ಶ್ರೀ ಸಿದ್ಧರ ಪುತ್ರಿ ಆವೂಬಾಯಿ
🌺 ಶ್ರೀ ಸಿದ್ಧರ ಪುತ್ರಿ ಆವೂಬಾಯಿ 🌺
ಕಾರವಾರ ಜಿಲ್ಲೆಯ ಹಳ್ಳಾಳ ಗ್ರಾಮದ ವೈಷ್ಣವ ಬ್ರಾಹ್ಮಣರಾದ ಶ್ರೀ ಸದಾಶಿವ ಶಿರಸಾಟ ಅವರ ಧರ್ಮಪತ್ನಿ ರುಕ್ಕಿಣೀಬಾಯಿಯವರು ದೈವೀ ಭಕ್ತ ರಾಗಿದ್ದು ನೀತಿ ಧರ್ಮ ಸದಾಚಾರ ಸಂಪನ್ನ ಜೀವನ ನಡೆಸುತ್ತಿದ್ದರು. ದೈವವಶಾತ್ ಅವರ ಪುಣ್ಯಗರ್ಭದಲ್ಲಿ ಭಾಸ್ಕರರಾವ ಮತ್ತು ಆವೂಬಾಯಿಯವರು ಜನಿಸಿದರು. ಆವೂಬಾಯಿಯವರಿಗೆ ಚಿಕ್ಕಂದಿನಿಂದಲೇ ಸಹಜವಾಗಿ ದೈವೀಭಕ್ತಿಯಲ್ಲಿ ಒಲವಿತ್ತು. ಮುಂದೆ ಬೆಳೆದು ಹದಿನೈದು ವರ್ಷ ತುಂಬಿದವು. ಆಗ ತಂದೆ ತಾಯಿಗಳು ಮಗಳಿಗೆ ಲಗ್ನ ಮಾಡಬೇಕೆಂದು ವರನನ್ನು ಹುಡುಕಿ ನಿಶ್ಚಯ ಕಾರಣ ಮಾಡಿ ಲಗ್ನದ ದಿನಾಂಕವನ್ನು ಗೊತ್ತು ಮಾಡಿದರು. ಆ ದಿವಸ ಲಗ್ನದ ಮಂಟಪವು ತಳಿರು ತೋರಣಗಳಿಂದ ಶೋಭಿಸುತ್ತಿತ್ತು. ಬೇರೆ ಬೇರೆ ಕಡೆಗಳಿಂದ ಬಂಧು ಬಾಂಧವರು ಸೇರಿದರು. ಬೀಗರನ್ನು ಮದುಮಗನನ್ನು ಎದುರುಗೊಳ್ಳಲು ಸಿದ್ಧರಾಗಿ ನಿಂತರು. ವಾದ್ಯಗಳನ್ನು ನುಡಿಸುತ್ತ ಮದುಮಗನನ್ನು ಮೆರವಣಿಗೆಯಲ್ಲಿ ಕರೆತರುವಾಗ ಮದುಮಗನ ತಾಯಿ ಮನೆಯ ದೇವರ ಬೋಲಿಯಲ್ಲಿದ್ದು ಅವಳ ಸೀರೆಗೆ ದೀಪದ ಬೆಂಕಿ ಹತ್ತಿ ಮೈಯಲ್ಲಿ ವ್ಯಾಪಿಸಿ ಇಡೀ ಶರೀರ ಸುಟ್ಟಿತು. ಈ ಸುದ್ದಿ ಮಗನಿಗೂ ಇತರರಿಗೂ ತಿಳಿದು ತಕ್ಷಣ ಅವರೆಲ್ಲರೂ ಬಂದು ನೋಡಿದಾಗ ತಾಯಿ ಮರಣ ಹೊಂದಿದ್ದಳು. ಇದನ್ನು ಕಂಡು ಬೀಗರು ಅವರ ಸಂಬಂಧಿಕರು ಇದೊಂದು ಅಪಶಕುನವಾಯಿತೆಂದು ತಿಳಿದು ಲಗ್ನವನ್ನು ನಿಲ್ಲಿಸಿ ತಮ್ಮ ತಮ್ಮ ಮನೆಗೆ ಹೋದರು. ಇದರಿಂದಾಗಿ ಆವೂಬಾಯಿಯವರ ತಂದೆ ತಾಯಿಗಳಿಗೆ ಅತ್ಯಂತ ದುಃಖವಾಯಿತು.
ಹೀಗೆ ಕೆಲವು ದಿವಸ ಕಳೆದ ನಂತರ ಆವೂಬಾಯಿಯ ಮೈತ್ರಿಣಿ- ಬಂದು ಅವಳನ್ನು ಕೆಲವು ದಿವಸ ತನ್ನ ಮನೆಯಲ್ಲಿಟ್ಟುಕೊಂಡು ಕಳಿಸಬೇಕೆಂದು ಗೋವೆಯ ತನ್ನ ಗಂಡನ ಮನೆಗೆ ಕರೆದುಕೊಂಡು ಹೋದಳು. ಅಲ್ಲಿ ಓರ್ವ ಸಿಡಿಮದ್ದನ್ನು ತಯಾರಿಸುವ ಶ್ರೀಮಂತನಿದ್ದು ಅವನ ಕಾರ್ಖಾನೆಯೂ ಇತ್ತು. ಅವನ ಮೈಬಣ್ಣ ಕಪ್ಪಗಿದ್ದು ಕುರೂಪಿಯಾಗಿರುವುದರಿಂದ ಲಗ್ನ ಮಾಡಿಕೊಳ್ಳಬೇಕೆಂದರೆ ಯಾರೂ ಕನ್ನೆ ಕೊಡಲು ಮುಂದೆ ಬರಲಿಲ್ಲ. ಅದರಂತೆ ಆವೂಬಾಯಿಯ ಮೊದಲ ಮದುವೆ ನಿಂತು ಹೋಗಿರುವುದರಿಂದ ಅವಳಿಗೂ ಯಾವ ವರ ಬಂದಿರಲಿಲ್ಲ. ಇದನ್ನು ಕಂಡ ಮಧ್ಯಸ್ಥ ಮನುಷ್ಯರು ಇಬ್ಬರ ಮದುವೆ ಮಾಡಬೇಕೆಂದು ವಿಚಾರ ಮಾಡಿ ಆ ವ್ಯಾಪಾರಿಗೆ ತಿಳಿಸಿದಾಗ ಅವನೂ ಒಪ್ಪಿಕೊಂಡನು. ನಿಶ್ಚಿತಾರ್ಥವೂ ನೆರವೇರಿತು. ಒಂದು ದಿವಸ ಪರಸ್ಥಳದ ವ್ಯಾಪಾರಸ್ಥರು ಈ ವ್ಯಾಪಾರಿಯ ಕಾರ್ಖಾನೆಗೆ ಬಂದು ಸಿಡಿಮದ್ದುಗಳನ್ನು ಕೊಳ್ಳುವುದಾಗಿ ಹೇಳಿ ಕೆಲವು ನಮೂನೆಗಳನ್ನು ಪ್ರಯೋಗ ಮಾಡಿ ತೋರಿಸಲು ಕೇಳಿಕೊಂಡರು. ಆಗ ಶ್ರೀಮಂತನು ಒಂದೆರಡು ಸಿಡಿಮದ್ದುಗಳನ್ನು ಪ್ರಯೋಗಿಸಿದಾಗ ಅದರ ಒಂದು ಅಂಶವು ಮದ್ದಿನ ಖೋಲಿಯಲ್ಲಿ ಬಿದ್ದು ಬೆಂಕಿ ಹತ್ತಿ ಪೂರ್ಣ ಕಾರ್ಖಾನೆಸಹಿತ ಅವನೂ ಸುಟ್ಟುಹೋದನು.
ಈ ಬಗ್ಗೆ ವಿಚಾರಿಸಿದಾಗ ಹೀಗೆ ತಿಳಿಯುತ್ತದೆ. ಅದೆಂದರೆ ಒಂದು ಈಸುಗುಂಬಳಕಾಯಿಯನ್ನು ಒಬ್ಬ ಶಕ್ತಿವಂತ ಮನುಷ್ಯನು ನೀರಲ್ಲಿ ಮುಳುಗಿಸಿ ಅವನು ಮೇಲೆ ಬರುವುದರೊಳಗಾಗಿ ಅದು ಪುಟಿದು ಮೇಲೆ ಬರುವಂತೆ ಪೂರ್ವಕೃತ ಪುಣ್ಯವಿಶೇಷವೆಂಬ ಈಸುಗುಂಬಳ ಕಾಯಿ ಹೊಂದಿ ಈ ಜನ್ಮಕ್ಕೆ ಬಂದು ಕಾಯವನ್ನು ಹೊಂದಿ ಮುಕ್ತನಾಗಲು ಬಂದ ಓರ್ವ ಜೀವಿಗೆ ಸಂಸಾರ ಬಂಧನದಲ್ಲಿ ಸಿಲುಕಿಸಬೇಕೆಂದು ಎಷ್ಟು ಪ್ರಯತ್ನಪಟ್ಟರೂ ಅದು ತನ್ನ ಪವಿತ್ರ ಮಾರ್ಗದಲ್ಲಿ ಕ್ರಮಿಸಿ ಮುಕ್ತವಾಗುತ್ತದೆಯೇ ಹೊರತು ಸಂಸಾರ ಬಂಧನದಲ್ಲಿ ಸಿಲುಕುವುದಿಲ್ಲ. ಅದರಂತೆ ಆವೂಬಾಯಿಯೂ ಮುಕ್ತಳಾಗಲು ಈ ಜನ್ಮಕ್ಕೆ ಬಂದ ಕಾರಣ ಅವಳ ಜೀವನದಲ್ಲಿ ಪ್ರಾರಬ್ದಕ್ಕನುಸಾರ ಲಗ್ನದ ಎರಡು ಘಟನೆಗಳು ನಡೆದು ಹೋದರೂ ಯಾವ ಸಂಬಂಧವೂ ಆಗಲಿಲ್ಲ.
ಮುಂದ ಆವೂಬಾಯಿಯನ್ನು ತನ್ನ ತಂದೆ ತಾಯಿಗಳು ಮನೆಗೆ ಕರೆದುಕೊಂಡು ಹೋಗಿ ಸಂಪ್ರದಾಯದಂತೆ ಕೇಶಮುಂಡನ ಮಾಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದರಿಂದ ಕೇಶಮುಂಡನ ಮಾಡಿಸಿಕೊಂಡಳು. ಆಗ ಅವಳು ಎಲ್ಲಿಯೂ ಹೊರಗೆ ಹೋಗಬಾರದಂದು ಒಂದು ಗೊಬ್ಬರದ ಖೋಲಿಯ ಹತ್ತಿರ ವಾಸ ಮಾಡಿಸಿದರು. ಆಗ ಅವಳಿಗೆ ಇದೊಂದು ನರಕಯಾತನೆಯೆನಿಸಿ ಬಹಳ ದುಃಖ ಗೊಂಡಳು . ಶ್ರೀ ಸಿದ್ಧಾರೂಢರ ಶಿಷ್ಯತ್ವ ವಹಿಸಿ ಅವರ ಸೇವೆಯಲ್ಲಿರುವ ಅವರ ಸಂಬಂಧಿಕರಾದ ಗೋವಿಂದ ಸಂತ ಮತ್ತು ಅವರ ಪತ್ನಿ ರಾಧಾಬಾಯಿಯವರು ಅಕಸ್ಮಾತ್ ಇವರ ಮನೆಗೆ ಬಂದು ಆವೂಬಾಯಿಯ ಸ್ಥಿತಿಯನ್ನು ಕಂಡು ಒಂದು ಹೆಣ್ಣು ಜೀವ ಎಷ್ಟು ಕಷ್ಟಪಡುತ್ತಿದೆಯಲ್ಲ ಎಂದು ಮರುಗಿ ಅವಳನ್ನು ಸಿದ್ಧರ ಮಠಕ್ಕೆ ಕರೆದುಕೊಂಡು ಬಂದರು. ಅದರ ಮುನ್ನವೇ ಸದ್ಗುರುಗಳು ನನ್ನ ಪ್ರೀತಿಯ ಮಗಳು ಬರುತ್ತಿದ್ದಾಳೆ' ಎಂದು ಭವಿಷ್ಯ ನುಡಿದಿದ್ದರು. ಗೋವಿಂದ ಸಂತರು ಆವೂಬಾಯಿಯನ್ನು ತಂದು ಸಿದ್ಧರ ಪಾದಕ್ಕೆ ಹಾಕಿ ಅವಳ ಜೀವನ ವೃತ್ತಾಂತ ತಿಳಿಸಿ ಉದ್ದರಿಸಲು ಬೇಡಿಕೊಂಡರು.
ಆಗ ಸದ್ಗುರುಗಳು ಕರುಣೆಯಿಂದ ಅವಳನ್ನು ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡು ಪಂಚಾಕ್ಷರಿ ಮಂತ್ರ ಬೋಧಿಸಿ 'ಮಗು, ಆವೂಬಾಯಿ, ನಿನ್ನ ಸೂಕ್ಷ್ಮ ಶರೀರದಲ್ಲಿರುವ ಅರಿಷಡ್ವರ್ಗಗಳಲ್ಲಿರುವ ದೋಷಗಳೆಂಬ ಕೇಶ ಮುಂಡನ ಮಾಡಿದ್ದೇನೆ. ಇನ್ನು ಮುಂದೆ ಬಾಹ್ನ ಶರೀರದ ಶಿರದಲ್ಲಿರುವ ಕೇಶಮುಂಡನ ಮಾಡಿಸಿಕೊಳ್ಳುವ ಅವಶ್ಯಕತೆಯಿಲ್ಲ' ಎಂದು ಹೇಳಿ ಕಾವಿ ಬಟ್ಟೆಗಳನ್ನು ಕೊಟ್ಟು ಸನ್ಯಾಸ ದೀಕ್ಷೆಯನ್ನು ಕೊಟ್ಟು, ಇನ್ನು ಮುಂದೆ ಮಠದಲ್ಲಿದ್ದು ಗುರುಸೇವೆಯ ಮಾಡುತ್ತ ಧನ್ಯಳಾಗು' ಎಂದು ಹರಸಿದರು. ಅಂದಿನಿಂದ ಆವೂಬಾಯಿಯು ಮಠದಲ್ಲಿದ್ದು ಸಣ್ಣ ದೊಡ್ಡ ಕೆಲಸಗಳೆನ್ನದೆ ಭಕ್ತಿಯಿಂದ ಎಲ್ಲ ಸೇವೆ ಮಾಡುತ್ತಿದ್ದಳು. ಮುಂದೆ ಗೋವಿಂದ ಸಂತ, ರಾಧಾಬಾಯಿ ಮತ್ತು ಇವಳು ಸಿದ್ದರ ಸೇವೆಯಲ್ಲಿರುವರೆಂಬ ಕಾರಣದಿಂದ ಜಾತಿಯಿಂದ ಬಹಿಷ್ಕಾರ ಹಾಕಿದರೂ ಸಿದ್ಧರ ಕರುಣೆಯಿಂದ ಯಾವ ಬಾಧೆಯಾಗಲಿಲ್ಲ.
ಮುಂದೆ ಆವೂಬಾಯಿಯ ಅಣ್ಣ ಭಾಸ್ಕರರಾಯರು ಅವರ ಪತ್ನಿ ಲಕ್ಷ್ಮೀಬಾಯಿಯವರ ಗರ್ಭದಿಂದ ಶಾ.ಶ. ೧೮೪೩ (ಕ್ರಿ.ಶ. ೧೯೨೧)ರಲ್ಲಿ ಒಂದು ಗಂಡು ಕೂಸು ಜನಿಸಿತು. ಅವನಿಗೆ ಸದಾಶಿವನೆಂದು ಹೆಸರಿಟ್ಟರು. ಮಗುವು ಬೆಳೆದಂತೆ ಬಹಳ ತುಂಟತನ ಮಾಡುತ್ತ ಕ್ರೀಡಾಸಕ್ತನಾಗಿದ್ದು, ತಂದೆ ತಾಯಿಗಳಿಗೆ ಇವನ ಹಟಮಾರಿತನದಿಂದ ಅನೇಕ ಸಲ ಬೇಸರವಾಗುತ್ತಿತ್ತು. ಭಾಸ್ಕರರಾಯರು ಅವನ ಜನ್ಮ ಕುಂಡಲಿಯನ್ನು ಓರ್ವ ಪ್ರಸಿದ್ಧ ಜ್ಯೋತಿಷಿಗೆ ತೋರಿಸಿದಾಗ ಅವರು ಹೇಳಿದರು
'ಇವನ ಏಳನೆಯ ವಯಸ್ಸಿನಲ್ಲಿ ಯಾವುದೋ ಒಂದು ಗಂಡಾಂತದ ಬದುತ್ತದೆ' ಎಂದು ಹೇಳಿದ್ದರಿಂದ ಮಗುವಿನ ರಕ್ಷಣೆಯನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು. ಅನೇಕ ದೇವರಿಗೆ ಹರಕೆ ಹೊತ್ತಿದ್ದು ಆಯಿತು. ಆದರೂ ಸದಾಶಿವನಿಗೆ ವಿಪರೀತ ಕಾಯಿಲೆಯಾಗಿ ಯಾವ ವೈದ್ಯರಿಂದ ಗುಣವಾಗದೆ ಅವನು ಕೋಮಾ (ಮಂಕು, ಮಬ್ಬು ಅಥವಾ ಮೂರ್ಛ) ಸ್ಥಿತಿಯಲ್ಲಿದ್ದನು. ಅವನು ಬದುಕುವುದು ಅಸಾಧ್ಯವೆಂದು ಎಲ್ಲರೂ ಚಿಂತಿಸಿದರು.
ಆಗ ಓರ್ವ ವ್ಯಕ್ತಿಯ ಹೇಳಿಕೆಯ ಮೇರೆಗೆ ಆವೂಬಾಯಿಯವರಿಗೆ ಸುದ್ದಿ ಮುಟ್ಟಿಸಿದರು. ಈ ಸುದ್ದಿ ತಿಳಿದು ಆವೂಬಾಯಿಯವರು ಬಂದು ಮಗುವನ್ನು ನೋಡಿ ತನ್ನಣ್ಣ ಭಾಸ್ಕರನನ್ನು ಕುರಿತು 'ಅಣ್ಣಾ, ಸದಾಶಿವನನ್ನು ಯಾರೂ ಬದುಕಿಸಲಾರರು. ಆದರೆ ಸಿದ್ದಾರೂಢರ ಪಾದಗಳಲ್ಲಿ ಅವನನ್ನು ಹಾಕಿದರೆ ಅವರು ಬದುಕಿಸಬಲ್ಲರು. ಅವರಲ್ಲಿ ಅಂಥ ಶಕ್ತಿಯಿದೆ. ಹಟ ಮಾಡದೆ ಅವನನ್ನು ಸಿದ್ಧರ ಕಡೆಗೆ ಕಳಿಸಿಕೊಡು' ಎಂದು ವಿನಮ್ರದಿಂದ ಬೇಡಿಕೊಂಡಳು. ಆಗ ಭಾಸ್ಕರರಾಯರು ಮತ್ತು ಲಕ್ಷ್ಮೀಬಾಯಿಯವರು ವಿಚಾರ ಮಾಡಿ ತಮಗೆ ಒಬ್ಬನೇ ಮಗನಿದ್ದು ಯಾರಿಂದಾದರೂ ಸರಿ ಬದುಕಿದರೆ ಸಾಕು ಎಂಬ ಪುತ್ರವ್ಯಾಮೋಹದಿಂದ ಮಗುವನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಲು ಸಮ್ಮತಿಸಿದರು. ನಂತರ ಮಗುವನ್ನು ಕರೆದುಕೊಂಡು ಕುಟುಂಬ ಸಹಿತ ಸಿದ್ಧರ ಮಠಕ್ಕೆ ಹೋದರು.
ಆಗ ರಾತ್ರಿಯ ಸಮಯ. ಆ ದಿನ ರಾತ್ರಿ ಬಾಲಕನ ಅಂತ್ಯ ಸಮಯ ಸಮೀಪಿಸುತ್ತಿರುವಾಗ ಆವೂಬಾಯಿಯವರು ಸ್ವಾಮಿಗಳ ಹತ್ತಿರ ಹೋಗಿ ಅವರನ್ನು ಕುರಿತು `ಸದ್ಗುರು ತಂದೆ, ಈ ಬಾಲಕನ ಅಳಿವು ಉಳಿವು ನಿನ್ನ ಕೈಯಲ್ಲಿದೆ. ಕೃಪಮಾಡಿ ಬದುಕಿಸಿರಿ' ಎಂದು ಅಂಗಲಾಚಿ ಬೇಡಿಕೊಂಡಳು. ಸ್ವಾಮಿಗಳು ತಕ್ಷಣ ತೀರ್ಥ, ವಿಭೂತಿ, ಬಿಲ್ವಪತ್ರೆ ತೆಗೆದುಕೊಂಡು ಬಾಯಿಯ ಜೊತೆಗೆ ಬಾಲಕನಿದ್ದೆಡೆಗೆ ಹೋದರು. ಆಗ ಮಗುವನ್ನು ನೋಡಿ 'ಆವೂಬಾಯಿ, ಈ ಬಾಲಕನಿಂದ ಮುಂದೆ ಮಹತ್ತರ ಕೆಲಸವಾಗಬೇಕಾಗಿದೆ. ಸದ್ಗುರು ಕೃಪೆಯಿಂದ ಇವನು ಬದುಕುತ್ತಾನೆ . ಚಿಂತಿಸಬೇಡಿರಿ' ಎಂದು ಹೇಳಿ ತೀರ್ಥ, ವಿಭೂತಿ ಮತ್ತು ಬಿಲ್ವಪತ್ರೆಗಳ ಅಂಶಗಳನ್ನು ಅವನ ಮುಖದಲ್ಲಿ ಹಾಕಿ ಮೈಮೇಲೆ ತಮ್ಮ ಅಮೃತ ಹಸ್ತವನ್ನು ಸವರಿ ಆಶೀರ್ವದಿಸಿದರು. ಆಗ ಸ್ವಲ್ಪ ಹೊತ್ತಿನಲ್ಲಿ ಮಗುವು ಕಣ್ಣೆರದು ಎಲ್ಲರನ್ನೂ ನೋಡಹತ್ತಿತು. ನಂತರ ಅವನ ಅಂಗಾಂಗಗಳಲ್ಲಿ ಚೇತನ ಬಂದು ಎದ್ದು ಕುಳಿತಾಗ ಆವೂಬಾಯಿಯು ಮಗುವನ್ನು ಸಿದ್ದರ ಪಾದಗಳಲ್ಲಿ ಹಾಕಿದಳು. ಆಗ ಸಿದ್ದನು ಮಂಗಲಕರ ಆಶೀರ್ವದಿಸಿ ತಮ್ಮ ಖೋಲಿಗೆ ಹೋದರು. ಇದನ್ನು ಕಂಡ ಭಾಸ್ಕರರಾಯರು ಸಹಿತ ಇಡೀ ಕುಟುಂಬದವರಿಗೆ ಆಶ್ಚರ್ಯವಾಗಿ ಅಂದಿನಿಂದ ಸಿದ್ದರಲ್ಲಿ ಭಕ್ತಿ ಹುಟ್ಟಿ ಅವರ ಸೇವೆ ಸಲ್ಲಿಸುತ್ತ ನಡೆದರು.
ಒಂದು ದಿವಸ ಬೆಂಗಳೂರಿನ ಕೆಲವು ಭಕ್ತರು ಹುಬ್ಬಳ್ಳಿಗೆ ಬಂದು ಸದ್ಗುರುಗಳನ್ನು ಕಂಡು ಗುರುಗಳೇ ನಾವು ಅನೇಕ ವರ್ಷಗಳಿಂದ ತಮ್ಮ ದರ್ಶನಕ್ಕಾಗಿ ಬರುತ್ತಿದ್ದೇವೆ. ಬೆಂಗಳೂರಿನಲ್ಲಿಯೇ ಒಂದು ಆಶ್ರಮ ಸ್ಥಾಪಿಸಿ ಅಲ್ಲಿ ಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ ಮುಂತಾದವುಗಳನ್ನು ನಡೆಸುತ್ತಿದ್ದರೆ ಆ ಭಾಗದ ಜನರಿಗೂ ಅನುಕೂಲವಾಗುತ್ತದೆಯೆಂದು ವಿಚಾರ ಮಾಡಿದ್ದೇವೆ. ದಯವಿಟ್ಟು ತಮ್ಮ ಅಪ್ಪಣೆಯಾಗಬೇಕು' ಎಂದು ಬೇಡಿಕೊಂಡರು. ಆಗ ಗುರುಗಳು ಸಮ್ಮತಿಸಿ ಹಳ್ಳಾಳದ ಸಂತ ಗೋವಿಂದ ಸಂತನನ್ನು ಕರೆದು ನೋಡು ಗೋವಿಂದಾ, ಇನ್ನು ಮುಂದೆ ನೀನು ನಿನ್ನ ಪತ್ನಿ ರಾಧಾಬಾಯಿ ಇಬ್ಬರೂ ಭಕ್ತರ ಜೊತೆಗೆ ಬೆಂಗಳೂರಿಗೆ ಹೋಗಿ ಸಿದ್ಧಾಶ್ರಮ ಸ್ಥಾಪಿಸಿ ಅಲ್ಲಿ ಧರ್ಮಕಾರ್ಯ ನಡೆಸುತ್ತ ಲೋಕ ಕಲ್ಯಾಣ ಮಾಡಬೇಕಾಗಿದೆ. ನೀನು ಇವರ ಸಂಗಡ ಹೋಗು' ಎಂದು ಆಶೀರ್ವದಿಸಿದರು.
ಆಗ ಸಂತರು ಸಿದ್ದರ ಆಜ್ಞೆಯಂತೆ ಬೆಂಗಳೂರಿಗೆ ಹೋದರು. ಅಲ್ಲಿ ಚಾಮರಾಜಪೇಟೆಯಲ್ಲಿ ನಾಲ್ಕನೆಯ ರಸ್ತೆಯಲ್ಲಿ ಒಂದು ಮನೆಯನ್ನು ಸ್ವಂತ ಖರ್ಚಿನಿಂದ ಕೊಂಡು ಅದಕ್ಕೆ ಸಿದ್ದಾಶ್ರಮವೆಂದು ನಾಮಕರಣ ಮಾಡಿ ತನ್ನ ಮನೆಯಲ್ಲಿ ಸಾರ್ವಜನಿಕರಿಂದ ಸಹಾಯ ಪಡೆದು ಅಮೃತಶಿಲೆಯ ಶ್ರೀ ಸಿದ್ಧಾರೂಢರ ಶ್ರೀರಾಮ, ಲಕ್ಷ್ಮಣ, ಸೀತಾ, ಆಂಜನೇಯ, ಗಣಪತಿ ವಿಗ್ರಹ ಸ್ಥಾಪಿಸಿ ಪ್ರತಿದಿನ ಪೂಜಾ ಕೈಂಕರ್ಯ ಮತ್ತು ಶಾಸ್ತ್ರ ಪ್ರವಚನ, ಕೀರ್ತನ, ಭಜನೆ ಕಾರ್ಯಕ್ರಮ ನಡೆಯುವಂತೆ ವ್ಯವಸ್ಥೆ ಮಾಡಿದರು. ನಂತರ ಗೋವಿಂದ ಸಂತರ ಭಾವಮೈದುನ ಕೃಷ್ಣಪ್ಪ ಗಾಯಕೊಂಡ ಅವರನ್ನು ನೇಮಕ ಮಾಡಿದರು. ಬರಬರುತ್ತ ಆ ಭಾಗದಲ್ಲಿ ಸಿದ್ಧಾಶ್ರಮದ ಮಹಿಮೆಯಿಂದ ಬಹಳ ಪ್ರಚಾರ ಪಡೆದು ಅನೇಕ ಊರುಗಳಿಂದ ಸಾಕಷ್ಟು ಜನರು ಬರುತ್ತಿರುವುದರಿಂದ ಬಹಳ ಪ್ರಸಿದ್ದಿಯಾಯಿತು. ನಂತರ ಶ್ರೀ ಸಿದ್ದಾರೂಢರು ಅಲ್ಲಿಯ ಎಲ್ಲ ಕಾರ್ಯಕ್ರಮದ ನಿರ್ವಹಣೆಗೆ ಆವೂಬಾಯಿಯವರನ್ನು ಕಳಿಸಿದರು. ಅವಳು ಅಲ್ಲಿಗೆ ಹೋಗಿ ಮಠದ ಕಾರ್ಯಕ್ರಮವನ್ನು ದಕ್ಷತೆಯಿಂದ ನಡೆಸುತ್ತಿದ್ದಳು.
ಇತ್ತ ಹಳ್ಳಾಳದಲ್ಲಿ ತನ್ನ ಅಣ್ಣ ಭಾಸ್ಕರರಾಯರು ಏಕಾಏಕಿ ನಿಧನರಾದರು. ಈ ಸುದ್ದಿ ತಿಳಿದು ಅವೂಬಾಯಿಯು ಹಳ್ಳಾಳಕ್ಕೆ ಹೋಗಿ ನೋಡಿದಾಗ ಅವನ ಎಲ್ಲ ಮಕ್ಕಳಾದ ಇಂದುಬಾಯಿ, ಸದಾಶಿವ, ಮೀರಾಬಾಯಿ, ಶಾಂತಾಬಾಯಿ ಎಲ್ಲರೂ ಸಣ್ಣವರಿರುವುದರಿಂದ ಅವರನ್ನು ಕರೆದುಕೊಂಡು ಬೆಂಗಳೂರಿಗೆ ಬಂದರು. ನಂತರ ಸದಾಶಿವನನ್ನು ಶಾಲಾ ಶಿಕ್ಷಣಕ್ಕೆ ಹಚ್ಚಿದಳು. ಆಗ ಬೆಂಗಳೂರಿನ ಆಶ್ರಮದ ಸ್ವಾಮಿಗಳಾದ ಕೃಷ್ಣಪ್ಪ ಗಾಯಕೊಂಡೆಯವರು ಸಮಾಧಿಸ್ಥರಾದರು. ಆಗ ಆ ಸ್ಥಾನದಲ್ಲಿ ಯಾರನ್ನು ನೇಮಿಸಬೇಕೆಂದು ಭಕ್ತರಲ್ಲಿ ಜಿಜ್ಞಾಸೆಯುಂಟಾಗಿ ಕೊನೆಗೆ ಸದಾಶಿವನನ್ನು ಆಶ್ರಮದ ಪಟ್ಟಾಧಿಕಾರಿಯನ್ನಾಗಿ ಮಾಡಬೇಕೆಂದು ಭಕ್ತರು ತೀರ್ಮಾನಿಸಿ ವಿಜೃಂಭಣೆಯಿಂದ ಬಾಲಸ್ವಾಮಿಯನ್ನು ಪೀಠಧಿಕಾರಿಯನ್ನಾಗಿ ಮಾಡಿ ಶಿವಾನಂದ ಎಂಬ ಹೆಸರಿಟ್ಟರು.
ನಂತರ ಸಂಸ್ಕೃತ, ಜ್ಯೋತಿಷ್ಯಶಾಸ್ತ್ರ ಕಲಿಯಲು ಗೋಕರ್ಣದಲ್ಲಿರುವ ಅವರ ಅಕ್ಕ ಶ್ರೀಮತಿ ಇಂದುಬಾಯಿಯವರ ಮನೆಯಲ್ಲಿದ್ದು ಕಲಿಯುತ್ತಿದ್ದರು. ಆಗ ಹತ್ತೊಂಭತ್ತುನೂರಾ ನಲ್ಪತ್ತೆರಡನೆಯ ಇಸ್ವಿಯಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾಗಿತ್ತು. ಆ ಚಳುವಳಿಗೆ ಓಗೊಟ್ಟು ಅದರಲ್ಲಿ ಭಾಗವಹಿಸಿ ಆರು ತಿಂಗಳು ಜೈಲುವಾಸ ಅನುಭವಿಸಿ ಮರಳಿ ಬೆಂಗಳೂರಿಗೆ ಬಂದು ಪುನಃ ವಿದ್ಯಾಭ್ಯಾಸ ಮುಂದುವರಿಸಿದರು.
ಮುಂದೆ ಆವೂಬಾಯಿಯವರು ಶಿವಾನಂದನ ಮೇಲೆ ಬಹಳ ಲಕ್ಷ್ಯವಿಟ್ಟು ಮಠಾಧಿಕಾರವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ಯೋಗ್ಯತೆ ಬರಲೆಂದು ಅನೇಕ ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿ ಲೋಕಾನುಭವ ಬರುವಂತೆ ಮಾಡಿದಳು. ಸಂಸ್ಕೃತ ಭಾಷೆಯಲ್ಲಿರುವ ಧರ್ಮಶಾಸ್ತ್ರಗಳನ್ನು ಅಧ್ಯಯನ ಮಾಡಿಸಿದಳು. ಅದರಂತೆ ನಿಜಗುಣ ಶಿವಯೋಗಿಗಳ ಷಟ್‌ಶಾಸ್ತ್ರಗಳನ್ನು ವಿಶೇಷ ಅಧ್ಯಯನ ಮಾಡಲು ಹುಬ್ಬಳ್ಳಿಯ ಶ್ರೀ ಸಿದ್ಧರ ಶಿಷ್ಯ ಶಿವಪುತ್ರ ಸ್ವಾಮಿಗಳಲ್ಲಿ ಕಳಿಸಿಕೊಟ್ಟಳು. ಆ ಸಮಯದಲ್ಲಿ ಶ್ರೀ ಗುರುನಾಥಾರೂಢರ ಸೇವೆಯನ್ನು ಭಕ್ತಿಯಿಂದ ಮಾಡಿ ಅವರ ಕೃಪೆಗೆ ಪಾತ್ರರಾದರು. ಮುಂದೆ ಶಿವಾನಂದರು ಸನ್ಯಾಸ ಜೀವನವನ್ನು ನಡೆಸಬೇಕೆಂದು ತೀರ್ಮಾನಿಸಿದ್ದರು. ಆದರೆ ಅದಕ್ಕೆ ಆವೂಬಾಯಿಯವರ ಸಮ್ಮತಿಯಿರಲಿಲ್ಲ. ಕಾರಣವೇನೆಂದರೆ ಪ್ರಪಂಚದಲ್ಲಿದ್ದು ಪರಮಾರ್ಥ ಸಾಧಿಸಲು ಬರುತ್ತದೆಯೆಂದು ತಿಳಿದು ಶಿವಾನಂದರ ಮನವೊಲಿಸಲು ಅನೇಕ ಭಕ್ತರು ಮತ್ತು ಮಹಾನ್ ವ್ಯಕ್ತಿಗಳಿಂದ ಹೇಳಿಸಿ ಮನವೊಲಿಸಿದಾಗ ಶಿವಾನಂದರು ಪ್ರಾರಬ್ಧ ಕರ್ಮದಂತ ಮದುವೆಗೆ ಒಪ್ಪಿದರು. ಅದರಂತೆ ಶ್ರೀಮತಿ ಉಮಾಬಾಯಿಯವರ ಜೊತೆಗೆ ಲಗ್ನವಾಗಿ ಗೃಹಸ್ಥಾಶ್ರಮ ಸ್ವೀಕರಿಸಿದರು. ಮುಂದೆ ಪ್ರಪಂಚ ಸುತ್ತುತ್ತ ಅನೇಕ ಕಡೆಗಳಲ್ಲಿ ಹೋಗಿ ಸಿದ್ಧ ಸಂಪ್ರದಾಯದ ಪ್ರಚಾರ ಮಾಡುತ್ತ ಲೋಕೋದ್ಧಾರ ಕಾರ್ಯ ಪ್ರಾರಂಭಿಸಿದರು. ಅಲ್ಲದೆ ಮುಂಬೈಯಲ್ಲಿಯ ಶ್ರೀ ಸಿದ್ದರ ಶಿಷ್ಯ ಸತ್ಯಭಾಮಾ ಬಾಯಿಯವರು ನಡೆಸಿಕೊಂಡು ಬಂದ ಶ್ರೀ ಸಿದ್ಧರ ಸಪ್ತಾಹ ಕಾರ್ಯಕ್ಕೆ ಆವೂಬಾಯಿ ಮತ್ತು ಶ್ರೀ ಶಿವಾನಂದರು ಪ್ರೇರಕ ಶಕ್ತಿಯಾಗಿದ್ದರಿಂದ ಅದು ವಿಜೃಂಭಣೆಯಿಂದ ನಡೆಯುತ್ತಿತ್ತು. (ಈಗಲ ನಡೆದಿದೆ) ಮುಂದೆ ಶ್ರೀ ಗುರುನಾಥಾರೂಢರು ಮಹಾಸಮಾಧಿ ಹೊಂದಿದ ನಂತರ ಆವೂಬಾಯಿಯವರ ಆಜ್ಞೆಯಂತೆ ಕವಿಗಳೂ ಆಗಿರುವ ಶಿವಾನಂದರು, ಮುಂಬೈ ಭಕ್ತರ ಮತ್ತು ಇತರ ಭಕ್ತರ ನೆರವಿನಿಂದ ಮತ್ತು ಶ್ರೀ ರಾಮಣ್ಣ ಗಾರವಾಡ ಇವರ ಸಹಕಾರದಿಂದ ಶ್ರೀ ಗುರುನಾಥಾರೂಢರ ಸುಂದರ ಅಮೃತ ಶಿಲೆಯ ಭವ್ಯ ಮಂದಿರ ನಿರ್ಮಿಸಿದರು.
