ಕೊಡಗಿನ ಭೂಪಯ್ಯನ ಮಲರೋಗ ನಿವಾರಣೆ ಮಾಡಿದ ಸಿದ್ಧಾರೂಢರು


🌺ಕೊಡಗಿನ ಭೂಪಯ್ಯನ ಮಲರೋಗ ನಿವಾರಣೆ 🌺

ಶ್ರೀ ಸಿದ್ಧಾರೂಢರ ಶಿಷ್ಯರಲ್ಲಿ ಕೊಡಗಿನ ಮಹದಾನಂದ ಸ್ವಾಮಿಗಳೂ ಒಬ್ಬರು. ಸಿದ್ಧಾಶ್ರಮದಲ್ಲಿ ಸೇವೆ ಮಾಡುವಾಗ ಗುರುಕೃಪೆಯಿಂದ ಒಂದು ಸದಿಚ್ಛೆಯಾಯಿತು. ದೂರದ ಕೊಡಗಿನಲ್ಲಿ ಸಿದ್ದರ ಮಠ ಸ್ಥಾಪಿಸಿ ಅಲ್ಲಿಯ ಭಕ್ತರಿಗೆ ಅನುಕೂಲ ಮಾಡಿಕೊಡಬೇಕೆಂದು ಶ್ರೀಗಳ ಅಪ್ಪಣೆ ಪಡೆದು ಕೊಡಗಿಗೆ ಹೋದರು. ಅಲ್ಲಿ ಮಠ ಸ್ಥಾಪನೆಗಾಗಿ ಅನೇಕರಲ್ಲಿ ದೇಣಿಗೆ ಕೇಳಿದಾಗ ಯಾರಿಂದಲೂ ದೇಣಿಗೆ ಸಿಗದೆ  ನಿರಾಶರಾಗಿ ಮಡಿಕೇರಿಯ ಒಂದು ಕಟ್ಟೆಯ ಮೇಲೆ ಕುಳಿತು ಶ್ರೀ ಸಿದ್ಧಾರೂಢಾ, ನಿಮ್ಮ ಆಜ್ಞೆಯನ್ನು ಪಾಲಿಸಲು ನಾನು ಅಸಮರ್ಥನಾದನು' ಎಂದು ಕಣ್ಣೀರು ಸುರಿಸುತ್ತ ಕುಳಿತಿದ್ದರು. ಆಗ ಅಲ್ಲಿ ಆರೂಢರು ಪ್ರತ್ಯಕ್ಷರಾಗಿ ಪ್ರೀತಿಯಿಂದ ಅವರ ತಲೆಯನ್ನು ಸವರುತ್ತ ಮಹದಾನಂದಾ, ಏನೂ ಚಿಂತಿಸಬೇಡ. ನಿನ್ನ ಇಚ್ಛೆ ಬಹುಬೇಗ ನೆರವೇರುತ್ತದೆ. ನೀನು ಕೋದಂಡ ದೇವಯ್ಯನವರನ್ನು ಭೆಟ್ಟಿಯಾಗು, ನಿನ್ನ ಕಾರ್ಯ ಕೈಗೂಡುತ್ತದೆ' ಎಂದು ಆಶೀರ್ವದಿಸಿ ಅದೃಶ್ಯರಾದರು.
ಆಗ ಮಹದಾನಂದರಿಗೆ ಸ್ಫೂರ್ತಿ ಬಂದು ಕೋದಂಡ ದೇವಯ್ಯನವರ ಮನೆಗೆ ಬಂದರು. ದೇವಯ್ಯನವರು ಅವರನ್ನು ಬರಮಾಡಿಕೊಂಡು ಸತ್ಕರಿಸಿ ಬಂದ ಕಾರಣ ಕೇಳಿದರು. ಆಗ ಸ್ವಾಮಿಗಳು `ಕೊಡಗಿನಲ್ಲಿ ಸಿದ್ದಾಶ್ರಮ ಸ್ಥಾಪಿಸಬೇಕೆಂದಿದ್ದೇನೆ. ತಾವು ಧನಸಹಾಯ ಮಾಡಬೇಕು' ಎಂದು ಕೇಳಿದಾಗ, ದೇವಯ್ಯನವರು ಉದಾಸಿನ ಭಾವದಿಂದ ಹೀಗೆ ಹೇಳಿದರು 'ಸ್ವಾಮಿಗಳೇ, ದಾನಧರ್ಮದಿಂದ ನಮಗೆ ಯಾವ ಲಾಭವಾಗುತ್ತದೆ ತಿಳಿಸಿರಿ' ಎಂದಾಗ ಸ್ವಾಮಿಗಳು 'ದಾನಧರ್ಮದಿಂದ ಪುಣ್ಯ ವೃದ್ಧಿಯಾಗಿ ಸುಖಶಾಂತಿ ಲಭಿಸುತ್ತದೆ' ಎಂದರು.

ಸ್ವಾಮಿಗಳು ದೇವಯ್ಯನವರ ಮುಖದಲ್ಲಿ ಕಂಡು ಬರುವ ಚಿಂತೆಯ ಚಿಹ್ನೆಗಳನ್ನು ಗುರ್ತಿಸಿ ಚಿಂತೆಗೆ ಕಾರಣ ತಿಳಿಸಬೇಕೆಂದಾಗ ದೇವಯ್ಯನವರು ಅತಿ ದುಃಖದಿಂದ "ನನ್ನ ಒಬ್ಬನೇ ಮಗ ಭೂಪಯ್ಯನು ಕೆಲ ದಿನಗಳಿಂದ ಮಲರೋಗದಿಂದ ಪೀಡಿತನಾಗಿದ್ದಾನೆ. ಯಾವ ಉಪಚಾರದಿಂದಲೂ ಗುಣವಾಗಿಲ್ಲ" ಎಂದಾಗ ಸ್ವಾಮಿಗಳು, ಧನಿಕರೇ, ಇದಕ್ಕೆ ಚಿಂತಿಸಬೇಡಿರಿ. ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮಿಗಳಲ್ಲಿ ನಿಮ್ಮ ಮಗನನ್ನು ಕರೆದುಕೊಂಡು ಹೋಗುತ್ತೇನೆ. ಅವರ ಕೃಪಾದೃಷ್ಟಿಯಿಂದ ರೋಗ ಶಮನವಾಗುತ್ತದೆ. ಇದು ಸತ್ಯ' ಎಂದು ಹೇಳಿದರು. ಮತ್ತು ಸಿದ್ಧರ ಚರಿತ್ರೆಯಲ್ಲಿ ಬಂದ ಉದಾಹರಣೆಗಳನ್ನು ತಿಳಿಸಿದಾಗ ಕೋದಂಡದೇವಯ್ಯನವರು ಪ್ರಭಾವಿತರಾಗಿ ಸ್ವಾಮಿಗಳ ಸಹಿತ ತನ್ನ ಮಗ ಭೂಪಯ್ಯನನ್ನು ಕರೆದುಕೊಂಡು ಹುಬ್ಬಳ್ಳಿಗೆ ಬಂದರು.

ಗುರುಗಳಿಗೆ ಎಲ್ಲರೂ ನಮಸ್ಕರಿಸಿ ಬಂದ ಕಾರಣವನ್ನು ತಿಳಿಸಿದರು. ಆಗ ಗುರುಗಳು `ನೀವು ಪ್ರಸಾದ ಸೇವಿಸಿ ದಣಿವನ್ನು ನೀಗಿಸಿಕೊಳ್ಳಿರಿ' ಎಂದಾಗ ಅವರು ಪ್ರಸಾದ ಸ್ವೀಕರಿಸಿ ವಿಶ್ರಾಂತಿ ಪಡೆದ ನಂತರ ಗುರುಗಳು ಭೂಪಯ್ಯನನ್ನು ಕರೆದು ಅವನ ಮೇಲೆ ಪ್ರೇಮದಿಂದ ತಮ್ಮ ಹಸ್ತ ಆಡಿಸಿದರು. ಇದರಿಂದ ಭೂಪಯ್ಯನ ಮಲರೋಗ ಪೂರ್ಣ ಗುಣವಾಯಿತು. ಮಗನ ರೋಗ ನಿವಾರಣೆಯಾದದ್ದಕ್ಕೆ ದೇವಯ್ಯನಿಗೆ ಎಲ್ಲಿಲ್ಲದ ಆನಂದವಾಯಿತು. ಸಂತೋಷದಿಂದ ಅವರು ಕೆಲ ದಿನ ಆಶ್ರಮದಲ್ಲಿದ್ದು ಶಾಸ್ತ್ರ ಶ್ರವಣ ಮಾಡಿದರು. ನಂತರ ಗುರುಗಳ ಅಪ್ಪಣೆ ಪಡೆದು ಊರಿಗೆ ಮರಳಿದರು. ನಂತರ ಕೊಡಗಿನ ಚರಂಬಾಣಿಯೆಂಬಲ್ಲಿ ಸಿದ್ಧರ ಮಠ ಕಟ್ಟಲು ಆಗಿನ ಹದಿನೈದು ಸಾವಿರ ರೂಪಾಯಿಗಳನ್ನು ದೇವಯ್ಯನವರು ದೇಣಿಗೆ ಕೊಟ್ಟರು. ಇದರಿಂದ ಮಹದಾನಂದರು ಸುಂದರ ಮಠ ಕಟ್ಟಿಸಿ, ಶ್ರೀ ಸಿದ್ಧಾರೂಢರ ಮೂರ್ತಿ ಸ್ಥಾಪಿಸಿ ಕೊಡವ ಭಕ್ತರಿಗೆ ಶ್ರೀಗಳ ದರ್ಶನ ಭಾಗ್ಯ ದೊರಕಿಸಿಕೊಟ್ಟರು.


ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ