ಮದ್ಯಪಾನಿಯು ಸಿದ್ಧರಿಂದ ಸಂತನಾದ

 🌺 ಮದ್ಯಪಾನಿಯು ಸಿದ್ಧರಿಂದ ಸಂತನಾದ 🌺



ಹುಬ್ಬಳ್ಳಿಯಲ್ಲಿ ದಾಮೋದರಪ್ಪ ಪರಶುರಾಮಪ್ಪ ಹಬೀಬ ಎಂಬ ಗುರುಭಕ್ತನಿದ್ದನು. ಅವನ ಪತ್ನಿ ಕೃಷ್ಣಾಬಾಯಿ ಸಾತ್ವಿಕತನದಿಂದ ಸಂಸಾರ ನಡೆಸುತ್ತಿದ್ದಳು. ದಾಮೋದರನು ಬಹಳ ಚತುರನಾಗಿದ್ದು, ಸರಕಾರಿ ಕೆಲಸದಿಂದ ಬಹಳ ಹಣ ಸಂಪಾದಿಸುತ್ತಿದ್ದನು. ಮದ್ಯಪಾನ ವ್ಯಸನಿಯಾಗಿದ್ದು, ಎಷ್ಟು ಗಳಿಸಿದರೂ ಮದ್ಯ, ಮಾಂಸ, ಸ್ತ್ರೀ ವ್ಯಸನ ಮಾಡುತ್ತ ಎಲ್ಲವನ್ನೂ ಖರ್ಚು ಮಾಡಿ ಮನೆಗೆ ಏನೂ ಕೊಡುತ್ತಿರಲಿಲ್ಲ. ಇದರಿಂದ ಅವನ ಪತ್ನಿಗೆ ಮನೆಯನ್ನು ಹೇಗೆ ನಡೆಸಬೇಕೆಂಬ ಚಿಂತೆ ಕಾಡುತ್ತಿತ್ತು. ದಾಮೋದರನು ಯಥೇಷ್ಟ ಕುಡಿದು ಬಂದು ಮನೆಯ ಜನರಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯುತ್ತಿದ್ದನು. ಏನು ಹೇಳಿದರೂ ಕೇಳುತ್ತಿರಲಿಲ್ಲ. ಹೀಗೆ ಎಷ್ಟೋ ಕಾಲ ಕಳೆದವು.
ಕೃಷ್ಣಾಬಾಯಿಯು ಸಿದ್ಧರ ಅನನ್ಯ ಭಕ್ತಳಾಗಿದ್ದು ನಿತ್ಯ ಮಠಕ್ಕೆ ಬಂದು ಸಿದ್ದರ ದರ್ಶನ ಪಡೆಯುತ್ತಿದ್ದಳು. ತನ್ನ ಪತಿಯ ವರ್ತನೆಯಿಂದ ಬೇಸರಗೊಂಡ ಲಕ್ಷ್ಮೀಬಾಯಿಯು ಒಂದು ದಿನ ಸಿದ್ಧರ ಹತ್ತಿರ ಬಂದು ತನ್ನ ದುಃಖದ ಕಾರಣ ತಿಳಿಸಿದಳು. ಆಗ ಸಿದ್ಧ ಹೇಳಿದ ಕೃಷ್ಣಾಬಾಯಿ, ಅವನನ್ನು ನಾನು ಕರೆಯುತ್ತೇನೆಂದು ನಿನ್ನ ಪತಿಯನ್ನು ನನ್ನ ಹತ್ತಿರ ಕಳಿಸಿಕೊಡು' ಎಂದರು. ಆಗ ಅವಳು ಮನೆಗೆ ಬಂದು ಗುರುಗಳ ಆದೇಶ ತಿಳಿಸಿದಳು. ದಾಮೋದರನು ಮಠಕ್ಕೆ ಬಂದು ಗುರುಗಳಿಗೆ ನಮಿಸಿ ನಿಂತಾಗ ಗುರುಗಳು ಹೇಳಿದರು 'ದಾಮೋದರಾ, ನೀನು ಮದ್ಯಪಾನ ಬಿಟ್ಟು ನಾನು ಹೇಳಿದಂತೆ ಕೇಳು. ನಿನಗೆ ಒಳ್ಳೆಯದಾಗುತ್ತದೆ' ಎಂದಾಗ ದಾಮೋದರನು ದೇಶಾವರಿ ನಕ್ಕು 'ಗುರುಗಳೇ, ಮದ್ಯಪಾನ ಮಾಡಬಾರದೆಂದು ನಿರ್ಬಂಧ ಹಾಕದೆ  ಬೇರೆ ಏನಾದರೂ ಹೇಳಿರಿ. ಅದನ್ನು ಶಿರಸಾವಹಿಸಿ ನಡೆಸಿಕೊಡುತ್ತೇನೆಂದು ವಚನ ಕೊಡುತ್ತೇನೆ' ಎಂದನು. ಆಗ ಗುರುಗಳು ನಗುತ್ತ `ಹಾಗಾದರೆ ನಿತ್ಯ ಸಾಯಂಕಾಲ ಸಚ್ಚಿದಾನಂದರ ಪುರಾಣ ಭಜನೆಗೆ ಹೋಗು ತಪ್ಪಿಸಬೇಡ' ಎಂದು ಹೇಳಿ ಕಳಿಸಿದರು.
ನಂತರ ದಾಮೋದರನು ಸಚ್ಚಿದಾನಂದರ (ತಮ್ಮಣ್ಣ ಶಾಸ್ತ್ರಿ) ಪುರಾಣ ಭಜನೆಗಳನ್ನು ಕೇಳತೊಡಗಿದನು. ಪುಣ್ಯವಶಾತ್ ಅವನ ಅಂತಃಕರಣ ಶುದ್ಧಿಯಾಗಿ ಅದರಲ್ಲಿಯ ಪಾಪ ನಾಶವಾಗಿ ಸಜ್ಜನನಾದನು, ನಿತ್ಯ ಸಂತ್ಸಂಗದಿಂದ ಅವನ ಕುಡಿಯುವ ಚಟವು ನಾಶವಾಯಿತು. ಆಮೇಲೆ ಸಚ್ಚಿದಾನಂದರನ್ನು ಭೇಟಿಯಾಗಿ `ಗುರುಗಳೇ, ನನಗೆ ರಾಮಮಂತ್ರವನ್ನು ಉಪದೇಶ ಮಾಡಿರಿ, ಇನ್ನು ಮೇಲೆ ಮದ್ಯಪಾನ ಮಾಡುವುದಿಲ್ಲ' ಎಂದಾಗ ಸಚ್ಚಿದಾನಂದರು 'ದಾಮೋದರಾ, ನೀನು ಈಗಲೇ ಹೋಗಿ ಸಿದ್ದಾರೂಢರ ಚರಣವಿಡಿದು ಇನ್ನು ಮುಂದ ಕುಡಿಯುವುದಿಲ್ಲವೆಂದು ಶಪಥಮಾಡಿ ಬಾ, ಆಗ ಮಂತ್ರೋಪದೇಶ ಮಾಡುತ್ತೇನೆ'
ಎಂದಾಗ ದಾಮೋದರನು ಮಠಕ್ಕೆ ಹೋಗಿ ಸಿದ್ಧರ ಚರಣವಿಡಿದು `ಸದ್ಗುರುವೇ, ಇನ್ನು ಮುಂದ ಎಂದಿಗೂ ಮದ್ಯಪಾನ ಮಾಡುವುದಿಲ್ಲ' ಎಂದು ಆಣೆ ಮಾಡಿದನು.
ಗುರುಗಳು ಅವನನ್ನು ಹತ್ತಿರ ಕರೆದು 'ಇದೇ ಬುದ್ದಿಯನ್ನಿಟ್ಟುಕೊಂಡು ನಡೆಯುತ್ತಿರು. ನಿನ್ನ ಮನೆತನ ಉದ್ಧಾರವಾಗುತ್ತದೆ' ಎಂದು ಆಶೀರ್ವದಿಸಿ ಕಳಿಸಿದರು. ಆಗ ಸಚ್ಚಿದಾನಂದರು ಮಂತ್ರೋಪದೇಶ ಮಾಡಿ ಹೇಳಿದರು `ನೀನು ಪ್ರತಿವರ್ಷ ಹದಿಮೂರು ಲಕ್ಷ ಮಂತ್ರ ಜಪಿಸಬೇಕು. ಆಗ ನಿನ್ನ ಉದ್ದಾರವಾಗುತ್ತದೆ' ಎಂದಾಗ ಹಬೀಬನು ಅದೇ ವರ್ಷ ಕೇವಲ ಹಾಲು ಹಣ್ಣು ತೆಗೆದುಕೊಂಡು ನಾಲ್ವತ್ತು ದಿವಸಗಳಲ್ಲಿ ಹದಿಮೂರು ಲಕ್ಷ ಮಂತ್ರ ಜಪ ಮಾಡಿದನು. ಕೊನೆಯ ದಿನ ಅವನ ಸ್ವಪ್ನದಲ್ಲಿ ಸಿದ್ಧಾರೂಢರು ಬಂದು 'ದಾಮೋದರಪ್ಪ, ನಿನ್ನ ಪಾಪನಿವಾರಣೆಯಾಗಿದೆ. ಸಚ್ಚಿದಾನಂದ ಬೇರೆಯಲ್ಲ, ನಾನು ಬೇರೆಯಲ್ಲ. ಒಂದೇ ಎಂದು ತಿಳಿ' ಎಂದು ಅದೃಶ್ಯರಾದರು. ಜಪದ ಕೊನೆಯ ದಿನ ಸಚ್ಚಿದಾನಂದರನ್ನು ಮತ್ತು ಸಿದ್ಧಾರೂಢರನ್ನು ಕರೆಸಿ ಪಾದಪೂಜಿಸಿ ಪ್ರಸಾದ ವಿತರಿಸಿದರು. ಆಗ ಕೃಷ್ಣಾಬಾಯಿಯು ಸಿದ್ಧರಿಗೆ ವಂದಿಸಿ `ನಿಮ್ಮ ಕೃಪೆಯಿಂದ ನಾವು ಉದ್ಧಾರವಾದೆವು. ನಿನ್ನ ಭಕ್ತಿಯನ್ನು ನಾವು ಎಂದಿಗೂ ಬಿಡುವುದಿಲ್ಲ' ಎಂದು ಹೇಳಿದಳು. ಆಗ ಅವರ ಮನೆ ಸುಖದಾಯಕವಾಯಿತು.



_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಖಿರಸಾ ಅವರ ಮನೆಯ ಭಾತ ಓಡಿದವು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ