ಸಿದ್ಧರ ನೋಟಮಾತ್ರದಿಂದ ಹುಣ್ಣು ವಾಸಿಯಾಯಿತು

 🌺 ಸಿದ್ಧರ ನೋಟಮಾತ್ರದಿಂದ ಹುಣ್ಣು ವಾಸಿಯಾಯಿತು 🌺



ಮುಂಬೈಯಲ್ಲಿ ಶ್ರೀ ಸಿದ್ಧಾರೂಢರ ಅನೇಕ ಭಕ್ತರಿದ್ದರು. ಅವರಲ್ಲಿ ವಸಂತರಾವ ದಾಬೋಳಕರ ಅವರ ಪತ್ನಿ ಲಕ್ಷ್ಮೀಬಾಯಿಯವರು ಮೇಲಿಂದ ಮೇಲೆ ಹುಬ್ಬಳ್ಳಿಗೆ ಬಂದು ಸಿದ್ಧರ ದರ್ಶನ ತೆಗೆದುಕೊಂಡು ಅವರ ಸೇವೆ ಮಾಡಿ ಅವರ ಕೃಪೆಗೆ ಪಾತ್ರರಾಗಿದ್ದರು. ಒಂದು ದಿನ ಲಕ್ಷ್ಮೀಬಾಯಿಯವರ ಎದೆಯಲ್ಲಿ ಸಣ್ಣ ಗಾತ್ರದ ಹುಣ್ಣು ಕಾಣಿಸಿಕೊಂಡಿತು. ಬರಬರುತ್ತ ದೊಡ್ಡದಾಗಿ ಅದರ ನೋವಿನಿಂದ ಬದುಕುವುದೇ ಕಷ್ಟವಾಗಿತ್ತು. ಇದರಿಂದ ಮನೆಯ ಜನರು ಗಾಬರಿಗೊಂಡರು. ವಸಂತರಾಯರು ಲಕ್ಷ್ಮೀಬಾಯಿಯನ್ನು ವೈದ್ಯರಿಗೆ ತೋರಿಸಿದಾಗ ಅವರು ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಹೇಳಿದರು. ಈ ಸೂಚನೆ ಮನೆಯವರಿಗೆ ಒಪ್ಪಿಗೆಯಾಗಲಿಲ್ಲ. ಏಕೆಂದರೆ ಅವರು ಸಿದ್ಧರ ಅನನ್ಯ ಭಕ್ತರಾಗಿದ್ದರಿಂದ ಒಂದು ಮಾತು ಸಿದ್ಧರಿಗೆ ತಿಳಿಸಬೇಕೆಂದು ತಕ್ಷಣ ತಂತಿ ಮೂಲಕ ಗುರುಗಳ ಅಭಿಪ್ರಾಯ ಕೇಳಿದರು.
ಆಗ ಸಿದ್ದಾರೂಢರು ಶಸ್ತ್ರ ಚಿಕಿತ್ಸೆಯ ಅವಶ್ಯಕತೆಯಿಲ್ಲ. ಲಕ್ಷ್ಮೀಬಾಯಿಯನ್ನು ಬೇಗನೆ ಮಠಕ್ಕೆ ಕರೆದುಕೊಂಡು ಬರಬೇಕು' ಎಂದು ಉತ್ತರ ಕಳಿಸಿದರು. ಸ್ವಾಮಿಗಳೇ ನಮಗೆ ತಂದೆ ತಾಯಿ ಬಂಧು ಬಳಗವೆಂದು ನಂಬಿದ ವಸಂತರಾಯರು ತಮ್ಮ ಪತ್ನಿಯನ್ನು ಕರೆದುಕೊಂಡು ಹುಬ್ಬಳ್ಳಿಗೆ ಬಂದು ಸಿದ್ದರ ದರ್ಶನ ತೆಗೆದುಕೊಂಡು ಲಕ್ಷ್ಮೀಬಾಯಿಯನ್ನು ಸಿದ್ಧರ ಚರಣಗಳ ಮುಂದೆ ಮಲಗಿಸಿದರು. ಆಗ ಲಕ್ಷ್ಮೀಬಾಯಿಯು ತನ್ನ ನೋವನ್ನು ತಡೆಯಲಾರದೆ ಕಣ್ಣೀರಿಡುತ್ತ `ಸದ್ಗುರುವೇ, ಇಂಥ ಆಪತ್ತಿನಲ್ಲಿ ನೀನೇ ನನ್ನ ಕಾಯಬೇಕು ಗುರುರಾಯಾ' ಎಂದು ಕಣ್ಣೀರಿಡುತ್ತ ದೈನ್ಯದಿಂದ ಬೇಡಿಕೊಂಡಳು. ಆಗ ಸದ್ಗುರುಗಳು ಕರುಣೆಯಿಂದ ಲಕ್ಷ್ಮೀಬಾಯಿಯ ಕಣ್ಣಲ್ಲಿ ಕಣ್ಣಿಟ್ಟು ಏಕದೃಷ್ಟಿಯಿಂದ ನೋಡಹತ್ತಿದರು. ಆಗ ಅವರ ತಪಸ್ಸಿನ ಶಕ್ತಿ ಕಿರಣಗಳು ಅವಳ ಕಣ್ಣಲ್ಲಿ ಸೇರಿದಾಗ ಅವಳು ಸಾವಕಾಶವಾಗಿ ತಾನಾಗಿಯೇ ಕೈ ಕಾಲುಗಳನ್ನು ಎಳೆದುಕೊಂಡಳು. ಆಮೇಲೆ ಅವಳ ಹತ್ತಿರ ಕುರಿತು ಸಿದ್ಧರು ಸಾವಕಾಶವಾಗಿ ಅವಳ ಮೈಮೇಲೆ ಕೈಯಾಡಿಸಿದಾಗ ತಂತಾನೇ ಎದ್ದು ಸಾವಕಾಶವಾಗಿ ನಡೆಯಹತ್ತಿದಳು. ಒಂದೆರಡು ದಿನಗಳಲ್ಲಿ ಅವಳ ಎದೆಯ ಹುಣ್ಣು ಒಣಗಿ ನೆಟ್ಟಗಾದಳು. ಅವರು ಕೆಲವು ದಿವಸ ಮಠದಲ್ಲಿದ್ದು ಸಿದ್ಧರ ಸೇವೆ  ಮಾಡಿ ಅವರನ್ನು ಪೂಜಿಸಿ ಕಾಣಿಕೆ ಕೊಟ್ಟು, ಅವರನ್ನು ಕೊಂಡಾಡಿ ಅವರ ನಾಮಸ್ಮರಣೆ ಮಾಡುತ್ತ ಮುಂಬೈಗೆ ಹೋದರು.
ಮುಟ್ಟಿ, ಕೆಲರಂ ಮಾತನಾಡಿ ಕೆಲರಂ ನೋಡಿ ಕೆಲರಂ ಉದ್ಧರಿಸುವ ಸಿದ್ಧಾರೂಢನು ಲಕ್ಷ್ಮೀಬಾಯಿಗಾದ ದುಃಖವನ್ನು ಕೇವಲ ನೋಟದಿಂದ ಕಳೆದ ಭಗವಂತನೇ ಅವನು.


 🌺 ಆರೂಢರಿಂದ ರಾಮಕೃಷ್ಣರಾವರ ಉದ್ಧಾರ 🌺

ರಾಮಕೃಷ್ಟರಾವ ಪಡಬಿದ್ರಿಯವರು ಸುಸಂಸ್ಕೃತ ಮನೆತನದಲ್ಲಿ ಜನ್ಮ ತಾಳಿ ವಿದ್ಯಾವಂತರಾಗಿ ಮಾಮಲೇದಾರ ಪದವಿ ಪಡೆದುಕೊಂಡಂಥವರು. ಅವರ ಪತ್ನಿ ಸೀತಾಬಾಯಿ ಪತಿಯಲ್ಲಿ ಪ್ರೇಮವಿದ್ದು ಉಭಯತರು ಸಿದ್ಧ ಚರಣಗಳಲ್ಲಿ ನಿರಭಿಮಾನದಿಂದ ಸೇವೆ ಮಾಡುತ್ತಿದ್ದರು. ಮಾಮಲೇದಾರರಾದರೂ ಪುರಾಣ ಶ್ರವಣದಲ್ಲಿ ದೇಹಾಭಿಮಾನ ಬಿಟ್ಟು ಕೇಳುತ್ತಿದ್ದರು. ಹುಬ್ಬಳ್ಳಿಯಲ್ಲಿದ್ದಾಗ ಸಚ್ಚಿದಾನಂದರ (ತಮ್ಮಣ್ಣ ಶಾಸ್ತ್ರಿ) ಪುರಾಣ ಕೇಳಿ ರಾಮಕೃಷ್ಣರಾವರು ಶಾಸ್ತ್ರಿಗಳಿಗೆ ಕೇಳಿದರು `ಸಂಸಾರ ಬಂಧನದಿಂದ ಪಾರಾಗಲು ಈ ಸಮಯದಲ್ಲಿ ಯಾರಿಗೆ ಶರಣು ಹೋಗಬೇಕು ತಿಳಿಸಿರಿ' ಎಂದಾಗ ಸಚ್ಚಿದಾನಂದರು ಹೇಳಿದರು 'ಸದ್ಗುರು ಸಿದ್ದಾರೂಢ ಯತೀಶ್ವರರೇ ಈ ಭವದಿಂದ ಪಾರು ಮಾಡಲು ಸಾಧ್ಯ. ಅವರಿಗೆ ಶರಣು ಹೋಗಿ ಜನ್ಮ ಸಾಫಲ್ಯ ಮಾಡಿಕೊಳ್ಳಿರಿ' ಎಂದರು.

ಸಚ್ಚಿದಾನಂದರ ವಾಣಿ ಅವರಿಗೆ ನಾಟಿತು. ರಾಮಕೃಷ್ಣರಾವರು ಪತ್ನಿ ಸಹಿತ ಸಿದ್ಧಾಶ್ರಮಕ್ಕೆ ಹೋಗಿ ಶ್ರೀಗಳ ಚರಣಗಳಲ್ಲಿ ಸಾಷ್ಟಾಂಗ ನಮಿಸಿ ಪ್ರಾರ್ಥಿಸಿಕೊಂಡರು. `ಗುರುವೇ, ಸಚ್ಚಿದಾನಂದರ ಆದೇಶದ ಪ್ರಕಾರ ನಿಮ್ಮ ಶರಣು ಬಂದಿದ್ದೇವೆ. ನಮ್ಮನ್ನು ಉದ್ಧರಿಸಿರಿ' ಎಂದರು. ಆಗ ಸಿದ್ದರು ಅವರ ಮಾತನ್ನು ಕೇಳಿ ಪ್ರಸನ್ನರಾಗಿ ತಮ್ಮ ಸಮೀಪ ಕೂಡಿಸಿಕೊಂಡು ಹೇಳಿದರು ರಾಮಕೃಷ್ಣರಾವರೇ, ಸಾಧನೆಗಳಲ್ಲಿ ಎರಡು ಪ್ರಕಾರಗಳಿವೆ. ಒಂದು ಭಕ್ತಿ ಮಾರ್ಗ, ಎರಡನೆಯದು ವೇದಾಂತಮಾರ್ಗ. ಇದು ಕಠಿಣವಾಗಿದ್ದು, ಭಕ್ತಿಮಾರ್ಗ ಸರಳವಾಗಿದೆ.

ಇದರಿಂದ ಈಶನ ಕರುಣೆ ಪ್ರಾಪ್ತವಾಗುತ್ತದೆ. ರಾಮ, ಕೃಷ್ಣ, ಶಂಕರ ಇವರಲ್ಲಿ ಭೇದವಿಲ್ಲ. ಹೇಗೆಂದರೆ ಒಡವೆಗಳು ಅನಂತವಿದ್ದರೂ ಅದರಲ್ಲಿ ಬಂಗಾರವೊಂದೇ ಇರುವಂತೆ ನಾಮರೂಪಗಳಲ್ಲಿ ಭೇದ ಕಂಡುಬಂದರೂ ಅದರಲ್ಲಿರುವ ಆತ್ಮವಸ್ತು  ಒಂದೇಯಾಗಿದೆ. ನಿಮ್ಮ ಪ್ರೇಮವು ಕೃಷ್ಣನ ಮೇಲೆ ಹೆಚ್ಚಾಗಿರುವಂತೆ ತೋರುತ್ತದೆ. ಆದ್ದರಿಂದ ಕೃಷ್ಣನಾಮಸ್ಮರಣೆಯನ್ನು ಬಹು ಪ್ರೀತಿಯಿಂದ ಮಾಡಬೇಕು' ಎಂದು ಹೇಳಿ ಮಂತ್ರೋಪದೇಶ ಮಾಡಿ ಇಬ್ಬರಿಗೂ ಆಶೀರ್ವಾದ ಮಾಡಿ ಕಳಿಸಿದರು.

ಗುರುಗಳ ಆದೇಶದಂತೆ ಸಾಧನ ಮಾಡತೊಡಗಿದರು. ಒಂದು ದಿನ ಮುಂಜಾನೆ ರಾಮಕೃಷ್ಣರಾವರು ಹೊರಗಡೆ ತಿರುಗಾಡಲು ಹೋದಾಗ ಅವರು ಅಕಸ್ಮಾತ್ ಕೃಷ್ಣನಾಮ ಮರೆತು ರಾಮನಾಮ ಉಚ್ಚರಿಸುತ್ತ ನಡೆದರು. ಆಗ ದಾರಿಯ ಪಕ್ಕದಲ್ಲಿ ಸಿದ್ಧಾರೂಢರೆ ಭೈರಾಗಿ ವೇಷದಲ್ಲಿ ಕುಳಿತಿದ್ದರು. ರಾಮಕೃಷ್ಣರನ್ನು ನೋಡಿ ಬೈರಾಗಿಯು ಕೂಗಿ ಕರೆದರು. ಆಗ ಮಾಮಲೇದಾರರು ಅವರ ಹತ್ತಿರ ಹೋಗಿ ನಿಂತಾಗ ಭೈರಾಗಿ ಹೇಳಿದ `ನೀವು ಕೃಷ್ಣಭಕ್ತರಿದ್ದು ರಾಮನಾಮ ನುಡಿಯುತ್ತಿರುವಿರಲ್ಲ' ಎಂದು ಅವರ ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ ಹೇಳಿದರು. ಇದನ್ನು ಕೇಳಿದ ಮಾಮಲೇದಾರರು, ಇವರಾರೋ ಯೋಗಿಪುರುಷರಿರಬಹುದೆಂದು ಭೈರಾಗಿಗೆ ಹೇಳಿದರು `ಭೈರಾಗಿಗಳೇ, ನೀವು ನಮ್ಮ ಮನೆಗೆ ಬನ್ನಿರಿ' ಎಂದು ಹೇಳಿದಾಗ ಭೈರಾಗಿ ಹೇಳಿದ `ನನಗೆ ಬೇರೆ ಕೆಲಸವಿದೆ. ಹೋಗುತ್ತೇನೆ. ನಿಮ್ಮ ಜೇಬಿನಲ್ಲಿ ಏಳು ಆಣೆ ಹಣವಿದೆ. ಅದನ್ನು ಕೊಟ್ಟರೆ ಮಹದುಪಕಾರವಾಗುತ್ತದೆ' ಎಂದನು.

ಆಗ ಜೇಬಿನಲ್ಲಿ ಕೈ ಹಾಕಿ ತೆಗೆದು ನೋಡಿದಾಗ ಏಳು ಆಣೆ ಹಣವಿದ್ದಿತು. ಅದನ್ನು ಭೈರಾಗಿಗೆ ಕೊಡುವಾಗ ಭೈರಾಗಿ ಮತ್ತೆ ಹೇಳಿದ ನೀವು ಈಗ ಮನೆಗೆ ಹೋದಾಗ ಸರಕಾರದಿಂದ ನಿಮಗೆ ಬಹಳಷ್ಟು ದೊಡ್ಡ ಮಾನಪತ್ರ ಟಪಾಲಿನಿಂದ ಬರುತ್ತದೆ' ಎಂದು ಹೇಳಿ ಅದೃಶ್ಯನಾದನು. ಇದನ್ನು ಕೇಳಿದ ಮಾಮಲೇದಾರನಿಗೆ ಆಶ್ಚರ್ಯವಾಗಿ ಮನೆಗೆ ಬಂದು ಟಪಾಲಿನ ದಾರಿ ನೋಡುತ್ತಿರುವಾಗ ಭೈರಾಗಿ ಹೇಳಿದಂತೆ ಟಪಾಲಿನಿಂದ ಮಾನಪತ್ರ ಬಂದಿತು. ಏಕೆಂದರೆ ಯುದ್ಧದ ಸಮಯದಲ್ಲಿ ಮಾಮಲೇದಾರರು ಬಹಳ ಸಹಾಯ ಮಾಡಿದ್ದರಿಂದ ಸರಕಾರವು ಸಂತೋಷಗೊಂಡು ಮಾನಪತ್ರ ಕಳಿಸಿತ್ತು.

ಭೈರಾಗಿ ಹೇಳಿದಂತೆ ಎಲ್ಲವೂ ನಡೆದಿತ್ತು. ಇದರಿಂದ ಸಂತೋಷಗೊಂಡ ಮಾಮಲೇದಾರರು ಸಚ್ಚಿದಾನಂದರ ಕಡೆಗೆ ಬಂದು ಈ ಬೈರಾಗಿ ಯಾರಿರಬಹುದು ತಿಳಿಸಿರಿ' ಎಂದಾಗ ಸಚ್ಚಿದಾನಂದರು ನೀವು ನೋಡಿದ ಬೈರಾಗಿ ಯಾರೂ ಅಲ್ಲ ಶ್ರೀ ಸಿದ್ಧಾರೂಢರೇ ಇರಬಹುದು' ಎಂದರು. ಆಗ ಇಬ್ಬರೂ ಸೇರಿ ಮಠಕ್ಕೆ ಬಂದು ಸಿದ್ದರಿಗೆ ನಮಿಸಿ ನಡೆದ ಘಟನೆಯನ್ನು ತಿಳಿಸಿದರು. ಗುರುಗಳು ನಸುನಗುತ್ತ ಯಾರಲ್ಲಿ ಗುರುಗಳ ಬಗ್ಗೆ ಉತ್ತಮ ಭಾವವಿರುವುದೋ ಅವರಲ್ಲಿ ಗುರುಸಿದ್ಧನಿರುತ್ತಾನೆ' ಎಂದು ಹೇಳಿದರು. ಆಗ ಸಚ್ಚಿದಾನಂದರು ರಾಮಕೃಷ್ಣರನ್ನು ಕುರಿತು ನೀವು ಸಿದ್ದ ಗುರುವಿನ ವಾಕ್ಯದಂತೆ ಆಚರಣೆ ಮಾಡುತ್ತಿದ್ದರೆ ಅವರು ನಿಮ್ಮ ಬೆನ್ನ ಹಿಂದೆಯೇ ಇರುತ್ತಾರೆ' ಎಂದು ಹೇಳಿ ಇಬ್ಬರೂ ಗುರುಗಳಿಗೆ ವಂದಿಸಿ ಹೋದರು.

ಕೆಲವು ದಿವಸ ಕಳೆದ ನಂತರ ಮಾಮಲೇದಾರ ರಾಮಕೃಷ್ಣರಿಗೆ ಗದಗ ಗ್ರಾಮಕ್ಕೆ ವರ್ಗವಾಯಿತು. ಅಲ್ಲಿಯೂ ಭವಾನೀಸಾ ಕಬಾಡಿಯೆಂಬವರು ಸಚ್ಚಿದಾನಂದರನ್ನು ಕರೆದುಕೊಂಡು ಹೋಗಿ ಪುರಾಣ ಕಾರ್ಯಕ್ರಮ ನಡೆಸುತ್ತಿದ್ದರು. ಅಲ್ಲಿಯೂ ರಾಮಕೃಷ್ಣರು ಪುರಾಣ ಹೇಳುತ್ತಿದ್ದರು. ಹೀಗೆ ನಿತ್ಯ ನಾಮಸ್ಮರಣ ಶ್ರವಣ ಮನನ ಮಾಡಿದಂತೆ ಅವರ ಅಂತಃಕರಣ ಶುದ್ಧವಾಗಿ ಯಾವ ಪಾತಕಗಳೂ ಸಂಭವಿಸಲಿಲ್ಲ. ಹೀಗೆ ಅವರ ಮಾನವ ಜೀವನ ಸಫಲವಾಯಿತು. ಹೀಗೆ ಸತ್ಕರ್ಮ ಆಚರಿಸುತ್ತಿರುವ ಅವರಿಗೆ ಮರಣ ಸಮೀಪಿಸಿತು. ಒಂದು ದಿನ ಅವರ ಸ್ವಪ್ನದಲ್ಲಿ ಸಿದ್ದ ಗುರುಗಳು ಪ್ರಕಟರಾಗಿ ಇಂದಿನಿಂದ ಒಂಭತ್ತನೆಯ ದಿನ ನಿಶ್ಚಿತವಾಗಿ ದೇಹ ಬಿಡುತ್ತೀರಿ' ಎಂದು ಹೇಳಿ ಅದೃಶ್ಯರಾದರು.

ಮುಂಜಾನೆ ಮಾಮಲೇದಾರರು ಎದ್ದು ಸ್ವಪ್ನ ವಿಷಯ ನೆನಪಿಸಿಕೊಂಡು ಸಂತೋಷಪಟ್ಟರು. ಏಕೆಂದರೆ ಗುರುಪುತ್ರರಿಗೆ ಮರಣದ ಭಯವಿರುವುದಿಲ್ಲ. ಹರಿದ ಅರಿವೆಗಳನ್ನು ಎಸೆಯುವಂತೆ ದೇಹವನ್ನು ಎಸೆಯುತ್ತಾರೆ. ಇರಲಿ, ಆಗ ಸಚ್ಚಿದಾನಂದರನ್ನು ಕರೆಸಿ ಸ್ವಪ್ನ ವಿಚಾರ ತಿಳಿಸಿದರು. ಸಚ್ಚಿದಾನಂದರು ಮತ್ತು ಸಿದ್ಧಾರೂಢರಲ್ಲಿ ಅವರಿಗೆ ಯಾವ ವ್ಯತ್ಯಾಸವೂ ಕಾಣಿಸಲಿಲ್ಲ. ಮತ್ತೆ ಹೇಳುತ್ತ ಈ ಸಮಯದಲ್ಲಿ ಸಿದ್ದಾರೂಢರೇ ನಿಮ್ಮನ್ನು ಕಳಿಸಿದಂತಿದೆ. ಈಗ ನಾನು ಏನು ಮಾಡಬೇಕು ತಿಳಿಸಿರಿ' ಎಂದಾಗ ಸಚ್ಚಿದಾನಂದರು ಹೇಳಿದರು, ಭಗವದ್ಗೀತೆಯಲ್ಲಿ ಹೇಳಿದಂತೆ ಈ ಸಮಯದಲ್ಲಿ ನಾಮಸ್ಮರಣೆಯೇ ಮುಖ್ಯವಾಗಿದೆ. ಅದನ್ನು ಅನುಸರಿಸಿರಿ' ಎಂದು ಹೇಳಿ ಆಶೀರ್ವದಿಸಿ ಹೋದರು. ದತ್ತೋಬರಾವ ಮುಲ್ಕಿ ಡಾಕ್ಟರರು ಮಾಮಲೇದಾರರ ಅಳಿಯಂದಿರು. ಅವರನ್ನು ಕರೆಸಿ ಹೇಳಿದರು ಶ್ರೀ ಸಚ್ಚಿದಾನಂದ ಗುರುಗಳಿಂದ ಏಳು ದಿವಸ ಪುರಾಣ ನಡೆಸಬೇಕು' ಎಂದರು. ಆಗ ದತ್ತೋಬರಾವರು ಸಚ್ಚಿದಾನಂದರನ್ನು ಕರೆಸಿ ಪುರಾಣ ಪ್ರಾರಂಭಿಸಿದರು.

ಸಚ್ಚಿದಾನಂದರು ಪುರಾಣ ಪ್ರಾರಂಭಿಸಿ ಭಾಗವತದಲ್ಲಿ ಕೃಷ್ಣ ಮತ್ತು ಉದ್ದವನ ಸಂವಾದವನ್ನು ಹೇಳಿದರು. ಎಂಟು ದಿನಗಳಾದವು, ನಾಮಸ್ಮರಣೆ ನಡೆದಿತ್ತು, ಜ್ವರ, ಹೆಚ್ಚಾಗುತ್ತ ಹೋಯಿತು. ಆಗ ಮಾಮಲೇದಾರರು ಹೇಳಿದರು ನಾಳೆ ಮಧ್ಯಾಹ್ನ ಮೂರು ಗಂಟೆಗೆ ನಾವು ವೈಕುಂಟಕ್ಕೆ ಹೋಗುತ್ತೇವೆ. ನನ್ನ ಸಲುವಾಗಿ ಯಾರೂ ಚಿಂತೆ ಮಾಡಬಾರದು. ಇದು ಮರಣವಲ್ಲ. ಉತ್ಸವವೆಂದು ತಿಳಿದು ಅಂತ್ಯಕ್ರಿಯೆ ಮಾಡಬೇಕು. ಹುಬ್ಬಳ್ಳಿಗೆ ಹೋಗಿ ಗುರುಗಳ ತೀರ್ಥಪ್ರಸಾದ ತಂದು ಕುಡಿಸಿರಿ' ಎಂದರು. ಅದರಂತೆ ತೀರ್ಥಪ್ರಸಾದ ತಂದು ಕುಡಿಸಿದರು. ಒಂಭತ್ತನೆಯ ದಿನ ಸಚ್ಚಿದಾನಂದರನ್ನು ಕರೆಸಿ ಅವರ ಪಾದ ಪೂಜಿಸಿ ಅವರ ಚರಣತೀರ್ಥ ಕುಡಿದು ಅವರ ಪಾದಗಳನ್ನು ಹಿಡಿದು ನಾನು ಮಹಾಪಾಪಿ ನನ್ನನ್ನು ಕ್ಷಮಿಸಿ ಉದ್ಧರಿಸಿ ಎಂದು ಕಣ್ಣೀರಿಟ್ಟರು.

ಆಗ ಸಚ್ಚಿದಾನಂದರು ಹೇಳಿದರು 'ನಾಮಸ್ಮರಣದಿಂದ ಅಜಮಿಳನ ಪಾಪ ನಾಶ ಮಾಡಿ ದೇವನು ವೈಕುಂಠಕ್ಕೆ ಕರೆದುಕೊಂಡು ಹೋದನು. ನೀನು ಅಖಂಡವಾಗಿ ನಾಮ ಭಜಿಸಿ ಸದ್ಗುರುಗಳ ಕೃಪೆಯನ್ನು ಪಡೆದುಕೊಂಡಿರುವಿ. ಪಾಪಲೇಶವಿಲ್ಲ. ನಿಮಗೆ ಮೋಕ್ಷವು ಸಿದ್ಧವಾಗಿದೆ' ಎಂದು ಆಶೀರ್ವದಿಸಿದರು. ಆಗ ರಾಮಕೃಷ್ಣರಾವರು ನಾಮಸ್ಮರಣೆ ಮಾಡುತ್ತಿರುವಂತ ಪ್ರಾಣೋತೃಮಣವಾಯಿತು. ರಕ್ತಾಕ್ಷಿ ಸಂವತ್ಸರ ಆಶ್ವಿನಮಾಸ ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ರಾಮಕೃಷ್ಣರು ವೈಕುಂಠವಾಸಿಗಳಾದರು. ಅವರ ಆದೇಶದಂತೆ ಯಾರೂ ದುಃಖ ಪಡದೆ ಎಲ್ಲರೂ ನಾಮಸ್ಮರಣೆ ಮಾಡುತ್ತ ಮಹೋತ್ಸವವೆಂಬಂತೆ ಸ್ಮಶಾನಕ್ಕೆ ಹೋದರು. ಅಲ್ಲಿ ಹೋದಾಗ ಇದೊಂದು ಲಗ್ನ ಸಮಾರಂಭವೇನೋ ಎನಿಸುತ್ತಿತ್ತು. ಎಲ್ಲರೂ ಆನಂದದಿಂದ ಕೊನೆಯ ಸಂಸ್ಕಾರ ಮಾಡಿ ಬಂದರು.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಹೆಣ್ಣು ಮಗುವು ಗಂಡು ಮಗುವಾಗಿ ಜನಿಸಿತು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ