ವಿದೇಶಿ ಸಾಧಕನಿಗೆ ದೇವರ ಅಸ್ತಿತ್ವದ ಅನುಭವ ಮಾಡಿದ ಗುರುನಾಥ
ವಿದೇಶದಿಂದ ಒಬ್ಬ ಸಾಧಕನು ಭಾರತದ ಸಂಸ್ಕೃತಿ ಮತ್ತು ಜಗತ್ತನ್ನು ಸೃಷ್ಟಿಸಿ ಅದನ್ನು ಆಳುವ ಮತ್ತು ಎಲ್ಲೆಡೆ ತುಂಬಿರುವ ದೇವರ ಅಸ್ತಿತ್ವವನ್ನು ವಿವರಿಸುವ ವಿಷಯವನ್ನು ಕೇಳಿ ಓದಿ, ದೇವರ ಅಸ್ತಿತ್ವವನ್ನು ಪ್ರತ್ಯಕ್ಷ ನೋಡುವ ತವಕದಿಂದ ಭಾರತಕ್ಕೆ ಬಂದನು. ತಿಂಗಳುಗಟ್ಟಲೆ ಹಲವಾರು ತೀರ್ಥ ಕ್ಷೇತ್ರಗಳನ್ನು ತಿರುಗಾಡಿ, ಹಲವಾರು ಮಹಾತ್ಮರ ದರ್ಶನಾಶೀರ್ವಾದ ಪಡೆದು ತಿರುಗಾಡಿದರೂ ಅವನಿಗೆ ತೃಪ್ತಿಯಾಗಲಿಲ್ಲ. ನಿರೀಕ್ಷಿಸಿದ ಆಸೆ ಈಡೇರದೆ ತಾನು ಅನೇಕರಿಂದ ಕೇಳಿದ್ದು ಸುಳ್ಳು ಎಂದು ನಿರಾಶನಾಗಿ ತಿರುಗಿ ತನ್ನ ದೇಶಕ್ಕೆ ಹೋಗಲು ಸಿದ್ಧನಾಗಿ ದಿಲ್ಲಿಯಲ್ಲಿದ್ದಾಗ, ಒಬ್ಬ ಮಹಾತ್ಮರು ಭೆಟ್ಟಿಯಾದರು.
ಆಗ ಆ ವಿದೇಶಿ ಪುರುಷನು ಅವರನ್ನು ಕುರಿತು ಮಹಾತ್ಮರೇ, ಈ ದೇಶದಲ್ಲಿ ದೇವರನ್ನು ತೋರಿಸಿರಿ ಎಂದು ಅನೇಕರನ್ನು ಕೇಳಿಕೊಂಡೆ. ಆದರೆ ಯಾರೂ ದೇವರನ್ನು ತೋರಿಸಲಿಲ್ಲ. ಆದ್ದರಿಂದ ನಿರಾಶನಾಗಿ ನನ್ನ ದೇಶಕ್ಕೆ ಹೊರಟಿದ್ದೇನೆ ಎಂದು ಹೇಳಿದನು. ಇದನ್ನು ಕೇಳಿದ ಆ ಮಹಾತ್ಮರು, ಸಾಧಕನೇ ನಿರಾಶನಾಗಬೇಡ. ಅಂಥ ಮಹಾತ್ಮರು ಈ ದೇಶದಲ್ಲಿ ಇದ್ದಾರೆ. ಕೊನೆಯ ಪ್ರಯತ್ನವೆಂದು ಕರ್ನಾಟಕ ರಾಜ್ಯದ ಹುಬ್ಬಳ್ಳಿಯಲ್ಲಿ ಒಂದು ಪ್ರಸಿದ್ದ ಸಿದ್ಧಾರೂಢ ಮಠವಿದೆ. ಅಲ್ಲಿಗೆ ಹೋಗು, ನಿನ್ನ ಸಂಶಯ ಪರಿಹಾರವಾಗುತ್ತದೆ ಎಂದು ತಿಳಿಸಿ ಮುಂದೆ ಹೋಗಿ ಅದೃಶ್ಯನಾದನು.
ಅನ್ನ ನೀರುಗಳ ವಿಶೇಷ ಪರಿವೆಯಿಲ್ಲದೆ ಆ ವಿದೇಶಿಯನು ಹುಬ್ಬಳ್ಳಿಗೆ ಬಂದು ಮಠದ ಆವರಣವೆಲ್ಲ ತಿರುಗಾಡಿ ಯಾರನ್ನು ಕೇಳಿದರೂ ಮತ್ತೆ ಅವನಿಗೆ ನಿರಾಶೆ ಕಾದಿತ್ತು. ಆಗ ಗುರುನಾಥನು ಮಠದ ಹತ್ತಿರದ ಉಜ್ಜಣ್ಣವರ ಮನೆಯಲ್ಲಿದ್ದರು. ಅಲ್ಲಿ ಭಕ್ತಾದಿಗಳ ಗದ್ದಲ ಕಂಡು ಇಲ್ಲಿ ಏನು ನಡೆದಿದೆ ಎಂಬ ಕುತೂಹಲದಿಂದ ಒಳಗೆ ಹೋದಾಗ, ಸದ್ಗುರು ಶ್ರೀ ಗುರುನಾಥಾರೂಢರ ಪಾದಪೂಜೆ ನಡೆದಿತ್ತು. ಕಿರೀಟ ಧರಿಸಿದ್ದರು. ಆ ವಿದೇಶಿಯನು ಆ ಗುರುಮೂರ್ತಿಯನ್ನು ಕಂಡಾಕ್ಷಣ ಈ ಮೊದಲು ತಾನು ದಿಲ್ಲಿಯಲ್ಲಿ ಕಂಡ ಮಹಾತ್ಮರೇ ಇವರು ಎಂದು ಆಶ್ಚರ್ಯ ಚಕಿತನಾದನು. ತನ್ನ ಮನೋವೃತ್ತಿ ಅಂತರ್ಮುಖವಾಯಿತು. ಆಗ ಗುರುಗಳನ್ನು ನಿಟ್ಟಿಸಿ ನೋಡಿದಾಗ, ಶ್ರೀಗುರುನಾಥರ ಕೃಪಾದೃಷ್ಟಿ ಆತನ ಮೇಲೆ ಬಿದ್ದಿತು. ಆಗ ಆತನ ದೇಹ ಪ್ರಜ್ಞೆ ಇಂದ್ರಿಯಗಳ ಪ್ರಜೆಗಳು ಉಡುಗಿಹೋಗಿ, ಒಂದೆಡೆ ಭೂಮಿಗೆ ಒರಗಿ ಸಮಾಧಿ ಸ್ಥಿತಿಯಲ್ಲಿ ಉಳಿದನು.
ಆಗ ಅವನು ದೇವರ ಅಥವಾ ತನ್ನ ಸ್ವರೂಪದ ಆತ್ಮಾನಂದದಲ್ಲಿದ್ದನು. ಸ್ವಲ್ಪ ಹೊತ್ತಿನಲ್ಲಿ ಭಕ್ತರು ಅವನನ್ನು ಎಬ್ಬಿಸಿ ಅವನ ಭಾಷೆಯಲ್ಲಿ (ಆಂಗ್ಲ) ಆತನನ್ನು ವಿಚಾರಿಸಿದಾಗ, ಆತನು ಭಾರತಕ್ಕೆ ಬಂದ ಉದ್ದೇಶ ಈಡೇರದೆ ಹಿಂತಿರುಗುವಾಗ ದಿಲ್ಲಿಯಲ್ಲಿ ತಾನು ಕಂಡ ಮಹಾತ್ಮರೇ ಇವರು ಎಂದು ವಿವರವಾಗಿ ತಿಳಿಸಿ, ತನ್ನ ಮುಂಚಿನ ಬ್ರಹ್ಮಾನಂದ ಸ್ಥಿತಿಯನ್ನು ನೆನೆದು, ನನ್ನನ್ನು ಏಕೆ ಎಬ್ಬಿಸಿದಿರಿ ಎಂದು ಕೇಳಿದನು. ಆಗ ಅಲ್ಲಿದ್ದ ಜ್ಞಾನಿಗಳು, ಬ್ರಹ್ಮಾನಂದ ಸ್ಥಿತಿಯೇ ನೀನು ನೋಡಬೇಕಾದ ದೇವರು, ಆ ಸ್ವರೂಪವೇ ನಿನ್ನದು ಅದುವೇ ಜಗದ್ಭರಿತವಾಗಿದೆ ಎಂದು ಮುಂತಾಗಿ ಅವನ ಮನ ಮುಟ್ಟುವಂತೆ, ತಿಳಿಸಿದಾಗ ಶ್ರೀಗಳಿಗೆ ಸಾಷ್ಟಾಂಗ ನಮಸ್ಕರಿಸಿ ದೇವರ ಅಸ್ತಿತ್ವದ ಬಗ್ಗೆ ನಿಶ್ಚಿತವಾಗಿ ತಿಳಿದುಕೊಂಡು, ಮರಳಿ ತನ್ನ ದೇಶಕ್ಕೆ ಹೋದನು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
