ಚಿದಂಬರಪ್ಪ ಮುರಗೋಡರ ಸೇವೆ
🌺 ಚಿದಂಬರಪ್ಪ ಮುರಗೋಡರ ಸೇವೆ 🌺
ಚಿದಂಬರಪ್ಪ ಮುರಗೋಡ ಅವರು ಸೋಮವಂಶ ಆರ್ಯ ಕ್ಷತ್ರೀಯ (ಚಿತ್ರಗಾರ) ಸಮಾಜದವರಾಗಿದ್ದು, ಬಡಿಗತನದ ಕುಶಲ ಕರ್ಮಿಗಳು ಮತ್ತು ಶ್ರೀ ಸಿದ್ಧಾರೂಢರ ಪರಮ ಭಕ್ತರಾಗಿದ್ದರು. ಅವರ ಜೊತೆಗೆ ದೇವದಾಸ, ಸೌದಾಗರ, ಕಾಂಬಳೆ ಮತ್ತು ಇನ್ನೂ ಅನೇಕ ಮನೆತನದವರು ಮುರಗೋಡರ ಜೊತೆಗೆ ಸಿದ್ದರ ಅನುಯಾಯಿಗಳಾದರು. ಇವರೆಲ್ಲರೂ ಮಠದ ಯಾವುದೇ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಿದ್ದರು. ಚಿದಂಬರಪ್ಪನವರು ತಮ್ಮ ಉದ್ಯೋಗದಲ್ಲಿ ಎಷ್ಟು ಲಾಭ ಬರುವುದೋ ಅದರಲ್ಲಿ ಕೆಲ ಭಾಗ ಕೂಡಿಟ್ಟು, ಬಮ್ಮಾಪುರ ಚಿತ್ರಗಾರ ಓಣಿ ಯಲ್ಲಿ ಭಕ್ತರನ್ನೊಳಗೊಂಡು ಅಲಂಕೃತ ಹಂದರ ಹಾಕಿ ಸಿದ್ದಾರೂಢರ ಉತ್ಸವ ಮಾಡುತ್ತಿದ್ದರು. ಪಾಂಡಪ್ಪ ಮತ್ತು ವಿರುಪಾಕ್ಷಪ್ಪನವರನ್ನು ಸಹಾಯಕ್ಕೆ ತೆಗೆದುಕೊಂಡು ಚೈತ್ರಶುದ್ಧ ಪೌರ್ಣಿಮೆಯ ದಿವಸ ಶ್ರೀ ಸಿದ್ಧಾರೂಢರನ್ನು ಕರೆಸಿ ಕಿರೀಟ ತೊಡಿಸಿ ಪೂಜಿಸಿ ನಿತ್ಯ ಭಕ್ತರಿಗೆ ಅನ್ನಪ್ರಸಾದ ಉಣಿಸುತ್ತಿದ್ದರು. ಹೀಗೆ ಏಳು ದಿವಸದ ಸಪ್ತಾಹದಲ್ಲಿ ಸಚ್ಚಿದಾನಂದ (ತಮ್ಮಣ್ಣ ಶಾಸ್ತ್ರಿ)ರನ್ನು ಕರೆಸಿ ಸಿದ್ದರ ಪುರಾಣ ಮತ್ತು ಕೀರ್ತನೆಗಳನ್ನು ಮಾಡಿಸಿ ಕೊನೆಯ ದಿವಸ ಸಿದ್ದರನ್ನು ರಥದಲ್ಲಿ ಕೂಡಿಸಿ ಉತ್ಸವ ಮಾಡುತ್ತಿದ್ದರು.
ಚಿದಂಬರಪ್ಪ ಮತ್ತು ಸಮಾಜದ ಬಂಧುಗಳು ಈಶ್ವರೋಪಾಸಕರಾಗಿದ್ದು ಒಂದು ಮಂದಿರ ಕಟ್ಟಿ ಅದರಲ್ಲಿ ಈಶ್ವರ ಮತ್ತು ಬಸವಣ್ಣ ಮೂರ್ತಿಗಳನ್ನು ಸ್ಥಾಪಿಸಬೇಕೆಂದು ಎಲ್ಲರ ಮನಸ್ಸಿನಲ್ಲಿ ಹೊಳೆಯಿತು. ಮಂದಿರ ನಿರ್ಮಾಣಕ್ಕಾಗಿ ಒಂದು ನಿವೇಶನ ಹುಡುಕುತ್ತಿರುವಾಗ ಕಾಂಬಳೆಯವರು ಬಮ್ಮಾಪುರ ಓಣಿಯಲ್ಲಿರುವ ಹಂಚಿನ ಚಪ್ಪರದ ಸ್ವಂತ ಮನೆಯನ್ನು ಮಂದಿರಕ್ಕಾಗಿ ಸಮಾಜಕ್ಕೆ ದಾನ ಮಾಡಿದರು. ಮುಂದೆ ಭಕ್ತರು ಶ್ರೀ ಸಿದ್ಧಾರೂಢರನ್ನು ಭೇಟಿಯಾಗಿ ಮಂದಿರದಲ್ಲಿ ಮೂರ್ತಿ ಪ್ರತಿಷ್ಟಾಪನೆಯ ವಿಚಾರ ಮುಂದಿಟ್ಟಾಗ ಶ್ರೀ ಸಿದ್ಧಾರೂಢರು, ಈಶ್ವರ ಮತ್ತು ಬಸವಣ್ಣ ಮೂರ್ತಿಗಳು ಹೇಗಿರಬೇಕೆಂಬುದರ ಬಗ್ಗೆ ಅದರ ರೂಪುರೇಷೆಗಳನ್ನು ತಿಳಿಸಿದರು. ಅದರಂತೆ ಭಕ್ತರು ಮೂರ್ತಿಗಳನ್ನು ಸಿದ್ಧಪಡಿಸಿ ನಿವೇಶನ ಮಂದಿರಕ್ಕೆ ಯೋಗ್ಯವಾಗುವಂತೆ ಮಾರ್ಪಡಿಸಿ ದಿನಾಂಕ ಇಪ್ಪತ್ತೆರಡು ಎರಡನೆಯ ತಿಂಗಳು ಹತ್ತೊಂಭತ್ತುನೂರಾ ಇಪ್ಪತ್ತೆರಡನೆಯ ಇಸ್ವಿಯಂದು ಮಹಾಶಿವರಾತ್ರಿ ಸಾಯಂಕಾಲ ಗೋಧೂಳಿ ಸಮಯದಲ್ಲಿ ಸಿದ್ದರನ್ನು ಪಾಲಖಿಯಲ್ಲಿ ಕೂಡಿಸಿ ಮೆರವಣಿಗೆಯೊಂದಿಗೆ ಕರೆದುಕೊಂಡು ಬಂದರು. ಆಗ ಅಸಂಖ್ಯ ಭಕ್ತರು ನೆರೆದಿದ್ದರು.
ಸಿದ್ದರು ಮಂದಿರದಲ್ಲಿ ಪ್ರವೇಶಿಸಿ ಶಾಸ್ಪೋಕ್ತ ವಿಧಿ ವಿಧಾನಗಳಿಂದ ತಮ್ಮ ಅಮೃತಹಸ್ತದಿಂದ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು. ನಂತರ ಅಭಿಷೇಕ ಮತ್ತು ಪೂಜೆಯ ಬಳಿಕ ಮರಳಿ ಹೊರಗೆ ಬರುವಾಗ ಮಂದಿರದ ಚಪ್ಪರದ ಎತ್ತರ ಬಹಳ ಕಡಿಮೆಯಿದ್ದು ಸಿದ್ದರ ಹಣೆಗೆ ಚಪ್ಪರದ ಬಾಂಬು ಬಡಿದು ರಕ್ತ ಬಂದಿತು. ಆಗ ಭಕ್ತರು ತಂದೇ ಏನಾಯಿತಲ್ಲ ಎಂದು ಗಾಬರಿಗೊಂಡಾಗ ಸಿದ್ದರು ಹೇಳಿದರು ಭಕ್ತರೇ ಯಾರೂ ಚಿಂತಿಸಬೇಡಿರಿ ಶಾಂತರಾಗಿರಿ' ಎಂದು ಹೇಳಿ ತಮ್ಮ ಹಣೆಯಿಂದ ಬಂದ ರಕ್ತವನ್ನು ಕೈಯಿಂದ ತೆಗೆದುಕೊಂಡು ಎರಡೂ ಮೂರ್ತಿಗಳಿಗೆ ಸಿಂಪಡಿಸಿ ಆಶೀರ್ವದಿಸಿ ಹೇಳಿದರು `ಭಕ್ತರೇ, ಇಂದು ಈಶ್ವರನಿಗೆ ರಕ್ತಾಭಿಖಷೇಕವಾಗಿದೆ. ಇನ್ನು ಮುಂದೆ ಈ ಮಂದಿರದಲ್ಲಿ ಭಜನೆ, ಕೀರ್ತನೆ, ನಾಮಸ್ಮರಣೆ ಮುಂತಾದ ಪುಣ್ಯ ಕಾರ್ಯಗಳು ಅವ್ಯಾಹತವಾಗಿ ನಡೆಯಲಿ' ಎಂದು ಹರಸಿ ಸಿದ್ಧಾಶ್ರಮಕ್ಕೆ ಹೋದರು. ಮುಂದೆ ಚಪ್ಪರಾಕಾರದ ಮಂದಿರವನ್ನು ಪರಿವರ್ತಿಸಿ ಮಡಗಿಯ ಮಂದಿರ ನಿರ್ಮಿಸಿದರು. ಮುಂದೆ ಸಮಾಜದ ಜನರು ಕಟ್ಟಿಗೆಯ ಕುಶಲ ಕರ್ಮಿಗಳಾಗಿದ್ದರಿಂದ ಅವರಿಂದಲೇ ಸುಂದರ ತೇರನ್ನು ಕಟ್ಟಿಸಿದರು.
ಪ್ರತಿ ವರ್ಷ ಸಪ್ತಾಹದ ಕೊನೆಯ ದಿವಸ ಶ್ರೀ ಸಿದ್ಧಾರೂಢರನ್ನು ಶ್ರೀ ಗುರುನಾಥಾರೂಢರನ್ನು ಕರೆದುಕೊಂಡು ಬಂದು ಸಿದ್ದರನ್ನು ತೇರಿನಲ್ಲಿ ಮತ್ತು ಗುರುನಾಥರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮರವಣಿಗೆ ಮಾಡಿ ಅನ್ನ ಸಂತರ್ಪಣೆ ಮಾಡುತ್ತಿದ್ದರು. ಹೀಗೆ ಮುಂದುವರಿದ ಉತ್ಸವವು ಚಿದಂಬರಪ್ಪನವರು ದೇಹ ಬಿಟ್ಟ ನಂತರ ಅವರ ಮಗ ಮಾರುತೆಪ್ಪ ಮುರಗೋಡ, ಅನಂತರಾವ ಸೌದಾಗರ, ದೇವದಾಸ ಬಂಧುಗಳು ಹಾಗೂ ಓಣಿಯ ಭಕ್ತರು ಮುನ್ನಡೆಸಿಕೊಂಡು ಬಂದರು. ಚೈತ್ರಶುದ್ಧ ಪೌರ್ಣಿಮೆಯ ದಿವಸ ಪ್ರಾರಂಭವಾದ ಈ ಉತ್ಸವವನ್ನು ಕಾರಣಾಂತರ ದೀಪಾವಳಿಯ ನಂತರ ಗೌರೀಹುಣ್ಣಿಮೆಯ ದಿವಸ ಉತ್ಸವ ನಡೆಸಹತ್ತಿದರು. ಹಿಂದಿನ ಹಿರಿಯರ ನಂತರ ಮಾರುತೆಪ್ಪನವರ ಮಗ ಪಾಂಡಪ್ಪ ಮುರಗೋಡ ವಾಮನರಾವ ದೇವದಾಸ “ಕಾಂಬಳೆ ಮನೆತನದವರು ಮತ್ತು ಓಣಿಯ ಭಕ್ತರು ಉತ್ಸವ ನಡೆಸಿಕೊಂಡು ಬಂದರು.
ಒಂದು ವರ್ಷ ಉತ್ಸವದ ಎಲ್ಲ ಸಿದ್ಧತೆಗಳನ್ನು ಮಾಡಿದರು. ತೇರೂ ಅಲಂಕರಿಸಲ್ಪಟ್ಟಿತು. ಅಪಾರ ಸಂಖ್ಯೆಯಲ್ಲಿ ಜನರೂ ಸೇರಿದರು. ಆಗ ಒಮ್ಮಲೇ ಜಾತಿಯ ಗಲಭೆ ಪ್ರಾರಂಭವಾಗಿ ಇಡೀ ಹುಬ್ಬಳ್ಳಿಯಲ್ಲಿ ಪೂರ್ಣ ಪ್ರತಿಬಂಧಕಾಜ್ಞೆ ಜಾರಿಯಾಯಿತು. ಕೂಡಿದ ಜನರು ಈ ಸಮಾಚಾರ ತಿಳಿದು ತಮ್ಮ ಮನೆಗಳಿಗೆ ಹೋದರು. ಆಗ ಕಾರ್ಯಕರ್ತರಿಗೆ ಚಿಂತೆಯಾಗಿ `ಸಿದ್ದನೇ, ಎಂದೂ ನಿಲ್ಲದೆ ಈವರೆಗೆ ನಡೆಯುತ್ತ ಬಂದ ಈ ಪುಣೋತ್ಸವಕ್ಕೆ ಇಂದು ವಿಘ್ನ ಬಂದಿದೆ. ಅದನ್ನು ನೀನೇ ಪರಿಹರಿಸು ತಂದೆ ' ಎಂದು ಬೇಡಿಕೊಂಡರು. ಅಷ್ಟರಲ್ಲಿ ಒಬ್ಬ ದೈವಭಕ್ತ ಪೊಲೀಸ್ ಅಧಿಕಾರಿ ಬಂದು ದೇವರಿಗೆ ನಮಿಸಿ ವಿಷಯ ತಿಳಿದುಕೊಂಡು ಈ ಉತ್ಸವ ನಿಲ್ಲಬಾರದಂದು ಸ್ವತಃ ತಾನೇ ನಿಂತು ಉತ್ಸವ ನಡೆಸಿರಿ ಎಂದಾಗ ಚದುರಿಹೋದ ಭಕ್ತರು ಮತ್ತೆ ಸೇರಿದರು.
ಆಗ ಕಾರ್ಯಕರ್ತರು ಉತ್ಸಾಹಭರಿತರಾಗಿ ರಥೋತ್ಸವ ನಡೆಸಿದರು. ನಂತರ ರಥವು ಮರಳಿ ಮಂದಿರಕ್ಕೆ ಬಂದು ಮುಕ್ತಾಯಗೊಂಡಿತು. ಹೀಗೆ ಪ್ರತಿವರ್ಷ ತಪ್ಪದೇ ಉತ್ಸವ ನಡೆದಿದೆ. ಈ ಹಿಂದೆ ಶ್ರೀ ಸಿದ್ದರನ್ನು ತೇರಿನಲ್ಲಿ ಮತ್ತು ಶ್ರೀ ಗುರುನಾಥರನ್ನು ಪಲ್ಲಕ್ಕಿಯಲ್ಲಿ ಮೆರಸುವಾಗ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ನರೆದಿರುವ ಭಾವಚಿತ್ರ ಮತ್ತು ಆ ಮಂದಿರದಲ್ಲಿ ಭಕ್ತರು ಸ್ಥಾಪಿಸಿದ ಶ್ರೀ ಸಿದ್ಧಾರೂಢ ಸ್ವಾಮಿಗಳ ಮೂರ್ತಿಯನ್ನು ಆ ಮಂದಿರದಲ್ಲಿ ಇಂದಿಗೂ ನೋಡಬಹುದು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
