ಸದ್ಗುರು ಸಿದ್ಧರೂಢರ ಶಿಷ್ಯ ಗೋಕಾಕದ ಶ್ಯಾಮಾನಂದರು
🌺 ಸದ್ಗುರು ಸಿದ್ಧರೂಢರ ಶಿಷ್ಯ ಗೋಕಾಕದ ಶ್ಯಾಮಾನಂದರು 🌺
ಆಂಧ್ರಪ್ರದೇಶದ ಆದವಾನಿ ಗ್ರಾಮದಲ್ಲಿ ಭಗವಾನಸಿಂಗ್ ಮತ್ತು ಸುಬ್ಬಾಬಾಯಿ ದಂಪತಿಗಳು ಬಡವರಿದ್ದರೂ ಭಗವಂತನಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದರು. ಅವರ ಪ್ರಥಮ ಪುತ್ರ ತುಳಜಾ ಸಿಂಗನ ನಂತರ ೧೯೮೧ನೇ ಕೈಯಲ್ಲಿ ಶಾಮಸಿಂಗನ ಜನನವಾಯಿತು. ಮಗು ಒಂದು ತಿಂಗಳದವನಾದಾಗ ಊರಲ್ಲಿ ಪ್ಲೇಗ ರೋಗ ಹರಡಿಕೊಂಡಿತು. ಊರ ಜನರು ಭಯಭೀತರಾಗಿ ಊರು ಬಿಟ್ಟು ಹೋಗತೊಡಗಿದಾಗ ಈ ದಂಪತಿಗಳು ಊರ ಹೊರಗಿನ ಒಂದು ಗುಡಿಯಲ್ಲಿ ವಾಸ ಮಾಡಿದರು. ಕೆಲವು ದಿವಸ ಕಳೆದ ನಂತರ ಎಲ್ಲರೂ ಮಲಗಿದಾಗ ಅಲ್ಲಿಯೇ ವಾಸವಾಗಿದ್ದ ಒಂದು ಬ್ರಹ್ಮರಾಕ್ಷಸ ಶಿಶು ಶ್ಯಾಮಸಿಂಗನನ್ನು ಎತ್ತಿಕೊಂಡು ಹೊರಗಿನ ಆಲದ ಮರದಡಿಯಲ್ಲಿ ಮಲಗಿಸಿ ಹೋಯಿತು. ತಂದೆ ತಾಯಿಗಳು ಎಚ್ಚರಾಗಿ ಮಗುವನ್ನು ಹುಡುಕಿದಾಗ ಮರದಡಿಯಲ್ಲಿ ಮಲಗಿದ ಮಗುವು ಅಳುತ್ತಿರುವುದನ್ನು ಕಂಡು ಮಗುವನ್ನು ಎತ್ತಿಕೊಂಡು ಮತ್ತೆ ಊರಿಗೆ ಬಂದರು.
ಸುಬ್ಬಾಬಾಯಿಯ ತಮ್ಮ ಇನ್ಸಪೆಕ್ಟರ್ ಧರ್ಮಸಿಂಗ್ ಅವರನ್ನು ಕರೆದುಕೊಂಡು ಬೆಳಗಾವಿಯ ಪಾಟೀಲ ಗಲ್ಲಿಯಲ್ಲಿದ್ದ ತನ್ನ ಮನೆಯಲ್ಲಿ ವಾಸ ಮಾಡಿಸಿದನು. ಶ್ಯಾಮನು ಬೆಳೆದು ತಾಯಿಯ ಜೊತೆಗೆ ದೇವಸ್ಥಾನಕ್ಕೆ ಹೋಗಿ ಪುರಾಣ ಪುಣ್ಯ ಕಥೆಗಳನ್ನು ಕೇಳುತ್ತಿದ್ದನು. ಶ್ಯಾಮನು ಒಂದು ಸಲ ತಾಯಿಗೆ ಸಲುಗೆಯಿಂದ `ಅವ್ವಾ, ದೇವರಲ್ಲಿದ್ದಾನೆ? ಅವನನ್ನು ನೋಡಿರುವೆಯಾ?" ಎಂದು ಕೇಳಿದಾಗ ಅವಳಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಒಂದು ದಿನ ಭೂತವನ್ನು ನೋಡಿ ಜ್ವರ ಬಂದು ಮಲಗಿದನು. ಒಬ್ಬ ಯೋಗಿಯ ಸಲಹೆಯಂತೆ ಮಾರುತಿ ದೇವರ ಭಕ್ತಿ ಮಾಡಿದ್ದರಿಂದ ಗುಣ ಹೊಂದಿದನು. ಅಂದಿನಿಂದ ಶ್ಯಾಮನಿಗೆ ರಾಮನಾಮವೇ ತಾರಕಮಂತ್ರವಾಯಿತು. ಮುಂದೆ ತಂದೆ ಸ್ವರ್ಗಸ್ಥನಾದನು.
ಮುಂದೆ ಸೋದರಮಾವ ಧರ್ಮಸಿಂಗನು ಶಾಮನನ್ನು ಶಾಲೆಗೆ ಕಳಿಸಿದನು. ಆಗ ಶ್ಯಾಮನು ಐದನೆಯ ವರ್ಗದಲ್ಲಿ ಓದುತ್ತಿದ್ದನು. ಶ್ಯಾಮನ ಮಾವ ಗೋಪಾಲಸಿಂಗ ಎಂಬ ಸನ್ಯಾಸಿ ಸಿದ್ದಾರೂಢರ ಮಠದಲ್ಲಿ ಸೇವೆ ಮಾಡುತ್ತ ಅಲ್ಲಿಯೇ ಇದ್ದನು. ಸುಬ್ಬಾಬಾಯಿ ಮತ್ತು ಅಣ್ಣ ತುಳಜಾಸಿಂಗನು ಸಿದ್ಧರ ಭಕ್ತರಾದ್ದರಿಂದ ಹತ್ತೊಂಭತ್ತುನೂರಾ ಹನ್ನೆರಡನೇ ಇಸ್ವಿ ಶಿವರಾತ್ರಿಯಂದು ಸಿದ್ಧಾರೂಢರ ಉತ್ಸವಕ್ಕೆ ಹೊರಟರು. ಮರುದಿವಸ ಶ್ಯಾಮನ ಐದನೆಯ ವರ್ಗದ ಪರೀಕ್ಷೆ ಇದ್ದುದರಿಂದ ಅವನನ್ನು ಬಿಟ್ಟು ಹೋಗಿದ್ದರು.
ಶ್ಯಾಮನು ಶಾಲೆಯಿಂದ ಮನೆಗೆ ಬಂದಾಗ ವಿಷಯ ತಿಳಿದು ತನ್ನ ಪರೀಕ್ಷೆಯ ವಿಚಾರ ಮರತು ಅಳುತ್ತ ರೈಲು ಹತ್ತಿ ಶ್ರೀ ಸಿದ್ಧಾರೂಢರ ಮಠಕ್ಕೆ ಬಂದಾಗ ಜಾತ್ರೆ ನಡೆದಿತ್ತು. ಇವನು ಒಂದು ಮೂಲೆಯಲ್ಲಿ ಕುಳಿತು ಅಳುತ್ತಿದ್ದನು. ನಂತರ ತಾನೇ ಎದ್ದು ಹೋಗಿ ಸಿದ್ದರ ಪಾದಗಳಿಗೆರಗಿ ಅಳತೊಡಗಿದನು. ಆಗ ಸಿದ್ಧರು ಸೇವಕರನ್ನು ಕರೆದು ಈ ಬಾಲಕನು ಯಾರು ಎಂದಾಗ ಅವರು `ಶ್ರೀಗಳೇ ಈ ಬಾಲಕನು ಗೋಪಾಲಸಿಂಗನ ಅಳಿಯ” ಎಂದರು. ಆಗ ಸಿದ್ದರು `ಮಗು, ನೀನೇಕೆ ಅಳುತ್ತಿರುವೆ?”. ಎಂದಾಗ ಬಾಲಕ ಹೇಳಿದ `ತಂದೆ ನನ್ನ ಹೆಸರು ಶ್ಯಾಮ. ನನಗೆ ನೀನೇ ಬೇಕಾಗಿತ್ತು. ನಿನ್ನ ದರ್ಶನ ಪಡೆಯಲು ಬಂದಿದ್ದೇನೆ. ನನ್ನ ತಾಯಿ ಮತ್ತು ಅಣ್ಣ ಮೊದಲೇ ಬಂದಿದ್ದಾರೆ. ಇಂದು ನನ್ನ ಶಾಲಾ ಪರೀಕ್ಷೆಯಿದೆ. ಅದರಲ್ಲಿ ನಾನು ಉತ್ತೀರ್ಣನಾಗುವುದಿಲ್ಲ' ಎಂದು ಅಳತೊಡಗಿದ. ಆಗ ಸಿದ್ದರು ಬಾಲಕನ ಅಂತರಂಗ ತಿಳದು ಹೇಳಿದರು ಬಾಳಾ, ನೀನು ಖಂಡಿತ ಪಾಸಾಗುವಿ, ಸಮಾಧಾನದಿಂದ ಉತ್ಸವ ಮುಗಿಸಿ ಹೋಗು' ಎಂದು ಹರಸಿದರು. ನಂತರ ಶಾಮನು ಉತ್ಸವ ಮುಗಿಸಿ ತಾಯಿಯ ಜೊತೆಗೆ ತಮ್ಮೂರಿಗೆ ಹೋಗಿ ಶಾಲೆಯಲ್ಲಿ ವಿಚಾರಿಸಿದಾಗ, ಅವನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದನು. ಆಗ ಶ್ಯಾಮನು ಶಿಕ್ಷಕರನ್ನು ಕುರಿತು `ಗುರುಗಳೇ ನಾನು ಪರೀಕ್ಷೆಗೆ ಕುಳಿತಿರಲಿಲ್ಲ. ಜಾತ್ರೆಗೆ ಹೋಗಿದ್ದೆ" ಎಂದಾಗ ಶಿಕ್ಷಕರು ಹೇಳಿದರು `ಶ್ಯಾಮಾ ನೀನು ಪರೀಕ್ಷೆಗೆ ಕುಳಿತಿರುವಿ, ಉತ್ತರ ಪತ್ರಿಕೆಗಳನ್ನು ಚೆನ್ನಾಗಿ ಬರದಿರುವಿ' ಎಂದಾಗ ಶ್ಯಾಮನಿಗೆ ಆಶ್ಚರ್ಯವಾಗಿ ಸಿದ್ದರು ಹೇಳಿದ ಮಾತು ನೆನಪಾಗಿ ಶ್ರೀಗಳು ಶಿವನವತಾರಿಗಳೇ ಹೌದು ಎಂದು ನಂಬಿದ್ದಲ್ಲದೆ ಅವರ ಮೇಲೆ ಭಕ್ತಿ ಹೆಚ್ಚಾಗಿ ಮೇಲಿಂದ ಮೇಲೆ ಸಿದ್ಧರ ದರ್ಶನಕ್ಕಾಗಿ ಹೋಗಿ ಬರುತ್ತಿದ್ದನು.
ಬಡತನದಿಂದಾಗಿ ಅಣ್ಣನ ಸಲಹೆಯ ಮೇರೆಗೆ ಶಾಲೆ ಬಿಟ್ಟು ಬೇರೆ ಬೇರೆ ಕೆಲಸಕ್ಕೆ ಹೋಗುತ್ತಿದ್ದನು. ಅಷ್ಟರಲ್ಲಿ ಅಣ್ಣ ತುಳಜಾಸಿಂಗನಿಗೆ ಬೆಳಗಾವಿಯಲ್ಲಿ ಪೊಲೀಸ್ ಜಮಾದಾರನಾಗಿ ಬಡತಿ ಸಿಕ್ಕಾಗ ಹದಿನೆಂಟು ವರ್ಷದ ಶ್ಯಾಮನಿಗೆ ತನ್ನ ಇಲಾಖೆಯಲ್ಲಿ ಕಾರಕೂನ ಕೆಲಸ ಕೊಡಿಸಿದನು. ಬೆಳಗಾವಿಯ ತನ್ನ ಹನ್ನೊಂದು ವರ್ಷಗಳ ನೌಕರಿಯಲ್ಲಿ ಸತ್ಸಂಗದಲ್ಲಿದ್ದು ಅಖಂಡ ರಾಮನಾಮ ಜಪಿಸುತ್ತ ರಜೆಯ ಸಮಯದಲ್ಲಿ ಸಿದ್ಧರ ಮಠಕ್ಕೆ ಹೋಗಿ, ಶ್ರೀಗಳಿಂದ ಶಾಸ್ತ್ರ ಕೇಳಿ ಬರುತ್ತಿದ್ದನು. ಒಂದು ದಿವಸ ಶ್ರೀ ಸಿದ್ಧಾರೂಢರು ಶ್ಯಾಮನಿಗೆ ಓಂ ನಮಃ ಶಿವಾಯ ಮಂತ್ರ ಬೋಧಿಸಿ ಅಖಂಡ ಪುರಶ್ಚರಣೆ ಮಾಡಲು ಹೇಳಿದರು. ಅಂದಿನಿಂದ ಶ್ಯಾಮನು ಶಿವಭಕ್ತಿಯಲ್ಲಿ ಪ್ರವೇಶ ಮಾಡಿದನು. ಮೊದಲು ರಾಮ ಭಕ್ತಿಯಲ್ಲಿದ್ದ ಶ್ಯಾಮನು ಈ ಶಿವಭಕ್ತಿ ಮಾಡುವುದರಿಂದ ವ್ಯಭಿಚಾರವಾಯಿತೋ ಏನೋ ಎಂದು ಸಂಶಯ ಬಂದು ಸಿದ್ಧರಲ್ಲಿ ಬಂದು ತನ್ನ ಸಂಶಯ ವ್ಯಕ್ತಪಡಿಸಿದಾಗ ಸಿದ್ಧರು ಹೇಳಿದರು `ಶ್ಯಾಮಾ, ಇದು ಭಕ್ತಿಯಲ್ಲಿ ವ್ಯಭಿಚಾರವಾಗುವುದಿಲ್ಲ. ಸದ್ಗುರು ದೂರೆಯುವ ಮುನ್ನ ರಾಮ ಭಕ್ತಿ ಮಾಡಿ ಆತನ ಕೃಪೆಯಿಂದ ಚಿತ್ತ ಶುದ್ಧಿಯಾಗಿ ಯೋಗ್ಯ ಗುರುವಿನ ಪ್ರಾಪ್ತಿಯಾಗಿದೆ. ರಾಮಭಜನೆ, ಶಿವಭಜನೆ ಎರಡೂ ಒಂದೆ. ಎಲ್ಲ ಮಂತ್ರಗಳೂ ಅಷ್ಟೆ. ಮುಂದೆ ನಿನಗೇ ಅನುಭವಕ್ಕೆ ಬರುತ್ತದೆ ಸಾಧನೆ ಮಾಡು' ಎಂದು ಅವನ ಸಂಶಯ ನಿವಾರಣೆ ಮಾಡಿದರು.
ನಂತರ ಶ್ಯಾಮ ಹೇಳಿದ "ಅಪ್ಪಾ, ನಾನು ಬಡವ ಇನ್ನು ಮುಂದೆ ನಾನಿದ್ದಲ್ಲಿಯೇ ಪ್ರತಿವರ್ಷ ಸಪ್ತಾಹ ನಡೆಸಬೇಕೆಂದಿದ್ದೇನೆ. ಯಾರಿಗೂ ಕೈ ಚಾಚಿ ಬೇಡುವ ಪ್ರಸಂಗ ಬಾರದಂತೆ ನನ್ನನ್ನು ಕಾಪಾಡು" ಎಂದು ಬೇಡಿಕಂಡಾಗ ಸದ್ಗುರುಗಳು ಆಶೀರ್ವದಿಸುತ್ತ ಶ್ಯಾಮಾ, ನಿನ್ನ ಬುದ್ದಿಗೆ ಮೆಚ್ಚಿದೆನು, ನೀನು ಶ್ಯಾಮ ಅಲ್ಲ, ಶ್ಯಾಮಾನಂದ ಎಂದು ಕರೆಯುತ್ತೇನೆ'' ಎಂದು ಅಪ್ಪಿಕೊಂಡು ಆಶೀರ್ವದಿಸಿದಾಗ ಶ್ಯಾಮನ ಕಣ್ಣಲ್ಲಿ ಆನಂದದ ಕಣ್ಣೀರು ಸುರಿದವು. ನಂತರ ಸಿದ್ಧರು ತಮ್ಮ ಮೂರ್ತಿಯನ್ನು ಶ್ಯಾಮಾನಂದರಿಗೆ ಕೊಟ್ಟು ಹೇಳಿದರು 'ಪ್ರಿಯ ಶಿಷ್ಯನೇ ಇದನ್ನು ನೀನೆಲ್ಲಿರುವೆಯೋ ಅಲ್ಲಿ ಸ್ಥಾಪಿಸಿ ಸಪ್ತಾಹ ಮಾಡು, ಈ ಮೂರ್ತಿಯಲ್ಲಿ ನಾನು ಯಾವಾಗೂ ನೆಲೆಸಿರುತ್ತೇನೆ' ಎಂದರು. (ಗೋಕಾಕದಲ್ಲಿ ಇಂದಿಗೂ ಅದೇ ಮೂರ್ತಿಯನ್ನು ಈಗ , ಅವರ ಮಠದಲ್ಲಿರುವ ಅವರ ಸಮಾಧಿ ಮೇಲೆ ಸ್ಥಾಪಿಸಲಾಗಿದೆ) ಅಂದಿನಿಂದ ಗುರುಗಳ ಆಜ್ಞೆಯಂತೆ ಶ್ಯಾಮಾನಂದರು ಸಿದ್ಧರ ಸೇವೆಯಲ್ಲಿ ತೊಡಗಿದರು.
ಒಂದು ದಿನ ಶನಿವಾರ ಪೊಲೀಸ್ ಡ್ಯೂಟಿ ಮುಗಿಸಿ ವೈಜನಾಥ ಗುಡ್ಡಕ್ಕೆ ಹೋಗಿ ಅಲ್ಲಿಯ ಈಶ್ವರದೇವರ ಗುಡಿಯ ಹತ್ತಿರ ರಾತ್ರಿಯೆಲ್ಲಾ ಚದುರಂಗ ಕಂಟಿಯ ಮಧ್ಯದಲ್ಲಿ ಅಂತರ್ಮುಖ ಮಾಡಿಕೊಂಡು ಯೋಗ ಸಮಾಧಿಯಲ್ಲಿದ್ದರು. ಬೆಳಗಾಯಿತು. ಆಗ ದೇವರವಾಡಿ ಗ್ರಾಮದ ಗೌಡರು ತಿರುಗಾಡುತ್ತ ಗುಡ್ಡಕ್ಕೆ ಬಂದು ಧ್ಯಾನಸಕ್ತರಾದ ಶ್ಯಾಮಾನಂದರನ್ನು ಗುರುತಿಸಿ ಎಚ್ಚರಿಸಿ ಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ ನಮಸ್ಕರಿಸಿ ಉಪಹಾರ ಕೊಟ್ಟಾಗ ಒಂಭತ್ತು ಗಂಟೆಯಾಗಿತ್ತು. ನಂತರ ಅವರನ್ನು ಬೆಳಗಾವಿಯ ಅವರ ಮನೆಗೆ ಕರೆ ತಂದಾಗ ಮನೆಯವರ ಹೇಳಿದರು `ಗೌಡರೇ, ಶ್ಯಾಮಾನಂದರು ಆಗಾಗ ಈ ರೀತಿ ಹೋಗುವ ರೂಢಿಯಿದೆ. ಆದರೆ ಇಂದು ಬೆಳಗಿನ ಪರೇಡ್ ಡ್ಯೂಟಿ ತಪ್ಪಿಹೋಗಿದೆ. ಇವರ ಮೇಲಾಧಿಕಾರಿಗಳು ಇವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ' ಎಂದು ಹೇಳಿದರು. ಆಗ ಕರುಣಾಳುಗಳಾದ ಗೌಡರು ಮನೆಯವರಿಗೆ ಸಂತೈಸಿ ಪೊಲೀಸ್ ಸ್ಟೇಶನ್ನಿಗೆ ಹೋಗಿ ಮೇಲಾಧಿಕಾರಿಗಳಿಗೆ ಶ್ಯಾಮಾನಂದರ ಬಗ್ಗೆ ನಡೆದ ಸಂಗತಿಯನ್ನು ತಿಳಿಸಿ ಕ್ಷಮಿಸಲು ವಿನಂತಿಸಿಕೊಂಡಾಗ ಮೇಲಾಧಿಕಾರಿಗಳು ಗೌಡರನ್ನು ಕುರಿತು 'ಗೌಡರೆ, ಶ್ಯಾಮಾನಂದರು ಇಂದು ಮುಂಜಾನೆ ಪರೇಡ್ ಮುಗಿಸಿ ಮನೆಗೆ ಹೋದರು' ಎಂದು ಹೇಳಿದಾಗ ಗೌಡರು ಹೇಳಿದರು 'ಸಾಹೇಬರೆ, ನಾನು ಮುಂಜಾನೆ ತಿರುಗಾಡಲು ವೈಜನಾಥ ಗುಡ್ಡಕ್ಕೆ ಹೋದಾಗ ಧ್ಯಾನದಲ್ಲಿದ್ದ ಶ್ಯಾಮಾನಂದರನ್ನು ಕರೆದುಕೊಂಡು ಬಂದಿದ್ದು ಅವರು ಮನೆಯಲ್ಲಿದ್ದಾರೆ' ಎಂದಾಗ ಅಧಿಕಾರಿಗಳು `ಗೌಡರೇ ಪರೇಡ್ ಡ್ಯೂಟಿ ಮಾಡಿದಾಗ ನಾನೇ ಸ್ವತಃ ಶ್ಯಾಮಾನಂದರನ್ನು ನೋಡಿದ್ದೇನೆ' ಎಂದಾಗ ಗೌಡರು ಚಕಿತರಾಗಿ ಮನೆಗೆ ಬಂದು ಈ ವಿಚಾರ ತಿಳಿಸಿದಾಗ, ಎಲ್ಲರಿಗೂ ಆಶ್ಚರ್ಯವಾಗಿ ಶ್ಯಾಮಾನಂದರು ಕಣ್ಣಲ್ಲಿ ಅಶ್ರುಧಾರೆಗಳನ್ನು ಸುರಿಸುತ್ತ `ಎಂತಹ ಕರುಣಾಮಯಿ ಸಿದ್ಧಾರೂಢರು ತನ್ನ ಭಕ್ತರ ಕೈಬಿಡದೆ ಭಕ್ತನ ನೌಕರಿಯನ್ನು ತಾವೇ ಮಾಡಿದರು ಎಂದು ಸಿದ್ದರನ್ನು ಕೊಂಡಾಡಿದರು.
ಶ್ಯಾಮಾನಂದರು ಮೂರು ತಿಂಗಳ ರಜೆ ಪಡೆದು ಭಾರತದ ಅನೇಕ ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿ ಬಂದರು. ಶ್ರೀ ಗುರುವಿನ ಆಜ್ಞೆಯಂತೆ ಶ್ರೀ ಸಿದ್ಧಾರೂಢರ ಚರಿತ್ರೆ ಹೇಳುತ್ತಿದ್ದರಲ್ಲದೆ ಪರ ಊರಿನ ಭಕ್ತರ ಕರೆಯ ಮೇರೆಗೆ ಪರ ಊರಿಗೆ ಹೋಗಿ ಶಾಸ್ತ್ರ ನಡೆಸಿ ಬರುತ್ತಿದ್ದು, ಬಡಜನರಿಗೆ ಅನ್ನದಾನ ವಸ್ತ್ರದಾನ ಮಾಡುತ್ತಿದ್ದರು. ಒಂದು ದಿವಸ ಡ್ಯೂಟಿ ಮುಗಿಸಿಕೊಂಡು ಮಲಾರಮದಡಿಯ ಭಕ್ತರ ಕರೆಯ ಮರೆಗೆ ಶ್ರೀ ಸಿದ್ಧಾರೂಢರ ಚರಿತ್ರೆ ಹೇಳಲು ಹೊರಟರು. ಅಂದೇ ರಾತ್ರಿ, ಚರಿತ್ರೆ ನಡೆಯಬೇಕಾಗಿತ್ತು. ರೈಲಿನಲ್ಲಿ ಸುಲಧಾಳಕ್ಕೆ ಹೋಗಿ ಮುಂದೆ ಮಲಾರಮರಡಿಯವರೆಗೆ ನಡೆದು ಹೋಗುವಾಗ ಮಳೆಯಿಂದ ಗುಡುಗು ಮಿಂಚುಗಳ ಆರ್ಭಟ ಮತ್ತು ಕತ್ತಲೆ ಕವಿದಿದ್ದರಿಂದ ಮಲಾರಮರಡಿಯ ದಾರಿ ತಪ್ಪಿಸಿಕೊಂಡರು. ಜಿಟಿಜಿಟಿ ಮಳೆ ಸುರಿಯುತ್ತಿತ್ತು. ಕೈಯಲ್ಲಿ ಸಿದ್ದಾರೂಢರ ಚರಿತ್ರೆಯಿದ್ದು ಸದ್ಗುರು ಸ್ಮರಣೆಯಲ್ಲಿ ನಡೆದಾಗ ರೊಜ್ಜಿನಲ್ಲಿ ಕಾಲು ಜಾರಿ ತಗ್ಗಿನಲ್ಲಿ ಬಿದ್ದರು. ಏಳುವ ಸ್ಥಿತಿಯಲ್ಲಿರಲಿಲ್ಲ. ಆಗ `ಸದ್ಗುರು ಸಿದ್ದನೇ ನಿನ್ನ ಸೇವೆಗೆ ಹೋಗುವಾಗ ಈ ಕಷ್ಟವೇಕೆ ತಂದೆ" ಎಂದು ಕೂಗಿದಾಗ, ಸದ್ಗುರು ಸಿದ್ದಾರೂಢರು ಪ್ರತ್ಯಕ್ಷರಾಗಿ ಕೈ ಹಿಡಿದು ಎಬ್ಬಿಸಿ ಮಸ್ತಕದ ಮೇಲೆ ಹಸ್ತವನ್ನಿಟ್ಟು 'ಏ ಸಿಪಾಯಿ, ಈ ಕಡೆಗಿರುವ ರಸ್ತೆ ಮಲಾರಮರಡಿಗೆ ಹೋಗುತ್ತದೆ ಹೋಗಿ' ಎಂದು ದಾರಿ ತೋರಿಸಿ ಅದೃಶ್ಯರಾದರು. ಇದನ್ನು ನೋಡಿದ ಶ್ಯಾಮಾನಂದರ ನೋವೆಲ್ಲ ಮಾಯವಾಯಿತು. ಆಗ ಇದು ಗುರುಗಳ ಲೀಲೆಯೇ ಎಂದು ಕೊಂಡಾಡಿ ಆನಂದಾಶ್ರುಗಳನ್ನು ಸುರಿಸುತ್ತ ಮಲಾರ ಮರಡಿಗೆ ಹೋಗಿ ಕಾರ್ಯಕ್ರಮ ಮುಗಿಸಿ ಬಂದರು.
ಒಂದು ದಿವಸ ಶ್ಯಾಮಾನಂದರು ಮಲಗಿದಾಗ ಕಾಲಿಗೆ ಇಲಿ ಕಚ್ಚಿ ನಂಜು ಏರಿ ನಡೆದಾಡಲು ಬಾರದಾಗಿ ಡ್ಯೂಟಿ ಮಾಡಲು ತೊಂದರೆಯಾಯಿತು. ಇದನ್ನು ಕಂಡ ಅಣ್ಣ ತುಳಜಾಸಿಂಗನು ಸಿದ್ದರಲ್ಲಿ ಕರೆದುಕೊಂಡು ಹೋಗಿ ವಿಷಯ ತಿಳಿಸಿದರು. ಆಗ ಸಿದ್ದಾರೂಢರು ಶ್ಯಾಮಾನಂದರನ್ನು ಕರೆದು ಮಠದ ಕೆರೆಯಲ್ಲಿ ಸ್ನಾನ ಮಾಡಿ ಬರಲು ಹೇಳಿದಾಗ, ಸ್ನಾನ ಮಾಡಿ ಬಂದು ಸಿದ್ದರ ಹತ್ತಿರ ಕುಳಿತರು. ಆಗ ಸಿದ್ಧರು ಮಠದಲ್ಲಿರುವ ಕರಿದ ಎಣ್ಣೆಯ ತಿಂಡಿ ಗಿಣ್ಣು ಮತ್ತು ಬದನೆಕಾಯಿ ಪಲ್ಯ ತಿನ್ನಲು ಕೊಟ್ಟರು. ಆಗ ಶಾಮಾನಂದರು "ಅಪಾ, ಇವುಗಳು ಬರಿಷಣ ಪದಾರ್ಥಗಳು. ತಿಂದರೆ ನಂಜು ಏರುತ್ತದೆ' ಎಂದರು. ಆಗ ಸಿದ್ಧರು ನಗುತ್ತ `ಶ್ಯಾಮಾ ನಿನ್ನ ತಾಯಿ
ಬರಿಷಣ ಪದಾರ್ಥ ತಿನಿಸಿಲ್ಲ. ಅದಕ್ಕೆ ನಾನು ಕೊಟ್ಟಿರುವೆ. ಗುರುವಾಕ್ಯ ಅಮೃತ ಸಮಾನ ಶಿನ್ನು” ಎಂದಾಗ ಶಾಮಾನಂದರು ಸ್ವೀಕರಿಸಿದರು. ಸಾಯಂಕಾಲ ನಂಜು ಅರ್ಧದಷ್ಟು ಕಡಿಮೆಯಾಗಿ ಮರುದಿನ ಪೂರ್ಣ ಗುಣಹೊಂದಿ, ಅವರ ಆಶೀರ್ವಾದ ಪಡೆದು ಬೆಳಗಾವಿಗೆ ಹೋದರು.
ತುಳಜಾಸಿಂಗನ ಮಗಳು ಅಂಬಕ್ಕ ಅವಳಿಗೆ ಲಗ್ನ ನಿಶ್ಚಯವಾಯಿತು. ಮಗಳ ಮದುವೆ ಮತ್ತು ತಮ್ಮನಾದ ಶ್ಯಾಮಾನಂದರ ಮದುವೆಯನ್ನು ಒಟ್ಟಿಗೆ ಮಾಡಬೇಕೆಂದು ಶ್ಯಾಮಾನಂದರಿಗೆ ಒತ್ತಾಯಿಸಿದಾಗ ಅವನು ನಿರಾಕರಿಸಿದನು. ತುಳಜಾರಾಮನು ಹಟದಿಂದ ಶ್ಯಾಮಾನಂದರನ್ನು ಕರೆದುಕೊಂಡು ಸಿದ್ದರಲ್ಲಿಗೆ ಹೋಗಿ `ಗುರುಗಳೇ, ಶ್ಯಾಮಾನಂದನಿಗೆ ಲಗ್ನ ಮಾಡಿಕೊಳ್ಳಲು ಹೇಳಿರಿ” ಎಂದು ಪಟ್ಟು ಹಿಡಿದುಕೊಂಡು ಕುಳಿತನು. ಆಗ ತ್ರಿಕಾಲ ಜ್ಞಾನಿಗಳಾದ ಸಿದ್ಧರು ಶ್ಯಾಮಾನಂದರನ್ನು ಕರೆದು `ಶ್ಯಾಮಾ ನೀನು ಅಣ್ಣನ ಮಾತು ನಡೆಸಿಕೊಟ್ಟು ಲಗ್ನ ಮಾಡಿಕೊ” ಎಂದರು. ಅದಕ್ಕೆ ಶ್ಯಾಮಾನು ಒಪ್ಪದೆ ವಾದ ಮಾಡುತ್ತ ಏನು ಹೇಳಿದರೂ ಕೇಳದಾದಾಗ ಮತ್ತೆ ಸಿದ್ದರು ಹೇಳಿದರು `ಶ್ಯಾಮಾ, ನೀನು ಸಂಸಾರಿಯಾಗು. ಅದು ತ್ಯಾಜ್ಯವಲ್ಲ. ಹೇಯವೂ ಅಲ್ಲ, ನಿನ್ನ ಪ್ರಾರಬ್ಬ ಭೋಗವನ್ನು ಭೋಗಿಸಿ ತೀರಿಸಲು ಮದುವೆಗೆ ಒಪ್ಪಿಗೆ ಕೊಡು" ಎಂದಾಗ, ಶ್ಯಾಮನು ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿ ಹೇಳಿದನು ``ಅಪಾ, ನನ್ನದೊಂದು ವಿನಂತಿ ಏನೆಂದರೆ ಆದಷ್ಟು ಈ ಸಂಸಾರದಲ್ಲಿ ಬಹಳದಿನವಿರಬಾರದು' ಎಂದಾಗ ಶ್ರೀಗಳು ಶ್ಯಾಮಾ, ನಿನ್ನ ಇಚ್ಛೆಯಂತೆ ಆಗಲಿ' ಎಂದು ಆಶೀರ್ವದಿಸಿದರು.
ನಂತರ ಹೊನ್ನಳ್ಳಿ ಗ್ರಾಮದ ಪೊಲೀಸ್ ಇನ್ಸಪೆಕ್ಟರರ ಮಗಳು ಪದ್ಮಾವತಿ ಜೊತೆಗೆ ಸಿದ್ದಾರೂಢರ ಸನ್ನಿಧಿಯಲ್ಲಿ ಲಗ್ನವಾಯಿತು. ಶ್ಯಾಮಾನಂದರ ಹೆಂಡತಿಯು ಪಾರಮಾರ್ಥದಲ್ಲಿ ಸಹಕಾರ ನೀಡಿದಳು. ಅವರಿಗೆ ಒಬ್ಬಳು ಮಗಳು ಜನಿಸಿದಳು. ದುರ್ದೈವದಿಂದ ಹೆಡಂತಿಯು ರೋಗದಿಂದ ತೀರಿಕೊಂಡಳು. ಮುಂದೆ ಆರು ತಿಂಗಳಿಗೆ ಮಗಳೂ ತೀರಿಕೊಂಡಳು. ಒಂದು ದಿವಸ ಸಿದ್ಧಾರೂಢರು ಶ್ಯಾಮಾನಂದರ ಬಾಯಿಯಲ್ಲಿ ತುತ್ತು ಇಡುವಾಗ ಶ್ಯಾಮಾನಂದರು ಗುರುಗಳನ್ನು ಕುರಿತು ಅಪಾ, ಯಾವಾಗಲೂ ಬರಿ ಪ್ರಸಾದವನ್ನು ಬಾಯಿಯಲ್ಲಿ ಇಡುತ್ತಿ. ಏನಾದರೂ ಕರ್ಣಪ್ರಸಾದದಿಂದ ನಿತ್ಯಸುಖವನ್ನು ತೋರಿಸಬಾರದೆ' ಎಂದಾಗ ಸಿದ್ಧರು ನಗುತ್ತ ತಮ್ಮ ಅಮೃತ ಹಸ್ತವನ್ನು ಮಸ್ತಕದ ಮೇಲೆ ಇಟ್ಟಕೂಡಲೇ ಶ್ಯಾಮಾನಂದರು ಕಣ್ಣು ಮುಚ್ಚಿ ತಮ್ಮಂತರಂಗದಲ್ಲಿ ಕೋಟಿ ಸೂರ್ಯರಿಗಿಂತಲೂ ಅಧಿಕ ತೇಜವುಳ್ಳ ಆತ್ಮಜ್ಯೋತಿಯನ್ನು ಕಂಡರು. ನಂತರ ಅದರಲ್ಲಿ ಐಕ್ಯಹೊಂದಿ ಸ್ಟೇತರಜ್ಞಪ್ತಿಯನ್ನು ಮರತರು. ನಂತರ ಶರೀರ ಭಾವನೆ ಬಂದು ಹೊರಗಿನ ಪ್ರಪಂಚ ಕಂಡಾಗ ಅದೇ ಜ್ಯೋತಿ ಎಲ್ಲೆಡೆ ಕಂಡರು. ಜಗವೆಲ್ಲವ0 ತಾನೆ ಎಂಬ ಭಾವನೆಯಿಂದ ತನಗಿಂತ ಭಿನ್ನ ಯಾವುದೂ ಇಲ್ಲವೆಂದು ದೃಢಾಪರೋಕ್ಷ ಜ್ಞಾನವಾಯಿತು. ಆಗ ಸಿದ್ಧರು ಶ್ಯಾಮಾನಂದರಿಗೆ ಬೋಧಿಸುತ್ತ `ಹೇ, ಶಿಷ್ಯನೇ ಸ್ವರೂಪ ಜ್ಞಾನವೆಂಬುದು ಇದೇ ಇರುತ್ತದೆ. ಈ ಸ್ವರೂಪ ಧ್ಯಾನವನ್ನು ಹಗಲಿರುಳು ಮಾಡಬೇಕು. ಎಲ್ಲವೂ ಸದ್ಗುರು ರೂಪವೆಂದು ಸಾಧನೆ ಮಾಡಿದರೆ ನಿರ್ವಿಕಲ್ಪದ ಅನುಭವವಾಗುತ್ತದೆ. ಶ್ಯಾಮಾ ನೀನು ಲೋಕದ ಜನರಿಗೆ ಗುರುವಾಗಿರುವಿ. ಎಷ್ಟೋ ಕಷ್ಟಗಳು ಬಂದರೂ ಪ್ರತಿವರ್ಷ ಸಪ್ತಾಹ ಮಾಡುತ್ತ ಸಂತರ ಸೇವೆ ಮಾಡುತ್ತಿರು. ನಾನು ಕೊಟ್ಟಿರುವ ಮೂರ್ತಿಯನ್ನು ನೀನು ಎಲ್ಲಿರುವಿಯೋ ಅಲ್ಲಿ ಸ್ಥಾಪಿಸಿ ಪಾರಮಾರ್ಥ ಸಾಧನೆ ಮಾಡುತ್ತಿರು. ನೀನು ಕರೆದಾಗ ನಾನು ನಿನ್ನ ಹತ್ತಿರವೇ ಇರುತ್ತೇನೆ" ಎಂದಾಗ ಶ್ಯಾಮಾನಂದರಿಗೆ ಅಪರಿಮಿತ ಆನಂದವಾಯಿತು.
ಮುಂದೆ ಸಿದ್ದರ ಕೃಪೆಯಿಂದ ಎಲ್ಲ ಅನುಭವಗಳು ಬಂದವು. ಆಗ ಶ್ಯಾಮಾನಂದರು ಬೆಳಗಾವಿಯಲ್ಲಿದ್ದಾಗ ಸಿದ್ದರು ದೇಹತ್ಯಾಗ ಮಾಡಿದ ವಿಷಯ ಕೇಳಿ ದುಃಖಿಸುತ್ತ ಹುಬ್ಬಳ್ಳಿಗೆ ಬಂದು ಗುರುಗಳ ಅಂತಿಮ ದರ್ಶನ ಪಡೆದು ಅತ್ತರು. ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಬಂದು ದರ್ಶನ ಪಡೆದು ರೋಧಿಸುತ್ತಿದ್ದರು. ಮಂತ್ರ ಘೋಷಣೆ ನಡೆದಿತ್ತು. ಆಗ ಶ್ಯಾಮಾನಂದರು ತಮ್ಮಷ್ಟಕ್ಕೆ ತಾವೇ `ಏನಪ್ಪ ತಂದ, ನಮಗೆಲ್ಲ ಬಿಟ್ಟು ಹೊರಟೆಯಾ? ನನಗೆಲ್ಲ ಅನುಭವ ದಯಪಾಲಿಸಿದಿರಿ. ಆದರೆ ನಿರ್ವಿಕಲ್ಪ ಸಮಾಧಿಯ ಅನುಭವ ಕೊಡದೆ ಬಿಟ್ಟು ಹೋದೆಯಾ?" ಎಂದು ಅಳುತ್ತ ದುಃಖದ ಒತ್ತಡದಲ್ಲಿ ಒಂದು ಕಡೆ ಮೂಲೆಯಲ್ಲಿ ಕುಸಿದು ಕುಳಿತ ತಕ್ಷಣ ನಿರ್ವಿಕಲ್ಪ ಸಮಾಧಿಯ ಅನುಭವವಾಯಿತು. ಬಾಹ್ಯ ಪ್ರಜ್ಞೆಯಿಲ್ಲದೆ ತಾನೇ ತಾನಾದ ಸ್ಥಿತಿಯಲ್ಲಿ ಅಂದು ಮಂಗಳವಾರ ಸಿದ್ಧರು ದೇಹತ್ಯಾಗ ಮಾಡಿದ ದಿನದಿಂದ ಕುಳಿತವರು ಗುರುವಾರ ಸಾಯಂಕಾಲ ಉತ್ಥಾನ ಅವಸ್ಥೆ ಒದಗಿತು. ಸಿದ್ಧರು ಕೊನೆಯ ಗಳಿಗೆಯಲ್ಲಿ ಶ್ಯಾಮಾನಂದರ ಇಚ್ಛೆ ಪೂರ್ಣಗೊಳಿಸಿದರು. ಅಷ್ಟರಲ್ಲಿ ಶ್ರೀ ಸಿದ್ಧಾರೂಢರ ಮಹಾಸಮಾಧಿಯೂ ಮುಗಿದಿತ್ತು. ನಂತರ ಸಮಾಧಿಯ ದರ್ಶನ ಪಡೆದು ಹಿಂತಿರುಗಿದರು.
ಶ್ಯಾಮಾನಂದರು ಚಿಕ್ಕೋಡಿಯಲ್ಲಿದ್ದಾಗ ಅವರ ತಾಯಿ ದೇಹತ್ಯಾಗ ಮಾಡಿದಳು. ೧೯೪೪ರಲ್ಲಿ ಮುರಗೋಡಕ್ಕೆ ವರ್ಗವಾಗಿ ಅಲ್ಲಿಯೇ ನೌಕರಿಯಿಂದ ನಿವೃತ್ತರಾದರು.
ಮುಂದೆ ಶ್ರೀ ಸಿದ್ಧಾರೂಢರ ಪ್ರೇರಣೆಯಂತೆ ಗೋಕಾಕದ ಭಕ್ತರೊಬ್ಬರು ತಮ್ಮ ಮನೆಯಲ್ಲಿ ಶಾಸ್ತ್ರ ನಡೆಸಲು ಕರೆದುಕೊಂಡು ಹೋದರು, ಇವರ ಶಾಸ್ತ್ರ ಮತ್ತು ಇವರ ಸ್ಥಿತಿಯನ್ನು ಕಂಡು ಬಹಳ ಜನ ಮೆಚ್ಚಿಕೊಂಡರು. ಗೋಕಾಕದ ಘಟಪ್ರಭೆಯ ದಡದಲ್ಲಿ ಒಂದು ಹಳೆಯ ಅವಧೂತ ಮಠವಿತ್ತು. ಶ್ರೀ ಸಿದ್ಧಾರೂಢರ ಶಿಷ್ಯರೊಬ್ಬರು ಸಂಚಾರಗೈಯ್ಯುತ್ತ ಈ ಮಠದಲ್ಲಿ ಉಳಿದುಕೊಂಡು ದರ್ಶನ ಗದ್ದುಗೆಯನ್ನು ಸ್ಥಾಪಿಸಿದ್ದರು. ನಂತರ ಅಲ್ಲಿಯೇ ಸಮಾಧಿಸ್ಥರಾದರು. ಮುಂದೆ ಮಠವು ಹಾಳು ಸ್ಥಿತಿಯಲ್ಲಿ ಉಳಿಯಿತು. ಆಗ ರಾಗಿ ಗಂಗಪ್ಪನವರು ಮತ್ತು ಭಕ್ತರು ಅದರ ಮೇಲ್ವಿಚಾರಣೆ ನಡೆಸುತ್ತಿದ್ದರು. ಅವರು ಶ್ಯಾಮಾನಂದರ ಬಳಿಗೆ ಬಂದು ಈ ಮಠದಲ್ಲಿ ಶಾಸ್ತ್ರ ನಡೆಸಲು ವಿನಂತಿಸಿದಾಗ ಶ್ರೀಗಳು ಒಪ್ಪಿಕೊಂಡು ಅಲ್ಲಿ ಶಾಸ್ತ್ರ ಪ್ರಾರಂಭಿಸಿದಾಗ ಈ ಮಠವನ್ನು ಶ್ಯಾಮಾನಂದರಿಗೆ ಒಪ್ಪಿಸಿದರು. ಈ ಹಿಂದೆ ಸಿದ್ಧಾರೂಢರು ಶ್ಯಾಮಾನಂದರಿಗೆ `ಗೋಕಾಕದಲ್ಲಿ ನಮ್ಮದೊಂದು ಮಠವಾಗಲಿದೆ' ಎಂದು ನುಡಿದಿದ್ದರು. ಈ ಮಾತು ನೆನಪಾಗಿ ಆ ಮಠದಲ್ಲಿ ಉಳಿದರು. ಸುತ್ತಲಿನ ಗ್ರಾಮದ ಭಕ್ತರಿಗೆ ಶಿವಪಂಚಾಕ್ಷರಿ ಮಂತ್ರ ಅದೈತ ತತ್ವ ಮತ್ತು ಸಿದ್ಧಾರೂಢರ ಮಹತ್ವ ತಿಳಿಸಿದ ಪರಿಣಾಮವಾಗಿ ಮನೆ ಮನೆ ಹಳ್ಳಿ ಹಳ್ಳಿಗಳಲ್ಲಿ ಸಿದ್ದಾರೂಢರ ಪಾರಾಯಣ ನಡೆಯುತ್ತಿದ್ದವು.
ಮಠದಲ್ಲಿ ಇವರು ಶಾಸ್ತ್ರ ಹೇಳುವಾಗ ಒಂದು ಹೆಣ್ಣು ಒಂದು ಗಂಡು ಗುಬ್ಬಿಗಳು ಬಂದು ಗದ್ದುಗೆಯ ಮೇಲಿರುವ ಭಾವಚಿತ್ರದ ಮೇಲೆ ಕುಳಿತು ಎಲ್ಲರಂತೆ ಶಾಸ್ತ್ರ ಕೇಳಿ ರಾತ್ರಿ ಅಲ್ಲಿಯೇ ಉಳಿದು ಮರುದಿವಸ ಶಾಸ್ತ್ರ, ಆರತಿ ಮುಗಿದ ನಂತರ ಹಾರಿ ಹೊರಗೆ ಹೋಗುತ್ತಿದ್ದವು. ಅದರಲ್ಲಿ ಗಂಡು ಗುಬ್ಬಿಗೆ ಫಕೀರನೆಂದು ಹೆಸರಿಟ್ಟಿದ್ದರು. ಶ್ಯಾಮಾನಂದರು ಸಿದ್ಧರಿದ್ದ ಸಮಯದಲ್ಲಿ ಅಂತರಂಗದಲ್ಲಿ ಸನ್ಯಾಸಿಯಾಗಿದ್ದರೂ, ವಿಧಿವತ್ ಸನ್ಯಾಸ ಪಡೆಯಲು ಕಾಶಿಗೆ ಹೊರಟರು. ಆಗ ಫಕೀರನೆಂಬ ಗುಬ್ಬಿ ಹಾರಿ ಬಂದು ಗುರುಗಳ ಪಾದಸ್ಪರ್ಶಿಸಲು ಹೋಗಿ ಅವರ ಪಾದದಡಿಯಲ್ಲಿ ಸಿಕ್ಕಿಕೊಂಡಿತು. ಆಗ ಗುರುಗಳು ತಮ್ಮ ಹಸ್ತದಿಂದ ಫಕೀರನನ್ನು ಎತ್ತಿಕೊಂಡು ನೀರು ಕುಡಿಸಿದಾಗ ಪಕೀರ ಕೊನೆಯುಸಿರೆಳೆಯಿತು. ಆಗ ಗುರುಗಳು `ಫಕೀರಾ, ಮುಂದೆ ನೀನು ಮಾನವ ಜನ್ಮ ತಾಳಿದಾಗ ನನ್ನ ಹತ್ತಿರ ನಿನ್ನನ್ನು ಇಟ್ಟುಕೊಳ್ಳುತ್ತೇನೆ" ಎಂದು ಆಶೀರ್ವದಿಸಿ ಅಂತ್ಯಸಂಸ್ಕಾರ ಮಾಡಿದರು.
ಮುಂದೆ ಆ ಫಕೀರನೇ ಸಂಗಾನಟ್ಟಿ ಗ್ರಾಮದ ಮಲ್ಲಪ್ಪ ಮತ್ತು ಎಲ್ಲವ್ವ ದಂಪತಿಗಳ ಉದರದಲ್ಲಿ ಜನಿಸಿ ಅಲ್ಲಮನೆಂಬ ಹೆಸರಿನಿಂದ ಬೆಳೆದು ಹತ್ತು ವರ್ಷದವನಾದಾಗ ಭಕ್ತರ ಕರೆಯ ಮೇರೆಗೆ ಶ್ಯಾಮಾನಂದರು ಸಂಗಾನಟ್ಟಿ ಗ್ರಾಮಕ್ಕೆ ಹೋದಾಗ ಅಲ್ಲಮನನ್ನು ನೋಡಿ ಅವನ ತಂದೆ ತಾಯಿಗಳಿಗೆ ಅಲ್ಲಮನ ಪೂರ್ವಜನ್ಮದ ವಿಚಾರ ತಿಳಿಸಿ, ಅವರ ಮನವೊಲಿಸಿ ಕರೆದುಕೊಂಡು ಗೋಕಾಕಕ್ಕೆ ಬಂದರು. ಆ ಅಲ್ಲಮನೇ ಸದ್ಗುರುಗಳ ಶಿಷ್ಯ ಆತ್ಮಾನಂದರು. ಅವರೇ ಈಗಿನ ಮಠಾಧೀಶರು,
ಅದು ಇರಲಿ ನಂತರ ಶ್ಯಾಮಾನಂದರು ಕಾಶಿಗೆ ಹೋಗಿ ಮೃತ್ಯುಂಜಯ ಆಶ್ರಮದ ಮಹಾಮಂಡಲೇಶ್ವರರಿಂದ ವಿಧಿವತ್ತಾಗಿ ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡು ಶ್ರೀಮತ್ ಪರಮಹಂಸ ಶ್ಯಾಮಾನಂದ ಮಹಾರಾಜ ಮಹಾಮಂಡಲೇಶ್ವರ ಎಂಬ ನಾಮ ಪಡೆದು, ಗೋಕಾಕಕ್ಕೆ ಬಂದು ಕಾವಿಲಾಂಛನ ತೊಟ್ಟು ಭಕ್ತರಿಗೆ ನಿಜಗುಣರ ಎಲ್ಲ ಶಾಸ್ತ್ರ, ವಿಚಾರಸಾಗರ, ಭಗವದ್ಗೀತೆ, ಪಂಚದಶಿ ಮುಂತಾದ ಶಾಸ್ತ್ರ ಮತ್ತು ಅನ್ನ ದಾಸೋಹ ನಡೆಸುತ್ತಿದ್ದರು. ಹೆಚ್ಚು ಶಾಲಾಭ್ಯಾಸವಿಲ್ಲದಿದ್ದರೂ ಗುರು ಕರುಣೆಯಿಂದ ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರವಚನ ಮಾಡುತ್ತಿದ್ದು, ಆಯಾ ಭಾಷೆಯಲ್ಲಿ ಪದ್ಯ ಮತ್ತು ಅಭಂಗಗಳನ್ನು ರಚಿಸಿದರು. ಮುಂದೆ ಕೆಲವರು ಮಠಕ್ಕೆ ಟ್ರಸ್ಟ್ ಮಾಡಲು ಮುಂದಾದಾಗ ಗುರುಗಳ ಒಪ್ಪಿಗೆಯಂತೆ ಟ್ರಸ್ಟ್ ಆಯಿತು.
ಕೆಲವು ದಿವಸ ಕಳೆದ ನಂತರ ಕಮಿಟಿಯ ಸದಸ್ಯರು ಶ್ಯಾಮಾನಂದರ ಮೇಲೆ ಅಧಿಕಾರ ಚಲಾಯಿಸುತ್ತಿದ್ದುದರಿಂದ ಗುರುಗಳಿಗೆ ಬೇಸರವಾಗಿ ಕಮಿಟಿಯವರಿಗೆ ಕರೆದು ನಿಮ್ಮ ಮಠ ನಿಮ್ಮ ಪಾಲಿಗೆ ಇಟ್ಟುಕೊಳ್ಳಿರಿ” ಎಂದು ಹೇಳಿ ತನ್ನ ಶಿಷ್ಯ ಆತ್ಯಾನಂದರನ್ನು ಕರೆದುಕೊಂಡು ಹಿಮಾಲಯಕ್ಕೆ ಹೋಗಬೇಕೆಂದು ಯಾರಿಗೂ ಹೇಳದೆ ಹೊರಟರು. ರೈಲು ನಿಲ್ದಾಣಕ್ಕೆ ಹೊರಟಾಗ ದಾರಿಯಲ್ಲಿ ಧೂಪದಾಳ ಗ್ರಾಮದ ಶಿಷ್ಯರು ಇವರನ್ನು ಕರೆದುಕೊಂಡು ಮನೆಗೆ ಹೋಗಿ ವಿಷಯ ತಿಳಿದು ಇವರನ್ನು ಮುಂದೆ ಬಿಡಲಿಲ್ಲ. ಈ ಸುದ್ದಿ ಗೋಕಾಕದ ಭಕ್ತರಿಗೆ ತಿಳಿದು ಎಲ್ಲರೂ ಬಂದು ಗುರುಗಳ ಪಾದ ಹಿಡಿದು `ನಮ್ಮನ್ನು ಬಿಟ್ಟು ಹೋಗಬೇಡಿರಿ, ನಿಮಗಾಗಿ ಹೊಸಮಠವನ್ನು ಕಟ್ಟಿಸಿ ಕೊಡುತ್ತೇವೆ ನಡೆಯಿರಿ" ಎಂದು ಅವರ ಮನವೊಲಿಸಿ ಪುನಃ ಗೋಕಾಕ ಮಠಕ್ಕೆ ಕರೆದುಕೊಂಡು ಬಂದರು. ಮರುದಿವಸ ಶ್ಯಾಮಾನಂದರಿಗೆ ರಾತ್ರಿ ಮೂರು ಗಂಟೆಗೆ ಎಚ್ಚರಾಯಿತು. ಆಗ ಸಿದ್ಧಾರೂಢರು ಕೆಲವು ಶಿಷ್ಯರೊಡನೆ ಪ್ರತ್ಯಕ್ಷರಾಗಿ "ಏ... ಸಿಪಾಯಿ ಎಲ್ಲಿಗೆ ಹೋಗುವೆ ನಾನಿಲ್ಲವೇ? ನೀನು ಇಲ್ಲಿಯೇ ಇರು" ಎಂದು ಹೇಳಿ ಮಠದ ಹೊರಗಡೆ ಕಂಡ ಒಂದು ಖಲ್ಲಾ ಜಾಗೆಯಲ್ಲಿ ಒಂದು ಕಲ್ಲನ್ನಿಟ್ಟು ಅದೃಶ್ಯರಾದರು. ಆಗ ಶ್ಯಾಮಾನಂದರು ಸಂತೋಷದಿಂದ ಕಣ್ಣೀರು ಸುರಿಸುತ್ತ `ಸದ್ಗುರುವೇ, ನಿನ್ನ ಇಚ್ಛೆಯಂತೆ ನಡೆಯುತ್ತೇನೆ ತಂದೆ'' ಎಂದು ಗೋಕಾಕದಲ್ಲಿಯೇ ನೆಲೆಸಿದರು.
ಮುಂದೆ ಹಳೆಯ ಮಠದ ಬದಿಗಿರುವ ವಿಶಾಲವಾದ ಖಲ್ಲಾ ಜಾಗೆಯ ಮಾಲಿಕನು ಬಂದು ಜಾಗೆಯನ್ನು ಲಿಲಾವ್ ಮಾಡುವುದಾಗಿ ಹೇಳಿ ಹೋದನು. ಭಕ್ತರೂ ಆಗ್ರಹಪಡಿಸಿದ್ದರಿಂದ ಶ್ಯಾಮಾನಂದರು ಲಿಲಾವಿನಲ್ಲಿ ಭಾಗವಹಿಸಿ ತಮ್ಮಲ್ಲಿದ್ದ ಕೇವಲ ಏಳು ನೂರು ರೂಪಾಯಿಗಳನ್ನು ಮುಂಗಡ ಕೊಟ್ಟು ಒಂದು ತಿಂಗಳಲ್ಲಿ ಉಳಿದ ಹಣ ಕೊಟ್ಟು ಜಾಗೆ ಖರೀದಿಸುವುದಾಗಿ ಕರಾರು ಮಾಡಿಕೊಂಡು ಬಂದರು. ಒಂದು ತಿಂಗಳಲ್ಲಿ ಹಣ ಕೊಡದಿದ್ದರೆ ಮುಂಗಡ ಹಣ ಪಡೆಯುವಂತಿರಲಿಲ್ಲ. ಖರೀದಿಯೂ ಆಗುತ್ತಿರರಿಲ್ಲ. ಹೀಗೆ ಕರಾರು ಪತ್ರವಾಗಿತ್ತು. ಶ್ಯಾಮಾನಂದರು ತಾವಾಗಿ ಯಾರಿಗೂ ಕೈಯೊಡ್ಡಿದವರಲ್ಲ. ತಮ್ಮ ನಿವೃತ್ತಿ ವೇತನ ಮತ್ತು ಭಕ್ತರು ಕೊಟ್ಟ ಕಾಣಿಕೆ ಸಪ್ತಾಹಕ್ಕೆ ಖರ್ಚಾಗುತ್ತಿತ್ತು. ಜಾಗಾ ಖರೀದಿಸಲು ಒಂದು ದಿವಸ ಉಳಿದಿತ್ತು. ಹಣ ಕೂಡಲಿಲ್ಲ. ನಿವೇಶನ ಖರೀದಿಸುವ ವಿಚಾರ ಕೈಬಿಟ್ಟು, ಶ್ರೀ ಸಿದ್ಧಾರೂಢರನ್ನು ನೆನೆಯುತ್ತ ರಾತ್ರಿ ಮಲಗಿದರು. ಆಗ ಸುಮಾರು ಮೂರು ಗಂಟೆಗೆ ಅವರ ಕನಸಿನಲ್ಲಿ ಸಿದ್ದಾರೂಢರು ಬಂದು 'ಏ... ಸಿಪಾಯಿ ಹೀಗಮಲಗಿಕೊಂಡರೆ ಹೇಗೆ? ಸದ್ಗುರು ಕಾರ್ಯ ನೆರವೇರುತ್ತದೆ. ನಿನ್ನ ಕೆಲಸ ಮಾಡು” ಎಂದು ಆಶೀರ್ವದಿಸಿ ಅದೃಶ್ಯರಾದರು. ಆಗ ಶ್ಯಾಮಾನಂದರು ಎಚ್ಚರಾಗಿ ಸಿದ್ದರನ್ನು ನೆನೆಯುತ್ತ ಹಾಸಿಗೆ ತೆಗೆಯುವಾಗ ಅದರ ಬುಡದಲ್ಲಿ ನೂರರ ಇಪ್ಪತ್ತು ನೋಟುಗಳಿದ್ದವು. ಆಗ ತನ್ನ ಕನಸಿನಲ್ಲಿ ಗುರುಗಳು ಕೊಟ್ಟ ಅಭಯವಚನ ನೆನೆದು ಕಣ್ಣೀರು ಸುರಿಸಿ ಅವರ ಧ್ಯಾನ ಮಾಡುತ್ತ ಮರುದಿವಸ ಆ ಹಣವನ್ನು ಮಾಲಿಕರಿಗೆ ಕೊಟ್ಟು ಖರೀದಿಪತ್ರ ಬರೆಸಿಕೊಂಡರು.
ಮುಂದೆ ಮಠದ ಕಟ್ಟಡ ಪ್ರಾರಂಭವಾಗಿ ೧೯೭೩ರಲ್ಲಿ ಪೂರ್ತಿಯಾಯಿತು. ಶ್ಯಾಮಾನಂದರು ೧೯೭೫ರಲ್ಲಿ ಹೊಸದಾದ ಮಠದಲ್ಲಿ ವಾಸ ಮಾಡಿದರು. ಅಂದಿನಿಂದ ಪ್ರತಿ ಯುಗಾದಿ ಶುಭ ಸಂದರ್ಭದಲ್ಲಿ ಸಪ್ತಾಹ ಪ್ರಾರಂಭಿಸಿದರು. ಪ್ರತಿದಿನ ಪ್ರವಚನ, ಭಜನೆ, ಕೀರ್ತನ, ಅನ್ನಸಂತರ್ಪಣೆ ಹಾಗೂ ಅನೇಕ ಮಹಾತ್ಮರನ್ನು ಕರೆಸಿ ಪ್ರವಚನ ಮಾಡಿಸುತ್ತಿದ್ದರು. ಒಟ್ಟಿನಲ್ಲಿ ತಮ್ಮ ಗುರು ಸಿದ್ಧಾರೂಢರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸುತ್ತಿದ್ದರು. ಸಪ್ತಾಹದ ಕೊನೆಯ ದಿವಸ ಮಹಾಜಾಗರಣೆ ಕೌದಿಪೂಜೆಯೊಂದಿಗೆ ಸಪ್ತಾಹ ಮುಕ್ತಾಯವಾಗುತ್ತಿತ್ತು. ಶ್ಯಾಮಾನಂದರಲ್ಲಿ ಅಷ್ಟಮಹಾಸಿದ್ಧಿಗಳು ಪ್ರಾಪ್ತವಾಗಿದ್ದವು. ಅವುಗಳನ್ನು ಲೋಕೋದ್ಧಾರಕ್ಕಾಗಿ ಅನೇಕ ಪವಾಡಗಳು ನಡೆದವು.
ಹಿಡಕಲ್ಲ ಗ್ರಾಮದ ಭೀಮವ್ವ ಎಂಬ ಭಕ್ತಳು ಶ್ಯಾಮಾನಂದರಿಗೆ ಶರಣು ಹೋಗಿ ಗುರುಭಕ್ಕೆಯಾಗಿದ್ದು, ಮದುವೆಯಾಗಿ ಪತಿಯ ಮನೆ ಸೇರಿದಳು. ಮುಂದೆ ಭೀಮವ್ವಳ ಪ್ರತಿ ಮಾಯಪ್ಪನಿಗೆ ಕ್ಯಾನ್ಸರ್ ರೋಗ ತಗುಲಿದ್ದು, ಅನೇಕ ಡಾಕ್ಟರುಗೆ ತೋರಿಸಿದರೂ ಗುಣವಾಗಲಿಲ್ಲ. ಕೊನೆಗೆ ತನ್ನ ಗುರುಗಳಾದ ಶ್ಯಾಮಾನಂದರ ಮೇಲೆ ಭಾರ ಹಾಕಿ ಪ್ರತಿ ಅಮವಾಸ್ಯೆಗೆ ಮಠಕ್ಕೆ ಹೋಗಿ ದರ್ಶನ ಪಡೆದು ಗುರುವಿನ ತೀರ್ಥ ಪ್ರಸಾದ ತೆಗೆದುಕೊಂಡು ಬಂದು ಪತಿಗೆ ಕೊಡುತ್ತಾ ಹೋದಳು. ಗುರುಗಳ ಕೃಪಾಶೀರ್ವಾದದಿಂದ ಪೂರ್ತಿ ಗುಣವಾಯಿತು. ಆಗ ಶ್ಯಾಮಾನಂದರ ಮಹಿಮೆ ಅವರ ಮನೆಯವರಿಗೆ ಅರಿವಾಗಿ ಅವರನ್ನು ಕರೆದು ಪೂಜಿಸಿ ಕೃಪೆಗೆ ಪಾತ್ರರಾದರು. ಮುಂದೆ ಅವರ ಮನೆಯಲ್ಲಿ ಸಂಪತ್ತು ಬೆಳೆಯಿತು.
ಹೀಗೆ ಸದ್ಗುರುಗಳ ಲೀಲೆಯನ್ನು ಎಷ್ಟು ಬಣ್ಣಿಸಿದರೂ ಕಡಿಮಯೆ. ನಿಜವಾಗಲೂ ಶ್ಯಾಮಾನಂದರು ಸ್ಥಿತಪ್ರಜ್ಞರು. ಭಕ್ತರಿಗೆ ಬಂದ ನಾನಾ ದುಃಖಗಳನ್ನು ಅವರು ಹೇಳದಿದ್ದರೂ ತಾವಾಗಿ ಅರಿತು ನಿವಾರಿಸುತ್ತಿದ್ದರು. ಉತ್ತಮ ಅಧಿಕಾರಿ ಮುಮುಕ್ಷುಗಳಿಗೆ ಅದೈತ ತತ್ವಜ್ಞಾನ ಬೋಧಿಸಿ ಮುಕ್ತರನ್ನಾಗಿಸುತ್ತಿದ್ದರು. ಸುತ್ತಲಿನ ಹಳ್ಳಿಗಳಾದ ತುಕ್ಕಾನಟ್ಟಿ, ಮುಗಳಖೋಡ, ಮೆಟ್ಟಗುಡ್ಡ ಮುಂತಾದ ಗ್ರಾಮಗಳಿಗೆ ಹೋಗಿ ಪ್ರವಚನ ನೀಡಿ ಜನರನ್ನುದ್ದರಿಸುತ್ತಿದ್ದರು. ಅವರ ದಿವ್ಯ ಚರಿತ್ರೆಯನ್ನು ಇಲ್ಲಿ ಸಂಕ್ಷಿಪ್ತ ಬರೆಯಲಾಗಿದೆ. ಹೆಚ್ಚಿನ ವಿಚಾರ ತಿಳಿಯಬೇಕಾದವರು ಅವರ ಚರಿತ್ರೆಯಲ್ಲಿ ನೋಡಬಹುದು. ಶ್ರೀ ಶ್ಯಾಮಾನಂದರು ಮಹಾಸಮಾಧಿ ಹೊಂದಿದ ನಂತರ ಅವರ ಉತ್ತರಾಧಿಕಾರಿಗಳಾದ ಶ್ರೀ ಗುರು ಅತ್ಯಾನಂದರು ಗೋಕಾಕದ ಸೋಮವಾರಪೇಟ ಅಂಬಿಗರ ಓಣಿಯಲ್ಲಿದ್ದ ಸುಂದರ ಮಠದಲ್ಲಿ ತಮ್ಮ ಗುರುಗಳ ಸಂಪ್ರದಾಯವನ್ನು ಚಾಚೂ ತಪ್ಪದೆ ನಡೆಸುತ್ತಿರುವುದನ್ನು ಇಂದಿಗೂ ನೋಡಬಹುದು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
