ಶ್ರೀ ಸಿದ್ಧಾರೂಢರ ಅವತಾರ ಸಮಾಪ್ತಿ ಶ್ರೀಗುರುನಾಥರ ಮೌನ

  ಶ್ರೀ ಸಿದ್ಧಾರೂಢರ ಅವತಾರ ಸಮಾಪ್ತಿ ಶ್ರೀಗುರುನಾಥರ ಮೌನ


ಒಂದುದಿನ ಸಿದ್ಧಾರೂಢರು ಮುಂಜಾನೆ ಪ್ರವಚನದಲ್ಲಿ ಪಾರಮಾರ್ಥ ಗೀತೆ ಗ್ರಂಥದ ಕೊನೆಯ ಭಾಗವನ್ನು ಎಲ್ಲರ ಹೃದಯದಲ್ಲಿ ನಾಟುವಂತೆ ಪ್ರತಿಪಾದಿಸಿದರು. ಅಂದು ಅವರ ಮುಖ ಪ್ರಶಾಂತವಾಗಿತ್ತು ಮಂಗಳದ ನಂತರ ಎಲ್ಲ ಭಕ್ತರು ಹೊರಟುಹೋದರು. ನಂತರ ಭಕ್ತರಾದ ಹೆಣ್ಣುಮಕ್ಕಳು, ಗಂಡಸರು ಬಂದು, ಅಪ್ಪಾ ಹುಣ್ಣಿಮೆಯನ್ನು ಯಾವಾಗ ಮಾಡಬೇಕು ? ಎಂದು ಕೇಳಿದರು. ಆಗ ಗುರುಗಳು ಭಕ್ತರೆ, ನಾಳೆ ಬೆಳತನಕ ಭಜನೆ ಮಾಡಿರಿ ಎಂದರು. ಅವರ ಮಾತು ಮತ್ತು ಆರೋಗ್ಯ ಚೆನ್ನಾಗಿತ್ತು. ಯಾವ ತೊಂದರೆಯೂ ಇರಲಿಲ್ಲ. ಅಂದು ಸಾಯಂಕಾಲ ಪ್ರವಚನ ಮುಗಿದ ಮೇಲೆ ಸದ್ಗುರುಗಳು ತಮ್ಮ ಶಾಲು, ಕೊರಳಿನ ಮೇಲೆ ಮತ್ತು ಹಲವಾರು ವಸ್ತುಗಳನ್ನು ತುಕಾರಾಮ, ಮುರಳಿ, ಮಲ್ಲರಸ, ಗೋವಿಂದ ಮುಂತಾವದರಿಗೆ ಕೊಟ್ಟರು.


ಮರುದಿನ ಹುಣ್ಣಿವೆ  ಆಗ ಶ್ರೀಸಿದ್ಧಾರೂಢರ ಪ್ರಕೃತಿ ಅತಿಯಾಗಿ ಅಸ್ತವ್ಯಸ್ತಗೊಂಡಿತು. ಭಕ್ತರು ಗಾಬರಿಗೊಂಡು ಶ್ರೀಸಿದ್ದಾರೂಢರನ್ನು ಒಂದು ಖೋಲಿಯಲ್ಲಿ ಮಲಗಿಸಿ ಡಾಕ್ಟರರನ್ನು ಕರೆಸಿದರು. ಈ ಸುದ್ದಿ ಊರಲ್ಲಿ ಹಬ್ಬಿ ಹಲವಾರು ಭಕ್ತರು ಬಂದರು. ಮಠದ ಸುತ್ತಲೂ ಪೋಲೀಸರು ಕಾವಲು ಇದ್ದರು. ಡಾಕ್ಟರ ಸೋನಟಕ್ಕೆ, ಡಾಕ್ಟರ ಗೋರೆ ಅವರು ಗುರುಗಳನ್ನು ಪರೀಕ್ಷಿಸುತ್ತಿದ್ದರು. ಭೀಮಣ್ಣ ದಿವಟೆ, ಪರೂತಪ್ಪ ಕರ್ಜಗಿ, ಕೆಂಪಣ್ಣ ತುಕ್ಕಪ್ಪ ಸಪಾರೆ ಮಾತ್ರ ಬಳಿಗಿದ್ದರು. ಕೋಣೆಯ ಕದ ಹಾಕಿತ್ತು. ನಂತರ ಡಾಕ್ಟರರು ಹೊರಗೆ ಬಂದಾಗ ಜನರು ಮುಗಿಬಿದ್ದು, ಡಾಕ್ಟರರೆ ನಮ್ಮಪ್ಪ ಹೇಗಿದ್ದಾನೆ ? ಅವನಿಗೆ ಏನಾಗಿದೆ ಹೇಳಿರಿ.. ಎಂದು ಕಣ್ಣೀರು ಸುರಿಸುತ್ತ ಕೇಳಿದಾಗ ಅವರು ಹೇಳಿದರು. ಅಪ್ಪಾಅವರು ಆರಾಮ ಇದ್ದಾರೆ. ಅವರಿಗೆ ಯಾವ ಕಾಯಿಲೆಯ ಲಕ್ಷಣವಿಲ್ಲ, ಒಂದು ಇಂಜಕ್ಷನ್ ಕೊಟ್ಟಿದ್ದೇವೆ, ಮುಂದೆ ಏನಾಗಬಹುದು ಹೇಳಲು ಬರುವುದಿಲ್ಲ ಎಂದು ಹೇಳಿ ಹೊರಟು ಹೋದರು.

ಜನರು ನಿಂತಲ್ಲಿಯೇ ಭಜನೆ ಮಾಡುತ್ತಿದ್ದರು, ಮಿರಜಕ್ಕೆ ಹೋಗಿದ್ದ ಗುರುನಾಥರನ್ನು  ತಂತಿ ಮೂಲಕ ಕರೆಸಿದಾಗ, ಅವರು ಸುಮಾರು ಮೂರು ಗಂಟೆಗೆ ಬಂದರು. ಆಗ ಶ್ರೀ ಸಿದ್ದರೂಢರು ಏಕಾಂತ ಬಯಸಿದಾಗ, ಎಲ್ಲರೂ ಹೊರಗೆ ಹೋದರು. ಆಗ ಗುರುನಾಥರು ಕಣ್ಣೀರು ಸುರಿಸುತ್ತ ನಿಂತಾಗ, ಸಿದ್ದರು ಮಲಗಿದಲ್ಲಿಯೇ ಗುರುನಾಥರನ್ನು ಹತ್ತಿರ ಕರೆದರು ಆಗ ಮುಂದೆ ಬಂದು ಸುಮ್ಮನೆ ಗುರುಗಳನ್ನು ಏಕದೃಷ್ಟಿಯಿಂದ ನೋಡುತ್ತ ನಿಂತರು. ಆಗ  ಸಿದ್ದರ ಕಣ್ಣುಗಳಿಂದ ಬರುತ್ತಿದ್ದ ದೈವಿಕಿರಣಗಳ ರಾಶಿಗಳು ಹೊರಟು ನೇರವಾಗಿ ಗುರುನಾಥರ ಕಣ್ಣುಗಳಲ್ಲಿ ಲೀನವಾದವು. ಇತ್ತ ಸದ್ಗುರುಗಳ ಪ್ರಾಣ ಅನಂತದಲ್ಲಿ ಲೀನವಾಯಿತು. ದಿನಾಂಕ ಇಪ್ಪತ್ತೊಂದು ಎಂಟನೇ ತಿಂಗಳು ಹತ್ತೊಂಭತ್ತು ನೂರಾ ಇಪ್ಪತ್ತೊಂಬತ್ತನೇ ಇಸ್ವಿ ಬ್ರಾಹ್ಮೀ  ಮುಹೂರ್ತದಲ್ಲಿ ಮಹಾ ಸಮಾಧಿ ಹೊಂದಿದರು, ಈ ಘಟನೆಯನ್ನು ಒಂದು ಮೂಲೆಯಲ್ಲಿ ನಿಂತು ಕಣ್ಣಾರೆ ಕಂಡು ಪ್ರಭಾವಿತರಾದ ಬೆಂಗಳೂರಿನ ಶಾಂತಾನಂದರು ಹನ್ನೆರಡು ವರ್ಷ ಮೌನವಾಗಿ ಉಳಿದಿದ್ದರಂತೆ.


ನಂತರ ಅವರ ಪಾರ್ಥಿವ ಶರೀರವನ್ನು ಕೈಲಾಸ ಮಂಟಪದಲ್ಲಿರಿಸಿದಾಗ, ಪೊಲೀಸರ ಕಾವಲಿನಲ್ಲಿ ಸಿದ್ದರ ಅಂತಿಮ ದರ್ಶನಕ್ಕಾಗಿ ದೇಶದ ನಾನಾ ಭಾಗಗಳಿಂದ ಮತ್ತು ಹುಬ್ಬಳ್ಳಿಯ ಸಾವಿರಾರು ಭಕ್ತರು ಬಂದು ಪತ್ರಿ, ಹೂಮಾಲೆ, ಹಣ್ಣು, ವಿಭೂತಿ, ಕಾಯಿ, ಕರ್ಪುರ, ಊದಿನಕಡ್ಡಿಗಳನ್ನು ತಂದು ಅರ್ಪಿಸಿದ್ದು, ರಾಶಿ ರಾಶಿಯಾಗಿ ಬಿದ್ದಿತ್ತು. ನಂತರ ಸಿದ್ದರ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆ ಮಾಡಿ ತಂದು, ಮೊದಲೇ ಸಿದ್ಧಪಡಿಸಿದ ಸ್ಥಾನದಲ್ಲಿ ಸಾಯಂಕಾಲ ಮಹಾಸಮಾಧಿ ಮಾಡಿದರು. ಆಗ ಶ್ರೀ ಗುರುನಾಥರ ಸ್ಥಿತಿ ಇನ್ನೂ ವಿಚಿತ್ರವಾಗಿತ್ತು. ಪೂರ್ಣಮೌನಿಯಾದ ಉನ್ನತ ಸ್ಥಿತಿ ಪ್ರಾಪ್ತವಾಗಿ  ನಾಲ್ಕು ತಿಂಗಳ ಕೂಸಿನ ಸ್ಥಿತಿ ಅವರಿಗೆ ಬಂದಿತ್ತು. ಸಿದ್ದಾರೂಢರ ಮಹಾಸಮಾಧಿಯ ನಂತರ ಮಠದ ಅಂಗಳದ ಕಸಗೂಡಿಸಿದರೆ ಎರಡು ಗೋಣಿ ಚೀಲದಷ್ಟು ಬಳೆ ಚೂರಿನ ಬಳಿ, ರಾಶಿಯಾಗಿತ್ತಂತೆ. ಅಷ್ಟೊಂದು ಹೆಣ್ಣುಮಕ್ಕಳು ತಮ್ಮ ದೇಹಭಾವ ಮರೆತು ನೆಲಕ್ಕೆ ಬಿದ್ದು ಉರುಳಾಡಿದ್ದರಂತೆ. ಆಗ ಭಕ್ತರಿಗಾದ ಆಘಾತವನ್ನು ಊಹಿಸುವುದೂ ಅಸಾಧ್ಯ.


ಶ್ರೀ ಸಿದ್ಧಾರೂಢರು ಸಮಾಧಿ ಹೊಂದಿದ ಸುದ್ದಿ ತಿಳಿದ ಬಳ್ಳಾರಿಯ ಸಿದ್ಧರ ಭಕ್ತೆ  ವಿಶಾಲಾಕ್ಷಿಯು ಬಹಳ ದುಃಖಿತಳಾಗಿ ಅಳುತ್ತ ಸುಸ್ತಾಗಿ ಕುಳಿತು, ತೂಕಡಿಸುತ್ತ ಅರ್ಧನಿದ್ರೆಯಲ್ಲಿ ಮಲಗಿದಾಗ, ಆರೂಢರು ಕನಸಿನಲ್ಲಿ ಬಂದು, ವಿಶಾಲಾಕ್ಷಿ ಈ ದೇಹ ಜರ್ಜರಿತವಾಗಿತ್ತು. ಅದನ್ನು ವಿಸರ್ಜನೆ ಮಾಡಬೇಕಾಯಿತು. ಈಗ ನಾನು ಕಲಾವತಿಯ ರೂಪದಲ್ಲಿದ್ದೇನೆ. ಸಾಧಕಳಾದ ನೀನು ನಿನ್ನ ಇಚ್ಛೆಯನ್ನು ಅವಳಿಂದ ಪೂರೈಸಿಕೊ ಎಂದು ಹೇಳಿ ಅದೃಶ್ಯರಾದರು. ಅಂದಿನಿಂದ ಕಲಾವತಿ ದೇವಿಯ ಮೇಲೆ ಅವಳ ಭಕ್ತಿ ಹೆಚ್ಚಿತು. (ವಿಶಾಲಾಕ್ಷಿಯು ಮೊದಲು ಸಿದ್ದರ ಉಪದೇಶ ಪಡೆದು ಸಾಧನ ದಿಶೆಯಲ್ಲಿದ್ದಳು)


ಶ್ರೀ ಸಿದ್ಧಾರೂಢರ ಮಹಾಸಮಾಧಿಯ ನಂತರ ಗುರುನಾಥಾರೂಢರ ಅವಸ್ಥೆಯು ಬದಲಾಯಿತು. ಆಗಲೇ ದೇಹಭಾವ ತೊರೆದುಹೋಯಿತು. ಸುಖ ದುಃಖ, ಬೇಕು ಬೇಡ ಎನ್ನುತ್ತಿರಲಿಲ್ಲ, ಅವರು ನನ್ನವರು ತನ್ನವರು, ಇವರು ಬೇರೆಯವರು ಎಂಬ ಭಾವನೆ ಆಳಿದುಹೋಯಿತು. ಕಾಮ ಕ್ರೋಧಾದಿ ವೃತ್ತಿಗಳು ನಾಶವಾದವು. ಇವರಿಗೆ ಪ್ರಪಂಚದ ಆಸಕ್ತಿ ಪೂರ್ಣ ನಾಶವಾಗಿ, ಸಿದ್ಧಾರೂಢರ ಸಮಾಧಿಯ ಎದುರು ಸುಮ್ಮನೇ ಲಕ್ಷ್ಯವಿಟ್ಟು ಕೂಡ ತೊಡಗಿದರು. ಮಾತನಾಡುತ್ತಿರಲಿಲ್ಲ. ಬಲವಂತಕ್ಕೆ ಅಲ್ಪ ಸ್ವಲ್ಪ ಊಟ ಮಾಡುತ್ತಿದ್ದರು. ಹಸಿವು ನೀರಡಿಕೆಗಳಾದರೆ ಸಣ್ಣ ಮಗು ಅಳುತ್ತದೆ. ಆದರೆ ಶ್ರೀ ಗುರುನಾಥರಿಗೆ ಹಸಿವು ನೀರಡಿಕೆಗಳ ಅರಿವಿರಲಿಲ್ಲ. ಅವರ ಮನಸ್ಸೆಲ್ಲ ಬ್ರಹ್ಮಮಯವಾಗಿ ಅಖಂಡ ಸಚ್ಚಿದಾನಂದ ಸ್ವರೂಪವಾದ ತೂರ್ಯಾತೀತಾವಸ್ಥೆಯು ಪ್ರಾಪ್ತವಾಯಿತು. ಮುಂದೆ ಹೊರಗಡೆ ತಿರುಗಾಡುವುದನ್ನು ನಿಲ್ಲಿಸಿ, ಶಯನಮಂದಿರ ಸೇರಿದರು. ಆಮೇಲೆ ಪೂರ್ಣ ಮೌನ ಮುನಿಯಾದರು. ಕೈಸನ್ನೆ ಬಾಯಿಸನ್ನೆ ಏನೂ ಅಕ್ಕಿ ಮಾಡುತ್ತಿರಲಿಲ್ಲ. ಹೀಗೆ ಕಾಯಾವಾಚಾ ಮನಸಾ ಎಲ್ಲವನ್ನು ಮೀರಿ ಪೂರ್ಣಾನಂದ ಮೌನ ತಾಳಿದರು. ಭಕ್ತರು ಗುರುಗಳಿಗೆ ಉಣಿಸಲು ತುತ್ತನ್ನು ಮುಖಕ್ಕೆ ಹಿಡಿದಾಗ ಪುರ್‌ಪುರ್ ಎಂದು ಉಗುಳುತ್ತಿದ್ದರು. ಕೆಲವು ಕಾಲ ಅಲ್ಪ ಸ್ವಲ್ಪ ಆಹಾರ ಸ್ವೀಕರಿಸುತ್ತಿದ್ದರು. ಶ್ರೀಗುರುನಾಥರು ಅನಿರ್ವಚನೀಯವಾದ ಬ್ರಹ್ಮದಲ್ಲಿ ಬೆರೆತು ಜೀವನ್ಮುಕ್ತರಾದರು.


ಶ್ರೀ ಗುರುನಾಥರ ದೇಹಸ್ಥಿತಿಯು ದಿನದಿಂದ ದಿನಕ್ಕೆ ಕ್ಷಿಣವಾಗತೊಡಗಿತು.ಸಿದ್ಧಾರೂಢರ ನಂತರ ಶ್ರೀ ಗುರುನಾಥರೇ ನಮಗಿನ್ನು ಗತಿಯೆಂದು ಭಾವಿಸುವ ಸಾವಿರಾರು ಭಕ್ತಜನ ಸ್ತ್ರೀ ಪುರುಷ ಭಕ್ತರು  ಗುರುನಾಥಾರೂಢರ ಶಯನ ಮಂದಿರದ ಮುಂದೆ ಬಂದು  ಸಾಷ್ಟಾಂಗ ಹಾಕಿ, ಗುರುನಾಥರನ್ನು ಕುರಿತು ಸದ್ಗುರುವೆ, ನಮ್ಮ ಸಿದ್ಧಾರೂಢರು ಮಾತನಾಡುವ ದೇವರಾಗಿದ್ದು ನಮ್ಮ ಸಂಕಟಗಳನ್ನು ಕೇಳಿ ಪರಿಹಾರ ನೀಡುತ್ತಿದ್ದರು. ಅವರು  ಹೋದ  ಮೇಲೆ ನಮ್ಮ ಮಾತು ಕೇಳುವವರಾರು? ಈಗ ನೀನೇ ಗತಿ. ನಾವು ನಿನ್ನನ್ನೇ  ನಂಬಿದ್ದೇವೆ. ಇಂಥದರಲ್ಲಿ ನೀನು ಅನ್ನ ಬಿಟ್ಟು ಹೀಗೆ ಶಯನಮಂದಿರದಲ್ಲಿ ಉಳಿದುದನ್ನು  ನೋಡಿ ನಮಗೆ ಸಂಕಟವಾಗುತ್ತದೆ ಎನ್ನುತ್ತ, ಎಲ್ಲ ಭಕ್ತರು ತಾಯಂದಿರು ಧರಣಿ ಕುಳಿತರು.


ಆಗ ಭಕ್ತರ ಆಗ್ರಹಕ್ಕೆ ಮಣಿದ ಭಕ್ತವತ್ಸಲನಾದ ಶ್ರೀಗುರುನಾಥಾರೂಢರು ಶಯನ ಮಂದಿರದಿಂದ ಹೊರಗೆ ಬಂದು ದರ್ಶನಕೊಟ್ಟರು. ನಡೆಯಲು ತ್ರಾಣವಿಲ್ಲದ್ದರಿಂದ ಅವರು ಹೊತ್ತುಕೊಂಡು ಅಡಗಿ ಮನೆಗೆ ಒಯ್ದರು. ಮಗುವಿನ ಮೈತೊಳೆದಂತೆ ಮೈ ತೊಳೆದು ತಾವೆ ಅವರಿಗೆ ಕೈಪಾ ಹಾಕಿದರು. ಮಡಿ ಅರಿವೆ ಹೊದಿಸಿದರು. ದೇವರನ್ನು ಪೂಜಿಸುವಂತೆ  ಪೂಜಿಸಿದರು. ಎದುರು ಕೂಡಿಸಿಕೊಂಡು ಕೈತುತ್ತನುಣಿಸಿದರು. ಆದರೆ ಅವರು ಆ ತುತ್ತಿನೊಳಗಿನ  ಒಂದು ಭಾಗವನ್ನುಂಡು ಉಳಿದುದನ್ನು ಹೊರಗೆ ಉಗುಳಿದರು. ಏಕೆಂದರೆ ಊಟದಲ್ಲಿ ಅವರಿಗೆ ಆಸಕ್ತಿಯಿರಲಿಲ್ಲ. ಭಕ್ತರ ಕೈಗೂಸಾದರು. ಆಗ ಭಕ್ತರಿಗೆ ಪ್ರಾಣ ಬಂದಂತಾಯಿತು. ಆದರೂ ಗುರುನಾಥಸ್ವಾಮಿಗಳು ದೇಹ ಧರಿಸಿದ್ದರೂ ಶರೀರಭಾವನೀಗಿ, ಆತ್ಮಾನುಸಂಧಾನದಲ್ಲಿ ಮುಳುಗಿ, ಅದರಲ್ಲಿಯೇ ಒಂದಾದರು. ಶರೀರದ ಮೇಲೆ ಸಾಮಾನ್ಯ ಪ್ರಜ್ಞೆ ಇದ್ದರೂ ವಿಶೇಷವಾಗಿರಲಿಲ್ಲ. ಸ್ನಾನಮಾಡುತ್ತೇನೆ, ಊಟ ಮಾಡುತ್ತೇನೆ ಎಂದು ಎಂದಿಗೂ ಹೇಳಲಿಲ್ಲ ಮಲಮೂತ್ರ ವಿಸರ್ಜನೆ ಮಾಡುತ್ತೇನೆ ಎಂದು ಎಂದಿಗೂ ಹೇಳಲಿಲ್ಲ. ಅಷ್ಟೊಂದು ದೇಹಭಾವ ನಷ್ಟವಾಗಿತ್ತು. ದೇಹದ ಧರ್ಮಗಳಾದ ಹಸಿವೆ, ನೀರಡಿಕೆ, ನಿದ್ದೆ ಬೇನೆ, ಬೇಸರಿಕೆ, ವಿಶ್ರಾಂತಿ ಇವು ಯಾವವೂ ಇರಲಿಲ್ಲ. ಪ್ರಪಂಚದ ಯಾವ ವ್ಯವಹಾರವೂ ಇರಲಿಲ್ಲ. ಸದಾ ಆತ್ಮ ತೃಪ್ತಿಯಲ್ಲಿದ್ದ ಅವರಿಗೆ ಏನೂ ಬೇಕಾಗಿರಲಿಲ್ಲ. ಯಾವಾಗಲೂ ಅಂತರ್ಮುಖಿಗಳಾಗಿದ್ದರು.


ಒಬ್ಬ ತಾಯಿ ತನ್ನ ಗರ್ಭದಿಂದ ಜನಿಸಿದ ಮಗುವನ್ನು ಸಾಕಿದಂತೆ, ಸಾಧುಗಳು ಅವರ ಶರೀರ ರಕ್ಷಣೆಯ ಸೇವೆಯಲ್ಲಿ ತೊಡಗಿದ್ದರು. ಸ್ನಾನ, ಊಟ, ನಿದ್ರೆ ಮೊದಲಾದವುಗಳನ್ನು  ಸಮಯಕ್ಕೆ ಸರಿಯಾಗಿ ಸಾಧುಗಳೇ ಮಾಡಿಸುತ್ತಿದ್ದರು. ಭಕ್ತರು ಎಬ್ಬಿಸಿದಾಗ ಎದ್ದು, ಅವರು ಮಲಗಿಸಿದಾಗ ಮಲಗುತ್ತಿದ್ದರು. ಊಟಕ್ಕೆ ತಾಟು ತೆಗೆದುಕೊಂಡು ಅವರಾಗಿ ತುತ್ತು ಮಾಡಿ ಉಣಿಸಿದರೆ ಅಲ್ಪಸ್ವಲ್ಪ ಉಣ್ಣುತ್ತಿದ್ದರು. ಹೆಚ್ಚಾದ ಅನ್ನದ ತುತ್ತನ್ನು ಪುರ್ ಎಂದು ಉಗುಳುತ್ತಿದ್ದರು, ಬೇಕು ಬೇಡಗಳ ಮಾತೇ ಇರಲಿಲ್ಲ. ರಾತ್ರಿ ಮಲಗುವಾಗ ಅವರಿಗೆ ಚೇಳುಗಳು, ಹುಳುಗಳು ಕಚ್ಚಿದಾಗ ಅವರ ದೇಹಕ್ಕಾದ ನೋವುಗಳ ಪರಿವೆಯೇ ಇರಲಿಲ್ಲ ಕೈಲಾಸ ಮಂಟಪದಲ್ಲಿ ಪೂಜೆ ನಡೆಯುವಾಗ ಜೇನುಹುಳುಗಳ ಹಿಂಡೇ ಅವರ ಮುಖಕ್ಕೆ ಮುತ್ತಿಕಚ್ಚುವಾಗ ಅದರ ದುಃಖವೇ ಇರಲಿಲ್ಲ, ಶ್ರೀಗುರುನಾಥರಿಗೆ ಹಲ್ಲು ಉಜ್ಜುವುದರಿಂದ ಹಿಡಿದು ಎಲ್ಲ ಕಾರ್ಯವನ್ನು ಸಾಧುಗಳೇ ಮಾಡುತ್ತಿದ್ದರು.


ಒಂದು ಸಲ ಮೂತ್ರ ವಿಸರ್ಜನೆಗೆ ಹದಿನೈದು ದಿವಸ ತೊಂದರೆಯಾದಾಗ ಹುಬ್ಬಳ್ಳಿಯ ಡಾಕ್ಟರ ಜೋಷಿಯವರು ಇವರ ಮೂತ್ರದ್ವಾರಕ್ಕೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾಗ ನೋವು ತಾಳದೆ ಒದ್ದಾಡುವುದಾಗಲಿ ಅಥವಾ ಕೂಗಾಡುವುದಾಗಲಿ ಮಾಡದೆ, ಇವರು ನಗುತ್ತಿರುವುದನ್ನು ಕಂಡು ಡಾಕ್ಟರರಿಗೆ ಸೋಜಿಗವಾಯಿತು. ಇವರು ಎಲ್ಲ ಮಾನವರಂತೆ ಇರಲಿಲ್ಲ, ನರರೂಪದಲ್ಲಿ ಹರನೇ ಗುರುನಾಥನಾಗ ಭುವಿಗೆ ಅವತರಿಸಿದ್ದಾರೆ ಎಂದು ಉದ್ದಾರ ತೆಗೆದರು.


ಭಕ್ತರು ಕಾಲು ನಡಿಗೆಯಿಂದ ಕರಕೊಂಡು ಹೋಗುವಾಗಲೂ ಮತ್ತು ಭಕ್ತಾದಿಗಳು ವೈಭವದಿಂದ ಪೂಜಿಸುವಾಗಲೂ, ಆನಂದದಿಂದ ಇರುತ್ತಿದ್ದರು. ಇವರು ಪರಬ್ರಹ್ಮ ಲಕ್ಷಣಗಳಲ್ಲಿ ಒಂದಾದ ಆನಂದ ಸ್ವರೂಪರೇ ಆಗಿದ್ದರು. ಒಂದು ದಿನ ಸಾಧುಗಳು ಸಾಯಂಕಾಲ ಎಂದಿನಂತೆ ಬಯಲ ವಿಹಾರಕ್ಕಾಗಿ ಗುರುನಾಥರನ್ನು ಕರೆದುಕೊಂಡು ಹೋಗುವವರಿದ್ದರು. ಆ ಸಮಯದಲ್ಲಿ ನಾಲ್ಕು ಜನ ಮುಸಲ್ಮಾನ ಯುವಕರು ಹೂಮಾಲೆ ಗಂಧದೆಣ್ಣೆ ತೆಗೆದುಕೊಂಡು ಅವರಲ್ಲಿಗೆ ಬಂದು, ಮಾಲೆ ತೊಡಿಸಿ ಅವರ ವಸ್ತ್ರಕ್ಕೆ ಗಂಧದೆಣ್ಣೆ ಸವರಿ ಭಕ್ತಿಯಿಂದ ಕೈಮುಗಿದರು. ಆಗ ಯುವಕರು ಅಲ್ಲಿಂದ ಹೋಗಲು ನೋಡಿದರು. ಆಗ ಯುವಕರು ಅಲ್ಲಿಂದ ಹೊಗಲು ತಲೆ ಅಲ್ಲಾಡಿಸಿ ಅಪ್ಪಣೆ ಕೇಳಿದರು. ಅನುಮತಿ ಕೊಟ್ಟರು. ಮುಟ್ಟಿ ಕೆಲರಂ, ನೋಡಿ ಕೆಲರಂ, ಮಾತನಾಡಿ ಕೆಲರಂ ಉದ್ಧರಿಸುವ ಸದ್ಗುರುವೆಂದ ಶ್ರೀನಿಜಗುಣರ ವಾಕ್ಯದಂತೆ ಶ್ರೀಗುರುನಾಥಾರೂಢರು ಕೇವಲ ಮುಟ್ಟಿ ನೋಡಿ ಉದ್ಧರಿಸುವ ಸದ್ಗುರುಗಳಾಗಿದ್ದರು.


ಮುಂದಿನ ಎರಡು 10,11 ಸ್ಕಂದದ ಲೀಲಾಕಥೆಗಳು ಶ್ರೀ ಗುರುನಾಥರ ಲೀಲೆಗಳ ಕಥೆಗಳು


👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಶ್ರೀ ಗುರುನಾಥಾರೂಢರ ಜನನ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ