ಭಕ್ತನ ಬಂಧನ ಬಿಡಿಸಿದ ಶ್ರೀ ಗುರುನಾಥ
ಶರಣಮ್ಮರೊಬ್ಬರಿಂದ ದೀಕ್ಷೆ ಪಡೆದ ಸುಳ್ಳ ಗ್ರಾಮದ ಫಕೀರಪ್ಪನೆಂಬವನನ್ನು ಕರೆದುಕೊಂಡು ಆ ಶರಣಮ್ಮನು, ಶ್ರೀ ಸಿದ್ಧಾರೂಢರ ಹತ್ತಿರ ಹೋಗಿ ದೀಕ್ಷೆ ಕೊಟ್ಟ ಸಂಗತಿ ತಿಳಿಸಿದಳು. ಆಗ ಸಿದ್ಧಾರೂಢರು ಈತನು ಜ್ಞಾನಿಯಾಗುತ್ತಾನೆ ಎಂದು ಸಂತೋಷದಿಂದ ಹರಸಿದರು. ಆ ಫಕೀರಪ್ಪನು ಹಲವಾರು ವರುಷ ಸಿದ್ಧಾರೂಢರ ಮಠದಲ್ಲಿ ಸೇವೆ ಮಾಡುತ್ತಿದ್ದನು. ಮುಂದೆ ಗ್ರಹಸ್ಥಾಶ್ರಮ ಸ್ವೀಕರಿಸಿದ ನಂತರ ಫಕೀರಪ್ಪನು ತನ್ನ ಪತ್ನಿ ಸಮೇತ ತನ್ನ ಊರ ಮನೆಯಲ್ಲಿ ಶಾಸ್ತ್ರ ನಡೆಸುತ್ತಾ ಇರುವಾಗ, ಆತನ ಸಂಬಂಧಿಕರ ಕ್ಷುಲ್ಲಕ ಅಪರಾಧ ನೆಪದಿಂದ ಫಕೀರಪ್ಪನಿಗೆ ಊರ ಜನರು ಬಹಿಷ್ಕಾರ ಹಾಕಿದರು. ಊರಲ್ಲಿ ಏನೂ ವ್ಯವಹಾರ ಮಾಡುವಂತಿರಲಿಲ್ಲ.
ಕಿರಾಣಿ ಸಾಮಾನು ಬೇಕಾದರೆ ಸಮೀಪದ ಕುಸುಗಲ್ಲಿಗೆ ಬರಬೇಕಾಗಿತ್ತು, ಆವನಕೂಡ ಮಾತಾಡಿದವನಿಗೆ ದಂಡ ವಿಧಿಸಲಾಗುವಂಥ ಕ್ರೂರ ಬಹಿಷ್ಕಾರ ಹಾಕಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ದಂಪತಿಗಳು ಭಯಭೀತರಾಗಿದ್ದರು. ಶ್ರೀ ಸಿದ್ಧಾರೂಢರ ಮಹಾ ಸಮಾಧಿಯ ನಂತರ, ಆ ಊರಿನ ಗಣ್ಯ ವ್ಯಕ್ತಿಗಳೊರ್ವರು ಪಾದಪೂಜೆಗಾಗಿ ಶ್ರೀ ಗುರುನಾಥರನ್ನು ಊರಿಗೆ ಆಮಂತ್ರಿಸಿ, ಊರಲ್ಲಿ ಮೆರವಣಿಗೆ ಸಾಗಿಸುವಾಗ, ಆ ಮೆರವಣಿಗೆಯು ಫಕ್ಕೀರಪ್ಪನ ಮನೆಯ ಮುಂದೆ ಸಾಗಿರುವಾಗ, ಬಹಿಷ್ಕಾರ ಕಾರಣದಿಂದ ಮನದಲ್ಲಿ ಕೊರಗುತ್ತಿರುವ ಭಾವನೆಗಳು ಶ್ರೀಗುರುನಾಥರಿಗೆ ಗೊತ್ತಾಗಿ, ತಕ್ಷಣ ಮೆರವಣಿಗೆಯನ್ನು ಬಿಟ್ಟು ನೇರವಾಗಿ ಫಕೀರಪ್ಪನ ಮನೆಗೆ ಬಂದು, ಒಂದು ಹಳೆಯ ಕೌದಿಯ ಮೇಲೆ ಆಸೀನರಾಗಿ, ಶಾಂತಚಿತ್ತದಿಂದ ಕುಳಿತುಕೊಂಡರು.
ಹೀಗಾಗಿ ಊರ ಜನರಿಗೆ ಧರ್ಮಸಂಕಟ ಬಂದು, ಗುರುನಾಥರನ್ನು ಫಕೀರಪ್ಪನ ಮನೆಯೊಳಗೆ ಕರೆದವರಾರು ಎಂದು ಗುರುಗಳ ಬಳಿಯಿದ್ದ ಸೇವಕರನ್ನು ಕೇಳಿದಾಗ, ಅವರು ಹೇಳಿದರು. ಗುರುಗಳನ್ನು ಮನೆಯವರು ಕರೆದಿಲ್ಲ. ತಾವಾಗಿಯೇ ಬಂದು ಕುಳಿತಿದ್ದಾರೆ ಎಂದು ತಿಳಿಸಿದರು. ಆಗ ಗುರುನಾಥರು ಗಂಭೀರವಾಗಿ ತಾಸುಗಟ್ಟಲೆ ಅದೇ ಕೌದಿ ಆಸನದಲ್ಲಿ ಕುಳಿತಾಗ, ಅವರನ್ನು ಎಬ್ಬಿಸುವ ಧೈರ್ಯ ಯಾರಿಗೂ ಬರಲಿಲ್ಲ. ಆಗ ಭಯಗ್ರಸ್ತರಾದ ದಂಪತಿಗಳು ಗುರುಗಳಿಗೆ ನಮಿಸಿ ಸುಮ್ಮನೇ ನಿಂತಿದ್ದರು. ಊರ ಜನರು ಕೇಳುತ್ತಾ, ನಾವು ಬಹಿಷ್ಕಾರ ಹಾಕಿದವರ ಮನೆಯಲ್ಲಿ ಹೋಗಿ ಗುರುಗಳಿಗೆ ನಮಸ್ಕರಿಸುವ ಯೋಗವಿಲ್ಲವೆ ಎಂದು ಕೂಗಾಡತೊಡಗಿದರು.
ಆಗ ಊರ ಹಿರಿಯರಿಗೆ ಆ ಶರಣ ಫಕೀರಪ್ಪನ ಯೋಗ್ಯತೆಯ ಅರಿವಾಗಿ ತಪ್ಪಾಯಿತೆಂದು ಬಹಿಷ್ಕಾರ ಹಿಂತೆಗೆದುಕೊಂಡು, ಮನೆಯೊಳಗೆ ಹೋಗಿ ಶ್ರೀಗಳಿಗೆ ನಮಸ್ಕರಿಸಿದರು. ಆಗ ಫಕೀರಪ್ಪನು ಆನಂದದಿಂದ ತನ್ನ ಯೋಗ್ಯತೆಗನುಸಾರ ಶ್ರೀಗಳ ಪಾದ ಪೂಜಿಸಿ ನಮಸ್ಕರಿಸಿದ ತಕ್ಷಣ, ಗುರುನಾಥನು ಎದ್ದವರೇ ಮೆರವಣಿಗೆಯಲ್ಲಿ ಹೊರಟರು. ನಂತರ ಮೆರವಣಿಗೆ ಮುಗಿದು ಪಾದ ಪೂಜೆಯಾದ ಮೇಲೆ, ಗ್ರಾಮದ ಭಕ್ತರು ಶ್ರೀಗಳನ್ನು ಅವರ ಮಠಕ್ಕೆ ಕಳಿಸಿದರು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
