ಸಿದ್ಧರ ಕೃಪೆಗೆ ಪಾತ್ರಳಾದ ಸಿದ್ದಮ್ಮ
🌺 ಸಿದ್ಧರ ಕೃಪೆಗೆ ಪಾತ್ರಳಾದ ಸಿದ್ದಮ್ಮ 🌺
ತರಲಗಟ್ಟಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಢರಲ್ಲಿ ಅನನ್ಯ ಭಕ್ತಿಯನ್ನಿರಿಸಿಕೊಂಡು ಬಾಳುತ್ತಿದ್ದ ಸಿದ್ಧಮ್ಮನ ಆವಜನ್ಮದ ಪುಣ್ಯವೋ ಎಳೆತನದಲ್ಲಿಯೇ ಅವಳ ಆಟಪಾಟಗಳು ವಿಲಕ್ಷಣವಾಗಿದ್ದವು. ಬೇರೆ ಮಕ್ಕಳನ್ನು ಕೂಡಿಸಿಕೊಂಡು ಮಣ್ಣಿನ ಮೂರ್ತಿ ಮಾಡಿ ಅದನ್ನು ದೇವರೆಂದು ತಿಳಿದು ಪೂಜೆ ಭಜನೆ ಮಾಡುತ್ತಿದ್ದಳು. ಕೆಲವು ಸಲ ಏಕಾಂತದಲ್ಲಿ ಸುಮ್ಮನೇ ಕೂಡುತ್ತಿದ್ದಳು. ಇದನ್ನು ಕಂಡವರಿಗೆ ಆಶ್ಚರ್ಯವಾಗುತ್ತಿತ್ತು. ಮಗುವು ಬೆಳೆದು ದೊಡ್ಡವಳಾದ ನಂತರ ತಂದೆ ತಾಯಿಗಳು ಅವಳಿಗೆ ಒಬ್ಬ ಸತ್ಕುಲದ ಸುಂದರವಾದ ವರನ ಜೊತೆಗೆ ಲಗ್ನ ಮಾಡಿದರು. ಸಿದ್ದಮ್ಮ ತನ್ನ ಪತಿಯನ್ನು ದೇವರೆಂದು ತಿಳಿದು ಅವನ ಸೇವೆ ಮಾಡುತ್ತಿದ್ದಳು. ಅದರಂತೆ ಪತಿಯೂ ಕೂಡ ಇಂಥ ಸತಿಯನ್ನು ಪಡೆದ ನಾನೇ ಧನ್ಯನೆಂದು ತಿಳಿದು ಅವಳನ್ನು ಗೌರವದಿಂದ ಕಾಣುತ್ತಿದ್ದನು. ಒಂದು ದಿವಸ ತಂದೆ ತಾಯಿಗಳ ಜೊತೆಗೆ ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಬಂದಾಗ ಸದ್ಗುರುಗಳು ಸಿಂಹಾಸನದ ಮೇಲೆ ಕುಳಿತಿದ್ದರು. ಆಗ ಸಿದ್ದಮ್ಮ ಸಾಷ್ಟಾಂಗ ಹಾಕಿ ಎದ್ದು ನಿಂತಾಗ ಗುರುಗಳು ಅವಳನ್ನು ಪ್ರೀತಿಯಿಂದ ನೋಡಿ ಇವಳಿಂದ ಜಗದೋದ್ಧಾರವಾಗಬೇಕಾಗಿದೆಯೆಂದುಕೊಂಡು ಮಂತ್ರದೀಕ್ಷೆಯನ್ನು ಕೊಟ್ಟು ಆಶೀರ್ವದಿಸಿ ಕಳಿಸಿದರು.
ಈ ಪ್ರಕಾರ ಸದ್ಗುರುವಿನಿಂದ ದೀಕ್ಷಾಬದ್ಧಳಾದ ಸಿದ್ದಮ್ಮ, ಲೋಕದ ಮೋಹಕ್ಕೆ ಒಳಗಾಗದ ಯಾವ ಉಡುವ ತೊಡುವ ಆಸೆಯಿರದೆ ಯಾವಾಗಲೂ ಸಿದ್ದರ ನಾಮಸ್ಮರಣೆಯಲ್ಲಿಯೇ ಕಾಲ ಕಳೆಯುತ್ತಿದ್ದಳು. ಹೀಗೆ ಕೆಲವು ವರ್ಷ ಕಳೆದರೂ ಅವಳಿಗೆ ಮಕ್ಕಳಾಗಲಿಲ್ಲ. ಆಗ ಅವಳ ತಾಯಿ ಸಿದ್ದಮ್ಮನನ್ನು ಕುರಿತು ಸಿದ್ದಮ್ಮಾ, ಇಷ್ಟು ವರ್ಷ ಕಳೆದರೂ ಮಕ್ಕಳಾಗಲಿಲ್ಲವೆಂದು ಚಿಂತಿಸುವೆಯಾ? ಎಂದಾಗ 'ಅವ್ವಾ, ನನ್ನ ಗರ್ಭದಿಂದ ಬಂದ ಮಕ್ಕಳು ಮಾತ್ರ ನನ್ನವೇ? ಹಾಗೇನಿಲ್ಲ. ಪ್ರಪಂಚದಲ್ಲಿರುವ ಎಲ್ಲ ಮಕ್ಕಳನ್ನೂ ನನ್ನ ಮಕ್ಕಳೆಂದೇ ಭಾವಿಸಿದ್ದೇವೆ' ಎಂದು ಅವಳಿಗೆ ಬುದ್ದಿ ಹೇಳುತ್ತಿದ್ದಳು. ಹೀಗೆ ಕೆಲವು ಕಾಲ ಕಳೆದ ಮೇಲೆ ತನ್ನ ಪತಿಗೆ ಯಾವುದೋ ಒಂದು ಕಾಯಿಲೆ ಬಂದು ಅವನ ದೇಹಾವಸಾನವಾಯಿತು. ಇದರಿಂದ ಸಿದ್ದಮ್ಮಳಿಗೆ ಬಹಳ ದುಃಖವಾಯಿತು. ತಂದೆ ತಾಯಿಗಳು ಇನ್ನಿತರರು ಅವಳನ್ನು ಸಂತೈಸಿ ಅಂತ್ಯಸಂಸ್ಕಾರ ಮಾಡಿದರು. ಅಂದಿನಿಂದ ಅವಳ ಅಂತರಾಳದಲ್ಲಿ ವೈರಾಗ್ಯ ಬೆಳೆದು ಸಿದ್ಧಾರೂಢರಲ್ಲಿ ಭಕ್ತಿ ಹೆಚ್ಚಾಯಿತು. ಯಾವಾಗಲೂ ಸಿದ್ಧರ ನಾಮಸ್ಮರಣೆ ಮಾಡುತ್ತಿದ್ದಳು.
ಅವಳು ಧನ್ಯಳಾಗುವ ಕಾಲ ಕೂಡಿ ಬಂದಿತು. ಒಂದು ದಿವಸ ಒಲೆಯ ಮುಂದ ಕುಳಿತು ರೊಟ್ಟಿ ಬಡಿಯುವಾಗ ಸಿದ್ದರ ನಾಮಸ್ಮರಣೆ ಮಾಡುತ್ತಿದ್ದಳು. ಆಗ ಅವಳ ಅನನ್ಯ ಭಕ್ತಿಯು ಸಿದ್ಧರ ಹೃದಯವನ್ನು ತಟ್ಟಿದ ತಕ್ಷಣ ಸಿದ್ಧರು ಅವಳ ಮುಂದೆ ಪ್ರತ್ಯಕ್ಷರಾಗಿ ಆಶೀರ್ವದಿಸಿ ಅದೃಶ್ಯರಾದರು. ಹೀಗೆ ದರ್ಶನ ಪಡೆದ ಸಿದ್ದಮ್ಮ ಒಮ್ಮೆಲೇ ಉನ್ಮತ್ತಳಾಗಿ ಎದ್ದು ಹಿಟ್ಟಿನ ಕೈಯಿಂದಲೇ ಹೊರಟು ಹುಬ್ಬಳ್ಳಿಯ ಸಿದ್ಧರ ಮಠಕ್ಕೆ ಬಂದಾಗ ಸದ್ಗುರುಗಳು ಸಿಂಹಾಸನದ ಮೇಲೆ ಕುಳಿತಿದ್ದರು. ಆಗ ಸಿದ್ದಮ್ಮ ಬಂದು ಗುರುಗಳಿಗೆ ಸಾಷ್ಟಾಂಗ ವಂದಿಸಿ ಎದ್ದು ಹಿಟ್ಟಿನ ಕೈಗಳನ್ನು ಜೋಡಿಸಿ ನಿಂತಳು. ಇದನ್ನು ನೋಡಿದ ಸಿದ್ಧರಿಗೆ ಪ್ರೇಮವುಕ್ಕಿ ನಸುನಗುತ್ತ ಅವಳನ್ನು ಹತ್ತಿರ ಕರೆದು ಮಸ್ತಕದ ಮೇಲೆ ವರದ ಹಸ್ತವನ್ನಿರಿಸಿ `ಮುದ್ದು ಮಗಳೇ, ನೀನು ಧನ್ಯಳು. ನಿನ್ನ ಭಕ್ತಿಭಾವವನ್ನು ಮೆಚ್ಚಿದ್ದೇನೆ. ನೀನು ವೈರಾಗ್ಯಶಾಲಿಯಾಗಿರುವಿ. ನಿನಗಿನ್ನು ಸಂಸಾರದ ಯಾವ ಉಪಾಧಿಗಳೂ ಉಳಿಯುವುದಿಲ್ಲ. ಇಲ್ಲಿಯೇ ಇದ್ದು ಸದ್ಗುರು ಸೇವೆ ಮಾಡುತ್ತ ಶಾಸ್ತ್ರ ಶ್ರವಣ ಮಾಡಿ ಮುಕ್ತಳಾಗು ಎಂದು ಆಶೀರ್ವದಿಸಿದರು. ಹಿಟ್ಟಿನ ಕೈಗಳಿಂದಲೇ ದರ್ಶನಕ್ಕೆ ಬಂದ ಸಿದ್ದಮ್ಮನನ್ನು ಕಂಡ ಮಠದ ಭಕ್ತರು ಚಕಿತಗೊಂಡರು. ಮುಂದೆ ಸಿದ್ದಮ್ಮ, ಮಠದಲ್ಲಿಯೇ ಇದ್ದು ಸಣ್ಣ ದೊಡ್ಡ ಸೇವೆಗಳೆನ್ನದೇ ಎಲ್ಲ ಸೇವೆಗಳನ್ನು ನಿಷ್ಠೆಯಿಂದ ಮಾಡುತ್ತ ಶಾಸ್ತ್ರ ಶ್ರವಣ ಮಾಡುತ್ತಿದ್ದಳು.
ಹೀಗೆ ಕೆಲವು ಕಾಲ ಕಳೆದ ಮೇಲೆ ಒಂದು ದಿವಸ ಸದ್ಗುರುಗಳು ಅವಳನ್ನು ಕರೆದು ಮಗಳೇ, ಇನ್ನು ಮುಂದೆ ನೀನು ನನ್ನ ಶಿಷ್ಯನಾದ ಅಣ್ಣಿಗೇರಿ ದಾಸೋಹ ಮಠದ ರುದ್ರಸ್ವಾಮಿಗಳ ಸೇವೆಗಾಗಿ ಹೋಗು' ಎಂದರು. ಆಗ ಸಿದ್ದಮ್ಮ 'ಸದ್ಗುರುವೇ ಎಲ್ಲವೂ ನಿನ್ನ ಪಾದದಲ್ಲಿರುವಾಗ ನಾನು ಮತ್ತೆಲ್ಲಿ ಹೋಗಲಿ? ನಿಮ್ಮನ್ನು ಬಿಟ್ಟು ನಾನಲ್ಲಿಯೂ ಹೋಗಲಾರೆ ' ಎಂದಳು. ಆಗ ಸದ್ಗುರುಗಳು "ಸಿದ್ಧಮಾ, ರುದ್ರಸ್ವಾಮಿಗಳು ಬೇರೆ ನಾನು ಬೇರೆಯೆಂದು ತಿಳಿದಿರುವೆಯಾ? ಹಾಗೇನಿಲ್ಲ, ನಾವು ಆ ರೂಪದಿಂದ ಅಲ್ಲಿದ್ದೇನೆ. ಭಿನ್ನಮತಿಯನ್ನು ಬಿಟ್ಟು ಅಲ್ಲಿಗೆ ಹೋಗು, ನಿನ್ನಿಂದ ಬಹಳ ಕಾರ್ಯವಾಗಬೇಕಾಗಿದೆ' ಎಂದು ಆಶೀರ್ವದಿಸಿದರು. ಆಗ ಸದ್ಗುರುಗಳ ವಚನವನ್ನು ಭಕ್ತಿಯಿಂದ ತನ್ನ ಶಿರದಲ್ಲಿರಿಸಿಕೊಂಡು ಅನ್ನಗಿರಿಗೆ (ಅಣ್ಣೀಗೇರಿಗೆ) ಬಂದಳು. ಆಗ ದಾಸೋಹ ಮಠದಲ್ಲಿ ರುದ್ರಸ್ವಾಮಿಗಳ ಶಿಷ್ಯ ತೋಟಪ್ಪ ದೇಸಾಯಿಯವರಿದ್ದು, ಅವರಿಗೆ ನಮಿಸಿ ಬಂದ ವಿಚಾರವನ್ನು ತಿಳಿಸಿದಳು. ಆಗ ದೇಸಾಯಿಯವರು ಹೇಳಿದರು ಸಿದ್ದಮ್ಮಾ, ಸ್ವಾಮಿಗಳು ರುದ್ರಭೂಮಿಯಲ್ಲಿದ್ದಾರೆ. ಈಗ ನೀನು ಊಟ ಮಾಡಿ ಇಲ್ಲಿಯೇ ಇರು' ಎಂದರು. ಆಗ ಸಿದ್ದಮ್ಮ ವಿಚಾರ ಮಾಡುತ್ತ ಸ್ವಾಮಿಗಳು ನನ್ನನ್ನು ಪರೀಕ್ಷಿಸಲು ಹೀಗೆ ಮಾಡಿರಬಹುದೆಂದು ತಿಳಿದು ತೋಟಪ್ಪನವರಿಗೆ `ರುದ್ರಗುರುಗಳು ತಾವೇ ಇಲ್ಲಿಗೆ ಬಂದು ನನಗೆ ದರ್ಶನ ಕೊಡುವವರೆಗೆ ಊಟ ಮಾಡುವುದಿಲ್ಲವೆಂದು ಶಪಥ ಮಾಡಿದ್ದೇನೆ' ಎಂದು ಮೂರು ದಿವಸ ಮಠದಲ್ಲಿ ಉಪವಾಸವಿದ್ದಳು.
ಈ ಸುದ್ದಿ ರುದ್ರಸ್ವಾಮಿಗಳಿಗೆ ತಿಳಿದು ಮಠಕ್ಕೆ ಬಂದಾಗ ಸಿದ್ದಮ್ಮ ಅವರನ್ನು ಕಂಡು ಸಾಷ್ಟಾಂಗ ನಮಿಸಿ ನಿಂತಳು. ಆಗ ಸ್ವಾಮಿಗಳು 'ಮಗಳೇ, ನೀನು ಯಾರು? ಇಲ್ಲಿಗೇಕೆ ಬಂದೆ' ಎಂದು ಪ್ರಶ್ನಿಸಿದಾಗ ಸಿದ್ದಮ್ಮ ಹೇಳಿದಳು, 'ತಂದೆ, ನಾನು ತರಲಗಟ್ಟಿ ಗ್ರಾಮದವಳು. ನನ್ನ ಹೆಸರು ಸಿದ್ದಮ್ಮ, ಶ್ರೀ ಸಿದ್ಧಾರೂಢರ ಆಜ್ಞೆಯಂತೆ ತಮ್ಮ ಸೇವೆಗಾಗಿ ಬಂದಿದ್ದು, ನಾನು ಇಲ್ಲಿಯೇ ಇರುತ್ತೇನೆ' ಎಂದಳು. ಆಗ ಸ್ವಾಮಿಗಳು ಸಂತೋಷಪಟ್ಟು ಸಮ್ಮತಿಸಿದರು. ಮುಂದೆ ಅಲ್ಲಿಯೇ ಸೇವೆ ಮಾಡುತ್ತ ಶಾಸ್ತ್ರ ಕೇಳುತ್ತ ಶಾಸ್ತ್ರದಲ್ಲಿ ಬಂದ ಸಂಶಯಗಳನ್ನು ನಿವಾರಿಸಿಕೊಂಡು ಧನ್ಯಳಾದಳು. ನಂತರ ತರಲಗಟ್ಟಿಗೆ ಹೋಗಿ ತನ್ನ ಹೊಲ ಮನೆ, ಎಲ್ಲ ಆಸ್ತಿಗಳನ್ನು ಮಾರಿ ಹಣ ತಂದು ಏಳು ಕೂರಿಗೆ ಹೊಲವನ್ನು ಕೊಂಡು ಮಠಕ್ಕೆ ದಾನವಾಗಿ ಕೊಟ್ಟಳು. ಉಳಿದ ಹಣದಿಂದ ಪಾಕಶಾಲೆಯನ್ನೂ ಕಟ್ಟಿಸಿದಳು. ಅನೇಕ ವರ್ಷ ಕಳೆದ ಮೇಲೆ ಅವಳ ಶರೀರ ಕ್ಷೀಣಿಸಿತು. ಆಗ ಸಿದ್ದಮ್ಮ ರುದ್ರಮುನಿಗಳ ಪಾದಗಳಲ್ಲಿ ದೃಷ್ಟಿಯನ್ನಿಟ್ಟು, ನಮಿಸುತ್ತ ಪಂಚಾಕ್ಷರಿ ಮಂತ್ರ ಪಠಿಸುತ್ತ ದೇಹತ್ಯಾಗ ಮಾಡಿದಳು. ಆಗ ಭಕ್ತರು ಶೋಕಗೊಂಡಾಗ ಸ್ವಾಮಿಗಳು ಹೇಳಿದರು ಭಕ್ತರೇ, ಸಿದ್ದಮ್ಮ ಬ್ರಹ್ಮಜ್ಞಾನಿಯಾಗಿ ಮುಕ್ತಳಾಗಿದ್ದಾಳೆ. ಅವಳ ಶರೀರ ಕಳಚಿತು. ಆದರೆ ಅವಳು ಅಮರಳಾಗಿದ್ದಾಳೆ. ಯಾರೂ ಶೋಕಿಸಬೇಡಿರಿ' ಎಂದು ಹೇಳಿದರು. ನಂತರ ಅವಳ ಶರೀರವನ್ನು ಶೃಂಗರಿಸಿ ಊರಲ್ಲಿ ಮೆರವಣಿಗೆ ಮಾಡುತ್ತ ಬಂದು ಗುರುವಿನಾಕ್ಷೆಯ ಪ್ರಕಾರ ಅವಳ ಗದ್ದುಗೆ ಕಟ್ಟಿಸಿ ಪೂಜಿಸಿದರು. ಹೀಗೆ ಸಿದ್ದಮ್ಮ ಸಿದ್ಧಾರೂಢರ ಕೃಪೆಯಿಂದ ಮುಕ್ತಳಾದಳು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
