ಮಾತಾಜಿ ಕಲಾವತಿ ಚರಿತ್ರೆ

 🌺 ಮಾತಾಜಿ ಕಲಾವತಿಯ ಉದ್ಧಾರ 🌺





ಕಾರವಾರ ನಿವಾಸಿ ಬಾಬೂರಾವರು ಶ್ರೇಷ್ಠ ವಿಚಾರವಂತರು, ಸಾದಾ ಜೀವನ, ಶ್ರದ್ಧಾಳು ಅಂತಃಕರಣದವರಾಗಿದ್ದರು. ವನೌಷಧಿ ವ್ಯಾಪಾರಸ್ಥರಾಗಿದ್ದರು. ಅವರ ಧರ್ಮಪತ್ನಿ ಸೀತಾಬಾಯಿಯವರು ಸತ್ಯನಿಷ್ಟ ಪರೋಪಕಾರಿ ಪತಿಪರಾಯಣೆ ಯಾಗಿದ್ದಳು. ಲಗ್ನದ ನಂತರ ಎಂಟು ವರ್ಷಗಳಿಂದ ಸಂತಾನ ಪ್ರಾಪ್ತಿಯಾಗಿರ ಲಿಲ್ಲವಾದ್ದರಿಂದ ಹತ್ತೊಂಭತ್ತು ನೂರಾ ಏಳನೆಯ ಇಸ್ವಿಯ ಶ್ರಾವಣ ಮಾಸದ ಮಧ್ಯದಲ್ಲಿ ಬಾಬೂರಾಯರು ಪುತ್ರಪ್ರಾಪ್ತಿ ಗೋಸ್ಕರ ಸಹಸ್ರ ಲಿಂಗಾರ್ಚನೆ ಪ್ರಾರಂಭಿಸಿದರು. ಅದು ದುರ್ಗಾಷ್ಟಮಿಯ ದಿವಸ ಸಮಾಪ್ತಿಯಾಯಿತು. ಅದೇ ದಿವಸ ರಾತ್ರಿ ದೇವಿಯು ಪ್ರತ್ಯಕ್ಷಳಾಗಿ ನಾನು ನಿಮ್ಮ ವಂಶದಲ್ಲಿ ಜನ್ಮ ತಾಳುತ್ತೇನೆ' ಎಂದು ದೃಷ್ಟಾಂತ ತೋರಿಸಿದಳು. ಮುಂದ ಪತ್ನಿ ಸೀತಾಬಾಯಿಯು ಗರ್ಭ ಧರಿಸಿದಾಗ ಶ್ರೀದೇವಿಯ ಅಂಶದಿಂದಿರುವ ಕೂಸು ತನ್ನ ಪ್ರಭಾವ ಬೀರಿದಂತೆಲ್ಲ ಸೀತಾಬಾಯಿಯ ಭಾವ ಬದಲಾಯಿತು. ಯಾವಾಗಲೂ ಸತ್ಸಂಗದಲ್ಲಿರಬೇಕು. ಸಂತರ ಮುಖದಿಂದ ಬೋಧ ಶ್ರವಣ ಮಾಡಬೇಕೆಂಬ ಲವಲವಿಕೆ ಹೆಚ್ಚಾಗಿದ್ದರಿಂದ ಪದ್ಮನಾಭಾತೀರ್ಥರ ಮಠಕ್ಕೆ ಹೋಗಹತ್ತಿದಳು. ಅದರಂತೆ ಮನೆಯಲ್ಲಿ ಭಗವನ್ನಾಮಸ್ಮರಣೆ ಸಂತರ ಚರಿತ್ರೆ ಮತ್ತು ಸದ್ಗ್ರಂಥ ಗಳನ್ನು ಓದುತ್ತ ಯಾವಾಗಲೂ ಆನಂದದಿಂದ ಇರಹತ್ತಿದಳು. ಮುಂದೆ ಕ್ರಿ.ಶ. ಹತ್ತೊಂಭತ್ತುನೂರಾ ಎಂಟರಲ್ಲಿ ಋಷಿಪಂಚಮಿಯ ದಿವಸ ಬ್ರಾಹ್ಮ ಮುಹೂರ್ತದಲ್ಲಿ ಮಾತಾಜಿಯ ಜನ್ಮವಾಯಿತು.


ಕಾರವಾರದಲ್ಲಿ ಮಂಜುನಾಥ ಭಟ್ಟರೆಂಬ ಪ್ರಸಿದ್ದ ಜೋತಿಷಿಗಳಿದ್ದರು. ಬಾಬುರಾಯರು ಮಗುವಿನ ಜನ್ಮ ವೇಳೆಯನ್ನು ಕೊಟ್ಟು ಈ ಮಗುವಿನ ಭವಿಷ್ಯ ಹೇಗಿದೆ ತಿಳಿಸಬೇಕೆಂದಾಗ ಭಟ್ಟರು ಕುಂಡಲಿ ಸಿದ್ದಪಡಿಸಿ ಹೇಳಿದರು 'ಇಂಥ ಜನ್ಮಪತ್ರಿಕೆ ಅಪರೂಪವಾಗಿದ್ದು, ಲಕ್ಷ್ಮದಲ್ಲಿ ಎಲ್ಲಿಯೋ ಒಂದು ಸಿಗಬಹುದು. ಈ ವ್ಯಕ್ತಿಯ ಮುಖದಿಂದ ಬಂದ ಮಾತು ಸತ್ಯವಾಗುತ್ತದೆ. ಲಕ್ಷ್ಮಿ ಸರಸ್ವತಿಯರು ಯಾವಾಗಲೂ ಬೆನ್ನ ಹಿಂದೆ ಇರುವುದಲ್ಲದೆ ಆಪ್ತಷ್ಟರಾದಿಯಾಗಿ ಎಲ್ಲರಿಂದ ಅಲಿಪ್ತರಾಗಿರುತ್ತಾರೆ' ಎಂದು ಹೇಳಿದರು.


ಮುಂದೆ ಬಾಬುರಾಯರು ತಮ್ಮ ಎಲ್ಲ ಸಂಬಂಧಿಕರನ್ನು ಕೂಡಿಕೊಂಡು ಮಗುವಿಗೆ ರುಕ್ಮಾಬಾಯಿಯಂದು ನಾಮಕರಣ ಮಾಡಿದರು. ಮಗುವು ಬಿದಿಗೆಯ ಚಂದ್ರನಂತೆ ಬೆಳೆದು ಒಂದು ವರ್ಷದ ಬಳಿಕ ಹರಿ ಎಂಬ ಪವಿತ್ರ ನಾಮವನ್ನು ಉಚ್ಚರಿಸಿತು. ಮುಂದ ಏಳು ತಿಂಗಳಿಗೆ ಎಲ್ಲ ಮಾತುಗಳನ್ನು ಆಡತೊಡಗಿತು. ಮಗು ರುಕ್ಮಾಬಾಯಿಯು ಮೂರು ವರ್ಷದವಳಾದಾಗ ಬಾಬೂರಾಯರು ಗೋಕರ್ಣದಲ್ಲಿ ಮನೆ ಮಾಡಿ ಔಷಧ ಅಂಗಡಿ ಪ್ರಾರಂಭ ಮಾಡಿ ಅನೇಕ ಬಡವರಿಗೆ ಉಚಿತ ಔಷಧಿ ಕೊಡುತ್ತಿದ್ದರು. ಬಾಬುರಾಯರಿಗೆ ಸಂಗೀತದಲ್ಲಿ ಅಭಿರುಚಿಯಿದ್ದು, ಪೇಟಿ, ತಬಲಾ, ಪಿಡಲ್, ಬಾಸುರಿ ನುಡಿಸುವುದರಲ್ಲಿ ಹಾಡುವುದರಲ್ಲಿ ನಿಪುಣರು. ಮನೆಯಲ್ಲಿ ಪ್ರತಿದಿನ ಸಾಯಂಕಾಲ ಭಜನೆ ಮಾಡುವ ಪರಿಪಾಠವಿಟ್ಟುಕೊಂಡಿದ್ದರಿಂದ ಮಗು ರುಕ್ಮಬಾಯಿಯ ಮನಸ್ಸು ಹರಿಭಜನೆಯಲ್ಲಿ ರಮಿಸಿತು.


ಮಗುವಿನ ಆಟ ಪಾಟಗಳು ಇತರ ಮಕ್ಕಳಂತಿರದೆ, ಕೃಷ್ಣಮೂರ್ತಿಯನ್ನು ಒಂದು ಕಡೆಗೆ ಇಟ್ಟು ಧ್ಯಾನ ಚಿಂತನೆಯನ್ನು ಮಾಡುತ್ತಿದ್ದರೆ ಎಲ್ಲವನ್ನೂ ಮರೆತುಬಿಡುತ್ತಿದ್ದಳು. ಯಾರಾದರೂ ಭಿಕ್ಷೆಗೆ ಬಂದರೆ ಸಂತೋಷದಿಂದ ಭಿಕ್ಷೆ ನೀಡುತ್ತಿದ್ದಳು. ಒಂದು ಸಲ ಭಿಕ್ಷೆಗೆ ಬಂದವಳು ತನ್ನ ಮಗುವಿಗೆ ಏನಾದರೂ ಉಡಲು ಕೊಡು ಎಂದಾಗ ತನ್ನ ಮೇಲಿನ ಸ್ವೇಟರ ತೆಗೆದುಕೊಟ್ಟಳು. ಹೀಗೆ ಉದಾರಿಯಾಗಿದ್ದ ರುಕ್ಮಾಬಾಯಿಯು ಐದು ವರ್ಷದವಳಾದಾಗ ಮರಾಠಿ, ಕನ್ನಡ, ಹಿಂದಿ, ಗುಜರಾಥಿ ಭಾಷೆಯ ಭಜನೆಗಳನ್ನು ಹಾಡುತ್ತಿದ್ದಳು. ಅಲ್ಲಿಯ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಅವಳ ಮುಖದಿಂದ ಭಜನೆಗಳನ್ನು ಕೇಳಿ ಸಂತೋಷಪಡುತ್ತಿದ್ದರು. ಒಂದು ದಿವಸ ಬಾಬೂರಾಯರು ತನ್ನ ಮಗಳನ್ನು ಕರೆದುಕೊಂಡು ಸಮುದ್ರ ತೀರಕ್ಕೆ ಬಂದು ಕುಳಿತಾಗ ಮಗುವು ಮಳಲಿನಿಂದ ಈಶ್ವರಲಿಂಗವನ್ನು ಮಾಡಿ ಸಣ್ಣ ಶಂಖ ಕಪ್ಪಿಚಿಪ್ಪುಗಳನ್ನು ಕೂಡಿಸಿ ಅವುಗಳಿಂದ ಲಿಂಗಕ್ಕೇ ಭಸ್ಮ ರುಂಡಮಾಲೆಗಳನ್ನು ಮಾಡಿ ಶೃಂಗರಿಸಿ ಅದಕ್ಕೆ ಮಹಾಬಳೇಶ್ವರನೆಂದು ಹೆಸರಿಟ್ಟು ತಿನ್ನುವುದಕ್ಕೆ ತಂದ ಖಾದ್ಯ ಪದಾರ್ಥಗಳನ್ನು ನೈವೇದ್ಯ ಮಾಡುತ್ತಿದ್ದಳು, ಹೀಗೆ ಅವಳ ವ್ಯವಹಾರ ನಡೆದಿತ್ತು.


ಮಗುವಿಗೆ ಏಳು ವರ್ಷ ತುಂಬಿದ ಮೇಲೆ ಶಾಲೆಗೆ ಹೆಸರು ಹಚ್ಚಿದರು. ಶಾಲೆಯ ಶಿಕ್ಷಕರು ಕೊಟ್ಟ ಪಾಠಗಳನ್ನು ತಕ್ಷಣ ಒಪ್ಪಿಸುವುದು ಮತ್ತು ಅವಳ ನಡತೆಯನ್ನು ಎಲ್ಲರೂ ಮೆಚ್ಚುತ್ತಿದ್ದರು. ಒಂದು ದಿವಸ ಯಾರಿಗೂ ಹೇಳದೇ ಕೇಳದ ಸಮುದ್ರದ ತೀರದಲ್ಲಿರುವ ಹಳೆಯ ಮಂದಿರಕ್ಕೆ ಹೋಗಿ ಅಲ್ಲಿರುವ ದೊಡ್ಡ ಈಶ್ವರಲಿಂಗವನ್ನು ಅಪ್ಪಿಕೊಂಡು ಏಕಾಗ್ರಚಿತ್ತದಿಂದ ಕುಳಿತಿದ್ದಳು. ಇತ್ತ ಬಾಬೂರಾಯರು ತನ್ನ ಮಗಳು ಎಲ್ಲಿಗೆ ಹೋದಳೆಂದು ಹುಡುಕುತ್ತ ಸಮುದ್ರ ದಂಡೆಗೆ ಹೋದಾಗ ಒಬ್ಬರು ಈ ವಿಚಾರ ತಿಳಿಸಿದರು. ಆಗ ಇಬ್ಬರೂ ಕೂಡಿ ಆ ಮಂದಿರದಲ್ಲಿ ಪ್ರವೇಶಿಸಿ ದೇವರ ನಿನ್ನ ಲೀಲೆ ಅಗಾಧವಾದುದು' ಎಂದು ಬಾಬುರಾಯರು ರುಕ್ಮಮಾಬಾಯಿಯ ಮೈಮೇಲೆ ಕೈಯ್ಯಾಡಿಸಿದಾಗ ಅವಳು ನಿದ್ದೆಯಿಂದ ಎಚ್ಚರವಾದಂತ ಎದ್ದಳು. ಅವಳನ್ನು ಕರೆದುಕೊಂಡು ಮನೆಗೆ ಬಂದರು. ಆಗ ಅವಳಿಗೆ ಎಂಟು ವರ್ಷಗಳಾಗಿದ್ದವು.


ಪ್ರತಿವರ್ಷದಂತೆ ವೈಷ್ಣವ ಮಂದಿರದಲ್ಲಿ ಚಾತುರ್ಮಾಸ ಸಂದರ್ಭದಲ್ಲಿ ಮಂಗಳೂರಿನ ಸಮರ್ಥ ಸಂಪ್ರದಾಯದ ಬಾಳಹರಿದಾಸರ ಕೀರ್ತನವಿತ್ತು. ಆ ಕೀರ್ತನ ಕೇಳಲು ಬಾಬುರಾಯರು ತನ್ನ ಮಗಳನ್ನು ಕರೆದುಕೊಂಡು ಹೋದಾಗ ರುಕ್ಮಬಾಯಿಯು ಮನಗೊಟ್ಟು ಕೀರ್ತನ ಕೇಳಿದಳು, ಕೀರ್ತನ ಮುಗಿದ ನಂತರ ದಾಸರ ಹತ್ತಿರ ಹೋಗಿ ಅವರ ಕೀರ್ತನೆಯಲ್ಲಿ ಬಂದ ಕಠಿಣ ಶಬ್ದಗಳ ಅರ್ಥ ತಿಳಿಸಬೇಕೆಂದು ಕೇಳಿದಳು. ಆಗ ದಾಸರು ಆಶ್ಚರ್ಯಗೊಂಡು ಮಗುವಿಗೆ ತಿಳಿಯುವ ಹಾಗೆ ಶಬ್ದಗಳ ಅರ್ಥ ಬಿಡಿಸಿ ಹೇಳಿ ಸಮಾಧಾನಪಡಿಸಿ ಕಳಿಸಿದರು. ಅವರು ಹೇಳಿದ ಅರ್ಥ ಅವಳ ಬುದ್ದಿಯಲ್ಲಿ ಸ್ಥಿರಗೊಂಡಿತು. ಆಗ ಕೀರ್ತನೆಯಲ್ಲಿ ಬರುವ ಶ್ಲೋಕ, ಆರ್ಯಾ, ಅಭಂಗ ವಗೈರ ಗುಣಗುಣಿಸುತ್ತ ಮನೆಗೆ ಬಂದಳು. ಒಂದು ದಿವಸ ರಾತ್ರಿ ಎಲ್ಲರೂ ಮಲಗಿಕೊಂಡಾಗ ಹನ್ನೆರಡು ಗಂಟೆಗೆ ಮಹಡಿಯ ಮನೆಗೆ ಹೋಗಿ ಚಿಪಳಿ ಹಿಡಿದು ಕೀರ್ತನ ಪ್ರಾರಂಭಿಸಿದಳು. ಆಗ ಕಥಾಭಾಗದಲ್ಲಿ ಬರುವ ಭೀಮಸೇನನ ಪಾತ್ರ ಪ್ರಾರಂಭಿಸಿದಳು. ಅವಳ ಹೆಜ್ಜೆಯ ಕುಣಿತದಲ್ಲಿಯ ಶಬ್ದ ಕೇಳಿ ಬಾಬುರಾಯರಿಗೆ ಎಚ್ಚರವಾಗಿ ಮಗುವಿನ ಹತ್ತಿರ ಹೋಗಿ ಸಾವಕಾಶ ಹೇಳಿದರು 'ಮಗೂ, ರುಕ್ಮ  ಈಗ ದೇವರು ಮಲಗಿದ್ದಾನೆ. ಈ ಸಮಯದಲ್ಲಿ ಕೀರ್ತನೆ ಮಾಡಬಾರದು' ಎಂದು ಸಮಾಧಾನಪಡಿಸಿ ಕರೆದುಕೊಂಡು ಕೆಳಗೆ ಬಂದು ಮಲಗಿಸಿದರು.


ಮುಂದೆ ಶಾಲೆಯಲ್ಲಿ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾದವು. ಪರೀಕ್ಷೆಯ ಕೊನೆಯ ದಿವಸ ಪರೀಕ್ಷೆ ಮುಗಿಸಿ ಶಾಲೆಯ ಮೆಟ್ಟಿಲುಗಳನ್ನು ಇಳಿಯುವಾಗ ಒಂದು ಸಣ್ಣ ಕಾಗದದ ತುಂಡು ಹಾರುತ್ತ ಅವಳ ಮುಂದಿನಿಂದ ದೂರ ಹೋಯಿತು. ಆಶ್ಚರ್ಯದ ಸಂಗತಿಯೆಂದರೆ ಏಕಾಏಕೀ ವಾಯುವಿನ ದಿಶೆ ಬದಲಾಗಿ ಅದು ಹಾರುತ್ತ ಅವಳ ಎದೆಯ ಮೇಲೆ ಬಂದು ನಿಂತಿತು. ಅದನ್ನು ಹಿಡಿದು ಓದಲಾಗಿ ಅದರಲ್ಲಿ ಹೀಗೆ ಬರೆದಿತ್ತು. 'ಜಮತುಮ ಆಯಾ ಜಗತಮೆ  ತಬಜನ ಹಾಸೆ ತುಮಿರೋವೆ  ಅಬ ಐಸಿ ಕರಣಿಕೀಜಿಯೇ ತುಮಹಾಸೆ ಜನಲೋವೆ' ಈ ಅರ್ಥವಿತ್ತು. ಅವಳಿಗೆ ಇದರ ಅರ್ಥವಾಗಿತ್ತಾದರೂ ಹಿರಿಯರಿಂದ ಅರ್ಥ ತಿಳಿದುಕೊಂಡಳು.


ಒಂದು ದಿನ ಓರ್ವ ಪುರುಷನು ಕೈಯಲ್ಲಿ ತಂಬೂರಿ ಹಿಡಿದು ಇಂದಿನ ದಿನ ಸುದಿನ ಅಸ್ಥಿರ ದೇಹವಿದು. ನಾನಾವಸ್ಥೆ ಆಗದಿರದು | ಕಸ್ತೂರಿ ರಂಗನದಾಸರ ಶರಣು ಹೋಗುವುದಕ್ಕೆ || ಇಂದಿನ ದಿನ ಸುದಿನ | ಯೋಗಿಗಳೊಡನಾಡಿ ವಿಷಯ ಭೋಗ ನೀಡಾಡಿ ಶ್ರೀ ಗುರುವಿನ ಕೃಪೆಯನು ಪಡೆಯಲು || ಸದ್ಗುರು ಸಂಗತಿಯಿಂದ ಪಾಪವು ಛೇದನ | ಯಾದವರಾಯನ ಮೋದದಿ ಭಜಿಸಲು || ಈ ಪದ್ಯದರ್ಥ ಅವಳ ಬುದ್ದಿಯಲ್ಲಿ ಸ್ಥಿರವಾಗಿ ನಿಂತು ಮುಂದೆ ಶಾಲೆಗೆ ಹೋಗುವುದನ್ನು ನಿಲ್ಲಿಸಿದಳು. ಮೊದಲನೆಯ ಪುಸ್ತಕದಲ್ಲಿ ಬರುವ 'ಮುತ್ತು ಹೋದರೆ ಮತ್ತೆ ಬಪ್ಪದು, ಹೊತ್ತು ಹೋದರೆ ಮತ್ತೆ ಬಾರದು' ಈ ನುಡಿಗಳು ಮತ್ತು ಎರಡನೆಯ ಪುಸ್ತಕದ `ಸುಳ್ಳು ನುಡಿಯಲು ಬೇಡ ಜನರೂಳು ಕಳ್ಳನನಿಸಲು ಬೇಡ | ನೀ ಮೃಗಳ್ಳನಾಗಲು ಬೇಡ ಗುರು ತಂದೆ ತಾಯಿಗಳ ನುಡಿಗೆ || ಒಳ್ಳೆತನ ಬಿಡಬೇಡ, ಪ್ರಾಣಿಗಳಲ್ಲಿ ನಿರ್ದಯನಾಗಲುಬೇಡ | ಕ್ಷುಲ್ಲಕರ ಸಂಗದಲ್ಲಿ ಪೋಗಿ ನೀ ಕೆಡಬೇಡ | ಮೂರನೆಯ ಕವಿತೆಯಲ್ಲಿ ಬಡತನ ಬಂದಾಗ ನೆಂಟರ ಬಾಗಿಲಿಗೆ ಸೇರಬಾರದು' ಎರಡನೆಯ ಕವಿತೆಯಲ್ಲಿ ಮಂದಮತಿ ನಿಂದಿಸಲು ತಿಳಿದುಕೊಂಡವ ಜಾಣ | ಒಂದೇ ಮನದಲಿ ಧರ್ಮವನ್ನು ಮಾಡುವವ ಜಾಣ' ಈ ಬೋಧ ಮಾತ್ರ ಅವಳ ಬುದ್ಧಿಯಲ್ಲಿ ಉಳಿದವು.


ಮುಂದೆ ರುಕ್ಮಬಾಯಿ ಹದಿನೈದು ವರ್ಷದವಳಾದಾಗ ಲಗ್ನ ಯೋಗ ಕೂಡಿ ಬಂದಿತು. ಒಂದು ದಿವಸ ಲಗ್ನದ ಯೋಗ ಕೂಡಿ ಬಂದಾಗ ಸೀತಾಬಾಯಿಯು ತನ್ನ ಪತಿ ಬಾಬುರಾವನನ್ನು ಕುರಿತು `ನಮ್ಮ ಮಗಳು ಯಾವಾಗಲೂ ದೇವರ ನಾಮಸ್ಮರಣದಲ್ಲಿಯೇ ತೊಡಗಿರುವಂಥವಳು. ಆಕೆಯ ಮನಸ್ಸು ಸಂಸಾರದಲ್ಲಿ ರಮಿಸೀತೆ?' ಎಂದಾಗ ಅಲ್ಲಿಯೇ ಇದ್ದು ಕೇಳಿದ ರುಕ್ಮಬಾಯಿಯು ಬಂದು ಅಣ್ಣಾ ನಾನು ಲಗ್ನಮಾಡಿಕೊಳ್ಳುವದಿಲ್ಲ ,ಮೀರಾಬಾಯಿಯಂತೆ ಕೃಷ್ಣ  ಭಕ್ತಿಯಲ್ಲಿಯೇ ಕಾಲ  ಕಳೆಯುತ್ತೇನೆ' ಎಂದಳು. ಆಗ ತಂದೆ ಹೇಳಿದ ಮಗಳೇ, ಲಗ್ನವಾದರೆ ನಿನ್ನ ಕೃಷ್ಣ ಭಕ್ತಿಗೆ ಆತಂಕವಾಗುವುದಿಲ್ಲ. ಏಕನಾಥ ನಾಮದೇವ, ತುಕಾರಾಮರಂಥವರು ಪ್ರಪಂಚದಲ್ಲಿದ್ದು ಪಾರಮಾರ್ಥ ಸಾಧಿಸಿ ಸಂತರಾಗಿ ಮೆರೆದಿದ್ದಾರೆ. ಅದರಂತೆ ನಿನಗ ಸಾಧಿಸಲು ಬರುತ್ತದೆ' ಎಂದು ಹೇಳಿ ಮನವೊಲಿಸಿದರು. ಮುಂದೆ ಸ್ವಲ್ಪ ದಿವಸಗಳು ಸ್ನೇಹಿತರಿಂದ ಒಂದು ಪತ್ರ ಬಂದಿತು. ಅದರಲ್ಲಿ ಎಂ. ರಾಜಗೋಪಾಲರ ಜನ್ಮ ಪತ್ರಿಕೆಯು ಚಿ, ರುಕ್ಮಬಾಯಿಯ ಜನ್ಮಪತ್ರಿಕೆಗೆ ಕೂಡುತ್ತದೆ. ಮದ್ರಾಸ  ಪ್ರಾಂತದ ದಕ್ಷಿಣ ಅರ್ಕಾಟಕದ ಕಡಲೂರು ಜಿಲ್ಲೆಯ ತಿರಕೊಯಲೂರು ಊರಿನಲ್ಲಿ ಪೊಲೀಸ್ ಇನ್ಸಪೆಕ್ಟರರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಲ್ಲಾಪುರದವರು. ನಿಮಗೆ ಒಪ್ಪಿಗೆಯಾದಲ್ಲಿ ತಿಳಿಸಿರಿ ಎಂದಿತ್ತು. ಅದನ್ನು ನೋಡಿದ ಬಾಬುರಾಯರಿಗೆ ಸಂತೋಷವಾಗಿ ಬೇಗನೇ ಲಗ್ನ ಮುಹೂರ್ತ ತೆಗೆಸಿ ಒಪ್ಪಿಗೆ ಪತ್ರ ಕಳಿಸಿದರು.


ಮುಂದೆ ಲಗ್ನದ ಮುಹೂರ್ತ ಸಮೀಪ ಬಂದಂತೆ ರುಕ್ಮ  ಬಾಯಿಯ ಮುಖದಲ್ಲಿ ಆನಂದ ಕಂಡು ಬರದೆ  ಲಗ್ನವೆಂದರೆ ದೇವರಿಂದ ದೂರವಿಡುವ ವಿಘ್ನವಾಗಿದೆಯೆಂದು ತನ್ನ ಸಖಿಯರಿಗೆ ಹೇಳುತ್ತ ಕಣ್ಣೀರು ಸುರಿಸುತ್ತಿದ್ದಳು. ಲಗ್ನವು ಗೋಕರ್ಣದ ಭಂಡಾರಕೆರೆ ಮಠದಲ್ಲಿ ಆಯಿತು. ರಾಜಗೋಪಾಲನಿಗೆ ಹೆಚ್ಚಿಗೆ ರಜಾ ಇರದ್ದರಿಂದ ಮರುದಿವಸವೇ ಸರ್ವ ಮಂಡಳಿ ಹೊರಡಲು ಸಿದ್ಧರಾದರು. ಮಗಳನ್ನು ಕಳಿಸುವಾಗ ಬಾಬುರಾಯರು ಬೀಗರಾದ ನಾರಾಯಣರಾಯರಿಗೆ ಹೀಗ ವಿನಂತಿಸಿಕೊಂಡರು ನಮ್ಮ ಮಗಳಿಗೆ ಹೆಚ್ಚಿಗೆ ಅರಿವೆ  ಆಭರಣಗಳ ಹವ್ಯಾಸವಿಲ್ಲ. ಕೇವಲ ಪೂಜಾ ಪಾರಾಯಣ ಭಜನೆಯ ಇಚ್ಛೆಯುಳ್ಳವಳು. ಆ ಕಡೆಗೆ ತಾವು ಲಕ್ಷ್ಯವಿಡಬೇಕು. ಎರಡನೆಯ ಮಾತೆಂದರೆ ತಾವು ಸಹಜ ಹುಬ್ಬಳ್ಳಿಯ ಮೂಲಕ ನಿಮ್ಮೂರಿಗೆ ಹೋಗುವವರಿದ್ದೀರಿ. ಅಲ್ಲಿ ಪರಮಪೂಜ್ಯ ಶ್ರೀ ಸಿದ್ಧಾರೂಢರ ದರ್ಶನ ತೆಗೆದುಕೊಂಡು ಹೋದರೆ ಒಳ್ಳೆಯದು' ಎಂದಾಗ ನಾರಾಯಣರಾಯರಿಗೆ ಆ ಮಾತು ಹಿಡಿಸಿತು. ನಂತರ ನಿಶ್ಚಯಿಸಿದಂತೆ ಎಲ್ಲರೂ ಹೊರಟು ಹುಬ್ಬಳ್ಳಿಯಲ್ಲಿ ಇಳಿದು ಸಿದ್ಧರ ದರ್ಶನಕ್ಕೆ ಹೋದಾಗ ಅಂದು ದತ್ತ ಜಯಂತಿಯಿತ್ತು.


ನವದಂಪತಿಗಳು ಸಿದ್ದರಿಗೆ ಹಾರ ಹಾಕಿ ನಮಿಸಿದರು. ರುಕ್ಮಬಾಯಿಯು ಸಿದ್ದ ಚರಣಗಳಲ್ಲಿ ಮಸ್ತಕವನ್ನಿರಿಸಿ ತನ್ನ ಕಣ್ಣೀರಿನಿಂದ ಅವರ ಪಾದಗಳಿಗೆ ಅಭಿಷೇಕ ಮಾಡಿದಳು. ನನಗೆ ಸದ್ಗುರು ದೊರೆತನೆಂದು ತಿಳಿದಳು. ಆಗ ಸದಗುರುಗಳು ಅವಳ ಮನೋಗತವನ್ನು ಅರಿತು `ರುಕ್ಮಾ ಓಂ ನಮಃ ಶಿವಾಯ ಮಂತ್ರ ಪಠಿಸುತ್ತಿರು.

ನಿನ್ನ ಮನದಿಚ್ಛೆಯು ಪೂರ್ಣವಾಗುತ್ತದೆ' ಹೀಗೆ ಹೇಳಿ ಅವಳ ಮಸ್ತಕದಲ್ಲಿ ವರದ ಹಸ್ತವನ್ನಿರಿಸಿದರು. ಸದ್ಗುರುಗಳ ಕೃಪೆಯಿಂದ ದೊರಕಿದ ಓಂ ನಮಃ ಶಿವಾಯ ರೂಪಿ ಮೌಲಿಕ ಮಂತ್ರವನ್ನು ಆದರದಿಂದ ತನ್ನ ಕಂಠದಲ್ಲಿರಿಸಿಕೊಂಡು ಅಭಯ ವಚನವನ್ನು ಪ್ರಸಾದ ರೂಪದಿಂದ ತೆಗೆದುಕೊಂಡು   ರುಕ್ಮಾಬಾಯಿ ಮಂಡಳಿ ಸಹಿತ ತಮ್ಮ ಊರಿಗೆ ಹೋದರು. ಅಲ್ಲಿ ಸರಕಾರಿ ಬಂಗ್ಲೆಯಲ್ಲಿ ವಾಸ ಮಾಡಿದರು.


ಅಲ್ಲಿ ಮನೆಯವರೆಲ್ಲರೂ ಕನ್ನಡ ಮಾತಾಡುತ್ತಿದ್ದರು. ಮನೆಯ ತುಂಬ ಜನರಿದ್ದರೂ ಅವಳ ಸಾಧನೆಗೆ ಯಾರೂ ಅಡ್ಡ ಬರಲಿಲ್ಲ. ಮನೆಯವರ ಜೊತೆಗೆ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಳು. ಹೀಗಾಗಿ ಎಲ್ಲರೂ ಅವಳನ್ನು ಪ್ರೀತಿಯಿಂದ ನೋಡುತ್ತಿದ್ದರು. ಪತಿ ರಾಜಗೋಪಾಲನ ಸ್ವಭಾವವು ರುಕ್ಮಬಾಯಿಯ ಸ್ವಭಾವಕ್ಕೆ ಪೂರಕವಾಗಿತ್ತಲ್ಲದೆ ಅವಳ ವಯಸ್ಸು ಸಣ್ಣದಿದ್ದು ದೇವರ ಕಡೆಗೆ ಒಲವು ಮತ್ತು ಮನೆಯ ಪ್ರತ್ಯೇಕ ಕೆಲಸದಲ್ಲಿ ಪರಿಪೂರ್ಣವಿರುವುದನ್ನು ಕಂಡು ಬಹಳ ಆಶ್ಚರ್ಯಪಡುತ್ತಿದ್ದನು. ಹೀಗೆ ಎರಡು ವರ್ಷ ಕಳೆದವು.


ಈ ಅವಧಿಯಲ್ಲಿ ರುಕ್ಮಾಬಾಯಿಯು ಗರ್ಭಿಣಿಯಾದಾಗ ಬಾಬೂರಾಯರ ಪತ್ರದಂತೆ ನಾರಾಯಣರಾಯರು ಗೋಕರ್ಣಕ್ಕೆ ಕಳಿಸಿಕೊಟ್ಟರು. ಕಾರ್ತಿಕ ಪೌರ್ಣಿಮೆಯ ದಿವಸ ಮಹಾಬಳೇಶ್ವರನ ಉತ್ಸವದಲ್ಲಿ ಪಾಲ್ಗೊಂಡು ಮನೆಗೆ ಬಂದು ಮುಂಜಾನೆ ನಾಲ್ಕು ಗಂಟೆಗೆ ಸುಖರೂಪದಿಂದ ಗಂಡು ಮಗುವಿಗೆ ಜನ್ಮ ಕೊಟ್ಟಳು. ಆ ಗಂಡು ಮಗುವಿಗೆ ರುಕ್ಮಾಬಾಯಿಯ ಇಚ್ಛೆಯಂತೆ ಬಾಳಕೃಷ್ಣ ಎಂಬ ಹೆಸರಿಟ್ಟರು. ಅದೇ ತಿಂಗಳಿನಲ್ಲಿ ರಾಜಗೋಪಾಲನಿಗೆ ಶೇಜಿ ಎಂಬ ಊರಿಗೆ ವರ್ಗವಾಯಿತು. ಮಗುವಿಗೆ ಐದು ತಿಂಗಳು ತುಂಬಿದ ಮೇಲೆ ರಾಜಗೋಪಾಲನು ತನ್ನ ಪತ್ನಿ ಪುತ್ರನನ್ನು ಕರೆದುಕೊಂಡು ಹೋದನು. ಕಳ್ಳರನ್ನು ಹಿಡಿಯುವುದರಲ್ಲಿ ನಿಪುಣನಾದ ಅವನು ಕಳ್ಳರನ್ನು ಹಿಡಿಯಲು ಏಳು ದಿವಸ ತಿರುಗಾಡಿ ಮಾಲು ಸಹಿತ ಕಳ್ಳರನ್ನು ಹಿಡಿದು ತಂದನು. ಆಗ ಅವಿಶ್ರಾಂತ ಶ್ರಮವಹಿಸಿದ್ದರಿಂದ ಅವನ ಮೈಯಲ್ಲಿ ಅಸ್ತವ್ಯಸ್ತವಾಗಿ ಮಲಗಿದನು. ಆಗ ನೀರು ಬೇಡುವುದರೊಳಗಾಗಿ ಅವನ ಹೃದಯ ಕ್ರಿಯೆ ನಿಂತಿತು. ಆಗ ಹತ್ತೊಂಭತ್ತುನೂರಾ ಇಪ್ಪತ್ತೇಳನೆಯ ಇಸ್ವಿ ಆಷಾಢ ಏಕಾದಶಿಯಾಗಿತ್ತು. ಆಗ  ರುಕುಮಾಬಾಯಿಯು  ಎಂಟು ತಿಂಗಳ ಎರಡನೆಯ  ಮಗುವಿನ  ಗರ್ಭವತಿಯಾಗಿದ್ದಳು. ಹೀಗೆ ಅವಳಿಗೆ ಒಮ್ಮಿಂದೊಮ್ಮೆಲೇ ವೈಧವ್ಯ ಪ್ರಾಪ್ತಿಯಾಯಿತು. ಆಗ ಮಾವ ನಾರಾಯಣರಾವ ಒಬ್ಬರೇ ಇದ್ದು ಬೇರೆ ಯಾರು ಇರಲಿಲ್ಲ.


ಆಗ ತನ್ನ ಆಪ್ರೇಷ್ಟರು ಬಹುದೂರವಿದ್ದರು. ಇಂಥ ಪ್ರಸಂಗದಲ್ಲಿ ಅಂತ್ಯಕ್ರಿಯೆಗೆ ಪೊಲೀಸ್ ಖಾತೆಯವರು ನೆರವಾಗಬೇಕಾಯಿತು. ಆಗ ರುಕುಮಾಬಾಯಿಗೆ ಸಣ್ಣ  ವಯಸ್ಸು ಪರತಂತ್ರಳಾಗಿದ್ದಳು. ಪತಿಯ ಆಧಾರವಿಲ್ಲದಿದ್ದರೆ ಇನ್ನಿತರರ ಆಶ್ರರು ವ್ಯರ್ಥವಾಗುತ್ತವೆ. ಪರಮಾತ್ಮನನ್ನು ತನ್ನ ಹತ್ತಿರ ಮಾಡಿಕೊಳ್ಳಬೇಕಾದರೆ ಅವನು ಇಚ್ಚಿಸಿದಂತೆ ಸೇವೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಎರಡು ಮಕ್ಕಳನ್ನು ಜೋಪಾನ ಮಾಡುತ್ತ ಅಂಥ ಸೇವೆ ಮಾಡಲು ಆಗುವುದಿಲ್ಲವಾದ್ದರಿಂದ ಜೀವಿಸುವುದು ವ್ಯರ್ಥವಾಗುತ್ತದೆಯೆಂಬ ಪ್ರಬಲ ವಿಚಾರ ಮನಸ್ಸಿನಲ್ಲಿ ಹೊಳೆದಿದ್ದರಿಂದ ಮನೆಯಿಂದ ಎರಡು ಪರ್ಲಾಂಗ ದೂರದಲ್ಲಿದ್ದ ಒಂದು ಬಾವಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಹೋದಾಗ ಆ ವೇಳೆಯಲ್ಲಿ ಅಲ್ಲಿ ಓರ್ವ ಜಟಾಧಾರಿ ಸಾಧು ಪುರುಷನು ಪ್ರಕಟನಾಗಿ, ಏ ತಾಯಿ ನಿಲ್ಲು, ನಿಲ್ಕು ಆತ್ಮಹತ್ಯೆ ಮಾಡಿಕೊಳ್ಳಲು ನೀನು ಬಂದಿಲ್ಲ. ಜೀವಕೊಡುವ ಜನರನ್ನು ಉಳಿಸುವ ಸಲುವಾಗಿ ನಿನ್ನ ಜನ್ಮವಾಗಿದೆ. ನಿನ್ನಿಂದ ಜಗದೋದ್ಧಾರವಾಗಬೇಕಾಗಿದೆ. ಆದಷ್ಟು ಬೇಗ ಶ್ರೀ ಸಿದ್ಧಾರೂಢರ ಕೃಪೆಯಿಂದ ಸುಖರೂಪಳಾಗುವಿ. ಇಷ್ಟು ಹೇಳಿ ಅದೃಶ್ಯರಾದರು. ಆಗ  ರುಕ್ಮಾಬಾಯಿ ವಿಚಾರ ಮಾಡುತ್ತ ಸದ್ಗುರು ಸಿದ್ದಾರೂಢರೇ ಈ ರೂಪದಿಂದ ಬಂದು ಹೀಗೆ ಉಪದೇಶಿಸಿದ್ದಾರೆ ಎಂದು ಭಾವಿಸಿ ಅಲ್ಲಿಂದ ಮರಳಿ ಮನೆಗೆ ಬಂದಳು. ಅಷ್ಟರಲ್ಲಿ ಪೊಲೀಸ್ ಅಧಿಕಾರಿಗಳು ಕೊಟ್ಟ ಸುದ್ದಿಯ ಮೂಲಕ ರಾಜಗೋಪಾಲನ ಅಣ್ಣ ರಾಮರಾವನು ಬಂದು ಮೇಲ್ನೋಟಕ್ಕೆ ಅನುಕಂಪ ತೋರಿಸಿದನಾದರೂ ರಾತ್ರಿ ಎಲ್ಲರೂ ಮಲಗಿದಾಗ ಅವನು ಒಳ್ಳೆಯವನಾದರೂ ತನ್ನ ಹೆಂಡತಿಯ ಒತ್ತಾಯಕ್ಕೆ ಮಣಿದು ಮನೆಯಲ್ಲಿಯ ಮುಖ್ಯ ಮುಖ್ಯ ಕಾಗದಪತ್ರ, ಹಣ, ಆಭರಣಗಳು ಮತ್ತು ಒಳ್ಳೆಯ ಪಾತ್ರೆಗಳನ್ನು ತೆಗೆದುಕೊಂಡು ಯಾರಿಗೂ ಹೇಳದೆ ಕೇಳದೆ ತನ್ನೂರಿಗೆ ಹೋದನು.


ಇದರಿಂದಾಗಿ   ರುಕ್ಮಾಬಾಯಿಗೆ ತೀವ್ರ ವೈರಾಗ್ಯ ಬಂದು ಇನ್ನು ಮುಂದೆ ಶ್ರೀ ಸಿದ್ಧಾರೂಢರ ದರ್ಶನ ಪಟ್ಟು ಬೇರೆ ಯಾವುದೂ ಬೇಡವೆನಿಸಿ ಮನೆಯಲ್ಲಿ ಇನ್ನುಳಿದ ಟೇಬಲ್, ಕಪಾಟ, ಖುರ್ಚಿ ರಾಜಗೋಪಾಲನು ತೊಡುವ ಅರಿವೆಗಳನ್ನು ಅಲ್ಲಿಯ ಪೊಲೀಸರಿಗೆ ಕೊಟ್ಟು ಬರಿಗೈಯಾದಳು. ಮುಂದೆ  ತಂದೆ  ಬಾಬುರಾಯರು ಬಂದು ಎಲ್ಲರನ್ನೂ ಕರೆದುಕೊಂಡು ಹುಬ್ಬಳ್ಳಿಗೆ ಬಂದಾಗ ಬಾಬುರಾಯರು ರುಕ್ಮಾಬಾಯಿಗೆ `ಶ್ರೀ ಸಿದ್ಧಾರೂಢರ ದರ್ಶನಕ್ಕೆ ಹೋಗೋಣವೇ?' ಎಂದು ಪ್ರಶ್ನಿಸಿದಾಗ, ಅವಳು ಬೇಡವೆಂದು ಹೇಳಿದಳು. ಏಕೆಂದರೆ ಒಂದು ಸಲ ಮಠಕ್ಕೆ ಹೋದರೆ ಮರಳುವಂತಿಲ್ಲ. ಎರಡು ಮಕ್ಕಳನ್ನು ಕಟ್ಟಿಕೊಂಡು ಮಠದಲ್ಲಿ ಸೇವೆ ಮಾಡುವುದು ಅಸಾಧ್ಯವೆಂದು ತಿಳಿದು ಎಲ್ಲರೂ ಗೋಕರ್ಣಕ್ಕೆ ಬಂದರು. ಮುಂದೆ ಒಂದೂಕಾಲು ತಿಂಗಳಲ್ಲಿ ಅವಳ ಗರ್ಭದಿಂದ ಗಂಡುಕೂಸು ಜನಿಸಿತು.


ಆ ಸಮಯದಲ್ಲಿ  ರುಕ್ಮಾಬಾಯಿಯು ಕಣ್ಣುಮುಚ್ಚಿಕೊಂಡು ಹರಿನಾಮ ಸ್ಮರಣೆಯಲ್ಲಿ ಮಗ್ನಳಾಗಿ ಯಾರೊಡನೆಯೂ ಮಾತಾಡುತ್ತಿರಲಿಲ್ಲ. ಮಗುವಿಗೆ ಎರಡು ತಿಂಗಳು ತುಂಬಿದ ನಂತರ ಇನ್ನು ಮುಂದೆ ಹುಬ್ಬಳ್ಳಿಯ ಸಿದ್ದಾರೂಢರ ಮಠಕ್ಕೆ ಹೋಗಿ ಆರೂಢರ ಆಜ್ಞೆಯಂತೆ ಅವರ ಸೇವೆ ಮಾಡುತ್ತ ಅಲ್ಲಿಯೇ ಇರಬೇಕು ಎಂದು ಒಂದು ದಿನ ತಾಯಿಯನ್ನು ಕುರಿತು 'ಅವ್ವಾ , ನಾನು ಜನ್ಮಕ್ಕೆ ಬಂದು ಏನೂ ಸಾಧನೆ ಮಾಡಿಕೊಳ್ಳಲಿಲ್ಲ. ಈ ದೇಹವನ್ನು ಸುಮ್ಮನೇ ಬೆಳೆಸಿಕೊಳ್ಳುವುದರಲ್ಲಿ ಏನೂ ಪ್ರಯೋಜನವಿಲ್ಲ. ಕಾಲನ ಕರ ಯಾವಾಗ ಬರುವುದೋ ಗೊತ್ತಿಲ್ಲ. ಅದರ ಪೂರ್ವದಲ್ಲಿ ಮನುಷ್ಯ, ಕರ್ತವ್ಯ ಮಾಡಬೇಕಾಗುತ್ತದೆ. ಅದಕ್ಕಾಗಿ ನೀವು ಶೋಕ ಮಾಡದ ನನಗೆ ಗುರುಗಳ ಕೃಪೆಯಾಗಲಿ ಎಂದು ಆಶೀರ್ವದಿಸಿ ಕಳಿಸು' ಎಂದು ಹೇಳಿ ನಮಸ್ಕರಿಸಿ ಹೋದಳು.


ಮರುದಿವಸ ಬಾಬುರಾಯರು  ರುಕ್ಮಾಬಾಯಿಯ ಖೋಲಿಗೆ ಹೋಗಿ ಅವಳು ತನ್ನ ತಾಯಿಯ ಮುಂದೆ ಹೇಳಿದ ಮಾತನ್ನು ಮುಂದಿಟ್ಟರು. ಮಗಳು ಅದೇ ಮಾತನ್ನು ಪುನರುಚ್ಚರಿಸಿದಾಗ ಅವನ ಎದೆಗೆ ಚೂರಿ ಹಾಕಿದಂತಾಗಿ ನೆಲಕ್ಕೆ ಕುಸಿದನು. ಅಷ್ಟರಲ್ಲಿ ಬಾಬುರಾಯರಿಗೆ ಸಮಾಧಾನಪಡಿಸುವುದರ ಸಲುವಾಗಿ ಸ್ವಾಮಿ ಪೂರ್ಣಾನಂದರು ಬಂದರು. ಆಗ ಬಾಬುರಾಯರು ತಮ್ಮ ದುಃಖಕ್ಕೆ ಕಾರಣ ತಿಳಿಸಿದಾಗ ಸ್ವಾಮಿಗಳು ಹೇಳಿದರು 'ಬಾಬುರಾಯರೇ ನೀವು ದೊಡ್ಡ ಭಾಗ್ಯವಂತರು. ಒಂಬತ್ತು ವರ್ಷದ ಹಿಂದೆ ನಾನು ಹೇಳಿದ ನಿಮ್ಮ ಮಗಳ ಭವಿಷ್ಯ ಮರತಂತೆ ಕಾಣುತ್ತದೆ. ಅವಳು ಜಗತ್ತಿನ ಉದ್ಧಾರಕ್ಕಾಗಿ ಅವತರಿಸಿದ್ದಾಳೆ. ನೀವು ಅವಳಿಗೆ ಅಡ್ಡ ಬರದೆ ಸಿದ್ಧಾಶ್ರಮದಲ್ಲಿರಲು ಸಂತೋಷದಿಂದ ಅನುಮತಿ ಕೊಡಿರಿ' ಎಂದಾಗ ಬಾಬುರಾವರು ಸಮಾಧಾನಗೊಂಡರು. ನಂತರ ಸ್ವಾಮಿಗಳು ಸ್ವಸ್ಥಾನಕ್ಕೆ ಹೋದ ನಂತರ ತನ್ನ ಮಗಳಿಗೆ ಸಿದ್ಧಾಶ್ರಮದಲ್ಲಿರಲು ಸಮ್ಮತಿಸಿದರಾದರೂ ಈಗಲೇ ಬೇಡ. ಕೆಲವು ದಿವಸ ಕಳೆಯಲಿ ಎಂದು ಹೇಳಿದರು. ಆಶ್ಚರ್ಯದ ಸಂಗತಿಯೆಂದರೆ ಈ ವಿಷಯವನ್ನು ಗುಪ್ತವಾಗಿ ಇಟ್ಟು ಬಾಬುರಾಯರು ಮುಂದೆ ಸ್ವಲ್ಪ ದಿವಸಗಳಲ್ಲಿ ತೀರಿಕೊಂಡರು. ಇದರಿಂದಾಗಿ ಎಲ್ಲರೂ ದುಃಖದಲ್ಲಿ ಮುಳುಗಿದರು.


ರುಕ್ಮಾಬಾಯಿಯು ನಾಲ್ಕು ವರ್ಷ ಸಂಸಾರ ಮಾಡಿದರೂ ದೇವರು ಅವಳ ಮೇಲೆ ಸಂತೋಷಗೊಂಡು ತೀವ್ರ ವೈರಾಗ್ಯ ಕೊಡಮಾಡಿದ್ದನು. ಆಪ್ರೇಷ್ಟರಲ್ಲಿ ಅವರ ಸೋದರತ್ತೆ ರುಕ್ಮಾಬಾಯಿಗೆ ಮಗೂ, ನೀನು ಇನ್ನೂ ಸಣ್ಣವಳು, ಶಿಕ್ಷಣ ಮುಂದುವರಿಸಿದರೆ ಒಳ್ಳೆಯದು. ಇಲ್ಲದಿದ್ದರೆ ದವಾಖಾನೆಯಲ್ಲಿ ನರ್ಷ ಕೆಲವು ಹಗುರಾಗಿರುತ್ತದೆ. ಅದನ್ನು ಮಾಡುವುದರಿಂದ ಪರೋಪಕಾರವಾಗುತ್ತದೆ. ನೀವು ಒಪ್ಪಿಕೊಂಡರೆ ಅದರ ಬಗ್ಗೆ ಪ್ರಯತ್ನ ಮಾಡುತ್ತೇನೆ' ಎಂದಾಗ ರುಕ್ಮಾ ಹೇಳಿದಳು ಇನ್ನು ಮುಂದೆ ಶಿಕ್ಷಣ ನನ್ನ ತಲೆಗೆ ಹಿಡಿಸುವುದಿಲ್ಲ. ನರ್ಸ ಕೆಲಸವೂ ನನ್ನಿಂದ ಸಾಧ್ಯವಿಲ್ಲ, ಪರೋಪಕಾರದ ನಿಜಾರ್ಥವು ಸಂತರಿಗೇ ಗೊತ್ತು, ನೀವು ಹೇಳುವುದಕ್ಕಿಂತಲೂ ಬೇರೆಯಾದ ಪರೋಪಕಾರ ನನಗೆ ಮಾಡಬೇಕಾಗಿದೆ' ಎಂದು ಆಗ ಅವಳ ಮಾವ ಹೇಳಿದ ರುಕ್ಮಾ ಈಗ ನಿನಗೆ ಹತ್ತೊಂಭತ್ತು ವರ್ಷ. ಮುಂದಿನ ಜೀವನ ನಿನಗೆ ಕಷ್ಟಕರವಾಗುತ್ತದೆ. ನೀನು ಪುನರ್ವಿವಾಹ ಮಾಡಿಕೊ ಹಟಮಾಡಬೇಡ ಎಂದನು. ಆಗ   ರುಕ್ಮಾ ಬಾಯಿ ಮಾಮಾ, ಯಾರ ಇಚ್ಚೆ ಸಂಸಾರದಲ್ಲಿ ಪೂರ್ಣವಾಗಿಲ್ಲವೋ ಅವರು ಸಂತೋಷದಿಂದ ಲಗ್ನ ಮಾಡಿಕೊಳ್ಳಬೇಕು. ಅವಳಿಗೆ ಪುರುಷನ ಆಧಾರ ಬೇಕಾಗುತ್ತದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಯಾರ ಸಂಬಂಧ ನಾವು ಮಾಡಿಕೊಳ್ಳುವವೋ ಅವರು ಸಾಯುವುದಿಲ್ಲವೆಂದು ನೀವು ಭರವಸೆ ಕೊಡಬಲ್ಲಿರಾ? ಅದು ಹೇಗೆ ಸಾಧ್ಯ? ಅದಕ್ಕಾಗಿ ನಾನು ಹೇಳುತ್ತೇನೆ. ಯಾರೂ ಎಂದಿಗೂ ಸಾಯದ ಅಮರನಾಗಿರುವನೋ ಅವನನ್ನು ಲಗ್ನವಾಗಲು ನಿಶ್ಚಯಿಸಿದ್ದೇನೆ' ಎಂದಾಗ ಅವನು ನಿರುತ್ತರನಾದನು.


ರುಕ್ಮಾಬಾಯಿಗೆ ರಾತ್ರಿ ನಿದ್ರೆ ಬರಲಿಲ್ಲ. ಸ್ವಲ್ಪ ಕಣ್ಣು ಮುಚ್ಚಿದರೆ ಏಳು ಹುಬ್ಬಳ್ಳಿಗೆ ಯಾವಾಗ ಹೋಗುವಿ ಎಂದು ಯಾರೋ ಹೇಳಿದಂತಾಗುತ್ತಿತ್ತು. ಅದಕ್ಕಾಗಿ ಅವಳು 'ಹೇ ಪ್ರಭೋ ನಿನ್ನ ಸೇವೆಗಾಗಿ ಈ ದೇಹವನ್ನು ಸವೆಸಿಕೊಳ್ಳದಿದ್ದರೆ ಇದರಿಂದ ಬಿಡುಗಡೆ ಮಾಡು' ಹೀಗೆ ಪ್ರಾರ್ಥಿಸಿಕೊಳ್ಳುತ್ತಿದ್ದಳು. ಅವಳ ಪ್ರಾರ್ಥನೆಯನ್ನು ದೇವನು ಮನ್ನಿಸಿದನೇನೋ ಅಂದೇ ರಾತ್ರಿ, ರುಕ್ಮಾ  ಬಾಯಿ ಮುಂಜಾನೆ ಎದ್ದು ಹುಬ್ಬಳ್ಳಿಗೆ ಹೋಗು ಎಂದು ದೃಷ್ಟಾಂತವಾಯಿತು. ಅದರ ಪ್ರಕಾರ ಮರುದಿವಸ ಮುಂಜಾನೆ ಐದು ಗಂಟೆಗೆ ಎಲ್ಲರೂ ನಿದ್ದೆಯಲ್ಲಿರುವುದನ್ನು ನೋಡಿ ರುಕ್ಮಾ  ಬಾಯಿಯು ಉಟ್ಟ ಸೀರೆಯ ಮೇಲೆ ಮನೆಬಿಟ್ಟು ಹೊರಬಿದ್ದಳು. ಆಗ ಅವಳ ಕೈಯಲ್ಲಿ ಒಂದು ಪೈಸೆಯೂ ಇರಲಿಲ್ಲ. ಗಂಗಾನದಿಯ ತನಕ ನಡೆಯುತ್ತ ನದಿದಾಟ ಅಂಕೋಲೆಗೆ ಬಂದು ಬಸ್ಸಿನಲ್ಲಿ ಕುಳಿತಳು. ಅಲ್ಲಿ ಕುಳಿತವರು ಇವಳನ್ನು ಕಂಡು ಮನಬಂದಂತೆ ಮಾತಾಡುತ್ತಿದ್ದರು . ಆಗ ಬಸ್ಸಿನ ಚಾಲಕ ದುಡ್ಡು ಕೇಳಲೇ ಇಲ್ಲ, ಅಂದೇ ಸಾಯಂಕಾಲ ಹುಬ್ಬಳ್ಳಿಯ ಬಸ್ ಸ್ಟಾಂಡಿಗೆ ಬಂದು ಅಲ್ಲಿಂದ ನಡೆಯುತ್ತ ಮಠಕ್ಕೆ ಬಂದಳು. ಆಗ ಸದ್ಗುರುಗಳ ದರ್ಶನವಾಗಲಿಲ್ಲ, ಮಠದಕ್ಕಿದ್ದವರು ವಿಚಾರ ಮಾಡಿ ಅಲ್ಲಿಯ ಧರ್ಮಶಾಲೆಯಲ್ಲಿ ಇಳಿದುಕೊಳ್ಳಲು ಸ್ಥಳಾವಕಾಶ ಮಾಡಿಕೊಟ್ಟರು. ಆ ದಿವಸವೆಂದರೆ ಕ್ರಿ.ಶ. ಹತ್ತೊಂಭತ್ತುನೂರಾ ಇಪ್ಪತ್ತೇಳು ಮಾರ್ಗಶಿರ ಚತುರ್ಥಿಯಾಗಿತ್ತು,


ಮರುದಿವಸ ಸದ್ಗುರುಗಳ ದರ್ಶನಕ್ಕೆ ಹೋದಾಗ ಗುರುಗಳು ಅವಳನ್ನು ಕುರಿತು ರುಕ್ಮಾ   ನೀನು ಬಂದಿರುವೆಯಾ ಬಾ, ನಿನ್ನ ದಾರಿಯನ್ನೇ ಕಾಯುತ್ತಿದ್ದೆ' ಎಂದರು. ಗುರುಗಳ ಈ ಮಾತನ್ನು ಕೇಳಿದ  ರುಕ್ಮಾ ಬಾಯಿಯ ಹೃದಯ ಪ್ರಫುಲ್ಲಿತವಾಯಿತು. ಅವಳ ಕಣ್ಣಿನಿಂದ ಆನಂದಾಶ್ರುಗಳು ಉದುರಿ ಸ್ವಲ್ಪವಾಗಿ ನಿಂತಳು. ಮುಂದೆ ಸಮಯ ನೋಡಿ ತಂದೆ, ನನಗೆ ಯಾವುದಾದರೊಂದು ಸೇವೆ ಮಾಡಲು ಅವಕಾಶ ಕೊಡಿರಿ' ಎಂದು ಬೇಡಿಕೊಂಡಳು. ಆಗ ಗುರುಗಳು ಅವಳನ್ನು ಕರೆದುಕೊಂಡು ಕಟ್ಟಡ ಕಟ್ಟುವ ಕೆಲಸದಡೆಗೆ ಹೋಗಿ ಗಮಂಡಿಯ ಕೈ ಕೆಳಗೆ ಸುಣ್ಣ, ಕಲ್ಲು, ಇತ್ಯಾದಿ ಹೊರುವ ಕೆಲಸ ಕೊಟ್ಟರು.  ರುಕ್ಮಾ  ಬಾಯಿಯು ತನಗೆ ಕೊಟ್ಟ ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದಳು, ಇತರರು ಮಾಡುವ ಕೆಲಸಕ್ಕೂ, ಇವಳು ಮಾಡುವ ಕೆಲಸದ ಶೈಲಿ ಬೇರೆಯಾಗಿತ್ತು. ಇದನ್ನು ನೋಡಿದ ಮಹಾರಾಜರು ಸಂತೋಷಪಡುತ್ತಿದ್ದರು,


ಇತ್ತ ಸೀತಾಬಾಯಿಯು ತನ್ನ ಮಗಳು ಮನೆಬಿಟ್ಟು ಹೋಗಿರುವುದಕ್ಕಾಗಿ ಬಹಳ ತಾಪ ಮಾಡಿಕೊಂಡಿದ್ದಳು. ಮುಂದೆ ಒಂದು ತಿಂಗಳಲ್ಲಿ  ರುಕ್ಮಾಬಾಯಿಯು ಶ್ರೀ ಸಿದ್ಧಾರೂಢರಲ್ಲಿದ್ದಾಳೆಂದು ತಿಳಿದು ತನ್ನೆರಡು ಮೊಮ್ಮಕ್ಕಳನ್ನು ಆಪ್ತರನ್ನು ಕರೆದುಕೊಂಡು ಮಠಕ್ಕೆ ಬಂದಳು. ಮೊದಲು  ರುಕ್ಮಾ ಬಾಯಿಯ ದೊಡ್ಡ ಮಗ ಬಾಲಕೃಷ್ಣನಿಗೆ ಕಲಿಸಿ ತಾಯಿಯ ಹತ್ತಿರ ಕಳಿಸಿದರು. ಆ ಮಗು ಓಡುತ್ತ ತಾಯಿಯ ಹತ್ತಿರ ಬಂದು ಅವಳ ಮುಖ ಮೇಲೆ ಕೈಯಾಡಿಸಿ 'ಅವ್ವಾ , ನಮ್ಮ ಜೊತೆಗೆ ನಡೆ. ನೀನು ಇಲ್ಲಿಯೇ ಇರುವಿಯಾದರೆ ನಾನೂ ಇಲ್ಲಿಯೇ ಇರುತ್ತೇನೆ' ಎಂದು ಅವಳ ಹತ್ತಿರ ಕುಳಿತುಕೊಂಡನು. ಆಗ ರುಕ್ಮಾ ಬಾಯಿಯು ಒಂದು ಶಬ್ದ ಮಾತಾಡದ ಸುಮ್ಮನೇ ಕುಳಿತಳು. ಅವರು ಬಂದು ಒಂದು ತಾಸು ಕಳೆದರೂ ಅವರ ಬಗ್ಗೆ ಸ್ವಲ್ಪವೂ ವಿಚಾರಿಸಲಿಲ್ಲವೆಂದು ಕೋಪಗೊಂಡರು. ಆಗ ಅವಳ ಮಾವ ಹೇಳಿದ 'ಮಗೂ, ನೀನು ಇಲ್ಲಿ ಪಾರಮಾರ್ಥ ಸಾಧಿಸಲು ಬಂದಿರುವೆ. ಆದರೆ ಜನರು ನಮಗೆ ಮನಬಂದಂತೆ ಮಾತಾಡುತ್ತಿದ್ದಾರೆ, ನೀನು ನಮ್ಮ ಜೊತೆಗೆ ನಡೆ, ಇಲ್ಲವಾದರೆ ಮುಂದೆ ನಿನ್ನ ಸಮಯಕ್ಕೆ ನಾವು ಉಪಯೋಗವಾಗಲಾರೆವು. ಮತ್ತು ನಿನ್ನ ಖರ್ಚಿಗೆ ಒಂದು ಕಾಸೂ ಕೊಡುವುದಿಲ್ಲ ಲಕ್ಷ್ಮದಲ್ಲಿಡು' ಎಂದು ಸಿಟ್ಟಿನಿಂದ ಹೇಳಿದಾಗ  ರುಕ್ಮಾಬಾಯಿಯು ಹೇಳಿದಳು ನಾನು ಭಿಕ್ಷೆ ಬೇಡುತ್ತೇನೆ ಹೊರತು ನಿಮಗೆ ಯಾವ ಸಹಾಯವನ್ನೂ ಬೇಡುವುದಿಲ್ಲ' ಎಂದಾಗ ಮಾವ ಸಿಟ್ಟಿನಿಂದ ಕಂಪಿಸುತ್ತ ' ನೀನು  ಸತ್ತರೆ ನಿನ್ನನ್ನು ಯಾರು ಎತ್ತುತ್ತಾರೆ' ಎಂದಾಗ ರುಕ್ಮಾ  ಹೇಳಿದಳು ನಾನು ಸತ್ತರ ಯಾರೂ ಮಣ್ಣು ಮಾಡದಿದ್ದರೆ ಕಾಗಿ ನಾಯಿ ತಿಂದು ಬದುಕಲಿ. ಅದರ ಬಗ್ಗೆ ನೀವೇಕೆ ಚಿಂತಿಸುತ್ತಿರಿ? ದೇವರ ಇಚ್ಚ ಹಾಗಿದ್ದರೆ ಹಾಗೇ ಆಗಲಿ' ಎಂದು ಹೇಳಿದಾಗ ಎಲ್ಲರೂ ನಿರಾಶರಾಗಿ ಮರಳಿ ಊರಿಗೆ ಹೋದರು. ಮುಂದೆ  ಅವಳಿಗೆ ನಾನಾರೀತಿಯ ತೊಂದರೆ ಬಂದರೂ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳಲಿಲ್ಲ.


ಆ ಸಮಯದಲ್ಲಿ ಅವಳಿಗೆ ಒಂದೇ ಸೀರೆಯಿದ್ದು ಅದರಲ್ಲಿ ಅರ್ಧ ಭಾಗ ಮಾಡಿ ಸ್ನಾನ ಮಾಡುವ ಮುಂಚೆ ಒಂದನ್ನು ಒಗೆದು ಸ್ವಚ್ಛ ಮಾಡಿ ಒಣಗಲು ಹಾಕಿ ಸ್ನಾನದ ನಂತರ ಅದನ್ನು ಉಟ್ಟುಕೊಂಡು ಬಿಟ್ಟ ತುಂಡನನು ಒಗೆದು ಹಾಕುತ್ತಿದ್ದಳು ಈ ಪ್ರಕಾರ ಮೂರು ತಿಂಗಳು ಕಳೆದವು. ಇದರ ನಂತರ ಅಕ್ಕಲಕೋಟೆಯ ಮಹಾರಾಣಿ ತಾರಾಬಾಯಿಯವರು ಮಠಕ್ಕೆ ಬಂದಾಗ ಇವಳ ಅವಸ್ಥೆಯನ್ನು ನೋಡಿ ಹರೆಯದ ಹೆಣ್ಣುಮಗಳೆಂದು ಮರುಗಿ ಅವಳಿಗಾಗಿ ಎರಡು ಸೀರೆ ಮತ್ತು ಎರಡು ವಾರ ಅರಿವೆ ಕೊಡಲು ಹೋದಾಗ  ರುಕ್ಮಾಬಾಯಿ ಹೇಳಿದಳು. ಮಹಾರಾಣಿಯವರೆ, ನನಗೆ ಸದ್ದುರುವು ಯಾವ ಸ್ಥಿತಿಯಲ್ಲಿಟ್ಟಿರುವನೋ ಅದರಲ್ಲಿಯೇ ಸಂತೋಷದಿಂದಿರುತ್ತೇನೆ' ಎಂದು ನಯವಾಗಿ ನಿರಾಕರಿಸಿದಳು. ಆಗ ಮಹಾರಾಣಿಯವರು ಸಿದ್ದರಲ್ಲಿ ಹೋಗಿ ನಡೆದುದನ್ನು ತಿಳಿಸಿದಾಗ ಮರುದಿನ ಗುರುಗಳು ರುಕ್ಮಾಬಾಯಿಯನ್ನು ಕರೆಸಿ ರಾಣಿಯವರು ಕೊಟ್ಟ ಸೀರೆಗಳನ್ನು ತೆಗೆದುಕೊಳ್ಳಲು ಹೇಳಿದಾಗ ಸಿದ್ದರ ಪ್ರಸಾದವೆಂದು ಸ್ವೀಕರಿಸಿದಳು.


ರುಕ್ಮಾಬಾಯಿಯು ಗೌರವರ್ಣದವಳಾಗಿದ್ದು ಯಾವಾಗಲೂ ಪ್ರಸನ್ನ ಮುಖದಿಂದಿದ್ದಳು. ಮೈಗೆ ಬಿಳಿಯ ವಸ್ತ್ರ, ಹಣೆಗೆ ಭಸ್ಮ, ಕೈಯಲ್ಲಿ ಜಪಮಣಿ ಮುಖದಲ್ಲಿ ಪ್ರಸನ್ನ ತೇಜ, ತೀವ್ರ ವೈರಾಗ್ಯ ವೃತ್ತಿಯ ಹತ್ತೊಂಭತ್ತು ವರ್ಷದ ರುಕ್ಮಾ ಬಾಯಿಯನ್ನು ಯಾರು ನೋಡಿದರೂ ಅವರಲ್ಲಿ ಪೂಜ್ಯ ಭಾವನ ಬರುವಂತಿದ್ದಳು. ಅವಳು ತಾನಾಗಿಯೇ ಯಾರ ಜೊತೆಗೂ ಮಾತಾಡುತ್ತಿರಲಿಲ್ಲ. ಕೆಲವರು ಅವಳನ್ನು ದೇವಿಯ ಅವತಾರವೆನ್ನುತ್ತಿದ್ದರು. ಯಾವಾಗಲೂ ಓಂ ನಮಃ ಶಿವಾಯ ಮಂತ್ರ ಉಚ್ಚರಿಸುತ್ತಿದ್ದಳು.


ಎರಡು ತಿಂಗಳ ನಂತರ ಮಠದ ಆವರಣದ ಕಸ ಗೂಡಿಸುವ ಸೇವೆಯನ್ನು ಗುರುಗಳಲ್ಲಿ ಬೇಡಿ ತೆಗೆದುಕೊಂಡಳು, ಒಂದು ದಿವಸ ಕೆಲವರ ಜೊತೆಗೆ ಅಂಗಳದ ಕಸ ಕೂಡಿಸಿದ ಮೇಲೆ ಒಂದು ನಾಯಿ ಬಂದು ಅಲ್ಲಿ ಹೇಸಿಗೆ ಮಾಡಿ ಹೋಗಿತ್ತು. ಅದನ್ನು ನೋಡಿದ ಕೆಲ ಸೇವಕರು ಅವರು ತೆಗೆಯಲಿ ಇವರು ತೆಗೆಯಲಿ ಎಂದು ಬಿಟ್ಟು ಹೋದರು. ಆಗ ರುಕ್ಮಾಬಾಯಿಯು ಹಿಂದೆ ಮುಂದೆ ನೋಡದೆ ಅದನ್ನು ತೆಗೆದು ಸ್ವಚ್ಚ ಮಾಡಿ ಸಾರಿಸಿ ರಂಗೋಲಿ ಹಾಕಿದಳು. ಸದ್ಗುರುಗಳು ಸಾಯಂಕಾಲ ನಾಲ್ಕು ಗಂಟೆಗೆ ಚಿತ್ರಮಂಟಪದಲ್ಲಿ ಕುಳಿತಾಗ ದಿನದಂತೆ ಭಜನೆ ಪ್ರಾರಂಭವಾಯಿತು. ಏಳು ಗಂಟೆಗೆ ಆರತಿಯಾದ ನಂತರ ಭಕ್ತ ಜನರು ತಂದುಕೊಟ್ಟ ಒಂದು ಡಬ್ಬಿಯಲ್ಲಿಯ ಪೇಡೆಯನ್ನು ಗುರುಗಳು ತೆಗೆದುಕೊಂಡು ಹೇಳಿದರು `ಪ್ರಸಾದ ಮೊದಲು ಯಾರಿಗೆ ಬೇಕು ಮುಂದೆ ಬನ್ನಿರಿ' ಎಂದಾಗ ಭಕ್ತರು ನಾ ಮುಂದೆ ನೀ ಮುಂದೆಯೆಂದು ಬಂದರು. ಆಗ ಗುರುಗಳು ಹೇಳಿದರು 'ಯಾರು ಮಧ್ಯಾಹ್ನ ನಾಯಿ ಮಾಡಿದ ಹೇಸಿಗೆಯನ್ನು ತೆಗೆದಿರುವರೋ ಅವರಿಗೆ ಕೊಡುತ್ತೇನೆ' ಎಂದು ಅಲ್ಲಿಯೇ ಇದ್ದ  ರುಕ್ಮಾಬಾಯಿಯನ್ನು ಕರೆದು ಫೇಡೆ ತಿನಿಸಿದರು.


ಹತ್ತೊಂಭತ್ತು ನೂರಾ ಇಪ್ಪತ್ತೆಂಟನೆಯ ಇಸ್ವಿ ಮಹಾನವಮಿಯ ದಿವಸ ಸಾಯಂಕಾಲ ಐದು ಗಂಟೆಗೆ ಹಳೇಹುಬ್ಬಳ್ಳಿಯ ಓರ್ವ ಭಕ್ತರ ಮನೆಯಲ್ಲಿ ಶ್ರೀ ಸಿದ್ಧಾರೂಢ ಮಹಾರಾಜರ ಪಾದಪೂಜೆಯಿತ್ತು. ಅನೇಕ ಭಕ್ತರು ಅಲ್ಲಿಗೆ ಹೋಗಿದ್ದರು. ಅವರಲ್ಲಿ ರುಕ್ಮಾ  ಬಾಯಿಯೂ ಒಬ್ಬಳು. ಗುರುಗಳ ಪೂಜೆಯ ನಂತರ  ರುಕ್ಮಾಬಾಯಿಯನ್ನು ಸದ್ಗುರುಗಳು ಕರೆದು ತಾವು ಕುಳಿತ ಆಸನದ ಪಕ್ಕದಲ್ಲಿ ಕೂಡಿಸಿ ತಮಗರ್ಪಿತವಾದ ಹಾಲನ್ನು ಕುಡಿಸಿ ಹಣ್ಣುಗಳನ್ನು ತಿನ್ನಿಸಿ ತಾವೂ ತಿಂದು ರುಕ್ಮಾಬಾಯಿಯನ್ನು ಕುರಿತು `ಇವತ್ತಿನಿಂದ ನಿನಗೆ ಕಲಾವತಿದೇವಿ ಎಂದು ಹೆಸರಿಟ್ಟಿದ್ದೇನೆ' ಎಂದು ಹೇಳಿ ಒಬ್ಬರು ತಮಗೆ ಅರ್ಪಿಸಿದ ಶಾಲನ್ನು ಅವಳ ಮೈಯಲ್ಲಿ ಹೊದಿಸಿ ಇನ್ನು ನೀನು ಕೀರ್ತನ ಪ್ರಾರಂಭಿಸು' ಎಂದರು. ಸದ್ಗುರುಗಳ ಆಜ್ಞೆಯ ಮೇರೆಗೆ ರುಕ್ಮಾಬಾಯಿಯು `ನಾಮಸಂಕೀರ್ತನ ಸಾಧನ ಹೇಸೋಪೆ ' ಈ ಮರಾಠಿ ಅಭಂಗದ ಮೇಲೆ ಎರಡೂವರೆ ತಾಸು ಕೀರ್ತನ ಮಾಡಿದಳು. ಅವಳ ಪ್ರಸಾಧಿಕ ವಾಣಿಯನ್ನು ಕೇಳಿದ ಭಕ್ತರು ಮುಗ್ಧರಾದರು. ಆಗ ಸದ್ಗುರುಗಳ ಮಹಿಮೆ ಅಗಾಧ ವಾಗಿದೆಯೆಂದು ಜನರು ಕೊಂಡಾಡಿದರು. ಅಂದಿನಿಂದ ಯಾವ ದಿವಸ ಸಿದ್ದರು ಕೀರ್ತನ ಮಾಡಲು ಹೇಳುವರೋ ಆಯಾ ದಿವಸ ಮಠದಲ್ಲಿ ಕೀರ್ತನ ಮಾಡುತ್ತಿದ್ದಳು.


ಗುರುಸೇವೆ ಮಾಡುತ್ತ ಹೋದಂತೆಲ್ಲ ದೇಹಬುದ್ದಿ, ಹಸಿವೆ, ನಿದ್ರೆ ಇತ್ಯಾದಿಗಳು ಬಿಟ್ಟು ಹೋದವು. ಒಂದು ದಿವಸ ನಿಯಮಿತವಾಗಿ ತನ್ನ ಖೋಲಿಯಲ್ಲಿ ಭಜನೆಗೆ ಕುಳಿತಾಗ ಕಂಡು ಕಂಡು ನೀಯೆನ್ನ ಕೈ ಬಿಡುವರೇ ಕೃಷ್ಣ' ಪುರಂದರದಾಸರ ಪದ್ಯದ ಕೊನೆಯ ಸಾಲು ಭಕ್ತವತ್ಸಲನೆಂದು ಬಿರುದು ಪೂತ್ತ ಮೆಲೆ ಭಕ್ತಾಧೀನನಾಗಿರಬೇಡವೆ ಹೀಗೆ ಹೇಳುತ್ತ ಮೈಮರೆತಳು. ಅವಳ ಕಣ್ಣುಗಳಿಂದ ನೀರು ಸುರಿಯತೊಡಗಿದವು. ಪ್ರಭು ದರ್ಶನ ಬಿಟ್ಟು ಯಾವುದೂ ಬೇಡವೆನಿಸಿತು. ಆಗ 'ಗುರುರಾಯಾ, ನನ್ನ ಮನ ಯಾವಾಗ ಕೃಪೆ  ಮಾಡುವಿ ಒಂದು ಸಲ ನಿನ್ನ ನಿಜರೂಪ ದರ್ಶನ ಮಾಡಿಸು. ಇನ್ನು ಮುಂದೆ ನಿನ್ನ ದರ್ಶನವಿನಃ ಒಂದು ಕ್ಷಣವಿರಲು ಕಠಿಣವಾಗುತ್ತದೆ ಎಂದು ಮನದಲ್ಲಿ ನೆನೆಯುತ್ತಿರುವಂತೆ, ಸದ್ಗುರು ಮಹಾರಾಜರು ತಕ್ಷಣ ಬಂದು `ಬ್ರಹ್ಮಾನಂದಂ' ಈ ಶ್ಲೋಕ ಹೇಳುತ್ತ ಕಲಾವತಿದೇವಿಯ ಮಸ್ತಕದ ಮೇಲೆ ವರದ ಹಸ್ತವನ್ನಿಟ್ಟರು. ಆಗ ಮಹಾರಾಜರ ಕೃಪೆಯಿಂದ ಅವಳಲ್ಲಿ ಜ್ಞಾನಜ್ಯೋತಿ ಪ್ರಜ್ವಲಿಸಿತು. ಶರೀರ ಕಂಪಿಸಿತು. ಮುಚ್ಚಿದ ಕಣ್ಣುಗಳಿಂದ ಆನಂದಾಶ್ರುಗಳು ಸುರಿಯಹತ್ತಿದವು. ಶರೀರದಲ್ಲಿ ರೋಮಾಂಚನವಾಗಿ ಜಗತ್ತಿನ ಭಾವ ನಾಶವಾಯಿತು. ಆಗ ಅವರ್ಣನೀಯ ಆನಂದ ಸಾಗರದಲ್ಲಿ ಮುಳುಗಿದಳು.


ಆಗ ಮಹಾರಾಜರು ನನ್ನ ಕೆಲಸವಾಯಿತೆಂದು ಮರಳಿ ಹೋದರು. ಕಲಾವತಿದೇವಿಯವರು ಸುಮಾರು ಎಂಟು ಗಂಟೆ ಆ ಸ್ಥಿತಿಯಲ್ಲಿದ್ದರು. ಮುಂದೆ ಕಣ್ಣು ತೆರೆದಾಗ ಹೊಸ ಜನ್ಮವಾಗಿದ್ದು, ಪೂರ್ವದ ದೃಷ್ಟಿ ಬದಲಾಯಿತು. ಅವಳ ಮೊದಲಿನ ಅಸ್ತಿತ್ವ ಪೂರ್ಣ ಬದಲಾಯಿತು. ಎಲ್ಲಿ ನೋಡಿದಲ್ಲಿ ಆನಂದವೇ ಆನಂದ. ಅದನ್ನು ಬಿಟ್ಟು ಬೇರೇನೂ ಇರಲಿಲ್ಲ. ಹೀಗೆ ಅವಳಿಗೆ ಅನುಭವವಾಯಿತು. ಅದು ಎಂದೂ ನಾಶವಾಗುವುದಿಲ್ಲ. ಕಡಿಮೆಯಾಗುವುದಿಲ್ಲ. ಹೀಗೆ ಬ್ರಹ್ಮಾನಂದವು ಗುರುಕೃಪೆಯಿಂದ ಲಭಿಸಿತು. ಗುರುಗಳು ಅಂದು ಅವಳಿಗೆ ದುಃಖರಹಿತ ನಿಜಸ್ವರೂಪ ದರ್ಶನ ಕೊಟ್ಟು ಕೃತಾರ್ಥಳನ್ನಾಗಿ ಮಾಡಿದರು.


ಒಂದು ದಿವಸ ಸಾಯಂಕಾಲ ಸೋಮವಾರದ ಪೂಜೆ ಮುಗಿದ ನಂತರ ಗುರುಗಳು ಮಾತಾಜಿಯವರ ಕಡೆಗೆ ಹೋಗಿ ಹೇಳಿದರು 'ಇನ್ನು ಮೇಲೆ ನಾನು ಬಹುಬೇಗ ಮಹಾಸಮಾಧಿ ತೆಗೆದುಕೊಳ್ಳುವವನಿದ್ದೇನೆ. ಅಲ್ಲಿಯವರೆಗೆ ನೀನು ಇಲ್ಲಿಯೇ ಇರು. ಆತ್ಮಾನಂದ ಒಂದು ವೇಳೆ ಲಭ್ಯವಾದರೂ ಅದು ಪೂರ್ಣ ಮೈಗೂಡಬೇಕು. ಮುಂದೆ ಆರು ತಿಂಗಳು ಏಕಾಂತದಲ್ಲಿದ್ದು ಸಾಧನಾಭ್ಯಾಸ ಮಾಡು. ನಂತರ ಹನ್ನೆರಡು ವರ್ಷ ಹರಿನಾಮ ವಿಶ್ವಪ್ರೇಮ ಪ್ರಸಾರಕ್ಕಾಗಿ ಊರೂರಿಗೆ ಪಯಣ ಮಾಡು. ನಾನು ಸದಾ ಸರ್ವದಾ ನಿನ್ನ ಸಮೀಪವಿರುತ್ತೇನೆ. ಯಾವುದಕ್ಕೂ ಹೆದರಬೇಡ, ಹನ್ನೆರಡು ವರ್ಷಗಳ ನಂತರ ಬೆಳಗಾವಿಗೆ ಹೋಗಿ ಅನಗೋಳದ ಹತ್ತಿರ ಸ್ಥಾಯಿಕಳಾಗು. ಆಗ ಸಾಧು ಸಂತರಿಗೆ ನಾನು ಕೊಟ್ಟ ವಚನ ಪೂರ್ಣವಾಗುತ್ತದೆ. ಅವರಿಗೆ ಯುಕ್ತಿ ಪ್ರಯುಕ್ತಿಗಳಿಂದ ಬೋಧ ಮಾಡಿ ಆ ಸ್ಥಳದಲ್ಲಿ ಹರಿಪ್ರೇಮ ಉತ್ಪನ್ನವಾಗುವಂತೆ ಮಾಡು' ಎಂದು ಹೇಳಿ ಶಯನಗ್ರಹಕ್ಕೆ ಹೋದರು. ಹೀಗೆ ಮಹಾರಾಜರು ಜ್ಞಾನ ಪ್ರಸಾರದ ಪ್ರಚಂಡ ಕಾರ್ಯವನ್ನು ಕಲಾವತಿ ದೇವಿಯವರಿಗೆ ಒಪ್ಪಿಸಿದರು. ಮುಂದೆ ಮೂರನೆಯ ಸೋಮವಾರ ಅಂದರೆ ಶ್ರಾವಣವದ್ಯ  ಪ್ರತಿಪದೆಯ ಮುಂಜಾನೆ ನಾಲ್ಕು ಗಂಟೆಗೆ ಅವತಾರ ಸಂಪೂರ್ಣಗೊಳಿಸಿದರು.


ಶ್ರೀ ಸಿದ್ಧಾರೂಢರಿದ್ದ ಸಮಯದಲ್ಲಿ ಭಕ್ತರು ಅವರ ಸತ್ಸಂಗದಲ್ಲಿ ಮತ್ತು ಅವರ ಸೇವೆಯಲ್ಲಿರಲು ಬಹಳ ದೂರದಿಂದ ಬಂದು ನಾಲ್ಕಾರು ತಿಂಗಳು ಧರ್ಮಶಾಲೆಯಲ್ಲಿರುತ್ತಿದ್ದರು. ಅವರು ಸಮಾಧಿಸ್ಥರಾದ ನಂತರ ಅವರ ಸಮಾಧಿ ಸೇವೆಗಾಗಿ ಗೊತ್ತುಪಡಿಸಿದ ಭಕ್ತರು ಮಾತ್ರ ಇರುತ್ತಿದ್ದರು. ಅವರಲ್ಲಿ ಪುರುಷರೇ ಹೆಚ್ಚಾಗಿದ್ದರು. ಅದಕ್ಕಾಗಿ ಮಾತಾಜಿಯವರು ಸಾಧನಾಭ್ಯಾಸದ ಸಲುವಾಗಿ ಅದೇ ಊರಿನ ಬೋಗಾರಗಲ್ಲಿಯ ಜೈನರವಾಡೆಯಲ್ಲಿಯ ಸಣ್ಣ ಖೋಲಿಯಲ್ಲಿ ಇರ ಹತ್ತಿದರು. ಮಾತಾಜಿಯವರು ವಿನಾಕಾರಣ ಯಾರ ಜೊತೆಗೂ ಮಾತಾಡುತ್ತಿರಲಿಲ್ಲ. ಆ ವೇಳೆಯಲ್ಲಿ ಮಾತಾಜಿಯವರ ಆಹಾರ ಒಂದೇ ಹೊತ್ತು ಇದ್ದು ಕೇವಲ ಒಂದು ಹೊತ್ತು ಹಾಲು ಅನ್ನ ಎರಡು ಬಟ್ಟಲು ನೀರು ತೆಗೆದುಕೊಳ್ಳುತ್ತಿದ್ದರು. ಉಳಿದ ಸಮಯದಲ್ಲಿ ಜಪ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದು, ಹೀಗೆ ಆರು ತಿಂಗಳು ಕಳೆದವು.


ಅವರ ಖೋಲಿಯ ಮುಂದಿನ ತಟ್ಟೆಯ ಬೋಲಿಯಲ್ಲಿ ಓರ್ವ ಮುಪ್ಪಾದ ಹೆಣ್ಣುಮಗಳಿದ್ದು ಅವಳ ಮೊಳಕಾಲಿಗೆ ಬಾವು ಬರುತ್ತಿತ್ತು. ಮಾತಾಜಿಯವರಲ್ಲಿ ಏನೋ ಒಂದು ವಿಶೇಷವಿರಬೇಕೆಂದು ಭಾವಿಸಿ ಅವಳು ಔಷಧ ಕೊಡಲು ಬೇಡಿದಳು. ಆಗ ಅವಳಿಗೆ ಒಂದು ಉಪಾಯ ಹೇಳಿದಾಗ ಗುಣ ಹೊಂದಿದಳು. ಭಿಕ್ಷೆ ಬೇಡಿ ಉದರ ಪೋಷಣೆ ಮಾಡಿಕೊಳ್ಳುತ್ತಿರುವ ಮುದುಕಿ ತನ್ನ ಅನುಭವವವನ್ನು ಅವರಿವರಿಗೆ ಹೇಳುತ್ತಿರುವಂತೆ ಒಂಭತ್ತು ತಿಂಗಳು ಗರ್ಭಿಣಿ ಹೆಣ್ಣು ಮಗಳಿಗೆ ಹೇಳಿದಳು. ಅವಳು ಮಾತಾಜಿಯವರ ಕಡೆಗೆ ಬಂದು ನನಗೆ ಒಂಭತ್ತು ತಿಂಗಳಿನಿಂದ ಮುಖದಲ್ಲಿ ಬಾವು ಬಂದಿದೆ. ಔಷದ ಉಪಚಾರದಿಂದ ಏನೂ ಆಗಿಲ್ಲ. ನೀರು ಕುಡಿಯಲು ತೊಂದರೆಯಾಗಿದೆ. ಕೃಪೆಮಾಡಿ ಏನಾದರು ಕೊಡರಿ 'ಎಂದಾಗ ಮಾತಾಜಿಯವರು ತಮ್ಮ ಖೋಲಿಯಲ್ಲಿ ಹಚ್ಚಿದ ಊದಿನಕಡ್ಡಿಯ ಸ್ವಲ್ಪ ಭಸ್ಮವನ್ನು ಕೊಟ್ಟು ದಿವಸದಲ್ಲಿ ಮೂರು ಸಲ ಮೂರು ದಿವಸ ನೀರಿನಲ್ಲಿ ತೆಗೆದುಕೊ' ಎಂದು ಕೊಟ್ಟರು. ಅವಳು ಅದರಂತೆ ಮಾಡಿದಾಗ ಗುಣ ಹೊಂದಿದಳು. ಅವಳು ಹೆಣ್ಣು ಮಕ್ಕಳ ದವಾಖಾನೆಯಲ್ಲಿ ಔಷಧ ತೆಗೆದುಕೊಳ್ಳುತ್ತಿದ್ದು, ತನ್ನ ಅನುಭವವನ್ನು ಮಹಿಳಾ ಡಾಕ್ಷರರಿಗೆ ಹೇಳಿದಳು. ಅವಳು ಪಾರಸಿ ಜಾತಿಯವಳಾಗಿದ್ದು, ನಾಲ್ಕತೈದು ವರ್ಷದವಳಾದ ಅವಳಿಗೆ ಕೆಲವು ವರ್ಷಗಳಿಂದ ಹಿಸ್ಟೋರಿಯಾ ರೋಗವಿದ್ದು ಮೇಲಿಂದ ಮೇಲೆ ಫಿಟ್ಸ್ ಬರುತ್ತಿತ್ತು. ಅವಳು ಮಾತಾಜಿಯವರ ಕಡೆಗೆ ಔಷದ ತೆಗೆದುಕೊಂಡು ಗುಣವಾದಳು. ಹೀಗೆ ಅನೇಕರನ್ನು ಗುಣಪಡಿಸಿದಳು.


ಆಮೇಲೆ ಶಿವರಾತ್ರಿಯ ಸಪ್ತಾಹ ಮುಗಿದ ಮೇಲೆ ಅಲ್ಲಿಯ ಉತ್ಸವಕ್ಕೆ ಬಂದ ಮದ್ರಾಸದ ರಾವ್ ಬಹಾದ್ದೂರ ನಾರಾಯಣರಾವ (ಪ್ರಿನ್ಸಿಪಾಲ) ಅವರ ಪತ್ನಿ ಗಿರಿಜಾಬಾಯಿಯವರು ಮಾತಾಜಿಯವರಿಗೆ ಕೀರ್ತನಕ್ಕಾಗಿ ಬೆಂಗಳೂರಿಗೆ ಬರಲು ಒತ್ತಾಯಿಸಿದರು. ಆಗ ಇದು ಸದ್ಗುರುಗಳ ಪ್ರೇರಣೆಯಾಗಿದೆಯೆಂದು ತಿಳಿದು ಇದೆ ಮೊದಲ ಸಲ ಪರವೂರಿಗೆ ಪ್ರಯಾಣ ಮಾಡಿ ಬೆಂಗಳೂರಿಗೆ ಹೋದಳು. ಗಿರಿಜಾಬಾಯಿಯವರ ಮನೆಯಲ್ಲಿದ್ದು ಮರುದಿವಸ ಏಕಾದಶಿಯಂದು ಅಲ್ಲಿಯ ಮಹಿಳಾ ಮಂಡಳಿಯವರು ಅಲ್ಲಿನ ಕ್ಲಬ್ಬಿನಲ್ಲಿ ಕೀರ್ತನದ ಏರ್ಪಾಟು ಮಾಡಿದರು. ಅಲ್ಲಿ ಪುರುಷ ಮತ್ತು ಸ್ತ್ರೀಯರು ಬಹಳ ಸಂಖ್ಯೆಯಲ್ಲಿ ನೆರೆದಿದ್ದರು. ಕಲಾವತಿದೇವಿಯವರು ಕೀರ್ತನಕ್ಕೆ ಎದ್ದು ನಿಂತು `ಸದ್ಗುರುನಾಥ ಮಾಝೇ ಆಯಿ ಮಜಲಾ ಠಾವ ದೇಯಿ ಪಾಯಿ' ಈ ಭಜನೆಯನ್ನು ಹೇಳಿ ಆರಂಭ ಮಾಡಿದಳು. ಈ ಭಜನೆಯನ್ನು ಮತ್ತು ಕೀರ್ತನೆಯನ್ನು ಕೇಳಿ ಜನರು ಮಂತ್ರಮುಗ್ಧರಾದರು. ಮುಂದೆ ಗಿರಿಜಾಬಾಯಿಯವರು ಮದ್ರಾಸದ ಪರಾಷ್ಟಕಂ ಊರಿನಲ್ಲಿ ಕರೆದುಕೊಂಡು ಹೋಗಿ ಕೀರ್ತನೆ ಮಾಡಿಸಿದರು. ಸುದ್ದಿ ಪತ್ರಿಕೆಯಲ್ಲಿ ಬಂದು ಬಹಳ ದೂರದಿಂದ ಕೀರ್ತನ ಕೇಳಲು ಜನರು ಬರುತ್ತಿದ್ದರು. ಅಲ್ಲಿ ಎರಡು ತಿಂಗಳು ಇದ್ದು ಅನೇಕ ಕಡೆ ಕೀರ್ತನಗಳಾದವು. ಅಲ್ಲಿ ಜನರಿಂದ ಹಣ ಮತ್ತು ಬಂಗಾರದ ಪದಕಗಳನ್ನಾಗಲಿ ಸ್ವೀಕರಿಸಲಿಲ್ಲ. ಆ ಸಮಯದಲ್ಲಿ ಒಂದೇ ಅಖ್ಯಾನವನ್ನು ಮೂರು ದಿವಸ ಐದು ದಿವಸ ಕೆಲವು ಸಲ ಏಳು ದಿವಸ ಹೇಳುತ್ತಿದ್ದಳು. ಒಂದೇ ಅಭಂಗದ ಮೇಲೆ ಎಂಟು ದಿವಸ ಹದಿನೈದು ದಿವಸ ನಿರೂಪಿಸುತ್ತಿದ್ದಳು. ಶಿವರಾತ್ರಿಯ ಸಪ್ತಾಹದ ಸಮಯದಲ್ಲಿ ತಾನಲ್ಲಿದ್ದರೂ ಮಠಕ್ಕೆ ಬಂದು ಸಪ್ತಾಹದ ಸೇವೆ ಸಲ್ಲಿಸುತ್ತಿದ್ದರು.


ಮುಂದೆ  ಡಾಕ್ಟರ ಪೈ ಅವರ ಮಂಡಳಿಯವರ ಜೊತೆಗೆ ತಿರುಪತಿ ಚಿದಂಬರಮ್, ಮಥುರಾ, ಕಾಂಜಿವರಮ್, ರಾಮೇಶ್ವರ, ಕನ್ಯಾಕುಮಾರಿ ಇತ್ಯಾದಿ ಕ್ಷೇತ್ರಯಾತ್ರೆ ಮಾಡಿ ಬಂದರು. ಆಮೇಲೆ ಮೈಸೂರಿನ ಎಸ್. ವಿಶ್ಚಲರಾವರ ಕಡೆಯಿಂದ ಆಮಂತ್ರಣ ಬಂದದ್ದರಿಂದ ಮೈಸೂರಿಗೆ ಹೊರಟರು. ಅಲ್ಲಿ ಬಹಳ ದಿವಸವಿದ್ದು ಮಾತಾಜಿಯವರು ಯಶಸ್ವಿ ಕೀರ್ತನ ನಡೆಸಿದರು. ಮುಂದೆ ನಂಜನಗೂಡಿನಲ್ಲಿ ಕೀರ್ತನ ನಡೆಯಿತು. ಈ ಅವಧಿಯಲ್ಲಿ ಗೋಕುಲಾಷ್ಟಮಿಯ ದಿವಸ ಬೆಂಗಳೂರಿನ ಕರೆ ಬಂದಿತು. ಅಲ್ಲಿ ಒಬ್ಬ ಡಾಕ್ಟರರ ಮನೆಯಲ್ಲಿ ಉಳಿದುಕೊಂಡು ಉತ್ಸವ ಮುಗಿಸಿ ಹೊರಡುವಾಗ ಟಿಕೆಟ್ ಸಲುವಾಗಿ ದುಡ್ಡು ತೆಗೆದುಕೊಳ್ಳಲು ತನ್ನ ಪೆಟ್ಟಿಗೆ ತೆಗೆದಾಗ ಅದರಲ್ಲಿದ್ದ ಒಂದು ನೂರಾ ಇಪ್ಪತೈದು ರೂಪಾಯಿಗಳು ಕಾಣೆಯಾಗಿದ್ದವು. ಇದನ್ನು ಕಂಡು ಮನೆಯವರಿಗೆ ಹೇಳಿದರೆ ತೊಂದರೆಯಾಗುವುದೆಂದು ಮೈಸೂರಿಗೆ ಹೋಗುತ್ತೇನೆಂದು ಹೇಳಿ ಹೊರಟಳು. ಅದೇ ದಾರಿಯಲ್ಲಿ ಹೋಗುವಾಗ ಅದೇ ದಾರಿಯಲ್ಲಿ ಪ್ರೊಫೆಸರ ಗದಗಕರ ಇವರನ್ನು ನೋಡಿ ಮೋಟರ ನಿಲ್ಲಿಸಿ ಅವರಿಗೆ ಒಂದು ಪಾಕೀಟು ಕೊಟ್ಟು ನಮಸ್ಕರಿಸಿ ಸ್ಟೇಶನ್‌ವರೆಗೆ ಬಿಟ್ಟು ಟಿಕೆಟ್ ತೆಗೆಸಿಕೊಟ್ಟು ಗಾಡಿಯಲ್ಲಿ ಕೂಡಿಸಿ ಹೋದರು. ಗಾಡಿ ಬಿಟ್ಟ ನಂತರ ಕಲಾವತಿದೇವಿಯವರು ಪಾಕೀಟ್ ತೆಗೆದು ನೋಡಿದರೆ ಅದರಲ್ಲಿ ಒಂದುನೂರಾ ಇಪ್ಪತ್ತೈದು ರೂಪಾಯಿಗಳಿದ್ದವು. ಆಗ ಸಿದ್ದಾರೂಢರ ನೆನಪಾಗಿ ಮಾತಾಜಿಯವರ ಕಂಠ ಬಿಗಿದು ಬಂದಿತು.


ಮುಂದೆ ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಆಮೇಲೆ ಏಕಾದಶಿ ದಿವಸ ಮೈಸೂರಿನ ವಿಶ್ಚಲರಾವರ ರಾಮಮಂದಿರದಲ್ಲಿ ಕೀರ್ತನ ಏರ್ಪಡಿಸಿದ್ದರು. ಅದಕ್ಕಾಗಿ ಮೈಸೂರಿಗೆ ಹೋಗಬೇಕಾಗಿತ್ತು. ಆಗ ಅವರಲ್ಲಿ ಐದು ರೂಪಾಯಿಗಳಿದ್ದು ಸ್ಟೇಶನ್ನಿಗೆ ಹೋಗಿ ಐದು ರೂಪಾಯಿ ಕೊಟ್ಟು ಟಿಕೆಟ್ ಕೇಳಿದಾಗ ಟಿಕೆಟ್ ಮಾಸ್ತರರು ಈ ಐದು ರೂಪಾಯಿ ಖೋಟ್ಟಿಯಿದ ನಡೆಯುವುದಿಲ್ಲವೆಂದರು. ದೇವಿಯವರು ನಿರುಪಾಯರಾಗಿ ಊರೊಳಗೆ ಬಂದರು. ಅಷ್ಟರಲ್ಲಿ ಒಬ್ಬ ವ್ಯಕ್ತಿ ಮುಂದೆ ಬಂದು `ನೀವು ಊರಿಗೆ ಹೋಗಬೇಕೇನು? ಹಾಗಾದರೆ ಮರಳಿ ಬಂದಿರೇಕೆ?' ಹೀಗೆ ಕೇಳಿದಾಗ ಕಲಾವತಿಯವರು ನಿಜ ಸಂಗತಿ ತಿಳಿಸಿದರು. ಆಗ ಅವಳ ಹತ್ತಿರದ ಖೋಟ್ಟೆ ನೋಟು ತೆಗೆದುಕೊಂಡು ಸ್ಟೇಶನ್ನಿಗೆ ಬಂದು ನೀವು ಗಾಡಿಯಲ್ಲಿ ಕೂಡಿರಿ. ಟಿಕೆಟ್ ತೆಗೆದುಕೊಂಡು ಬರುತ್ತೇನೆ' ಎಂದು ಹೇಳಿ ಹೋಗಿ ಟಿಕೆಟ್ ತೆಗೆದುಕೊಂಡು ಬಂದು ಟಿಕೆಟ್ ಮತ್ತು ಉಳಿದ ಹಣವನ್ನು ಕೊಟ್ಟನು. ಆಗ ಮಾತಾಜಿಯವರು `ನಿಮ್ಮ ಹೆಸರೇನು? ಎಂದಾಗ ಅವನು ಹೇಳಿದ ನನ್ನ ಹೆಸರು ಸಿದ್ಧಪ್ಪ ಹುಬ್ಬಳ್ಳಿಕರ ಎಂದು ಹೇಳಿ ಮುಂದೆ ಹತ್ತು ಹೆಜ್ಜೆ ಹೋಗಿ ಅದೃಶ್ಯನಾದನು. ಅದನ್ನು ನೋಡಿ  ಮಾತಾಜಿಯವರಿಗೆ ನೆನಪಾಗಿ ನಾನು ಸದಾ ನಿನ್ನ ಹತ್ತಿರವಿರುತ್ತೇನೆ ಎಂದು ಹೇಳಿದ ಸಿದ್ಧರ ವಚನ ನೆನಪಾಗಿ ಆನಂದಾಶ್ರುಗಳು ಉದುರಿದವು.


ಕಲಾವತಿದೇವಿಯವರು ಕೊಯಮತ್ತೂರು ಕಾರ್ಯಕ್ರಮದ ನಂತರ ಪಾಲಘಾಟಕ್ಕೆ ಹೋಗಿದ್ದರು. ಅಲ್ಲಿಯ ಕಾಲೇಜಿನ ಪ್ರಿನ್ಸಿಪಾಲ ಡಾ. ಶಂಕರರಾವ ಅವರ ಮನೆಯಲ್ಲಿ ಇಳಿದುಕೊಂಡಿದ್ದರು. ಕೆಲವು ದಿವಸಗಳ ನಂತರ ಮದ್ರಾಸದ ಭಕ್ತ ಮಂಡಳಿಯವರ ಆಮಂತ್ರಣದ ಮೇರೆಗೆ ಮದ್ರಾಸಕ್ಕೆ ಹೋಗಲು ಶಂಕರರಾವ ಅವರ ಪತ್ನಿ ಉಮಾಬಾಯಿ ಎಲ್ಲರೂ ಕೂಡಿ ರೇಲ್ವೆ ಸ್ಟೇಶನ್ನಿಗೆ ಹೋಗಿ ಟಿಕೆಟ್ ತೆಗೆದುಕೊಂಡು ಮಾತಾಜಿಯವರನ್ನು ಗಾಡಿಯಲ್ಲಿ ಕೂಡಿಸಿ ಹೇಳಿದರು. `ಕಲಾವತಿಯವರೇ, ಈ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ಕಳ್ಳರ ಭಯವಿರುತ್ತದೆ. ರಾತ್ರಿ ಹತ್ತರ ನಂತರ ನೀವು ಕುಳಿತಿರುವ ಸ್ಥಾನದ ಎಲ್ಲ ಖಡಕಿಗಳನ್ನು ಮುಚ್ಚಿಕೊಂಡು ಕೊಡಬೇಕು ಎಂದು ಹೇಳಿ ಹೋದರು. ನಂತರ ಗಾಡಿ ಚಲಿಸಿತು.


ಒಳಗೆ ವಿಪರೀತ ಶಕೆಯಾಗುತ್ತದೆಂದು ಮಾತಾಜಿ ಖಿಡಕಿಯನ್ನು ತೆರೆದು ಧ್ಯಾನಸ್ಥಳಾಗಿ ಕುಳಿತಳು. ರಾತ್ರಿ ಹನ್ನೊಂದರ ಸುಮಾರು ಆ ಖಡಕಿಯಿಂದ ಒಬ್ಬ ರೌಡಿ ಹಟಾತ್ತನೆ ಒಳಗೆ ಬಂದು ಕುಳಿತನು. ಆಗ ಮಾತಾಜಿಯವರು ನಸುನಗುತ್ತ ಅವನ ಕಡೆಗೆ ನೋಡಿದಳು. ಆಗ ಅವನು ತನ್ನ ಜೇಬಿನಿಂದ ಪಿಸ್ತೂಲ ತೆಗೆದುಕೊಂಡು ಅವಳ ಕಡೆಗೆ ತೋರಿಸಿದರೂ ಮಾತಾಜಿಯವರು ಶಾಂತಚಿತ್ತದಿಂದ ಕುಳಿತಿದ್ದರು. ಅಷ್ಟರಲ್ಲಿ ಆಶ್ಚರ್ಯಕರ ಘಟನೆ ಜರುಗಿತು. ಅದಂದರೆ ಅವನು ತನ್ನ ಪಿಸ್ತೂಲನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡನು. ಅಷ್ಟರಲ್ಲಿ ಟಿಕೆಟ್ ಗಾರ್ಡ ಬಂದ ಆ ರೌಡಿಯನ್ನು ನೋಡಿ "ಇವನು ನಿಮ್ಮವನೇನು?" ಎಂದು ಪ್ರಶ್ನೆ ಕೇಳಿದಾಗ ಮಾತಾಜಿಯವರು ಹೇಳಿದರು ''ಇವನು ನನ್ನ ಅಣ್ಣನಾಗಬೇಕು. ನನ್ನ ಭೇಟಿಗೆ ಬಂದಿದ್ದಾನೆ. ನೀವು ನನ್ನ ಕ್ಷೇಮವನ್ನು ವಿಚಾರಿಸಲು ಬಂದಿದ್ದೀರಿ' ಎಂದಳು. ಆಗ ಗಾರ್ಡನು ದೇವಿಯವರ ಮಾತಿನ ಮರ್ಮವನ್ನು ತಿಳಿದು ಆ ರೌಡಿಗೆ ಟಿಕೆಟ್ ಕೇಳಿದನು. ಆಗ ಕಳ್ಳ ಹೇಳಿದ ನನ್ನ ಟಿಕೆಟ್ ತೆಗೆದುಕೊಂಡವರು ಮುಂದಿನ ಡಬ್ಬಿಯಲ್ಲಿ ಕುಳಿತಿದ್ದಾರೆ' ಎಂದಾಗ ಇವನು ರೌಡಿ ಮವಾಲಿ ಇರಬಹುದೆಂದು ಗಾರ್ಡನಿಗೆ ಸಂಶಯ ಬಂದು ಅವನನ್ನು ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿ ನಂತರ ಮಾತಾಜಿಯವರ ಕಡೆಗೆ ಬಂದು ನೀವು ಸ್ವಲ್ಪವೂ ಹೆದರಬೇಡಿರಿ, ನಾನು ಪ್ರತಿ ಸ್ಟೇಶನ್ನಿಗೆ ಬಂದು

ನಿಮ್ಮನ್ನು ಕಾಣುತ್ತೇನೆ. ನಿಮಗೇನಾದರೂ ಬೇಕಾದರೆ ಸಂಕೋಚವಿಲ್ಲದೆ ತಿಳಿಸಿರಿ" ಎಂದು ಹೇಳಿಹೋದ.


ಅದರಂತೆ ಆ ಗಾರ್ಡ ಪ್ರತಿಯೊಂದು ಸ್ಟೇಶನ್ ಬಂದಾಗ ಮಾತಾಜಿಯವರನ್ನು ಮಾತಾಡಿಸಿ ಹೋಗುತ್ತಿದ್ದನು. ಮುಂಜಾನೆ ಗಾಡಿ ಮದ್ರಾಸವನ್ನು ತಲುಪಿತು. ಆಗ ಗಾರ್ಡ ಬಂದು ಕೇಳಿದ ನಿಮ್ಮನ್ನು ಕರೆದುಕೊಂಡು ಹೋಗಲು ಯಾರಾದರೂ ಬಂದಿದ್ದಾರೆಯೆ?" ಎಂದಾಗ ತನ್ನನ್ನು ಕರೆದುಕೊಂಡು ಹೋಗಲು ಬಂದ ಜನರನ್ನು ತೋರಿಸಿ ``ಇವರು ಬಂದಿದ್ದಾರೆ' ಎಂದು ತಿಳಿಸಿದರು. ಆಗ ಗಾರ್ಡ ಹೇಳಿದ. ಈಗ ನನ್ನ ಕೆಲಸ ಮುಗಿಯಿತು. ನಾನಿನ್ನು ಹೋಗುತ್ತೇನೆ ಎಂದಾಗ ಮಾತಾಜಿ ಅವನನ್ನು ಕೇಳಿದರು ಈವರೆಗೆ ನನ್ನ ಕ್ಷೇಮ ಕೇಳಿ ಉಪಕಾರ ಮಾಡಿದವನು ನೀನು ಯಾರು?” ಎಂದಾಗ ಗಾರ್ಡ ಹೇಳಿದ ನನ್ನ ಹೆಸರು ಗುರುನಾಥ ಹುಬಳಿಕರ' ಎಂದು ಹೇಳಿ ಸ್ವಲ್ಪ ದೂರ ಹೋಗಿ ಅದೃಶ್ಯನಾದ. ಅದನ್ನು ಕಂಡು ಕಲಾವತಿದೇವಿಯವರಿಗೆ ಸದ್ಗುರು ಕೊಟ್ಟ ಆಶ್ವಾಸನೆ ನೆನಪಾಗಿ ಆನಂದವಾಯಿತು. ಈ ಬಗ್ಗೆ ವಿಚಾರ ಮಾಡಿದರೆ ಶ್ರೀ ಸಿದ್ಧಾರೂಢರ ಅನನ್ಯ ಭಕ್ತಿ ಮಾಡಿದರೆ ಎಂಥ ಸಂಕಟ ಬಂದರೂ ಗುರುಗಳು ಅವರ ರಕ್ಷಣೆ ಮಾಡುತ್ತಾರೆಂಬುದಕ್ಕೆ ಯಾವ ಸಂಶಯವಿಲ್ಲ.


ಮುಂದೆ ಕೆಲವು ದಿವಸಗಳ ನಂತರ ಮಂಗಳೂರಿಗೆ ಹೋಗಲು ಮುಂಜಾನ ನಾಲ್ಕು ಗಂಟೆಗೆ ಬಸ್ಸಿನಲ್ಲಿ ಕುಳಿತರು. ಮಧ್ಯಾಹ್ನ ಹನ್ನೆರಡು ಗಂಟೆಗೆ ಮಡಿಕೇರಿ ತಲುಪಿತು. ಅಲ್ಲಿ ಎಲ್ಲರೂ ಊಟಕ್ಕೆಂದು ಇಳಿದರು. ಆಗ ಮಾತಾಜಿಯವರು ಮಂಗಳೂರಿಗೆ ಹೋಗಿ ಊಟ ಮಾಡಿದರಾಯಿತು ಎಂದು ನಿಶ್ಚಯಿಸಿದರು. ಮುಂದೆ ಬಸ್ಸು ಮಡಿಕೇರಿಯಿಂದ ಹೊರಟು ಎರಡು ಮೈಲು ದಾಟಿದ ಮೇಲೆ ಪಂಕ್ಚರ ಆಯಿತು. ಆಗ ಎಲ್ಲರೂ ಕೆಳಗೆ ಇಳಿದು ಗಿಡದ ಕೆಳಗೆ ಕುಳಿತರು. ಅಷ್ಟರಲ್ಲಿ ಓರ್ವ ಹೆಣ್ಣುಮಗಳು ಊಟದ ಡಬ್ಬಿ ನೀರಿನ ಪಾತ್ರೆ ಊಟದ ಎಲೆ ತೆಗೆದುಕೊಂಡು ಲಗುಬಗೆಯಿಂದ ಹತ್ತಿರ ಬಂದು ಹೇಳಿದಳು ನಾನು ಊಟ ಮಾಡಿ ಮಲಗಿದ್ದೆ. ಆಗ ಕನಸಿನಲ್ಲಿ ಒಬ್ಬ ಸಾಧು ಬಂದು ನನ್ನ ಭಕ್ಕಳು ಒಂದು ಗಿಡದ ಕೆಳಗೆ ಕುಳಿತಿದ್ದಾಳೆ. ಅವಳು ಹಸಿದಿದ್ದು ನೀನು ಅವಳಿಗಾಗಿ ಈಗಿಂದೀಗಲೇ ಊಟ ತೆಗೆದುಕೊಂಡು ಹೋಗಿ ಕೊಡು' ಎಂದು ಆಶೀರ್ವದಿಸಿದ್ದರಿಂದ ಬಂದಿದ್ದೇನೆ. ಇದನ್ನು ಸ್ವೀಕಾರ ಮಾಡು ಇಲ್ಲದಿದ್ದರೆ ನಿನ್ನನ್ನು ಮುಂದೆ ಬಿಡುವುದಿಲ್ಲ' ಎಂದು ಪಟ್ಟು ಹಿಡಿದಾಗ ಮಾತಾಜಿಯವರು ಸದ್ಗುರುವಿನ ಇಚ್ಛೆ  ಹೀಗೇಯಿರಬಹುದೆಂದು ಊಟ ಮಾಡಿದರು. ನಂತರ ಆ ತಾಯಿ ಪಾತ್ರೆಗಳನ್ನು ತೆಗೆದುಕೊಂಡು ಹೋದ ಮೇಲೆ ಮೂಟರ್ ದುರಸ್ತಿಯಾಗಿ ಬಸ್ಸು ಹಿಡಿದು ಮಂಗಳೂರಿಗೆ ತಲುಪಿದರು.


ಮಾತಾಜಿಯವರು ಕೀರ್ತನಕ್ಕಾಗಿ ಎಲ್ಲಿ ಹೋದರೂ ಮಹಾಶಿವರಾತ್ರಿ ಸಿದ್ದರ ಜಯಂತಿ ಮತ್ತು ಶ್ರಾವಣ ಮಾಸದಲ್ಲಿ ಒಂದು ಉತ್ಸವಕ್ಕೆ ಮಠಕ್ಕೆ ಬಂದು ಸೇವೆ ಸಲ್ಲಿಸಿ ಹೋಗುತ್ತಿದ್ದರು. ಭಕ್ತರ ಕರೆಯ ಮೇರೆಗೆ ಮೈಸೂರು, ಶ್ರೀರಂಗಪಟ್ಟಣ, ಬೆಂಗಳೂರು, ಪುತ್ತೂರು, ಚಿಕ್ಕಮಗಳೂರು, ಮಂಗಳೂರು, ಕಾಸರಗೋಡು, ಕಾಂಜಿಗಡ, ಕೊಯಮತ್ತೂರು, ಪಾಲ್‌ಘಾಟ್, ಕಾರ್ಕಳ, ಉಡುಪಿ ಮುಂತಾದ ಊರುಗಳಲ್ಲಿ ಕೀರ್ತನೆ ಮಾಡುತ್ತ ಮುಂದೆ ಮುಂಬೈ, ಸಾಂತಾಕ್ರುಸ, ವಸಯಿ, ಸಿಕ್ರಾಪುರ, ಪುಣೆ ಮುಂತಾದ ಊರುಗಳಲ್ಲಿ ಕೀರ್ತನ ಮಾಡುತ್ತ ಅಹಮದ ನಗರಕ್ಕೆ ಬಂದರು. ಅಲ್ಲಿ ಸೀತಾರಾಮ ಗೋಡ್ಸೆ ಎಂಬ ವ್ಯಕ್ತಿಗೆ ಭಸ್ಮರೋಗ ತಗುಲಿತ್ತು. ಅವನ ತಾಯಿ ತಾಸು ತಾಸಿಗೆ ಐದು ರೊಟ್ಟಿ ತಿನ್ನಿಸಬೇಕಾಗಿತ್ತು. ಯಾವುದೇ ಔಷಧ ಮಂತ್ರ ತಂತ್ರ ವಿಫಲವಾಗಿದ್ದವು. ಆಗ ಅವನ ತಾಯಿ ಮಾತಾಜಿಯವರ ಕಡೆಗೆ ಬಂದು ವಿಷಯ ತಿಳಿಸಿ ರೋಗ ನಿವಾರಣೆಗೆ ಉಪಾಯ ಕೇಳಿದಳು. ಆಗ ಮಾತಾಜಿಯವರು ಅವನಿಗೆ ಓಂ ನಮಃ ಶಿವಾಯ ಮಂತ್ರವನ್ನು ಹನ್ನೊಂದು ನೂರು ಸಲ ಜಪಿಸಲು ಹೇಳಿ ಒಂದು ವನಸ್ಪತಿ ರಸದ ಔಷಧಿ ಕೊಟ್ಟು ಒಂದು ಚಮಚ ಹೊಟ್ಟೆಯಲ್ಲಿ ತೆಗೆದುಕೊಳ್ಳಲು ಹೇಳಿದಳು. ಅವರು ಅದರಂತೆ ಮಾಡಿದಾಗ ಗುಣವಾಯಿತು.


ಮುಂದ ಅಧಿಕ ಮಾಸದಲ್ಲಿ ಕೊಲ್ಲಾಪುರದಿಂದ ಕರೆ ಬಂದಿತು. ಆ ಸಮಯದಲ್ಲಿ ಕೊಲ್ಲಾಪುರಕ್ಕೆ ಹೋದರು. ಅವರ ಜೊತೆಗೆ ತುಳಸಾಬಾಯಿ ಇದ್ದಳು. ಮಾತಾಜಿ ಅಲ್ಲಿಗೆ ಹೋದಾಗ ಅಲ್ಲಿಯ ಮಂಡಳಿಯವರು ಒಂದು ಮನೆಯನ್ನು ತೋರಿಸಿ ಹೇಳಿದರು ಮಾತಾಜಿ, ಈ ಮನೆಯನ್ನು ನಿಮ್ಮ ಸಲುವಾಗಿ ಇಡಬೇಕೆಂದಿದ್ದೇವೆ. ನೀವು ಇಲ್ಲಿಯೇ ಇರಬೇಕು. ತಾವು ಸಿದ್ಧರ ಪುಣ್ಯತಿಥಿಯನ್ನು ಮಾಡುವುದಾದರೆ ಇಲ್ಲಿಯೇ ಮಾಡಿರಿ' ಎಂದು ಹೇಳಿದ್ದರಾದರೂ ಅವರು ಅಲ್ಲಿಯ ನಾಗಪುರಕರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಆ ವಾಡೆಯ ಎದುರಿನಲ್ಲಿ ಮಾರವಾಡಿ ದಂಪತಿಗಳಿದ್ದು ಅವರಿಗೆ ಸಂತಾನವಿರಲಿಲ್ಲ. ಆ ಮಾಲಕರ ಒಂದು ಲಕ್ಷ್ಮೀನಾರಾಯಣ ಮಂದಿರ ಮತ್ತು ಒಂದು ಬಂಗಲೆಯಿದ್ದವು. ಅವರು ಕಲಾವತಿದೇವಿಯವರನ್ನು ಕಂಡು ಮಾತಾಜಿ, ನಮ್ಮ ಆಸ್ತಿಗಳನ್ನು ನಿಮಗೆ ಸಮರ್ಪಣ ಮಾಡುತ್ತೇವೆ, ತೆಗೆದುಕೊಳ್ಳಿರಿ' ಎಂದಾಗ ಮಾತಾಜಿ ಹೇಳಿದರು ನನಗೆ ನನ್ನ ಗುರುಗಳು ಹನ್ನೆರಡು ವರ್ಷ ನಿಷ್ಕಾಮ ಸೇವೆ ಸಲ್ಲಿಸಲು ಹೇಳಿದ್ದಾರೆ. ಆದ್ದರಿಂದ ನಾನು ಸ್ವೀಕರಿಸಲಾರೆ. ಆ ಆಸ್ತಿಗಳನ್ನು ಸತ್ಪಾತ್ರಕ್ಕೆ ಸಲ್ಲಿಸಿದರೆ ನಿಮ್ಮ ಪುಣ್ಯ ವರ್ಧನವಾಗುತ್ತದೆ' ಎಂದು ಸೌಮ್ಯವಾಗಿ ನಿರಾಕರಿಸಿದರು. ನಂತರ ಅಲ್ಲಿ ಕೆಲವು ದಿವಸವಿದ್ದು ಮರಳಿ ಬಂದರು.


ಈ ಸಮಯದಲ್ಲಿ ಮಾತಾಜಿಯವರು ಬೆಳಗಾವದಲ್ಲಿ ಮನೆ ಮಾಡಿದ್ದರು. ಅವರ ಜೊತೆಗೆ ಅವಳ ಗೆಳತಿ ತುಳಸಾಬಾಯಿಯಿದ್ದಳು. ಎದುರಿನ ಬಂಗಲೆಯ ಒಂದು ಭಾಗದಲ್ಲಿ ಓರ್ವ ಸಂಸ್ಕೃತ ಪಂಡಿತರು ಬಾಡಿಗೆಯಿಂದ ವಾಸವಾಗಿದ್ದರು. ಮಾತಾಜಿಯವರು ದಿನಾಲು ತಮ್ಮ ಮನೆಯಲ್ಲಿ ಭಜನೆ ನಡೆಸುತ್ತಿದ್ದು ಅನೇಕ ಮಹಿಳೆಯರು ಬಂದು ಅದರಲ್ಲಿ ಭಾಗವಹಿಸಿ ಮರಳಿ ಹೋಗುತ್ತಿದ್ದರು. ಇದನ್ನು ಸಹಿಸದ ಪಂಡಿತನಿಗೆ ಸಹನೆಯಾಗದೆ ಒಂದು ದಿವಸ ಇವಳನ್ನು ಇಲ್ಲಿಂದ ಹೊರಗೆ ಹಾಕದಿದ್ದರೆ ನಾನು ಪುರುಷನೇ ಅಲ್ಲ' ಎಂದು ಬೈಯ್ಯುತ್ತಿದ್ದನು. ಇದನ್ನು ಕೇಳಿದ ಮಾತಾಜಿಯವರು ನಮ್ಮ ಭಜನೆಯಿಂದ ಪಂಡಿತರಿಗೆ ತೊಂದರೆಯಾಗುತ್ತಿದ್ದರೆ ಈ ಸ್ಥಾನವನ್ನು ಬದಲಿಸುವುದೇ ಒಳ್ಳೆಯದೆಂದು ಸಮೀಪದ ಟಿಳಕವಾಡಿಯ ಒಂದು ಚಾಳಿನಲ್ಲಿ ಮನೆ ಬಾಡಿಗೆಗೆ ನೋಡಿದರು.


ಅದೇ ದಿವಸ ರಾತ್ರಿ ಪಂಡಿತರ ಸ್ವಪ್ನದಲ್ಲಿ ಒಬ್ಬ ಕಪ್ಪು ವರ್ಣದ ದಾಂಡಿಗ ಮನುಷ್ಯನು ಬಂದು ಈ ಜಾಗೆ ಈ ಮನೆಯನ್ನು ಬಿಟ್ಟುಬಿಡು. ಇಲ್ಲದಿದ್ದರೆ ನೀನು ಸಾಯುತ್ತಿ' ಎಂದು ಕೈಯಲ್ಲಿಯ ಬಡಿಗೆಯಿಂದ ಹೊಡೆಯತೊಡಗಿದನು. ಪಂಡಿತರು ಭಯದಿಂದ ಒದರತೊಡಗಿದನು. ಅದನ್ನು ಕೇಳಿದ ಹೆಂಡತಿ ಮಕ್ಕಳು ಬಂದು ನೋಡಿದಾಗ ಅವನು ಬಡಬಡಿಸುತ್ತ ಥರಥರ ನಡುಗುತ್ತ ನಡೆದ ಸಂಗತಿ ಹೇಳು ನಾನು ಸಾಯುವುದು ನಿಶ್ಚಿತವೆಂದು ತಿಳಿದು ಆ ಮನೆಯನ್ನು ತೆರವು ಮಾಡಿ ಬೇರೆಡೆಗೆ ಹೋದನು.


ಇತ್ತ ಸೀತಾಬಾಯಿಯ ಮನಸ್ಸಿನಲ್ಲಿ ಒಂದು ವಿಚಾರ ಹೊಳೆಯಿತು. ಅದೆಂದರೆ ಮಾತಾಜಿಯವರ ಮಕ್ಕಳು ಬಹಳ ದಿನಗಳಿಂದ ದೂರವಿದ್ದಾರೆ. ಅವರನ್ನು ತಾಯಿಯ ಸಹವಾಸದಲ್ಲಿಡಬೇಕೆಂದು ವಿಚಾರ ಮಾಡಿ ಬಾಳಕೃಷ್ಣನನ್ನು ಬೆಳಗಾವಿಗೆ ಕಳಿಸಿದಳು. ಅದರಂತೆ ಮಾತಾಜಿಯವರ ಸೋದರತ್ತೆ ಕಮಲಾಕರನನ್ನು ಕರೆದುಕೊಂಡು ಬೆಳಗಾವಿಗೆ ಬಂದು ದಮಣಿ ಹಿಡಿದು ಅವರ ಮನೆಗೆ ಬಂದಾಗ ಮಾತಾಜಿಯವರು ಕೀರ್ತನಕ್ಕಾಗಿ, ನಂದಗಾವಕ್ಕೆ ಹೋಗಬೇಕಾಗಿತ್ತು. ಅದನ್ನು ತಿಳಿದ ಕಲಾವತಿದೇವಿಯವರು ಹಿಂದಿನ ಬಾಗಿಲಿನಿಂದ ಹೊರಗೆ ಹೋದರು. ಇದೇ ಪ್ರಕಾರ ಈ ಹಿಂದೆ ಒಂದು ಪ್ರಸಂಗ ನಡೆಯಿತು. ಅದೆಂದರೆ ಹತ್ತೊಂಭತ್ತುನೂರಾ ಮೂವತ್ತೆರಡರಲ್ಲಿ ಮಾತಾಜಿಯವರು ಶಿವರಾತ್ರಿ ಉತ್ಸವ ಮುಗಿಸಿ ಮತ್ತೆ ಮದ್ರಾಸಕ್ಕೆ ಹೋಗಲು ಟಾಂಗಣದಲ್ಲಿ ಕುಳಿತು, ಅಷ್ಟರಲ್ಲಿ ತಾಯಿಯ ಮನೆಯವರು ಮಗು ಬಾಳಕೃಷ್ಣನಿಗೆ ಕಲಿಸಿಕೊಟ್ಟು ಕರೆದುಕೊಂಡು ಬಂದಿದ್ದರು. ತಾಯಿಯನ್ನು ನೋಡಿದ ಮಗುವು ದಾರಿಯಲ್ಲಿ ಆಡ್ಕ ನಿಂತನು. ಆಗ ಮಾತಾಜಿಯವರು ತಕ್ಷಣ ಕೆಳಗಿಳಿದು ಮಗುವಿನ ಕೈ ಹಿಡಿದೇಳೆದು ರಸ್ತೆಯ ಬದಿಗೆ ತೆಗೆದುಕೊಂಡು ಹೋಗಿ ತಾನು ಯಾರಿಗಾದಲ್ಲಿ ಕುಳಿತಳು. ಮಗುವು ಪುನ: ಟಾಂಗಾದ ಹಿಂಭಾಗ ಹಿಡಿದು ಓಡಹತ್ತಿತು , ಮಾತಾಜಿಯು ಟಾಂಗಾ ಚಾಲಕನಿಗೆ ಸಲ ಹೇಳಿದಾಗ ಟಾಂಗಾದಿಂದ ಧಕ್ಕೆಯಾಗಿ ಬಾಳಕೃಷ್ಟ ಕೆಳಗೆ ಬಿದ್ದವು. ಆದರೂ , ಮಾತಾಜಿಯವರು ಆ ಕಡೆಗೆ ನೋಡದ ಸೇಶನ್ನಿಗೆ ಹೋದರು. ಹೀಗೊಂದು ವಿಚಾರ ಮಾಡಿದರೆ ಹೀಗೆ ತಿಳಿಯುತ್ತದೆ ಅದೆಂದರೆ ಮಾತಾಜಿ ಆ ರೀತಿ ವರ್ತಿಸದಿದ್ದರೆ ಇದು ಜಗತ್ತಿನ ಜೀವರುಗಳನ್ನು ಉದ್ಧರಿಸುವ ಗುರು ದೊರೆಯುತ್ತಿರಲಿಲ್ಲ. ಎಲ್ಲರಂತೆ  ಸಂಸಾರಿಯಾಗುತ್ತಿದ್ದಳು.


ಮನೆಯ ಹಿಂದಿನ ಬಾಗಿಲಿನಿಂದ ಹೊರಗೆ ಹೋದ ಮಾತಾಜಿಯವರು ಅಲ್ಲಲ್ಲಿ ಕೀರ್ತನ ಮಾಡುತ್ತ ಎಷ್ಟು ದಿವಸಗಳಾದರೂ ಮನೆಗೆ ಬರಲಿಲ್ಲವಾದ್ದರಿಂದ ಬಂದವರು ನಿರಾಶರಾಗಿ ಬಾಳಕೃಷ್ಣನನ್ನು ಅಲ್ಲಿಯೇ ಬಿಟ್ಟು ಮರಳಿ ಊರಿಗೆ ಹೋದರು, ಮುಂದೆ ಮಾತಾಜಿಯವರ ಜೊತೆಗಿದ್ದ ಗೆಳತಿ ತುಳಸಾಬಾಯಿಯು ಬಾಳಕೃಷ್ಣನನ್ನು ಕಮಲಾಕರನನ್ನು ಸೆಂಟ್ ಪಾಲ್ ಹಾಯಸ್ಕೂಲಿನಲ್ಲಿ ಹೆಸರು ಹಚ್ಚಿದಳು. ಕಲಾವತಿದೇವಿಯವರು ನಂದಗಡ, ಖಾನಾಪುರ, ಧಾರವಾಡಗಳಲ್ಲಿ ಕೀರ್ತನ ಮುಗಿಸಿ  ಮಹಾಶಿವರಾತ್ರಿಯ ನಿಮಿತ್ತ ಹುಬ್ಬಳ್ಳಿಯ ಮಠಕ್ಕೆ ಹೋದರು. ನಂತರ ಕುಮಟಾ , ಹೊನ್ನಾವರ, ಭಟ್ಕಳ, ಶಿರಾಲಿ, ಕಾರವಾರ ಮುಗಿಸಿ ಅಂಕೋಲಾಕ್ಕೆ ಹೋದರು. ಅಲ್ಲಿಂದ ಮರಳಿ ಬೆಳಗಾವಿಗೆ ಬಂದರು. ಕೊನೆಗೂ ತುಳಸಾಬಾಯಿಯು ಬಾಳಕೃಷ್ಟ ಮತ್ತು ಕಮಲಾಕರನನ್ನು ತಾಯಿ ಮಾತಾಜಿಯವರ ರಕ್ಷಣೆಯಲ್ಲಿಡಲು ಯಶಸ್ವಿಯಾದಳು. ಮುಂದೆ ಮಾತಾಜಿಯವರ ಮಾರ್ಗದರ್ಶನದಲ್ಲಿ ಮಕ್ಕಳು ಉನ್ನತಿ ಹೊಂದತೊಡಗಿದರು.


ಸದ್ಗುರು ಸಿದ್ದಾರೂಢರು ಆದೇಶಿಸಿದಂತೆ ಮಾತಾಜಿಯವರು ಹನ್ನೆರಡು ವದ ಕೀರ್ತನ ಸೇವೆ ಪೂರ್ಣಗೊಂಡಿತು. ಮಾತಾಜಿಯವರಿಂದಲೇ ಎಂ. ಶಿವರಾವರ ಪತ್ನಿಯ ರೋಗ ನಿವೃತ್ತಿಯ ನಿಮಿತ್ತ ಅವರು ಮಾತಾಜಿಯವರಿಗೆ ಕಾಣಿಕೆ ಕೊಡಲು ಹೋದಾಗ ಅವರು ನಿರಾಕರಿಸಿದರು. ಇದಕ್ಕಾಗಿ ಅವರ ಮನಸಲ್ಲಿ ಯಾವಾಗಲೂ  ಕಟೆಯುತ್ತಿತ್ತು. ಒಂದು ದಿವಸ ಬೆಳಗಾವಿ ಯ  ನಟಿ ಹತ್ತಿರ ಅನಗೋಳ ರೋಡಿಗೆ ಹೊಂದಿರುವ ಒಂದು ನಿವೇಶನವನ್ನು ಕೊಂಡು ಮಾತಾಜಿಯವ ಅರ್ಪಿಸಬೇಕೆಂದು  ಅವರ ಕನಸಿನಲ್ಲಿ ಶ್ರೀ ಸಿದ್ಧಾರೂಢರ ದೃಷ್ಟಾಂತವಾಯಿತು. ಅವರು ಈ ವಿಚಾರವನ್ನು ಮಾತಾಜಿಯವರಿಗೆ ತಿಳಿಸಿದಾಗ ಮಾತಾಜಿ ಹೇಳಿದರು  ನೀವು ಹೇಳುವುದೇನೋ  ನಿಜವಿರಬಹುದು. ಆದರೆ ನಿಮಗೆ ದೃಷ್ಟಾಂಶವಾದಂತೆ ನನಗೂ  ದೃಷ್ಟಾಂತವಾಗುವವರೆಗೆ ನಾನು ನಂಬುವುದಿಲ್ಲ' ಎಂದು ಹೇಳಿದರು. ಆಮೇಲೆ ಅದೇ ದಿವಸ ರಾತ್ರಿ ಕನಸಿನಲ್ಲಿ ಮಾತಾಜಿಯವರಿಗೆ ಸಿದ್ಧಾರೂಢರ ದೃಷ್ಟಾ೦ತವಾಯಿತು.


ಮರುದಿವಸ ಮುಂಜಾನೆಯದ್ದಾಗ ಒಬ್ಬ ಶ್ರೀಮಂತ ಹೆಣ್ಣು ಮಗಳು ಬಂದು ನಿಂತಲ್ಲಿಯೇ ಹೇಳಿದಳು. ಅನಗೋಳ ಗ್ರಾಮದ ಮುಖ್ಯ ರಸ್ತೆಯ ಬದಿಗಿರುವ ನಿವೇಶನ ಮಾರುವುದಿದೆ. ನಿಮಗೆ ಬೇಕಾದಲ್ಲಿ ನೋಡಿರಿ ಎಂದು ಹೇಳಿ ಹೋದಳು. ನಂತರ ಮಾತಾಜಿಯವರು ಮತ್ತು ಶಿವರಾವರು ಕೂಡಿ ಆ ನಿವೇಶವನ್ನು ನೋಡಲು ಅಲ್ಲಿಗೆ ಹೋದಾಗ ಆ ನಿವೇಶನದ ಮಧ್ಯಭಾಗದಲ್ಲಿ ಒಂದು ಬಾವಿಯಿದ್ದು, ಅನೇಕ ಫಲಪುಷ್ಪಗಳ ಗಿಡಗಳಿದ್ದವು. ಅಲ್ಲಿ ಒಂದು ಚಪ್ಪರದ ಮನೆಯಲ್ಲಿ ಪಾಣಬುದ್ಯಾ ಎಂಬ ಹೆಸರಿನವನೋರ್ವನು ಸಂಸಾರ ಸಮೇತ ವಾಸವಾಗಿದ್ದು, ನಿವೇಶನ ಖರೀದಿಸಲು ಬಂದವರಿಗೆಲ್ಲ 'ಈ ನಿವೇಶನ ಖರೀದಿಸುವವರು ಮರಣ ಹೊಂದುತ್ತಾರೆ. ಅವರಿಗೆ ಬಹಳ ತೊಂದರೆಯಾಗುತ್ತದೆ. ಕೆಲವರಿಗೆ ಹೀಗೇ ಆಗಿದೆ' ಎಂದು ಹೆದರಿಸುತ್ತಿದ್ದನು. ಇದನ್ನು ಕೇಳಿದ ಶಿವರಾಯರು ಚಿಂತಿತರಾದರು. ಆಗ ಮಾತಾಜೆಯವರು ಹೇಳಿದರು `ಶಿವರಾವರೇ, ನೀವು ಹೆದರುವ ಕಾರಣವಿಲ್ಲ. ಈ ಜಾಗೆಯನ್ನು ಶ್ರೀ ಹರಿಯೇ ಕೊಳ್ಳುವವನಿದ್ದಾನೆ. ಇಲ್ಲಿ ಅವನೇ ವ್ಯವಸ್ಥೆ ಮಾಡುತ್ತಾನೆ' ಎಂದು ಹೇಳಿದಾಗ ಅವರು ಆ ನಿವೇಶನವನ್ನು ಕೊಂಡುಕೊಂಡು ಮಾತಾಜಿಯವರಿಗೆ ಅರ್ಪಿಸಿದರು.


ಎರಡನೆಯ ದಿವಸ ಮಾತಾಜಿ ಮತ್ತು ಶಿವರಾವರು ಹುಬ್ಬಳ್ಳಿಗೆ ಬಂದು ಮಠದಲ್ಲಿಯ ಸಮಾಧಿಯ ಪೂಜೆ ಮಾಡಿ ಇಬ್ಬರೂ ಸಾಯಂಕಾಲ ಹೊರಟರು. ಮಾತಾಜಿಯವರು ಬೆಳಗಾವಿಗೆ ಇಳಿದರೆ ಶಿವರಾವರು ಮುಂಬೈಗೆ ಹೋದರು. ಮುಂದೆ ಮಾತಾಜಿಯವರು ಆ ನಿವೇಶನದಲ್ಲಿ ಒಂದು ಆಶ್ರಮ ಕಟ್ಟಿ ಆಯುಷ್ಯ ಪರ್ಯಂತ ಅಲ್ಲಿಯೇ ಉಳಿಯಬೇಕೆಂದು ನಿಶ್ಚಯಿಸಿದರು. ಅಲ್ಲಿ ಒಂದು ಹರಿಮಂದಿರ ಕಟ್ಟಲು ಯಾರಿಗೂ ಹಣ ಬೇಡಬಾರದೆಂದು ನಿಶ್ಚಯಿಸಿ ಸದ್ಗುರು ತನ್ನ ವ್ಯವಸ್ಥೆಯನ್ನು ತಾನೇ ಮಾಡಿಕೊಳ್ಳುತ್ತಾನೆಂದು ಹಣ ಕೂಡಿಸುವವರಿಗೆ ಕಟ್ಟಪ್ಪಣೆ ಮಾಡಿದ್ದರು.


ಮಾತಾಜಿಯವರು ಗೋಕರ್ಣ ಬಿಟ್ಟು ಸಿದ್ಧರ ಮಠಕ್ಕೆ ಬರುವ ಹದಿನೈದು ದಿವಸ ಪೂರ್ವದಲ್ಲಿ ಉಮಾಬಾಯಿ ಮಣಿಗಾದ ಎಂಬವರು ತನ್ನ ಮಗಳ ಲಗ್ನದ ನಿಮಿತ್ತ ಮಾತಾಜಿಯವರ ಎಲ್ಲ ದಾಗೀನಗಳನ್ನು ತೆಗೆದುಕೊಂಡು ಹೋಗಿದ್ದಳು, ಅವುಗಳನ್ನು ಮರಳಿ ಕೊಟ್ಟಿರಲಿಲ್ಲ. ಒಂದು ದಿವಸ ಅವಳ ಸ್ವಪ್ನದಲ್ಲಿ ಒಬ್ಬ ಕಪ್ಪಗಿನ ಮನುಷ್ಯ ಕೈಯಲ್ಲಿ ಬಡಿಗೆ ಹಿಡಿದು ಬಂದು ಉಮಾಬಾಯಿ, ಮಾತಾಜಿಯ  ಎಲ್ಲ ಆಭರಣಗಳ ದುಡ್ಡು ಅವಳಿಗೆ ಈಗಲೇ ಕೊಡಬೇಕು. ಇಲ್ಲವಾದರೆ ನೆಟ್ಟಗಾಗಲಿಕ್ಕಿಲ್ಲ ಎಂದು ಹೇಳಿ ಅದೃಶ್ಯನಾದನು. ಆಗ ಆ ಬಾಯಿಯು ಮಾತಾಜಿಯವರನ್ನು ಹುಡುಕುತ್ತ ಬೆಳಗಾವಿಗೆ ಬಂದು ಮಾತಾಜಿಯವರನ್ನು ಕಂಡು ಹನ್ನೆರಡು ತೊಲೆ ಬಂಗಾರದ ದುಡ್ಡು ಮತ್ತು ಹನ್ನೆರಡು ವರ್ಷದ ಬಡ್ಡಿ ಸಹಿತ ಸಮರ್ಪಿಸಿ ಹೋದಳು. ಅದರಂತೆ ರಾಜಗೋಪಾಲನು ದಿಂಡಿವನದಲ್ಲಿದ್ದಾಗ ಅವರ ಮೇಲಾಧಿಕಾರಿ ತನ್ನ ಮಗಳ ಲಗ್ನಕ್ಕಾಗಿ ಐದು ಸಾವಿರ ರೂಪಾಯಿ ಕೈಗಡ ತೆಗೆದುಕೊಂಡಿದ್ದನು. ರಾಜಗೋಪಾಲನು ಆಕಸ್ಮಿಕ ಮರಣ ಹೊಂದಿದ್ದರಿಂದ ಆ ಹಣ ಅವನಲ್ಲಿಯೇ ಉಳಿದಿತ್ತು. ಮುಂದೆ ಆ ಅಧಿಕಾರಿಯ ಸ್ವಪ್ನದಲ್ಲಿ ಒಬ್ಬ ಕರಿಯ ಬಣ್ಣದ ದಾಂಡಿಗ ಮನುಷ್ಯ ಬಂದು ಧಮಕಿ ಹಾಕಿದ್ದರಿಂದ ಅವನು ಮಾತಾಜಿಯವರನ್ನು ಹುಡುಕಿಕೊಂಡು ಬಂದು ಹದಿನಾಲ್ಕು ವರ್ಷಗಳ ಬಡ್ಡಿ ಸಹಿತ ಐದು ಸಾವಿರ ರೂಪಾಯಿಗಳನ್ನು ಕೊಟ್ಟು ನಮಿಸಿ ಹೋದನು.


ಅದರಿಂದ ಆಶ್ರಮ ಕಟ್ಟಲು ಮತ್ತು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಯಿತು. ನಿವೇಶನದ ಮನೆಯಲ್ಲಿದ್ದವನು ಅದನ್ನು ತೆರವು ಮಾಡಿದ ಮೇಲೆ ಅದನ್ನು ರಿಪೇರಿ ಮಾಡಿ ಅಲ್ಲಿ ಇರಹತ್ತಿದರು. ಮುಂದೆ ಹರಿಮಂದಿರವನ್ನು ಕಟ್ಟಿಸಿದರು. ಅಲ್ಲಿ ಪ್ರಾರ್ಥನೆ, ಭಜನೆ, ನಾಮಸ್ಮರಣೆ, ಧ್ಯಾನ, ಸ್ತುತಿ, ಸ್ತೋತ್ರ, ಗಾಯನ, ಪ್ರವಚನ ಮುಂತಾದ ಕಾರ್ಯಕ್ರಮಗಳು ನಡೆಯಹತ್ತಿದವು. ಮಗ ಕಮಲಾಕರ ಮ್ಯಾಟ್ರಿಕ್ ನಪಾಸಾದ ನಂತರ ಪುಣೆಯ ಸೋದರತ್ತೆಯ ಕಡೆಗೆ ಹೋದನು. ಬಾಲಕೃಷ್ಣ ಇಂಟರ್ ಪಾಸಾದ ನಂತರ ಮುಂದಿನ ಶಿಕ್ಷಣಕ್ಕೆ ಅವನ ಮಾವನು ಮುಂಬೈಗೆ ಕರೆದುಕೊಂಡು ಹೋದನು. ಮುಂದೆ ಅವರು ನೌಕರಿಯಲ್ಲಿ ತೊಡಗಿದರು. ಮಾತಾಜಿಯವರು ಹರಿಮಂದಿರದಲ್ಲಿದ್ದು ಅನೇಕ ಲೋಕೋದ್ಧಾರ ಕಾರ್ಯಗಳನ್ನು ಮಾಡುತ್ತ ಅನೇಕ ಪಟ್ಟಣ ಶಹರಗಳಲ್ಲಿ ತಿರುಗಿ ಕೀರ್ತನ ಪ್ರವಚನಗಳನ್ನು ಮಾಡುತ್ತ ಆಶ್ರಮಗಳನ್ನು ಸ್ಥಾಪಿಸಿದರು. ಟಿಳಕವಾಡಿಯ ಲಕ್ಷ್ಮೀಬಾಯಿಯವರಿಗೆ ಏಳು ಮಕ್ಕಳಾದರೂ ಅವು ಹುಟ್ಟುತ್ತಲೇ ಮರಣ ಹೊಂದುತ್ತಿದ್ದವು. ಮಂತ್ರ ತಂತ್ರ ದೇವರು ಡಾಕ್ಷರರ ಉಪಚಾರ ಎಲ್ಲವೂ ಮುಗಿದಿದ್ದವು. ಕೊನೆಗೆ ಕಲಾವತಿ ದೇವಿಯವರಿಗೆ ಭೇಟಿಯಾಗಿ ತಮ್ಮ ಸಮಸ್ಯೆಯನ್ನು ತಿಳಿಸಿದಾಗ ದೇವಿಯವರು ಹರಿಮಂದಿರದ ತೋಟದಲ್ಲಿ ಭಾಗಿ ನಿಂತಿರುವ ಒಣಗಿದ ನಿಂಬೆಗಿಡವನ್ನು ತೋರಿಸಿ, ಅದಕ್ಕೆ ದಿನಾಲು ಹದಿನೈದು ತಂಬಿಗೆ ನೀರು ಹಾಕಿರಿ. ನಿಮಗೆ ಒಳ್ಳೆಯದಾಗುತ್ತದೆ ಎಂದರು. ಅವರ ಹೇಳಿಕೆಯ ಪ್ರಕಾರ ನೀರು ಹಾಕತೊಡಗಿದರು. ಎರಡು ವರ್ಷದ ಮೊದಲೇ ಒಣಗಿ ನಿಂತಿರುವ ಗಿಡದ ಜೀವ ತುಂಬಿ ಚಿಗಿತು ಟೊಂಗೆಯೊಡೆದು ಮೊದಲಿಗಿಂತಲೂ ಸುಂದರವಾಗಿ ಕಾಣತೊಡಗಿತು. ಮುಂದೆ ಲಕ್ಷ್ಮೀಬಾಯಿಗೆ ಒಂದು ವರ್ಷ ತುಂಬುವುದರೊಳಗಾಗಿ ಗಂಡು ಮಗು ಜನಿಸಿತ್ತು. ಮುಂದೆ ಜನಿಸಿದ ಮಕ್ಕಳೂ ಬದುಕಿದರು.


ಒಂದು ದಿನ ರಾತ್ರಿ ಒಂಭತ್ತು ಗಂಟೆಗೆ ಗುಂಡೋಬಾ ಎಂಬವನು ಬಂದು ಹೇಳಿದ ತಾಯಿ ನನ್ನ ಸಂಕಟ ಸಮಯದಲ್ಲಿ ಹಲವಾರು ಸಲ ಕಾಪಾಡಿದ್ದೀರಿ. ಆದರೂ ನಾನು ಸೊಕ್ಕಿನಿಂದ ನಿಮ್ಮ ಮಾತನ್ನು ಮೀರಿ ನಡೆದದ್ದರಿಂದ ಮತ್ತೆ ಸಂಕಟಕ್ಕೆ ಸಿಲುಕಿದ್ದೇನೆ. ಜೀವನದಲ್ಲಿ ಜಿಗುಪ್ಪೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನನ್ನ ಹೊಲ ಮನ ಮುಂತಾದವುಗಳನ್ನು ನಿಮ್ಮ ಹೆಸರಿಗೆ ಮಾಡಬೇಕೆಂದು ಕಾಗದಪತ್ರ ತಂದಿದ್ದೇನೆ. ದಯವಿಟ್ಟು ತೆಗೆದುಕೊಳ್ಳಿರಿ' ಎಂದನು.


ಆಗ ಮಾತಾಜಿಯವರು `ತಮಾ ಗುಂಡೂಬಾ, ನಿನ್ನ ಹಣೇಬರಹದಲ್ಲಿ ಆತ್ಮಹತ್ಯೆಯೇ ಇದ್ದರೆ ನನಗೇನೂ ಮಾಡಲಿಕ್ಕಾಗದು. ನಿನ್ನ ಆಸ್ತಿ ನನಗೆ ಬೇಡ. ನಿನ್ನ ಆಪ್ತಷ್ಟರಿಗೆ ಮಾಡು ಇಲ್ಲವಾದರೆ ಯಾವುದಾದರೂ ದೇವರ ಹೆಸರಿಗೆ ಮಾಡು. ಶ್ರೀಕೃಷ್ಣನ ಆಜ್ಞೆಯಿಲ್ಲದೆ ನನಗೇನೂ ಮಾಡಲಾಗದು. ಅವನ ಆಜ್ಞೆಯಾದಾಗ ಹೇಳಿ ಕಳಿಸುತ್ತೇನೆ ಹೋಗು' ಎಂದಳು. ಆಗ ತರುಣನು ನಿರಾಶನಾಗಿ ಮನೆಗೆ ಹೋದಾಗಲೇ ಅವನ ಮೇಲಿರುವ ಸಂಕಟ ನಿವಾರಣೆಯಾಗಿ ಆತ್ಮಹತ್ಯೆಯ ವಿಚಾರ ಕೈಬಿಟ್ಟ,


ಮುಲ್ಲಾರರಾವ ಕುಲಕರ್ಣಿಯವರ ನಾಲ್ಕು ವರ್ಷದ ಮಗುವಿಗೆ ಕಾಲು ಬಂದಿರಲಿಲ್ಲ. ಅನೇಕ ಔಷಧ ಉಪಚಾರ ಮಾಡಿಸಿದರೂ ಗುಣವಾಗಲಿಲ್ಲ. ಕೊನೆಗೆ ಕಲಾವತಿಯವರ ಕಡೆಗೆ ಹೋಗಿ ತಿಳಿಸಿದಾಗ ಅವರು ಹೇಳಿದರು 'ನೀವು ಇಲ್ಲಿರುವ ಬಾವಿಯ ನೀರನ್ನು ಮಗುವಿಗೆ ನಾಲ್ವತ್ತು ದಿವಸ ಕುಡಿಸಿರಿ" ಎಂದರು. ಅದರಂತೆ ಅವರು ಮಗುವಿಗೆ ನಾಲ್ವತ್ತು ದಿವಸ ಕುಡಿಸಿದಾಗ ಕಾಲುಗಳು ಬಂದವು. ಹೀಗೆ ಎಲ್ಲರಲ್ಲಿಯೂ ಸಮ ಭಾವದಿಂದಿದ್ದು ಅನೇಕ ಜನರ ಮಾನಸಿಕ ದೈಹಿಕ ದುಃಖ ಗಳನ್ನು ಕಳೆಯುತ್ತ ಅನೇಕರಿಗೆ ಉಪಚಾರ ಮಾಡುತ್ತ ಆಶ್ರಮದಲ್ಲಿ ಭಜನ ಕೀರ್ತನ ಪುರಾಣ ಶಾಸ್ತ್ರ ಪ್ರವಚನ ಮಾಡುತ್ತ ಲೋಕೋದ್ಧಾರ ಮಾಡುತ್ತ ಪರಮಪುಣ್ಯ ಆಯಿ ಎಂದು ಪ್ರಸಿದ್ಧಳಾದಲು ಮುಂದೆ ಮಾತಾಜಿಯವರು ತಾವೇ ರಚಿಸಿದ "ಭೋಧಮೃತ "ಮರಾಠಿ ಗ್ರಂಥದಲ್ಲಿ ತನ್ನ ಸದ್ಗುರುಗಳಾದ ಸಿದ್ದಾರೂಢರನ್ನು ಹೀಗೆ ಸ್ತುತಿಸಿದ್ದಾರೆ.


ಶ್ರೀ ಸಿದ್ಧಾರೂಢ ಧಾವಿಲಿ ಮಜಲಾ ನಿಜ ಖೂಣ |. ಅಣುಕೇಣು  ಪಾಸುನಿ ಸಂಚಲಾ ಕೃಷ್ಣತೂಚಿ ತೂ ಪರಿಪೂರ್ಣ ||

ಭವಪುರಿ  ಬಡತಾ ಧಾವತಯೆವುನಿ ತಾರಿಯತಿ  ಮಜ ಧರುನಿಹಾಥ  |

ತಾಸ ಗುರುಸಿದ್ದಾರೂಢ ಚರಣಮೀ ಪ್ರೇಣೆ ಚೋಡಿ ದೋನ್ಹಿಹಥಾ |

ಸಿದ್ಧಾರೂಢ ಜಗೀ ಜಡಮಲಧಾಸಿ ಉದ್ಧರಣಾಸ್ತವ ಅವತರವಾ |

ಬದ್ಧ ಪರಾಸಿ ದವಡುನಿದೂರಿ ಶುದ್ಧ ಕೇಲಿ ದಾಸಿಕಲಾ ||


ಹೀಗೆ ಸಿದ್ಧರನ್ನು ಸ್ತುತಿಸಿದ ಶ್ರೀಮತಿ ಕಲಾವತಿ ದೇವಿಯವರು ಒಂದು ಸಲ ಪ್ರವಾಸ ಮಾಡುತ್ತ ಮಹಾರಾಷ್ಟ್ರದ ಭಸಾವಳ ಶಹರಕ್ಕೆ ಹೋಗಿ ಅಲ್ಲಿ ಶಾಸ್ತ್ರ, ಪುರಾಣ, ಕೀರ್ತನ ಇತ್ಯಾದಿ ಕಾರ್ಯಕ್ರಮ ಗಳನ್ನು ಮಾಡಿದಾಗ ಅಲ್ಲಿಯ ಭಕ್ತ ಜನರು ಮಚ್ಚಿಕೊಂಡು ಹೇಳಿದರು ಮಾತಾಜಿ ಇಲ್ಲಿಯೂ ಒಂದು ಆಶ್ರಮ ಸ್ಥಾಪಿಸಿರಿ ಎಂದು ವಿನಮ್ರವಾಗಿ ಆಗ್ರಹ ಪಡಿಸಿದಾಗ ಆ ಭುಸಾವಳದಲ್ಲಿ ಆಶ್ರಮ ಸ್ಥಾಪಿಸಿ ಸಿದ್ಧ ಸಂಪ್ರದಾಯ ಪ್ರಾರಂಭಿಸಿ ಬಂದರು. ಅದು ಈಗಲೂ ವಿಜೃಂಭಣೆಯಿಂದ ನಡೆಯುತ್ತದೆ.


ಶ್ರೀ ಸಿದ್ಧಾರೂಢರ ಕರ ಕಮಲದಲ್ಲಿ ಸಂಜನಿಸಿದ ಮಾತಾಜಿ ಕಲಾವತಿ ದೇವಿಯವರು ಅಲ್ಲಲ್ಲಿ ಸ್ಥಾಪಿಸಿದ ಆಶ್ರಮಗಳು ಇನ್ನೂ ಊರ್ಜಿತಾವಸ್ಥೆಯಲ್ಲಿವೆ. ಆಯಾ ಆಶ್ರಮಗಳಲ್ಲಿ ವ್ಯವಸ್ಥಿತವಾಗಿ ಅವರ ಭಕ್ತರು ನಡೆಸುತ್ತಿರುವ ಪುಣ್ಯಮಯ ಕಾರ್ಯಕ್ರಮಗಳನ್ನು ಇಂದಿಗೂ ನೋಡಬಹುದು.


ಇಲ್ಲಿ ಮಾತಾಜಿಯವರ ಚರಿತ್ರೆಯನ್ನು ಸಂಕ್ಷಿಪ್ರ ಬರೆಯಲಾಗಿದೆ. (ಎಂಟುನೂರು ಪುಟದ ಚರಿತ್ರೆ ಮರಾರಿಯಲ್ಲಿದ್ದು, ಅದನ್ನು ಅವರ ಶಿಷ್ಯ ವಿಶಾಲಾಕ್ಷಿ ಬರೆದಿದ್ದಾರೆ. ಸವಿಸ್ತಾರ ಚರಿತ್ರೆ ನೋಡಬೇಕೆನ್ನುವವರು ಅದನ್ನು ನೋಡಬಹುದು.)


👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗುರುಕೃಪೆಗೆ ಪಾತ್ರಳಾದ ಕೃಷ್ಣಾಬಾಯಿ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ