ಸಿದ್ಧರ ಮೇಲಿನ ಭಕ್ತಿಯಿಂದ ಮಗನು ಬದಕಿಸಿಕೊಂಡ ತಾಯಿ

 🌺 ಸಿದ್ಧರ ಮೇಲಿನ ಭಕ್ತಿಯಿಂದ  ಮಗನು ಬದಕಿಸಿಕೊಂಡ ತಾಯಿ 🌺



ಹಳೇಹುಬ್ಬಳ್ಳಿಯ ಕೃಷ್ಣಾಪೂರದಲ್ಲಿದ್ದ ಕುಂಬಾರ ಬಾಳವ್ವ ಸಿದ್ಧರ ಸೇವೆಯನ್ನು ಮನಮುಟ್ಟಿ ಮಾಡಿದಳು. ದಾಸೋಹದಲ್ಲಿ ಅಹುದು ಅಹುದು ಎನ್ನುವಂತೆ ದುಡಿದಳು. ಅವಳಿಗೆ ಸಿದ್ಧರ ಕಾರುಣ್ಯದಿಂದ ಎರಡು ಗಂಡುಮಕ್ಕಳಾದವು. ಇಬ್ಬರಿಗೂ ಸಿದ್ದಾರೂಢರ ಹೆಸರನ್ನೇ ಇಟ್ಟಳು. ದೊಡ್ಡವನಿಗೆ ದೊಡ್ಡ ಸಿದ್ದಪ್ಪ, ಸಣ್ಣವನಿಗೆ ಸಣ್ಣಸಿದ್ದಪ್ಪ ಎಂದು ಕರೆದಳು. ದೊಡ್ಡವನಿಗೆ ೧೪-೧೫ ವರ್ಷ, ಸಣ್ಣವನಿಗೆ ೧೨ - ೧೩ ವರ್ಷ ವಯಸ್ಸು ; ಅವರು ಇಬ್ಬರೂ ಇತರರ ಸಂಗಡ ಅಲ್ಲಿ ಕೇರಿ ಹಬ್ಬವನ್ನಾಚರಿಸಲು ಸಿದ್ಧಾರೂಢರ ಮಠಕ್ಕೆ ಹೋದರು. ಎಲ್ಲರೊಡನೆ ಅವರೂ ಕುಳಿತು ಊಟ ಮಾಡಿದರು. ಸಣ್ಣಸಿದ್ಧನು “ ನಾನು ನೀರು ತರುತ್ತೇನೆ'' ಎಂದು ಮಗಿ ತೆಗೆದುಕೊಂಡು ಕೆರೆಗೆ ಹೋದನು. ದೊಡ್ಡ ಸಿದ್ದನು ಮಾವಿನ ಮರದಡಿಯಲ್ಲಿ ಉಣ್ಣುತ್ತ ಕುಳಿತನು. ತಮ್ಮನು ತನಗಾಗಿ ನೀರು ತರುತ್ತಾನೆ ಎಂದು ಅಣ್ಣನು ತಮ್ಮನ ಹಾದಿ ಕಾಯ್ದನು. ನೀರು ತರಲು ಹೋದವನು ಬಾರದಿದ್ದಾಗ, ಅಲ್ಲಿಯೇ ಎಲ್ಲಾದರೂ ಆಡುತ್ತ ನಿಂತಿರಬೇಕು ಎಂದು ದೊಡ್ಡ ಸಿದ್ಧನು ಬಗೆದನು. ಕೆಲ ಸಮಯ ಕಳೆಯಿತು. ಕೆರೆಯ ದಂಡೆಯ ಮೇಲಿನ ಮುದುಕಿಯೊಬ್ಬಳು "ಹುಡುಗ ಮುಳುಗುತ್ತಿದೆ, ಯಾರಾದರೂ ಎತ್ತಿಕೊಳ್ಳ ಬನ್ನಿರೋ'' ಎಂದು ಚೀರಿದಳು. ಅಷ್ಟು ಹೊತ್ತಿಗೆ ಆ ಹುಡುಗನು ಒಂದೆರಡು ಸಲ ತಳ ಕಂಡು ಬಂದಿದ್ದನು, ನಾ ಕೂಡು ನೀ ಕೂಡು ಎನ್ನುವಾಗ ಅವನು ಒಮ್ಮೆ ಕಣ್ಣಲೆಯಾದನು. ಜನರು ಗುಂಪು ಗೂಡಿದರು. ಅಲ್ಲಿ ಮುಳುಗಿದನು, ಇಲ್ಲಿ ತೆಲಿ ಕಂಡಿತು. ಅದೋ  ಅಲ್ಲಿ ಗುಳ್ಳೆಗಳಳುತ್ತಿವೆ ಎಂದು ತಮತಮಗೆ ತಿಳಿದಂತೆ ಮಾತಾಡುತ್ತಿದ್ದರು. ನೀರಿಗೆ ಹೋದ ಸಣ್ಣಸಿದ್ದನು ಬಾರದಿರುವಾಗ ಕೆರೆಯಲ್ಲಿ ಹುಡುಗ ಮುಳುಗಿದ್ದಾನೆ ಎಂದು ಎಲ್ಲರೂ ಕೆರೆಯ ಕಡೆಗೆ ಓಡುವಾಗ, ದೊಡ್ಡಸಿದ್ದನೂ ಓಡಿದನು. ಅವನಿಗೆ ಕೆರೆಯಲ್ಲಿ ಏನೂ ಕಾಣಲಿಲ್ಲ. ಸಿದ್ಧಾರೂಢರಿಗೆ ಯಾರೋ ಹೋಗಿ ಹೇಳಿದರು ಅವರು ದೇವರೇ ನಡೆದು ಬಂದಂತೆ ಅಲ್ಲಿಗೆ ಬಂದರು.
ನಾಲ್ಕು ಜನ ಸಾಧುಗಳು ನೀರಿಗೆ ಜಿಗಿದರು. ನಾಲ್ಕು ಆಳು ನೀರಿನಲ್ಲಿ ಅವರು ಮುಳುಗಿ ಮುಳುಗಿ ಮೇಲೆದ್ದರು. ಎಲ್ಲಿಯೂ ಹುಡುಗನಿಲ್ಲ ಎಂದು  ಹೇಳಿದರು. ಗಟ್ಟ ಮುಟ್ಟಾದ ಸಾಧುಗಳೊಬ್ಬರು ಕೆರೆಯಲ್ಲಿ ಜಿಗಿದರು. ಕೆಸರಿನಿಂದ ಆವೃತವಾದ ಮಗುವನ್ನು ಮೇಲೆ ತಂದರು. ದೊಡ್ಡ ಸಿದ್ದನಿಗೆ ಕೆಸರಿನಲ್ಲಿ ಸಿಕ್ಕ ಹುಡುಗನು ತಮ್ಮ ತಮ್ಮನೇ ಎಂದು ಗುರುತಿಸಲಿಕ್ಕೆ ಬಹಳ ಹೊತ್ತು ಹಿಡಿಯಲಿಲ್ಲ. ಅವನು ಅಳಲಾರಂಭಿಸಿದನು. ಅಷ್ಟು ಹೊತ್ತಿಗೆ ಹಡೆದ ಕರುಳಿಗೆ ಮಗನ ಸಾವು ಹೇಗೆ ತಿಳಿದಿತ್ತೋ ಏನೋ! ಬಾಳವ್ವ ಒಂದೇ ಸವನೆ ಅಳುತ್ತ ಮೈಮೇಲಿನ ಅರಿವೆಯ ಪರಿವೆಯಿಲ್ಲದೆ ಓಡಿಬಂದಳು. ಸಾಧು ಮಗುವನ್ನು ಮೇಲೆ ಹಾಕುವುದಕ್ಕೂ, ತಾಯಿ ಚೀರುತ್ತ ಬರುವುದಕ್ಕೂ ಸರಿಹೋಯಿತು. “ತಂದೇ, ನೀನು ಕೊಟ್ಟಿದ್ದಿ, ನೀನೇ ಕಸಿದುಕೊಂಡೆಯಾ?'' ಎಂದು ಬಾಳವ್ವ ಸಿದ್ಧರೂಢರ  ಪದತಲದಲ್ಲಿ ಜೀವದ ಪರಿವೆ ಬಿಟ್ಟು ಹೊರಳಾಡಿದಳು. ಎದಿ ಎದಿ ಬಡಿದುಕೊಂಡು ಹಲುಬಿದಳು. ಸಿದ್ದರೂಡರು  ಅವಳ ತಲೆಯನ್ನು ನೇವರಿಸುತ್ತ “ತಾಯಿ, ಚಿಂತಿ ಮಾಡಬ್ಯಾಡ. ಗುರು ಕಾಯುತ್ತಾನೆ; ನಂಬು  ಶಿವನಿದ್ದಾನೆ. ಅವ ನಿನ್ನ ಮಗನಾದ ಸಿದ್ಧನನ್ನು ರಕ್ಷಿಸುತ್ತಾನೆ. ಏಳು. ನಾನು ಬೇಕೊ? ಏನು ನಿನ್ನ ಮಗಾ ಈ ಸಿದ್ಧನು ಬೇಕೋ? ಏನು ಆ ಮ್ಯಾಲಿನ ಸಿದ್ಧನು ಬೇಕೋ? ಎಂದು ಸಿದ್ಧರು ಕೇಳಿದರು. ಕುಂಬಾರ ಬಾಳವ್ವ ಸಾಮಾನ್ಯ ಹೆಣ್ಣು ಮಗಳು , ಮಗನು ಸತ್ತು ಬಿದ್ದ ಆ ದುರ್ಭರ ಗಳಿಗೆಯಲ್ಲಿಯೂ ಮನಸ್ಸಿನ ಸ್ತಿಮಿತ ಕಳೆದುಕೊಳ್ಳಲಿಲ್ಲ. ಮಗನನ್ನು ಅವಳು ಆಶಿಸಲಿಲ್ಲ. ಶಿವಸ್ವರೂಪಿಯಾದ ಸಿದ್ಧರನ್ನು ನಂಬಿದಳು. ನಾನು ಬೇಕೋ ಏನು ಮಗನು ಬೇಕೋ ಎಂದು ಸಿದ್ದರು ಕೇಳಿದಾಗ, ಅವಳು ಹಿಂದುಮುಂದು ನೋಡದೆ, ''ತಂದೇ ನನಗೆ ನೀನೇ ಬೇಕು' ಎಂದು ಗುರುವಿನ ಪಾದ ಗಟ್ಟಿಯಾಗಿ ಹಿಡಿದಳು. ಆ ತಾಯಿಗೆ ಮಗ ಕಾಣಿಸಲಿಲ್ಲ. ಸಾವು ಕಾಣಲಿಲ್ಲ. ಅಂಥ ದುಃಖಾತಿಶಯದಲ್ಲಿಯೂ ತನ್ನನ್ನು ಬಾಳಿನ ದಡದ ಕಡೆಗೆ ದಾಟಿಸುವ ಗುರುವೇ ಕಂಡನು. ಮೋಹದ ಪರೆ ಹರಿದಿತ್ತು. ಗುರುದೇವನಿದ್ದರೆ ಏನುಂಟು? ಏನಿಲ್ಲ ಎನ್ನುವ ನಂಬಿಕೆ ಅವಳದಾಗಿತ್ತು. ನೀನೇ ಬೇಕು ಎಂದು ಅವಳ ತಾಯಿಗರಳು ಕೂಗಿತು.
“ತಾಯಿ, ಸಿದ್ದರೇ ಬೇಕಾದರೆ, ಬೇಗ ೨೧ ಹರಳು ಆಯ್ದುಕೊಂಡು ಬಾ' ಎಂದರು. ಆ ತಾಯಿ ಗಡಬಡಿಸಿ ೨೧ ಹರಳು ಆಯುವಾಗ, ಸಿದ್ಧರು ಎದ್ದರು. ಮುಂದುಗಡೆ ಅಂಗಾತ ಚಲ್ಲಿದ ಮಗುವಿನ ಹೊಟ್ಟೆಯ ಮೇಲೆ ಪಾದಯಿಟ್ಟು ತುಳಿದರು. ಅವಳು ಎಣಿಸಿ ತಂದ ಹರಳು ಸಿದ್ದರ ಮುಂದೆ ಹಾಕುವಾಗ ಜೀವ ತಿರುಗಿತು. ಮಗು ಕಾಲು ಎಳೆದುಕೊಂಡಿತು. ಕೆಸರನ್ನು ಒರೆಸಿದರು. ಭಸ್ಮ ಲೇಪಿಸಿದರು. ಯಾರೋ ಮಗುವನ್ನು ಎತ್ತಿಕೊಂಡು ಸಿದ್ಧರ ಮಠಕ್ಕೆ ತಂದರು. ಭಲೇ ನನ್ನಪ್ಪ ನೀ ಮನುಷ್ಯನಲ್ಲೋ, ಸಾಕ್ಷಾತ್ ಮಹಾದೇವನೋ ಎಂದು ಕೂಡಿದ ದೈವ ಕೊಂಡಾಡಿತು. ಒಬ್ಬಳು ಮುಗ್ಧ ಮಹಿಳೆಯು ತನ್ನ ಕರುಳಿನ ಕುಡಿಯನ್ನು ಕಳೆದುಕೊಂಡ ದುರ್ಭರ ಪ್ರಸಂಗದ್ಧಲಿಯೂ ಗುರುಗಳಾದ ಸಿದ್ದರನ್ನು ದೇವರೆಂದು ಅವರು ತನ್ನ ಮಗನನ್ನು ನಿಶ್ಚಿತವಾಗಿ ಉಳಿಸುತ್ತಾರೆಂದು ಅವಳು ಗಟ್ಟಿಯಾಗಿ ನಂಬಿದಳು. ನಂಬಿ ತನ್ನ ಮಗನನ್ನು ಪಡೆದಳು.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಸಿದ್ಧರ ಅನಾದೃಶ್ಯ ಗುರುಭಕ್ತಿ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ