ಸುಡುವ ಅಂಬಲಿಯಿಂದ ಪಾರಾದ ಅಂಬವ್ವ

 🌺 ಸುಡುವ ಅಂಬಲಿಯಿಂದ ಪಾರಾದ ಅಂಬವ್ವ 🌺

ಶ್ರೀ ಶರಣಪ್ಪನವರ ಭಕ್ತಿಯು ಸಿದ್ಧಾರೂಢರಲ್ಲಿ ಅಪಾರವಾಗಿದ್ದರಿಂದ ಹಳ್ಳಿ ಹಳ್ಳಿಗೆ ಹೋಗಿ ಸಿದ್ದರ ಕೀರ್ತಿಯನ್ನು ಬೇಸರವಿಲ್ಲದೆ ಹೇಳಿ ಜನರನ್ನು ಭಕ್ತಿ ಮಾರ್ಗಕ್ಕೆ ಆಕರ್ಷಿಸುತ್ತಿದ್ದರು. ಒಂದು ದಿನ ಸೋಲಾಪುರದ ಕವಡಿ ಮಾಯದೇವರ ಗುಡಿಯಲ್ಲಿ ಸಿದ್ದರ ಚರಿತ್ರೆ ಹೇಳುತ್ತ ತನ್ನ ತಾನರಿದೊಡೆ ಮುಕ್ತನು. ತನ್ನ ತಾನರಿಯದೆ ಹೇಗೆ ವಿರಕ್ತನು ಮತ್ತು ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಮನಮುಟ್ಟುವಂತೆ ವಿವರಿಸಿದರು. ಅವರ ಕೀರ್ತನಕ್ಕೆ ಬಂದ ಅಂಬವ್ವನೆಂಬ ಹೆಣ್ಣು ಮಗಳು ಸಿದ್ದಾರೂಢರ ಮಹಿಮೆಯನ್ನು ಕೇಳಿ ತೀವ್ರ ವೈರಾಗ್ಯ ಹುಟ್ಟಿ ಶರಣಪ್ಪನವರ ಸಮೀಪ ಹೋಗಿ ಸಾಷ್ಟಾಂಗ ನಮಿಸಿ ಹೀಗೆ ಬೇಡಿಕೊಂಡಳು.
ಶರಣಪ್ಪನವರೇ, ಶ್ರೀ ಸಿದ್ಧಾರೂಢರ ಮಹಿಮೆಯನ್ನು ಕೇಳಿ ನನಗೆ ಸಂಸಾರದಲ್ಲಿ ಧನಕನಕ ಬಂಧು ಬಾಂಧವ ಎಲ್ಲವೂ ಬೇಡವಾಗಿದೆ. ನನ್ನ ಪತಿದೇವರು ಅಲ್ಪವಯಸ್ಸಿನಲ್ಲಿಯೇ ತೀರಿಕೊಂಡರು. ನನಗೆ ಯಾರೂ ಇಲ್ಲದ ಕಾರಣ ಶ್ರೀ ಸಿದ್ಧಾರೂಢರ ಪಾದಗಳಿಗೆ ಬಿದ್ದು ಬೇಡಿಕೊಳ್ಳುತ್ತೇನೆ. ಅವರಲ್ಲಿ ಕರೆದುಕೊಂಡು ಹೋಗಿ ಉದ್ಧರಿಸಿರಿ' ಎಂದು ಕಣ್ಣೀರಿಡುತ್ತ ಬೇಡಿಕೊಂಡಳು. ಆಗ ಶರಣರು ಕನಿಕರಪಟ್ಟು ಅಂಬವ್ವಾ , ನಿನ್ನ ಭಕ್ತಿಗೆ ನಾನು ಮೆಚ್ಚಿದೆನು, ಹುಬ್ಬಳ್ಳಿಗೆ ನಡೆ ಹೋಗೋಣ. ಸಿದ್ದರು ನಿನ್ನ ಭಕ್ತಿಗೆ ಮೆಚ್ಚಿ ಉಪಾಯ ಹೇಳಿದರೆ ನಿನಗೆ ಸಮಾಧಾನವಾಗುವುದು' ಎಂದರು. ಆಗ ಅಂಬವ್ವ, ತನ್ನ ತಂದೆ ತಾಯಿಗಳ ಅಪ್ಪಣೆ ಪಡೆದು ಶರಣಪ್ಪನವರ ಜೊತೆಗೆ ಹುಬ್ಬಳ್ಳಿಗೆ ಹೋಗಿ ಸಿದ್ದರ ಪಾದಗಳಿಗೆ ಬಿದ್ದಳು. ನಂತರ ಶರಣಪ್ಪನವರು ಸಿದ್ಧರಿಗೆ ನಮಿಸಿ ಅಪಾ, ಈ ಹೆಣ್ಣುಮಗಳು ಸಂಸಾರ ತಾಪದಿಂದ ಬಳಲಿದ್ದಾಳೆ. ಇವಳನ್ನು ಉದ್ಧರಿಸಿರಿ' ಎಂದು ಬೇಡಿಕೊಂಡಾಗ ದಯಾಘನ ಸಿದ್ದರು `ಅಂಬವ್ವಾ, ನೀನು ಇದೇ ವೈರಾಗ್ಯದಿಂದಿದ್ದು, ದೇವರ ಸ್ಮರಣೆ ಮಾಡುತ್ತಿರು. ನಿನ್ನ ಕಲ್ಯಾಣವಾಗುತ್ತದೆ' ಎಂದು ಆಶೀರ್ವದಿಸಿದರು.
ಆರೂಢರ ವಾಕ್ಯದಿಂದ ಸಮಾಧಾನಗೊಂಡ ಅಂಬವ್ವ, ಅಪಾ ನಿಮ್ಮ ಮಾತಿನಿಂದ ಶಾಂತಳಾಗಿದ್ದೇನೆ. ನೀನು ಹೇಳಿದಂತೆ ಮಾಡುತ್ತೇನೆ. ಆದರೆ ನನ್ನ ಹಿಂದೆ ನೀನು ಯಾವಾಗಲೂ ಇರಬೇಕು. ಇಲ್ಲವಾದರೆ ಕಾಮಕ್ರೋಧಾದಿಗಳು ಮೋಸ ಮಾಡಿ ನನ್ನ ಭಕ್ತಿಯನ್ನು ನಾಶ ಮಾಡಿ ಅಧೋಗತಿಗೆ ಈಡು ಮಾಡುತ್ತವೆ. ಆದ್ದರಿಂದ ನಿನ್ನ ಆಶೀರ್ವಾದ ಪೂರ್ಣವಿರಬೇಕು' ಎಂದು ಬೇಡಿಕೊಂಡಳು. ಆಗ ಸಿದ್ದನು 'ಅಂಬವ್ವ, ನೀನು ಯಾವ ಚಿಂತೆಯನ್ನೂ ಮಾಡಬೇಡ, ಈಗ ನಿನ್ನೂರಿಗೆ ಹೋಗಿ ತಂದೆ, ತಾಯಿಗಳ ಹತ್ತಿರವಿದ್ದು ಹಗಲಿರುಳೂ ನಾಮಸ್ಮರಣೆ ಮಾಡುತ್ತಿರು' ಎಂದರು. ನಂತರ ಸಿದ್ಧಾರೂಢರ ಅಪ್ಪಣೆ ಪಡೆದು  ಅಂಬವ್ವನು ಶರಣರ ಕೂಡ ಸೋಲಾಪುರಕ್ಕೆ ನಡೆದಳು.
ದಾರಿಯಲ್ಲಿ ಶರಣಪ್ಪ ಸ್ವಾಮಿಗಳನ್ನು ಕುರಿತು ಅಪಾ, ಧ್ಯಾನ ಮಾಡಬೇಕಾದರ ಯಾವ ಮೂರ್ತಿಯನ್ನು ಧ್ಯಾನ ಮಾಡಬೇಕು?' ಎಂದಳು. ಆಗ ಶರಣರು `ಕೇಳು ಅಂಬವ್ವ, ನಿನಗೆ ಯಾವುದಾದರೂ ವ್ಯಕ್ತಿಯ ನೆನಪಾದರೆ ಆ ವ್ಯಕ್ತಿಯು ಯಾವಾಗಲೂ ನಿನ್ನ ಕಣ್ಣು ಮುಂದೆ ನಿಂತಂತೆ ಭಾಸವಾಗುತ್ತದೆ. ಅದರಂತೆ ನಾಮೋಚ್ಚಾರ ಮಾಡುತ್ತ ಸದ್ಗುರುವನ್ನು ನೆನೆಸಿಕೊಂಡರೆ ಸದ್ಗುರುವು ನಿನ್ನ ಕಣ್ಮುಂದೆ ನಿಂತಂತೆ ಭಾಸವಾಗುತ್ತದೆ. ನಂತರ ಗುರುವಿನ ವರ್ಣನೆ ಮಾಡುತ್ತ ಹೋದಂತೆ ನಿನ್ನಲ್ಲಿದ್ದ ಕಲ್ಮಶಗಳು ನಾಶವಾಗಿ ಅಂತಃಕರಣ ಪರಿಶುದ್ಧವಾಗುತ್ತದೆ. ಆ ಪರಿಶುದ್ಧ ಅಂತಃಕರಣದಿಂದ ಧ್ಯಾನ ಮಾಡಿದರೆ ನಿನ್ನಲ್ಲಿದ್ದ ಭೇದ ಭಾವಗಳು ಹೋಗುತ್ತವೆ. ಅವು ಹೋದ ಮೇಲೆ ಧ್ಯಾತೃ, ಧೈಯ, ಭಾವನೆಗಳು ಲಯವಾಗಿ ಏಕಪ್ರಕಾರವಾಗುವುದು.
ಅನಂತರ ಹೃದಯದೊಳಗಿರುವ ತಾಪಗಳು ನಾಶವಾಗುವವು. ಆಗ ನಿನಗೆ  ಶಾಂತಿ ಲಭಿಸುತ್ತದೆ. ಇದಕ್ಕೆ ಶಿವಜೀವೈಕ್ಯವೆಂದೂ ಹೇಳುವರು. ಅದರಂತೆ ತತ್ವಮಸಿ ಎಂದೂ ಹೇಳುವರು. ಆತ್ಮ ತತ್ವಜ್ಞಾನವೆಂತಲೂ ಹೇಳುತ್ತಾರೆ, ಇದರಿಂದ ಜನ್ಮಾಂತರ ದುಃಖಗಳು ನಾಶವಾಗಿ ಮುಕ್ತಿ ಕೈ ಸೇರುವುದು. ಇದಕ್ಕಾಗಿ ಸದ್ಗುರುವಿನ ಧ್ಯಾನ ಮರೆಯಬೇಡ' ಎಂದರು. ಆಗ ಅಂಬವ್ವ ಅವರ ಆಜ್ಞೆಯಂತೆ ಸೋಲಾಪುರಕ್ಕೆ ಹೋಗಿ ಶರಣರು ಹೇಳಿದಂತೆ ಸಾಧನ ಮಾಡಿದಾಗ ಅಂತಃಕರಣ ಪರಿಶುದ್ಧವಾಗಿ ಹೃದಯ ಶಾಂತಿ ಹೊಂದಿತು.
ನಂತರ ಅಂಬವ್ವ  ಶರಣ ಸ್ವಾಮಿಗಳು ಜಾತ್ರೆಗೆ ಸೋಲಾಪುರದಿಂದ ಅಕ್ಕಲಕೋಟೆಗೆ ಅನೇಕ ಭಕ್ತರನ್ನು ಕರೆದುಕೊಂಡು ಹೋಗಿ ದಾಸೋಹ ನಡೆಸುತ್ತಿದ್ದಳು. ಒಂದು ವರ್ಷ ಅಡುಗೆಯ ಮನೆಯಲ್ಲಿ ಅಂಬಲಿ ಮಾಡಿ ಪಾತ್ರೆಯನ್ನು ಎತ್ತಿದಾಗ ಮಣ್ಣಿನ ಹಂಡೆ ಒಡೆದು ಅಂಬಲಿ ಅವಳ ಮೈಮೇಲೆ ಬಿದ್ದು ಮೈತುಂಬ ಗುಳ್ಳೆಗಳೆದ್ದು ಬಹಳ ದುಃಖವಾಗಿ ದೊಡ್ಡ ಸ್ವರದಿಂದ `ಸಿದ್ದಾರೂಢಾ ಇನ್ನು ನನ್ನ ಕೆಲಸ ಮುಗಿಯಿತು. ನಿನ್ನ ಕೆಲಸ ನೀನೇ ನೋಡಿಕೊ' ಎಂದು ಕೂಗಿದಾಗ ಅಲ್ಲಿದ್ದ ಜನರು ಓಡಿ ಬಂದು ನೋಡಿದಾಗ ಅವಳು ಮೂರ್ಛ ಹೊಂದಿ ಬಿದ್ದಿದ್ದಳು. ಆಗ ಶರಣಪ್ಪನವರು ಓಡಿ ಬಂದು ಅಂಬವ್ವನ ಮೇಲೆ ಹಸ್ತವನ್ನಿಟ್ಟು ಸಿದ್ದಾರೂಢರ ಪಾದತೀರ್ಥ ಸಿಂಪಡಿಸಿ ಬಾಯೊಳಗೆ ಹಾಕಿದರು. ಸ್ವಲ್ಪ ಹೊತ್ತಿನಲ್ಲಿ ಅಂಬವ್ವ ಚೇತರಿಸಿಕೊಂಡು ಎದ್ದು ಜನರನ್ನು ನೋಡಿ ಇಷ್ಟು ಜನರು ನರದಿರುವಿರೇಕೆ?' ಎಂದು ಕೇಳಿದಾಗ ನೆರೆದ ಜನರು ನಡೆದ ಘಟನೆಯನ್ನು ತಿಳಿಸಿದರು. ಆಗ ಅಂಬವ್ವ `ನಾನು ಅಂಬಲಿ ಕಾಸಿ ಇಳಿಸುವಾಗ ನನ್ನ ಮೈಮೇಲೆ ಗಂಜಿ ಬಿದ್ದದ್ದಷ್ಟೇ ನನಗೆ ಗೊತ್ತು. ಮುಂದೇನಾಯಿತೋ ಗೊತ್ತಿಲ್ಲ' ಎಂದು ಹೇಳಿದಳು. ಅಷ್ಟರಲ್ಲಿ ಎಲ್ಲರೂ ನಾಮಸ್ಮರಣೆ ಮಾಡಿದಾಗ ಅವಳ ಮೈಮೇಲಿನ ಗುರುಗಳು ಒಡೆದು ಪೂರ್ಣ ಗುಣ ಹೊಂದಿದಳು. ಇದನ್ನು ನೋಡಿದವರು ಸಿದ್ಧಾರೂಢರೇ ಇವಳನ್ನು ರಕ್ಷಿಸಿದರು ಎಂದು ಸಿದ್ಧನನ್ನು ಕೊಂಡಾಡಿದರು.
ಮುಂದ ಕೆಲವು ದಿವಸ ಕಳೆದ ನಂತರ ಅಂಬವ್ವ ಶರಣರ ಹತ್ತಿರ ಹೋಗಿ ನಮಸ್ಕರಿಸಿ `ಅಪಾ, ನನಗೆ ಸಿದ್ಧಾರೂಢರ ಭೇಟಿಯಾಗಿ ಬಹಳ ದಿವಸಗಳಾದವು. ಅವರು ಮತ್ತು ನೀವು ಹೇಳಿದಂತೆ  ನಾಮಸ್ಮರಣೆ ಮತ್ತು ಧ್ಯಾನ ಮಾಡಿದಾಗ ನನ್ನ ಮನಸ್ಸು ಶಾಂತವಾಯಿತು. ಮೊದಲು ನಾನು ಕೆಲವು ದಿವಸ ನಾಮೋಚ್ಚಾರಣೆ ಮಾಡಿದನು. ನಂತರ ಕಣ್ಣು ಮುಚ್ಚಿ ಸಿದ್ಧಾರೂಢರ ಮೂರ್ತಿ ಧ್ಯಾನ ಮಾಡಹತ್ತಿದನು.
ಹೀಗೆ ಕೆಲವು ದಿವಸ ಧ್ಯಾನ ಮಾಡುತ್ತ ಹೋದಾಗ ಲೋಂದು ದಿವಸ ದೊಡ್ಡ ಪ್ರಕಾಶದ ಗುಂಪಿನ ಹಾಗೆ ತೋರಿತು. ಹೀಗೆ ಕುಳಿತಾಗ ಬಾಹ್ಯ ವಿಷಯಗಳ ವ್ಯಾಪಾರ ನಿಂತು ನೋಡುವ ನೋಡಿಸಿಕೊಳ್ಳುವವರಾರು ಎಂಬ ಸ್ಮತಿ ತಪ್ಪಿತು. ಕೆಲ ಹೊತ್ತಿನಲ್ಲಿ ಪುನಃ ಎಚ್ಚರಗೊಂಡಾಗ ಹೊರಗಿನ ಜಗತ್ತು ಕಂಡಿತು. ಆಗ ನನ್ನ ಮನಸ್ಸು ಶಾಂತವಾಯಿತು. ಧ್ಯಾನವೆಂದರೆ ಇದೇಯೇನು' ಎಂದು ಕೇಳಿದಳು.
ಅದಕ್ಕೆ ಶರಣರು ಅಂಬವ್ವಾ, ಆಗ ನಿನಗೆ ಯಾವ ಸುಖಾನುಭವವಾಯಿತೂ ಅದಕ್ಕೇ ಶಿವ ಜೀವೈಕ್ಯವೆಂದು ಮಹಾತ್ಮರು ಹೇಳುತ್ತಾರೆ. ಇದಕ್ಕೆ ಆತ್ಮಜ್ಞಾನವೆನ್ನುತ್ತಾರೆ. ಇನ್ನು ಮುಂದೆ ಸರ್ವತ್ರ ಸಮದೃಷ್ಟಿಯಿಂದ ನೋಡುತ್ತ ಹೋದರೆ ನಿನಗೆ ದ್ವೈತಭಾವ ನಿವಾರಣೆಯಾಗಿ ಏಕಸ್ವರೂಪ ತ್ರಿಪುಟಿಯಾಗುವುದು. ಆಗ ನೀನು ಮುಕ್ತ ಸ್ವರೂಪಳು. ನಾನೊಬ್ಬಳೇ ಇರುವನು. ನನ್ನ ಹೊರತು ಇನ್ನೊಂದಿಲ್ಲವೆಂದು ನಿನಗೆ ಅನುಭವವಾಗುವುದು. ಅದು ದೃಢವಾದರೆ ಶರೀರ ಭ್ರಾಂತಿ ನಾಶವಾಗಿ ಜೀವನ್ಮುಕ್ತಳಾಗುವಿ' ಎಂದು ಶರಣರು ಆಶೀರ್ವದಿಸಿದರು. ಆಗ ಅಂಬವ್ವ ಹೇಳಿದಳು `ಅಪಾ, ನೀವು ಇಲ್ಲಿಯವರೆಗೆ ಬೋಧ ಮಾಡಿ ನನ್ನೊಳಗಿರುವ ದೋಷ ನಿವಾರಿಸಿ ನನಗೆ, ಜ್ಞಾನರೂಪ ಪ್ರಕಾಶವನ್ನು ತೋರಿಸಿದ್ದೀರಿ. ಆದ್ದರಿಂದ ನಾನು ಧನ್ಯಳಾದೆನು' ಎಂದು ನಮಸ್ಕರಿಸಿದರು.



_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉 ಶ್ರೀ ರುದ್ರಮುನಿಗಳಿಗೆ ಜ್ಞಾನಭೋದೆ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ