ಜೇಲಿನಲ್ಲಿದ್ದ ಕೃಷ್ಣಾಜಿಯನ್ನು ಯವನರೂಪದಿಂದ ಬಿಡಿಸಿದ ಕಥೆ
ಜೇಲಿನಲ್ಲಿದ್ದ ಕೃಷ್ಣಾಜಿಯನ್ನು ಯವನರೂಪದಿಂದ ಬಿಡಿಸಿದ ಕಥೆ 🌺
ಮಹಾರಾಷ್ಟ್ರದ ವಾಂಘರೆ ಗ್ರಾಮ ನಿವಾಸಿ ಸಖಾರಾಮ ಟೇಂಬೆಯವರು ತಮ್ಮ ಪೂರ್ವಜರು ಕಟ್ಟಿಸಿದ ಹರಿಹರೇಶ್ವರ ದೇವಸ್ಥಾನಕ್ಕೆ ಹೋಗಿ ನಿತ್ಯಪೂಜೆ ಸಲ್ಲಿಸುತ್ತಿದ್ದರು. ಇದರ ಫಲವಾಗಿ ಅವರ ಗರ್ಭದಲ್ಲಿ ಕೃಷ್ಣಾಜಿ ಜನ್ಮ ತಾಳಿದನು. ಇವರು ನಿತ್ಯ ಭಜನ ಪೂಜೆ ತತ್ವ ಚಿಂತನೆಯಲ್ಲಿರುತ್ತಿದ್ದರು. ತಂದೆ ಸಖಾರಾಮರು ಮೇಲಿಂದ ಮೇಲೆ ನರಸೋಬನವಾಡಿಗೆ ಹೋಗಿ ದೇವದರ್ಶನ ಪೂಜಾದಿಗಳನ್ನು ಮಾಡಿ ಅಲ್ಲಿಯ ಸಂತರಾದ ವಾಸುದೇವಾನಂದಸ್ವಾಮಿಗಳ ದರ್ಶನ ಪಡೆಯುತ್ತಿದ್ದರು. ಒಂದು ದಿನ ವಾಡಿಯ ವಾಸುದೇವಾನಂದ ಸ್ವಾಮಿಗಳಿಗೆ ಸಖಾರಾಮರು ತನ್ನ ಮಗನ ಕುಂಡಲಿ ತೋರಿಸಿದಾಗ ಕುಂಡಲಿ ನೋಡಿ ಇವನು ಸಂಸಾರಿಯಾಗುವುದಿಲ್ಲ. ಆತ್ಮಾನಂದ ಪಡೆಯುತ್ತಾನೆ ಎಂದು ಹೇಳಿದರು.
ಮುಂದೆ ಸಖಾರಾಮರು ಗುರುಸೇವೆ ಮಾಡುತ್ತಲೇ ದೇಹತ್ಯಾಗ ಮಾಡಿದರು. ನಂತರ ಕೃಷ್ಣಾಜಿಯು ದೊಡ್ಡವನಾಗಿ ವಾಸುದೇವಾನಂದರಿಂದ ಉಪದೇಶ ಪಡೆಯಬೇಕೆಂದು ವಾಡಿಗೆ ಬಂದಾಗ ಅವರ ಅಂತ್ಯಕಾಲ ಸಮೀಪಿಸಿತ್ತು. ಆದರೂ ಕೃಷ್ಣಾಜಿಯು ಗುರುಗಳನ್ನು ಕಂಡು ನಮಿಸಿ ತನ್ನ ಮನದ ಇಂಗಿತವನ್ನು ತಿಳಿಸಿದಾಗ ವಾಸುದೇವಾನಂದರು ಹೇಳಿದರು `ಕೃಷ್ಣಾ, ಈಗ ಅದು ನನ್ನಿಂದ ಸಾಧ್ಯವಿಲ್ಲ. ಪ್ರತ್ಯಕ್ಷ ಶಂಕರನ ಅವತಾರವೇ ಆದ ಹುಬ್ಬಳ್ಳಿಯ ಸಿದ್ದಾರೂಢರು ನಾನು ಮಾಡಬೇಕಾದ ಉಪದೇಶವನ್ನು ಅವರೇ ಮಾಡಬೇಕಾಗಿದೆ. ಆದ್ದರಿಂದ ನೀನು ಅಲ್ಲಿಗೆ ಹೋಗು' ಎಂದು ಹೇಳಿ ದೇಹತ್ಯಾಗ ಮಾಡಿದರು.
ಕೃಷ್ಣಾಜಿಯು ತನ್ನ ಮಿತ್ರ ಮಹಾದೇವ ಶಬಣೆಕರನನ್ನು ಕರೆದುಕೊಂಡು ವಿಜಯದುರ್ಗ ಮಾರ್ಗದಿಂದ ಗೋವೆಯ ಪಣಜಿಗೆ ಬಂದರು. ಅಲ್ಲಿ ಲೋಕಮಾನ್ಯ ಟಿಳಕರ ನೇತೃತ್ವದಲ್ಲಿ ಪರಕೀಯರ ವಿರುದ್ಧ ಚಳುವಳಿ ನಡೆದಿತ್ತು. ಅಲ್ಲಿಯ ಪೊಲೀಸರು ಇವರು ಸಾಧುವೇಷದ ಸ್ವಾತಂತ್ರ್ಯಯೋಧರಿರಬಹುದೆಂಬ ಸಂಶಯ ಪಟ್ಟು ಇವರನ್ನು ಹಿಡಿದು ಇವರ ಜೋಳಿಗೆ ಶೋಧಿಸಿದಾಗ ಅದರಲ್ಲಿ ವಿಭೂತಿಗಟ್ಟಿ, ಪೂಜಾ ಸಾಮಗ್ರಿಗಳು ಹಾಗೂ ಒಂದು ಪಂಚಾಂಗ ಸಿಕ್ಕಿತು. ಅದರ ಮೇಲೆ ತಿಲಕರ ಭಾವಚಿತ್ರವಿರುವುದನ್ನು ನೋಡಿ ಇವರು ಸ್ವಾತಂತ್ರಯೋಧರೆಂದು ಇಬ್ಬರನ್ನೂ ತುರಂಗದಲ್ಲಿ ಹಾಕಿದರು. ಪೋರ್ತುಗೀಜರ ಕಾಯ್ದೆ ಪ್ರಕಾರ ಜಾಮೀನು ತೆಗೆದುಕೊಂಡು ಹೊರಗೆ ಬಿಡಬೇಕಾದರೆ ಅಪರಾಧಿಯ ಬದಲಾಗಿ ಮತ್ತೊಬ್ಬ ಪುರುಷನು ತುರಂಗದಲ್ಲಿ ಬಂದು ಕೂಡಬೇಕು. ಆ ಬಳಿಕ ಅಪರಾಧಿಯನ್ನು ಹೊರಗೆ ಬಿಡಬೇಕು. ಇದು ಜಾಮೀನು ಕೊಡುವ ಪದ್ದತಿ.
ಕೃಷ್ಣಾಜಿಯು ತುರಂಗದಲ್ಲಿದ್ದು ಆ ರಾತ್ರಿಯೆಲ್ಲ ಅಳುತ್ತ ಗುರುಗಳ ಸ್ಮರಣೆ ಮಾಡುತ್ತ, ಸದ್ಗುರುವೇ ನಿನ್ನ ಸೇವೆಗಾಗಿ ಬರುತ್ತಿರುವ ನಮಗೆ ಈ ತುರಂಗ ಶಿಕ್ಷೆಯೇಕೆ? ಗುರುವೇ, ನಿರಪರಾಧಿಗಳಾದ ನಮ್ಮನ್ನು ಬಿಡಿಸಿ ನಿನ್ನ ಸೇವೆಗಾಗಿ ಬರುವಂತೆ ಮಾಡು ಎನ್ನುತ್ತ ಇಡೀ ರಾತ್ರಿ ಅಳುತ್ತ ಕುಳಿತಿದ್ದನು. ಒಂದು ದಿನ ಕಳೆದ ನಂತರ ಮುಂಜಾನೆ ಒಬ್ಬ ದಪ್ಪ ಮೈಕಟ್ಟಿನ ಯವನ ವ್ಯಾಪಾರಿಯೊಬ್ಬ ಬಂದು ತುರಂಗದ ಅಧಿಕಾರಿಯನ್ನು ಗದ್ದರಿಸಿ, ಇಲ್ಲಿ ಕೃಷ್ಣಾಜಿ ಟೇಂಬೆ ಎಲ್ಲಿದ್ದಾರೆ? ನಿರಪರಾಧಿಗಳಾದ ಅವರನ್ನು ಏಕೆ ಬಂದಿಸಿರುವಿರಿ. ಅವರಿಬ್ಬರನ್ನೂ ಬಿಟ್ಟುಬಿಡಿ ಎಂದಾಗ ಕೃಷ್ಣಾಜಿ ತನ್ನೊಳಗೆ ಇದೊಂದು ಆಪತ್ತು ಬಂದಿತು ಎಂದುಕೊಂಡನು. ಆಗ ಅಧಿಕಾರಿ ಹೇಳಿದ 'ಇವರು ಸ್ವಾತಂತ್ರಯೋಧರೆಂಬ ಸಂಶಯದಿಂದ ಬಂಧಿಸಲಾಗಿದೆ. ಇವರನ್ನು ಬಿಡಬೇಕಾದರೆ ಇವರ ಜಾಮೀನಿಗಾಗಿ ನೀವು ತುರಂಗದಲ್ಲಿದ್ದರೆ ಇವರನ್ನು ಬಿಡುತ್ತೇನೆ' ಎಂದನು. ಆಗ ಯವನ ವ್ಯಾಪಾರಿಯು ತಾನು ತುರಂಗದಲ್ಲಿ ಹೋಗಿ ಅವರಿಬ್ಬರನ್ನೂ ಬಿಡಿಸಿದನು.
ಇಬ್ಬರೂ ಸೇರಿ ಹುಬ್ಬಳ್ಳಿಯ ಸಿದ್ಧಾಶ್ರಮಕ್ಕೆ ಬಂದಾಗ ಪಾಠಶಾಲೆಯಲ್ಲಿ ಕನ್ನಡ ಭಾಷೆಯ ಪ್ರವಚನ ನಡೆದಿತ್ತು. ಇವರಿಗೆ ಕನ್ನಡ ತಿಳಿಯುತ್ತಿರಲಿಲ್ಲ. ಪಾಠಶಾಲೆಯಲ್ಲಿ ತುಂಬಾ ಜನರು ಸೇರಿದ್ದರು. ಒಳಗೆ ಹೋಗಲು ಅವಕಾಶವಿರಲಿಲ್ಲವಾದ್ದರಿಂದ ಹೊರಗಿನ ಕಟ್ಟೆಯ ಮೇಲೆ ಕುಳಿತರು. ಮನಸ್ಸಿನಲ್ಲಿ ಯಾವಾಗ ಸಿದ್ಧರ ಪಾದಗಳಲ್ಲಿ ಬೀಳುವೆನೂ ಎಂಬ ಉತ್ಕಟ ಇಚ್ಛೆಯಿತ್ತು. ಅಷ್ಟರಲ್ಲಿ ಸ್ವಾಮಿಗಳು ಮರಾಠಿ ಭಾಷೆಯಲ್ಲಿ ಕೊಂಕಣ ಪ್ರದೇಶದಿಂದ ಕೃಷ್ಣಾಜಿ ಮತ್ತು ಮಹಾದೇವ ಎಂಬಿಬ್ಬರು ಬಂದಿದ್ದಾರೆ. ಅವರನ್ನು ಕರೆದುಕೊಂಡು ಬನ್ನಿರಿ ಎಂದು ತನ್ನ ಶಿಷ್ಯನನ್ನು ಕಳಿಸಿದರು.
ಆ ಶಿಷ್ಯನು ಹೊರಗೆ ಬಂದು ಕೊಂಕಣ ಪ್ರದೇಶದಿಂದ ಕೃಷ್ಣಾಜಿ ಮತ್ತು ಮಹಾದೇವ ಅವರು ಬಂದಿದ್ದಾರಂತೆ. ಅವರು ಬರಬೇಕೆಂದು ಸ್ವಾಮಿಗಳ ಅಪ್ಪಣೆಯಾಗಿದೆ. ಬರಬೇಕು ಎಂದು ಕೂಗಿದನು. ಆಗ ಕೃಷ್ಣಾಜಿಯು ನಾವು
ಬಂದದ್ದು ಮತ್ತು ನಮ್ಮ ಹೆಸರು ಗುರುಗಳಿಗೆ ಹೇಗೆ ಗೊತ್ತಾಯಿತು ಎಂದು ಚಕಿತರಾಗಿ ಒಳಗೆ ಹೋದರು. ಆಗ ಸಿದ್ಧರು ಅವರನ್ನು ಕರೆದು ತಮ್ಮ ಸಮೀಪ ಕೂರಿಸಿಕೊಂಡು `ನೀವು ತುರಂಗದಲ್ಲಿದ್ದಾಗ ನಿಮಗೆ ಬಹಳ ಕಷ್ಟವಾಯಿತೆ? ಆ ಸಮಯದಲ್ಲಿ ನಿಮ್ಮನ್ನು ಯವನ ವ್ಯಾಪರಿಯು ಬಿಡಿಸಿದನಲ್ಲ, ಅವನು ಹೇಗೆ ಇದ್ದನು?' ಎಂದು ಕೇಳಿದಾಗ ಭಕ್ತಿಯಿಂದ ಆನಂದದ ಕಣ್ಣೀರು ಸುರಿಸುತ್ತ ಕೃಷ್ಣಾಜಿ ಹೇಳಿದ 'ಹೇ ಪ್ರಭೋ ಆ ಸಮಯದಲ್ಲಿ ಅಪರಿಚಿತರಾದ ನಮಗೆ ಯಾರು ಬಿಡಿಸಬೇಕು? ನೀವೇ ಆ ಯವನ ರೂಪದಿಂದ ಬಂದು ನಮ್ಮನ್ನು ಬಿಡಿಸಿ ನಿಮ್ಮ ಸೇವೆಯ ಭಾಗ್ಯ ದೊರಕಿಸಿಕೊಟ್ಟಿರಿ' ಎಂದು ಸಾಷ್ಟಾಂಗ ನಮಸ್ಕರಿಸಿದರು.
ಮುಂದ ಸಿದ್ದರಿಂದ ಮಂತ್ರೋಪದೇಶ ಪಡೆದು ಆತ್ಮಶಾಸ್ತ್ರ, ಯೋಗಶಾಸ್ತ್ರ ಮುಂತಾದವುಗಳನ್ನು ಕಲಿಯುತ್ತಾ ಸಿದ್ದರ ಸತ್ಸಂಗದಲ್ಲಿ ಅನೇಕ ದಿವಸವಿದ್ದು ಸಿದ್ದರ ಅಪ್ಪಣೆ ಪಡೆದು ಕೃಷ್ಣಾಜಿ ಸ್ವಸ್ಥಾನಕ್ಕೆ ಹೋದರು. ಮುಂದೆ ಮುಂಬೈಗೆ ಖಾಸಗಿ ಕೆಲಸಕ್ಕಾಗಿ ಹೋದಾಗ ಒಂದು ಹೋಟೆಲಿನಲ್ಲಿ ಉಳಿದಿದ್ದರು. ಅಲ್ಲಿ ಒಬ್ಬ ದಿವ್ಯ ಯೋಗಿಗಳು ಬಂದರು. ಅವರನ್ನು ಕಂಡು ಎಲ್ಲರೂ ಅಚ್ಚರಿಗೊಂಡರು. ಅವರು ಕೃಷ್ಣಾಜಿಯನ್ನು ಭೆಟ್ಟಿಯಾಗಿ ಭಸ್ಮ ಪ್ರಸಾದವಿರುವ ಕಾಗದದ ಪಟ್ಟಣವನ್ನು ಕೃಷ್ಣಾಜೆಯ ಕೈಗೆ ಕೊಟ್ಟು ಗುರುದೇವದತ್ತ ಎಂದು ಉಚ್ಚಾರ ಮಾಡಿದರು. ಆಗ ಕೃಷ್ಣಾಜಿಯು ಅದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಎರಡು ಪಾದುಕೆಗಳಿದ್ದವು.
ಆಗ ಸಾಧುಗಳು ಹೇಳಿದರು ನಾನು ಗೋಕರ್ಣಕ್ಕೆ ಹೋಗುವವನಿದ್ದೇನೆ. ನಿನಗೆ ದರ್ಶನ ಕೊಡಲು ಬಂದಿದ್ದೇನೆ. ಇನ್ನು ಮೇಲೆ ನಿನ್ನ ಕಲ್ಯಾಣವಾಗುತ್ತದೆ' ಎಂದು ಹೇಳಿ ಹೊರಟುಹೋದರು. ಆಮೇಲೆ ಕೃಷ್ಣ ಸ್ವಾಮಿಗಳು ವಾಂಘರೆ ಗ್ರಾಮಕ್ಕೆ ಬಂದು ಶ್ರೀ ಸಿದ್ಧಾರೂಢರಿಗೆ ಈ ಚಮತ್ಕಾರ ವಿಷಯದ ಬಗ್ಗೆ ಪತ್ರ ಬರೆದರು. ಆ ಪತ್ರಕ್ಕೆ ಸಿದ್ಧರು ಹೀಗೆ ಉತ್ತರಿಸಿದರು.
ಓಂ ನಮಃ ಶಿವಾಯ ಶ್ರೀ ಸಿದ್ಧಾಶ್ರಮ ಹುಬಳಿ ಶ್ರೀಮದಖಂಡ ಸಚ್ಚಿದಾನಂದ ಶ್ರೀ ಸಿದ್ಧಾರೂಢ ಮಹಾರಾಜ ಆಶೀರ್ವಾದಪೂರ್ವಕ ಪತ್ರಲಿಹಿಥ್ಯಾಸ ಕಾರಣ ಕಿ ತುಮಚ್ಯಾ ಪತ್ರ ಮಿಳಾಲ ಅಭಿಪ್ರಾಯ ಸಮಝಲಾ, ತುಮ್ಹಿ ನಿತ್ಯ ನಾಮಸ್ಮರಣ ಕರಾವಿ ಆಣಿ ಪಾದುಕೇಚೆ ಪೂಜಾ ನಿತ್ಯ ಕರಾವೆ, ಸದ್ಗುರು ಕೃಪೇನ ತುಮಚ್ಯಾ ಕಲ್ಯಾಣ ಹೊಲೀಲ ಇತಿ ಆಶೀರ್ವಾದ ಓಂ ನಮಃ ಶಿವಾಯ.
(ಓಂ ನಮಃ ಶಿವಾಯ ಶ್ರೀ ಸಿದ್ಧಾಶ್ರಮ ಹುಬಳಿ ಶ್ರೀಮದಖಂಡ ಸಚ್ಚಿದಾನಂದ ಶ್ರೀ ಸಿದ್ಧಾರೂಢ ಮಹಾರಾಜ ಆಶೀರ್ವಾದಪೂರ್ವಕ್ಕೆ ಪತ್ರ ಬರೆಯಲು ಕಾರಣವೇನೆಂದರೆ ನಿಮ್ಮ ಪತ್ರ ಸಿಕ್ಕಿತು. ಅಭಿಪ್ರಾಯ ತಿಳಿಯಿತು. ನೀವು ನಿತ್ಯ ನಾಮಸ್ಮರಣೆ ಮಾಡಬೇಕು ಮತ್ತು ಪಾದುಕೆಗಳ ಪೂಜೆಯನ್ನು ನಿತ್ಯ ಮಾಡಬೇಕು. ಸಮ್ಮರುವಿನ ಕೃಪೆಯಿಂದ ನಿಮ್ಮ ಕಲ್ಯಾಣವಾಗುತ್ತದೆ. ಇತಿ ಆಶೀರ್ವಾದ ಓಂ ನಮಃ ಶಿವಾಯ) ಶ್ರೀ ಶಿವಾನಂದ ಪುರಾಣ ಅರ್ಥಾತ್ ಕೃಷ್ಣಾಜಿ ಸಖಾರಾಮ ಟೆಂಬೇ ಪುರಾಣದಲ್ಲಿ ಪ್ರಕಟವಾದ ಈ ಪತ್ರದ ಕೊನೆಗೆ ಸಿದ್ಧರ ಮೋಡಿ ಅಕ್ಷರದ ಸಹಿಯಿದೆ ಈ ಮರಾಠಿ ಪುರಾಣದಲ್ಲಿ ಸಿದ್ದರ ಮತ್ತು ಟೇಂಬೆ ಮಹಾರಾಜರ ಭಾವಚಿತ್ರಗಳಿವೆ. ಇದನ್ನು ಬರೆದವರು ಅವರ ಶಿಷ್ಟ ವಿನಾಯಕಸುತ ಪುರಾಣದ ಉಪಕ್ರಮ ಮಾಡುತ್ತ ಸಿದ್ಧರನ್ನು ಹೀಗೆ ಕೊಂಡಾಡಿದ್ದಾರೆ.
ಹೂಬಳಿ0ತ ದೇವಾ ತುಝಿ ಖ್ಯಾತಿ ಸಿದ್ಧಾರೂಢನಾಮ ನಿಶ್ಚಿತಿ ಶಿವವತಾರ ಐಸಿ ಪ್ರತೀತಿ ದಾವಿಲೀಸಿ ಭಕ್ತಾಸಿ
ಲುಳ್ಳಾ ಪಾಂಗಳ್ಯಾಸಿ ಚಾಲವಿಸಿ ಅಂಧಳ್ಯಾಸಿ ದೃಷ್ಟಿದೇಸಿ
ಚಮತ್ಕ್ರತ ಐಸಿ ಬ್ರಹ್ಮಾದಿಕ ಬ್ರಹ್ಮಾಧಿಕಾ ಕಳೆನಾ
ಖ್ಯಾತಿ ತುಝಿಕೆಲಿ ಕಥನ ತರೀನ ವಾಟೆನ ಸಮಾಧಾನ ಕಾರಣ ವರ್ಣಾಮಯ ಅಜ್ಞಾನ ಲೀಲಾ ತುಝಿ ಅತರ್ಕ ಪ್ರತ್ಯಕ್ಷ ಶಂಕರಾಚಾ ಅವತಾರ ಝಾಲೀಸಿ ಹುಬಳೀಂತ ಪರಿಕರ ಆರೂಢಸ್ವಾಮಿ ಐಸಿ ಸಕಲಭರ ಖ್ಯಾತಿ ಝಾಲಿ ಅಗಾಧಚಿ |
ಮುಂದೆ ಸಿದ್ಧರ ಆಶೀರ್ವಾದದಂತೆ ಸಾಧನ ಮಾಡಿ ಮಹಾರಾಷ್ಟ್ರದಲ್ಲಿ ಕೃಷ್ಣಾಜಿಯು ಶಿವಾನಂದ ನಾಮದಿಂದ ಮತ್ತು ಟೇಂಬೆ ಮಹಾರಾಜರಂದು ಸಿದ್ದರ ಕೃಪೆಯಿಂದ ಪ್ರಸಿದ್ಧರಾದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
