ಗುರುಪ್ಪನ ಕರುಣೆಯಿಂದ ಹನುಮವ್ವ ಮಗುವನ್ನು ಪಡೆದಳು





ಕುಷ್ಟಗಿ ತಾಲೂಕಿನ ಸಿರಗುಂಪಿ ಗ್ರಾಮದ ಹುರಿಗೆಜ್ಜೆ ಹನುಮಪ್ಪ ಮತ್ತು ಲಿಂಗಸೂರ ತಾಲೂಕಿನ ನಾಗಲಾಪುರದ ದುಂಡಪ್ಪನವರು ಉಪಜೀವನಕ್ಕಾಗಿ ಊರುಬಿಟ್ಟು ಹುಬ್ಬಳ್ಳಿಯ ಬಟ್ಟೆಗಿರಣಿ (ಆಗಿನಭಾರತವಿಲ್ಲ)ಯಲ್ಲಿ ಕೆಲಸಕ್ಕೆ ಸೇರಿ ಗಿರಣಿ ಚಾಳಿನಲ್ಲಿ ವಾಸವಾದರು. ಇವರು ಸದ್ಗುರು ಸಿದ್ಧಾರೂಢರ ಭಕ್ತರಾಗಿದ್ದು ಪ್ರತಿದಿನ ಮಠಕ್ಕೆ ಹೋಗಿ ದರ್ಶನ ಪಡೆಯುತ್ತಿರುವುದಲ್ಲದ ಭಾನುವಾರ, ಸೂಟಿ ದಿನದಲ್ಲಿ ಮಠಕ್ಕೆ ಹೋಗಿ ಕಟ್ಟಿಗೆ ಸೀಳುವುದು ಮಠದ ಸುತ್ತಮುತ್ತ ಜಾಗೆಯನ್ನು ಸ್ವಚ್ಛಮಾಡಿ ಸಾಯಂಕಾಲದವರೆಗಿದ್ದು ಶ್ರೀ ಸದ್ಗುರುಗಳ ಶಾಸ್ತ್ರ ಕೇಳಿ, ಭಜನೆ ಮಂಗಳಾರತಿ ಮಾಡಿ ಪ್ರಸಾದ ತೆಗೆದುಕೊಂಡು ಮನೆಗೆ ಬರುತ್ತಿದ್ದರು. ಮುಂದೆ ಗಿರಣಿ ಚಾಳಿನ ಸಿದ್ಧರ ಭಕ್ತರೆಲ್ಲರೂ ಕೂಡಿ ಸಿದ್ಧಾರೂಢರ ಭಜನಾ ಮಂಡಳಿ ಕಟ್ಟೆ ದಿನಾಲು ಭಜನೆ ಪೂಜೆ ಮಾಡುತ್ತಿದ್ದರಲ್ಲದೆ ವಿಶೇಷ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢರನ್ನು ಕರೆದು ಪೂಜಿಸಿ ಅನ್ನ ಪ್ರಸಾದ ವಿತರಿಸಿ ಶ್ರೀಗಳನ್ನು ಮಠಕ್ಕೆ ಕಳಿಸಿ ಕೊಡುತ್ತಿದ್ದರು.
ಶ್ರೀಸಿದ್ಧಾರೂಢರ ಮಹಾಸಮಾಧಿಯ ನಂತರ ಹುರಿಗೆಜ್ಜೆ ಹನುಮಪ್ಪನ ದೊಡ್ಡಮಗ ದೊಡ್ಡ ದುರಗಪ್ಪನಿಗೂ ನಾಗಲಾಪುರದ ದುಂಡಪ್ಪನ ಮಗಳಾದ ಹನುಮವ್ವನ ಜೊತೆಗೆ ಮದುವೆಯಾಯಿತು. ದುರಗಪ್ಪನು ತಂದೆಯಂತೆಯೇ ನಿತ್ಯಪೂಜೆ ಹಾಗೂ ಇನ್ನಿತರ ಸೇವೆ ಮಾಡುತ್ತಿದ್ದನು. ಮದುವೆಯಾಗಿ ಐದು ವರ್ಷಗಳಾದರೂ ಹನುಮವ್ವಳಿಗೆ ಮಕ್ಕಳಾಗಲಿಲ್ಲ. ಆಗ ಅತ್ತೆಯಿಂದ ನಿನ್ನ ವಾರಗಿತ್ತಿಯರಿಗೆ, ನಾದಿನಿಯರಿಗೆ ಮಕ್ಕಳಾದವು. ನಿನಗೆ ಆಗಲಿಲ್ಲ ಎಂದು ಬೈಗಳ ಪ್ರಾರಂಭವಾದವು. ಇದರಿಂದಾಗಿ ಹನುಮವ್ವ ಬೆಳಿಗ್ಗೆ ಎದ್ದು ಸ್ನಾನಮಾಡಿ ಬನ್ನಿ ಕಟ್ಟಿಗೆ ಹೋಗಿ ಪೂಜಿಸಿದ್ದಲ್ಲದೆ ಡಾವಣಗೇರಿಯ ಕಳಸಾಪೂರ ದುರಗವ್ವಗೆ ಹರಕೆಹೊತ್ತು ಕಂಡ ಕಂಡ ದೇವರಿಗೆ ಸಂತಾನ ದಯಪಾಲಿಸು ಎಂದು ಬೇಡಿಕೊಂಡರೂ ಮಕ್ಕಳಾಗಲಿಲ್ಲ ದಿನದಿನಕ್ಕೆ ಅವಳ ಮೈ ಗಾತ್ರ ದೊಡ್ಡದಾಗಹತ್ತಿತು. ಇದರಿಂದ ಇವಳಿಗೆ ಮಕ್ಕಳಾಗುವದಿಲ್ಲ ಎಂಬ ಹಣೆಪಟ್ಟಿ ಹಚ್ಚಿದರು, ಬಂಧು ಬಳಗದವರೂ ಬೈಯ್ಯಹತ್ತಿದರು.
ಗುರುತುಮ ಭಕ್ತನಕೆ ಹಿತಕಾರಿ
ಅಬರಾಖಿಯ ಲಾಜ ಹಮಾರಿ||
ಎಂಬ ಬ್ರಹ್ಮಾನಂದದ ಹಿಂದಿ ಭಜನೆಯಂತೆ  ಚಿಂತೆಗೊಳಗಾದ ದೊಡ್ಡ ದುರಗಪ್ಪನು ಸದ್ಗುರುವೇ ದೇವರೆಂದು ನಂಬಿ, ತನ್ನ ಹೆಂಡತಿ ಹನುಮವ್ವಳನ್ನು ಕರೆದುಕೊಂಡು ದಿನಾಲು ಮಠಕ್ಕೆ ಹೋಗಹತ್ತಿದನು. ಒಂದು ದಿನ ಸೋಮವಾರ ಮಠಕ್ಕೆ ಹೋಗಿ ಪಕ್ಕದಲ್ಲಿಯ ಮಲ್ಲಿಗೆಯ ಗಿಡದಲ್ಲಿ ಅರಳಿದ ಹೂವು ಮತ್ತು ಇನ್ನೊಂದು ಗಿಡದಲ್ಲಿಯ ಕೆಂಪು ಹೂಗಳನ್ನು ತೆಗೆದುಕೊಂಡು ಶ್ರೀ ಗುರುನಾಥಾರೂಢರ ಪಾದಗಳಲ್ಲಿ ಸಮರ್ಪಿಸಿ ತಂದೆ! ಎಲ್ಲ ದೇವರ ಗುಡಿಗೆ ಹೋಗಿ ಹರಕೆ ಮಾಡಿಕೊಂಡೆ. ಒಂದು ದೇವರ ಕರುಣೆ ದೊರಕಲಿಲ್ಲ, ನಿನ್ನ ಪಾದಕ್ಕೆ ಬಂದಿದ್ದೇನೆ. ನೀನು ಎಲ್ಲ ದೇವರಿಗೆ ದೇವನಾಗಿರುವಿ, ನಿಮ್ಮ ಪಾದಕ್ಕೆ ಬಿದ್ದಿದ್ದೇವೆ. ನಿನ್ನ ಹೊರತು ಬೇರಾರೂ ಗತಿಯಿಲ್ಲ. ನನ್ನ ಬಂಜೆತನ ಹೋಗಲಾಡಿಸಿ ಮಗುವನ್ನು ದಯಪಾಲಿಸು ಎಂದು ನಮನಸ್ಕರಿಸಿ ಹನುಮವ್ವ ಎದ್ದು ನಿಂತು ದುಃಖಿಸತೊಡಗಿದಳು.
ಆಗ ಸದ್ಗುರು ಮೌನಯೋಗಿ ಶ್ರೀಗುರುನಾಥಾರೂಢರು ತಮ್ಮ ಪಾದಗಳ ಮೇಲಿಟ್ಟ ಹೂಗಳನ್ನು ಬಲಗಾಲಿನ ಹೆಬ್ಬೆರಳಿನಿಂದ ಚಿಮ್ಮಿದರು. ಆಗ ಎರಡೂ ಹೂವುಗಳು ಮುಂದಕ್ಕೆ ಬಿದ್ದವು. ಪಕ್ಕದಲ್ಲಿದ್ದ ಸಾಧುವೊಬ್ಬರು, ಆ ಹೂಗಳನ್ನು ಎತ್ತಿಕೊಂಡು ಹನುಮವ್ವನ ಉಡಿಯಲ್ಲಿ ಹಾಕಿ ಅವಳನ್ನು ಕುರಿತು, ತಾಯಿ ನಿನ್ನ ಹರಕೆ ನೆರವೇರುತ್ತದೆ ಗುರುಗಳ ಕರುಣೆಯಾಗಿದೆ ಎಂದಾಗ ಹನುಮವ್ವ ಹರ್ಷಗೊಂಡು ಪ್ರಸಾದ ಸ್ವೀಕರಿಸಿ ದಂಪತಿ ಸಹಿತ ಮನೆಗೆ ಬಂದರು. ಮುಂದೆ ಒಂದು ತಿಂಗಳಲ್ಲಿ ಹನುಮವ್ವ ಗರ್ಭವತಿಯಾಗಿ ನವಮಾಸ ತುಂಬಿ ಒಂದು ಗಂಡುಕೂಸು ಜನಿಸಿತು. ಆಗ ಬಂಜೆತನದ ಮಾತುಗಳನ್ನಾಡಿದವರ ಬಾಯಿಗೆ ಬೀಗ ಬಿದ್ದಿತು. ಒಂಭತ್ತು ದಿನಗಳ ನಂತರ ದುರುಗಪ್ಪ ತನ್ನ ಹೆಂಡತಿ ಮತ್ತು ಮಗುವನ್ನು ಕರೆದುಕೊಂಡು ಹೋಗಿ. ಶ್ರೀ ಗುರುನಾಥರ ಪಾದಗಳಲ್ಲಿ ಮಗುವನ್ನು ಹಾಕಿ ಸಂತೋಷದಿಂದ ಸಾಷ್ಟಾಂಗ ನಮಿಸಿ ಅಲ್ಲಿದ್ದವರಿಗೆ ಈ ಪವಾಡವನ್ನು ವಿವರಿಸಿದಾಗ ಎಲ್ಲರಿಗೂ ಅಚ್ಚರಿಯಾಯಿತು ಆಮೇಲೆ ಸದ್ಗುರುಗಳಿಗೆ ವಂದಿಸಿ ಶ್ರೀ ಸಿದ್ಧಾರೂಢರ ಗದ್ದುಗೆಗೆ ನಮಸ್ಕರಿಸಿ ಮನೆಗೆ ಬಂದರು. ನಂತರ ಶ್ರೀಗಳ ಕೃಪೆಯಿಂದ ಹುಟ್ಟಿದ ಮಗುವಿಗೆ ಯಮನಪ್ಪ ಎಂಬ ನಾಮಕರಣ ಮಾಡಿದರು.

 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗಂಗಪ್ಪ ಸೋಮನಾಳೆ ಗುರುಕೃಪೆಯಿಂದ ಜೋತಿಷಿಯಾದ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ