ಸಿದ್ಧರಿಂದ ಗಾಯಕವಾಡ ಅರಸರ ಹೊಟ್ಟೆನೋವು ಶಮನ

 🌺 ಗಾಯಕವಾಡ ಅರಸರ ಹೊಟ್ಟೆನೋವು  ಶಮನ 🌺



ಶ್ರೀ ಸಿದ್ಧಾರೂಢ ಮಠಕ್ಕೆ ಬಡೋದೆಯ ಗಾಯಕವಾಡ ಅರಸರ ಕ್ಷೌರಿಕನೊಬ್ಬ ಬಂದಿದ್ದ. ಸಿದ್ಧರ ಲೀಲೆ ಅವರ ವ್ಯಕ್ತಿತ್ವ ನೋಡಿ ಪ್ರಭಾವಕ್ಕೊಳಗಾದ. ತಾನು ಊರಿಗೆ ಹೋಗಬೇಕಾಗಿತ್ತು. ಆದರೆ ಹೋಗುವ ಮನಸ್ಸಾಗದೆ ಕಣ್ಣೀರು ಸುರಿಸುತ್ತ ಸಿದ್ದರಲ್ಲಿ ಬಂದು ಸದ್ಗುರುವೇ, ನಿಮ್ಮನ್ನು ಬಿಟ್ಟು ಹೋಗುವ ಮನಸ್ಸಾಗುವುದಿಲ್ಲ, ಹೇಗೆ ಮಾಡಲಿ?' ಎಂದು ಕೈ ಮುಗಿದು ನಿಂತ. ಆಗ ಗುರುಗಳು 'ನೀನು ಹೋಗಿ ಬಾ, ನೀನು ಎಲ್ಲಿದ್ದರೂ ಯಾವಾಗ ನನ್ನನ್ನು ಕರೆಯುವೆಯೋ ಆಗ ನಾನು ಬರುತ್ತೇನೆ. ಈ ಭಾವಚಿತ್ರವನ್ನು ತೆಗೆದುಕೋ, ಇದನ್ನು ನಿತ್ಯ ಪೂಜಿಸುತ್ತ ನನ್ನ ಸ್ಮರಣೆ ಮಾಡು' ಎಂದು ಹೇಳಿ ಕಳಿಸಿದರು. ಅವನು ಒಲ್ಲದ ಮನಸ್ಸಿನಿಂದ ಬಡೋದೆಗೆ ಹೋದನು.
ಒಂದು ದಿನ ಕ್ಷೌರಿಕನು ಸಿದ್ಧರ ಭಾವಚಿತ್ರವನ್ನು ಅನನ್ಯ ಭಕ್ತಿಯಿಂದ ಪೂಜಿಸುತ್ತಿದ್ದನು. ಆಗ ರಾಜರ ಸೇವಕರು ಬಂದು ಈಗಲೇ ಅರಸರ ಕ್ಷೌರ ಮಾಡಲು ಬರಬೇಕೆಂದು ರಾಜರು ಆಜ್ಞೆ ಮಾಡಿದ್ದಾರೆ ತಕ್ಷಣ ಬಾ' ಎಂದು ಕರೆದರು. ಆಗ ಕ್ಷೌರಿಕ ಹೇಳಿದ `ನಾನು ಪೂಜೆ ಮಾಡುತ್ತಿದ್ದೇನೆ. ಅದನ್ನು ಮುಗಿಸಿ ಬರುತ್ತೇನೆ . ನೀವು ಮುಂದೆ ನಡೆಯಿರಿ' ಎಂದಾಗ ಸೇವಕರು ಕೋಪದಿಂದ ಅರಮನೆಗೆ ಹೋಗಿ ಅರಸರಿಗೆ ತಿಳಿಸಿದರು. ಆಗ ಗಾಯಕವಾಡ ಅರಸರು ಸಿಟ್ಟಿನಿಂದ ನನ್ನ ಆಜ್ಞೆಯನ್ನು ಉಲ್ಲಂಘಿಸಿದ್ದಾನೆ. ಅವನನ್ನು ಬಂಧಿಸಿ ತನ್ನಿರಿ' ಎಂದು ಆಜ್ಞೆ ಮಾಡಿದ ನಂತರ ಸೇವಕರು ಹೋದರು. ಆಮೇಲೆ ಕ್ಷೌರಿಕ ಬಂದ. ಆಗ ಮಹಾರಾಜರು ಹಿಂದೆ ನಡೆದ ಘಟನೆಯನ್ನು ತಿಳಿಸಿದಾಗ ಕ್ಷೌರಿಕ ಹೇಳಿದ `ಮಹಾರಾಜರೇ, ನಾನು ರೂಢಿಯಂತೆ  ಬರುವಂತೆ ಬಂದೆ' ಎಂದು ಅರಸರ ಕ್ಷೌರ ಮಾಡಿ ಹೊರಟು ಹೋದ. 'ಆಮೇಲೆ ಸೇವಕರು ಕ್ಷೇರಿಕನನ್ನು ಬಂಧಿಸಿ ತಂದು ನಿಲ್ಲಿಸಿದರು. ಆಗ ಮಹಾರಾಜರಿಗೆ ಆಶ್ಚರ್ಯವಾಗಿ ಕೇಳಿದರು 'ನೀನು ಸ್ವಲ್ಪ ಹೊತ್ತಿನ ಮುಂಚೆ ಕ್ಷೌರ ಮಾಡಿ ಹೋಗಿರುವಿ ಮತ್ತೆ ನಿನ್ನನ್ನು ಬಂಧಿಸಿ ತಂದದ್ದು ಹೇಗೆ?' ಎಂದು ಪ್ರಶ್ನಿಸಿದಾಗ ಕ್ಷೌರಿಕ ಹೇಳಿದ ಅರಸರೇ, ಸೇವಕರು ಕರೆಯ ಬಂದಾಗ ನಾನು ಸಿದ್ದರ ಭಾವಚಿತ್ರವನ್ನು ಪೂಜಿಸುತ್ತಿದ್ದು, ಪೂಜೆಯ ನಂತರ ಬರುತ್ತೇನೆಂದು ಹೇಳಿದ್ದು ನಿಜ. ಈಗ ಸೇವಕರು ಬಂಧಿಸಿರುವುದೂ ನಿಜ. ಆದರೆ ಪೂಜೆ ಮಾಡುವಾಗ ಸಿದ್ಧನನ್ನು ಕುರಿತು `ಸದ್ದುರುವೇ ನಿನ್ನ ಪೂಜೆಗೆ ಅಡ್ಡಿಯಾಯಿತಲ್ಲ ಎಂದು ದುಃಖದಿಂದ ಕೂಗಿದೆ. ಮಹಾರಾಜರೇ ನಿಮ್ಮ ಕ್ಷೌರ ಮಾಡಿದವ ನಾನಲ್ಲ. ನನ್ನ ರೂಪದಿಂದ ಸಿದ್ದನೇ ಬಂದು ಕ್ಷೌರ ಮಾಡಿ ಹೋಗಿ ನನ್ನನ್ನು ಕಾಪಾಡಿದ್ದಾನೆ' ಎಂದು ಹೇಳಿದಾಗ ರಾಜರು ಅಚ್ಚರಿಗೊಂಡು ಸಿದ್ದರ ಮೇಲೆ ಭಕ್ತಿಯುಂಟಾಯಿತು.
ಒಂದು ದಿನ ಗಾಯಕವಾಡ ಮಹಾರಾಜರ ಯಾವುದೋ ಒಂದು ದೋಷದಿಂದ ಅವರಿಗೆ ಹೊಟ್ಟೆನೋವು ಪ್ರಾರಂಭವಾಯಿತು. ಅದನ್ನು ಸಹಿಸುವುದು ಕಷ್ಟವಾಗಿ ರತ್ನಗಂಬಳಿಯಲ್ಲಿ ಒಂದು ವಾರ ಉರುಳಾಡಿದರ ಯಾವುದೇ ಔಷಧದಿಂದ ನೋವು ಶಮನವಾಗಲಿಲ್ಲ. ವಾಡೆಯಲ್ಲಿ ಎಲ್ಲ ಜನರು ಚಿಂತಿತರಾದರು. ಏನು ಮಾಡಬೇಕೋ ತಿಳಿಯಲಿಲ್ಲ. ಸಂಸ್ಥಾನದ ದಿವಾನರಾದ ತಾತ್ಯಾಸಾಹೇಬರು ಅಕಸ್ಮಾತ್ ಮುಂಬೈಗೆ ಹೋಗುವ ಪ್ರಸಂಗ ಬಂದಿತು. ಅವರು ಮುಂಬೈಗೆ ಹೋದಾಗ ಅಲ್ಲಿ ಮಾರವಾಡಿ ಸಂಘದಲ್ಲಿ ಬಾಲಾಜಿ ಮಂದಿರದಲ್ಲಿ ಶರಣಪ್ಪನವರು ಶ್ರೀ ಸಿದ್ಧರ ಚರಿತೆಯ ಕೀರ್ತನ ಮಾಡುತ್ತಿದ್ದರು.
ಈ ಪುಣ್ಯ ಕಾರ್ಯಕ್ಕೆ ತಾತ್ಯಾಸಾಹೇಬರು ಹೋಗಿ ಭಕ್ತಿಯಿಂದ ಅವರ ಕೀರ್ತನೆಯನ್ನು ತಲ್ಲೀನರಾಗಿ ಕೇಳುತ್ತ ಕುಳಿತಿದ್ದರು. ಸಿದ್ಧರ ಚರಿತ್ರೆಯಲ್ಲಿ ಬರುವ ಅನೇಕ ಭಕ್ತರನ್ನು ಸದ್ಗುರುಗಳು ಕಾಪಾಡಿದ ಪ್ರಕರಣಗಳನ್ನು ಶರಣಪ್ಪನವರಿಂದ ಕೇಳಿದ ತಾತ್ಯಾಸಾಹೇಬರು ಪ್ರಭಾವಿತರಾಗಿ ಇವರಿಂದ ನಮ್ಮ ಅರಸರ ನೋವು ನಿವಾರಣೆಯಾಗಬಹುದೆಂದು ನಂಬಿ ಕೀರ್ತನ ಮುಗಿದ ನಂತರ ಶರಣಪ್ಪನವರಿಗೆ ಹೇಳಿದರು `ಶರಣಪ್ಪನವರೇ, ನಮ್ಮ ಅರಸರು ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ಅದು ನಿಮ್ಮಿಂದ ನಿವಾರಣೆಯಾಗಬಹುದೆಂದು ನಂಬಿದ್ದೇನೆ. ದಯವಿಟ್ಟು ಏನಾದರೂ ಮಾಡಿರಿ' ಎಂದು ಬೇಡಿಕೊಂಡಾಗ ಅದನ್ನು ಮನ್ನಿಸಿ ಶರಣಪ್ಪನವರು ಕರುಣೆಯಿಂದ “ತಾತ್ಯಾ ಸಾಹೇಬರೇ, ಶ್ರೀ ಸಿದ್ದರ ನಾಮಸ್ಮರಣೆಯಿಂದ ಭವರೋಗ ನಿವಾರಣೆಯಾಗುವಾಗ ಈ ಕ್ಷುಲ್ಲಕ ರೋಗ ನಿವಾರಣೆಯಾಗುವುದರಲ್ಲಿ ಯಾವ ಸಂದೇಹವಿಲ್ಲ. ಚಿಂತಿಸಬೇಡಿರಿ' ಎಂದು ಹೇಳಿ ಸಿದ್ದರ ಭಾವಚಿತ್ರ ಪೂಜಿಸಿ, ಶ್ರೀ ಗುರು ಸಿದ್ದಾರೂಢ ಮಹಾರಾಜಕಿ ಜೈ' ಎಂದು ಒಂದೇ ಸಲ ಘೋಷಿಸಿದಾಗ ತಕ್ಷಣ ಬಡೋದೆಯಲ್ಲಿರುವ ಗಾಯಕವಾಡ ಅರಸರ ಹೊಟ್ಟೆನೋವು ನಿವಾರಣೆಯಾಯಿತು.
ಆಗ ತಾತ್ಯಾಸಾಹೇಬರು ಶರಣರೇ, ನಮ್ಮ ಅರಮನೆಗೆ ಬಂದು ಅರಸನನ್ನು ಕಂಡು ಅವರ ನೋವಿನ ಬಗ್ಗೆ ವಿಚಾರಿಸಿರಿ' ಎಂದಾಗ ಅದನ್ನು ಒಪ್ಪಿ ಇಬ್ಬರೂ ಸೇರಿ ಬಡೋದೆ ಗೆ ಬಂದು ಅರಸರನ್ನು ಕಂಡಾಗ ಅರಸರು ಯಾವ ನೋವಿಲ್ಲದೆ ಹಸನ್ಮುಖರಾಗಿರುವುದನ್ನು ಕಂಡು ಆಶ್ಚರ್ಯವಾಯಿತು. ಆಗ ತಾತ್ಯಾಸಾಹೇಬರು ಗಾಯಕವಾಡರಿಗೆ ಮುಂಬೈಯಲ್ಲಿ ನಡೆದ ಘಟನೆಯನ್ನು ವಿವರಿಸಿದಾಗ ಅರಸರು ದಿವಾನರು ರಾಜಪರಿವಾರದವರು ಹಾಗೂ ವಾಡೆಯ ಎಲ್ಲರೂ ಸಂತೋಷಗೊಂಡು ಅವರಲ್ಲಿ ಸಿದ್ಧರ ಭಕ್ತಿ ಹೆಚ್ಚಾಯಿತು.
ಆಗ ಅರಸರು ಶರಣರಿಗೆ ನತಮಸ್ತಕರಾಗಿ `ಶರಣರೇ ನಿಮ್ಮಿಂದ ನನ್ನ ಹೊಟ್ಟೆನೋವು ನಿವಾರಣೆಯಾಯಿತು. ಅದನ್ನು ಎಂದೂ ಮರೆಯಲಾರೆ' ಎಂದರು. ಆಗ ಶರಣರು ಹೇಳಿದರು ಅದರಲ್ಲಿ ನನ್ನದೇನಿಲ್ಲ. ಸದ್ಗುರುವೇ ಈ ರೀತಿ ನನ್ನ ಮೂಲಕ ಲೀಲೆಯನ್ನು ತೋರಿಸಿದ್ದಾನೆ' ಎಂದರು. ಆಗ ಅರಸರು ಸಿದ್ದರಿಗೆ ಕಾಣಿಕೆಯಾಗಿ ದೊಡ್ಡ ಮೊತ್ತದ ಬಂಗಾರದ ನಾಣ್ಯಗಳನ್ನು ಕಾಣಿಕೆಯಾಗಿ ತಂದು ಸಿದ್ಧರಿಗೆ ಅರ್ಪಿಸಿದರು. ಅಂದಿನಿಂದ ಮಹಾರಾಜರು ಸಿದ್ಧರ ಭಕ್ತರಾಗಿ ಮಠದಲ್ಲಿ ನಡೆಯುವ ವಿಶೇಷ ಕಾರ್ಯದಲ್ಲಿ ಭಾಗವಹಿಸಿ ಸೇವೆ ಸಲ್ಲಿಸತೊಡಗಿದರು. ಅವರು ಕೊಟ್ಟ ಕಾಣಿಕೆಯನ್ನು ದೂಡ್ಡ ಅಡುಗೆ ಮನೆ ಮತ್ತು ಸಿದ್ಧರ ಸಮಾಧಿ ಮಂದಿರ ಕಟ್ಟಲು ಬಳಸಿಕೊಂಡರಂತೆ.



ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ