ಶ್ರೀ ಸಿದ್ಧರ ಕರುಣೆಯಿಂದ ಶಿವರಾಮನ ಮುರಿದ ಕಾಲು ನೆಟ್ಟಗಾಯಿತು
🌺 ಶ್ರೀ ಸಿದ್ಧರ ಕರುಣೆಯಿಂದ ಶಿವರಾಮನ ಮುರಿದ ಕಾಲು ನೆಟ್ಟಗಾಯಿತು 🌺
ಹಳೇಹುಬ್ಬಳ್ಳಿಯ ಶಿವರಾಮಪಂತ ಏಕಬೋಟೆಯವರು ಪಂಡರಪುರದ ವಾರಕರಿ ಸಂಪ್ರದಾಯದವರಾಗಿದ್ದು, ನಿತ್ಯ ತುಮಕೂರಗಲ್ಲಿಯ ವಿಠಲ ಹರಿಮಂದಿರದಲ್ಲಿ ನಡೆಯುವ ಭಜನೆಗೆ ಹೋಗುವ ರೂಢಿ. ಸುಮಾರು ೧೯೮೪ ನೇ ಇಸ್ವಿಯಲ್ಲಿ ಪ್ರತಿವರ್ಷದಂತೆ ಹರಿ ಮಂದಿರದಲ್ಲಿ ಫಾಲ್ಗುಣ ವದ್ಯ ದ್ವಿತೀಯಾ ದಿವಸ ಸಂತ ತುಕಾರಾಮರು ವೈಕುಂಠಕ್ಕೆ ಪ್ರಯಾಣ ಮಾಡಿದ ದಿನದಿಂದ ಫಾಲ್ಗುಣ ವದ್ಯ ಷಷ್ಟಿ ಸಂತ ಏಕನಾಥ ಮಹಾರಾಜರು ಅವತಾರ ಸಮಾಪ್ತಿ ಮಾಡಿದ ದಿವಸದವರೆಗೆ ಹರಿಮಂದಿರದಲ್ಲಿ ಸಪ್ತಾಹ ಆಚರಿಸುವ ಸಂಪ್ರದಾಯವಿದ್ದು, ಏಕನಾಥ ಷಷ್ಟಿಯ ದಿವಸ ದಿಂಡಿ ಪಾಲಕಿ ಉತ್ಸವವಾದ ನಂತರ ಸಮಾಪ್ತಿಯ ದಿವಸ ಗೋಪಾಳ ಕಾಲಾ ಆದ ನಂತರ ಉತ್ಸವ ಸಮಾಪ್ತಿಯಾಗುತ್ತಿತ್ತು. ಸಪ್ತಾಹದ ಕಾಲದಲ್ಲಿ ವೀಣಾ ಜಾಗರಣೆಗಾಗಿ ಪ್ರತಿಯೊಬ್ಬರು ಎರಡು ತಾಸು ವೀಣಾ ಹಿಡಿದು ಭಜನೆ ಮಾಡುತ್ತಿದ್ದು, ದಿಂಡಿಯಾಗುವವರೆಗೆ ವೀಣಾ ಕೆಳಗಿಡದ ಆ ಸೇವೆಯನ್ನು ಇನ್ನೊಬ್ಬರಿಗೆ ಒಪ್ಪಿಸುವ ಪದ್ಧತಿಯಾಗಿತ್ತು.
ಶಿವರಾಮ ಪಂತರಿಗೆ ರಾತ್ರಿ ಹತ್ತರಿಂದ ೧೨ರ ವರೆಗೆ ಜಾಗರಣೆಯ ಪಾಳಿ ಬಂದಿದ್ದು ಅವರು ಸಾಯಂಕಾಲ ಏಳರ ಸುಮಾರಿಗೆ ಮನೆ ಬಿಟ್ಟು ಹರಿಮಂದಿರಕ್ಕೆ ಹೋಗುವಾಗ ಚನ್ನಪೇಟೆಯ ಮುಖ್ಯರಸ್ತೆಯಲ್ಲಿರುವ ಧೋಬಿಘಾಟದ ಹತ್ತಿರ ಹೋಗುವಾಗ ನಸುಗತ್ತಲೆಯಾಗಿದ್ದು, ಒಬ್ಬ ಹೆಣ್ಣು ಮಗಳು ತನ್ನ ಕೆಲಸಕ್ಕೆ ಹೋಗುವಾಗ ಅಲ್ಲಿ ಕೆಲವು ಉಢಾಳ ಯುವಕರು ಆ ಹೆಣ್ಣುಮಗಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತ ಪೀಡಿಸುತ್ತಿದ್ದುದನ್ನು ಕಂಡು ಮರುಗಿ ಶಿವರಾಮ ಪಂತರು ಅವರಿಗೆ ಸಿಟ್ಟು ಮಾಡಿ, ನಿಮಗೆ ಯಾರಾದರೂ ಅಕ್ಕತಂಗಿಯರಿಲ್ಲವೇನು ಎಂದು ಬೆದರಿಸಿದರು.
ಆಗ ಉಡಾಳ ಹುಡುಗರು ಸಿಟ್ಟಿಗೆದ್ದ ಶಿವರಾಮ ಪಂತರಿಗೆ ಹೊಡೆದು ನೆಲಕ್ಕೆ ಕೆಡವಿ ಕಾಲನ್ನು ತಿರುವಿದ್ದರಿಂದ ಎಡಗಾಲಿನ ಸಂದಿ ತಪ್ಪಿತು. ಆ ಸಮಯದಲ್ಲಿ ಕೆಲವರು ಅವರನ್ನು ಕೆಎಂಸಿಯಲ್ಲಿ ಭರ್ತಿ ಮಾಡಿದಾಗ ಅಲ್ಲಿ ಡಾಕ್ಟರರು ಅವರ ಸಂದಿಯ ಎಲುಬನ್ನು ಸರಿಯಾಗಿ ಜೋಡಿಸಿ ಪ್ಲಾಸ್ಟರ್ ಹಾಕಿ ನಂತರ ಅದನ್ನು ಬಿಚ್ಚಿ ಕಾಲಿಗೆ ಭಾರ ಹಾಕಿ ಇಳಿಬಿಟ್ಟರು. ಅದರಿಂದ ಅವರಿಗೆ ಹೊರಳಾಡಲು ಬರುತ್ತಿರಲಿಲ್ಲ. ಆದ್ದರಿಂದ ಬಹಳ ನೋವು ಅನುಭವಿಸಬೇಕಾಯಿತು. ಅಂಥ ನೋವಿನಲ್ಲೂ ನಿರಂತರ ಗುರುಸ್ಮರಣೆ ಮಾಡುತ್ತಿದ್ದರು.
ಕಾಲಿನ ನೋವು ತಾಳಲಾರದೆ ರಾತ್ರಿ ಶ್ರೀ ಗುರು ಸಿದ್ದಾರೂಢರ ಸ್ಮರಣೆ ಮಾಡಿ ಕಣ್ಣಲ್ಲಿ ನೀರು ತಂದು, ಹೇ ಗುರುನಾಥಾ ನಾನು ಏನು ತಪ್ಪು ಮಾಡಿದರೂ ದಯಾಮೂರ್ತಿಯಾದ ನೀನು ನನ್ನನ್ನು ಕ್ಷಮಿಸು ಎಂದು ಆರ್ತ ಸ್ವರದಿಂದ ಗುರುಗಳ ಪ್ರಾರ್ಥನೆ ಮಾಡುತ್ತ ಮಲಗಿದಾಗ ರಾತ್ರಿ ಸುಮಾರು ಮೂರು ಗಂಟೆ ಸುಮಾರಿಗೆ ಕನಸಿನಲ್ಲಿ ಪ್ರತ್ಯಕ್ಷ ಶ್ರೀ ಸಿದ್ಧಾರೂಢರು ಬಂದು ಅವರ ಪಲ್ಲಂಗದ ಹತ್ತಿರ ಒಂದು ಖರ್ಚಿಯ ಮೇಲೆ ಕುಳಿತು, ತಮ್ಮಾ, ಪೂರ್ವ ಜನ್ಮದ ಪ್ರಾರಬ್ಧದ ಪ್ರಕಾರ ಸುಖ ದುಃಖಗಳು ಬರುತ್ತವೆ. ಅದಕ್ಕೆ ಚಿಂತಿಸಬಾರದು. ನಿನಗೆ ಏನೂ ಆಗುವುದಿಲ್ಲ. ನಿನ್ನ ದುಃಖ ನಿವಾರಣೆಯಾಗುತ್ತದೆ ಎಂದು ಹೇಳಿ ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂವಿನಿಂದ ನೋವಾದ ಕಾಲಿನ ಮೇಲೆ ನಿಧಾನವಾಗಿ ಸವರಿ ಆಶೀರ್ವಾದ ಮಾಡಿ ಅದೃಶ್ಯರಾದರು.
ಮರುದಿವಸ ಎಲ್ಲರೂ ಆಶ್ಚರ್ಯಪಡುವಂತೆ ಕಾಲಿನ ನೋವು ಸ್ವಲ್ಪವೂ ಇಲ್ಲದಂತಾಗಿ ಹಗುರಾದ ಅನುಭವವಾಯಿತು. ಅಲ್ಲದೆ ಪಂತರಿಗೆ ಶ್ರೀ ಗುರು ಕೃಪೆಯಿಂದ ಈ ಕಷ್ಟ ನಿವಾರಣೆಯಾಯಿತೆಂದು ಕಣ್ಣಲ್ಲಿ ನೀರು ತುಂಬಿದವು. ಮರುದಿವಸ ಡಾಕ್ಟರರು ಬಂದು ಪರೀಕ್ಷಿಸಿದಾಗ ಅವರು ಇಷ್ಟು ಬೇಗ ಗುಣವಾದದ್ದನ್ನು ಕಂಡು ಅಚ್ಚರಿಪಟ್ಟು ಶಿವರಾಮರಿಗೆ, ನೀವು ಈಗ ಪೂರ್ಣ ಗುಣವಾಗಿದ್ದೀರಿ, ಮನೆಗೆ ಹೋಗಬಹುದು ಎಂದು ಹೇಳಿ ಹೋದರು. ಅದೇ ದಿವಸ ಅವರಿಗೆ ದವಾಖಾನೆಯಿಂದ ಕರೆದುಕೊಂಡು ಬಂದ ನಂತರ ಶಿವರಾಮ ಮನೆಯವರಿಗೆ ಶ್ರೀ ಸಿದ್ಧರ ಮಹಿಮೆ ತಿಳಿಸಿದಾಗ ಎಲ್ಲರಿಗೂ ಶ್ರೀ ಸಿದ್ಧಾರೂಢರಲ್ಲಿ ಭಕ್ತಿ ಹೆಚ್ಚಾಯಿತು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
