ವೀರನಗೌಡರೇ ಸಿದ್ಧಾರೂಢರಿಂದ ಗದಗನಿನ ಶಿವಾನಂದರಾದರು
🌺 ವೀರನಗೌಡರೇ ಸಿದ್ಧಾರೂಢರಿಂದ ಗದಗನಿನ ಶಿವಾನಂದರಾದರು 🌺
ಶ್ರೀ ಸದ್ಗುರು ಶಿವಾನಂದ ಮಹಾಸ್ವಾಮಿಗಳು ಮಹಾನ್ ಶರಣರು, ತಪಸ್ವಿಗಳು, ದೇವಿಯನ್ನು ಒಲಿಸಿಕೊಂಡ ಪುಣ್ಯಪುರುಷರು ಮಹಿಮಾಶಾಲಿಗಳಾಗಿದ್ದರು. ಇವರ ಜನ್ಮ - ಸ್ಥಳ ರೋಣ, ತಂದೆ ತಾಯಿಗಳಿಗೆ ಅಪರೂಪದ ಈ ಮಗನಿಗೆ ವೀರನಗೌಡನೆಂಬ ನಾಮಕರಣ ಮಾಡಿದ್ದರು. ಇವರು ಅಜಾತನಾಗಲಿಂಗ ಮಹಾಸ್ವಾಮಿಗಳ ಕೃಪೆಯಿಂದಜನಿಸಿದರು. ಬಾಲ್ಯದಲ್ಲಿ ಇವರಿಗೆ ಮಾತು ಬರಲಿಲ್ಲ. ಶಿವಯೋಗಿಸಿದ್ಧರಾಮರಂತೆ ಮಾತಾಡಲು ಯೋಗ್ಯ ವ್ಯಕ್ತಿ ಬಹುಷಃ ಸಿಕ್ಕಿರಲಿಕ್ಕಿಲ್ಲ. ಅದಕ್ಕೆ ಮಾತಾಡಲಿಲ್ಲವೇನೋ. ಬಾಹ್ಯದ ಲಕ್ಷವಿಲ್ಲದಿದ್ದರೂ, ಆಂತರಿಕವಾಗಿ ಬಲು ಎಚ್ಚರವಾಗಿದ್ದರು. 'ಹೆಣ್ಣಿಗಾಗಿ ಬಂದಾತನಲ್ಲ, ಹೊನ್ನಿಗಾಗಿ ಬಂದಾತನಲ್ಲ ಮಣ್ಣಿಗಾಗಿ ಬಂದಾತನಲ್ಲ ನಮ್ಮ ಶರಣ' ಎಂದು ಹೇಳುವಂತೆ ವೀರನ ಗೌಡರಾದರೂ ಹೊರಗೆ ಹುಚ್ಚರಂತೆ ಕಂಡರು. ಒಳಗೆ ದಿವ್ಯ ಎಚ್ಚರ . ನಿರ್ಜನ ಪ್ರದೇಶಕ್ಕೆ ಹೋಗಿ ಧ್ಯಾನಸ್ಥರಾಗಿ ಕುಳಿತುಕೊಳ್ಳುವದು ಅವರ ರೂಢಿ. ಬಾಲ್ಯದಲ್ಲಿಯೇ ಅವರ ಅರಿವು ಪಕ್ವಗೊಂಡಿತ್ತು. ಯಾವದೋ ಕೆಲಸದಲ್ಲಿ ತೊಡಗಿದರೂ ಅವರು ಗಕ್ಕನೆ ನಿಂತುಬಿಡುವರು. ಮುಂದೆ ಏನು ಮಾಡಬೇಕೆನ್ನುವದರ ಪರವೆಯಿಲ್ಲದೆ ಮೈಮರೆತು ಬಿಡುತ್ತಿದ್ದರು. ಒಮ್ಮೆ ಹುಲ್ಲಿನ ಹೊರೆಯೊಂದನ್ನು ಹೊತ್ತು ಕೆರೆಯ ದಂಡೆಯಲ್ಲಿ ಹೋಗುವಾಗಲೆ ಹಾಗೆ ನಿಂತುಬಿಟ್ಟರು. ಜನ ನೋಡಿದರು. ಹುಚ್ಚುಹುಡುಗ ಭಾರ ಹೊತ್ತು ಸುಮ್ಮನೆ ನಿಂತಿದೆ ಎಂದರು. ಆದರೆ ಅವರು ನಿಂತದ್ದು ಅದ್ವಯ ತತ್ವದಲ್ಲಿ ಉಳಿದವರಿಗೆ ಹೇಗೆ ತಿಳಿಯಬೇಕು. ಭಕ್ತಿಯನರಿಯದ ವ್ಯರ್ಥ ಜೀವಿಗಳು ನಿಮ್ಮನತ್ತ ಬಲ್ಲರಯ್ಯಾ.. ಎಂಬ ಶರಣರ ನುಡಿಯಂತೆ ಅವರನ್ನು ತಿಳಿದುಕೊಂಡವರೆ ಬಲು ವಿರಳ. ಸದಾ ಎಚ್ಚರದಲ್ಲಿದ್ದ ಶ್ರೀ ವೀರನಗೌಡರಿಗೆ ಕೇವಲ ಸಚ್ಚಿದಾನಂದ ಶಿವಸ್ವರಪ ತಾನು, ಸಾವು ನೋವುಗಳ ಜಂಜಡ ತನಗಿಲ್ಲವೆಂಬುದು ಮೊದಲೇ ಮನವರಿಕೆಯಾಗಿತ್ತು. ಅಂತೆಯೇ ಒಂದು ಸಲ ನವಲಗುಂದದ ನಾಗಲಿಂಗ ಅಜ್ಜನವರು ರೋಣಕ್ಕೆ ಬಂದರು. ಲೀಲಾಮೂರ್ತಿಗಳಾದ ಅಜ್ಜನವರ ಹಿಂದೆ ಮುಂದೆ ಹುಡುಗರು ಬೆನ್ನುಹತ್ತುತ್ತಿದ್ದವು. ಬೆನ್ನು ಹತ್ತಿದ ಹುಡುಗರನ್ನು ಕಂಡು ಕೋಪೋದ್ರೇಕದಿಂದ ಕೂಡಿದ ನಾಗಲಿಂಗ ಅಜ್ಜನವರು ಸನೀಹದಲ್ಲಿದ್ದ ಒಂದು ಮಚ್ಚೆಯನ್ನು ಹಿಡಿದು ಬಾ ಬರೀರಿ ಬರಿ, ನಿಮ್ಮ ರುಂಡ ಕತ್ತರಿಸಿ ಒಗೆಯುತ್ತೇನೆ ಎಂದು ಝಳಪಿಸಿತೊಡಗಿದರು ಎಲ್ಲ ಮಕ್ಕಳು ದಿಕ್ಕೆಟ್ಟು ಓಡಿಹೋದವು. ಆದರೆ, ಬಿಚ್ಚಿ ಬೇರಾಗದ ನಿಜಕತ್ವದಲ್ಲಿ ನಿಂದು ನಿರ್ಭಿತರಾದ ವೀರನಗೌಡರು ಮುಂದೆ ಬಂದುನಿಂತರು. ನೀವು ಹೊಡೆಯುವದಾದರೆ ಹೊಡೆಯಿರಿ. ನಾನು ಸಾಯುವವನಲ್ಲ, ನಹನ್ಯತೆ ಹನ್ಯಮಾನೇ ಶರೀರ ಶರೀರ ಸತ್ತರ ನನಗೆ ಸಾವಿಲ್ಲ, ಸಾವಿಲ್ಲ ಕೇಡಿಲ್ಲದ ನನಗೆ ಆವ ಭಯವೂ ಇಲ್ಲ ಎಂದರು. ಇದು ಕೇಳಿ ನಾಗಲಿಂಗಪ್ಪನವರಿಗೆ ಎಲ್ಲಿಲ್ಲದ ಆನಂದವಾಯಿತು. ಇಂಥದ್ದೊಂದು ರತ್ನದ ಹರಳಿನಂಥ ವ್ಯಕ್ತಿ ಕಂಡನಲ್ಲ ಎಂದು ಮಗಾ ನೀನು ಮನುಷ್ಕನಲ್ಲಪ್ಪ ಮಹಾದೇವನೆ ನೀನು. ಎತ್ತಿಕೊಂಡು ಕುಣಿದಾಡಿದರು. ಇಂಥ ವೀರಪಥವನ್ನು ಕ್ರಮಿಸಿದ ವೀರನಗೌಡರಿಗೆ ಸಹಜ ಪರಮಾನಂದ ಕೈಗೂಡಿತ್ತು. ದೇವಿಯ ಉಪಾಸನೆಯ ಬಲ ಆಳವಾದ ಚಿಂತನೆ ಶಿವಶರಣರ ಸದುವಿನಯದ ನಿಲುವು. ಎಲ್ಲರ ಹೃದಯಕ್ಕೆ ಬೆಳಕನ್ನು ಕೊಡುವಂಥ ಶಾಸ್ತ್ರ ಪ್ರತಿಪಾದನೆ. ಈ ಎಲ್ಲ ಉನ್ನತೋನ್ನತ ಗುಣಗಣದಲ್ಲಿ ವಿರಾಜಮಾನರಾಗಿರುವ ವೀರನ ಗೌಡರ ಕೀರ್ತಿ ಎಲ್ಲ ಕಡೆ ಚಲ್ಲುವರಿದಿತ್ತು.
ವೀರನಗೌಡರು ಭೈರದೇವರ ಕೊಪ್ಪಕ್ಕೆ ಆಗಾಗ ಹೋಗಿ ಬರುತ್ತಿದ್ದುದುಂಟು. ಒಂದು ಸಲ ಹಾಗೆ ಹೋದಾಗ, ಹುಬ್ಬಳ್ಳಿಯ ದೇವರಾದ ಶ್ರೀ ಸಿದ್ಧಾರೂಢರನ್ನು ಕಾಣಬೇಕೆಂಬ ಇಚ್ಛೆಯೂ ಆಯಿತು. ಶಿವರಾತ್ರಿ ಜಾತ್ರೆಯು ಸಮೀಪಿಸಿತ್ತು. ಹೋಗಿ ಬಂದರಾಯಿತು ಎಂದು ಹುಬ್ಬಳ್ಳಿಯ ಕಡೆ ಹೊರಟರು. ಇವರ ಬರುವಿಕೆಯನ್ನು ಅರಿತು ಶ್ರೀ ಸಿದ್ಧಾರೂಢರಿಗೆ ಎಲ್ಲಿಲ್ಲದ ಉತ್ಸಹ ಆನಂದ. ಇನ್ನೇನು ಬರುತ್ತಾರೆ ಅನ್ನುವಷ್ಟರಲ್ಲಿ ವೀರನಗೌಡು ಬಂದೆ ಬಿಟ್ಟರು. ಎರಡು ಮಹಾನ್ ಬೆಳಕಿನ ಹೊಳೆಗಳು ಕೂಡಿದಂತಾಯಿತು. ಅಮೃತಕ್ಕೆ ಅಮೃತ ಕೂಡಿದಂತಾಯಿತು. ಬಹಳ ಸಂತೋಷದಿಂದ ಶ್ರೀ ಸಿದ್ಧಾರೂಢರು ಶ್ರೀ ವೀರನ ಗೌಡರಿಗೆ, ನೀವು ಜೋಡ ಕೊಡ ಹೊತ್ತವರು ನೀವು ಬಹಳ ದೊಡ್ಡವರು ಎಂದು ಬಹಳ ವಿನಯದಿಂದ ಬಾಗಿ ನಮಿಸುವದರಲ್ಲಿ ಶ್ರೀ ವೀರನಗೌಡರು ಅಯ್ಯೋ ಅಪ್ಪಾ, ನೀವು ಶಿವನ ಅವತಾರಿಗಳು ಸ್ವರ್ಗ ಬಿಟ್ಟು ಭೂಮಿಗೆ ಬಂದವರು. ಕೇವಲ ಭಕ್ತರ ಉದ್ಧಾರಕ್ಕಾಗಿ ಬಂದ ಭಗವಂತ ನೀವು ಎಂದು ಬಹಳ ವಿನಯದಿಂದ ಶ್ರೀ ಸಿದ್ಧಾರೂಢರಿಗೆ ವಂದಿಸಿದರು.
ಅನುಭಾವಿ ಅನುಭಾವಿಗಳು ಕೂಡಿದಲ್ಲಿ ಆನಂದದ ಕೊರತೆಯುಂಟೆ ? ಇಬ್ಬರು ಬಹಳ ಹೊತ್ತು ಆನಂದದಿಂದ ಮಾತು ಕತೆ ನಡೆಸಿದರು. ಅಷ್ಟರಲ್ಲಿ ಮಧ್ಯಾಹ್ನ ಹೊತ್ತು ತಾವು ಇಲ್ಲಿಯೇ ಪ್ರಸಾದ ಮಾಡಿ ಎಂದು ಶ್ರೀ ಸಿದ್ಧಾರೂಢರು ಶ್ರೀವೀರನಗೌಡರಿಗೆ ಹೇಳಿದಾಗ, ಮುಖ ತೊಳೆದು ವಿಭೂತಿ ಧರಿಸಿ ಬರುವದಾಗಿ ಹೇಳಿ ಹೋದರು. ಪಾಠಶಾಲೆಯ ಕೋಣೆಯಲ್ಲಿ ಸ್ನಾನ ಪೂಜೆ ಮುಗಿಸಬೇಕೆನ್ನುವಷ್ಟರಲ್ಲಿ ಸಹಜವಾಗಿ ಅವರ ವೃತ್ತಿ ತೂರ್ಯಾವಸ್ಥೆಯಲ್ಲಿ ತೇಲಾಡುತ್ತಿತ್ತು. ಶ್ರೀ ಸಿದ್ಧಾರೂಢ ಅಪ್ಪಂಗಳು ಹಾದಿ ನೋಡಿ ನೋಡಿ ಸಮೀಪದಲ್ಲಿರುವ ಶ್ರೀ ಗೋವಿಂದ ಸ್ವಾಮಿಗಳಿಗೆ ಹೇಳಿ ಕಳಿಸಿದರು ಕರೆದುಕೊಂಡು ಬರಲು: ಶ್ರೀ ಗೋವಿಂದ ಸ್ವಾಮಿಗಳು ಕರೆದ ಕರೆದರು, ಬಾಹ್ಯಪ್ರಜ್ಞೆ ದಾಟ ತೂರ್ಯದಲ್ಲಿದ್ದರು ಶ್ರೀ ವೀರನಗೌಡರು. ಅವರ ಸ್ಥಿತಿ ಇದ್ದ ಪರಿಸ್ಥಿತಿಯನ್ನು ಗೋವಿಂದಸ್ವಾಮಿಗಳು ಹಾಗೆ ಬಂದು ಹೇಳಿದರು. ಅವರು ಶಿವನ ಆನಂದದಲ್ಲಿ ಮೈಮರೆತಿದ್ದಾರೆ ಎಂದು ಹೇಳಿದರು. ಇದನ್ನು ಕೇಳಿದ ಶ್ರೀಸಿದ್ದಾರೂಢರು ಸಹಜವಾಗಿ ಹೇಳಿಬಿಟ್ಟರು. ಅವರು ವೀರನ ಗೌಡ್ರಲ್ಲಪ್ಪ ಅವರು ಸಹಜ ಶಿವಾನಂದರು ಎಂದು ಅವರ ಸನಿಹದಲ್ಲಿ ಬಂದು ನೋಡಿದರು. ಅದೇ ಆನಂದದಲ್ಲಿದ್ದರು ಶ್ರೀ ವೀರನಗೌಡರು. ಶಿವಾನಂದರೆ, ಶಿವಾನಂದರೆ, ಎಂದು ಶ್ರೀ ಸಿದ್ಧಾರೂಢರು ಕರೆದು ಅವರ ಅಂಕಿತ ನಾಮ, ಅಳಿಸಿ ಬಿಟ್ಟರು. ಅನ್ವರ್ಥಕನಾಮ ಸಾರ್ಥಕ ಮಾಡಿಬಿಟ್ಟರು. ಅಂದಿನಿಂದ ಇಂದಿನವರೆಗೆ ಸದ್ಗುರು ಶ್ರೀ ಶಿವಾನಂದ ಮಹ್ವಾಮಿಗಳೆಂದು ಪ್ರಖ್ಯಾತಿ ಹೊಂದಿದರು. ಶ್ರೀ ಸಿದ್ಧಾರೂಢರು ಶ್ರೀ ಶಿವಾನಂದರು ಇಬ್ಬರು ಮಹಾಮೇರು ಪರ್ವತದಂತೆ ಸಮಜೋಡಿಯಾ ವಿಭೂತಿ ಪುರುಷರು, ಯುಗಪುರುಷರು. ಪುನೀತಾತ್ಮರಾಗಿ ಜಗವನ್ನು ಬೆಳಗಿದರು. ಅವರ ಚರಣಧೂಳಿಯನ್ನು ಕಂಡ ಜನ ಧನ್ಯರು ಧನ್ಯರು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
