ಸಿದ್ಧರ ಕರುಣೆಯ ಕಂದ ರಾಮಾರೂಢರು
🌺 ಸಿದ್ಧರ ಕರುಣೆಯ ಕಂದ ರಾಮಾರೂಢರು 🌺
ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕು ಅಲಮೇಲ ಗ್ರಾಮದ ಗಂಗಾಮತಸ್ಥ ಭಗವದ್ಭಕ್ತರಾದ ಶ್ರೀ ಭೀಮಸೇನಪ್ಪ ಮತ್ತು ಅವರ ಪತ್ನಿ ದೊಡ್ಡಮ್ಮ ದೇವಿಯವರು ತಮ್ಮ ಇಷ್ಟದೇವರಾದ ರಾಮಲಿಂಗೇಶ್ವರನ ಪರಮ ಭಕ್ತರಾಗಿದ್ದರು. ಅದರಂತೆ ನೀತಿ ಧರ್ಮಾ ಚರಣೆಗಳನ್ನು ಮೈಗೂಡಿಸಿಕೊಂಡು ಸಂಸಾರ ಸಾಗಿಸುತ್ತಿದ್ದರು. ಹೀಗಿರುವಾಗ ಸಾದ್ವಿ ದೊಡ್ಡಮ್ಮನವರಿಗೆ ರಾತ್ರಿ ಕನಸಿನಲ್ಲಿ ಶ್ರೀ ರಾಮಲಿಂಗ ದೇವರು ಬಂದು ದೊಡ್ಡಮ್ಮ, ನಿನ್ನ ಪವಿತ್ರ ಗರ್ಭದಿಂದ ಜಗತ್ತಿನ ಜೀವರನ್ನು ಉದ್ದಾರ ಮಾಡುವಂಥ ಸತ್ತುತ್ರನು ಜನಿಸುತ್ತಾನೆ. ಇದು ನನ್ನ ಆಶೀರ್ವಾಣಿಯಾಗಿದೆ' ಎಂದು ಹೇಳಿ ಅದೃಶ್ಯನಾದನು. ಮರುದಿನ ದೊಡ್ಡಮ್ಮನು ತನ್ನ ಪತಿ ಭೀಮಸೇನನಿಗೆ ತನ್ನ ಕನಸಿನ ವಿಚಾರ ತಿಳಿಸಿದಾಗ, ಅವರೂ ಸಂತೋಷಗೊಂಡರು. ಅಂದಿನಿಂದ ಅವರಲ್ಲಿ ಭಗವದ್ಭಕ್ತಿ ಹೆಚ್ಚಾಯಿತು. ಮುಂದೆ ದೊಡ್ಡಮ್ಮನವರ ಗರ್ಭದಲ್ಲಿ ಒಂದು ಗಂಡು ಮಗು ಜನಿಸಿತು. ರಾಮಲಿಂಗ ದೇವರ ವರದಿಂದ ಜನಿಸಿದ ಆ ಮಗುವಿಗೆ ರಾಮಲಿಂಗ ಸ್ವಾಮಿಯಂದು ನಾಮಕರಣ ಮಾಡಿದರು. ಬಿದಿಗೆಯ ಚಂದಿರನಂತೆ ಬೆಳೆದ ರಾಮಲಿಂಗನಿಗೆ ಚಿಕ್ಕಂದಿನಿಂದಲೇ ಅಧ್ಯಾತ್ಮದ ಒಲವಿರುವುದರಿಂದ ಭಜನೆ, ಕೀರ್ತನೆ ಹಾಗೂ ಸತ್ಸಂಗದಲ್ಲಿ ಬೆಳೆದು ದೊಡ್ಡವನಾದನು. ಮುಂದೆ ವಿದ್ಯಾ ವ್ಯಾಸಂಗ ಮಾಡಿ ಪ್ರಾರಬ್ಬ ಕರ್ಮದಂತೆ ಪೊಲೀಸ್ ಇಲಾಖೆಯಲ್ಲಿ ಕೆಲಕಾಲ ನೌಕರಿ ಮಾಡಿದನು. ನಂತರ ತಂದೆ ತಾಯಿಗಳ ಪ್ರಬಲ ಇಚ್ಛೆಯನ್ನು ನಿರಾಕರಿಸದೆ ಪರೇಚ್ಛಾ ಪ್ರಾರಬ್ಬದಂತೆ ಲಗ್ನ ಮಾಡಿಕೊಂಡು ಗ್ರಹಸ್ಥ ಜೀವನ ಸಾಗಿಸುತ್ತ ನಾವದಗಿಯ ಭೋಜಲಿಂಗ ಸ್ವಾಮಿಗಳಿಂದ ಲಿಂಗದೀಕ್ಷೆಯನ್ನು ಪಡೆದರು.
ರಾಮಲಿಂಗರ ಅಂತಃಕರಣದಲ್ಲಿ ಪ್ರಬಲ ವೈರಾಗ್ಯವಿರುವುದರಿಂದ ಎಲ್ಲವನ್ನೂ ತೊರೆದು ಉತ್ತರ ಭಾರತದ ಅನೇಕ ತೀರ್ಥಕ್ಷೇತ್ರಗಳಲ್ಲಿ ತಿರುಗಿ ಮರಳಿ ವಿಜಾಪುರಕ್ಕೆ ಬಂದರು. ಅಲ್ಲಿ ಶ್ರೀ ಸಿದ್ಧಾರೂಢರ ಪರಮ ಶಿಷ್ಯರಾದ ಶ್ರೀ ಷಣ್ಮುಖಾರೂಢರ ದರ್ಶನ ಪಡೆದು ಅವರ ಮಠದಲ್ಲಿದ್ದು ಅವರ ಇಚ್ಛೆಯಂತೆ ಶ್ರೀ ನಿಜಗುಣಶಾಸ್ತ್ರ ಮತ್ತು ನಿಶ್ಚಲದಾಸವಿರಚಿತ ವಿಚಾರ ಸಾಗರ ಗ್ರಂಥಗಳನ್ನು ಅಭ್ಯಾಸ ಮಾಡಿ ಮುಮುಕ್ಷುಗಳಿಗೆ ಬೋಧಿಸುತ್ತಿದ್ದರು. ಮುಂದೆ ಸಿದ್ದಾರೂಢರ ಕೀರ್ತಿಯನ್ನು ಕೇಳಿ ಶ್ರೀ ರಾಮಲಿಂಗರು ಷಣ್ಮುಖಾರೂಢರ ಅನುಮತಿ ಪಡೆದು ಹುಬ್ಬಳ್ಳಿಯ ಸಿದ್ದರ ಮಠಕ್ಕೆ ಬಂದು ಶ್ರೀಗಳಿಗೆ ಶರಣಾಗತನಾಗಿ ಸಿದ್ಧರಿಗೆ ವಿಶೇಷ ಭಕ್ತಿ ಸಲ್ಲಿಸಿ ಅವರ ಸೇವೆ ಮಾಡುತ್ತ ಗುರುಗಳಿಂದ ತತ್ವಜ್ಞಾನ ತಿಳಿದು ಅವರ ಕೃಪೆಗೆ ಪಾತ್ರರಾಗಿ ಮುಮುಕ್ಷುಗಳಿಗೆ ಬೋಧಿಸುತ್ತಿದ್ದರು.
ಹೀಗೆ ಕೆಲವು ಕಾಲ ಕಳೆದ ನಂತರ ನೋಡಿ ಕೆಲರಂ, ಮುಟ್ಟಿ ಕೆಲರಂ, ಮಾತನಾಡಿ ಕೆಲರಂ ಉದ್ಧರಿಸುವ ಸದ್ಗುರು ಸಿದ್ದಾರೂಢರು ರಾಮಲಿಂಗನ ಸೇವೆ ಮತ್ತು ತತ್ವ ಚಿಂತನೆಯನ್ನು ಮೆಚ್ಚಿಕೊಂಡು ಒಂದು ದಿವಸ ಅವರನ್ನು ಕರೆದು ಸ್ನಾನ ಮಾಡಿಸಿ ತಮ್ಮ ಜೊತೆಗೆ ಸಿಂಹಾಸನದಲ್ಲಿ ಕೂಡಿಸಿ ವಿಭೂತಿಯನ್ನು ಹಚ್ಚಿಸಿ ಮಾಲೆ ತೊಡಿಸಿ ಪೀತಾಂಬರ ಹೊದಿಸಿ ತಮ್ಮ ಕಿರೀಟವನ್ನು ಅವರ ಮಸ್ತಕದಲ್ಲಿರಿಸಿ ಆರತಿ ಮಾಡಿಸಿದರು. ಶ್ರೀ ರಾಮಲಿಂಗರ ವೃತ್ತಿ ಯಾವಾಗಲೂ ಬ್ರಹ್ಮದಲ್ಲಿ ಆರೂಢವಾಗಿರುವುದರಿಂದ ರಾಮಾರೂಢರೆಂಬ ನಾಮಕರಣ ಮಾಡಿದರು. ನಂತರ ರಾಮಾರೂಢರಿಗೆ ಹೀಗೆ ಬೋಧಿಸುತ್ತ `ಮಗು ರಾಮಾರೂಢ ನೀನು ಎಲ್ಲರಂತೆ ನರನಲ್ಲ. ಹರನೇ ನೀನಾಗಿದ್ದು ಜಗತ್ತಿನ ಜೀವರು ಸಂಸಾರ ಬಂಧನದಲ್ಲಿ ಸಿಲುಕಿ ಬಳಲುತ್ತಿದ್ದಾರೆ. ಅಂಥವರನ್ನು ಉದ್ಧರಿಸುವ ಪವಿತ್ರ ಕಾರ್ಯವನ್ನು ಮಾಡಬೇಕು. ಬಿಜಾಪುರ ಬಾಗಲಕೋಟೆಯ ಸುತ್ತಲಿನ ಪ್ರದೇಶವನ್ನು ನಿನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೋ. ಇನ್ನು ನೀನು ವಿಜಾಪುರದ ಷಣ್ಮುಖಾರೂಢರ ಮಠಕ್ಕೆ ಹೋಗು' ಎಂದು ಆಶೀರ್ವದಿಸಿದರು,
ಆಗ ರಾಮಾರೂಢರು ಎದ್ದು ತಕ್ಷಣ ಗುರುಗಳಿಗೆ ಪ್ರದಕ್ಷಿಣೆ ಹಾಕುತ್ತ ಓ ಚೈತನ್ಯಂ ಶಾಶ್ವತ೦ ಶಾಂತಂ ಯ್ಯೋಮಾತೀತಂ ನಿರಂಜನಂ ನಾದ ಬಿಂದು ಕಲಾತೀತ0 ತಸ್ಮಶ್ರೀ ಗುರುವೇ ನಮಃ ಎನ್ನುತ್ತ ಅವರಿಗೆ ಸಾಷ್ಟಾಂಗ ನಮಿಸಿ ಅನೇಕ ಮಂಗಲಕರ ನುಡಿಗಳಿಂದ ಸ್ತೋತ್ರಗೈಯುತ್ತ ಅವರ ಆಜ್ಞೆಯನ್ನು ಶಿರಸಾವಹಿಸಿ ಅಲ್ಲಿಂದ ಹೊರಟು ಮತ್ತೆ ಷಣ್ಮುಖಾರೂಢರ ಮಠಕ್ಕೆ ಬಂದರು.
ಅಲ್ಲಿ ರಾಮಾರೂಢರು ಕೆಲವು ವರ್ಷ ವೇದಾಂತ ಶಾಸ್ತ್ರ ಬೋಧಿಸುತ್ತಿದ್ದರು. ಮುಂದ ಶ್ರೀಶೈಲಕ್ಕೆ ಹೋಗಬೇಕೆಂಬ ಅಂತಃಪ್ರೇರಣೆಯಾದುದರಿಂದ ಅಲ್ಲಿಂದ ಹೊರಟು ಬಾಗಿಲುಕೋಟೆಯ ಸಮೀಪ ಹವೇಲಿಯೆಂಬ ಸ್ಥಳಕ್ಕೆ ಬಂದು ಡಬ್ಬಗಳ್ಳಿಯಿಂದ ಕೂಡಿದ ಪತ್ರಿ ವನವನ್ನು ನೋಡಿ ಅತ್ಯಾನಂದವಾಗಿ ಅಲ್ಲಿಯೇ ಕುಳಿತು ನಿಧಿಧ್ಯಾಸನ ಮಾಡುತ್ತ ಅಲ್ಲಿಯೇ ಉಳಿದರು. ಆ ಭಾಗದ ಜನರು ಸಿದ್ಧರಲ್ಲಿಗೆ ಬಂದು ಮಂತ್ರೋಪದೇಶ ಮಾಡಬೇಕೆಂದು ಬೇಡಿಕೊಂಡಾಗ ಸಿದ್ದರು ಹೇಳುತ್ತ ಭಕ್ತರೇ, ನಿಮ್ಮ ಊರಿನ ಸಮೀಪದಲ್ಲಿಯೇ ರಾಮಾರೂಢರಿದ್ದಾರೆ. ನಾನು ಮಾಡುವ ಉಪದೇಶವನ್ನು ಅವರೇ ಮಾಡುತ್ತಾರೆ. ಅಲ್ಲಿಗೆ ಹೋಗಿರಿ' ಎಂದು ಕಳಿಸುತ್ತಿದ್ದರು.
ಅದನ್ನು ಕೇಳಿದ ಬಾಗಲಕೋಟೆಯ ಭಕ್ತರು ರಾಮಾರೂಢರ ವಾಸಸ್ಥಳಕ್ಕೆ ಬಂದು ಅವರನ್ನು ಅನನ್ಯ ಭಕ್ತಿಯಿಂದ ಕಂಡು 'ಸದ್ಗುರುವೇ, ನಾವು ಸಿದ್ಧರ ಆಜ್ಞೆಯಂತೆ ನಿಮ್ಮಲ್ಲಿ ಬಂದಿದ್ದೇವೆ. ನಮ್ಮನ್ನು ಉದ್ಧರಿಸಿರಿ' ಎಂದು ಪರಿಪರಿಯಿಂದ ಮೇಲಿಂದ ಮೇಲೆ ಬೇಡಿಕೊಂಡಾಗ ಗುರುಗಳು ಬಹುರ್ಮುಖರಾಗಿ ಆಶೀರ್ವದಿಸಿದರು, ಮುಂದೆ ಭಕ್ತರು ಅಲ್ಲಿರುವ ಡಬ್ಬಗಳ್ಳಿಗಳನ್ನು ಕಡಿದು ಸ್ವಚ್ಛ ಮಾಡಿ ಒಂದು ಕುಟೀರವನ್ನು ನಿರ್ಮಿಸಿದರು. ಮುಮುಕ್ಷುಗಳ ಇಚ್ಛೆಯಂತೆ ರಾಮಾರೂಢರು ನಿತ್ಯ ಎರಡು ಸಲ ವೇದಾಂತ ಶಾಸ್ತ್ರ ಉಪದೇಶ ಪ್ರಾರಂಭಿಸಿದರು. ಅವರ ವಚನಾಮೃತ ಪಾನ ಮಾಡಿದ ಶಿಷ್ಯರು, ಭಕ್ತರು ಆಮೇಲೆ ಮಲ್ಕಾಪುರ ಸೀಮೆಯಲ್ಲಿ ಶ್ರೀ ಮತ್ಪರಮಹಂಸ ರಾಮಾರೂಢ ಮಠವನ್ನು ಕಟ್ಟಿದರು. ಅಲ್ಲಿ ಯಾವ ಜಾತಿ ಮತ ಪಂಥಗಳನ್ನಣಿಸದೆ ಶ್ರೀ ಗುರು ಸಿದ್ಧಾರೂಢರ ಪರಂಪರೆಯಂತೆ ನಾಮಸ್ಮರಣೆ, ಅದ್ವೈತ ಶಾಸ್ತ್ರ ಪ್ರವಚನ ಜರುಗಿಸುತ್ತ ಲೋಕೋದ್ಧಾರ ಕಾರ್ಯ ಪ್ರಾರಂಭಿಸಿದರು.
ಮುಂದೆ ಶ್ರೀ ನಿಜಗುಣ ಶಿವಯೋಗಿಗಳ ತಪೋಭೂಮಿಯಾದ ಕೊಳ್ಳೆಗಾಲ ತಾಲೂಕಿನ ಚಿಲುಕವಾಡಿ ಗ್ರಾಮದ ನಿಕಟವಿರುವ ಶಂಭುಲಿಂಗನ ಬೆಟ್ಟಕ್ಕೆ ತಮ್ಮ ಶಿಷ್ಯ ಚಿದ್ಗ0ಗೋದಧಿಯೊಂದಿಗೆ ಹೋಗಿ ಶಂಭುಲಿಂಗನ ದರ್ಶನ ಪಡೆದು ಅಲ್ಲಿಯೇ ಸಮೀಪವಿರುವ ವೀರಭದ್ರ ಸ್ವಾಮಿಯ ದೇಗುಲದಲ್ಲಿ ವಾಸ ಮಾಡಿ ಭಕ್ತರ ಉದ್ಧಾರಕ್ಕಾಗಿ ಅನೇಕ ಲೀಲೆಗಳನ್ನು ಮಾಡುತ್ತ ನಿಜಗುಣವಿರಚಿತ ಪರಮಾನುಭವ. ಬೋದೆ ಗ್ರಂಥವನ್ನು ಒಂದು ವರ್ಷಗಳ ಕಾಲ ಬೋಧಿಸುವಾಗ ಅಲ್ಲಿಯ ಪೂಜಾರಿ ಬಸಪ್ಪನವರು ಮತ್ತು ಬಂಧುಗಳು, ಪಕ್ಕದ ಮಠದ ಶ್ರೀ ಮಹಾಲಿಂಗಸ್ವಾಮಿ (ಹಾಲುಸ್ವಾಮಿ) ಮತ್ತು ಸುತ್ತಲಿನ ಊರುಗಳಾದ ಕುಂತೂರು, ಯಳಂದೂರು, ಮಾಂಬಳ್ಳಿ, ಮಳವಳ್ಳಿ ಮೊದಲಾದ ಊರ ಜನ ಬಂದು ಶಾಸ್ತ್ರ ಕೇಳಿ ಪ್ರಸಾದ ತೆಗೆದುಕೊಂಡು ಹೋಗುತ್ತಿದ್ದರು.
ಅದೇ ಗುಡಿಯಲ್ಲಿ ಬಹುಕಾಲ ವಾಸವಾಗಿದ್ದ ಒಂದು ಘಟಸರ್ಪವು ಶ್ರೀ ರಾಮಾರೂಢರ ಹತ್ತಿರವೇ ಇದ್ದು ಅವರ ಮೈಮೇಲೆ ಆಡುತ್ತಿತ್ತು. ಅದನ್ನು ನೋಡಿದ ಜನರಲ್ಲಿ ಅವರ ಬಗ್ಗೆ ಭಕ್ತಿ ಹೆಚ್ಚಾಯಿತು. ತನ್ನ ಶಿಷ್ಯನು ಚೆಲುಕವಾಡಿಯ ಐದಾರು ಮನೆಗಳಿಂದ ತಂದ ಭಿಕ್ಷೆಯನ್ನು ಗುರುಗಳು ತಾವೂ ಸ್ವೀಕರಿಸಿ ಬರಹೋಗುವವರಿಗೆ ರಾತ್ರಿಯತನಕ ನೀಡಿದರೂ ಅದು ಹೆಚ್ಚಾಗುತ್ತಿತ್ತು. ಶಿಷ್ಯರ ಕೋರಿಕೆಯ ಮೇರೆಗೆ ಮಳವಳ್ಳಿಗೆ ಹೋಗಿ ಭಕ್ತರಿಗೆ ನಿಜಗುಣರ ಶಾಸ್ತ್ರಗಳನ್ನು ಬೋಧಿಸಿದರು. ಅದರಂತೆ ಬಂಗಾರಪೇಟೆಯಲ್ಲಿ ಆಶ್ರಮ ಸ್ಥಾಪಿಸಿ ಹುಬ್ಬಳ್ಳಿಯಿಂದ ಸಿದ್ದರ ಭಾವಚಿತ್ರಗಳನ್ನು ತರಿಸಿ ಆಶ್ರಮದಲ್ಲಿ ಸ್ಥಾಪಿಸಿದ್ದಲ್ಲದೆ ಅನೇಕರಿಗೆ ಹಂಚಿದರು. ಪ್ರತಿವರ್ಷವೂ ಸದ್ಗುರುಗಳ ಮಹಿಮೆ ಮತ್ತು ಕೀರ್ತಿಯನ್ನು ಕೇಳಿದ ಭಕ್ತರು ಹೊಂಗನೂರು, ಅರಸೀಕೇರಿ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಸದ್ಗುರುಗಳ ಉತ್ಸವ ಮಾಡಿಸಿ ಅವರಿಂದ ಶಾಸ್ತ್ರ ಕೇಳಿ ಧನ್ಯರಾದರು.
ಅದರಂತೆ ಟಿ ನರಸೀಪುರ (ತಿರುಮಲಕೂಡಲ ನರಸೀಪುರ) ಪಟ್ಟಣದಲ್ಲಿಯೂ ಭಕ್ತರು ಮಳವಳ್ಳಿಯ ವಿದ್ಯಾಶ್ರಮದಿಂದ ಶ್ರೀ ರಾಮಾರೂಢರನ್ನು ಕರೆಸಿ ಅಲಗೂರು, ಹೊಸಪುರ, ಮಾಗೂರು ಮುಂತಾದ ಊರುಗಳಲ್ಲಿ ಉತ್ಸವ ಜರುಗಿಸಿ ಟಿ ನರಸೀಪುರದಲ್ಲಿಯೂ ಪರ್ಣಶಾಲೆಯನ್ನು ಸ್ಥಾಪಿಸಿ, ತಮ್ಮ ಶಿಷ್ಯ ಲಿಂಗಾನಂದರನ್ನು ಅಲ್ಲಿಗೆ ಕಳಿಸಿದರು. ಹೀಗೆ ಅನಂತ ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದ ಶ್ರೀಗಳು ತಮ್ಮ ಉತ್ತರಾಧಿಕಾರಿಗಳಾಗಿ ಪಂಚಭಾಷಾ ಪಂಡಿತರಾದ ಯೋಗಾನಂದರೆಂಬವರಿಗೆ ತನ್ನ ಶಿಷ್ಯರನ್ನಾಗಿ ಸ್ವೀಕರಿಸಿ, ವಿದ್ವತ್ ಸನ್ಯಾಸ ದೀಕ್ಷೆಯನ್ನು ಕೊಟ್ಟು ಸಹಜಾನಂದರೆಂಬ ನಾಮಕರಣ ಮಾಡಿ ಮುಂಬರುವ ಸದ್ಗುರುಗಳ ಸಹಾಯಕ್ಕಾಗಿ ಅಂದರೆ ಮಠದ ಭೀಕ್ಷಾ ಮತ್ತು ಮಳವಳ್ಳಿ ಭಾಗದ ಉತ್ಸವ ನೋಡಿಕೊಳ್ಳಲು ನೇಮಿಸಿದರು.
ಅದರಂತೆ ತನ್ನ ಇನ್ನೊಬ್ಬ ಶಿಷ್ಯ ನೀಲಕಂಠ ಸ್ವಾಮಿಯನ್ನು ಮಠದ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವರಿಗೆ ಚಿಕ್ಕರಾಮಾರೂಢರೆಂದು ನಾಮಕರಣ ಮಾಡಿದರು. ಮುಂದೆ ರಾಮಾರೂಢರು ಅಸ್ವಸ್ಥರಾಗಿ ಕಾಲಿನ ತೊಂದರೆಯಿಂದ ತಿರುಗಾಡಲು ಬಾರದೆ ಮಂಚದ ಮೇಲೆಯೇ ಇರುತ್ತಿದ್ದು, ಅಲ್ಲಿದ್ದುಕೊಂಡೇ ಶಿಷ್ಯರಿಗೆ ಬೋಧ ಮಾಡುತ್ತಿದ್ದರು. ಶಿಷ್ಯರು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಭಕ್ತರೆಲ್ಲರೂ ಸೇರಿ ಗುರುಗಳ ಭಾವಿ ಸಮಾಧಿ ನಿರ್ಮಿಸಬೇಕೆಂದು ಗುರುಗಳ ಅಪ್ಪಣೆ ಕೇಳಿದಾಗ `ಶ್ರೀ ಸಿದ್ಧಾರೂಢರು ಮತ್ತು ಷಣ್ಮುಖಾರೂಢರ ಸಮಾಧಿಗಳಿರುವಾಗ ನನ್ನದೇಕೆ ಮಾಡುತ್ತೀರಿ' ಎಂದು ನಿರಾಕರಿಸಿದರು.
ಒಂದು ದಿವಸ ಶ್ರೀ ಸಿದ್ಧಾರೂಢರ ಪರಮ ಶಿಷ್ಯರಲ್ಲಿ ಒಬ್ಬರಾದ ಐರಣಿ ಮಠದ ಮುಪ್ಪಿನಾರ್ಯರು ಬಾಗಲಕೋಟೆಗೆ ಬಂದಾಗ ತಮ್ಮ ಗುರುಬಂಧು ರಾಮಾರೂಢರ ಯೋಗಕ್ಷೇಮ ವಿಚಾರಿಸಿದರು. ಆಗ ಅಲ್ಲಿಯ ಭಕ್ತರು ಮುಪ್ಪಿನಾರ್ಯರನ್ನು ಕುರಿತು `ಸದ್ಗುರುಗಳೇ, ನಾವು ನಮ್ಮ ಗುರುಗಳ ಭಾವಿ ಸಮಾಧಿ ನಿರ್ಮಿಸಬೇಕೆಂದಿದ್ದು, ಗುರುಗಳು ಅದನ್ನು ನಿರಾಕರಿಸುತ್ತಿದ್ದಾರೆ. ನೀವು ಅವರ ಗುರುಬಂಧುಗಳು ನಿಮ್ಮ ಮಾತನ್ನು ಕೇಳುತ್ತಾರೆ. ದಯವಿಟ್ಟು ಹೇಳಿ ಒಪ್ಪಿಸಿರಿ' ಎಂದರು. ಆಗ ಶ್ರೀಗಳು ರಾಮಾರೂಢರಿಗೆ 'ರಾಮಾರೂಢರೇ, ನಿಮ್ಮ ಭಕ್ತರು ನಿಮ್ಮ ಭಾವಿ ಸಮಾಧಿ ನಿರ್ಮಿಸಬೇಕೆಂದಿದ್ದಾರೆ. ಅದು ನಿಮಗೆ ಬೇಡವಾದರೂ ಅದು ಭಕ್ತರಿಗೆ ಬೇಕಾಗಿದ. ಅವರಿಗಾಗಿ ಅನುಮತಿ ಕೊಡಿರಿ' ಎಂದಾಗ ರಾಮಾರೂಢರು ಒಪ್ಪಿಕೊಂಡರು.
ನಂತರ ಮುಪ್ಪಿನಾರ್ಯರು ಹದಿನೈದು ದಿವಸ ಅಲ್ಲಿದ್ದು ಸಮಾಧಿಸ್ಥಾನ ಗುರುತಿಸಿ ಕಾರ್ಯ ಪ್ರಾರಂಭಿಸಿ ಪೂರ್ಣಗೊಳಿಸಿ ಹೋದರು. ಶ್ರೀ ರಾಮಾರೂಢರು ಶಾಲಿವಾಹನ ಶಕೆ ಹದಿನೆಂಟುನೂರಾ ಎಂಭತ್ತು ನಾಲ್ಕರಲ್ಲಿ (ಕ್ರಿ.ಶ. ಹತ್ತೊಂಭತ್ತುನೂರಾ ಅರವತ್ತೆರಡು) ಶಿವನಲ್ಲಿ ಐಕ್ಯರಾದರು. ಮುಂದೆ ಅವರ ಭಕ್ತರು ಅವರ ಸಮಾಧಿ ಮಾಡಿದರು. ನಂತರ ಅವರ ಶಿಷ್ಯರು ಅನೇಕ ಕಡೆಗಳಲ್ಲಿ ತಿರುಗಿ ಜನರನ್ನು ಉದ್ಧರಿಸುವ ಕಾರ್ಯ ಮಾಡುತ್ತಿರುವುದನ್ನು ಇಂದಿಗೂ ನೋಡಬಹುದು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
