ಗೋವೆಯಲ್ಲಿ ಸಿದ್ಧ ಸಂಪ್ರದಾಯದ ಮಾದಲ ಹೆಜ್ಜೆ

 🌺 ಗೋವೆಯಲ್ಲಿ ಸಿದ್ಧ ಸಂಪ್ರದಾಯದ ಮಾದಲ ಹೆಜ್ಜೆ 🌺


ಗೋವಾ ಪ್ರಾಂತದ ಪಂಚವಾಡಿ ಗ್ರಾಮದ ಗೋಪಾಲ ಕಾಮತ ಮತ್ತು ಇಂದಿರಾಬಾಯಿ ದಂಪತಿಗಳ ಉದರದಿಂದ ಜನಿಸಿದ ಗೋಕುಳಾಬಾಯಿ  ಸಣ್ಣವಳಿರುವಾಗಲೇ ಹರಿ ಭಜನೆಯಲ್ಲಿ ಆಸಕ್ತಿ ಹೊಂದಿದ್ದಳು. ಹದಿನೈದು ವರ್ಷದವಳು ಇರುವಾಗ ಓರ್ವ ಬ್ರಾಹ್ಮಣನಿಗೆ ಲಗ್ನ ಮಾಡಿಕೊಟ್ಟರು. ಅವನು ಸ್ವಲ್ಪ ದಿವಸಗಳಲ್ಲಿಯೇ ತೀರಿದನು. ಮುಂದೆ ಕೃಷ್ಣಸ್ವಾಮಿ ಡೊಂಗ್ರಿಕರ ಅವರ ಭಕ್ತಳಾದಳು. ಅವರೂ ಸ್ವಲ್ಪ ದಿವಸಗಳಲ್ಲಿ ತೀರಿಕೊಂಡರು. ಮುಂದೆ ಶಾಲಿವಾಹನ ಶಕ ಹದಿನೆಂಟು ನೂರಾ ಇಪ್ಪತ್ತೆಂಟುದು ವರಾವಿ ಸಂವತ್ಸರ ಪುಷ್ಯಮಾಸ ಕೃಷ್ಣ ಪಕ್ಷ ಚತುರ್ಥಿ ಗುರುವಾರ ಮಧ್ಯಾಹ್ನ (ಕ್ರಿ.ಶ. ೧೯೦೬) ಮಲಗಿದಾಗ ಅವಳ ಕನಸಿನಲ್ಲಿ ಶ್ರೀ ಸಿದ್ಧಾರೂಢರು ಬಂದು ಮಹಾವಾಕ್ಕ ಬೋಧಿಸಿ ಮಸ್ತಕದ ಮೇಲೆ ಹಸ್ತವನ್ನಿರಿಸಿ ಅನುಗ್ರಹ ಮಾಡಿ ಅದೃಶ್ಯರಾದರು.
ಸಿದ್ಧರ ಕೀರ್ತಿ ಇಡೀ ದೇಶದಲ್ಲಿ ಪಸರಿಸಿತ್ತು. ಆದರೆ ಅವರ ದೃಷ್ಟಿ ಗೋವಾ ಪ್ರಾಂತದಲ್ಲಿ ಹೋಗಿರಲಿಲ್ಲ. ಗೋಕುಳಾಬಾಯಿಯು ಹುಬ್ಬಳ್ಳಿಗೆ ಬಂದು ಸದ್ಗುರುಗಳಿಗೆ ಪ್ರೇಮದಿಂದ ಪೂಜಿಸಿ ತನಗಾದ ಸ್ವಪ್ನ ದೃಷ್ಟಾಂತವನ್ನು ಹೇಳಿದಳು. ಆಗ ಗುರುಗಳು ನಸುನಗುತ್ತ `ಗೋಕುಳಾ, ನೀನಿನ್ನು ಉದ್ದಾರವಾಗುವ ಕಾಲ ಬಂದಿದೆಯಾದ್ದರಿಂದ ಸದ್ಗುರು ಬೋಧಿಸಿದ್ದಾನೆ' ಎಂದು ಆಶೀರ್ವದಿಸಿದರು. ಆಗ ಗೋಕುಳಾ ಬಾಯಿ ತನಗೆ ಸದ್ಗುರು ದೊರೆತನೆಂದು ಅತ್ಯಂತ ಸಂತೋಷಗೊಂಡಳು. ಹೀಗೆ ಅನೇಕ ಸಲ ಬಂದು ಹೋಗುತ್ತ ಸಿದ್ಧರ ಕರುಣೆಯನ್ನು ಸಂಪಾದಿಸಿ ತನ್ನ ಆಪ್ತೇಷ್ಟರನ್ನೂ ಬಂಧು ಬಳಗದವರನ್ನೂ ಕರೆದುಕೊಂಡು ಬಂದು ದರ್ಶನ ಮಾಡಿಸಿದಳು. ಇನ್ನೊಂದು ಸಲ ಹುಬ್ಬಳ್ಳಿಗೆ ಬಂದು ಒಂದು ಮನೆಯಲ್ಲಿದ್ದಳು. ಆಗ ತನ್ನ ಮನೆಯಲ್ಲಿ ಸದ್ಗುರುಗಳನ್ನು ಕರೆದು ಪೂಜಿಸಬೇಕೆಂದು ಮಠಕ್ಕೆ ಹೋಗಿ ಪೂಜಿಸಿ ಪ್ರಸಾದ ವಿತರಿಸಬೇಕೆಂದಿದ್ದೇನೆ. ನನಗೆ ಸ್ವತಃ ವಿಶೇಷ ಅಡುಗೆ ಮಾಡಲು ಬರುವುದಿಲ್ಲ. ನೀವೇ ಎಲ್ಲ ವ್ಯವಸ್ಥೆ ಮಾಡಬೇಕು' ಎಂದು ಬೇಡಿಕೊಂಡಳು. ಆಗ ಅಲ್ಲಿದ್ದ ಭಕ್ತ ಹೇಳಿದ ಗೋಕುಳಾಬಾಯಿ , ನೀನು ಗುರುಗಳನ್ನು ಪೂಜಿಸಿದ ಮೇಲೆ ಅವರಿಗೆ ಕಾಣಿಕೆಯಾಗಿ ಏನು ಕೊಡುತ್ತಿ?' ಎಂದಾಗ ಗೋಕುಳಾಬಾಯಿ ಹೇಳಿದಳು ನಾನು ಸದ್ಗುರುಗಳಿಗೆ ಐದು ರೂಪಾಯಿ ಕೊಡುತ್ತೇನೆ' ಎಂದಳು. ಆ ಮೇಲೆ ಆರೂಢರು ಭಕ್ತರಿಗೆ ನೀವೇ ಗೋಕುಳಾಬಾಯಿಯ ಮನೆಗೆ ಹೋಗಿ ಅಡುಗೆ ಸಿದ್ಧಪಡಿಸಿರಿ' ಎಂದು ಆಜ್ಞಾಪಿಸಿದರು. ಆಗ ಅವರ ಆದೇಶದಂತೆ ಭಕ್ತರು ಅಡುಗೆಯ ಸಾಧನಗಳನ್ನು ತೆಗೆದುಕೊಂಡು ಹೋಗಿ ಅಡುಗೆ ಮಾಡಿ ಪೂಜೆಯ ವ್ಯವಸ್ಥೆ ಮಾಡಿದರು. ನಂತರ ಆರೂಢರು ಅವರ ಮನೆಗೆ ಹೋಗಿ ಪೂಜೆಗಾಗಿ ಆಸನದಲ್ಲಿ ಕುಳಿತರು. ದ್ವಾರಕಾಬಾಯಿ (ಸಿದ್ಧರು ಪ್ರೀತಿಯಿಂದ ಇಟ್ಟ ಹೆಸರು) ಪೂಜಿಸಿದ ನಂತರ ಅಲ್ಲಿ ಬಂದ ಭಕ್ತರು ಸಿದ್ಧರಿಗೆ ವಂದಿಸಿ ವಸ್ತ್ರ ಮತ್ತು ಕಾಣಿಕೆಗಳನ್ನು ಸಮರ್ಪಿಸಿದರು. ಆಗ ಗೋಕುಳಾಬಾಯಿ ಗುರುಗಳಿಗೆ ಐದು ರೂಪಾಯಿ ಕಾಣಿಕೆ ಕೊಡುವುದನ್ನು ಮರೆತಾಗ ಓರ್ವ ಶಿಷ್ಯನು ಗೋಕುಳಾಬಾಯಿಗೆ ಹೀಗೆ ಹೇಳಿದ
'ಗೋಕುಳಾಬಾಯಿ, ನೀನು ಗುರುಗಳಿಗೆ ಐದು ರೂಪಾಯಿಗಳನ್ನು ಕೊಡುತ್ತೇನೆಂದು ಹೇಳಿ ಏನೂ ಕೊಡದೆ ಮೋಸ ಮಾಡುತ್ತಿರುವೆಯಾ?' ಎಂದನು. ಆಗ ಗುರುಗಳು ಅವನನ್ನು ಕುರಿತು 'ಕೇಳು ಶಿಷ್ಯನೇ, ನನಗೆ ಹಣ ಬೇಕಾಗಿಲ್ಲ. ಹಣದ ಪ್ರೇಮ ಬಹಳ ದಿವಸ ಉಳಿಯುವುದಿಲ್ಲ. ನನಗೆ ನಿರ್ನಿಮಿತ್ರ ಪ್ರೇಮ ಬೇಕು. ಆ ಪ್ರೇಮ ಯಾವಾಗಲೂ ಉಳಿಯುತ್ತದೆ. ಆದರೂ ಸತ್ಕಾರ, ಕೊಡುವ ಮತ್ತು ತೆಗೆದುಕೊಳ್ಳುವ ಪ್ರೀತಿ ಯಾವಾಗಲೂ ನಿಲ್ಲುವುದಿಲ್ಲ. ಸತ್ಯವಾದ ಪ್ರೇಮ ಅಂಗಡಿಯಲ್ಲಿ ದೊರೆಯಲಾರದು. ಕೋಟಿ ಹಣ ಕೊಟ್ಟರೂ ಅದು ಸಿಗುವುದಿಲ್ಲ. ಸುಧಾಮನ ಮುಷ್ಟಿ ಅವಲಕ್ಕಿಯನ್ನು ಕೃಷ್ಣನು ಪ್ರೀತಿಯಿಂದ ತಿಂದನು. ಶಬರಿಯ ಎಂಜಲದ ಬೋರೆ ಹಣ್ಣನ್ನು ರಾಮನು ತಿನ್ನಲು ಹಿಂದೆ ಮುಂದೆ ನೋಡಲಿಲ್ಲ. ದ್ವಾರಕಾಬಾಯಿಯ ಐದು ರೂಪಾಯಿ ನನಗೆ ಬೇಡ. ಅವಳು ನನಗೆ ಪಂಚಪ್ರಾಣಗಳನ್ನೇ ಕೊಟ್ಟಿದ್ದಾಳೆ. ಅದಕ್ಕಾಗಿ ಸಾಯುಜ್ಯಮುಕ್ತಿಯನ್ನೇ ಕೊಡುತ್ತೇನೆ' ಎಂದು ಹೇಳಿದಾಗ ಸರ್ವರೂ ಜಯಜಯಕಾರ ಮಾಡಿದರು. ಆಗ ಗೋಕುಳಾಬಾಯಿ ಸಿದ್ಧರ ಚರಣಗಳಲ್ಲಿ ಆನಂದಾಶ್ರುಗಳನ್ನು ಸುರಿಸುತ್ತ ಮಸ್ತಕವನ್ನಿಟ್ಟಳು.
ಮತ್ತೊಂದು ಸಲ ಬಂದಾಗ ಸದ್ಗುರುಗಳಲ್ಲಿ ವಿನಂತಿ ಮಾಡುತ್ತ `ಗುರೂಜಿ, ನಮ್ಮ ಗೋವಾ ಪ್ರಾಂತದಲ್ಲಿ ತಮ್ಮ ಕೀರ್ತಿ ಮತ್ತು ಪಾರಮಾರ್ಥವನ್ನು ಪ್ರಚಾರ ಮಾಡಬೇಕೆಂದಿದ್ದೇನೆ. ಅಲ್ಲಿ ಆಶ್ರಮಗಳನ್ನು ಕಟ್ಟಬೇಕೆಂದಿದ್ದೇನೆ. ತಮ್ಮ ಅನುಗ್ರಹ ಬೇಕು' ಎಂದಳು. ಆಗ ಸದ್ಗುರುಗಳು `ಗೋಕುಳಾ, ನಿಮ್ಮ ಪ್ರಾಂತದಲ್ಲಿ ಭಕ್ತಿಪಂಥದ ಪ್ರಚಾರಕ್ಕೆ ಸಾಕಷ್ಟು ಅವಕಾಶವಿದೆ. ನಿನ್ನ ಇಚ್ಛೆಯಂತೆ ಅಲ್ಲಿ ಆಶ್ರಮಗಳು ನಿರ್ಮಾಣಗೊಳ್ಳುತ್ತವೆ. ನಿನ್ನ ಅಪೇಕ್ಷೆಯನ್ನು ಸದ್ಗುರು ಪೂರೈಸುತ್ತಾನೆ' ಎಂದರು. ಆಗ ಅವಳ ಮನಸ್ಸಿನಲ್ಲಿ ಗುರುಗಳು ನಮ್ಮಲ್ಲಿ ಯಾವಾಗ ಬರುತ್ತಾರೋ ಗೋವೆಯ  ಜನರು ಇಲ್ಲಿಗೆ ಬಂದು ಗುರುಗಳ ಭಜನೆ ಪೂಜನ ಮಾಡುವ ಕಾಲ ಯಾವಾಗ ಬರುವುದೋ ಎಂಬ ಲವಲವಿಕೆಯಾಯಿತು.
ಮುಂದೆ ಗೋವಾದಲ್ಲಿ ಏನಾಯಿತೆಂದರೆ ವಿವೇಕಾನಂದರ ಶಿಷ್ಯ , ಆನಂದಸ್ವಾಮಿಗಳು ಗೋವೆಯಲ್ಲಿ ತಿರುಗಾಡುತ್ತ ಅಲ್ಲಿಯ ಜನರ ಸ್ಥಿತಿಗತಿಗಳನ್ನು ಅವಲೋಕನ ಮಾಡಿ ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರನ್ನು ಹೀಗೆ ವಿನಂತಿಸಿಕೊಂಡರು `ಶ್ರೀ ಸಿದ್ದನಾಥಾ, ಗೋವಾ ಪ್ರಾಂತವು ಪಾರಮಾರ್ಥಿಕ ದೃಷ್ಟಿಯಿಂದ ಮುಳುಗುವುದು ನಿಶ್ಚಿತ ಅಲ್ಲಿಯ ಜನರು ಚತುರ್ವೆಸನಿಗಳಾಗಿದ್ದು ಊಚ ನೀಚ ಜನರು ದುರ್ವ್ಯಸನಿಗಳಾಗಿ ಜ್ಞಾನಮಾರ್ಗವನ್ನು ತೊರೆದಿದ್ದಾರೆ, ಋಷಿ ಪರಂಪರ ನಾಶವಾಗುತ್ತಿದೆ. ಆದ್ದರಿಂದ ಆ ಪ್ರಾಂತದ ಮೇಲೆ ನೀವು ಕೃಪಾದೃಷ್ಟಿಯನ್ನಿಡಬೇಕು. ಗೋವೆಯ ವೃತ್ತಾಂತವನ್ನು ತಿಳಿಸಲು ಬಂದಿದ್ದೇನೆ, ಜಗದೋದ್ಧಾರಕ್ಕಾಗಿಯೇ ನಿಮ್ಮ ಅವತಾರವಾಗಿದೆ ಕೃಪೆ  ಮಾಡಬೇಕು' ಎಂದು ಬೇಡಿಕೊಂಡನು. ಹೀಗೆ ಆನಂದಸ್ವಾಮಿಗಳು ಬೇಡಿಕೊಳ್ಳುವಾಗ ಗೋಕುಳಾಬಾಯಿ ಅಲ್ಲಿಯೇ ನಿಂತಿದ್ದು ಬಹಳ ಸಂತೋಷಗೊಂಡಳು.
ಆಗ ಸಿದ್ಧನು ಗೋವಾ ಪ್ರಾಂತದಲ್ಲಿ ಪೋರ್ತುಗೀಜರ ಆಡಳಿತವಿದ್ದು ಪಂಚವಾಡಿಯಲ್ಲಿ ಕಾರ್ಯ ಪ್ರಾರಂಭಿಸಬೇಕೆಂದು ವಿಚಾರ ಮಾಡಿದನು. ಲಂಕಾ ನಗರವನ್ನು ವಶಪಡಿಸಿಕೊಳ್ಳುವ ಮೊದಲು ವಿಭೀಷಣ ಬಂದಂತೆ  ಆನಂದಸ್ವಾಮಿಗಳು ಗೋವೆಯ ಪರಿಸ್ಥಿತಿ ತಿಳಿಸಿದ್ದಾರೆಂದು ಸಿದ್ಧಾರೂಢರು ತಿಳಿದು ಅಲ್ಲಿಯೇ ನಿಂತಿದ್ದ ಗೋಕುಳಾಬಾಯಿಯನ್ನು ಕರೆದು 'ಗೋಕುಳಾ ನಿನ್ನ ಇಚ್ಛೆಯಂತೆ ಇನ್ನು ಮುಂದೆ  ಗೋವೆಯಲ್ಲಿ ಕಾರ್ಯ ಪ್ರಾರಂಭಿಸಬೇಕಾಗಿದೆ. ನೀನು ನನ್ನ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಪಂಚವಾಡಿಯಲ್ಲಿ ಸ್ಥಾಪಿಸಿ ಭಜನ ಸಪ್ತಾಹ ಮಾಡಿ ಅನ್ನ ಸಂತರ್ಪಣೆ ಮಾಡು' ಎಂದು ಹೇಳಿ ತನ್ನ ಮೂರ್ತಿಯನ್ನು ಅವಳ ಕೈಗೆ ಕೊಟ್ಟನು.
ಆಗ ಗೋಕುಳಾಬಾಯಿ ಹೇಳಿದಳು ಗುರುನಾಥನೇ, ನನಗೆ ಪುತ್ರರಿಲ್ಲ , ಬಂಧು ಬಾಂಧವರಿಲ್ಲ. ನಾನು ಹೇಗೆ ಮಾಡಲಿ?' ಎಂದಳು. ಇದನ್ನು ಕೇಳಿದ ಗುರುನಾಥ `ಕೇಳು ಗೋಕುಳಾಬಾಯಿ, ನಿನ್ನ ಸದ್ಗುರು ನಿನ್ನ ಬೆನ್ನ ಹಿಂದೆಯೇ ಇರುವಾಗ ಬೇರೆಯವರ ಅವಶ್ಯಕತೆಯೇನಿದೆ? ನಾನೇ ನಿನ್ನ ಪುತ್ರ ಬಂದು ಬಾಂಧವ ಎಲ್ಲವೂ ನಾನೇ ಇದ್ದೇನೆ. ನನ್ನನ್ನು ನೀನು ಮರೆಯಬೇಡ, ಪಾಂಡವರ ಸಹಾಯಕ್ಕಾಗಿ ಹೇಗೆ ಅರ್ಜುನನಿದ್ದನೋ ಹಾಗೆಯೇ ನಾನಿದ್ದೇನೆಂದು ತಿಳಿದು ಗುರುನಾಥನ ಸಪ್ತಾಹ ಮಾಡು ಚಿಂತಿಸಬೇಡ. ಆದರೆ ಒಂದು ಮಾತನ್ನು ನಿನ್ನ ಚಿತ್ರದಲ್ಲಿಟ್ಟುಕೋ ಅದೆಂದರೆ ನೀನು ಯಾವ ವಸ್ತುಗಳನ್ನು ತಿನ್ನುವೆಯೋ ಅಥವಾ ಭೋಗಿಸುವೆಯೋ ಆಗಾಗ ಪ್ರೇಮದಿಂದ ಅರ್ಪಿಸು. ನಾನು ಸಂತೋಷದಿಂದ ತೆಗೆದುಕೊಳ್ಳುತ್ತೇನೆ. ನನ್ನ ಸಿದ್ಧಾರೂಢ ಹುಬ್ಬಳ್ಳಿಯಲ್ಲಿದ್ದಾನೆ. ನಾನೇನು ಮಾಡಲಿ ಎಂದು ತಿಳಿಯಬೇಡ. ತ್ರಿಭುವನಗಳಲ್ಲಿದ್ದಾನೆಂದು ತಿಳಿದು ಆನಂದವಾಗಿರು. ಪ್ರಾರಬ್ದದಂತೆ ಸುಖ ದುಃಖ ಗಳು ಬಂದು ಹೋಗುತ್ತವೆ. ಅವನ್ನು ಸಹನ ಮಾಡಿಕೊಂಡು ಸರ್ವ ಭಾರವನ್ನು ನನ್ನ ಮೇಲೆ  ಹಾಕು. ನೀನು ಯಾವುದನ್ನು ಇಚ್ಛಿಸುವೆಯೋ ಅದು ನಿನಗೆ ಪೂರೈಕೆಯಾಗುತ್ತದೆ. ನೀನು ಗೋವೆಗೆ ಹೋಗು ಎಂದು ತನ್ನ ಮೂರ್ತಿಯನ್ನು ಕೊಟ್ಟನು. ಆಗ ಗೋಕುಳಾಬಾಯಿ ಮೂರ್ತಿಯನ್ನು ತೆಗೆದುಕೊಂಡು ತಾನುಟ್ಟ ಒಂದೇ ಸೀರೆಯ ಸೆರಗಿನಲ್ಲಿ ಸುತ್ತಿಕೊಂಡು ಸಿದ್ದನಾಮ ಸ್ಮರಿಸುತ್ತ ಗುರುಗಳಿಗೆ ವಂದಿಸಿ ನಡೆದಳು.
ಗಾಡಿಯಲ್ಲಿ ಜನದಟ್ಟಣೆಯಿದ್ದು ಮೂರ್ತಿಯನ್ನು ತನ್ನ ತೊಡೆಯ ಮೇಲಿಟ್ಟು ಅದಕ್ಕೆ ವಸ್ತ್ರ ಹೊದಿಸಿ ಕುಳಿತಿದ್ದಳು. ಜನರ ಗದ್ದಲ ನೂಕಾಟ ಹೆಚ್ಚಾದಾಗ ಜನರಿಗೆ “ನನ್ನ ಮಗು ಮಲಗಿದೆ ದೂಡಬೇಡಿರಿ' ಎನ್ನುತ್ತಿದ್ದಳು. ಆಗ ಜನರು ತಾಯಿ, ಆ ಮಗುವನ್ನು ಏಕೆ ಮಲಗಿಸಿರುವೆ? ಎಬ್ಬಿಸಿ ಕೂಡಿಸು' ಎಂದಾಗ ಗೋಕುಳಾಬಾಯಿ ಅಣ್ಣಂದಿರಾ ನನ್ನ ಕೂಸು ಹಾಲು ಕುಡಿದು ಮಲಗಿದೆ. ದೂಡಬೇಡಿರಿ' ಎನ್ನುತ್ತ ಒಂದೊಂದೇ ಸ್ಟೇಶನ್ ದಾಟುತ್ತ ದೂಧಸಾಗರ ನಂತರ ಕ್ಯಾಸಲ್‌ರಾಕ್ ಸ್ಟೇಶನ್ ಬಂದಾಗ ಇಂಗ್ಲೀಷ ರಾಜ್ಯ ಹಿಂದೆ ಹೋಗಿ ಪೋರ್ತುಗೀಜರ ಪ್ರದೇಶದ ಸಾವರ್ಡಾ ಸ್ಟೇಶನ್ ಬಂದಾಗ ಅಲ್ಲಿಗೆ ಕಲಾವತಿಯು ಬಂದಳು. ಅಲ್ಲಿ ಸ್ವಲ್ಪ ವಿಶ್ರಾಂತಿಯ ಸಮಯದಲ್ಲಿ ಕಲಾವತಿಯು ಕೆಲವು ಭಕ್ತಿಗೀತೆಗಳನ್ನು ಹಾಡಿದಳು. ಅವಳ ಹಾಡು ಕೇಳಿ ಸಂತೋಷವಾಯಿತು. ನಂತರ ಅವಳು ಗೋವಾ ಪ್ರಾಂತದ ಜನಜೀವನದಲ್ಲಿಯ ಕೆಟ್ಟ ವಾತಾವರಣ ತಿಳಿಸಿದಳು.
ಗೋಕುಳಾಬಾಯಿ ಮುಂದೆ  ಪಂಚವಾಡಿ ಗ್ರಾಮಕ್ಕೆ ಸಿದ್ದರ ಮೂರ್ತಿಯ ಜೊತೆಗೆ ಬಂದಳು. ಆಗ ಪಾಂಡುರಂಗ ಮಹಾರಾಜ (ಪರಶುರಾಮ ಪಂತ ಕರಮರಕರ) ಅವರ ಪತ್ನಿ ಜಾನಕೀಬಾಯಿ ಮತ್ತು ಮಕ್ಕಳು, ಮೊಮ್ಮಕ್ಕಳು ಬಂದರು. ಶಾಲಿವಾಹನ ಶಕೆ ಹದಿನೆಂಟು ನೂರಾ ಮೂವತ್ತೊಂಭತ್ತು ವೈಶಾಖ ಶುದ್ಧ ಅಷ್ಟಮಿ ದಿನ (ಕ್ರಿ.ಶ.೧೯೦೯) ಪಂಚವಾಡಿಯಲ್ಲಿ ಸಿದ್ದರ ಮೂರ್ತಿಯ ಮೆರವಣಿಗೆ ಮಾಡುತ್ತ ವಾದ ಬಾರಿಸುತ್ತ ಜಯಜಯಕಾರ ಮಾಡುತ್ತ ಬ್ರಾಹ್ಮಣರು ವೇದಮಂತ್ರ ಘೋಷಿಸುತ್ತ ಮೆರವಣಿಗೆ ಮಾಡಿ ಮೂರ್ತಿಯನ್ನು ಮಂಟಪದಲ್ಲಿ ಕೂಡಿಸಿ ಏಳು ದಿವಸ ಸಪ್ತಾಹ ಮಾಡಿದರು. ಅದರಲ್ಲಿ ಭಜನ ಕೀರ್ತನ ಶಾಸ್ತ್ರ ಪ್ರವಚನ ಮಾಡುತ್ತ ಕೊನೆಯ ದಿನ ಸಿದ್ಧರ ಮೂರ್ತಿಯನ್ನು ಊರಲ್ಲಿ ಮೆರವಣಿಗೆ ಮಾಡಿ ಒಂದೆಡೆ ಸ್ಥಾಪಿಸಿ ಪೂರ್ಣಿಮೆಯ ದಿವಸ ಉತ್ಸವ ಮುಕ್ತಾಯಗೊಳಿಸಿದರು. ಅದರಲ್ಲಿ ಪಾಂಡುರಂಗ ಮಹಾರಾಜರು ಓಂ ನಮಃ ಶಿವಾಯ ಮಂತ್ರವನ್ನು ಭಕ್ತರಿಗೆ ಕಲಿಸಿ ಕೀರ್ತನ ಪುರಾಣ ಪ್ರವಚನ ಮಾಡಿದರು. ಹೀಗೆ ಶ್ರೀ ಸಿದ್ದರ ಪ್ರೇರಣೆಯಂತೆ ಗೋಕುಳಾಬಾಯಿಯಿಂದ ಗೋವಾ ಪ್ರಾಂತದ ಪಂಚವಾಡಿಯಲ್ಲಿ ಸಿದ್ದರ ಪ್ರಥಮ ಆಶ್ರಮ ಸ್ಥಾಪನೆಯಾಯಿತು. ಮುಂದೆ ಇಡೀ ಪ್ರಾಂತದ ಜನರು ಪಾವನರಾದರು.


ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ