ಶ್ರೀ ಗುರುನಾಥಾರೂಢರ ಜನನ




ತರುಣ ಸನ್ಯಾಸಿಯಾದ ಶ್ರೀ ಸಿದ್ಧಾರೂಢರನ್ನು ಭೀಮಪ್ಪ ಉಜ್ಜಣ್ಣವರ ಹಾಗೂ ಅವರ ಪತ್ನಿ ಲಕ್ಷ್ಮವ್ವ ಇವರು ತಮ್ಮ ಮಾನಸ ಪುತ್ರನನ್ನಾಗಿ ಭಾವಿಸಿಕೊಂಡರೇ ಸರಿ ಆದರೆ ಅಷ್ಟೇ ಪ್ರೇಮದಿಂದ ಸಿದ್ಧರನ್ನು ಸದ್ಗುರಗಳೆಂದು ಅಥವಾ ಸ್ವಾಮಿಗಳೆಂದು ಶ್ರದ್ಧಾ ಭಕ್ತಿಗಳಿಂದ ಕಾಣುತ್ತಿದ್ದರು. ಆದರೂ ತಮ್ಮ ವಂಶಾಭಿವೃದ್ಧಿಯಾಗಬೇಕೆಂಬ ಕೊರಗು ಅವರ ಮನಸ್ಸಿನಲ್ಲಿ ಕಾಡುತ್ತಿತ್ತು. ಆದ್ದರಿಂದ ಲಕ್ಷ್ಮಮ್ಮ ತನ್ನ ತಮ್ಮನ ಮಗನಾದ ಸಿದ್ಧಪ್ಪನನ್ನು ಸಾಕುಮಗನಾಗಿ ದತ್ತಕ ತೆಗೆದುಕೊಂಡು ಪಾಲನೆ ಪೋಷಣೆ ಮಾಡಿದರು. ಅಲ್ಲದೆ ಅವನಿಗೆ ಪಾರ್ವತಮ್ಮ ಎಂಬ ಹೆಣ್ಣುಮಗಳನ್ನು ತಂದು ಲಗ್ನ ಮಾಡಿದರು. ಮುಂದೆ ಪಾರ್ವತಮ್ಮನ ಗರ್ಭದಿಂದ ದಿನಾಂಕ ಒಂಬತ್ತು ಆರನೆಯ ತಿಂಗಳು ಹತ್ತೊಂಭತ್ತುನೂರಾ ಒಂಭತ್ತರಲ್ಲಿ ಒಂದು ಗಂಡು ಮಗು ಜನಿಸಿತು. ಮಗುವು ಮೂಲಾ ನಕ್ಷತ್ರದಲ್ಲಿ ಜನಿಸಿದ್ದರಿಂದ ತಂದೆ ತಾಯಿಗಳಿಗೆ ತೊಂದರೆ ಇದೆಯೆಂದು  ಭವಿಷ್ಯಕಾರರಿಂದ ತಿಳಿದು ಆ ಮಗುವನ್ನು ಸಮೀಪದ ದೇವಸ್ಥಾನದಲ್ಲಿ ಬಿಟ್ಟು ಬಂದರು. ಈ  ಸುದ್ದಿ ತಿಳಿದ ಸಿದ್ದರು ಆ ಮಗುವನ್ನು ಎತ್ತಿಕೊಂಡು ಬಂದು ತಂದೆ ತಾಯಿಗಳಿಗೆ ನೀವೇನೂ ಹೆದರುವ ಕಾರಣವಿಲ್ಲ ಈ ಮಗು ಸಾಮಾನ್ಯನಲ್ಲ ಎಂದು ಅಭಯವಚನ ನೀಡಿ ಅವನಿಗೆ ಗುರುನಾಥ ಎಂಬ ನಾಮಕರಣ ಮಾಡಿದರು. ಅಲ್ಲಿಯೇ ಇದ್ದ ಕಬೀರದಾಸರು ಪ್ರೀತಿಯಿಂದ ಶ್ರೀ ಗುರುನಾಥಾರೂಢ ನಾಮದಿಂದ ಕರೆದರು. ಆದರಂತೆ  ಎಲ್ಲರೂ ಕರೆಯಹತ್ತಿದರು.
ಮಗು ಗುರುನಾಥನು ಮುಂದೆ ಒಂದು ದಿನ ಬಾಲಗ್ರಹ ಪೀಡಿತನಾಗಿ ಮರಣ ಹೊಂದಿತು. ಈ ವಿಚಾರ ತಿಳಿದು ಶ್ರೀ ಸಿದ್ಧಾರೂಢರು ಮಠದಿಂದ ಉಜ್ಜಣ್ಣನವರ ಮನೆಗೆ ಬಂದು ನೋಡಿ, ಅಲ್ಲಿದ್ದ ಎಲ್ಲರಿಗೂ ಭಯಪಡಬೇಡಿರಿ. ಗುರಪ್ಪನಿಗೆ ಏನೂ ಆಗುವದಿಲ್ಲ ಎಂದು ಹೇಳಿ ಮಗುವನ್ನು ಎತ್ತಿಕೊಂಡು ಒಂದು ಕೋಣೆಗೆ ಹೋಗಿ, ಬಾಗಿಲ ಹಾಕಿ  ಏಕಾಂತದಲ್ಲಿ ಮಗುವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಬಲಗೈಯನ್ನು ಶಿಶುವಿನ ಎದೆಯ ಮೇಲೆ ಮತ್ತೊಂದು ಕೈಯ್ಯನ್ನು ಮಸ್ತಕದ ಮೇಲಿಟ್ಟು ತೂಷ್ಣ0 ಸ್ಥಿತಿಯಲ್ಲಿ ಕುಳಿತರು. ಸ್ವಲ್ಪ ಸಮಯದ ನಂತರ ಉಸಿರಾಟ ಪ್ರಾರಂಭವಾಗಿ ಮಗು ಅಳತೊಡಗಿತು. ಇದನ್ನು ಕೇಳಿದ ತಂದೆ-ತಾಯಿ ಇತರ ಎಲ್ಲರಿಗೂ ಆಶ್ಚರ್ಯವಾಗಿ ಸಿದ್ದಾರೂಢರ ಜಯಜಯಕಾರ ಸಿದ್ಧಪ್ಪನನ್ನು ಮಾಡಿದರು.ಗುರುನಾಥನು ಎರಡು ವರ್ಷದವನಿದ್ದಾಗ ತಾಯಿ ಪಾರ್ವತಮ್ಮ ಹೆರಿಗೆಗಾಗಿ  ಧಾರವಾಡ ತಾಲೂಕಿನ ಕೋಟೂರು ಗ್ರಾಮಕ್ಕೆ ಹೋದಾಗ, ಹೆರಿಗೆ ಸರಿಯಾಗಿ  ಆಗದ್ದರಿಂದ ತಾಯಿ ತೀರಿಕೊಂಡಳು . ಗುರಪ್ಪನು ತಾಯಿಯಿಲ್ಲದ  ಮಗುವಾಗಿದ್ದರಿಂದ ತಂದೆ ಸಿದ್ದಪ್ಪ ಮತ್ತು ಲಕ್ಷ ಮನವರು ಪಾಲನೆ ಪೋಷಣೆ ಮಾಡಿದರು. ಗುರಪ್ಪನು ಬೆಳೆದಂತೆ ಶ್ರೀಸಿದ್ದಾರೂಢರ ಸಮೀಪವರ್ತಿಯಾದನು. ನಂತರ ಅನೇಕ ಭಕ್ತರು ಲಕ್ಷ್ಮಮ್ಮನನ್ನು ಕುರಿತು ಲಕ್ಷ್ಮಮ್ಮ ತಾಯಿ ಶ್ರೀ ಗುರುನಾಥಾರೂಢರನ್ನು ಸಿದ್ದಾರೂಢರಿಗೆ ಸಮರ್ಪಿಸಬೇಕು ಎಂದು ಬೇಡಿಕೊಂಡಾಗ ಲಕ್ಷ್ಮಮ್ಮನು ವಿಚಾರ ಮಾಡಿ ಒಂದು ನಿರ್ಧಾರಕ್ಕೆ ಬಂದು ಹೇಳಿದಳು  ಸಿದ್ಧಾರೂಢ ಭಕ್ತರೆ ಕೇಳಿರಿ, ದೈವೇಚ್ಚೆಯು ಹೇಗಿದೆಯೋ ಹಾಗೆ ಆಗಲಿ. ನಿಮ್ಮ ಇಚ್ಚೆಯ ಪೂರೈಸುತ್ತೇನೆ ಎಂದು ಒಂದು ದಿವಸ ಲಕ್ಷ್ಮಮ್ಮನು ಗುರುನಾಥನನ್ನು ಕರೆದುಕೊಂಡು  ಸದ್ಗುರು ಸಿದ್ಧಾರೂಢರ ಸನ್ನಿಧಿಗೆ ಬಂದಳು. ಆಗ ಶ್ರೀಗಳ ಸನ್ನಿಧಿಯಲ್ಲಿದ್ದ ಎಲ್ಲ ಪ್ರಮುಖ ಭಕ್ತ ಸಮುದಾಯದ ಮುಂದೆ ಶ್ರೀ ಸಿದ್ಧಾರೂಢರನ್ನು ಕುರಿತು ಸದ್ಗುರವೇ, ಈ ಗುರುನಾಥ ನಿಮ್ಮ ಕೃಪೆಯಿಂದ ಬದುಕಿದ್ದಾನೆ. ಆದ್ದರಿಂದ ತಮ್ಮ ಎಲ್ಲ ಭಕ್ತರ ಅಪೇಕ್ಷೆಯಂತೆ ಈ  ಗುರಪ್ಪನನ್ನು ನಿಮಗೆ ಅರ್ಪಿಸಿದ್ದೇನೆ ತೆಗೆದುಕೊಳ್ಳಿರಿ ಎಂದು ಗುರಪ್ಪನನ್ನು ಸಿದ್ದರಿಗೆ ಅರ್ಪಿಸಿದಳು . ಆಗ ಅಲ್ಲಿದ್ದ ಭಕ್ತರು ಜಯಜಯಕಾರ ಮಾಡಿದರು. 
ಈ ಸಮಾಚಾರ ತಿಳಿದ ಗುರಪ್ಪನ ತಂದೆ ಸಿದ್ದಪ್ಪನು ಲಕ್ಷ್ಮವ್ವನನ್ನು ಕುರಿತು, ಅಮ್ಮ ನೀನು ಗುರುನಾಥರನ್ನು ಸಿದ್ಧಾರೂಢರಿಗೆ ಅರ್ಪಿಸಿರುವೆ. ನಮಗೇನು ಮಕ್ಕಳು ಹೆಚ್ಚಾಗಿರುವವೇ ಹೇಗೆ? ಗುರಪ್ಪನನ್ನು ಸಿದ್ದಾರೂಢರಿಗೆ ಏಕೆ ಅರ್ಪಿಸಿರುವೆ ಎಂದು  ಕೋಪಗೊಂಡಾಗ ಲಕ್ಷ್ಮವ್ವ ಹೇಳಿದಳು, ಸಿದ್ದಪ್ಪ ಕೇಳು, ಮರಣ ಹೊಂದಿದ ಗುರಪ್ಪನನ್ನು ಸಿದ್ಧಾರೂಢರೇ ಉಳಿಸಿದ್ದಾರೆ. ಎಲ್ಲ ಭಕ್ತರ ಅಪೇಕ್ಷೆಯೂ ಹಾಗೆಯೇ ಇದೆ ಸದ್ಗುರುವಿನ ಮತ್ತು ದೈವೇಚ್ಛೆಯಂತೆ ಎಲ್ಲವೂ ನಡೆಯುತ್ತದೆ. ಗುರಪ್ಪನು ಮಠದಲ್ಲಿರಲಿ ಬಿಡು ಎಂದು ಈಗ ಸಮಾಧಾನ ಪಡಿಸಿದಳು.
ಒಂದು ದಿನ ಸಂಜೆಯ ಸಮಯ ಉಜಣ್ಣವರ ಮನೆಯಲ್ಲಿ ಕುಳಿತಾಗ ಭೀಮಪ್ಪನ  ದತ್ತಕ ಪುತ್ರನ ಮಗ ಗುರಪ್ಪನು ಬಂದು ಗುರುಗಳ ತೊಡೆಯನ್ನೇರಿ ನಾನಾ ರೀತಿಯೇ ಕಾಡುತ್ತಿದ್ದನು. ಸಿದ್ಧನು ಅವನನ್ನು ಪ್ರೀತಿಯಿಂದ ನೋಡುತ್ತಿದ್ದನು. ಇದನ್ನು ನೋಡಿದ ಭಕ್ತರು ಸ್ವಾಮಿ ಗುರಪ್ಪನಿಗೆ ಹೀಗೆ ಸಲಿಗೆ ಕೊಟ್ಟರೆ ದಿನಾಲು ಶಾಸಕ್ಕೆ ತೊಂದರೆಯಾಗುತ್ತದೆ ಈ ದಿವಸ ಅವನನ್ನು ಹೊರಗೆ ಕಳಿಸಿರಿ ಎಂದರು. ಆಗ ಗುರುಗಳು ಭಕ್ತರೇ, ಗುರಪ್ಪನನ್ನು  ಯಾರೆಂದು ತಿಳಿದಿದ್ದೀರಿ? ಗುರಪ್ಪನ ಪೂರ್ವ ಜನ್ಮದ ಕಥೆ ಆಶ್ಚರ್ಯಜನಕವಾಗಿದೆ,ಅದನ್ನು ಭಕ್ತಿಯಿಂದ ಕೇಳಿದ ಸ್ತ್ರೀ ಪುರುಷರು ಮಾಡಿದ ಪಾಪನಾಶವಾಗಿ ಅವರಲ್ಲಿ ಭಕ್ತಿ ಹುಟ್ಟಿ ಧನ್ಯತೆಯನ್ನು ಪಡೆಯುತ್ತಾರೆ. ಆ ಚರಿತ್ರೆಯನ್ನು ನೀವು ಈಗ ಕೇಳಿರಿ ಎಂದು ಹೇಳಿದರು. ನಂತರ ಸಿದ್ದರು ಒಬ್ಬ ಭಕ್ತನನ್ನು ಕರೆದು ಅಂಗಳದಲ್ಲಿ ಆಡುವ ಗುರಪ್ಪನನ್ನು ಕರೆದುಕೊಂಡು ಬನ್ನಿರಿ ಎಂದಾಗ, ಓರ್ವನು ಹೊರಗೆ ಹೋಗಿ ಆಡುತ್ತಿರುವ ಗುರಪ್ಪನನ್ನು ಪ್ರೀತಿಯಿಂದ ರಮಿಸಿ ಕರೆದುಕೊಂಡು ಬಂದು ಸ್ವಾಮಿಗಳ ಹತ್ತಿರ ಕೂಡಿಸಿದನು.
ಆಗ ತ್ರಿಕಾಲ ಜ್ಞಾನಿಗಳಾದ ಸಿದ್ದರು ಮಗುವನ್ನು ನೋಡಿ ಅವನ ಮೇಲೆ ವರದ ಹಸ್ತವನ್ನಿರಿಸಿ ತಮ್ಮ ಹತ್ತಿರವಿರುವ ಬಾಳೆಹಣ್ಣನ್ನು ತಿನಿಸಿದರು. ನಂತರ ತಕ್ಷಣ ಬಾಲಕನ ಮೈ ಮೇಲೆ ಪ್ರಕಾಶ ಬಂದಿತು. ಅದನ್ನು ನೋಡಿ ಚಕಿತರಾದರು. ಆಗ ಸ್ವಾಮಿಗಳು ಸಂತೋಷದಿಂದ ಭಕ್ತರೇ, ಗುರಪ್ಪನ ಚರಿತ್ರೆಯನ್ನು ಅವನ ಮುಖದಿಂದಲೇ ಕೇಳಿರಿ ಎಂದಾಗ ಗುರಪ್ಪನು ತನ್ನ ಪೂರ್ವ ಜನ್ಮದ ಚರಿತ್ರೆಯನ್ನು ಹೇಳತೊಡಗಿದನು.
ನನ್ನ ಪೂರ್ವ ಜನ್ಮದಲ್ಲಿ ನಾನು ಕೈಲಾಸದಲ್ಲಿ ಗಂಧರ್ವನಾಗಿದ್ದು ನದಿಯ ಶಾಪದಿಂದ ಹುಲಿಯ ಜನ್ಮ ತಾಳಿದ್ದು, ಶ್ರೀ ಶೈಲದಲ್ಲಿ ಸಿದ್ಧರು ಕೊಟ್ಟ ಅಭಯ ವಚನ ಮತ್ತು ಕಾವೇರಿ ತೀರದಲ್ಲಿ ಹುಲಿಯಾದ ನಾನು ಬೇಟೆಗಾರನ ಗುಂಡಿಗೆ ಬಲಿಯಾಗಿದ್ದು ಹಾಗೂ ಮುಂದಿನ ನರಜನ್ಮದಲ್ಲಿ ನಿನ್ನನ್ನು ರಕ್ಷಿಸುತ್ತೇನೆ ಎಂದು ಸಿದ್ದರು ಆಶೀರ್ವಚನ ನೀಡಿದ ನಂತರ ಸಿದ್ದರ ಪಾದಗಳಲ್ಲಿ ದೇಹ ತ್ಯಾಗ ಮಾಡಿದ ವಿಷಯ ತಿಳಿಸಿ, ಮತ್ತೆ ಮುಂದುವರಿಯುತ್ತ ನಂತರ ಸಿದ್ದ ಸದ್ಗುರುಗಳು ದೇಶ ದೇಶಗಳನ್ನು ತಿರುಗುತ್ತ ಹುಬ್ಬಳ್ಳಿಗೆ ಬಂದು ನೆಲಸಿದರು. ಕೆಲಕಾಲ ಕಳೆದ ಮೇಲೆ ಹುಲಿಯಾದ ಗಂಧರ್ವನಾದ ನಾನು ಈ ಮನೆಯ ಸಿದ್ದಪ್ಪನ ಪತ್ನಿಯ ಗರ್ಭದಲ್ಲಿ ಜನಿಸಿದೆನು. ಹುಲಿಯ ಜನ್ಮದೊಳಿದ್ದಾಗ ಸ್ವಾಮಿಗಳು ನನ್ನನ್ನು ಬಹಳ ಕಾಡುತ್ತಿದ್ದರು. ಅದರಂತೆ ಈಗ ನಾನು ಅವರನ್ನು ಕಾಡುತ್ತಿರುವನು. ಭಕ್ತರೇ ಕೇಳಿರಿ, ಈ ಕಥೆಯನ್ನು ಸಿದ್ದನು ನನ್ನಲ್ಲಿದ್ದು ನನ್ನಿಂದ ನುಡಿಸಿದ್ದಾನೆ. ಬಾಲಕನಾದ ನನಗೆ ಅದು ಹೇಗೆ ತಿಳಿಯಬೇಕು ಎಂದು ಬಾಲಕನು  ಸಿದ್ಧರಿಗೆ ನಮಿಸಿ ತೂಷ್ಣ೦ ಸ್ಥಿತಿಯಲ್ಲಿ ಕುಳಿತಾಗ, ಗುರುಗಳು ಬಾಲಕನಿಗೆ ಮತ್ತೊಂದು ಹಣ್ಣು ತಿನಿಸಿದರು. ಆಗ ಮೊದಲಿನ ಅವಸ್ಥೆಯು ಬದಲಾಗಿ ಸಹಜ ಸ್ಥಿತಿಗೆ ಬಂದು ಬಾಲಕನು ಮನೆಯಲ್ಲಿ ಓಡಿದನು. ಈ ಚರಿತ್ರೆಯನ್ನು ಕೇಳಿದವರು ಚಕಿತರಾಗಿ ಹೇಳುತ್ತಾರೆ. ಸ್ವಾಮಿಗಳೇ  ಗುರಪ್ಪನನ್ನು ತಮ್ಮ ಮಠಕ್ಕೆ ಮರಿ ಮಾಡಬಹುದಲ್ಲವೇ? ಎಂದಾಗ, ಸಿದ್ಧರು ಒಪ್ಪಿಕೊಂಡು ಮಗುವನ್ನು ಮಠದಲ್ಲಿ ಇರಿಸಿಕೊಂಡರು. ಗುರಪ್ಪನ ಮೊದಲಿನ ತುಂಟತನ ಹೋಗಿ ಶಾಂತವಾಗಿರುತ್ತಿದ್ದರಿಂದ ಭಕ್ತರೆಲ್ಲರೂ ಅವನಿಗೆ ನಮಸ್ಕಾರ ಮಾಡುತ್ತಿದ್ದರು.


 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗುರಪ್ಪನ ವಿವಾಹ, ಸಿದ್ಧರಿಂದ ಸನ್ಯಾಸ ದೀಕ್ಷೆ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ