ಸಿದ್ಧಾರೂಢರು ಕುದರೆ ಸವಾರರಾಗಿ ಶಂಕರ ಶಾಸ್ತ್ರಿಗಳ ಮಗನ ರಕ್ಷಣೆ ಮಾಡಿದ ಕಥೆ
🌺 ಶಂಕರ ಶಾಸ್ತ್ರಿಗಳ ಮಗನ ರಕ್ಷಣೆ 🌺
ಆ ದಿವಸದಿಂದ ಶಾಸ್ತ್ರಿಗಳು ವಿಶೇಷ ಗುರುಸೇವೆ ಮಾಡಬೇಕೆಂದು ಹಳೇಹುಬ್ಬಳ್ಳಿಯಲ್ಲಿಯೇ ಮನೆ ಮಾಡಿ ಇರಹತ್ತಿದರು. ಶಾಸ್ತ್ರಿಗಳಿಗೆ ಮೇಲಿಂದ ಮೇಲೆ ಗುರುದರ್ಶನವಾಗ ಹತ್ತಿತು. ಮಠದಲ್ಲಿಯ ಭಾಗವತ ಸಪ್ತಾಹದಿಂದ ಖ್ಯಾತರಾದರು. ಒಂದು ದಿನ ಶಾಸ್ತ್ರಿಗಳ ತಾಯಿ ಭೀಮಾಬಾಯಿ ತನ್ನ ಮೊಮ್ಮಗ ಹರಿಯನ್ನು ಕರೆದು ಬ್ರಹ್ಮಪುರಿಯಲ್ಲಿ ನಮ್ಮ ಆಪ್ತರಿದ್ದಾರೆ. ಅಲ್ಲಿಗೆ ಹೋಗಿ ಒಂದು ವಿಷಯವನ್ನು ತಿಳಿಸಿ ಬರಬೇಕು' ಎಂದು ಹೇಳಿದಳು. ಆಗ ಹನ್ನೆರಡು ವರ್ಷದ ಬಾಲಕ ಸಾಯಂಕಾಲ ದೀಪ ಹಚ್ಚುವ ಸಮಯ ಬ್ರಹ್ಮಪುರಿಗೆ ಹೋಗಿ ಆಪ್ತರಿಗೆ ಅಜ್ಜಿ ಹೇಳಿದ ವಿಷಯ ತಿಳಿಸಿ ಮನೆಗೆ ಹೋಗಲು ಸಿದ್ಧನಾದನು. ಆಗ ಆಪ್ತರು `ಈಗ ಸಂಜೆಯಾಗಿದೆ. ನಾಳೆ ಮುಂಜಾನೆ ಹೋಗು' ಎಂದರು. ಬಾಲಕ `ಇಲ್ಲ ನಾನು ಕತ್ತಲಾಗುವುದರೊಳಗಾಗಿ ಮನೆಗೆ ತಲುಪುತ್ತೇನೆ' ಎಂದು ಹೇಳಿ ಹೊಸ ಹುಬ್ಬಳ್ಳಿ ಬಿಟ್ಟು ಹಳೇಹುಬ್ಬಳ್ಳಿ ಮಾರ್ಗ ಮರೆತು ಉಣಕಲ್ಲ ಮಾರ್ಗ ಹಿಡಿದು ಬಹುದೂರದವರೆಗೆ ನಡೆದರೂ ಒಂದು ಮನೆಯೂ ಕಾಣಿಸುತ್ತಿಲ್ಲ. ಅದರಲ್ಲಿ ಕತ್ತಲು ಬೇರೆ, ಉಣಕಲ್ಲ ಸಮೀಪ ಹೋಗಿದ್ದು ನಡೆದು ಕಾಲುಗಳು ಸುಸ್ತಾಗಿದ್ದವು. ಅಲ್ಲಿ ಒಬ್ಬರು ಭೇಟಿಯಾದಾಗ ಕೇಳಿದ ಹಳೇಹುಬ್ಬಳ್ಳಿಯ ಮಾರ್ಗ ಯಾವುದು' ಎಂದು ಆಗವರು 'ಮಗೂ, ನೀನು ದಾರಿ ತಪ್ಪಿ ಉಣಕಲ್ಲ ಸಮೀಪ ಬಂದಿರುವೆ' ಎಂದಾಗ ಆ ಬಾಲಕ ಗಾಬರಿಯಾಗಿ ಅಳಹತ್ತಿದನು. ಆಗ ರಾತ್ರಿ ಎಂಟು ಗಂಟೆಯಾಗಿತ್ತು.
ಇತ್ತ ಬಾಲಕನ ಅಜ್ಜಿ 'ಹುಡುಗ ಹೋಗಿ ಬಹಳ ಹೊತ್ತಾಯಿತು. ಏಕೆ ಬರಲಿಲ್ಲ' ಎಂದು ಚಿಂತಿಸುತ್ತ ಕುಳಿತಿದ್ದಳು. ಆಗ ಶಾಸ್ತ್ರಿಗಳು 'ಅವ್ವಾ ಅವನು ಆಪ್ತರ ಮನೆಯಲ್ಲಿರಬಹುದು. ನಾವೇಕೆ ಕಾಳಜಿ ಮಾಡಬೇಕು? ನಾಳೆ ಬಂದೇ ಬರುತ್ತಾನೆ ಎಂದರು. ಆಗ ಭೀಮಾಬಾಯಿ `ಇಲ್ಲ ಮಗೂ, ನಾನು ಹೋಗಿ ನೋಡುವವರೆಗೆ ಸಮಾಧಾನವಾಗುವುದಿಲ್ಲ. ಹೋಗೋಣ ನಡೆ' ಎಂದು ಇಬ್ಬರೂ ಕೂಡಿ ಬ್ರಹ್ಮಪುರಿಗೆ ಹೋಗಿ ತನ್ನ ಆಪ್ತರಿಗೆ ಹರಿ, ಎಲ್ಲಿದ್ದಾನೆ?' ಎಂದು ಕೇಳಿದಾಗ ಅವರು ಹೇಳಿದರು `ಹುಡುಗ ನೀವು ಹೇಳಿ ಕಳಿಸಿದ ವಿಷಯವನ್ನು ಹೇಳಿ ಹೋಗುವಾಗ ನಾವು ಈಗ ಹೋಗಬೇಡ, ನಾಳೆ ಹೋಗು ಎಂದು ಹೇಳಿದರೂ ಕೇಳದೇ ಹೊಗಿ ಬಹಳ ಹೊತ್ತಾಯಿತು' ಎಂದರು. ಶಾಸ್ತ್ರಿಗಳು ಮತ್ತು ಭೀಮಾಬಾಯಿ ಚಿಂತಿಸುತ್ತ ಬಾಲಕ ಇಷ್ಟು ಹೊತ್ತಾದರೂ ಬರಲಿಲ್ಲ. ರಾತ್ರಿ ಹತ್ತು ಗಂಟೆಯಾಗಿದೆ. ಎಲ್ಲಿ ಹುಡುಕಬೇಕು ಎಂದಾಗ ಭೀಮಾಬಾಯಿ ಅಳಹತ್ತಿದಳು. ಇಬ್ಬರೂ ಕೂಡಿ ಮನೆಗೆ ಬಂದು ಗುರುಗಳನ್ನು ನೆನೆಯುತ್ತ 'ಹೇ ದೀವರಕ್ಷಕ, ನಮಗೆ ಮಾತಾ ಪಿತಾ ಸರ್ವಸ್ವವೂ ನೀನೇ ಇದ್ದು ಹರಿಯನ್ನು ನೀನೇ ರಕ್ಷಿಸು' ಎಂದು ಮೊರಯಿಟ್ಟರು.
ಅತ್ತ ಬಾಲಕ ಹರಿಯು ಅಳುತ್ತ ಮಾರ್ಗದಲ್ಲಿ ನಿಂತಿದ್ದನು. ಆಕಳಕರು ಅಂಬಾಯೆಂದಾಗ ಅದರ ತಾಯಿ ಹೇಗೆ ಓಡಿ ಬರುವುದೋ ಅದರಂತೆ ಸಿದ್ದ ಗುರುಗಳು ಧಾವಿಸಿದರು. ಕುದುರೆ ಸವಾರನ ವೇಷದಲ್ಲಿ ಕುದುರೆ ತೆಗೆದುಕೊಂಡು ಬಾಲಕನ ಮುಂದೆ ಪ್ರತ್ಯಕ್ಷನಾಗಿ `ಮಗೂ ನೀನು ಯಾರು? ನಿನ್ನ ತಂದೆಯ ಹೆಸರೇನು? ವಾಸವಾಗಿದ್ದಿ?' ಎಂದು ಕೇಳಿದಾಗ ಬಾಲಕನಿಗೆ ಸಮಾಧಾನವಾಗಿ, ತಂದೆಯ ಹೆಸರು. ಮನೆಯ ವಿಳಾಸ ತಿಳಿಸಿದನು. ಗುರುಗಳು ಬಾಲಕನನ್ನು ಕುದುರೆಯ ಮೇಲೆ ಕುಳ್ಳಿರಿಸಿ ತಾವು ಕುದುರೆಯ ಲಗಾಮು ಹಿಡಿದು ಕರೆದುಕೊಂಡು ಬಂದು ಶಾಸ್ತ್ರಿಗಳ ಮನೆಯ ಮುಂದೆ ಬಿಟ್ಟು ಈಗ ನೀನು ಹೋಗು. ನಾನಿರುವುದು ಮಠದಲ್ಲಿ' ಎಂದು ಹೇಳಿ ಅದೃಶ್ಯರಾದರು.
ಆಗ ಬಾಲಕ ಹರಿಯು ತಂದೆಯೇ ಬಾಗಿಲು ತೆಗೆಯಿರಿ' ಎಂದು ಕೂಗಿದಾಗ ಶಾಸ್ತ್ರಿಗಳು ಬಾಗಿಲು ತೆರೆದು ಹುಡುಗನನ್ನು ಒಳಗೆ ಕರೆದುಕೊಂಡು ಕೇಳಿದರು `ಮಗೂ, ಎಲ್ಲಿಗೆ ಹೋಗಿದ್ದೆ? ನಾವು ನಿನ್ನ ಚಿಂತೆಯನ್ನೇ ಮಾಡುತ್ತಿದ್ದೆವು' ಎಂದರು. ಆಗ ಬಾಲಕನು ನಡೆದ ವೃತ್ತಾಂತವನ್ನು ತಿಳಿಸಿ ಒಬ್ಬ ಮಹನೀಯರು ಕರೆದುಕೊಂಡು ಬಂದರು. ಅವರು ಇಲ್ಲಿಯೇ ಹೊರಗೆ ಇರಬಹುದು ತೋರಿಸುತ್ತೇನೆ ಬಾ' ಎಂದು ಹೊರಗೆ ಬಂದಾಗ ಗುರುಗಳು ಇರಲಿಲ್ಲ. ನಾಲ್ಕೂ ದಿಕ್ಕಿನಲ್ಲಿ ಹುಡುಕಿದರೂ ಸಿಗಲಿಲ್ಲ. ಆಮೇಲೆ ಮನೆಯೊಳಗೆ ಹೋದಾಗ ಭೀಮಾಬಾಯಿ ಮಗುವನ್ನು ನೋಡಿ ಸಮಾಧಾನಗೊಂಡಳು. ಶಾಸ್ತ್ರಿಗಳು ಹೇಳಿದರು `ಸಿದ್ಧಾರೂಢನೇ ನಮ್ಮ ಮಗುವನ್ನು ನಿಶ್ಚಿತವಾಗಿ ಕಾಪಾಡಿದ್ದಾನೆ. ಇದರಲ್ಲಿ ಯಾವ ಸಂಶಯವಿಲ್ಲ. ಅವನಲ್ಲದೆ ನಮಗೆ ಯಾರು ಗತಿ' ಎಂದು ಗುರುಗಳನ್ನು ಸ್ತುತಿಸಿದರು.
ಮರುದಿನ ಶಾಸ್ತ್ರಿಗಳು ಮಠಕ್ಕೆ ಹೋಗಿ ಗುರುಗಳಿಗೆ ನಮಿಸಿ ನಡೆದ ಘಟನೆಯನ್ನು ತಿಳಿಸಿದಾಗ ಅವರು `ಶಾಸ್ತ್ರಿಗಳ, ನಿಮ್ಮ ಭಕ್ತಿ ಅಮಿತ ಮತ್ತು ಅಚಲವಾಗಿದ್ದುದರಿಂದ ಗುರುನಾಥನು ಕಾಪಾಡಿದ್ದಾನೆ. ಗುರುಪದವನ್ನು ಶುದ್ಧಭಾವದಿಂದ ಸೇವಿಸುವವರಿಗೆ ಅವನು ಎಂದೂ ಕೈ ಬಿಡುವುದಿಲ್ಲ' ಎಂದು ಆಭಯವಿತ್ತರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
👉ಮುಾರು ಸೇರು ಅಕ್ಕಿಯ ಅನ್ನವನ್ನು ನೂರಾಐವತ್ತು ಜನರುಂಡರು
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
👉ಸಿದ್ಧಾರೂಢ ಭಾಗವತ ಎಲ್ಲಾ ಲೀಲಾಕಥೆ ಸಂಗ್ರಹ 📲
ಮೇಲಿನ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
