ಶ್ರೀ ಸಿದ್ಧರೂಢರ ಶಿಷ್ಯ ದೇವರಹುಬ್ಬಳ್ಳಿ ನಾಗಭಾಷಣ ಶಿವಯಾಗಿಗಳು
🌺 ಶ್ರೀ ಸಿದ್ಧರೂಢರ ಶಿಷ್ಯ ದೇವರಹುಬ್ಬಳ್ಳಿ ನಾಗಭಾಷಣ ಶಿವಯಾಗಿಗಳು 🌺
👇👇👇👇👇👇👇👇👇👇👇👇👇👇
ಹಳೇಹುಬ್ಬಳ್ಳಿ ಕಿಲ್ಲೆಯ ನಿವಾಸಿ ಫಕೀರಪ್ಪ ಢಗೆ ಮತ್ತು ಅವರ ಪತ್ನಿ ಪಾರ್ವತಮ್ಮ ಅವರಿಗೆ ಮಲಕಪ್ಪನೆಂಬ ಮಗುವಿದ್ದು ನೇಕಾರಿಕೆಯ ಕೆಲಸ ಮಾಡುತ್ತ ಅದರಿಂದ ಬಂದ ಹಣದಿಂದ ಸುಖವಾಗಿ ಸಂಸಾರ ಮಾಡುತ್ತ ಸಿದ್ಧರ ಅನನ್ಯ ಭಕ್ತರಾಗಿದ್ದರು. ಒಂದು ದಿನ ಪಾರ್ವತಮ್ಮ ಶೇಂಗಾದ ಉಂಡಿ ತಯಾರಿಸಿ ಮಗುವನ್ನೆತ್ತಿಕೊಂಡು ಮಠಕ್ಕೆ ಹೋದಾಗ ಸದ್ಗುರುಗಳು ಒಬ್ಬರೇ ಕೆರೆಯ ದಂಡೆಯಲ್ಲಿ ಕುಳಿತಿದ್ದರು. ಆಗ ಪಾರ್ವತಮ್ಮ ಅವರಿಗೆ ನಮಸ್ಕರಿಸಿ ತಂದೆ, ನಿಮಗಾಗಿ ಉಂಡಿ ತಂದಿದ್ದೇನೆ ನನ್ನಪ್ಪ' ಎಂದು ಉಂಡಿಗಳನ್ನು ಅವರ ಮುಂದೆ ಇಟ್ಟಳು. ಆರೂಢರು ಉಂಡಿಗಳನ್ನು ತೆಗೆದುಕೊಂಡು ನಗುತ್ತ ಒಂದನ್ನು ಮಗು ಮಲಕಪ್ಪನಿಗೆ ಕೊಟ್ಟು ಇನ್ನೊಂದನ್ನು ಪಾರ್ವತಿಗೆ ತಿನಿಸಿ ಒಂದನ್ನು ತಾವು ತಿಂದು ತೃಪ್ತರಾಗಿ ಕೆಲಸಮಯ ಧ್ಯಾನಸ್ಥರಾಗಿ ಕುಳಿತರು. ಆ ಮೇಲೆ ಕಣ್ಣೆರೆದು ಪಾರ್ವತಮ್ಮ, ನಿನಗೆ ನನ್ನಂಥ ಮಗು ಬೇಕೇನು?' ಎಂದಾಗ ಪಾರ್ವತಿ ಹೇಳಿದಳು 'ತಂದೆ ಅಂತಹ ಭಾಗ್ಯ ನನಗೆಲ್ಲಿದೆ?' ಎಂದಳು. ಅದಕ್ಕೆ ಗುರುಗಳು ನಕ್ಕು ಆ ಭಾಗ್ಯ ನಿನ್ನ ಗರ್ಭಕ್ಕಿದೆ ತೆಗೆದುಕೊ' ಎಂದು ವಿಭೂತಿಯ ಒಂದು ಉಂಡಿಯನ್ನು ಕೊಟ್ಟರು. ಆಗ ಪಾರ್ವತಮ್ಮ ತೆಗೆದುಕೊಂಡು ಸಿದ್ಧನನ್ನು ನೆನೆಯುತ್ತ ಮನೆಗೆ ಬಂದಳು.
ದಿನಗಳೆದಂತೆ ಪಾರ್ವತಮ್ಮ ಗರ್ಭವತಿಯಾಗಿ ನವಮಾಸ ತುಂಬಿ ನಾಗರ ಪಂಚಮಿಯ ದಿನ ಗಂಡು ಕೂಸನ್ನು ಪಡೆದಳು. ಆ ದಿನ ಜನಿಸಿದ ಮಗುವಿಗೆ ನಾಗಾನಂದನೆಂಬ ಹೆಸರಿಟ್ಟರು. ಮುಂದೆ ವರಪುಣ್ಯಲತೆಯಂತೆ ಬೆಳೆದು ಆರು ವರ್ಷದವನಾದಾಗ ನಾಗಾನಂದ ಒಬ್ಬನೇ ಮಠಕ್ಕೆ ಹೋಗಿ ಸಿದ್ಧರ ದರ್ಶನ ಪಡೆದು ಬರುತ್ತಿದ್ದ. ಇದರಿಂದ ಸಿದ್ಧರ ಭಕ್ತಿ ಬಲಿಯಿತು. ಮುಂದೆ ಭೀಮಣ್ಣ ಜನಿಸಿದ. ನಾಗಾನಂದ ತನ್ನ ಸ್ನೇಹಿತರ ಜೊತೆಗೆ ಆಟವಾಡುವಾಗ ಪ್ರವಚನದಾಟ ಕೀರ್ತನೆಯಾಟ ಇಂತಹ ಆಟಗಳನ್ನೇ ಆಡುತ್ತಿದ್ದನು. ಒಂದು ದಿನ ಹಿತ್ತಲದ ಅಂಗಳಕ್ಕೆ ಗಿಡದ ಕಟ್ಟೆಯ ಮೇಲೆ ಹುಡುಗರು ನಾಗಾನಂದನನ್ನು ಕೂಡಿಸಿ ಆಟವಾಡುವಾಗ ನಾಗಾನಂದನು ಧ್ಯಾನ ಮುದ್ರೆಯಲ್ಲಿ ಕುಳಿತಿದ್ದಾನೆ. ಎಲ್ಲ ಮಕ್ಕಳೂ ಅವನನ್ನು ಪೂಜಿಸಿ ಮಂಗಳಾರತಿ ಹಾಡಿದರು. ಪಾರ್ವತಮ್ಮ ನಾಗಾನಂದನನ್ನು ಊಟಕ್ಕೆ ಕರೆಯಲು ಹಿತ್ತಲ ಬಾಗಿಲಿಗೆ ಬಂದು ನೋಡಿದಾಗ, ಗಿಡಕ್ಕೆ ಸುತ್ತು ಹಾಕಿಕೊಂಡ ನಾಗರಹಾವು ಬಾಲಕನ ಹಿಂಬದಿಗೆ ಹೆಡೆಬಿಚ್ಚಿ ಆಡುತ್ತಿದೆ. ಇದನ್ನು ನೋಡಿದ ತಾಯಿ ಭಯದಿಂದ ಚಿಟ್ಟನೆ ಚೀರಿದಾಗ ಆ ಸರ್ಪವು ಸರಸರನೆ ಸರಿದು ಹೋಯಿತು. ಆಗ ತಾಯಿ ಓಡಿಹೋಗಿ ಮಗುವನ್ನೆತ್ತಿಕೊಂಡು ಮನೆಯೊಳಗೆ ಬಂದಳು. ಇದನ್ನು ಕೇಳಿದವರೆಲ್ಲರೂ ಅಂದಿನಿಂದ ನಾಗಭೂಷಣನೆಂದು ಕರೆಯಹತ್ತಿದರು.
ಫಕೀರಪ್ಪ ತನ್ನ ಮಗುವನ್ನು ಶಾಲೆಗೆ ಕಳಿಸಿದ. ಶಾಲೆ ಬೇಸರವಾಗಿ ಎಲ್ಲ ಸಮಯ ಮಠದಲ್ಲಿಯೇ ಕಳೆಯಹತ್ತಿದನು. ಮಠದಲ್ಲಿ ಭಜನ ಪ್ರವಚನ ಮತ್ತು ಸಣ್ಣಪುಟ್ಟ ಸೇವೆಯಲ್ಲಿ ತೊಡಗುತ್ತಿದ್ದ, ಓಣಿಯಲ್ಲಿ ತೋಳಿನ ಹುಚ್ಚಮ್ಮನಿಗೂ ಪಾರ್ವತಮ್ಮನಿಗೂ ನಿಕಟ ಸ್ನೇಹವಿತ್ತು. ಹುಚ್ಚಮ್ಮ ತನ್ನ ಏಕೈಕ ಮಗಳು ತೀರಿಕೊಂಡಿದ್ದರಿಂದ ಬಹಳ ದುಃಖಿತಳಾಗಿದ್ದಳು. ಒಂದು ದಿನ ನಾಗಾನಂದ ವಿಷಮ ಜ್ವರದಿಂದ ಪೀಡಿತನಾಗಿ ಎಂಟು ಹತ್ತು ದಿನ ಮಲಗಿದ. ಔಷಧೋಪಚಾರ ವಿಫಲವಾಯಿತು, ಮಗು ಕ್ಷೀಣಿಸಿತು. ಒಂದು ದಿವಸ ಮಧ್ಯರಾತ್ರಿ ತಂದೆ ತಾಯಿಗಳು ಮಗುವಿನ ಹತ್ತಿರ ಚಿಂತಿಸುತ್ತ ಕುಳಿತಾಗ ತಾಯಿಗೆ ದುಃಖ ತಡೆಯದೆ 'ತಂದೆ ಸಿದ್ಧಾರೂಢಾ, ನಿನ್ನ ವರದಿಂದ ಜನಿಸಿದ ಮಗುವನ್ನು ನೀನೇ ಉಳಿಸು ನನ್ನ ಕಂದನನ್ನು ಉಳಿಸಿದರೆ ನಿನ್ನ ಮಠಕ್ಕೆ ಬಿಡುತ್ತೇನೆ' ಎಂದು ಬೇಡಿಕೊಂಡಾಗ ಮಗುವಿನ ಮೈ ಬೆವರಿ ಜ್ವರ ಇಳಿದು ಮುಂದೆ ನಾಗಾನಂದನ ಆರೋಗ್ಯ ಸುಧಾರಿಸಿತು.
ಒಂದು ದಿನ ನಾಗಾನಂದ ತನ್ನ ತಾಯಿಗೆ 'ಅವ್ವಾ, ನನ್ನನ್ನು ಗುರುಗಳ ಮಠಕ್ಕೆ ಬಿಡುತ್ತೇನೆಂದು ಬೇಡಿಕೊಂಡಿದ್ದೆ. ನನ್ನನ್ನು ಅಲ್ಲಿಗೇ ಕಳಿಸು' ಎಂದನು. ಸದ್ಗುರುವಿಗೆ ಕೊಟ್ಟ ಮಾತನ್ನು ತಪ್ಪಿಸಬಾರದೆಂದು ಮರುದಿನ ಮಗುವಿಗೆ ಸ್ನಾನ ಮಾಡಿಸಿ ವಿಭೂತಿ ಹಚ್ಚಿ ಮಠಕ್ಕೆ ಕರೆದುಕೊಂಡು ಹೋದಾಗ ಹುಚ್ಚಮ್ಮ ಸಿದ್ಧರ ಪಾದಗಳ ಹತ್ತಿರ ಕುಳಿತು ತನ್ನ ಮಗಳನ್ನು ಕಳೆದುಕೊಂಡ ಬಗ್ಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನಾಗಾನಂದರ ತಾಯ್ತಂದೆಯರು ತನ್ನ ಮಗನನ್ನು ಸಿದ್ದರ ಪಾದಕ್ಕೆ ಹಾಕಿ `ಅಪಾ, ನಿನ್ನಿಂದ ಬದುಕಿದ ನಮ್ಮ ಮಗನನ್ನು ನಿನಗೆ ಅರ್ಪಿಸಿದ್ದೇವೆ' ಎಂದು ನಮಸ್ಕರಿಸಿದರು. ಆಗ ಸದ್ಗುರುಗಳು `ಹುಚ್ಚಮ್ಮ, ನಿನಗೆ ಮಗಳು ಬೇಕೋ ಮಗ ಬೇಕೋ? ಶಿವನು ಮಗನನ್ನು ಕೊಟ್ಟಿದ್ದಾನೆ ಕರೆದುಕೋ' ಎಂದಾಗ ಹುಚ್ಚಮ್ಮ ಮಾತೃ ವಾತ್ಸಲ್ಯದಿಂದ ನಾಗಾನಂದನನ್ನು ಚುಂಬಿಸಿ ಎತ್ತಿಕೊಂಡಳು. ಅಂದಿನಿಂದ ನಾಗಾನಂದ, ಹುಚ್ಚಮ್ಮನ ಮಗನಾದ. ಆಗ ಗುರುಗಳು ಹೇಳಿದರು 'ಹುಚ್ಚಮ್ಮಾ ಆ ಕೋಣೆಯಲ್ಲಿ ವಾಸಮಾಡಿ ಕಬೀರದಾಸರ ಸೇವೆ ಮಾಡುತ್ತ ಅವರು ಹೇಳಿದಂತೆ ಕೇಳಿರಿ' ಎಂದು ಆಶೀರ್ವದಿಸಿದರು.
ಮುಂದೆ ನಾಗಾನಂದರು ಕಬೀರದಾಸ ಸೇವೆ ಮಾಡುತ್ತ ಕಂತಿಭಿಕ್ಷೆ ಮಾಡುತ್ತ ಶಾಸ್ತ್ರಶ್ರವಣ ಮಾಡಿ ಬೆಳೆದು ಸಿದ್ದರಿಂದ ಮಂತ್ರೋಪದೇಶ ಪಡೆದ. ಮುಂದೆ ಅನೇಕ ವರ್ಷ ಸಿದ್ಧರ ಸೇವೆಯಲ್ಲಿದ್ದು ಅವರ ಅಮೃತ ವಚನ ಕೇಳಿ ಪರಿಪೂರ್ಣರಾದರು. ಶಿವರಾತ್ರಿಯ ಭಿಕ್ಷೆಗಾಗಿ ಸಿದ್ಧರು ಒಬ್ಬೊಬ್ಬರಿಗೆ ಒಂದೊಂದು ಕಡೆಗೆ ಕಳಿಸಿದಂತ ನಾಗಾನಂದರಿಗೆ ಕರಡಿಗುಡ್ಡದ ಶಿವಪ್ಪ ಕರೆವ್ವ ದಂಪತಿಗಳ ಜೊತೆಗೆ ಧಾರವಾಡದ ಹತ್ತಿರ ಗಿಡದ ಹುಬ್ಬಳ್ಳಿಗೆ ಹೋಗಲು ಆದೇಶಿಸಿದಂತೆ ಅಲ್ಲಿಗೆ ಹೋದರು. ಅಲ್ಲಿಯ ಜನ ನಾಗಾನಂದರನ್ನು ಕಂಡು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢನೇ ಬಂದಿದ್ದಾನೆಂದು ಅವರ ಪಾದ ಪೂಜಿಸಿ ಶಿವರಾತ್ರಿಯ ಸಪ್ತಾಹಕ್ಕೆ ಸಾಕಾಗುವಷ್ಟು ಬತ್ತ ಕಳಿಸಿಕೊಟ್ಟರು. ಆಗ ಸಿದ್ದಾರೂಢರು ನಾಗಾನಂದಾ, ಇನ್ನು ಮುಂದೆ ಪ್ರತಿವರ್ಷ ಗಿಡದ ಹುಬ್ಬಳ್ಳಿಗೆ ಬತ್ತದ ಭಿಕ್ಷೆಗಾಗಿ ಹೋಗು' ಎಂದು ಆಶೀರ್ವದಿಸಿದರು.
ಮುಂದೆ ಆರೂಢರ ಆಜ್ಞೆಯಂತೆ ಪ್ರತಿವರ್ಷದ ಭಿಕ್ಷಕ್ಕೆ ಕರೆವ್ವ ಶಿವಪ್ಪ ದಂಪತಿಗಳಲ್ಲದೆ ಆಯಟ್ಟಿ ಪಾಯಪ್ಪನನ್ನು ಕರೆದುಕೊಂಡು ಗಿಡದ ಹುಬ್ಬಳ್ಳಿಗೆ ಹೋಗಿ ಭಿಕ್ಷೆ ಮಾಡಿಕೊಂಡು ಬಂದರು. ಮುಂದೆ ಸರಕಾರದವರು ಒಂದೂರಿನಿಂದ ಇನ್ನೊಂದೂರಿಗೆ ಕಾಳು ಕಡಿಗಳನ್ನು ಒಯ್ಯಬಾರದೆಂದು ನಿಷೇಧಿಸಿದ್ದರು. ಆಗ ಕಾಳುಕಡಿಗಳನ್ನು ತರುವುದು ದುಸ್ತರವಾಯಿತು. ಇದು ಆರೂಢರಿಗೂ ತಿಳಿದಿತ್ತು. ಪಾಯಪ್ಪ ಗುರುಗಳನ್ನು ಕುರಿತು ತಂದೆ, ಗಿಡದ ಹುಬ್ಬಳ್ಳಿಯಲ್ಲಿಯೇ ನಿನ್ನ ಹೆಸರಿನಿಂದ ಸಪ್ತಾಹ ಮಾಡಿದರೆ ಅಲ್ಲಿಯ ಜನರಲ್ಲಿ ಶ್ರದ್ಧಾಭಕ್ತಿ ಬೆಳೆಯುತ್ತದೆ' ಎಂದನು. ಆಗ ಸಿದ್ಧಾರೂಢರು ನಕ್ಕು 'ಪಾಯಪ್ಪ, ನನ್ನ ದೇವರನ್ನು ನಿಮಗೆ ಕೊಡುತ್ತೇನೆ. ಗಿಡದ ಹುಬ್ಬಳ್ಳಿಗೆ ದೇವರಾಗಿ ಮಹಾದೇವನಕಾರ್ಯ ನಿರ್ವಹಿಸಲಿ. ನಾಗಾ, ಹಿಡಿ ತೆಂಗಿನಕಾಯಿಯನ್ನು ನಾನು ಹೇಳಿದಂತೆ ನಡೆಯುವುದೇ ನಿನ್ನ ಕರ್ತವ್ಯವಾಗಿದೆ ಎಂದು ತೆಂಗಿನಕಾಯಿ ಕೊಟ್ಟರು. ಆಗ ನಾಗಾನಂದಾ ಗುರುವಿನ ವಚನ ಮೀರಲಾರದೆ ಪಾಯಪ್ಪ ತಳವಾರರ ಜೊತೆಗೆ ಗಿಡದ ಹುಬ್ಬಳ್ಳಿಗೆ ಹೋದರು.
ಅಲ್ಲಿ ಪಾಯಪ್ಪ, ನಾಗಾನಂದರಿಗಾಗಿ ಒಂದು ಮಾವಿನ ಗಿಡದ ಬುಡದಲ್ಲಿ ದೂತರ ಹಾಸಿ ವಿಶ್ರಾಂತಿ ಮಾಡಿರೆಂದು ಹೇಳಿ ಹೋಗಿ ಕೆಂಚಪ್ಪ ಕಮ್ಮಾರ ಮಲ್ಲಪ್ಪ ಇತರರನ್ನು ಕರೆದುಕೊಂಡು ಬಂದನು. ಬಂದವರು ಗುರುಗಳಿಗೆ ವಂದಿಸಿ ಕುಳಿತರು. ಆಗ ನಾಗಾನಂದರು ಇಲ್ಲಿ ಸಪ್ತಾಹ ಮಾಡಬೇಕಾದರೆ ಬಯಲು ಜಾಗ ಬೇಕು. ಮನೆಯಲ್ಲಿ ಮಾಡಿದರೆ ಹಬ್ಬವಾಗುತ್ತದೆ. ಹೊರಗೆ ಮಾಡಿದರೆ ಸಪ್ತಾಹವಾಗುತ್ತದೆ. ಆದ್ದರಿಂದ ಮನೆಯಲ್ಲಿ ಮಾಡಲಾಗುವುದಿಲ್ಲ' ಎಂದಾಗ ಅಲ್ಲಿರುವ ಮಾವಿನ ಮರದಿಂದ ಒಂದು ಹಣ್ಣು ಬಿದ್ದಿತು. ಆಗ ಮಾವು ಫಲ ಕೊಡುವ ಕಾಲವಲ್ಲ. ಆ ಮರದಲ್ಲಿ ಹೂವು ಮಿಡಿಯಿರದೆ ಹಣ್ಣು ಬೀಳುವುದೆಂದರೆ ಎಲ್ಲರಿಗೂ ಅಚ್ಚರಿ. ಆಗ ಗುರುಗಳು ಹಣ್ಣನ್ನು ಕೈಯಲ್ಲಿ ಹಿಡಿದು `ಇದು ಅಪ್ಪನ ಲೀಲೆ. ಅವನು ಹೇಗೆ ದಾರಿ ತೋರಿಸುವನೋ ತೋರಿಸಲಿ' ಎಂದು ಮಂಗಳಾರತಿ ಹಾಡಿ ಹಣ್ಣಿನ ಪ್ರಸಾದ ಕೊಟ್ಟರು. ಮುಂದೆ ಕೆಲವರ ಸಹಾಯದಿಂದ ಮತ್ತು ಅದೇ ಸ್ಥಳದ ಮಾಲಿಕರಾದ ಸಂಗಪ್ಪನಿಂದ ಅದೇ ಜಾಗೆಯನ್ನು ಖರೀದಿಸಿದರು.
ಮುಂದೆ ಶ್ರೀ ಸಿದ್ಧಾರೂಢರು ದೇಹತ್ಯಾಗ ಮಾಡಿದ ನಂತರ ನಾಗಾನಂದರು ಬಹಳ ವ್ಯಥೆಪಟ್ಟರಾದರೂ ಮಠದ ಕಾರ್ಯದಿಂದ ವಿಮುಖರಾಗಲಿಲ್ಲ. ಅವರು
ಮನೆಯಲ್ಲಿರುವುದೇ ಅಪರೂಪ. ದೂರದ ಭಕ್ತರು ಶಾಸ್ತ್ರ, ಪುರಾಣಕ್ಕೆ ಕರೆದರೆ ತಿಂಗಳು ಪರ್ಯಂತ ಹೋಗಿ ಬರುತ್ತಿದ್ದರು. ಗಿಡದ ಹುಬ್ಬಳ್ಳಿಯಲ್ಲಿ ಮೊದಲೇ ಖರೀದಿಸಿದ ಸ್ಥಳದಲ್ಲಿ ಹುಲ್ಲಿನ ಕುಟೀರ ಕಟ್ಟಿ ಅದರಲ್ಲಿ ಭಾವಚಿತ್ರವನ್ನಿಟ್ಟು ಮೂರು ದಿವಸ ಸಪ್ತಾಹ ಮಾಡಿದರು. ಬರಬರುತ್ತ ಏಳು ದಿವಸ ಸಪ್ತಾಹವಾಯಿತು, ಗಿಡ ಹುಬ್ಬಳ್ಳಿಗೆ ತಾಯಿ ಹುಚ್ಚಮ್ಮನಿಗೂ ಕರೆದುಕೊಂಡು ಹೋದರು. ಮುಂದೆ ಭಕ್ತರು ಮಠ ಕಟ್ಟಿ ನಾಗಭೂಷಣರನ್ನು ಅಧಿಪತಿಯನ್ನಾಗಿ ಮಾಡಿದ ಮೇಲೆ ನಾಗಭೂಷಣ ಗಿಡದ ಹುಬ್ಬಳ್ಳಿಗೆ ದೇವರಾಗಿ ಬಂದುದರಿಂದ ಗಿಡದ ಹುಬ್ಬಳ್ಳಿಯು ದೇವರ ಹುಬ್ಬಳ್ಳಿಯಾಯಿತು.
ಮುಂದೆ ಅನೇಕ ಗ್ರಾಮಗಳಲ್ಲಿ ತಿರುಗಿ ಭಕ್ತರ ದುಃಖ ದುಮ್ಮಾನಗಳನ್ನು ಕಳೆಯುತ್ತ ಭಕ್ತರ ಉದ್ಧಾರಕ್ಕಾಗಿ ಶಾಸ್ತ್ರ ಪ್ರವಚನ ಮಾಡುತ್ತ ಒಂದು ದಿನ ಮಳಕೂರು ಗ್ರಾಮದ ಸಾವಂತ್ರೆವ್ವ ಹಿರೇಮಠ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಅಲ್ಲಿ ಶಿವರಾಯಪ್ಪ ಮತ್ತು ಯಲ್ಲಪ್ಪನವರೂ ಇದ್ದರು. ರಾತ್ರಿ ಊಟ ಮಾಡಿ ಮಲಗಿದಾಗ ಮಧ್ಯರಾತ್ರಿ ಗುರುಗಳು ಥಟ್ಟನೇ ಎದ್ದು ಮಲಗಿದವರಿಗೆ ಎಬ್ಬಿಸಿ ಗಡಿಬಿಡಿಸಿ ಹೇಳಿದರು 'ಹೊಳೆಗೆ ಮಹಾಪೂರ ಬಂದೈತ್ರಿಪ್ಪಾ , ಏಳ್ಳಿ ಗಂಗಾದೇವಿ ಹುಚ್ಚು ಹಿಡಿದಾಂಗ ಓಡಿ ಬರಾಕತ್ಯಾಳ ಊರ ಮಂದಿಗೆ ಎಬ್ಬಿಸಿರಿ' ಎಂದರು. ಆಗ ಶಿವರಾಯಪ್ಪ ಹೇಳಿದ 'ಅಪಾ ಹೊಳ್ಯಾಗ ಪಾದ ತೋಯುವಷ್ಟು ನೀರಿಲ್ಲ. ನೀವು ಹೇಳತೀರಿ ಅಂದ್ರ ನೋಡಿ ಬರತೀವಿ' ಎಂದು ಬೆಳದಿಂಗಳ ಬೆಳಕಿನಲ್ಲಿ ಹೊಳಗೆ ಹೋದಾಗ ಕಿರಿದಾದ ನೀರು ಜುಳುಜುಳು ಹರಿಯುತ್ತಿತ್ತು. ಅದನ್ನು ನೋಡಿ ಬಂದು `ಅಪಾ, ಪಾದ ತೋಯುವಷ್ಟು ನೀರಿಲ್ಲ ಮಲಗಿಕೊಳ್ಳಿರಿ' ಎಂದು ಮಲಗಿಸಿದರು.
ಮುಂಜಾವಿನ ಜನರ ಕೋಲಾಹಲದಿಂದ ಎಚ್ಚರಗೊಂಡಾಗ ತಿಳಿದದ್ದು ಊರಿಗೆ ಊರೇ ಮಲಪ್ರಭಾ ನದಿಗೆ ಮಹಾಪೂರ ಬಂದು ನೀರಿನಿಂದ ಸುತ್ತುವರಿಯಲ್ಪಟ್ಟಿತ್ತು. ಇದನ್ನು ಕಂಡ ಭಕ್ತರು `ಸದ್ಗುರುಗಳು ಮೊದಲೇ ಸೂಚನೆ ಕೊಟ್ಟಿದ್ದರೂ ನಾವು ನಂಬಲಿಲ್ಲ' ಎಂದು ಹಳಹಳಿಸಿ ಗುರುಗಳಲ್ಲಿ ಕ್ಷಮೆಯಾಚಿಸಿದರು. ಮುಳುಕೂರಿನ ಜನ ಕಲ್ಲಿನ ಗುಡ್ಡದ ಆಶ್ರಯ ಪಡೆದರು. ಆಗ ಗುರುಗಳು ಗಂಗಾ ನದಿಯ ಪೂಜೆ ಮಾಡಿ ಶಾಂತ ಮಾಡ್ರಿಪಾ' ಎಂದಾಗ ಎಲ್ಲರೂ ಗಂಗೆಯ ಪೂಜೆ ಮಾಡಿ ಅದೇ ನೀರಿನಿಂದ ಶಿವಯೋಗಿಗಳ ಪಾದಪೂಜಿಸಿದಾಗ ಸಮಯ ಕಳೆದಂತ ಹೊಳ ಇಳಿಯತೊಡಗಿತು. ಆಗ ಅಲ್ಲಿಯ ಜನರಲ್ಲಿ ಆಸ್ತಿಕ ಭಾವ ಹುಟ್ಟಿ ಈಗಲೂ ಉಳಿದಿದೆ. ಮೊರಬ ಗ್ರಾಮದ ಹನುಮಂತ ದೇವರ ಗುಡಿಯಲ್ಲಿ ಏಳು ದಿವಸ ಸಪ್ತಾಹ ನಡೆಸಿ ಪ್ರವಚನ, ಶಾಸ್ತ್ರ ಜಿಜ್ಞಾಸೆ, ಅನ್ನದಾಸೋಹ ನಡೆಸಿದರು. ಆ ಸಪ್ತಾಹಕ್ಕೆ ಮಹಾತ್ಮರಾದ ಗದುಗಿನ ಶ್ರೀ ನಿಜಾನಂದರು ಮತ್ತು ವಾಸುದೇವಾನಂದರು, ಗೋಪನಕೊಪ್ಪದ ಸಿದ್ದವೀರ ಸ್ವಾಮಿಗಳು, ಕಾದರವಳ್ಳಿಯ ಖಂಡೋಬಾಬಾ ಮಹಾರಾಜರು ಆಗಮಿಸಿ ಸಪ್ತಾಹಕ್ಕೆ ಶೋಭೆ ತಂದುಕೊಟ್ಟರು. ಹೀಗೆ ಅನೇಕ ಕಡೆಗೆ ಸಪ್ತಾಹ ನಡೆಸಿ ಜನರಲ್ಲಿ ಆಸ್ತಿಕಭಾವ ಮೂಡಿಸಿದರು.
ನಾಗಾನಂದರು ಮೇಲಿಂದ ಮೇಲೆ ಸಂಪರ್ಕವಿಟ್ಟುಕೊಂಡ ಮಂಟೂರಿನಲ್ಲಿ ರೈತರು ಶ್ರಾವಣ ಮಾಸದಲ್ಲಿ ಸ್ವಲ್ಪ ಮಳೆಯಾಗಿ ಬಿತ್ತಿದ ರೈತರು ಮಳೆಗಾಗಿ ಕಾಯ್ದರು. ಎಲ್ಲ ಮಳೆಗಳೂ ಹೋದವು. ಮಳೆಯಾಗಲಿಲ್ಲ, ಹಳ್ಳಕೊಳ್ಳ, ಕೆರೆಬಾವಿಗಳು ಬತ್ತಿದವು. ಜನರಿಗೆ ದನಕರುಗಳಿಗೆ ನೀರಿಗಾಗಿ ಹಾಹಾಕಾರವಾಯಿತು. ಪುರಜನರು ಚಿಂತಿತರಾಗಿ ದೇವರಹುಬ್ಬಳ್ಳಿಯ ನಾಗಭೂಷಣರನ್ನು ಕರೆಸಬೇಕೆಂದು ನಿರ್ಧರಿಸಿ ಅಲ್ಲಿಗೆ ಹೋಗಿ ವಿಷಯ ತಿಳಿಸಿದರು. ಆಗ ಗುರುಗಳು `ಭಕ್ತರೆ, ಎರಡು ತೆಂಗಿನಕಾಯಿಗಳನ್ನು ಸಿದ್ಧಾರೂಢ ಮಠಕ್ಕೆ ತೆಗೆದುಕೊಂಡು ಹೋಗಿ ಸಿದ್ದರ ಗದ್ದುಗೆಗೆ ಮುಟ್ಟಿಸಿ ತೆಗೆದುಕೊಂಡು ನಿಮ್ಮೂರಿಗೆ ಹೋಗಿರಿ. ಇನ್ನೆರಡು ದಿವಸಗಳಲ್ಲಿ ನಾನು ನಿಮ್ಮೂರಿಗೆ ಬರುತ್ತೇನೆ. ಮಳೆಗಾಗಿ ಸಪ್ತಾಹ ಪ್ರಾರಂಭಿಸೋಣ' ಎಂದರು. ಆಗ ಭಕ್ತರು ಗುರುಗಳು ಹೇಳಿದಂತೆ ಮಾಡಿ ತಮ್ಮೂರಿಗೆ ಹೋದರು. ನಂತರ ಎರಡು ದಿವಸ ಬಿಟ್ಟು ನಾಗಾನಂದರು ಮಂಟೂರಿಗೆ ಹೋಗಿ ಸಿದ್ದನಗೌಡಾ ಪಾಟೀಲರ ಮನೆಯ ಪಡಸಾಲೆಯಲ್ಲಿ ಸಿದ್ದಾರೂಢರ ಭಾವಚಿತ್ರವಿಟ್ಟು ಅಲಂಕರಿಸಿ ಪೂಜಿಸಿ ಪಾರಾಯಣ ಪ್ರಾರಂಭಿಸಿದರು.
ಅನೇಕ ಭಕ್ತರು ಬಂದು ಶ್ರವಣದಲ್ಲಿ ತನ್ಮಯರಾದಂತ ಭಕ್ತಿ ತುಂಬಿ ಮಂಗಳಾರತಿಯಾಗುತ್ತಿದ್ದಂತೆ ಹೊರಗಡೆ ಧಾರಾಕಾರ ಮಳೆ ಸುರಿಯತೊಡಗಿತು. ಹದಿನೈದು ದಿವಸ ಸುರಿದ ಮಳೆಯಿಂದ ಕರೆ, ಬಾವಿಗಳು ತುಂಬಿದವು. ನೀರಿನ ಬರ ಪರಿಹಾರವಾಯಿತು. ಅಲ್ಲಿಯ ಜನರಿಗೆ ಗುರುಗಳಲ್ಲಿ ಭಕ್ತಿ ಹೆಚ್ಚಾಯಿತು. ಮುಂದೆ ತಾಯಿ ಹುಚ್ಚಮ್ಮಳಿಗೆ ವಯಸ್ಸು ಹೆಚ್ಚಾಗಿದ್ದು ಅವರ ದೇಹತ್ಯಾಗದ ನಂತರ ಅವರ ಸಮಾಧಿ ಕಟ್ಟಿದರು. ಜನಜೀವನದಲ್ಲಿ ನೊಂದವರು ಬೆಂದವರು ಸೋತವರು ಗೆದ್ದವರು ಎಲ್ಲರೂ ನಾಗಭೂಷಣ ಶಿವಯೋಗಿಗಳ ದರ್ಶನ ಪಡೆದು ಧನ್ಯರಾದರು. ಶಿವಯೋಗಿಗಳು ತಮ್ಮಲ್ಲಿಯ ಬ್ರಹ್ಮವಿದ್ಯೆಯನ್ನು ಜನರೊಂದಿಗೆ ನೇರವಾಗಿ ಹಂಚಿಕೊಳ್ಳುವ ಅಪರೂಪದ ಕೆಲಸ ಮಾಡಿದರು.
ಮುಂದೆ ನಾಗಭೂಷಣ ಶಿವಯೋಗಿಗಳು ಶಿವನಲ್ಲಿ ಐಕ್ಯರಾದಾಗ ಅವರ - ತಮ್ಮನ ಮಗ ಉತ್ತರಾಧಿಕಾರಿ ಶ್ರೀ ಸಿದ್ಧ ಶಿವಯೋಗಿಗಳು ಅವರ ಸಮಾಧಿ ಮಂದಿರ ಕಟ್ಟಿದರು. ಶ್ರೀ ಸಿದ್ಧಾರೂಢರ ಪರಂಪರೆಯಂತೆ ಶ್ರೀ ಸಿದ್ಧ ಶಿವಯೋಗಿಗಳು ದಿನಾಲು ಮಠದಲ್ಲಿ ಮೂರು ಸಲ ಶಾಸ್ತ್ರ ಪುರಾಣ ಪುಣ್ಯ ಕಾರ್ಯಗಳನ್ನು ತಮ್ಮ ಗುರುಗಳ ಆದೇಶದಂತೆ ಮುಂದುವರಿಸಿರುವುದನ್ನು ಇಂದಿಗೂ ನೋಡಬಹುದು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
