಂದಲೂ ಹೆಚ್ಚು ವಿಮುಖವಾಗತೊಡಗಿದಳು. ಈಗ ಅವಳಲ್ಲಿ ವಿಶೇಷ ಪರಿವರ್ತನೆ ಕಂಡು ಬಂದಿತು. ಎಲ್ಲ ಚಲನವಲನಗಳಲ್ಲಿ ನಿಷ್ಕಪಟ ಸರಳ ಮಗುವಿನಂಥ ಸ್ವಭಾವಗಳು ಪ್ರಕಟವಾದವು.
ಎಲ್ಲರೂ ತನ್ನನ್ನು ಮಗುವೆಂದೇ ಕರೆಯಲಿಚ್ಛಿಸಿದಳು. ಯಾವ ಭೇದವಿಲ್ಲದ ತೆರದ ಮನಸ್ಸಿನಿಂದ ಎಲ್ಲರೊಡನೆ ವ್ಯವಹರಿಸುತ್ತಿದ್ದುದರಿಂದ ಭಗವಂತನ ಮಗುವೆಂದೇ ಕಂಡು ಬರುತ್ತಿದ್ದಳು. ಎಲ್ಲ ಲಜ್ಞಾ ಭಾವಗಳು ತೊರೆದು ಹೋದವು. ಇದರಿಂದಾಗಿ ಸಂತ ಮೀರಾಬಾಯಿಯ ಶೈಲಿ ನಲೆಗೊಂಡಿತು. ಮಿಕ್ಕ ಸಮಯದಲ್ಲಿ ಇನ್ನಿತರ ಹೆಣ್ಣು ಮಕ್ಕಳಿಗೆ ನೆರವಾಗುತ್ತಿದ್ದುದರಿಂದ ಕಾಸರಗೋಡಿನಲ್ಲಿ ನೂರಾರು ಹೆಣ್ಣು ಮಕ್ಕಳ ಪ್ರೀತ್ಯಾದರಗಳಿಗೆ ಪಾತ್ರಳಾದಳು. ಒಂದು ದಿನ ತನ್ನ ಹತ್ತು ಹನ್ನೆರಡು ವರ್ಷಗಳ ಮಕ್ಕಳನ್ನು ಕರೆಯ ಮಕ್ಕಳ, ನಾನು ಎಲ್ಲರ ಸೇವೆ ಮಾಡುತ್ತ ಸಾಕ್ಷಾತ್ಕರಿಸುವುದಕ್ಕಾಗಿ ಇಲ್ಲಿಂದ ಹೊಗುತ್ತಿದ್ದೇನೆ' ಎಂದು ಹೇಳಿದಾಗ ಮಕ್ಕಲು ಹೋಗಬಾರದೆರೆಂದು ಎಷ್ಟು ಹೇಳಿದರೂ ಕೇಳದೆ ಉಟ್ಟ ಬಟ್ಟೆಯಿಂದ ಹೊರಟು ಹುಣ್ಣಿಮೆಯ ದಿನ ರಾತ್ರಿ ಒಂಭತ್ತು ಗಂಟೆಗೆ ಆಶ್ರಮಕ್ಕೆ ಬಂದಾಗ ಶ್ರೀ ರಾಮದಾಸರಿಗೆ ಅವಳ ವೈರಾಗ್ಯ ನೋಡಿ ಆಶ್ಚರ್ಯವೂ ಆನಂದವೂ ಆಯಿತು. ಅಂದಿನಿಂದ ರಾತ್ರಿ ಹಗಲುಗಳೆನ್ನದೆ ಆಶ್ರಮದಲ್ಲಿ ಉಳಿದಳು. ಒಂದು ದಿನ ಸ್ವಾಮಿಗಳನ್ನು ಕುರಿತು `ಸದ್ಗುರುವೇ, ಭಗವಂತನ ನಿಗುಣ, ನಿರಾಕಾರ, ಸರ್ವವ್ಯಾಪಕರೂಪದ ಸಾಕ್ಷಾತ್ಕಾರ ತೋರಿಸಬೇಕೆಂದು ಒತ್ತಾಯಪಡಿಸಿದಳು. ಆಗ ರಾಮದಾಸರು ರಾಮಮಂತ್ರ ಉಪದೇಶಿಸಿದರು. ಅವರು ನಿರ್ದೇಶಿಸಿದಂತೆ ನಿರ್ದಿಷ್ಟ ಆಸನದಲ್ಲಿ ಕುಳಿತು ಕೃಷ್ಣಾಬಾಯಿಯು ತಿಂಗಳುಗಟ್ಟಲೆ ಸಾಧನೆ ಮಾಡತೊಡಗಿದಳು.
ಒಂದು ದಿವಸ ಆಶ್ರಮದಲ್ಲಿ ರಾಮದಾಸರು ಮತ್ತು ಕೃಷ್ಣಾಬಾಯಿ ಇಬ್ಬರೇ ಇರುವಾಗ ಇಬ್ಬರು ದಾಂಡಿಗರು ಬಂದು ರಾತ್ರಿಯ ದೀಪ ಆರಿಸಿ ಕೃಷ್ಣಾಬಾಯಿಯ ಮೇಲೆರಗಿದರು. ಅವಳ ಕೊರಳು ಹಿಚುಕಿ ಕೊಲ್ಲುವುದೇ ಅವರ ಉದ್ದೇಶವಾಗಿತ್ತು, ಆಗ ರಾಮದಾಸರು ಮತ್ತು ಕೃಷ್ಣಾಬಾಯಿಯ ಮುಖದಿಂದ ಭಗವನ್ನಾಮ ಮಂತ್ರ ಧ್ವನಿಯು ಹೊರಹೊಮ್ಮಿದಾಗ ಅದು ಅವರಲ್ಲಿ ಅದ್ಭುತ ಭಯವನ್ನುಂಟು ಮಾಡಿದ್ದರಿಂದ ಅವರು ಪಲಾಯನಗೈದರು. ಭಗವಂತನ ಇಚ್ಛೆಯಂತೆ ಆ ದಿನ ಇಬ್ಬರೂ ಆಶ್ರಮ ಬಿಟ್ಟು ಒಬ್ಬ ಭಕ್ತನ ಮನೆಯಲ್ಲಿದ್ದು ಮರುದಿವಸ ಕಾಸರಗೋಡಿನಿಂದ ಸುಮಾರು ಹದಿನೈದು ಮೈಲು ದಕ್ಷಿಣಕ್ಕಿರುವ ಹೊಸದುರ್ಗಕ್ಕೆ ಬಂದರು,
ಅಲ್ಲಿ ಪದ್ಮಾವತಿ ಮತ್ತು ಅವಳ ಮಗಳ ಮನೆಯಲ್ಲಿ ಉಳಿದುಕೊಂಡರು. ಇಬ್ಬರೂ ಯಾತ್ರಿಕರು ಭಗವಂತನ ಕೃಪೆಯಿಂದ ಬಂದಿದ್ದಾರೆಂದು ತಿಳಿದು ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಂಡರು. ಆಗ ಕೃಷ್ಣಾಬಾಯಿಯ ಮನಸ್ಥಿತಿ ಹೇಗಿತ್ತೆಂದರೆ ಅತ್ಯಂತ ಶಾಂತಳೂ, ನಿರ್ಲಿಪ್ತಳೂ ಆಗಿದ್ದು ಅವಳ ಬಾಯಿಯಿಂದ ದುಃಖ ಅಥವಾ ಕೋಪಗಳ ಒಂದು ಶಬ್ದವೂ ಹೊರಬರಲಿಲ್ಲ. ಅವಳ ಮೇಲೆ ಆಕ್ರಮಣ ಮಾಡಿದವರನ್ನು ಖಂಡಿಸದೆ ಎಲ್ಲ ಯಾತನೆಗಳನ್ನು ಸಹಿಸಿ ಆ ಕ್ರೂರಿಗಳನ್ನು ಕ್ಷಮಿಸಿದಳು. ರಾಮದಾಸರು, ಕೆಲವು ಸ್ನೇಹಿತರ ಸೂಚನೆಯಂತೆ ಹೊಸದುರ್ಗದಿಂದ ಮೂರು ಮೈಲು ಅಂತರಲ್ಲಿದ್ದ ಗುಡ್ಡದ ಪ್ರದೇಶದಲ್ಲಿ ಆಶ್ರಮ ಕಟ್ಟಬೇಕೆಂದು ನಿರ್ಧರಿಸಿದರು.
ಈಗ ಆ ಪ್ರದೇಶವನ್ನು ರಾಮದಾಸ ನಗರವೆನ್ನುತ್ತಾರೆ.
ಈರ್ವರೂ ಅಲ್ಲಿಗೆ ಹೋಗಿ ರಾಮದಾಸರ ಪೂರ್ವ ಸಂಬಂಧಿಯಾದ ಸ್ನೇಹಿತರ ಮನೆಯಲ್ಲಿ ಉಳಿದಾಗ ಅವರು ಇವರನ್ನು ಬಹಳ ಪ್ರೀತಿಯಿಂದ ನೋಡಿಕೊಂಡರು. ಅಲ್ಲಿಯೇ ಸಣ್ಣ ಗುಡ್ಡದ ಮೇಲೆ ಯೋಗ್ಯ ಸ್ಥಳವನ್ನು ಆಯ್ಕೆ ಮಾಡಿ ಆಶ್ರಮದ ಕಟ್ಟಡ ಭರದಿಂದ ಸಾಗಿತು. ಕೃಷ್ಣಾಬಾಯಿಯು ಆ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಳು. ಆ ಸಮಯದಲ್ಲಿ ಬೆಳಕು ಹರಿಯುವಾಗಲೇ ಅವಳು ಒಬ್ಬಂಟಿಗಳಾಗಿ ಸಮೀಪದ ಗುಡ್ಡದ ತಪ್ಪಲಿನಲ್ಲಿ ಅಡ್ಡಾಡುತ್ತ ಅಥವಾ ಅಲ್ಲಿಯೇ ಕುಳಿತು ಧ್ಯಾನಮಗ್ನಳಾಗಿರುತ್ತಿದ್ದಳು. ಮುಂದೆ ಮೂರೇ ತಿಂಗಳಲ್ಲಿ ಆಶ್ರಮದ ಮುಖ್ಯ ಕಟ್ಟಡ ಮತ್ತು ಉಪಗ್ರಹಗಳು ನಿರ್ಮಾಣಗೊಂಡು ವಾಸಕ್ಕೆ ಯೋಗ್ಯವಾದವು. ಇದಕ್ಕೆ ಆನಂದಾಶ್ರಮವೆಂದು ಹೆಸರಿಟ್ಟರು.
ಆಶ್ರಮದ ಪ್ರವೇಶೋತ್ಸವಕ್ಕೆ ಬಂದು ಯೋಗ್ಯ ದಿನ ನಿಶ್ಚಯಿಸಲಾಯಿತು. ಉತ್ಸವ ಹತ್ತು ದಿನಗಳವರೆಗೆ ನಡೆಯಿತು. ಹತ್ತಿರದ ದೂರದ ಸಹಸ್ರಾರು ಜನರು ಭಾಗವಹಿಸಿದ್ದರು. ಪ್ರವಾಹದಂತೆ ಬರುವ ಜನರಿಗೆ ಕೃಷ್ಣಾಬಾಯಿಯವರು ಎಲ್ಲ ಸೌಕರ್ಯಗಳನ್ನು ಒದಗಿಸಿದರು.
ಈ ಬೃಹತ್ಸಮಾರಂಭದಲ್ಲಿ ಅವರು ಶಾಂತ, ಕ್ಷಮಾಶೀಲ, ತೇಜೋಮಯ ದೇವತೆಯಂತೆ ತೋರುತ್ತಿದ್ದರು. ಉತ್ಸವ ಮುಗಿದ ನಂತರ ಕೃಷ್ಣಾಬಾಯಿಯವರೇ ಆಶ್ರಮದ ಅಧಿದೇವತೆಯಾದರು. ಈ ನೂತನ ಆಶ್ರಮ ಸ್ಥಾಪಿಸಿದ ನಂತರ ಅವಳ ವಿಶ್ವಪ್ರೇಮವು ಸೇವಾಕಾರ್ಯದಲ್ಲಿ ಪ್ರಕಟವಾಯಿತು.
ಆಶ್ರಮಕ್ಕೆ ಬರುವ ನಾನಾಜಾತಿ ಮತ್ತು ವರ್ಗಗಳ ಜನರಿಗೆ ಅವಳು ಸಮದೃಷ್ಟಿಯಿಂದ ಸೇವೆ ಸಲ್ಲಿಸುತ್ತಿರುವುದರಿಂದ ಮಾತಾಜಿ ಕೃಷ್ಣಾಬಾಯಿಯೆಂದು ಪ್ರಖ್ಯಾತರಾದರು. ಅವರ ಆಶ್ರಮಕ್ಕೆ ಪರದೇಶಗಳಿಂದಲೂ ಭಕ್ತರು ಬರುತ್ತಿದ್ದರು. ಯಾರಾದರೂ ಆಶೀರ್ವಾದ ಅಥವಾ ಉಪದೇಶ ನೀಡಬೇಕೆಂದು ಬೇಡಿದರೆ `ನಾನೊಂದು ಮಗು' ಎನ್ನುತ್ತಿದ್ದಳು. ಅವರಿಗೆ ತಾಯಿಯೆಂದು ಕರೆದರೆ ತಕ್ಷಣ ಅಲ್ಲ, ಅಲ್ಲ ನಾನು ನಿಮ್ಮ ಮಗು, ಅದಕ್ಕಿಂತ ಹೆಚ್ಚೇನಿಲ್ಲ' ಎನ್ನುತ್ತಿದ್ದರು. ಇವು ಬರಿಯ ಮಾತಲ್ಲ. ಸದಾ ಸಹಜ ಶಿಶುಭಾವನೆಯ ಅರಿವಿನಲ್ಲಿ ಬದುಕುತ್ತಿದ್ರು. ಅವರ ದರ್ಶನ ಪಡೆದ ಹಿಂದೂ, ಮುಸಲ್ಮಾನ್, ಕ್ರೈಸ್ತ, ಬ್ರಾಹ್ಮಣ, ಶೂದ್ರ, ಅಸ್ಪೃಶ್ಯ ಯಾರೇ ಇರಲಿ ಮಾತಾಜಿಯವರಲ್ಲಿ ತಮ್ಮ ತಮ್ಮ ತಾಯಿಯನ್ನೇ ಕಾಣುತ್ತಿದ್ದರು.
ಉದಾತ್ತ ಚೇತನದ ಅದ್ಭುತ ಮಹತ್ವವನ್ನು ಬಣ್ಣಿಸಲು ಅಸಾಧ್ಯ ತಜ್ಞ ಗಳು ರಾಮದಾಸರನ್ನು ಪ್ರೇಮಮಯಿ ಪಪ್ಪಾ, ಕೃಪಾನಿಧಿ ಪಪ್ಪಾ ಮುಂತಾದ ಶಬ್ದಗಳಿಂದ ಸಂಬೋಧಿಸುವ ಇವರು, ಎಲ್ಲರಲ್ಲಿ ತನ್ನ ಗುರುವನ್ನು ಭಗವಂತನು ಕಾಣುವ ಅದ್ವೈತಭಾವದ ಮಾತಾಜಿಯವರ ಆಶ್ರಮದಲ್ಲಿ ಅನೇಕ ಸಾಧಕರಿದ್ದು, ಅಖಂಡ ನಾಮಸ್ಮರಣೆ ಕೀರ್ತನ ಪ್ರವಚನ ನಡೆಯುತ್ತಿದ್ದವು. ತನ್ನ ಗುರುಗಳ ಜೊತೆಗೆ ವಿದೇಶ ಪ್ರಯಾಣ ಮಾಡಿ ಬಂದರು. ಶ್ರೀ ರಾಮದಾಸರು ಹತ್ತೊಂಭತ್ತು, ನೂರಾ ಅರವತ್ತು ಮೂರರಲ್ಲಿ ಮಹಾಸಮಾಧಿ ಹೊಂದಿದ ನಂತರ ಅವರ ಅಗ್ರ ಶಿಷ್ಯರಾಗಿ ಮಾತಾಜಿಯವರೇ ಗುರುಗಳ ಕುಟುಂಬವನ್ನು ಸಲುಹಿದರು. ಆಶ್ರಮದ ಸಕಲ ಕಾರ್ಯಗಳನ್ನು ನಿರ್ವಹಿಸುತ್ತ ಭಕ್ತರ ಹೃದಯ ಮಂದಿರದ ಅಧಿದೇವತೆಯಾಗಿ ಮಮತೆಯ ಮಾತಾಜಿಯೆಂದು ಖ್ಯಾತರಾಗಿ ಹತ್ತೊಂಭತ್ತುನೂರಾ ಎಂಭತ್ತು ಒಂಭತ್ತರಲ್ಲಿ ಮಹಾಸಮಾಧಿ ಹೊಂದಿದರು.
ಮಾತಾಜಿ ಕೃಷ್ಣಾಬಾಯಿಯವರ ಭವ್ಯ ಆಶ್ರಮಕ್ಕೆ ದೇಶದ ದೂರ ದೂರದಿಂದ ಮತ್ತು ಪರದೇಶಗಳಿಂದಲೂ ಸಾಧಕರು, ಭಕ್ತರು ಮತ್ತು ಯಾತ್ರಿಗರು ಬರುತ್ತಿದ್ದು, ಅವರಲ್ಲರಿಗೆ ವಸತಿ ಮಾಡಲು ಆಧುನಿಕ ಸೌಕರ್ಯವುಳ್ಳ ಖೋಲಿಗಳು ಮತ್ತು ಪ್ರಸಾದ ತೆಗೆದುಕೊಳ್ಳಲು ಉಚಿತ ವ್ಯವಸ್ಥೆ ಇದೆ. ಅಲ್ಲದೆ ಅಲ್ಲಿ ಶ್ರೀ ಸಿದ್ಧಾರೂಢರ ಭಾವಚಿತ್ರವು ಇಂದಿಗೂ ಪೂಜೆಗೊಳ್ಳುತ್ತಿರುವುದನ್ನು ನೋಡಬಹುದು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
