ಕಬೀರದಾಸರ ಅಚಲ ಗುರುಭಕ್ತಿ

🌺 ಕಬೀರದಾಸರ ಅಚಲ ಗುರುಭಕ್ತಿ 🌺



ಕಬೀರದಾಸರ ಇರುವಿಕೆಯ ಬಗ್ಗೆ ವಿಚಾರ ಮಾಡಿದರೆ ವಿಚಿತ್ರವೆನಿಸುತ್ತದೆ. ಕೆಲವು ಸಲ ರಾಜನಂತೆ ತಲೆಗೆ ಪೇಟಾ ಸುತ್ತಿಕೊಂಡು ಜರತಾರಿ ಅಂಗಿ  ತೊಟ್ಟುಕೊಂಡಿರುತ್ತಿದ್ದರು. ಕೆಲವು ಸಲ ಭಸ್ಮಧಾರಿಯಾಗಿ ತ್ರಿಶೂಲ ಡಮರುಗಳನ್ನು ಕೈಗಳಲ್ಲಿ ಹಿಡಿದುಕೊಂಡಿರುತ್ತಿದ್ದರು. ಕೆಲವು ಸಲ ಭಸ್ಮ ಧರಿಸಿ ಉದ್ದವಾದ ಕೊನೆಗೆ ಮೊನಚಾದ ಟೊಪ್ಪಿಗೆ ಧರಿಸುತ್ತಿದ್ದರು. ಜಾತ್ರೆಯ ಸಮಯದಲ್ಲಿ ಸಿದ್ದಾರೂಡರು ತೇರಿನಲ್ಲಿ ಕುಳಿತಿದ್ದರೆ ಕಬೀರದಾಸರು ಕುದುರೆಯ ಮೇಲೆ ಯುವರಾಜನಂತೆ ಕುಳಿತು ಕುದುರೆಯನ್ನು ನಾಟ್ಯವಾಡಿಸಿ ಗುರುಗಳಿಗೆ ಸಂತೋಷಪಡಿಸುತ್ತಿದ್ದರು. ಹೀಗೆ ಸದ್ಗುರು ಚರಣಗಳಲ್ಲಿ ಅನನ್ಯ ಭಕ್ತಿಯಿಂದಿರುತ್ತಿದ್ದರು.
ಒಂದು ದಿನ ಶಿವರಾತ್ರಿಯ ಸಮಯದಲ್ಲಿ ಶ್ರೀಗಳು ದೊಡ್ಡ ಅಡುಗೆಯ ಮನೆಯ ಮುಂದೆ ಖುರ್ಚಿ ಹಾಕಿಕೊಂಡು ಕುಳಿತ ಸಮಯದಲ್ಲಿ ಅವರು ಕಬೀರಾ, ನನ್ನ ಕಬೀರಾ' ಎಂದು ಎದೆತಟ್ಟಿಕೊಳ್ಳುತ್ತಿದ್ದರು. ಆಗ ಅಡುಗೆಯ ಮನೆಯ ಪ್ರಮುಖ ಕೆಲಸಗಾರ ರಾಚಪ್ಪನು ಬಂದು ಈ ನುಡಿ ಕೇಳಿ `ಅಪಾ, ಕಬೀರನು ನಿನ್ನ ಮಠದಲ್ಲಿ ಸ್ವಲ್ಪವೂ ಕೆಲಸ ಮಾಡುವುದಿಲ್ಲ. ಯಾವಾಗಲೂ ತನ್ನಿಷ್ಟ ಬಂದಂತೆ ವರ್ತಿಸುತ್ತಾನೆ. ಇಂಥ ಕಬೀರನನ್ನು ನೀನು 'ಕಬೀರಾ, ನನ್ನ ಕಬೀರಾ ಎಂದು ಸಾಮಾನ್ಯ ಜನರು ದೇವರನ್ನು ಭಜಿಸುವಂತೆ ಭಜಿಸುತ್ತಿರುವೆ. ನಾನು ಇಲ್ಲಿ ಹಗಲಿರುಳು ಕಣ್ಣಿಗೆ ನಿದ್ದೆಯಿಲ್ಲದ ಕೆಲಸ ಮಾಡುತ್ತೇನೆ. ಇಂಥ ನನ್ನನ್ನು ಒಂದು ದಿನವಾದರೂ `ಏ ರಾಚಾ ನನ್ನ ರಾಚಾ' ಎಂದು ಕರೆದಿರುವೆಯಾ?' ಎಂದು ಕೇಳಿದ.
ಆಗ ಗುರುಗಳು ಇನ್ನೊಬ್ಬನನ್ನು ಕರೆದು 'ನೋಡು, ಈಗಲೇ ಹೋಗಿ ಕಬೀರನಿಗೆ ತಕ್ಷಣ ಬರುವಂತೆ ಹೇಳು' ಎಂದು ಕಳಿಸಿದರು. ಆ ಸೇವಕನು ಕಬೀರದಾಸರ ಕೋಣೆಗೆ ಹೋದಾಗ ಅವರು ಬತ್ತಲೆ ಸ್ನಾನ ಮಾಡುತ್ತಿದ್ದರು. ಸೇವಕನು ಹೊರಗೆ ನಿಂತು `ಕಬೀರದಾಸರೇ, ಸಿದ್ಧಾರೂಢರು ತಮಗೆ ತಕ್ಷಣ ಬರುವಂತೆ ಹೇಳಿದ್ದಾರೆ. ಬೇಗ ಬನ್ನಿ' ಎಂದು ಹೇಳಿ ಹೋದ. ಆಗ ಕಬೀರರು, ನೀರು ತುಂಬಿದ ಮಗಿಯನ್ನು ತಲೆಯ ಮೇಲೆ ಸುರುವಿಕೊಳ್ಳಬೇಕಾಗಿತ್ತು. ಗುರುಗಳ ಆದೇಶವನ್ನು ಕೇಳಿ ಆಗ ಯಾವ ಸ್ಥಿತಿಯಲ್ಲಿದ್ದರೋ ಅದೇ ಸ್ಥಿತಿಯಲ್ಲಿ ಹೊರಗೆ ಬಂದು ಗುರುಗಳ ಹತ್ತಿರ ನಿಂತು ಕೇಳಿದರು ಗುರುಗಳೇ, ತಾವು ಬರಹೇಳಿದರಂತೆ ಯಾವ ಕೆಲಸವಿದೆ ಹೇಳಿರಿ ತಕ್ಷಣ ಮಾಡುತ್ತೇನೆ' ಎಂದು ನೂರಾರು ಜನರ ಮುಂದೆ ನಿಂತು ಹೇಳಿದರು. ಗುರುಗಳು ಕಬೀರದಾಸರು ದಿಗಂಬರರಾಗಿ ನೀರಿನ ಮಗಿ ತಲೆಯ ಮೇಲಿದ್ದುದನ್ನು ಕಂಡು `ಕಬೀರಾ, ನೀನು ಹೀಗೇಕೆ ಬಂದೆ' ಎಂದರು. ಕಬೀರರು 'ಗುರುಗಳೇ, ತಾವು ತಕ್ಷಣ ಬರಬೇಕೆಂದು ಹೇಳಿದರಂತೆ. ತಮ್ಮ ಕರೆಗೆ ಓಗೊಟ್ಟು ಬಂದೆ' ಎಂದರು.
ಈ ಮಾತನ್ನು ಕೇಳಿದ ಗುರುಗಳು 'ಕಬೀರಾ, ಹೋಗು ಸ್ನಾನ ಮಾಡಿ ಅರಿವೆಯನ್ನು ಹಾಕಿಕೊಂಡು ಬಾ' ಎಂದು ರಾಚಪ್ಪನ ಕಡೆಗೆ ತಿರುಗಿ 'ಏ ರಾಚಾ , ಬೇಗ ಬಾ' ಎಂದರೆ ನೀನು `ಅಪ್ಪಾ, ಸಾರಿಗೆ ಮಸಾಲೆ ಹಾಕಿ ಬರುತ್ತೇನೆಂದು ಹೇಳುತ್ತಿ. ಆದರೆ ಅವನು ತಕ್ಷಣ ಬಂದದ್ದನ್ನು ನೋಡಿರುವಿ. ಅವನು ಯಾವಾಗಲೂ ನನ್ನ ಧ್ಯಾನವನ್ನೇ ಮಾಡುತ್ತಾನೆ. ಅವನ ರೋಮರೋಮಗಳಲ್ಲಿ ನನ್ನ ಧ್ಯಾನವೇ ಇರುತ್ತದೆ' ಎಂದಾಗ ರಾಚಪ್ಪ `ಯಪಾ, ತಪ್ಪಾಯ್ತು ಗುರುವೆ, ಕಬೀರನ ಯೋಗ್ಯತೆಯ ಬಗ್ಗೆ ನನಗೆ ತಿಳಿದಿರಲಿಲ್ಲವಾದ್ದರಿಂದ ಹಾಗೆ ಮಾತಾಡಿದ ಕ್ಷಮಿಸಿರಿ' ಎಂದು ಅಡುಗೆ ಮನೆಗೆ ಹೋದನು.
ಸದ್ಗುರು ಪಾದಗಳಲ್ಲಿ ಅನನ್ಯ ಸೇವೆ ಸಲ್ಲಿಸುತ್ತ ಗುರುಮುಖದಿಂದ ಭಕ್ತಿಯಿಂದ ವೇದಾಂತ ಕೇಳುತ್ತ ಕಬೀರದಾಸರು ಒಂದು ದಿನ ಗುರುಗಳ ಕೈ ಹಿಡಿದು ಭಜನ ಮಾಡುತ್ತ ದೊಡ್ಡ ಅಡುಗೆಯ ಮನೆಯಿಂದ ಹೊರಗೆ ಬಂದಾಗ ಅಲ್ಲಿ ಒಂದು ನಾಯಿ ಸತ್ತಿತ್ತು. ಅದನ್ನು ನೋಡಿದ ಗುರುಗಳು ಬೇರೆ ಯಾರಿಗೂ ಹೇಳದೆ  ಕಬೀರನನ್ನು ಕರೆದು 'ಕಬೀರಾ, ಈ ನಾಯಿಯನ್ನು ದೂರ ತೆಗೆದುಕೊಂಡು ಹೋಗಿ ಒಗೆದು ತಕ್ಷಣ ಬರಬೇಕು' ಎಂದು ಹೇಳಿದರು.
ಆಗ ಕೂಡಲೇ ಕಬೀರದಾಸರು ಶ್ರೀಗಳ ಮುಂದೆ ನಿಂತು ದೀರ್ಘದಂಡ ಪ್ರಮಾಣ ಸಲ್ಲಿಸಿ ಅಲ್ಲಿಯೇ ಮಲಗಿ ತಮ್ಮ ಶರೀರ ತ್ಯಜಿಸಿ ಸೂಕ್ಷ್ಮ ಶರೀರದಿಂದ ನಾಯಿಯ ಶರೀರದಲ್ಲಿ ಸೇರಿದಾಗ ನಾಯಿಯೆದ್ದು ಭರಭರನೆ ಓಡುತ್ತ ಅಡವಿಯಲ್ಲಿ ಹೋಯಿತು. ಅಲ್ಲಿ ಕಬೀರರು ನಾಯಿಯ ಶರೀರ ಬಿಟ್ಟು ಬರಬೇಕಾದರೆ ಸ್ವಲ್ಪ ತಡವಾಯಿತು. ಇತ್ತ ಸಿದ್ಧಾರೂಢರ ಪಾದಗಳ ಮೇಲೆ ಸಾಷ್ಟಾಂಗ ಹಾಕಿದ ಕಬೀರನನ್ನು ಬಹಳ ಹೊತ್ತಾಯ್ತು ಎಬ್ಬಿಸಬೇಕೆಂದು ಶಿಷ್ಯರು ಮುಂದೆ ಬಂದಾಗ ಸಿದ್ದಾರೂಢರು ತಡೆದ `ಯಾರೂ ಕಬೀರನನ್ನು ಎಬ್ಬಿಸಬೇಡಿರಿ' ಎನ್ನುವಷ್ಟರಲ್ಲಿ ಕಬೀರರು ತನ್ನ ಶರೀರದಲ್ಲಿ ಪ್ರವೇಶಿಸಿ ಎದ್ದು ನಿಂತರು. ಆಮೇಲೆ ಗುರುಗಳ ಕೈಹಿಡಿದು ನಡೆಸಿಕೊಂಡು ನಡೆದರು.
ಇದನ್ನು ನೋಡಿದವರು ಆಶ್ಚರ್ಯಗೊಂಡರು. ಕಬೀರದಾಸರಲ್ಲಿ ಅಷ್ಟಮಹಾಸಿದ್ಧಿಗಳಿದ್ದರೂ ಮತ್ತು ಶಾಪಾನುಗ್ರಹ ಶಕ್ತಿಯಿದ್ದರೂ ಅವರ ಗುರುಭಕ್ತಿಗೆ ಕೊರತೆಯಿರಲಿಲ್ಲ. ಸದ್ಗುರುಗಳು ಕಬೀರರ ಯೋಗ್ಯತೆ ತಿಳಿಸಲು ಈ ಕಾರ್ಯ ಮಾಡಿದ್ದರು.


 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಶ್ರೀ ಸಿದ್ಧರ ಮುದ್ದು ಶಿಷ್ಯ ಕರ್ಮಯೋಗಿ ರೋಣದ ಚನ್ನಪ್ಪ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ