ಮರಣಗಾಲದಲ್ಲಿ ತುಳಜಪ್ಪನಿಗೆ ಮುಕ್ತಿ ನೀಡಿದ
🌺 ಮರಣಗಾಲದಲ್ಲಿ ತುಳಜಪ್ಪನಿಗೆ ಮುಕ್ತಿ ನೀಡಿದ 🌺
ಹಳೇಹುಬ್ಬಳ್ಳಿಯಲ್ಲಿ ತುಳಜಪ್ಪ ಕ್ಷೀರಸಾಗರ ಎಂಬವರು ಸಿದ್ದಾರೂಢರ ಪರಮ ಭಕ್ತರಾಗಿದ್ದರು. ಶಾಸ್ತ್ರದಲ್ಲಿಯೂ ಬಹಳ ಆಸಕ್ತಿಯಿತ್ತು. ನಿತ್ಯ ಮಠಕ್ಕೆ ಹೋಗಿ ಸಿದ್ಧ ಬೋಧಾಮೃತವನ್ನು ಕೇಳಿ ಬರುತ್ತಿದ್ದರು. ಇದರಿಂದ ಅವರ ಮನಸ್ಸಿನಲ್ಲಿ ವಿರಕ್ತಿಯುಂಟಾಯಿತು. ಗಾಯನದಲ್ಲಿ ವಿಶೇಷ ಗತಿಯಿದ್ದು ನಾಟಕದಲ್ಲಿ ಸುಂದರ ಪಾತ್ರ ಮಾಡುತ್ತಿದ್ದರು. ಒಂದು ದಿನ ಸಿದ್ಧರ ಕಡೆಗೆ ಹೋಗಿ ನಮಸ್ಕರಿಸಿ ಶ್ರೀ ಗುರುವೇ, ಜನ್ಮ ಸಾರ್ಥಕ ಮಾಡಿಕೊಳ್ಳಲು ಯಾವ ಸಾಧನೆಯಿದೆ?' ಎಂದರು. ಆಗ ಸಿದ್ಧನು ವೇದಾಂತಶಾಸ್ತ್ರ ಬಹಳ ಕಠಿಣವಿದೆ. ಈ ಕಲಿಯುಗದಲ್ಲಿ ಭಕ್ತಿಮಾರ್ಗ ಸುಲಭವಾಗಿದೆ. ಸಾಧನೆಗೆ ಸುಲಭೋಪಾಯವಾಗಿದೆ. ಆದ್ದರಿಂದ ಅದೇ ಗಾಯನ ಕೀರ್ತನೆಯನ್ನು ಉಪಯೋಗಿಸಿ ಹರಿ ಭಜನೆಯನ್ನು ದಿನಾಲೂ ಮಾಡುತ್ತಿದ್ದರೆ ಅಂತರಂಗ ಶುದ್ಧಿಯಾಗುತ್ತದೆ. ಕೀರ್ತನ ಮಾಡುವುದಕ್ಕೆ ವಿರುಪಾಕ್ಷ ಭಟ್ಟರ ಜೊತೆಗೆ ಸಾಧನೆ ಮಾಡು. ಮುಂದೆ ಅಭ್ಯಾಸವಾಗಿ ನೀನೂ ಕೀರ್ತನೆ ಮಾಡಿ ಸದ್ಗುರುಗಳಿಗೆ ಸಂತೋಷಗೊಳಿಸು' ಎಂದು ಉಪದೇಶ ಮಾಡಿದರು.
ಆಗ ತುಳಜಪ್ಪ ಸಂತೋಷಗೊಂಡು ವಿರುಪಾಕ್ಷ ಭಟ್ಟರು ಕೀರ್ತನ ಮಾಡುವಾಗ ಅವರ ಅನುಕರಣೆ ಮಾಡುತ್ತಿದ್ದರು. ಹೀಗೆ ಕೆಲವು ದಿವಸ ಕಳೆದ ನಂತರ ಕೀರ್ತನೆ ಮಾಡುವ ಯೋಗ್ಯತೆ ಬಂದು ತುಳಜಪ್ಪನೂ ಕೀರ್ತನೆ ಮಾಡತೊಡಗಿದನು. ಮುಂದೆ ಜನಪ್ರಿಯನಾದನು. ವಿರುಪಾಕ್ಷ ಭಟ್ಟರು ವಿದ್ಯಾ ಗುರುವೆಂದೇ ನಂಬಿದ್ದನು. ಇದರಿಂದ ನಾಟಕದ ಗೀಳು ಕಡಿಮೆಯಾಯಿತು. ಕೀರ್ತನದಲ್ಲಿ ಆನಂದ ಪಡೆಯಹತ್ತಿದನು.
ಹೀಗಿರುವಾಗ ಅವನಿಗೆ ಪ್ಲೇಗ ರೋಗ ಬಂದು ಮರಣಗಾಲ ಸಮೀಪಿಸಿತು. ಜ್ವರದ ಬಾಧೆ ಹೆಚ್ಚಾಯಿತು. ಇನ್ನು ಉಳಿಯಲಾರನೆಂದು ನಿತ್ಯ ಸದ್ಗುರುಗಳ ಚರಣ ತೀರ್ಥ ತರಿಸಿ ಕುಡಿಯಹತ್ತಿದನು. ಒಂದು ದಿವಸ ಮನೆಯವರಿಗೆ ಹೇಳಿದ `ನನ್ನ ವಿದ್ಯಾ ಗುರುಗಳಾದ ವಿರುಪಾಕ್ಷ ಶಾಸ್ತ್ರಿ ಮತ್ತು ಗುರುಪತ್ನಿಯನ್ನು ಕರೆಸಿ ಪೂಜಿಸಬೇಕು' ಎಂದು ಹೇಳಿದ. ಆಗ ಅವನ ಬಂಧುವಿನ ಮಗನಾದ ಹನುಮಂತಪ್ಪ ಕ್ಷೀರಸಾಗರ, (ಇವರೇ ಮುಂದೆ ಪ್ರಸಿದ್ಧ ಕೀರ್ತನಕಾರರಾಗಿ ತಮ್ಮ ಶರೀರವಿರುವಪರ್ಯಂತ ಮಠದಲ್ಲಿ ಕೀರ್ತನೆ ಸೇವೆ ಸಲ್ಲಿಸುತ್ತಿದ್ದರು. ಇವರ ಪರಿಚಯ ನನಗಿತ್ತು.) ಅವರು ವಿರುಪಾಕ್ಷ ಭಟ್ಟರಿಗೆ ಭೇಟಿಯಾಗಿ ವಿಷಯ ತಿಳಿಸಿ ಭಟ್ಟರು ಮತ್ತು ಅವರ ಪತ್ನಿ ರೇಣುಕಾಬಾಯಿಯವರನ್ನು ಕರೆದುಕೊಂಡು ಬಂದರು. ಆಗ ತುಳಜಪ್ಪನು ಅವರನ್ನು ಉಚಿತಾಸನದಲ್ಲಿ ಕೂಡಿಸಿ ಪೂಜಿಸಿ ವಸ್ತ್ರ ಭೂಷಣಗಳನ್ನು ಕೊಟ್ಟು ಹೇಳಿದ `ನಾಳೆ ಮುಂಜಾನೆ ನಾವು ಹೋಗುತ್ತೇವೆ. ಜನ್ಮಜನ್ಮದಲ್ಲಿ ನಿಮ್ಮ ಕಿಂಕರನಾಗಬೇಕೆಂದು ಪ್ರಾರ್ಥಿಸುತ್ತೇನೆ' ಎಂದ.
ಆಗ ವಿರುಪಾಕ್ಷ ಭಟ್ಟರು ಹೇಳಿದರು 'ತುಳಜಪ್ಪ, ನಿನ್ನ ಪೂರ್ವಪುಣ್ಯ ಬಹಳವಿರುವುದರಿಂದ ಸದ್ಗುರು ಭಕ್ತರಾಗಿದ್ದೀರಿ. ಸಿದ್ಧನ ಕೃಪೆಯಿಂದ ನಿಮ್ಮ ವಂಶ ಉದ್ದಾರವಾಗುತ್ತದೆ' ಎಂದು ಆಶೀರ್ವದಿಸಿ ಭಟ್ಟರು ತಮ್ಮ ಮನೆಗೆ ಹೋದರು. ಜ್ವರ ಹೆಚ್ಚಾಯಿತು. ಮನೆಯ ಜನ ಗಾಬರಿಯಾದರು. ಮರುದಿನ ಮುಂಜಾನೆ ತುಳಜಪ್ಪ ಹೇಳಿದ ಸಿದ್ದ ಗುರುಗಳನ್ನು ಕರೆದುಕೊಂಡು ಬನ್ನಿರಿ' ಎಂದಾಗ ಹನುಮಂತಪ್ಪ ಮಠಕ್ಕೆ ಹೋಗಿ ಸಿದ್ಧರಿಗೆ ವಿಷಯ ತಿಳಿಸಿ ಕರೆದುಕೊಂಡು ಬಂದ. ತುಳಜಪ್ಪ ತನ್ನ ಹಸ್ತದಿಂದ ಸಿದ್ದರನ್ನು ಪೂಜಿಸಿ ಹೇಳಿದ ಸದ್ಗುರುವೇ, ಇನ್ನು ಒಂದು ತಾಸಿಗೆ ಶರೀರ ಬಿಡುತ್ತೇನೆ. ಅಲ್ಲಿಯವರೆಗೆ ನೀವು ಇಲ್ಲಿಯೇ ಇರಬೇಕು' ಎಂದಾಗ ಗುರುಗಳು ಅವನ ಮಸ್ತಕದ ಮೇಲೆ ಹಸ್ತವನ್ನಿಟ್ಟು, 'ತುಳಜಪ್ಪ, ನೀನು ಧನ್ಯನಾಗಿರುವಿ. ಇನ್ನು ನಿನಗೆ ಪುನರ್ಜನ್ಮವಿಲ್ಲ. ಮುಕ್ತನಾಗಿರುವಿ. ನಿನ್ನ ದೇಹಾವಸಾನದತನಕ ನಾನು ಇಲ್ಲಿಯೇ ಇರುತ್ತೆನೆ. ನಾಮಸ್ಮರಣ ಮಾಡು' ಎಂದಾಗ ತುಳಜಪ್ಪ ಹೇಳಿದ `ಸಿದ್ಧಾರೂಢ ಗುರುವೆ , ನನ್ನ ಕಡೆಗೆ ನೋಡು. ಒಬ್ಬ ಸಾಧು ಪುರುಷನು ನನ್ನನ್ನು ಒಯ್ಯಲು ವಿಮಾನ ತಂದಿದ್ದಾನೆ. ಇನ್ನು ನಾನು ಹೋಗುತ್ತೇನೆ. ಅಪ್ಪಣೆ ಕೊಡು' ಎಂದು ಹೇಳಿ ಓಂ ನಮಃ ಶಿವಾಯ ಮಂತ್ರ ಪಠಿಸುತ್ತ ಸಿದ್ಧರ ಪಾದಗಳಲ್ಲಿ ಮಸ್ತಕವನ್ನಿಟ್ಟಾಗ ದೇಹ ಪತನವಾಯಿತು. ಕೂಡಿದ ಜನ ತುಳಜಪ್ಪ ಎಂಥ ಪುಣ್ಯವಂತನೆಂದು ಕೊಂಡಾಡಿದರು. ಆಮೇಲೆ ಸ್ವಾಮಿಗಳು ಸಂತೋಷದಿಂದ ಅಂತ್ಯಸಂಸ್ಕಾರ ಮಾಡಿರೆಂದು ಹೇಳಿ ಆಶ್ರಮಕ್ಕೆ ಹೋದರು. ನಂತರ ಎಲ್ಲರೂ ಸೇರಿ ಅಂತ್ಯ ಸಂಸ್ಕಾರ ಮಾಡಿದರು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಗುಂಡಪ್ಪ ಶಾಸ್ತ್ರೀಗಳಿಂದ ಗ್ರಂಥ ರಚನೆ ಭಕ್ತರ ನಾಟಕ ಮಂಡಳಿ ಸ್ಥಾಪನೆ
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಗುಂಡಪ್ಪ ಶಾಸ್ತ್ರೀಗಳಿಂದ ಗ್ರಂಥ ರಚನೆ ಭಕ್ತರ ನಾಟಕ ಮಂಡಳಿ ಸ್ಥಾಪನೆ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
