ಗುಂಡಪ್ಪ ಶಾಸ್ತ್ರೀಗಳಿಂದ ಗ್ರಂಥ ರಚನೆ ಭಕ್ತರ ನಾಟಕ ಮಂಡಳಿ ಸ್ಥಾಪನೆ

 🌺ಗುಂಡಪ್ಪ ಶಾಸ್ತ್ರೀಗಳಿಂದ ಗ್ರಂಥ ರಚನೆ ಭಕ್ತರ ನಾಟಕ ಮಂಡಳಿ ಸ್ಥಾಪನೆ 🌺



ನವಲಗುಂದದಲ್ಲಿ ಗುಂಡಪ್ಪ ಶಾಸ್ತ್ರಿಗಳು ಮಹಾಪಂಡಿತರು, ಕವಿಗಳಾಗಿದ್ದು, ಪ್ರಸಿದ್ಧರಾಗಿದ್ದರು. ಅವರ ತಾಯಿ ಸರಸ್ವತಿ, ತಂದೆ ರೇವಣಭಟ್ಟ ಅವರ ಅಡ್ಡ ಹೆಸರು ಬೆಳಗುಪ್ಪಾ, ಪೂರ್ವಪುಣ್ಯವಶಾತ್ ಇವರ ಗರ್ಭದಲ್ಲಿ ಗುಂಡಪ್ಪ ಶಾಸ್ತ್ರಿಗಳು ಹುಟ್ಟಿದರು. ಸಚ್ಚಿದಾನಂದರ (ತಮ್ಮಣ್ಣ ಶಾಸ್ತ್ರಿ) ತಂಗಿಯ ಮಗನೇ ಗುಂಡಪ್ಪ ಶಾಸ್ತ್ರಿಗಳು, ಸಚ್ಚಿದಾನಂದರು ತಮ್ಮ ಮಗಳನ್ನೇ ಅವರಿಗೆ ಕೊಟ್ಟಿದ್ದರು. ಅವಳ ಹೆಸರು ಗಂಗಾಬಾಯಿ. ಗುಂಡಪ್ಪ ಶಾಸ್ತ್ರಿಗಳು ಸಣ್ಣವರಿರುವಾಗ ಸಚ್ಚಿದಾನಂದರ ಕಡೆಗೆ ವಿದ್ಯೆ ಕಲಿತು ಪಂಡಿತರಾದರು. ಶಾಸ್ತ್ರಿಗಳು ಗಣೇಶನ ಆರಾಧಕರಾಗಿದ್ದರಿಂದ ಆ ಮೂರ್ತಿಯನ್ನು ಸದಾ ತಮ್ಮ ಹೃದಯದಲ್ಲಿ ಮಾನಸಪೂಜೆ ಮಾಡುತ್ತಿದ್ದರು.
ಹೀಗೆ ಕೆಲವು ವರ್ಷ ಕಳೆದ ನಂತರ ಒಂದು ದಿನ ಅವರ ಕನಸಿನಲ್ಲಿ ಶ್ರೀ ಗಣೇಶನು ಪ್ರತ್ಯಕ್ಷನಾಗಿ `ಭಕ್ತ ಚತುರನೆ, ನಿನ್ನ ಪರಮ ಭಕ್ತಿಗೆ ನಾನು ಸಂತುಷ್ಟನಾಗಿದ್ದೇನೆ. ನೀನು ಸಿದ್ದಾರೂಢರ ಕಡೆಗೆ ಹೋಗು. ಅವರಿಗೆ ಶರಣಾಗತನಾಗಿ ಅವರು ಹೇಳಿದಂತೆ ಕೇಳು. ನೀನು ಜಗತೃಸಿದ್ದನಾಗುವಿ' ಎಂದು ಹೇಳಿ ಅದೃಶ್ಯನಾದನು. ಹೀಗೆ ಸ್ವಪ್ನವನ್ನು ನೋಡಿ ಆನಂದಗೊಂಡು ಆಗಲೇ ಹುಬ್ಬಳ್ಳಿಗೆ ಬಂದು ಸಚ್ಚಿದಾನಂದರನ್ನು ಕರೆದುಕೊಂಡು ಸಿದ್ಧಾರೂಢ ಗುರುಗಳಿಗೆ ಗುಂಡಪ್ಪ ಶಾಸ್ತ್ರಿಗಳು ಸೃಷ್ಟ ವಿಷಯವನ್ನು ತಿಳಿಸಿದರು.
ಆಗ ಸಿದ್ದಾರೂಢರು ಹೇಳಿದರು ನಿಮ್ಮ ಮೇಲೆ ಈಶಕೃಪೆ ಪೂರ್ಣವಾಗಿದೆ. ಆದ್ದರಿಂದಲೇ ಗಣೇಶನು ಇಲ್ಲಿಗೆ ಕಳಿಸಿದ್ದಾನೆ. ಇನ್ನು ಮೇಲೆ ನೀವು, ಚಿದಾನಂದಾವಧೂತರು ಬರೆದ ಜ್ಞಾನಸಿಂಧು ಗ್ರಂಥವು ಅನಾಯಾಸವಾಗಿ ಮುಮುಕ್ಷುಗಳಿಗೆ ತಿಳಿಯುವಂತೆ ಕನ್ನಡ ಭಾಷೆಯಲ್ಲಿ ವಚನರೂಪದಿಂದ ಬರೆಯಿರಿ. ಕಾರಣವೆಂದರೆ ಅದು ಬ್ರಹ್ಮ ಜಿಜ್ಞಾಸಿಗಳಿಗೆ ತಿಳಿಯಲು ಕಠಿಣವಾಗಿದೆ. ನೀವು ಸಂಸ್ಕೃತ ಪಂಡಿತರಾಗಿದ್ದೀರಿ. ಸಂಸ್ಕೃತ ಭಾಷೆ ಉತ್ತಮ ಬರುತ್ತದೆ. ಶಂಕರ ಭಾಷ್ಯಸಹಿತ ಕನ್ನಡದಲ್ಲಿ ಬರೆಯಿರಿ ಮತ್ತು ಸಚ್ಚಿದಾನಂದರ ಸಹಾಯ ತೆಗೆದುಕೊಳ್ಳಿರಿ' ಎಂದಾಗ ಗುಂಡಪ್ಪ ಶಾಸ್ತ್ರಿಗಳು ಒಪ್ಪಿಕೊಂಡು ನಮಸ್ಕರಿಸಿ ಹೋದರು.
ಶಾಸ್ತ್ರಿಗಳು ಹುಬ್ಬಳ್ಳಿಯಲ್ಲಿಯೇ ಮನೆ ಮಾಡಿ ಮಂಡಳಿ ಸಹಿತ ಇರಹತ್ತಿದರು. ಸಚ್ಚಿದಾನಂದರ ಸಹಾಯದಿಂದ ಜ್ಞಾನಸಿಂಧು ಗ್ರಂಥವನ್ನು ವಚನರೂಪದಿಂದ ಬರೆದರು. ಆಮೇಲೆ ಶಂಕರ ಭಾಷ್ಯವನ್ನು ಬರೆಯುವಾಗ ಮೇಲಿಂದ ಮೇಲೆ ಸಿದ್ಧರಿಗೆ ತೋರಿಸುತ್ತಿದ್ದರು. ಆಗ ಸಿದ್ದರು ಅದನ್ನು ಶೋಧ ಮಾಡಿ ಕಠಿಣ ಶಬ್ದಗಳಿಗೆ ಅರ್ಥ ಹೇಳುತ್ತಿದ್ದರು. ಹೀಗೆ ಸಚ್ಚಿದಾನಂದರ ಮತ್ತು ಸಿದ್ದರ ಸಹಯೋಗದಿಂದ ಗ್ರಂಥಪೂರ್ಣಗೊಳಿಸಿದರು. ಈ ಎರಡೂ ಗ್ರಂಥಗಳನ್ನು ತೆಗೆದುಕೊಂಡು ಹೋಗಿ ಸಿದ್ದರ ಚರಣಗಳಿಗೆ ಅರ್ಪಿಸಿದರು. ಆ ಸಮಯದಲ್ಲಿ ಬಳ್ಳಾರಿಯ ಕೆಲವು ಭಕ್ತರು ಬಂದು ಸಿದ್ಧರಿಗೆ ನಮಿಸಿ ಗ್ರಂಥಗಳನ್ನು ನೋಡಿ 'ಸದ್ಗುರುವೇ ಈ ಗ್ರಂಥಗಳನ್ನು ನಾವು ಮುದ್ರಿಸುತ್ತೇವೆ. ಮತ್ತು ಗುಂಡಪ್ಪ ಶಾಸ್ತ್ರಿಗಳಿಗೆ ಕರೆದುಕೊಂಡು ಹೋಗಿ ಸನ್ಮಾನಿಸಿ ಮಾನಪತ್ರ ಕೊಡುತ್ತೇವೆ. ಇದಕ್ಕೆ ಶ್ರೀ ಗುರುಗಳು ಅಪ್ಪಣೆ ಕೊಡಬೇಕು' ಎಂದು ಬೇಡಿಕೊಂಡರು.
ಸಿದ್ದರು ಭಕ್ತರ ವಿನಂತಿಯನ್ನು ಮಾನ್ಯ ಮಾಡಿದರು. ಆಗ ಸಿದ್ಧರ ಆಜ್ಞೆಯಂತೆ ಶಾಸ್ತ್ರಿಗಳು ಬಳ್ಳಾರಿಯ ಭಕ್ತರ ಜೊತೆಗೆ ಹೋಗಿ ಗ್ರಂಥದ ಮುದ್ರಣವನ್ನು ಪೂರ್ಣಗೊಳಿಸಿದರು. ನಂತರ ಭಕ್ತರು ಒಂದು ಸಭೆಯನ್ನು ಕರೆದು ಮಾನಪತ್ರ ಮತ್ತು ಕಾಣಿಕೆಗಳನ್ನು ಸಮರ್ಪಿಸಿದರು. ಆಮೇಲೆ ಶಾಸ್ತ್ರಿಗಳು ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರ ಚರಣಗಳಲ್ಲಿ ಮಾನಪತ್ರ ಸಮರ್ಪಿಸಿದಾಗ ಎಲ್ಲರೂ ಸಂತೋಷಗೊಂಡರು. ಗುಂಡಪ್ಪ ಶಾಸ್ತ್ರಿಗಳ ಜ್ಞಾನಸಿಂಧು ಮತ್ತು ಇತರ ಗ್ರಂಥಗಳನ್ನು ಮುಮುಕ್ಷುಗಳು ಸುಲಭವಾಗಿ ಓದಹತ್ತಿದರು. ಗುಂಡಪ್ಪ ಶಾಸ್ತ್ರಿಗಳು ಹಳೇಹುಬ್ಬಳ್ಳಿಯಲ್ಲಿದ್ದಾಗ ಅವರ ಪಾಂಡಿತ್ಯವನ್ನು ಕೇಳಿ ಹನುಮಂತಪ್ಪ ಕ್ಷೀರಸಾಗರ ಮತ್ತು ಹನುಮಂತಪ್ಪ ಕಾಪ್ಸೆಯವರು ಶಾಸ್ತ್ರಿಗಳ ಮನಗೆ ಬಂದು ಅವರನ್ನು ಕಂಡು ಶಾಸ್ತ್ರಿಗಳೇ, ನಿಮ್ಮಲ್ಲಿ ಉತ್ತಮ ಪಾಂಡಿತ್ಯವಿದೆ ಮತ್ತು ಪದ್ಯ ರಚನಾ ಸಾಮರ್ಥ್ಯವಿದೆ. ನಮಗೊಂದು ನಾಟಕ ಬರದು ಕೊಡಿರಿ' ಎಂದು ವಿನಂತಿಸಿಕೊಂಡಾಗ ಶಾಸ್ತ್ರಿಗಳು ಹೇಳಿದರು `ಶ್ರೀ ಸಿದ್ಧಾರೂಢರ ಆಜ್ಞೆಯಾದರೆ ಬರೆದುಕೊಡುತ್ತೇನೆ' ಎಂದರು. ಆಗ ಶಾಸ್ತ್ರಿಗಳು ಮತ್ತು ಸಚ್ಚಿದಾನಂದರು ಎಲ್ಲರೂ ಸೇರಿ ಸಿದ್ದಾಶ್ರಮಕ್ಕೆ ಬಂದು ಗುರುಗಳಿಗೆ ವಂದಿಸಿದಾಗ ಹನುಮಂತಪ್ಪನವರು ತಮ್ಮಿಚ್ಛೆಯನ್ನು ತಿಳಿಸಿದರು.
ಆಗ ಗುರುಗಳು ಹೀಗೆ ಹೇಳಿದರು “ಇಂದಿನ ದಿನಗಳಲ್ಲಿ ವಿಷಯಾಸಕ್ಕೆ ನಾಟಕಗಳು ನಡೆಯುವುದರಿಂದ ಜನರು ಕುಮಾರ್ಗಕ್ಕೆ ಹೋಗುತ್ತಾರೆ. ನೀವು ನಾಟಕವನ್ನೇ ಮಾಡುವುದಾದರೆ, ಅದು ಬೋಧರೂಪವಿದ್ದು, ಜನರು ಭಕ್ತಿಮಾರ್ಗಕ್ಕೆ ಹಚ್ಚುವಂಥ ನಾಟಕಗಳನ್ನು ಮಾಡಿರಿ' ಎಂದು ಹೇಳಿದರು. ಗುರುಗಳ ವಚನಾನುಸಾರ ಗುಂಡಪ್ಪ ಶಾಸ್ತ್ರಿಗಳು ನಾಟಕ ಬರೆಯತೊಡಗಿದರು. ಕ್ರಿ.ಶ. ಹತ್ತೊಂಭತ್ತುನೂರಾ ಒಂದನೆಯ ಇಸ್ವಿಯಲ್ಲಿ ಶ್ರೀ ಸಿದ್ಧಾರೂಢರನ್ನು ಸಚ್ಚಿದಾನಂದರು ಮತ್ತು ವಿರುಪಾಕ್ಷ ಶಾಸ್ತ್ರಿಗಳನ್ನು ಕರೆಸಿ ಪೂಜಿಸಿ ಗುಂಡಪ್ಪ ಶಾಸ್ತ್ರಿಗಳು ಸಂತ ತುಕಾರಾಮ ನಾಟಕವನ್ನು ಸಮರ್ಪಿಸಿದರು ಹಾಗೂ ಶ್ರೀ ಸಿದ್ಧಾರೂಢ ಪ್ರಸಾದಿಕ ನಾಟಕ ಮಂಡಳಿಯನ್ನೂ ಸ್ಥಾಪಿಸಿದರು. ಮುಂದೆ ಆ ನಾಟಕ ಮಂಡಳಿಯು ಹಲವಾರು ವರ್ಷ ನಡೆಯುತ್ತ ಕೀರ್ತಿ ಪಡೆಯಿತು.
🌺 ಪ್ರಭುವಿಗೆ ಶಿವಸಿದ್ಧಾಂತ ಇಷ್ಟಲಿಂಗ ಭೋದೆ 🌺
ಪ್ರಭು ಎಂಬವನು ಪ್ರೇಮದಿಂದ ಗುರುಪಾದ ಸೇವೆ ಮಾಡುತ್ತಿರುವಾಗ ಸಿದ್ದರು ಆತನ ಗುಣ, ಶೀಲ, ಶಿವಧರ್ಮ, ನೀತಿ ಮತ್ತು ಭಕ್ತಿಯನ್ನು ಕಂಡು ಅಧಿಕಾರಿಯೆಂದು ತಿಳಿದು,ಶಮೆ  ದಮೆಗಳನ್ನು ಪರೀಕ್ಷಿಸಿ ಸಂತೋಷದಿಂದ ಅವನಿಗೆ ಕುಮತ  ದೋಷಗಳನ್ನು ತೋರಿಸಿಕೊಟ್ಟು ಆಗಮ ನಿಗಮಗಳನ್ನು ತಿಳಿಸಿ ಮತ್ತೆ ಶಿವಾಗಮಗಳಲ್ಲಿ ಹೇಳಿದ ಶೈವ ಸಿದ್ಧಾಂತವನ್ನು ಬೋಧಿಸಿ ಯೋಗ ಮಾರ್ಗದಲ್ಲಿ ನೋಡಿದ ಆನಂದ ಜ್ಯೋತಿಯೇ ಪ್ರಜ್ಞಾನಂ ಬ್ರಹ್ಮ, ಅಹಂಬ್ರಹ್ಮಾಸ್ಮಿಯೆಂಬ ಅನುಭವವಾಗಿ ನೇತ್ರಜ್ಞಾನದಿಂದ ಹೊರಬಂದು ಸರ್ವವನ್ನೂ ಬೆಳಗುವ ಗುರು ಶಿವಲಿಂಗ ಜಂಗಮವೆಂದು ವರ್ತಿಸುವುದೇ ಆತ್ಮವಾಗಿದೆ.
ಇದು ನಿನ್ನ ಇಷ್ಟವಾಗಿದ್ದು ಇದುವೇ ಸತ್ಯವಾಗಿದೆ. ಇದುವೇ ಸರ್ವಾತ್ಮಕವಾಗಿದ್ದು ಸದ್ಯಕ್ತಿಗೆ ಆಶ್ರಯವಾಗಿದೆ. ಇದುವೇ ನೀನಾಗಿರುವಿ. ಹರಿಯ ಜಾದಿಗಳಿಗೂ ನಿಲುಕದ ಬ್ರಹ್ಮ, ವಿಷ್ಣು, ಮಹೇಶ್ವರರಿಗೂ ಮೀರಿ ಮಿಂಚಿದ ಚಿತ್ಕಳೆಯಾದ ಇಷ್ಟಲಿಂಗವೇ ನೀನಾಗಿರುವಿ. ಇದನ್ನು ನಂಬು ಎಂದು ಬೋಧಿಸಿದರು.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಚಿದ್ಧನಾನಂದರ ಸಮಾಧಿ ಅಲ್ಲಿ ಲೀಲೆ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ