ಸಿದ್ಧರ ಮೇಲಿನ ಭಕ್ತಿಗೆ ಭಕ್ತಳ ಬಾಳು ಬೆಳಗಿತು
ಸಿದ್ಧರ ಭಕ್ತಳ ಬಾಳು ಬೆಳಗಿತು 🌺
ಒಬ್ಬಳು ಸೊಸೆಗೆ ಸಿದ್ದರ ನುಡಿಯನ್ನಾಲಿಸುತ್ತ ಕುಳಿತರೆ, ಬಡತನ, ಹಸಿವು ಸಂಸಾರಿಕ ತಾಪತ್ರಯ ಒಂದೂ ಗಮನಕ್ಕೆ ಬರುತ್ತಿರಲಿಲ್ಲ. ಹೀಗೆ ಮಹಾತ್ಮರ ನುಡಿಯನ್ನು ಕೇಳುತ್ತ ಕೂಡುವದಾಗಿದ್ದರೆ ಬದುಕು ಎಂಥ ಸಂತಸದ ಸುಗ್ಗಿ ಯಾಗಬಹುದಲ್ಲ ಎಂದು ಅವಳು ಕೇಳುತ್ತ ಚಿಂತಿಸುತ್ತಿದ್ದಳು. ಶಾಸ್ತ್ರದ ವಿಷಯ ಕೇಳತೊಡಗಿದರೆ, ಅವಳ ಹಸಿದ ಹೊಟ್ಟೆಗೆ ಹಾಲನ್ನು ಉಣಿಸಿದಂತಾಗುತ್ತಿತ್ತು. ಆ ತಾಯಿ ಬೆಳಿಗ್ಗೆ ಮತ್ತು ಸಂಜೆಗೆ ತಪ್ಪದೇ . ಶಾಸ್ತ್ರ ಕೇಳುವುದಕ್ಕೆ ಹೋಗುತ್ತಿದ್ದಳು. ಮನೆಯ ಎಲ್ಲ ಕೆಲಸ ಬೋಗಸೆ ,ಮಾಡಿ ಪೂರೈಸುತ್ತಿದ್ದಳು. ಸಿದ್ದರ ದೇವವಾಣಿ ಕೇಳಿ ಅವಳ ಅಂತಕರಣದ ಬಾಗಿಲು ತೆರೆಯಿತು ಕಿಡಕಿ ತೆರೆದವು. ಅವಳಿಗೆ ಉಳಿದ ವಿಷಯಗಳು ಸೇರದಾದವು. ಧ್ಯಾನ, ಪೂಜೆ ಪ್ರಾರ್ಥನೆಯಲ್ಲಿ ಮನವು ಮುಳುಗತೊಡಗಿತು. ಅವಳ ಅತ್ತೆಗೆ ಇಂಥ ಸಂಸ್ಕಾರವೀರಲಿಲ್ಲ ; ಸೊಸೆಯ ವರ್ತನೆ ಅವಳಿಗೆ ಹಿಡಿಸದಾಯಿತು. ಹೆಣ್ಣುಮಕ್ಕಳಿಗೆ ಇದೇನು ಚಂದ? ಎಂದು ಅವಳು ಮೊದಲಲ್ಲಿ ಗೊಣಗಿದಳು. ಶಾಸ್ತ್ರ ಶ್ರವಣ, ಪುರಾಣ ಪ್ರವಚನ ಅದೆಲ್ಲ ಮುದುಕರಾದ ಮೇಲೆ, ಹರೇದ ಹೆಣ್ಣು ಮಕ್ಕಳಿಗೆಲ್ಲ ಅದ್ಯಾಕ? ಎನ್ನತೊಡಗಿದಳು. ಮತ್ತೊಬ್ಬರ ಮನೆಗೆ ಹೋಗುವದು ಒಳ್ಳೆಯದಲ್ಲ' ಎಂದು ಅತ್ತೆಯು ಸೊಸೆಯನ್ನು ಎಚ್ಚರಿಸಿದಳು. ಸೊಸೆಯು ಅತ್ತೆಯ ಕಾಲಿಗೆರಗಿ, 'ಅತ್ತೆ ಸಿದ್ಧರು ಶಿವನೇ ಆಗಿದ್ದಾರೆ. ಅವರನ್ನು ಕಂಡರೆ ಕಂಗಳ ಪಾಪವೇ ಹರಿದು ಹೋಗುತ್ತದೆ. ಅವರು ನೋಡಿದವರಿಗೆ ಮರು ಜನ್ಮವೇ ಇಲ್ಲ. ಅತ್ತೆ, ನೀನೂ ಆ ಮಹಾತ್ಮರ ದರ್ಶನಕ್ಕೆ ಬಾ ಎಂದು ಸೊಸೆಯು ಬೇಡಿದಳು. “ಏನೇ ನೀನೊಬ್ಬಳು ಕೆಡುವದಲ್ಲದೆ ನನ್ನನ್ನು ಕೆಡುವಂತೆ ಮಾಡುತ್ತೀಯಾ ? ನಾನು ಈ ಮನೆಯ ಯಜಮಾನತಿ, ನನ್ನ ಮಾತನ್ನು ಮೀರಿ ನೀವು ಪ್ರವಚನಕ್ಕೆ ಹೋಗಕೂಡದು' ಎಂದು ಅಪ್ಪಣೆ ಮಾಡಿದಳು. “ಅತ್ತೆ, ನೀನು ಬಂಡೆಗಲ್ಲನ್ನು ತಲೆಯ ಮೇಲೆ ಹೊತ್ತುಕೊಂಡು ನಿಲ್ಲೆಂದು ಹೇಳಿದರೂ ನಾನು ಹೊತ್ತುಕೊಂಡು ನಿಲ್ಲುತ್ತೇನೆ, ಮನೆಯ ಎಲ್ಲ ಕಾರ್ಯಗಳನ್ನು ಪೂರೈಸುವೆ, ವಿರಾಮ ಕಾಲದಲ್ಲಿ ನಾನು ಸಿದ್ಧರ ಶಿವವಾಣಿಯನ್ನು ಕೇಳಲು ಹೋಗುತ್ತೇನೆ. ದಯವಿಟ್ಟು ಅವಕಾಶ ಕೊಡು'' ಎಂದು ಪ್ರಾರ್ಥಿಸಿದರು. ಅತ್ತೆಯ ಕರುಳು ಕರಗಲಿಲ್ಲ. ಸೊಸೆಯು ಮನೆಯ ಹೊಸ್ತಿಲನ್ನು ದಾಟುವದೇ ದುಸ್ತರವಾಯಿತು. ಅತ್ತೆಯು ಮಗನ ಮುಂದೆ ಏನೇನೋ ಹೇಳಿದಳು. ಅವನು ನಿಷ್ಕಾರಣವಾಗಿ ಹೆಂಡತಿಯನ್ನು ಮನದಣಿಯ ಹೊಡೆಯಲಾರಂಭಿಸಿದನು. ಅತ್ತೆಯ ಮಾತನ್ನು ಸೊಸೆ ಮೀರಲಿಲ್ಲ. ಮನೆಯಲ್ಲಿಯೇ ಉಳಿದ ಸೊಸೆಯು ಸಿದ್ಧರ ಆಗಮನವನ್ನು ಬಾಗಿಲಲ್ಲಿ ನಿಂತು ಕಾಯತೊಡಗಿದಳು. ಕಿಡಕಿಯಲ್ಲಿ ಇಣಕಿ ನೋಡತೊಡಗಿದಳು. ಸಿದ್ಧರ ದರ್ಶನಕ್ಕೆ ಚಡಪಡಿಸತೊಡಗಿತು. ಆತುರತೆಯಿಂದ ಸೊಸೆ ಕಿಡಕಿಯಲ್ಲಿ ನೋಡುತ್ತಿರುವದನ್ನು ಕಂಡ ಅತ್ತೆ ಸೊಸೆಯ ಶೀಲವನ್ನು ಶಂಕಿಸಿದಳು. ಏನಪ್ಪ ನೀನು ಮನೆಯಲ್ಲಿಲ್ಲದಾಗ ನಿನ್ನ ಹೆಂಡತಿ ಕಿಡಕಿಯಲ್ಲಿ ಯಾರನ್ನೂ ನೋಡುತ್ತ ನಿಲ್ಲುತ್ತಾಳೆಂದು ಅತ್ತೆ ಮಗನ ಕಿವಿಯಲ್ಲಿ ವಿಷ ಬೀಜವನ್ನು ಬಿತ್ತಿದಳು. ಹುಂಬನಾದ ಗಂಡನು ತಾಯಿಯ ಮಾತನ್ನು ನಂಬಿ ಹೆಂಡತಿಯನ್ನು ನಿಷ್ಕಾರಣವಾಗಿ. ಶಿಕ್ಷಿಸತೊಡಗಿದನು. ಅತ್ತೆಯ ಮಾತನ್ನು ಮೀರಲಾರದೆ ಸೊಸೆ ಹೊಸ್ತಿಲವನ್ನು ದಾಟಲಿಲ್ಲ. ಅವಳ ಜೀವ ಸಿದ್ದರ ಶಿವನುಡಿಯನ್ನು ಕೇಳಲು ಹೊಳೆ ಹೊಳೆಯಾಗಿ ಹರಿಯುತ್ತಿತ್ತು. ಸಿದ್ದರ ಆಗಮನವನ್ನು ಅವಳು ಕಿಡಕಿಯಲ್ಲಿ ಇಣಿಕಿ ನೋಡುವುದನ್ನು ಅವಳ ಅತ್ತೆ ಕ೦ಡಳು. ಇವಳು ಕಿಡಕಿಯಲ್ಲಿ ಹಣಿಕಿ ಹಾಕಿ ಯಾರನ್ನೂ ನೋಡುತ್ತಿದ್ದಾಳೆಂದು ಕಲುಷಿತ ಮನಸ್ಸಿನ ಲೆಕ್ಕ ಹಾಕಿದಳು. ಸೊಸೆಯಶೀಲ ಚಾರಿತ್ರ್ಯಗಳನ್ನೇ ಶಂಕಿಸಿದ ಅತ್ತೆ, “ನಿನ್ನ ಹೆಂಡತಿ ಕಿಡಕಿಯಲ್ಲಿ ಯಾರನ್ನೂ ನೋಡುತ್ತ ನಿಲ್ಲುತ್ತಾಳಪ್ಪ '' ಎ೦ದು ಮಗನಿಗೆ ಹೇಳಿದಳು, ಉರಿಯುವ ಬೆಂಕಿಯಲ್ಲಿ ಎಣ್ಣೆ ಸುರುವಿದಂತಾಯಿತು. ಮಗನು ಹೆಂಡತಿಯನ್ನು ಮೈನುಗ್ಗಾಗುವಂತೆ ಬಡಿದನು. ಅವಳು ತುಟಿ ಎರಡು ಮಾಡಲಿಲ್ಲ. ಮನುಷ್ಯರ ಮನಕ್ಕೆ ತಿಳಿಯದಿದ್ದರೇನಾಯಿತು. ಮಹಾದೇವರ ಮನಕ್ಕಾದರೂ ತಿಳಿಯಲಾರದೇನು? ಎಂದು ಅವಳು ಎಲ್ಲವನ್ನೂ ಮೌನಿಯಾಗಿ ಸಹಿಸಿದಳು. ಗಂಡನೂ ತನ್ನ ಶೀಲವನ್ನು ಸಂಶಯದ ದೃಷ್ಟಿಯಿಂದ ಕಂಡಾಗ ಅವಳಲ್ಲಿಯ ಬದುಕಬೇಕೆಂಬ ಬಲಕುಂದಿತು. ಮಾನ ಹೋದ ಮೇಲೆ ಏನಿದ್ದರೇನು ಎಂದು ಆ ತಾಯಿ ಮರುಗಿದಳು. ಗಂಡನಿಗೆ ಬೇಡವಾದದ್ದು ಗುಂಡು ಕಲ್ಲಿಗೂ ಬೇಡವಾಗುತ್ತದಂತೆ ಯಾಕಿರಬೇಕು ! ಯಾರಿಗಾಗಿ ಇರಬೇಕು ? ಎಂಬ ಛಲ ಅವಳಲ್ಲಿ ಬಲಿಯಿತು. ತನ್ನ ಜೀವವನ್ನು ಬಲಿಕೊಟ್ಟೆ ಈ ಕಲಂಕವನ್ನು ಅಳುಕಿಸಿಕೊಳ್ಳಬೇಕೆಂದು ಅವಳು ಲೆಕ್ಕ ಹಾಕಿದಳು. ಸಿದ್ಧರ ದರ್ಶನ ಭಾಗ್ಯ ಇಲ್ಲವಾದುದು, ಮನೆಯ ದೇವರೇ ತನ್ನ ಶೀಲವನ್ನು ಸಂಶಯದ ದೃಷ್ಟಿಯಿಂದ ನೋಡತೊಡಗಿದುದು ; ಅವಳಿಗೆ ನುಂಗಲಾರದ ವಿಷ ತುತ್ತುಗಳಾದವು. ಸಾವು ಅವಳಿಗೆ ಬಲು ಪ್ರೀತಿಯದಾಯಿತು. ಅದುಬೇಸಿಗೆಯ ಬಿರು ಬಿಸಿಲಿನ ಒಂದು ಮಧ್ಯಾಹ್ನ, ಅತ್ತೆ ಬಿಸಿಲಿನ ತಾಪ ತಾಳದೆ ಅಡಿಗೆಮನೆಯಲ್ಲಿ ಅಡ್ಡಾಗಿದ್ದಳು. ಗಂಡನು ಹೊಲಕ್ಕೆ ಹೋಗಿದ್ದನು. ಮನೆಯಲ್ಲಿ ಮತ್ಯಾರೂ ಇರಲಿಲ್ಲ. ಸೊಸೆಯು ಅಂದು ತನ್ನ ಮನೆಗೆಲಸವನ್ನು ತ್ವರಿತದಿಂದ ಮಾಡಿ ಮುಗಿಸಿದಳು. ಎಲ್ಲ ಯಾದರೂ ನೀರ ಪಾಲಾದರಾಯಿತೆಂದು ಅವಳ ಜೀವ ಆಶಿಸಿತು. ಬಡತನವನ್ನು ನುಂಗಿಕೊಂಡ ಕಷ್ಟಗಳನ್ನು ಸಹಿಸಿದೆ. ಬಂಜೆಯೆಂಬ ಅಪವಾದ ತಾಳಿಕೊಂಡೆ. ಶೀಲಗೆಟ್ಟವಳು ಎಂದು ಹೆತ್ತ ತಾಯಿ ಸಮಾನಳಂತಿದ್ದ ಅತ್ತೆಯೇ ನುಡಿದ ಮೇಲೆ ಆತ್ಮಾರ್ಪಣೆಯೇ ತಕ್ಕ ಮಾರ್ಗ ಎಂದು ಅವಳು ಎಣಿಸಿದಳು. ಚಾಪೆಯ ಮೇಲೆ ಉದ್ದಕ್ಕೆ ಬಿದ್ದ ಅತ್ತೆಯ ಕಾಲ ಬಳಿಯಲ್ಲಿ ಸೊಸೆಯು ವಿನಮ್ರಳಾಗಿ ಬಾಗಿ ನಮಸ್ಕರಿಸಿದಳು. ಮನೆಯನ್ನೆಲ್ಲ ಅವಳು ಒಂದು ಸಲ ತುಂಬುಗಂಗಳಿಂದ ನೋಡಿದಳು. ಅವಳ ಬಾಳಿನೊಂದಿಗೆ ಹೊಂದಿಕೊಂಡು ಬಂದ ಒಂದೊಂದು ವಸ್ತುಗಳೂ ಅವಳಿಗೆ ಮೂಕವಾಣಿಯಲ್ಲಿ ಹೋಗಬೇಡ. ನಮ್ಮನ್ನು ತೊರೆದ ಹೋಗಬೇಡ ಎಂಬಂತೆ ಅವಳನ್ನ ನಿಟ್ಟಿಸಿ ನೋಡುತ್ತಿದ್ದಳು. ಅವಳ ಮನ ತುಂಬಿ ಬಂದಿದ್ದು, ಕಣ್ಣು ಹನಿಗೂಡಿದವು. ಸಾವು ಅವಳನ್ನು ಕೂಗಿ ಕರೆಯಿತು. ಅವಳು ತನಗರಿಯದಂತೆ ಬಾಗಿಲು ದಾಟಿದಳು. ದಾರಿ ತುಳಿಯತೊಡಗಿದಳು. ಒಮ್ಮೆಗೇ ಅವಳ ಕಾಲುಗಳು ನಿಂತವು ಅವಳು ನೋಡಿಯೆ ನೋಡಿದಳು. ಅವಳೇ ಅವಳ ಕಣ್ಣುಗಳನ್ನು ನಂಬಂದಂತಾದ ಕನಸೋ, ಇದು ನನಸೋ ಎಂದು ಅವಳು ಸಂಶಯಗೊಂಡಳು. ಎದುರಿಗೇ ಸಿದ್ಧಾರೂಢರು ನಿಂತಿದ್ದಾರೆ, ಅವಳು ಓಡಿ ಹೋದವಳೇ ಅವರ ಪಾದದಲಿ ತನ್ನ ಶರೀರವನ್ನು ಚೆಲ್ಲಿದಳು ಕಂಬನಿಗಳೇ ಗುರುವಿನ ಕಾಲನ್ನು ತೊಳೆದವು, ಅವಳು ದೇಹ ದಣಿಯುವಂತೆ, ಮನ ಬರಿದಾಗುವಂತೆ ಅತ್ತಳು. ದುಃಖದ ಕೋಡಿ ಹರಿದು ಹೋಯಿತು, ಆ ತಾಯಿ ತನ್ನ ವ್ಯಥೆಯನ್ನು ಕಥೆಯನ್ನಾಗಿ ಮಾಡಿ ಹೇಳಿದಳು, ಆಹುದು ತಾಯಿ ಗೊತ್ತು ಎಂದು ಸಿದ್ದರ ನುಡಿದರು. ಮಗಳೇ, ಇದೊಂದು ಅನಿಷ್ಟ ಗಳಿಗೆ ದುಡುಕಬೇಡ, ತಾಯಿ, ನೀನು ಸಹನೆ ಮಹಾ ಮೂರ್ತಿಯಾಗಬೇಕು, ಸಹಿಸು, ನಿನಗೆ ಕಲ್ಯಾಣವಾಗುವದು' ಎಂದು ತಲೆದಡವಿ ಹರಸಿದರು. ಅವಳಿಗೆ ಅಲ್ಲಿಯೇ ನಿಂತುಕೊಂಡು ಒಂದು ಸಣ್ಣ ಕಥೆ ಹೇಳಿದರು. ತಾಯಿ ಕೇಳು. ಒಮ್ಮೆ ಆದಿಶೇಷ ನಾಗಲಿಂಗನು ಅಲೆದಾಡುತ್ತ ಹೊರಟಿದ್ದನು. ಮಲದಲ್ಲಿ ಬಿದ್ದು ಹೊರಳಾಡುವ ಒಂದು ಜಂತು ತಲೆಯೆತ್ತಿ ಆ ದೊಡ್ಡ ಸರ್ಪವನ್ನು ನೋಡಿತು. ಹಾವಿನ ವೈಭವ, ಅದರ ತಲೆಯಲ್ಲಿ ಹೊಳೆಹೊಳೆಯುವ ರತ್ನಗಳನ್ನು ಕಂಡು ಹೇಸಿಕೆಯಲ್ಲಿ ಬಿದ್ದು ಒದ್ದಾಡುವ ಆ ಜಂತಿಗೆ ಆಸೂಯೆ ಎನಿಸಿತು. ಹೇಗಾದರೂ ಮಾಡಿ ಆ ನಾಗಲಿಂಗನಿಗೆ ಅಣಕಿಸಬೇಕೆಂಬ ದುರ್ಬುದ್ದಿ ಆ ಚೋಟುದ್ದ ಹುಳುವಿನ ಮನದಲ್ಲಿ ಹುಟ್ಟಿತು. ಗೋಣನ್ನು ಮೇಲೆ ಮಾಡಿ, 'ಏ ನಾಗ್ಯಾ ಗೂಗ್ಯಾ' ಎಂದು ಕೂಗಿತು. ಹಾವು ತನ್ನನ್ನು ನೋಡಿತು ಎಂದು ಆ ಜಂತು ಮತ್ತೆ ಮಲದಲ್ಲಿ ಮರೆಯಾಯಿತು. ಆ ಸರ್ಪವು ತನ್ನನ್ನು ಈ ಪರಿಯಾಗಿ ಹಳಿಯುವವರಾರು? ಎಂದು ಸುತ್ತೆಲ್ಲ ನೋಡಿತು. ಎಲ್ಲಿಯೂ ಯಾರೂ ಕಾಣಲಿಲ್ಲ. ದೊಡ್ಡ ಮನಸ್ಸು ಮಾಡಿ ಮುಂದೆ ಹೊರಟಿತು. ಆಗ ಆ ಹುಳ ಮತ್ತೆ ಮುಖವನ್ನು ಮೇಲೆತ್ತಿ, ನಾಗ್ಯಾ ಗೂಗ್ಯಾ ಎಂದು ಬೈಯುವದನ್ನು ಸರ್ಪವು ಕಂಡಿತು. ಆ ಹಾವಿಗೆ ಆ ಹುಳುವನ್ನು ಕಂಡು ಕೋಪ ಬರಲಿಲ್ಲ. ಕನಿಕರ ಹುಟ್ಟಿತು. ಆಗ ಸರ್ಪವು ಆ ಸಣ್ಣ ಹುಳುವಿಗೆ ಎಲೇ ಕ್ಷುದ್ರ ಜಂತುವೇ, ನೀನು ಇದ್ದುದೇ ಹೇಸಿಕೆಯಲ್ಲಿ, ಅದರಿಂದಲೇ ನಿನ್ನಲ್ಲಿ ಹೇಸಿ ಬುದ್ಧಿ ಬಂದಿರುವದು. ನಿನಗೆ ದೊಡ್ಡ ಗುಣ, ಉದಾತ್ತ ವಿಚಾರಗಳು ಹೇಗೆ ಬರಬೇಕು. ಎಲೆ ಜೀವವೇ ! ನೀನು ಎಷ್ಟೊತ್ತು ಹಳಿಯಬಹುದು. ಇನ್ನು ಸ್ವಲ್ಪ ಹೊತ್ತಿನಲ್ಲಿ ಬಿಸಿಲು ಬರುತ್ತದೆ. ಆಗ ಬಿಸಿಲಿನ ಬಾಧೆಗೆ ಸೆಟೆದು ಹೋಗುತ್ತಿ ಎಂದು ಹೇಳಿ ಅದು ಮುಂದೆ ಹೋಯಿತು, ತಾಯಿ ! ನೀನು ಆದಿಶೇಷನಂತೆ. ನಿನ್ನತ್ತೆ ಅವಳು ಹೇಸಿಕೆಯೊಳಗಿನ ಹುಳ ಇದ್ದಂತೆ. ಅದು ತನ್ನ ಬುದ್ಧಿ ಬಲ, ಸ್ಥಾನ ಬಲದಿಂದ ಕಾಡುತ್ತದೆ. ಅದಕ್ಕೆ ನೀನು ಏನೂ ಚಿಂತೆ ಮಾಡಬೇಡ ; ಬಿಸಿಲು ಬರುತ್ತದೆ. ವ್ಯಥೆ ಬೇಡ ಮಗಳೇ ಮನೆಗೆ ಹೋಗು' ಎಂದು ಹರಸಿದನು. ಆ ತಾಯಿ ಮನೆಗೆ ಬಂದಳು. ಆಗ ಮನವು ಹಗುರಾಗಿತ್ತು. ಮಾರನೆಯ ದಿವಸ ಬೆಳಿಗ್ಗೆ ಆ ಮನೆಯ ಒಬ್ಬಳು ಹಿರಿಯ ಹೆಣ್ಣು ಮಗಳು ಊರ ಮುಂದಿನ ಕೆರೆಯಲ್ಲಿ ತೇಲುತ್ತಿದ್ದಳು. ಬಿಸಿಲು ಏರಿತ್ತು. ಜಂತು ಸತ್ತಿತ್ತು. ಪಾಪದ ಗಡಿಗೆ ಒಡೆದಿತ್ತು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
