ಮುಂಬೈಯಲ್ಲಿ ಅನಂತ ಭಕ್ತರು

🌺 ಮುಂಬೈಯಲ್ಲಿ ಅನಂತ ಭಕ್ತರು 🌺




ಮುಂಬೈಯಲ್ಲಿ ಪಾರಸಿ ಧರ್ಮದ ಕ್ಯಾಕಿಸಾಹೇಬ ಮತ್ತು ಧನಬಾಯಿಯೆಂಬ ದಂಪತಿಗಳಿದ್ದರು. ಒಂದು ದಿನ ಅಕ್ಕಲಕೋಟೆಯ ಶರಣಪ್ಪ ಸ್ವಾಮಿಗಳು ಮುಂಬೈಗೆ ಹೋದಾಗ ಈ ದಂಪತಿಗಳಿಗೆ ಭೇಟಿಯಾಗಿ ಅವರ ಮನೆಯಲ್ಲಿ ಸಿದ್ದಾರೂಢರ ಚರಿತ್ರೆಯನ್ನು ಬೋಧ ಮಾಡಿ ಧನಾಬಾಯಿಯವರಿಗೆ ಮಂತ್ರೋಪದೇಶ ಮಾಡಿದರು. ತನ್ನ ಪತಿ ಕ್ಯಾಕಿ ಸಾಹೇಬರಿಗೂ ಉಪದೇಶ ಮಾಡಬೇಕೆಂದಾಗ ಧನಾಬಾಯಿ ಹೇಳಿದಳು `ಶರಣರೇ, ನನ್ನ ಪತಿಗೆ ಮಂತ್ರೋಪದೇಶ ಮಾಡಬೇಡಿರಿ. ಏಕೆಂದರೆ ಶ್ರೀ ಸಿದ್ದರ ಮೇಲೆ ಅವರ ನಂಬಿಕೆಯಿಲ್ಲ' ಎಂದಳು. ಆಗ ಶರಣರು `ಕ್ಯಾಕೀಸಾಹೇಬರೇ, ಮುಂದೆ ನಿಮಗೆ ದುರ್ದರ ಪ್ರಸಂಗ ಬರುತ್ತದೆ. ಅದರಿಂದ ಪಾರಾಗಲು ನೀವು ಮಂತ್ರೋಪದೇಶ ಪಡೆಯಬೇಕಾಗುತ್ತದೆ' ಎಂದಾಗ ಕ್ಯಾಕಿ  ಸಾಹೇಬರು ಭಯಗೊಂಡು ಶಿವಮಂತ್ರೋಪದೇಶ ಪಡೆದರು.
ನಂತರ ಉಭಯ ದಂಪತಿಗಳಿಗೆ ಸಿದ್ದರಲ್ಲಿ ಭಕ್ತಿ ಹುಟ್ಟಿದ್ದರಿಂದ ಇಬ್ಬರೂ ಹುಬ್ಬಳ್ಳಿಗೆ ಜಾತ್ರೆಗೆ ಬಂದು ಸಿದ್ಧರ ದರ್ಶನ ಪಡೆದು ಸತ್ಕರ್ಮ ಉಪಾಸನೆ ಮತ್ತು ಸಾಧುಗಳಿಗೆ ಅನ್ನ ಸಂತರ್ಪಣೆ ಮಾಡಿ ಮುಂಬೈಗೆ ಹೋದರು, ಆಷಾಢ ಗುರುಪೌರ್ಣಿಮೆಗೆ ಶರಣಪ್ಪನವರನ್ನು ಕರೆಸಿ ಇಷ್ಟಮಿತ್ರರೊಂದಿಗೆ ಸಿದ್ದಾರೂಡರ ಚರಿತ್ರೆ ಸಪ್ತಾಹ ಮಾಡಿ ಪೂಜಿಸಿ ದಕ್ಷಿಣಾದಿಗಳನ್ನು ಕೊಟ್ಟು ಕಳಿಸಿದರು. ಹಾಗೂ ತಮ್ಮ ಮನೆಯಲ್ಲಿ ದಿನಾಲು ಪಂಚಾಕ್ಷರಿ ಮಂತ್ರ ಜಪಿಸುತ್ತ ಅನೇಕರನ್ನು ಬರಮಾಡಿಸಿ ಸಿದ್ದರ ಮೂರ್ತಿ ದರ್ಶನ ಮತ್ತು ಸಿದ್ದರ ಚರಿತ್ರೆಯನ್ನು ಹೇಳಿ ಅವರಲ್ಲೂ ಭಕ್ತಿ ಹುಟ್ಟುವಂತೆ ಮಾಡುತ್ತಿದ್ದರು. ಮುಂದೆ ಬರಬರುತ್ತ ಅನೇಕ ಭಕ್ತರು ಬಂದು ಸಿದ್ದರ ಮೂರ್ತಿಯ ದರ್ಶನ ತೆಗೆದುಕೊಂಡು ತಮಗೆ ಬೇಕಾದ ಧನಪುತ್ರಾದಿ ಸಂಕಲ್ಪ ಮಾಡಿಕೊಂಡು ಹೋದಂತೆ ಅವರ ಇಚ್ಛೆಗಳು ಪೂರ್ಣವಾಗುತ್ತಿದ್ದವು. ಮುಂದೆ ಸಿದ್ಧಾರೂಢರಲ್ಲಿ ಭಕ್ತಿ ಹೆಚ್ಚಾಗತೊಡಗಿತು. ನಂತರ ಧನಾಬಾಯಿಯು ಸಕಾಮ ಭಕ್ತಿಯನ್ನು ತ್ಯಾಗ ಮಾಡಿ ನಿಷ್ಕಾಮ ಭಕ್ತಿ ಮಾಡುತ್ತ ವೈರಾಗ್ಯ ಜೀವನ ನಡೆಸತೊಡಗಿದಳು. ಹೀಗೆ ಕೆಲವು ದಿವಸ ಕಳೆದವು.
ಒಂದು ದಿವಸ ಕ್ಯಾಕಿ ಸಾಹೇಬರು ಸಮುದ್ರದ ದಂಡೆಯಲ್ಲಿದ್ದಾಗ ಅಕಸ್ಮಾತ್ ನೆಲಕ್ಕೆ ಬಿದ್ದು ರಕ್ತವಾಂತಿ ಮಾಡಿಕೊಳ್ಳಹತ್ತಿದರು. ಅವರ ಮಿತ್ರರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದಾಗ ಅಲ್ಲಿಯೂ ರಕ್ತಸ್ರಾವವಾಗಿ ಮೂರ್ಛ ಹೊಂದಿದರು. ಈ ಸಮಾಚಾರ ತಿಳಿದು ಧನಾಬಾಯಿಯು ಬಂದು ಪತಿಯ ದುರವಸ್ಥೆಯನ್ನು ಕಂಡು ಉಪಚಾರ ಮಾಡಿಸುತ್ತ ಮನೆಗೆ ಬಂದು ಸಿದ್ದರ ಮೂರ್ತಿಯನ್ನು ಕುರಿತು ಹಗಲಿರುಳೆನ್ನದೆ ಭಕ್ತಿಯಿಂದ ಪ್ರಾರ್ಥಿಸುತ್ತ ಕುಳಿತಳು. ಇದರಿಂದಾಗಿ ದಿನಗಳದಂತೆ  ಕ್ಯಾಕಿ  ಸಾಹೇಬರು ಗುಣಹೊಂದಿ ಮನೆಗೆ ಬಂದರು. ಆದರೂ ಪ್ರತಿ ಗುರುವಾರ ರಕ್ತಸ್ರಾವವಾಗುತ್ತಿತ್ತು. ಇದನ್ನು ಕಂಡು ಧನಾಬಾಯಿಯು ಅಕ್ಕಲಕೋಟೆಯ ಶರಣರಿಗೆ ಪತ್ರ ಬರೆದು ಈ ವಿಷಯ ತಿಳಿಸಿದಳು. ಆಗ ಶರಣರು ಪತ್ರ ಬರೆದು ಅದಕ್ಕೆ ನೀವು ಭಯಪಡದೆ ಸಿದ್ಧರ ಮೇಲೆ ವಿಶ್ವಾಸವಿಟ್ಟು ಧ್ಯಾನ ಮಾಡಿರಿ. ನಿಮ್ಮ ಸಂಕಟ ಪರಿಹಾರವಾಗುತ್ತದೆ. ಅದಕ್ಕಾಗಿ ಐದು ಲಕ್ಷ ಜಪ ಮಾಡಿರಿ' ಎಂದು ಪತ್ರ ಬರೆದರು. ಅದರಂತೆ ಕ್ಯಾಕಿ ಸಾಹೇಬರು ಬೆಳ್ಳಿಯ ತಗಡಿನ ಮೇಲೆ ಐದು ಲಕ್ಷ ಪಂಚಾಕ್ಷರಿ ಮಂತ್ರ ಬರೆದರು. ನಂತರ ಹುಬ್ಬಳ್ಳಿಗೆ ಬಂದು
ಶರಣಪ್ಪನವರಿಗೆ ಕೊಟ್ಟರು. ಅದನ್ನು ತೆಗೆದುಕೊಂಡು ಶರಣಪ್ಪನವರು ಶ್ರೀ ಸಿದ್ಧಾರೂಢರ ಕೈಗಳಿಂದ ಕ್ಯಾಕಿ  ಸಾಹೇಬರ ಕೊರಳಿಗೆ ಕಟ್ಟಿಸಿದರು. ಅದರಿಂದಾಗಿ ಅವರ ರಕ್ತವಾಂತಿ ನಿಂತಿತು. ಮುಂದೆ ಪ್ರತಿ ವರ್ಷ ಹುಬ್ಬಳ್ಳಿಯ ಜಾತ್ರೆಗೆ ಬಂದು ಸಿದ್ದರಲ್ಲಿ ಭಕ್ತಿ ಸಲ್ಲಿಸಿ ಹೋಗುತ್ತಿದ್ದರು.
ಮುಂದೆ ಮುಂಬೈಯಲ್ಲಿದ್ದ ಶರಾಬಾಯಿಯೆಂಬ ಹೆಣ್ಣುಮಗಳು ಧನಾಬಾಯಿಯ ಮನೆಗೆ ಬಂದು ಸಿದ್ದರ ಮೂರ್ತಿಯನ್ನು ಕಂಡು ಭಕ್ತಿ ಸಲ್ಲಿಸಿ ಹೋಗುತ್ತಿದ್ದಳು. ಒಮ್ಮೆ  ಶರಣಪ್ಪ ಸ್ವಾಮಿಗಳು ಮುಂಬೈಗೆ ಹೋದಾಗ ಶರಾಬಾಯಿಯು ಶರಣಪ್ಪನವರಿಂದ ಮಂತ್ರೋಪದೇಶ ತಗೆದುಕೊಂಡಳು. ಶರಾಬಾಯಿಯು ನಿತ್ಯ ಭಜನೆಗೆ ಹೋಗುತ್ತಿರುವುದರಿಂದ ಅದನ್ನು ಕಂಡ ಅವಳ ಪತಿಯು ಪ್ರತಿಬಂಧ ಮಾಡುತ್ತಿದ್ದನು. ಆದರೂ ಧನಾಬಾಯಿಯ ಮನೆಗೆ ಭಜನೆಗೆ ಹೋಗುವುದನ್ನು ಬಿಡಲಿಲ್ಲ. ಮುಂದೆ ಅವಳ ಪತಿಯು ತನ್ನ ಸತಿಯಳ ಬಗ್ಗೆ ತಿರಸ್ಕಾರ ಭಾವನೆಯಿಂದ ನೋಡಹತ್ತಿದನು. ಶರಣಪ್ಪನವರು ಮುಂಬೈಗೆ ಹೋದಾಗ ಶರಾಬಾಯಿಯು ಶರಣಪ್ಪನವರನ್ನು ಕುರಿತು `ಶರಣರೇ, ನನ್ನ ಪತಿಯ ದುರಾಚಾರ ನಿವಾರಿಸಿ' ಎಂದು ಬೇಡಿಕೊಂಡಳು. ಆಗ ಶರಣಪ್ಪನವರು ಶರಾಬಾಯಿ, ನಿನ್ನ ಪತಿಗೆ ಒಳ್ಳೆಯ ಬುದ್ದಿ ಕೊಡು ಎಂದು ಸದ್ಗುರು ಸಿದ್ದಾರೂಢರಲ್ಲಿ ಧ್ಯಾನ ಮಾಡುತ್ತಿರು. ಆರೂಢರು ನಿನ್ನ ಚಿಂತೆಯನ್ನು ನಿವಾರಿಸುತ್ತಾರೆ' ಎಂದು ಹೇಳಿ ಕಳಿಸಿದರು. ಅದರಂತೆ ಅವಳು ಆಚರಿಸತೊಡಗಿದಳು.
ಒಂದು ದಿವಸ ಶರಾಬಾಯಿಯ ಪತಿಯು ರೇಲ್ವೆ ಸ್ಟೇಶನನ್ನಿನಲ್ಲಿ ಬಿದ್ದು ಮೂರ್ಛಿತನಾದನು. ಯಾರೋ ದವಾಖಾನಗೆ ಹಾಕಿದರು. ಮೂರು ದಿವಸಗಳ ನಂತರ ಮನೆಗೆ ತಂದರು. ಇದನ್ನು ಕಂಡು ಶರಾಬಾಯಿಯು ದುಃಖಿತಳಾಗಿ ಬಹಳ ಉಪಚಾರ ಮಾಡಿದಳು. ಸಿದ್ದರ ಕೃಪೆಯಿಂದ ಒಂದು ತಿಂಗಳಲ್ಲಿ ಗುಣ ಹೊಂದಿದನು. ಸದ್ಗುರುಗಳು ಭಕ್ತರ ಸಂಕಟಗಳನ್ನು ಹೇಗಾದರೂ ಪರಿಹಾರ ಮಾಡುತ್ತಾರೆಂದು ತಿಳಿದು ತನ್ನ ಪತಿಯ ಮುಂದೆ ಸಿದ್ಧರ ಚರಿತ್ರೆಯನ್ನು ಹೇಳತೊಡಗಿದಳು. ಕೆಲವು ದಿವಸಗಳಲ್ಲಿ ಪತಿಯ ಮನಸ್ಸು ಪರಿವರ್ತನೆಯಾಗಿ ಸದ್ಗುರುಗಳಲ್ಲಿ ಭಕ್ತಿ ಹುಟ್ಟಿ ತನ್ನ ಪತ್ನಿಗೆ ಕೊಟ್ಟ ದುಃಖವನ್ನು ಸ್ಮರಿಸಿ ಪಶ್ಚಾತ್ತಾಪ ಪಟ್ಟನು. ಆಮೇಲೆ ಶರಾಬಾಯಿಯು ತನ್ನ ಪತಿಯನ್ನು ಕರೆದುಕೊಂಡು ಧನಾಬಾಯಿಯ ಮನೆಗೆ ಬಂದು ಸಿದ್ಧರ ಮೂರ್ತಿ ತೋರಿಸಿದಾಗ ಅವನು ಆರೂಢರ ಮೂರ್ತಿಯನ್ನು ನೋಡಿ ಸಾಷ್ಟಾಂಗ ಹಾಕಿ 'ದಯಾಘನ ಮೂರ್ತಿಯೇ, ನಿನ್ನನ್ನು ನಿಂದಿಸಿ ಪಾಪ ಕಟ್ಟಿಕೊಂಡೆ. ಅದೇ ಅಪರಾಧದಿಂದ ಸಂಕಟಕ್ಕೆ ಬಿದ್ದೆನು. ನನ್ನ ಪತ್ನಿಯ ಪ್ರೇಮ ಭಕ್ತಿಗೆ ಮೆಚ್ಚಿ ಸಂಕಟದಿಂದ ತಾರು ಮಾಡಿದೆ. ಇಂದಿನಿಂದ ಪರಸ್ತ್ರೀಯರ ಮುಖ ನೋಡದೆ ನನ್ನ ಪತ್ನಿಯನ್ನು ಪ್ರೇಮಪೂರ್ವಕ ನೋಡಿಕೊಳ್ಳುತ್ತೇನೆ' ಎಂದು ಹೇಳಿ ಹೋದನು. ಇದರಿಂದಾಗಿ ಮುಂಬೈಯಲ್ಲಿ ಭಕ್ತರ ಸಮೂಹ ಹೆಚ್ಚಾಯಿತು.
ಶರಾಬಾಯಿಯು ಖೋಲಿಯ ಬಾಗಿಲು ಮುಚ್ಚಿಕೊಂಡು ದ್ಯಾನ ಮಾಡುತ್ತಿದ್ದಳು. ಅವಳ ಗೆಳತಿಯಾದ ಸೋನೂಬಾಯಿಯು ನೋಡಿ ಬಾಗಿಲು ಮುಚ್ಚಿಕೊಂಡು ಏನು ಮಾಡುತ್ತಿರುವೆ ಎಂದು ಶರಾಬಾಯಿಗೆ ಕೇಳಿದಳು. ಆಗ ಅವಳು `ಗುರು ಕೊಟ್ಟ ಪಂಚಾಕ್ಷರಿ ಮಂತ್ರ ಧ್ಯಾನ ಮಾಡುತ್ತೇನೆ. ಏಕೆಂದರೆ ಧನಾಬಾಯಿಯ ಮನೆಯಲ್ಲಿ ಶ್ರೀ ಶರಣ ಗುರುಗಳು ಹೇಳಿದಂತೆ ಹುಬ್ಬಳ್ಳಿಯ ಸಿದ್ಧಾರೂಢರ ಮೂರ್ತಿಯನ್ನಿಟ್ಟು ಅದರ ಮುಂದೆ ಕೂಡಿದ ಜನರು ಪಂಚಾಕ್ಷರಿ ಮಂತ್ರ ಧ್ಯಾನ ಮಾಡುವಂತೆ ನಾನೂ ಮಾಡುತ್ತೇನೆ. ಅದರಂತೆ ನೀನೂ ಮಾಡು. ಅದರಿಂದ ನಿನ್ನ ಮನಸ್ಸು ಸ್ಥಿರವಾಗುವುದು' ಎಂದಳು. ಆಗ ಸೋನೂಬಾಯಿಯು ಶರಾಬಾಯಿಗೆ ಧನಾಬಾಯಿಯ ಮನೆಗೆ ನಡೆಯಿರೆಂದು ಹೇಳಿ ಕರೆದುಕೊಂಡು ಹೋದಳು. ಅಲ್ಲಿ ಸಿದ್ದಾರೂಢ ಮೂರ್ತಿಯ ದರ್ಶನ ಪಡೆದುಕೊಂಡು ಹೋದಳು. ಅಲ್ಲಿ ಸಿದ್ದಾರೂಢರ ಮೂರ್ತಿಯ ದರ್ಶನ ಪಡೆದುಕೊಂಡು ಸೋನೂಬಾಯಿಯೂ ಸಿದ್ದರ ಕಥಾಮೃತ ತೆಗೆದುಕೊಂಡು ಮನೆಗೆ ಹೋಗಿ ದಿನಾಲು ಚರಿತ್ರೆ ಓದತೊಡಗಿದಳು. ಇದರಿಂದ ಸಿದ್ದರಲ್ಲಿ ಭಕ್ತಿ ಹೆಚ್ಚಾಗಿ ಪ್ರತಿದಿನ ಧನಾಬಾಯಿಯ ಮನೆಗೆ ಹೋಗಿ ಸಿದ್ದರ ಮೂರ್ತಿ ದರ್ಶನ ಭಜನಾದಿಗಳನ್ನು ಮಾಡಿ ಮನೆಗೆ ಬರುತ್ತಿದ್ದಳು.
ಅದನ್ನು ಕಂಡು ಅವಳ ಪತಿ ಜಾಲಶೇಟಜಿಯವರು ಅವಳನ್ನು ಕುರಿತು `ನೀನು ದಿನಾಲು ಧನಾಬಾಯಿಯ ಮನೆಗೆ ಏಕೆ ಹೋಗುತ್ತಿ?' ಎಂದು ಪ್ರಶ್ನೆ ಮಾಡಿದರು. ಆಗ ಸೋನೂಬಾಯಿಯು ಉತ್ತರ ಕೊರಡದೆ ಸುಮ್ಮನಿದ್ದಳು. ನಂತರ ಶರಾಬಾಯಿಯು ಇದ್ದ ಸಂಗತಿಯನ್ನು ತಿಳಿಸಿದಳು. ಆಗ ಜಾಲಶೆಟಜಿಯವರು ಪತ್ನಿಯ ಮೇಲೆ ಸಿಟ್ಟಾಗಿ ಇನ್ನು ಮುಂದೆ ಮನೆ ಬಿಟ್ಟು ಅಲ್ಲಿಗೆ ಹೋಗಬೇಡ. ನಮ್ಮ ಪಾರಸಿ ಧರ್ಮದಂತೆ ಆಚರಣೆ ಮಾಡಿದರೆ ಉದ್ದಾರವಾಗಲಿಕ್ಕಿಲ್ಲವೇನು? ಹಿಂದೂ ಧರ್ಮದಂತೆ ನಾವೇಕೆ ಆಚರಣೆ ಮಾಡಬೇಕು?' ಎಂದನು. ಈ ಪ್ರಕಾರ ಪ್ರತಿ ಹೇಳಿದಂತೆ ಕೇಳದ ಸೋನೂಬಾಯಿಯು ಅವನ ಕಣ್ಣು ತಪ್ಪಿಸಿ ದಿನಾಲು ಧನಾಬಾಯಿಯ ಮನೆಗೆ ಹೋಗುತ್ತಿದ್ದಳು. ಮುಂದೆ  ಶರಣಪ್ಪನವರು ಮುಂಬೈಯ ಧನಾಬಾಯಿಯ ಮನೆಗೆ
ಬಂದಾಗ ಅವರಿಂದ ಮಂತ್ರದೀಕ್ಷೆ ತೆಗೆದುಕೊಂಡು ಪಂಚಾಕ್ಷರಿ ಮಂತ್ರ ಜಪಿಸಹತ್ತಿದಳು. ಒಂದು ಸಲ ಶರಣಪ್ಪನವರನ್ನು ಕುರಿತು ಗುರೂಜಿ, ನಮಗೆ ಇಲ್ಲಿ ಶಾಶ್ವತವಾದ ಉತ್ತಮ ಮನೆ ಸಿಗುತ್ತಿಲ್ಲ. ಏನು ಮಾಡಬೇಕು? ನಿಮ್ಮ ಆಶೀರ್ವಾದದಿಂದ ಸಿಗಬಹುದು' ಎಂದಳು. ಆಗ ಶರಣರು ಹೇಳಿದರು: `ಸೋನೂಬಾಯಿ, ಸಿದ್ಧರ ಚರಿತ್ರ ಮತ್ತು ಧ್ಯಾನವನ್ನು ಭಕ್ತಿ ವಿಶ್ವಾಸಗಳಿಂದ ಮಾಡಿದರೆ ನಿಮಗೆ ಮನ ಸಿಗುತ್ತದೆ' ಎಂದಾಗ ಅವರು ಹೇಳಿದಂತೆ ಆಚರಿಸಿದ ಮೂರು ತಿಂಗಳಲ್ಲಿ ಮನೆ  ಸಿಕ್ಕಿತು.
ಆಗ ಜಾಲಶೇಟಜಿಯವರಿಗೆ ಆನಂದವಾಗಿ ತನ್ನ ಪತ್ನಿಗೆ ಇದು ಹೇಗೆ ಸಿಕ್ಕಿತು ಎಂದಾಗ `ಸಿದ್ಧಾರೂಢರಿಗೆ ಬೇಡಿಕೊಂಡೆ. ಅವರಿಂದ ಸಿಕ್ಕಿತು' ಎಂದಳು. ಆಗ ಜಾಲಶೇಟಜಿಯವರೂ ಸಿದ್ದಾರೂಢರ ಮೇಲೆ ವಿಶ್ವಾಸವಿಟ್ಟು ಸಿದ್ಧರ ಚರಿತ್ರೆಯನ್ನು ಶ್ರದ್ದೆಯಿಂದ ಓದತೊಡಗಿದರು. ಆಗ ಸೋನೂಬಾಯಿಯು ಪತಿಯನ್ನು ಕುರಿತು “ನೋಡಿರಿ, ಶರಾಬಾಯಿಯ ಪತಿಯು ಸಿದ್ದರ ಬಗ್ಗೆ ಕೋಪದಿಂದಿದ್ದು, ಈಗ ಅವನು ಸಿದ್ದರ ಭಕ್ತನಾಗಿದ್ದಾನೆ' ಎಂದು ಹೇಳಿದಳು. ಅಂದಿನಿಂದ ಜಾಲಶೇಟಜಿಯವರ ಮನಸ್ಸು ಪರಿವರ್ತನೆಯಾಗಿ ತನ್ನ ಸತಿಯೊಂದಿಗೆ ಧನಾಬಾಯಿಯ ಮನೆಗೆ ಹೋಗಿ ಸಿದ್ಧರ ಮೂರ್ತಿಯ ದರ್ಶನ ಪಡೆದು ಮನೆಗೆ ಬರುತ್ತಿದ್ದನು. ಒಂದು ದಿನ ಶರಣಪ್ಪನವರು ಧನಾಬಾಯಿಯ ಮನೆಗೆ ಬಂದಾಗ ತನ್ನ ಪಾರಧರ್ಮದ ಅಭಿಮಾನ ತೊರೆದು ಶರಣರಿಂದ ಮಂತ್ರ ದೀಕ್ಷೆ ಪಡೆದು ಪಾರಮಾರ್ಥಿಕ ತತ್ವದ ಬಗ್ಗೆ ಅವರಿಗೆ ಅನೇಕ ಪ್ರಶ್ನೆಗಳನ್ನು ಮಾಡಿ ಉತ್ತರ ಪಡದು ತಿಳಿದುಕೊಂಡು ಧನ್ಯನಾದನು.
ಮುಂಬೈಯ ಇನ್ನೊಬ್ಬ ಧನಾಬಾಯಿಯೆಂಬ ತರುಣಿಯ ತಂದೆ ತಾಯಿಗಳಿಲ್ಲದ್ದರಿಂದ ಅವಳ ಬಂಧುಗಳು ಅವಳನ್ನು ಮನೆಯಿಂದ ಹೊರಗೆ ಹಾಕಿದ್ದರು. ಅವಳು ಕ್ಯಾಕಿಯವರ ಮನೆಗೆ ಬಂದು ತನ್ನ ಸಮಸ್ಯೆಯನ್ನು ತಿಳಿಸಿದಳು. ಅದನ್ನು ತಿಳಿದು ಧನಾಬಾಯಿಯು ಅವಳನ್ನು ಸಿದ್ದರ ಮೂರ್ತಿಯ ಮುಂದೆ ನಿಂತು ಧ್ಯಾನ ಮಾಡು ಎಂದಳು. ಅದರಂತೆ ಅನಾಥ ಧನಾಬಾಯಿಯು ಸಿದ್ದರ ಮೂರ್ತಿಯ ಮುಂದೆ ನಿಂತು 'ಹೇ ಸದ್ಗುರುನಾಥಾ, ನಾನು ದೀನಳಾಗಿ ನಿನ್ನಲ್ಲಿ ಶರಣು ಬಂದಿದ್ದೇನೆ. ನಿನ್ನನ್ನು ಬಿಟ್ಟು ನನ್ನನ್ನು ಯಾರು ರಕ್ಷಿಸಬೇಕು?' ನನ್ನನ್ನು ಕಾಪಾಡು ತಂದೆ' ಎಂದು ಬೇಡಿಕೊಂಡಳು. ಆಗ ಅಲ್ಲಿಗೆ ಬಂದ ಮೈತ್ರಣಾಬಾಯಿಯವರು ಅವಳ ಪ್ರಾರ್ಥನೆಯನ್ನು ಕೇಳಿ ಕರುಣೆಯಿಂದ ಆ ಅನಾಥಗೆ ಹೇಳಿದಳು `ಧನಾಬಾಯಿ, ನೀನು ನನ್ನ ಮನೆಯಲ್ಲಿರು. ನಿನ್ನನ್ನು ನನ್ನ ತಂಗಿಯಂದು ನೋಡಿಕೊಳ್ಳುತ್ತೇನೆ. ನನ್ನ ಮನೆಗೆ ನಡೆ ನಾನೊಬ್ಬಳೇ ಇದ್ದೇನೆ. ಶರಣ ಸ್ವಾಮಿಗಳು ಬಂದಾಗ ಅವರಿಂದ ಮಂತ್ರ ದೀಕ್ಷೆಯನ್ನು ಪಡೆದು ಸಿದ್ದರ ಧ್ಯಾನ ಮಾಡುತ್ತ ಇರು' ಎಂದು ಹೇಳಿದಳು. ಇದನ್ನು ಕೇಳಿದ ಧನಾಬಾಯಿಯು ಆನಂದಭರಿತಳಾಗಿ ಸದ್ದುರುವು ಈ ಅನಾಥ ಬಾಲಕಿಯ ಮೊರೆ ಕೇಳಿ ಈ ಮೈತ್ರಣಾಬಾಯಿಯಿಂದ ನುಡಿಸಿದನೋ ಏನೋ ಎಂದು ಆ ಬಾಲಕಿಯನ್ನು ಮೈತ್ರಣಾಬಾಯಿಯ ಮನೆಗೆ ಕಳಿಸಿದಳು.
ಮುಂದೆ ಕೆಲವು ದಿವಸಗಳು ಕಳೆದ ನಂತರ ಶರಣಪ್ಪನವರು ಮುಂಬೈಗೆ ಬಂದಾಗ ಅನಾಥ ಬಾಲಕಿಯು ಶರಣ ಗುರುಗಳಿಂದ ಮಂತ್ರೋಪದೇಶ ಪಡೆದು ಹೀಗೆ ಹೇಳಿದಳು `ಗುರುಗಳೇ, ಒಬ್ಬ ಸಗುಣ ತರುಣ ದೊಡ್ಡ ಮನೆತನದವನು ನನ್ನ ಜೊತೆಗೆ ಲಗ್ನವಾಗಬೇಕೆಂದು ಪ್ರೇಮ ಮಾಡಿದ್ದಾನೆ. ಆದರೆ ಅವನ ತಾಯಿ ಬೇಡವೆನ್ನುತ್ತಾಳೆ. ಈ ವಿಷಯದಲ್ಲಿ ನಿಮ್ಮ ಕೃಪೆಯಾಗಬೇಕು' ಎಂದು ಬೇಡಿಕೊಂಡಳು. ಆಗ ಶರಣರು ತಂಗಿ, ನೀನು ಸಿದ್ದಾರೂಢರ ಮೇಲೆ ವಿಶ್ವಾಸವಿಟ್ಟು ಯಾವಾಗಲೂ ಮಂತ್ರ ಜಪ ಮಾಡುತ್ತಿರು' ಎಂದು ಹೇಳಿ ಆಶೀರ್ವದಿಸಿದರು. ಕೆಲವು ದಿವಸ ಕಳೆದ ನಂತರ ಆ ತರುಣನು ಕ್ಯಾಕಿ ಧನಾಬಾಯಿಯ ಮನೆಗೆ ಬಂದು ದಿನಾಲು ಭಕ್ತಿ ಸಲ್ಲಿಸುತ್ತಿರುವುದರಿಂದ ಅವನ ತಾಯಿಯ ಮನಸ್ಸು ಕರಗಿತು, ಇದನ್ನು ತಿಳಿದು ಆ ತರುಣನು ಅನಾಥ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋದಾಗ ತಾಯಿಯು ಅವಳನ್ನು ನೋಡಿ ಮೊದಲಿನ ದ್ವೇಷಭಾವನೆ ಬಿಟ್ಟು ಲಗ್ನಕ್ಕೆ ಅನುಮತಿ ಕೊಟ್ಟಳು. ಮುಂದೆ ಶರಣಪ್ಪನವರು ಬಂದಾಗ ಅವರ ಸನ್ನಿಧಿಯಲ್ಲಿ ಲಗ್ನವಾಗಿ ಅವರ ಪಾದಪೂಜಿಸಿ ಕಾಣಿಕೆ ಕೊಟ್ಟು ಹೋದರು.
ಅಲ್ಲಿಯೇ ಇದ್ದ ಕಲಮಿಬಾಯಿಯವರಿಗೆ ಪುತ್ರ ಸಂತಾನವಿಲ್ಲದ್ದರಿಂದ ಕ್ಯಾಕಿ ಧನಾಬಾಯಿಯವರ ಮನೆಗೆ ಬಂದು ಸಿದ್ಧರಿಗೆ ಭಕ್ತಿ ಸಲ್ಲಿಸಿ ಜಪಧ್ಯಾನ ಮಾಡುತ್ತಿರಲಾಗಿ ಕೆಲವು ದಿನಗಳ ನಂತರ ಗರ್ಭಿಣಿಯಾಗಿ ಕನ್ಯಾರತ್ನ ಪಡೆದಳು. ಕೆಲ ದಿವಸ ಕಳೆದ ನಂತರ ಅವಳಿಗೆ ಹುಚ್ಚು ಹಿಡಿದು ಅವಳ ಪತಿಯು ತನ್ನ ಪತ್ನಿಯನ್ನು ಕ್ಯಾಕಿಬಾಯಿಯವರ ಮನೆಗೆ ಕರೆದುಕೊಂಡು ಬಂದು ಸಿದ್ದರಲ್ಲಿ ಪ್ರಾರ್ಥಿಸಿದಾಗ ಸ್ವಲ್ಪ ಗುಣವಾದಳು. ಮುಂದೆ ಶರಣ ಸ್ವಾಮಿಗಳು ಬಂದಾಗ ಅವಳನ್ನು ಅವರ ಪಾದಗಳಿಗೆ ಹಾಕಿದಾಗ ಪೂರ್ಣ ಗುಣ ಹೊಂದಿದಳು. ಆದರೆ ಅವಳ ಅತ್ತೆ ಅವಳನ್ನು ಸೇರುತ್ತಿರಲಿಲ್ಲ. ಹಿಂದಿನಿಂದ ಸಿದ್ಧಾರೂಢರಲ್ಲಿ ಭಕ್ತಿ ಹೆಚ್ಚಾಗಿ ಸುಮ್ಮನಾದಳು.
ಮಾಣಿಕಬಾಯಿಯೆಂಬವಳು ಸಿದ್ಧರ ದರ್ಶನಕ್ಕಾಗಿ ಕ್ಯಾಕಿಬಾಯಿಯವರ ಮನೆಗೆ ಹೋಗಿ ನಾಮಸ್ಮರಣೆ ಜಪ ಧ್ಯಾನಾದಿಗಳನ್ನು ತೀರಿಸಿಕೊಂಡು ಪ್ರಸಾದ ತೆಗೆದುಕೊಂಡು ತನ್ನ ಮನೆಗೆ ಹೋಗುತ್ತಿದ್ದಳು. ಆಗ ಪುಣೆ ಶಹರದಿಂದ ಒಬ್ಬ ಬಾಯಿಯು ತನ್ನ ಇಬ್ಬರು ಹದಿನೆಂಟು ವರ್ಷದ ಮಕ್ಕಳು ಜ್ವರಪೀಡಿತರಾಗಿ ಮರಣ ಹೊಂದಿದ್ದರಿಂದ ಮೂರನೆಯವಳಾದ ಹದಿನಾರು ವರ್ಷದ ಮಗಳಿಗೂ ಸನ್ನಿಪಾತ ಜ್ವರದಿಂದ ಬಡಬಡಿಸುತ್ತಿದ್ದಳು. ಅವಳಿಗೆ ದವಾಖಾನೆಗೆ ತೋರಿಸಲು ಮುಂಬೈಗೆ ಬಂದು ಮಾಣಿಕಬಾಯಿಯನ್ನು ಕೇಳುತ್ತ ಬಂದಾಗ ಅವಳು ಕ್ಯಾಕಿಬಾಯಿಯ ಮನೆಗೆ ಹೋಗಿದ್ದಳು. ಮಾಣಿಕಬಾಯಿಯ ತಂಗಿ ಅವಳನ್ನು ಕ್ಯಾಕಿಬಾಯಿಯ ಮನೆಗೆ ಕರೆದುಕೊಂಡು ಹೋದಳು. ಸಿದ್ದರ ಪ್ರಸಾದ ಮಹಿಮೆಯಿಂದ ಹುಡುಗಿಯ ಸನ್ನಿಪಾತ ಜ್ವರ ಕಡಿಮೆಯಾಗುತ್ತ ನಡೆಯಿತು. ನಂತರ ಶರಣ ಗುರುಗಳು ಬಂದಾಗ ಅವರು ಅವಳ ಮಸ್ತಕದ ಮೇಲೆ ಹಸ್ತವನ್ನಿರಿಸಿ ಆಶೀರ್ವದಿಸಿದಾಗ ಅಂದಿನಿಂದ ಅವಳು ರೋಗಮುಕ್ತಳಾದಳು. ಇದೇ ರೀತಿ ಸಿದ್ಧರ ಕೃಪೆಯಿಂದ ಶರಣಪ್ಪನವರು ಮುಂಬೈಗೆ ಹೋಗಿ ಪಾರ್ಶಿ ಜನರಿಗೆ ಮಂತ್ರೋಪದೇಶ ಕೊಟ್ಟು ಶಿಷ್ಯರನ್ನಾಗಿ ಮಾಡಿ ಜ್ಞಾನ ನೀಡಿ ಪ್ರಸಿದ್ಧರಾದರು.



ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ