ಸುಡುವ ಗಂಜಿಯಲ್ಲಿ ಬಿದ್ದ ಹುಡುಗನ ರಕ್ಷಣೆ

 🌺 ಸುಡುವ ಗಂಜಿಯಲ್ಲಿ ಬಿದ್ದ ಹುಡುಗನ ರಕ್ಷಣೆ 🌺


ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಕೃಷ್ಣಾಗೌಡ ಪಾಟೀಲ ಅವರ ಧರ್ಮಪತ್ನಿ ಲಕ್ಷ್ಮೀಬಾಯಿ ದಂಪತಿಗಳು ಶ್ರೀ ಸಿದ್ಧಾರೂಢರ ಪರಮ ಭಕ್ತರು. ಮನೆಯಲ್ಲಿ ಸಿದ್ದ ಮೂರ್ತಿಯನ್ನಿಟ್ಟು ಭಜನೆ ಪೂಜೆಗಳನ್ನು ಮಾಡುತ್ತಿದ್ದರು. ಶ್ರಾವಣ ಮತ್ತು ಶಿವರಾತ್ರಿಗಳಲ್ಲಿ ಪ್ರತಿವರ್ಷ ಮಠಕ್ಕೆ ಬಂದು ಸೇವೆ ಮಾಡುವುದಲ್ಲದೆ ಅನ್ನ ಸಂತರ್ಪಣೆಯನ್ನೂ ಮಾಡುತ್ತಿದ್ದರು. ಶಿವರಾತ್ರಿಯಲ್ಲಿ ಸಚ್ಚಿದಾನಂದರ ಪುರಾಣ ಕೇಳಿ ಸಂತೋಷಪಟ್ಟ ಇವರು ಸಿದ್ದರ ಕಡೆಗೆ ಹೋಗಿ, ಗುರುವೇ, ನಮ್ಮ ತಿರ್ಲಾಪುರದಲ್ಲಿ ಸಚ್ಚಿದಾನಂದರ ಪುರಾಣ ಪ್ರಾರಂಭಿಸಿ, ಅವರಿಂದ ಭಕ್ತಿಜ್ಞಾನ ವೈರಾಗ್ಯಯುಕ್ತ ಪುರಾಣ ಕೇಳಿ ಧನ್ಯರಾಗಬೇಕೆಂದಿದ್ದೇವೆ. ಅವರನ್ನು ಕಳಿಸಿಕೊಡಿ' ಎಂದರು. ಗುರುಗಳು ಸಚ್ಚಿದಾನಂದರಿಗೆ ಶೀರ್ಲಾಪುರಕ್ಕೆ ಹೋಗಲು ಹೇಳಿದರು. ಸಚ್ಚಿದಾನಂದರು ಗುರುಗಳ ಆದೇಶದಂತೆ ತಮ್ಮ ಹೆಂಡತಿ ತುಂಗಾಬಾಯಿ, ಮಗಳು ಗುಂಡಕ್ಕನನ್ನು ಕರೆದುಕೊಂಡು ಹೋಗಿ ಪುರಾಣ ಪ್ರಾರಂಭಿಸಿದರು.
ಸಚ್ಚಿದಾನಂದರ (ತಮ್ಮಣ್ಣ ಶಾಸ್ತ್ರಿ) ಸುಂದರ ಶೈಲಿಯ ಬೋಧನ ಕೇಳುವಾಗ ಮುಂದೆ ಏನು ಹೇಳುತ್ತಾರೋ ಎಂದು ಜನರು ಕುತೂಹಲದಿಂದ ಕೇಳುತ್ತಿದ್ದರು. ಹೀಗೆ ಹದಿನೈದು ದಿವಸ ಕಳೆದವು. ಪಾಟೀಲರ ಪತ್ನಿ ಲಕ್ಷ್ಮೀಬಾಯಿಯೂ ನಿತ್ಯ  ಪುರಾಣ ಶ್ರವಣ ಮಾಡುತ್ತಿದ್ದಳು. ಒಂದು ದಿನ ಅವಳ ಸ್ವಪ್ನದಲ್ಲಿ ಸಚ್ಚಿದಾನಂದರು ಮತ್ತು ಶ್ರೀ ಸಿದ್ಧಾರೂಢರು ಒಂದೇ ಸಿಂಹಾಸನದಲ್ಲಿ ಕುಳಿತಿದ್ದರು. ಸಿದ್ಧರು ತಮ್ಮ ತಲೆಗೆ ಕೆಂಪು ವಸ್ತ್ರ ಕಟ್ಟಿ ಮೈಮೇಲೆ ಶುಭ್ರ ವಸ್ತ್ರ ಧರಿಸಿ ಹಣೆಗೆ ಭಸ್ಮ ಧರಿಸಿದ್ದರು. ಸಚ್ಚಿದಾನಂದರು ಕಪನಿ ಅಂಗಿ ಧರಿಸಿ ತಲೆಗೆ ಟೊಪ್ಪಿಗೆ ಹಾಕಿಕೊಂಡು ಪುರಾಣ ಹೇಳುತ್ತಿದ್ದರು. ಆಗ ಲಕ್ಷ್ಮೀಬಾಯಿಯು ಇಬ್ಬರಿಗೂ ಸಾಷ್ಟಾಂಗ ನಮಿಸಿ ಪೂಜಿಸಿ ಕೈ ಜೋಡಿಸಿ ನಿಂತು `ಉಭಯ ಗುರುಗಳೇ, ನೀವು ಇಲ್ಲಿಗೆ ಬಂದ ಕಾರಣವೇನು?' ಎಂದು ಕೇಳಿದಾಗ ಅವರು `ಮುಂಜಾನೆ ಇಲ್ಲಿ ಒಂದು ಕೆಲಸವಿದೆ ಅದಕ್ಕೆ ಬಂದೆವು' ಎಂದರು.
ಆಗ ಅವಳಿಗೆ ಎಚ್ಚರ ಬಂದು ಆಶ್ಚರ್ಯಗೊಂಡು ಇವತ್ತು ಇಲ್ಲಿ ಏನಾದರೂ ಅನುಭವ ಬರಬಹುದೆಂದು ಸಚ್ಚಿದಾನಂದರ ಕಡೆಗೆ ಹೋಗಿ ಸ್ವಪ್ನದ ವಿಚಾರ ತಿಳಿಸಿ ಇದರ ಅರ್ಥವೇನು?' ಎಂದು ಪ್ರಶ್ನೆ ಮಾಡಿದಳು. ಆಗ ಸಚ್ಚಿದಾನಂದರು ನಗುತ್ತ ಹೇಳಿದರು `ಗುರುಗಳ ಲೀಲೆ ಯಾರಿಗೂ ತಿಳಿಯುವುದಿಲ್ಲ. ಅದರ ಅನುಭವ ಬರುವುದು ನಿಶ್ಚಿತ' ಎಂದರು. ಕೃಷ್ಣಗೌಡರಿಗೆ ಬಹಳ ಹೊಲಗಳಿದ್ದು, ಸುಮಾರು ಇಪ್ಪತ್ತು ಆಕಳು ಮತ್ತು ಎತ್ತುಗಳಿದ್ದವು. ಅವುಗಳಿಗೆ ತಿನ್ನಲಿಕ್ಕೆ ಮನೆಯೊಳಗೆ ಹಿಂದಿನ ಭಾಗದಲ್ಲಿ ಗಂಜಿ ಕಾಯಿಸಲಿಕ್ಕೆ ಇಟ್ಟಿದ್ದರು. ಅಲ್ಲಿಂದ ಮೇವು ತರಲು ಅವರ ಚಾಕರ ಬಾಲಕನು ಮೇವು ತೆಗೆಯುವ ಸಮಯದಲ್ಲಿ ಮೇವು ಗಂಜಿಭಾಂಡಿಗೆ ಬಡಿದು ಗಂಜಿ ಆ ಬಾಲಕನ ಮೇಲೆ ಬಿದ್ದಿತು. ಅದನ್ನು ನೋಡಿದ ಜನರು ಅವನು ಸತ್ತನೆಂದು ಕೂಗಾಡತೊಡಗಿದರು.
ಈ ಸುದ್ದಿ ಊರಲ್ಲಿ ಮುಟ್ಟಿ ಅವನ ತಂದೆ ತಾಯಿಗಳು ಬಂದು ನಮ್ಮ ಮಗನು ಸತ್ತನೆ  ಎಂದು ಹೊಟ್ಟೆ ಬಡೆದುಕೊಂಡು ಅಳಹತ್ತಿದರು. ಅಷ್ಟರಲ್ಲಿ ಲಕ್ಷ್ಮೀಬಾಯಿಯು ಬಂದು `ಸಿದ್ಧಾರೂಢಾ, ಏನೋ ಅನಾಹುತವಾಯಿತು. ಈಗ ನೀನೇ ರಕ್ಷಿಸಬೇಕು. ಇಲ್ಲವಾದರೆ ನಮ್ಮ ಮೇಲೆ ಅಪವಾದ ಬರುತ್ತದೆ' ಎಂದು ಪ್ರಾರ್ಥಿಸಿದಳು. ಅಷ್ಟರಲ್ಲಿ ಜನರು ಮೇವಿನ ಪಂಡಿಗಳನ್ನು ತೆಗೆಯಹತ್ತಿದರು. ಒಳಗಿನಿಂದ ಈ ಕಡೆಯ ಪಂಡಿಗಳನ್ನು ತೆಗೆಯಿರಿ' ಎಂಬ ಶಬ್ದ ಬಂದಿತು. ಜನರು ಆ ಕಡೆಯ ಪಂಡಿಗಳನ್ನು ತೆಗೆದಾಗ ಅಲ್ಲಿಂದ ಬಾಲಕನು ಓಡಿ ಬಂದನು,
ಆಮೇಲೆ ಬಾಲಕನಿಗೆ ಕೇಳಿದರು `ನಿನಗೆ ಯಾವ ಧಕ್ಕೆಯಾಗದಂತೆ ಹೇಗೆ ಹೊರಗೆ ಬಂದೆ?' ಎಂದಾಗ ಬಾಲಕ ಹೇಳಿದ ಇಬ್ಬರು ದಿವ್ಯ ಪುರುಷರು ಬಂದು ನನ್ನನ್ನು ಆ ಮೇವಿನ ಪೆಂಡಿಯ ಮಧ್ಯದಲ್ಲಿ ಮುಚ್ಚಿ ಕಾಪಾಡಿದರು' ಎಂದನು. ಇದನ್ನು ನೋಡಿ ಎಲ್ಲರಿಗೂ ಮತ್ತು ಅವರ ತಂದೆ ತಾಯಿಗಳಿಗೂ ಆನಂದವಾಯಿತು. ಕೃಷ್ಣರಾವ ಮತ್ತು ಅವರ ಪತ್ನಿ ಆ ಹುಡುಗನನ್ನು ಕರೆದುಕೊಂಡು ಹೋಗಿ ಸಚ್ಚಿದಾನಂದರ ಪಾದಕ್ಕೆ ಹಾಕಿ ಹೇಳಿದರು `ಗುರುಗಳೆ, ಸಿದ್ಧರ ಮತ್ತು ನಿಮ್ಮ ಕೃಪೆಯಿಂದ ಈ ಮಗು ಉಳಿಯಿತು' ಎಂದಾಗ ಸಚ್ಚಿದಾನಂದರು ನಗುತ್ತ 'ಲಕ್ಷ್ಮೀಬಾಯಿ, ನಿನ್ನೆ ಸ್ವಪ್ನದಲ್ಲಿ ಸಿದ್ಧರು ಹೇಳಿದ ಮಾತನ್ನು ಸ್ಮರಿಸಿಕೋ, ಇಲ್ಲಿ ಕೆಲಸವಿದೆಯೆಂದಿದ್ದರು. ಆ ಕೆಲಸ ಯಾವುದೂ ಅಲ್ಲ. ಇದೇ ಕೆಲಸವಾಗಿತ್ತು' ಎಂದಾಗ ಎಲ್ಲರೂ ಸಿದ್ಧರ ಜಯಜಯಕಾರ ಮಾಡಿದರು.
ಆಮೇಲೆ ಎಂಟು ದಿವಸ ಪುರಾಣ ನಡೆದು ಕೊನೆಯ ದಿವಸ ಕೃಷ್ಣಗೌಡರು, ಸಚ್ಚಿದಾನಂದರನ್ನು ಪೂಜಿಸಿ ವಸ್ತ್ರ ಮತ್ತು ಕಾಣಿಕೆ ಸಲ್ಲಿಸಿ ಹೇಳಿದರು 'ಸದ್ಗುರುಗಳು ನಿಮ್ಮನ್ನು ಇಲ್ಲಿಗೆ ಕಳಿಸಿ. ಮಹದುಪಕಾರ ಮಾಡಿದ್ದಾರೆ. ನೀವು ಪ್ರತಿವರ್ಷ ಬರಬೇಕೆಂದು ಬೇಡಿಕೊಳ್ಳುತ್ತೇನೆ' ಎಂದಾಗ ಸಚ್ಚಿದಾನಂದರು ಗೌಡರನ್ನು ಕುರಿತು `ಗೌಡರೇ, ನೀವು ನಮ್ಮ ಜೊತೆಗೆ ಹುಬ್ಬಳ್ಳಿಗೆ ಬರಬೇಕು' ಎಂದಾಗ ಅವರ ಮಾತಿನಂತೆ ಎಲ್ಲರೂ ಸಿದ್ಧಾಶ್ರಮಕ್ಕೆ ಬಂದು ಸಿದ್ಧರಿಗೆ ನಮಿಸಿ ನಡೆದ ಘಟನೆಯನ್ನು ತಿಳಿಸಿದಾಗ ಸಿದ್ಧರು ಅವರನ್ನು ಕುರಿತು ನಿಮ್ಮ ಶುದ್ಧಭಾವ ನೋಡಿ ಸದ್ಗುರುವು ಅಲ್ಲಿಗೆ ಹೋಗಿ ಕಾಪಾಡಿದನು' ಎಂದಾಗ ಎಲ್ಲರೂ ಜಯಜಯಕಾರ ಮಾಡಿದರು.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಮರಣಗಾಲದಲ್ಲಿ ತುಳಜಪ್ಪನಿಗೆ ಮುಕ್ತಿ ನೀಡಿದ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ