ಸಿದ್ಧರು ಅನ್ನಪೂರ್ಣೇಶ್ವರಿ ಅವತಾರ
🌺 ಸಿದ್ಧರು ಅನ್ನಪೂರ್ಣೇಶ್ವರಿ ಅವತಾರ 🌺
ಸಿದ್ಧರ ಪಾದಧೂಳಿಯಿಂದ ಮನೆಯಲ್ಲಿ ಐಶ್ವರ್ಯ ಉಕ್ಕುತ್ತದೆ. ಅವರ ಹಸ್ತಪ್ರಸಾದದಿಂದ ದಾರಿದ್ರ ಪರಿಹಾರವಾಗುತ್ತದೆನ್ನುವ ಬಲವಾದ ನಂಬಿಕೆ ಭಕ್ತರಲ್ಲಿ ಬೆಳೆದಿತ್ತು. ಇದರಿಂದಾಗಿ ಬಿನ್ನಾಯ ತೀರಿಸುವುದು ಸಿದ್ಧರಿಗೆ ಒಂದು ಅನಿವಾರ್ಯ ಕಾರ್ಯವಾಯಿತು. ಶ್ರೀಮಂತರ ಮನೆಯಂತೆ ಬಡವರ ಗುಡಿಸಲಿಗೂ ಪ್ರಸಾದಕ್ಕೆ ಹೋದರು. ಒಮ್ಮೆ ಒಬ್ಬಳು ಬಡವಿ ಸಿದ್ಧರಲ್ಲಿಗೆ ಬಂದಳು. ಭಯಭಕ್ತಿಯಿಂದ ಬಾಗಿದಳು. “ದೇವಾ, ನಾನು ರಟ್ಟೆಯ ಮೇಲೆ ಹೊಟ್ಟೆ ತುಂಬಿಕೊಳ್ಳುವವಳು. ನಿನ್ನನ್ನು ನನ್ನ ಮನೆಗೆ ಬರಮಾಡಿಕೊಳ್ಳಬೇಕೆಂದು ನನ್ನ ಹೃದಯ ಹಂಬಲಿಸುತ್ತಿದೆ. ನಿನ್ನ ಚರಣ ಧೂಳಿಯಿಂದ ನನ್ನ ಮನೆ, ಮನಗಳು ಪಾವನವಾಗಬೇಕು. ನನ್ನ ಬಡತನ ಹಿಂಗಬೇಕು , ನಾನು ಬಡವಿಯಾದುದರಿಂದ ಬಹಳಷ್ಟು ಜನಕ್ಕೆ ಅನ್ನ ಪ್ರಸಾದ ನೀಡುವ ಯೋಗ್ಯತೆಯಿಲ್ಲ. ಅದರಿಂದ ತಂದೇ, ನಿನ್ನೊಡನೆ ಹೆಚ್ಚು ಜನರು ಬಂದರೆ ನನಗೆ ಭಾರವಾಗುತ್ತದೆ, ಒಬ್ಬಿಬ್ಬರು ಸಣ್ಣ ಶಿಷ್ಯರನ್ನು ಮಾತ್ರ ಕರೆದುಕೊಂಡು ಬಾ'' ಎಂದಳು. ನಾಳೆ ನನ್ನ ಮನೆಗೆ ಪ್ರಸಾದಕ್ಕೆ ಬರಬೇಕೆಂದು ಅವಳು ಆಮಂತ್ರಣವಿತ್ತು ಹೋದಳು. ಮರು ದಿವಸ ಸಿದ್ದರು ಸಮಯಕ್ಕೆ ಸರಿಯಾಗಿ ಹೊರಟರು. ಮಠದಿಂದ ಹೊರ ಬಿದ್ದಾಗ, ಅವರೊಂದಿಗೆ ಇಬ್ಬರೇ ಸಣ್ಣ ಶಿಷ್ಯರಿದ್ದರು, ಆ ಬಡತಾಯಿಯ ಮನೆಗೆ ಹೋಗುವಾಗಲೇ ಹಲವಾರು ಶಿಷ್ಯರು ಸಿದ್ದರನ್ನು ಕೂಡಿಕೊಂಡರು. ಆ ತಾಯಿಯ ಮನೆಗೆ ಬರುವಷ್ಟರಲ್ಲಿಯೇ ಸಿದ್ದರ ಹಿಂದೆ ಒಂದು ದೊಡ್ಡ ತಂಡವೇ ಆಯಿತು. ಅದರಲ್ಲಿ ಹೆಚ್ಚಿನವರು ಸಮತಟ್ಟಾದ ನೆಲದ ಮೇಲೆ, ಸರಿಯಾಗಿ ಮೈ ಕೈ ಸಡಿಲು ಬಿಟ್ಟು, ಕೂಳನ್ನು ಏರಿಸಿ ತಿನ್ನುವವರೇ ಇದ್ದರು. ನೋಡುವುದಕ್ಕೂ ಈಡಾಗಿಯೇ ಇದ್ದರು. ಅವರೆಲ್ಲ ಓಂ ನಮಃ ಶಿವಾಯ ಮಂತ್ರವನ್ನು ಜೋರಾಗಿ ಕೂಗುತ್ತ ಓಣಿಯ ತುಂಬ ನಡೆದು ಬಂದರು. ಒಳಗಿದ್ದ ಆ ಬಡತಾಯಿ ಶಿವ ನಾಮವನ್ನು ಕೇಳುತ್ತಲೇ ಸಿದ್ದರು ಬಂದರಂದೇ ಅಡ್ರಾಸಿ ಓಡಿ ಬಂದಳು. ಸಿದ್ಧರ ಸಂಗಡ ಬಂದ ಭಕ್ತ ಸಮೂಹವನ್ನು ನೋಡಿದಳು. ಅವಳ ಜೀವದ ತಂತಿಯೇ ಥಟ್ಟನೇ ಕತ್ತರಿಸಿ ಬಿದ್ದಂತಾಯಿತು. ಏನು ಮಾಡುವುದಕ್ಕೂ ತೋಚಲಿಲ್ಲ. ಬಾಗಿಲಿಗೆ ಬಂದ ಭಾಗ್ಯ ದೇವತೆಯಂತಿದ್ದ ಸಿದ್ದರನ್ನು ಅವಳು ಒಳಗೂ ಕರೆಯಲಿಲ್ಲ. ಸಣ್ಣ ಮನೆ, ನಾಲ್ಕು ಜನಗಳಿಗೂ ಅಲ್ಲಿ ಕಾಲು ಚಾಚಿ ಕೂಡ್ರಲಿಕ್ಕೆ ಅವಕಾಶವಿಲ್ಲ. ಹೊರಗೆ ನೋಡಿದರೆ ಭಕ್ತ ಜನಗಳು ಸೇರಿದ್ದಾರೆ. ಅವರೆಲ್ಲರ ಪ್ರಸಾದಕ್ಕೆಂದೇ ತನ್ನ ಮನೆಯ ಬಾಗಿಲಿಗೆ ಬಂದಿದ್ದಾರೆ. ಬಂದವರಿಗೆ ಅನ್ನ ಪ್ರಸಾದ ನೀಡಬೇಕು. ಆದರೆ ಅನ್ನ ಮಾಡಿದ್ದೆಷ್ಟು? ತಾನು ಮಾಡಿದ್ದು ಬರಿ ನಾಲ್ಕು ಜನಕ್ಕೆ ಸಾಲದು. ಈ ನಾಲ್ವತ್ತು ಜನಕ್ಕೆ ಎಲ್ಲಿಂದ ತರಲಿ? ನಾನು ನಿನ್ನೆಯೇ ಇವರಿಗೆ ಸ್ಪಷ್ಟವಾಗಿ ಹೇಳಿದ್ದೆನಲ್ಲ. ಹೀಗಿದ್ದೂ ಸಿದ್ಧರು ಇಷ್ಟು ಜನರನ್ನು ಕರೆತಂದರೇಕೇ? ನನ್ನ ಮರ್ಯಾದೆಯೇ ಹೋಗುವ ಕಾಲ ಬಂತಲ್ಲ ಎನ್ನುವ ಸಾತ್ವಿಕ ಸಂತಾಪ ಅವಳೆದೆಯಲ್ಲಿ ಉರಿದೆದ್ದಿತು. ಅಸಹಾಯಕ ಪರಿಸ್ಥಿತಿಯೇ ಅವಳಲ್ಲಿ ರೋಷವನ್ನು ಬಡಿದೆಬ್ಬಿಸಿತು. ನಿಷ್ಟುರ ಪಕುರ್ತಿಯವಳಾದ ಆ ತಾಯಿ 'ಏನಿರ್ವಾಣೀ, ನಿನಗ ನಾ ನಿನ್ನೆ ಏನ ಹೇಳಿದ್ದೆ, ಈಗ ನೀನೇನು ಮಾಡಿದಿ? ಎಂದು ಒದರಾಡಿದಳು. ಮನೆಯ ತನಕ ಬಂದ ಮಹಾದೇವನನ್ನು ಒಳಕ್ಕೆ ಕರೆಯು ಸಾಮಾನ್ಯ ನಾಗರಿಕ ಬುದ್ದಿಯೂ ಅವಳಲ್ಲಿ ಆ ಕ್ಷಣದಲ್ಲಿ ಹುಟ್ಟಲಿಲ್ಲ: ತಾನು ಮುಂದೇನ ಮಾಡಲಿ ಎಂಬ ಅಸ್ತವ್ಯಸ್ತ ಮನಃಸ್ಥಿತಿಯಲ್ಲಿಯೇ ಆ ತಾಯಿ ನಿಂತಿದ್ದಳು. ಏ ನಿರ್ವಾಣಿ! ಎಂಥ ಕರುಳ ಕೊರೆಯುವ ನುಡಿ. ಎದೆಯನ್ನೇ ಸೀಳುವಂಥ ಕರ್ಕಶ ಪದ, ಭಾವಕ್ಕೇನೇ ಬೆಂಕಿಯಿಡುವ ಮಾತು. ಸಿದ್ಧರ ಸ್ಥಾನದಲ್ಲಿ ಬೇರೆ ಯಾವನೇ ಸ್ವಾಮಿ ಇದ್ದಿದ್ದರೆ, ಆ ನುಡಿಗೆ ಕೋಪಗೊಳ್ಳುತ್ತಿದ್ದರು. ಆ ಸ್ವಾಮಿಯ ಯಾವನಾದರೂ ಒಬ್ಬ ತಲೆತಿರುಕ ಶಿಷ್ಯ ಆ ಮುದಕಿಯ ಕೆನ್ನೆಗೆ ಎರಡು ಬಿಗಿದು, ನೆಲಕ್ಕೆ ಕೆಡುವುತ್ತಿದ್ದ. ದೇಶದ ರಾಜಮಹಾರಾಣಿ, ಸಿದ್ಧಾರೂಢರ ಪಾದದ ಮೇಲಿನ ಹುಡಿಯನ್ನು ಹಣೆಗೆ ಹಚ್ಚಿಕೊಳ್ಳಲು ಹಸಿದು ಕುಳಿತಿರುತ್ತಿದ್ದರು. ಆ ದೇವನ ದರ್ಶನ ಭಾಗ್ಯ ಸಿಕ್ಕಿತೋ ಇಲ್ಲವೋ ಎಂದು ಚಡಪಡಿಸುತ್ತಿದ್ದರು. ಅಂಥ ಸಹಜ ಜಗದ್ಗುರು ಎನಿಸಿದ್ದ ಸಿದ್ದಾರೂಢರು ಭಕ್ತರ ಮೇಲಿನ ಪ್ರೀತಿ ವಿಶ್ವಾಸಕ್ಕಾಗಿ, ಆ ಬಡವಿಯ ಮನೆಯ ಬಾಗಿಲಿದವರೆಗೆ ನಡೆದು ಹೋದರು. ಅವರು ಅವಳ ಮನೆಯ ಹೊಸ್ತಿಲಲ್ಲಿ ಕಾಲನ್ನೂ ಇಟ್ಟಿರಲಿಲ್ಲ. ಅವರು ಇನ್ನೂ ಬಾಗಿಲಿನ ಜೊತೆ ನಿಂತಿದ್ದಾರೆ. ಅವಳು ಅವರನ್ನು ಬಾ ಭಗವಂತ ಎಂದು ಭಕ್ತಿಯಿಂದ ಬರಮಾಡಿಕೊಳ್ಳು ಮಾಲೆ, ಧೂಪ ದೀಪ ಆರತಿ, ಕರ್ಪೂರ ಏನೊಂದಿಲ್ಲ. ದೇವನನ್ನು ಕಾಲಿಗೆ ನೀರು ಮನೆಯೊಳಗೆ ಕರೆದೊಯ್ಯುವ ಪೂರ್ವದಲ್ಲಿಯೇ ಸಿದ್ಧರ ಸಂಗಡ ಬಂದ ಭಕ್ತರ ಸಂಖ್ಯೆಯೇ ಅವಳ ಬಗೆಯನ್ನು ಕದಡಿತು. ಸಾತ್ವಿಕ ಸಂತಾಪ ಸಿಡಿದೆದ್ದಿತು. ಈ ಸಿದ್ಧಾರೂಢರು ನನ್ನ ಮರ್ಯಾದೆಯನ್ನೆ ಕಳೆಯುವಂಥ ಪ್ರಸಂಗ ತಂದರೆಂದು ತಿಳಿದ ಅವಳು, " ಏ ನಿವಾರ್ಣಿ' ಎಂದು ಎಲ್ಲರೆದುರು ಕೂಗಿ, ಸಿದ್ಧರ ಮರ್ಯಾದೆಯನ್ನು ಹುಬ್ಬಳ್ಳಿಯ ನಡುಬೀದಿಯಲ್ಲಿ ಅವಳು ಕಳೆದಳೆಂದು ಈ ಪ್ರಸಂಗವನ್ನು ಓದುವ ಹೊರಗಿನವರಾದ ನಮಗೆ ಅನಿಸುವದು ಸಹಜ. ಏ ನಿರ್ವಾಣೀ ಎಂಬ ಅವಳ ಮಾತು ಕರ್ಕಶವಾಗಿದ್ದರೂ, ಕಿವಿಗೆ ಕಠೋರವಾಗಿದ್ದರೂ, ಸಿದ್ದಾರೂಢರ ಗಮನ ಆಶಬ್ದದ ಕಡೆಗೆ ಹರಿಯಲಿಲ್ಲ. ಆ ಶಬ್ದಗಳನ್ನಾಡಿದ ಆ ತಾಯಿಯ ಅಂತಃಕರಣದತ್ತ ಓಡಿತು. ಆ ಅಂತಃಕರಣ ಕಠೋರವಾಗಿದ್ದಿಲ್ಲ. ಕೆಟ್ಟದ್ದಾಗಿರಲಿಲ್ಲ. ಮಾತು ಕರ್ಕಶವಾಗಿದ್ದರೂ, ಮನಸ್ಸು ಮೃದುವಾಗಿತ್ತು. ಅದರಿಂದಾಗಿಯೇ ಸಿದ್ಧರ ಮನಸ್ಸು ಅವಳ ಸೇವಾ ಕಳಕಳಿಯ ಕಡೆಗೆ ಹೋಯಿತು. ಅವಳ ಅಂತರಂಗದ ಒಳನೋಟ ಆ ದೇವನಿಗೆ ಅರಿಕೆಯಾಗಿತ್ತು. ಆದ್ದರಿಂದಲೇ ಶಾಂತಮೂರ್ತಿ ಸಿದ್ದಾರೂಢರು ಅವಳನ್ನು ಹಳಿಯಲಿಲ್ಲ. ಪ್ರತಿಯಾಗಿ ಗೌರವಿಸಿದರೂ, ಆದ್ದರಿಂದಲೇ ಅವರು ಮುಂದಕ್ಕೆ ಹೋಗಿ, 'ತಾಯೇ , ಪ್ರಸಾದದ ವ್ಯವಸ್ಥೆ ಏನು ಮಾಡಿರುವಿ? ಎಂದು ಕೇಳಿದರು. ಅವಳ ಸೆಡವು ಇನ್ನೂ ಇಳಿದಿರಲಿಲ್ಲ. ಅದೇ ಬಿಂಕದಿಂದ ಅದೇ ಸೆಡವಿನಿಂದ, "ಅಲ್ಲಿ ಒಳಗ ಮಾಡಿದ್ದೀನಿ ನೋಡು'' ಎಂದಳಂತೆ. ಮನೆಗೆ ಬಂದ ದೇವನಿಗೆ ಎಡೆಮಾಡಿ ನೀಡಲಿಲ್ಲ. ತಾಯಿ ಸಿಟ್ಟಿಗೆದ್ದಿದ್ದರೂ ಮಗಾ ಸಿಟ್ಟಿಗೇಳಲಿಲ್ಲ. ತಾವೇ ಎಲ್ಲರನ್ನೂ ಕರೆದರು. ಎಡೆ ಮಾಡಿದರು. ಆ ಎಡೆಯ ಮೇಲೆ ಆಶೀರ್ವಾದದ ವರಹಸ್ತವಿಟ್ಟು , “ ಮಹಾದೇವಿ ಜಯಿಸು'' ಎಂದರಂತೆ. ಎಲ್ಲ ಭಕ್ತರ ಬಾಯಿಯಲ್ಲಿ ಸಿದ್ದರೇ ಒಂದೊಂದು ತುತ್ತ ಅನ್ನ ಇಟ್ಟರು. ಒಂದೇ ತುತ್ತಿಗೆ ಅವರೆಲ್ಲರ ಹಸಿವು ಅಡಗಿತ್ತು. ತೃಪ್ತಿ ಎಲ್ಲರ ಮುಖದಲ್ಲಿ ಕುಣಿಯುತ್ತಿತ್ತು. ಸಂತೃಪ್ತಿಯ ಡೇಕರಿಕೆಗಳು ಸಿಡಿದವು, ಎಲ್ಲರ ಮುಖದಲ್ಲಿ ಆನಂದ ಅರಳಿತು, ಏನು ಅಡಿಗೆಯ ರುಚಿ. ಇಂಥ ಸಾರನ್ನು ನಾನು ಸವಿದಿರಲಿಲ್ಲ.' ಈ ತಾಯಿಯ ಕೈಯೊಳಗಿನ ಪ್ರಸಾದ ಅದು ಅನ್ನವಲ್ಲ, ಅಮೃತ' ಎಂದು ಎಲ್ಲ ಭಕ್ತರೂ ಆ ತಾಯಿಯನ್ನು ಕೊಂಡಾಡಿದರು. ಎಲ್ಲರೂ ಉಂಡು ತಣಿದಾಗ ಸಿದ್ದರು ಎಡೆಯನ್ನು ಆ ತಾಯಿಯ ಮುಂದೆ ಹಿಡಿದರು. ಅರ್ಧದಷ್ಟೂ ಪ್ರಸಾದ ಬಳಿಕೆಯಾಗಿರಲಿಲ್ಲ. 'ತಾಯಿ, ನೀನೂ ಸ್ವೀಕರಿಸು ಸಿದ್ಧನ ಪ್ರಸಾದ'' ಎಂದು ಮಗು ತಾಯಿಯನ್ನು ಉಣಿಸುವಂತೆ ಆ ತಾಯಿಗೆ ಸಿದ್ಧರು ಉಣಿಸಿದರು. ಆ ಪರಮಾತ್ಮನ ಕೈಯ್ಯ ಅಮೃತ ತುತ್ತ ಅವಳನ್ನು ತಣಿಸಿತು. “ತಂದೇ, ನಾನು ಬಾಯಿಗೆ ಬಂದಂತೆ ಬೊಗಳಿದೆ. ನನ್ನ ಅಪರಾಧವನ್ನು ಕ್ಷಮಿಸು ದೇವಾ' ಎಂದು ಆ ತಾಯಿ ಸಿದ್ಧರ ಅಡಿಗೆರಗಿದಳು. ಮಗನ ಮೇಲೆ ಸಿಟ್ಟು ಮಾಡುವ ಅಧಿಕಾರ ತಾಯಿಯಾದವಳಿಗೆ ಇರಲಾರದೇನವ್ವಾ ? ನಿನಗೆ ಗುರು ಕಲ್ಯಾಣ ಮಾಡುತ್ತಾನೆ ಎಂದು ಸಿದ್ದರು ನುಡಿದು ಹೊರಬಂದರು. “ತಂದೇ, ನೀನು ಮನುಷ್ಯನಲ್ಲ. ಮನುಷ್ಯನ ದೇಹತೊಟ್ಟು ಬಂದ ಮಹಾದೇವ', ಎಂದು ಆ ತಾಯಿಯ ಮನವು ಮೌನವಾಗಿ ಕೂಗಿತು. ಸಿದ್ಧರ ಹಸ್ತ ಅಕ್ಷಯಪಾತ್ರೆ. ಅವರು ಅವತಾರಿ ಘಟ ಆಗಿದ್ದರು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಸಿದ್ಧರ ಮೇಲಿನ ಭಕ್ತಿಯಿಂದ ಮಗನು ಬದಕಿಸಿಕೊಂಡ ತಾಯಿ
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಸಿದ್ಧರ ಮೇಲಿನ ಭಕ್ತಿಯಿಂದ ಮಗನು ಬದಕಿಸಿಕೊಂಡ ತಾಯಿ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
