ಮುಂಬೈಯ ಸತ್ಯಭಾಮಾಬಾಯಿ ಮುಕ್ತಳಾದಳು
🌺 ಮುಂಬೈಯ ಸತ್ಯಭಾಮಾಬಾಯಿ ಮುಕ್ತಳಾದಳು 🌺
ಶ್ರೀಮತಿ ಸತ್ಯಭಾಮಾಬಾಯಿಯವರು ಮುಂಬೈ ಠಾಣೆ ಜಿಲ್ಲೆಯ ಮರಬಾಡ ತಾಲೂಕಿನ ಮಜಗಾಂವ ಎಂಬ ಹಳ್ಳಿಯಲ್ಲಿ ಪಷ್ಟೆ ಮನೆತನದಲ್ಲಿ ಜನಿಸಿದರು. ಮನೆತನದವರು ಧಾರ್ಮಿಕ ಸ್ವಭಾವದವರಾಗಿದ್ದು ಮಗುವಿನ ಮೇಲೆ ಧಾರ್ಮಿಕ ಸದ್ವರ್ತನೆಯ ಸಹವಾಸ ಲಭಿಸಿತ್ತು. ದೊಡ್ಡವಳಾದ ನಂತರ ೧೯೧೪ನೆಯ ಇಸ್ವಿಯಲ್ಲಿ ಮುಂಬೈಯ ಶ್ರೀಮಂತ ಶೇಠ' ಪಾಂಡುರಂಗ ಚಾವಜಿ ಚೌಧರಿಯವರೊಡನೆ ಲಗ್ನವಾಯಿತು. ಆ ಕಾಲದಲ್ಲಿ ಜಾವಜಿಯವರ ಮನೆಯಲ್ಲಿ ಧಾರ್ಮಿಕ ನಿಷ್ಟೆ ಸತ್ಯಪ್ರೇಮ ಔದಾರ್ಯ, ಕಾರ್ಯ ಕುಶಲತೆ, ಪವಿತ್ರ ಆಚರಣೆ ಈ ಎಲ್ಲ ಗುಣಗಳು ನೆಲೆಗೊಂಡಿದ್ದವು. ಸತ್ಯಭಾಮಾಬಾಯಿಯವರು ಪತಿಯ ಮನೆಯಲ್ಲಿ ಪ್ರವೇಶಿಸಿದಾಗ ಅವರಲ್ಲಿ ಮನೆತನದ ಎಲ್ಲ ಸದ್ಗುಣಗಳು ಮೈಗೂಡಿದವು. ಮುಂದೆ ಧಾರ್ಮಿಕ ಸ್ವಭಾವದವರಾದ ಅವರು ಭಾರತದ ಸುಮಾರು ಎಲ್ಲ ತೀರ್ಥಕ್ಷೇತ್ರಗಳ ಯಾತ್ರೆ ಮಾಡಿ ಬಂದರು. ಹತ್ತೊಂಭತ್ತುನೂರಾ ಇಪ್ಪತ್ತೇಳನೆಯ ಇಸ್ವಿಯಲ್ಲಿ ಶ್ರೀ ಸಿದ್ಧಾರೂಢರ ಕೀರ್ತಿಯನ್ನು ಕೇಳಿ ಸ್ವಾಮಿಗಳ ದರ್ಶನಕ್ಕಾಗಿ ಬಂದು ಅವರಿಗೆ ಶರಣಾಗತಳಾಗಿ ಸದ್ಗುರುಗಳ ಶಿಷ್ಯಳಾದಳು.
ಮೇಲಿಂದ ಮೇಲೆ ಸ್ವಾಮಿಗಳ ದರ್ಶನಕ್ಕಾಗಿ ಬಂದು ಅವರ ದರ್ಶನ ಪಡೆದು ಹೋಗುತ್ತಿದ್ದಳು. ರೂಢಿಯಂತೆ ಒಂದು ಸಲ ಬಂದಾಗ ಸ್ವತಃ ಶ್ರೀ ಸಿದ್ಧಾರೂಢರು ಅವಳನ್ನು ಕರೆದು ತನ್ನ ಭಾವಚಿತ್ರವನ್ನು ಅವಳ ಕೈಯಲ್ಲಿ ಕೊಟ್ಟು ಸತ್ಯಭಾಮಾ, ಈ ಭಾವಚಿತ್ರವನ್ನು ತೆಗೆದುಕೊಂಡು ಹೋಗಿ ನಿನ್ನ ಮನೆಯಲ್ಲಿಟ್ಟು ಪೂಜಿಸು' ಎಂದುಆಶೀರ್ವದಿಸಿ ಕಳಿಸಿದರು. ಸಿದ್ದರ ಆದೇಶದಂತ ಆ ಭಾವಚಿತ್ರವನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಸ್ಥಾಪಿಸಿ ನಿತ್ಯ ಪೂಜೆ, ಸಿದ್ಧರ ಚರಿತ್ರ ಗ್ರಂಥವಾಚನ ಮುಂತಾದ ಪುಣ್ಯ ಕಾರ್ಯ ಮಾಡುತ್ತ ಪಾರಮಾರ್ಥಿಕ ಜೀವನ ಸಾಗಿಸಹತ್ತಿದಳು. ಮುಂದೆ ಬೆಂಗಳೂರಿನ ಆವೂಬಾಯಿಯವರ ಸಲಹೆಯಂತೆ ಸತ್ಯಭಾಮಾಬಾಯಿಯವರು ತಮ್ಮ ದೊಡ್ಡ ಮನೆಯಲ್ಲಿ ತ್ರಿಪುರ ಪೌರ್ಣಿಮೆಯ ದಿವಸ ಶ್ರೀ ಸಿದ್ಧಾರೂಢರ ಸಪ್ತಾಹ ಉತ್ಸವವನ್ನು ಹತ್ತೊಂಭತ್ತುನೂರಾ ನಾಲ್ವತ್ತಾರರಲ್ಲಿ ಪ್ರಾರಂಭಿಸಿದರು.
ಮೊದಮೊದಲು ಅವರ ಮನೆಯಲ್ಲಿಯೇ ಉತ್ಸವ ನಡೆಯುತ್ತಿದ್ದು, ಬರಬರುತ್ತ ಭಕ್ತರ ಸಂಖ್ಯೆ ಹೆಚ್ಚಾಗತೊಡಗಿದ್ದರಿಂದ ಅವರ ಮನೆ ಚಿಕ್ಕದಾಗತೊಡಗಿತು, ಆಗ ಭಾಗೀರಥಿಬಾಯಿಯವರ ಕಂಪೌಂಡಿನಲ್ಲಿ ದೊಡ್ಡ ಮಂಟಪ ರಚಿಸಿ ಅದರಲ್ಲಿ ವಾರ್ಷಿಕೋತ್ಸವ ಸಪ್ತಾಹ ನಡೆಸಹತ್ತಿದರು. ಸಪ್ತಾಹದ ಕಾರ್ಯಭಾರ ಮತ್ತು ಅದರ ನಿಯಮಗಳನ್ನು ಬೆಂಗಳೂರು ಆಶ್ರಮದ ಆವೂಬಾಯಿ ಮತ್ತು ಶ್ರೀ ಶಿವಾನಂದರು ಹಾಕಿಕೊಟ್ಟ ಸಂಪ್ರದಾಯದಂತೆ ವಿಜೃಂಭಣೆಯಿಂದ ನಡೆಯಹತ್ತಿತು. ಅನೇಕ ಕಡೆಯಿಂದ ಭಕ್ತರು ಬರುತ್ತಿರುವುದರಿಂದ ಆ ಉತ್ಸವಕ್ಕೆ ಒಂದು ಶೋಭೆ ಬಂದಿತು. ಹತ್ತೊಂಭತ್ತುನೂರಾ ನಲವತ್ತನಯ ಇಸ್ವಿಯಲ್ಲಿ ಅವರ ಪತಿ ಪಾಂಡುರಂಗ ಶೇರಜಿಯವರು ದೈವಾಧೀನರಾದುದರಿಂದ ಅವರು ಸ್ಥಾಪಿಸಿದ ಕೇವಲ ಧಾರ್ಮಿಕ ಗ್ರಂಥಗಳನ್ನು ಮುದ್ರಿಸಿ ಪ್ರಕಟಿಸುವ ನಿರ್ಣಯ ಸಾಗರ ಪ್ರಿಂಟಿಂಗ್ ಪ್ರೆಸ್ ಮತ್ತು ಟೈಪ ಪೌಂಡ್ರಿ ಸಂಸ್ಥೆಗಳನ್ನು ನಡೆಸುವ ಕಾರ್ಯಭಾರ ಅವರ ಮೇಲೆ ಬಿದ್ದುದರಿಂದ ಅದನ್ನು ಧೈರ್ಯವಾಗಿ ನಡೆಸಿದರು. ಉದಾರ ಬುದ್ದಿಯವರಾದ ಇವರು ಅನೇಕ ಸಂಘ ಸಂಸ್ಥೆಗಳಿಗೆ ಶಿಕ್ಷಣ ಮತ್ತು ಹೆರಿಗೆ ಆಸ್ಪತ್ರೆಗೆ ಧರ್ಮಶಾಲೆಗಳಿಗೆ ಹಣವನ್ನು ದಾನವಾಗಿ ಕೊಟ್ಟರು.
ಹತ್ತೊಂಬತ್ತುನೂರಾ ಐವತ್ತೊಂದನೆಯ ಇಸ್ವಿಯಲ್ಲಿ ಒಂದು ಅಘಟಿತ ಘಟನೆ ನಡೆಯಿತು. ಅದೆಂದರೆ ವಾರ್ಷಿಕೋತ್ಸವ ಸಪ್ತಾಹದ ಪಂಚಮಿಯ ದಿವಸ ಎಲ್ಲ ಕಾರ್ಯಕ್ರಮಗಳು ಯಥಾವತ್ ನಡೆದವು. ನಿಯಮದ ಪ್ರಕಾರ ಆ ದಿನದ ರಾತ್ರಿ ಭಜನ ಮುಂತಾದ ಕಾರ್ಯಕ್ರಮಗಳು ಮುಗಿದು ಭಕ್ತರು ತಮ್ಮ ತಮ್ಮ ಮನೆಗಳಿಗೆ ಹೋಗುವ ಸಮಯದಲ್ಲಿ ಸತ್ಯಭಾಮಾ ಬಾಯಿಯವರ ಶರೀರದಲ್ಲಿ ಅಸ್ತವ್ಯಸ್ತವನಿಸತೊಡಗಿತು. ಅದನ್ನು ಯಾರಿಗೂ ತೋರಗೊಡಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಕೀರ್ತನೆ ಪ್ರಾರಂಭವಾಗುವ ಪೂರ್ವದಲ್ಲಿ ಅವರು ಭಕ್ತ ಮಂಡಳಿಯನ್ನು ತಮ್ಮ ಮನೆಗೆ ಕರೆದು ಊಟ ಮಾಡಿಸಿ ಕೀರ್ತನೆಗೆ ಕಳಿಸಿದರು. ಕೀರ್ತನ ಮುಗಿದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು. ಸಮೀಪವಿರುವ ಭಕ್ತರು ಇನ್ನೂ ಅಲ್ಲಿಯೇ ಇರುವಾಗ ಸತ್ಯಭಾಮಾಬಾಯಿಯವರ ಪ್ರಕೃತಿ ಕೆಡತೊಡಗಿತು. ಆಗ ಮಂಟಪದಲ್ಲಿದ್ದ ಭಕ್ತರಿಗೆ ಈ ಸುದ್ದಿ ತಿಳಿದು ಅವರ ಯೋಗಕ್ಷೇಮ ವಿಚಾರಿಸಲು ಹೋದರು. ಆಗ ಬಾಯಿಯವರು ಎಲ್ಲರಿಗೂ ಸಮಾಧಾನ ಹೇಳಿ ಶ್ರೀ ಸಿದ್ಧಾರೂಢರ ನಾಮಸ್ಮರಣೆ ಮಾಡಲು ಹೇಳಿದರು. ಭಕ್ತರು ನಾಮಸ್ಮರಣ ಮಾಡಹತ್ತಿದರು. ಆಗ ರಾತ್ರಿ ಹನ್ನೊಂದೂವರೆ ಗಂಟೆಗೆ ಅವರ ಪುಣ್ಯಜ್ಯೋತಿ ಶ್ರೀ ಸಿದ್ಧಾರೂಢರ ಚರಣಗಳಲ್ಲಿ ವಿಲೀನಗೊಂಡಿತು. ಆಗ ಎಲ್ಲರೂ ದುಃಖತಪ್ತರಾದರು. ಮರುದಿವಸ ಮುಂಜಾನೆ ಐದು ಗಂಟೆಗೆ ಭಕ್ತರಿಗೆ ವಿಚಿತ್ರ ಅನುಭವ ಬಂದಿತು. ಆಗ ಮಂಟಪದಲ್ಲಿ ಗಂಭೀರ ವಾತಾವರಣ ಆವರಿಸಿತ್ತು. ಭಕ್ತರ ಒಂದು ಗುಂಪು ತಾಳಗಳನ್ನು ನುಡಿಸುತ್ತ ಭಜನೆ ಮಾಡುತ್ತ ಮಂಟಪದಲ್ಲಿ ಪ್ರವೇಶ ಮಾಡಿತು. ಅವರು ಭಜನೆ ಮಾಡುತ್ತಿರುವುದನ್ನು ಎಲ್ಲರೂ ಕೇಳುತ್ತಿದ್ದರಾದರೂ ಭಜನೆ ಮಾಡುವ ಭಕ್ತರು ಕಾಣಿಸುತ್ತಿರಲಿಲ್ಲ. ಅಲ್ಲಿ ಮತ್ತೇನು ತೋರುತ್ತಿತ್ತೆಂದರೆ ಕೇವಲ ಒಂದು ಪ್ರಕಾಶಮಾನವಾದ ಜ್ಯೋತಿ ಕಾಣಿಸುತ್ತಿತ್ತು. ಅದು ಎಲ್ಲರೂ ನೋಡುತ್ತಿರುವಂತೆಯೇ ಸರಿಸರಿದು ಮುಂದಕ್ಕೆ ಹೋಗಿ ಶ್ರೀ ಸಿದ್ಧಾರೂಢರ ಮೂರ್ತಿಯಲ್ಲಿ ಲೀನವಾಯಿತು, ಈ ಚಮತ್ಕಾರಕ ದೃಶ್ಯವನ್ನು ನೋಡಿದ ನೂರಾರು ಭಕ್ತರು ಧನ್ಯರಾದರು. ನಂತರ ಅವರ ಪಾರ್ಥಿವ ಶರೀರವನ್ನು ನೆರೆದ ಸಹಸ್ರಾರು ಭಕ್ತರು ಸೇರಿ ನಗರದಲ್ಲಿ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡಿದರು.
ಶ್ರೀ ಸಿದ್ಧಾರೂಢರ ಜೀವಿತ ಕಾಲದಲ್ಲಿ ಒಂದು ದಿನ ಸತ್ಯಭಾಮಾಬಾಯಿಯವರು ನೆಗೆಣ್ಣಿ ಲಕ್ಷ್ಮೀಬಾಯಿಯವರು ಶ್ರೀ ಸಿದ್ಧಾರೂಢರಲ್ಲಿಗೆ ಹೋಗಿ ದರುಶನ ತೆಗೆದುಕೊಂಡಾಗ ಅವಳ ಅಂತಕರಣ ಪರಿಶುದ್ದತೆಯನ್ನು ಪರಿಶೀಲಿಸಿ ಹೇಳಿದರು. ಲಕ್ಷ್ಮೀಬಾಯಿ ಈ ನನ್ನ ಚರಿತ್ರೆಯನ್ನು ತೆಗೆದುಕೊಂಡು ಹೋಗಿ ನಿನ್ನ ಮನೆಯಲ್ಲಿ ಪೂಜಿಸಿ ನಿತ್ಯ ಪಠಿಸುತ್ತಿರು. ನಿನಗೆ ಒಳ್ಳೆಯದಾಗುತ್ತದೆ ಎಂದು ಹರಸಿದರು. ಆಗ ಲಕ್ಷ್ಮೀಬಾಯಿಯು ಬಾಬಾಜಿ ನನಗೆ ಓದಲು ಬರೆಯಲು ಬರುವುದಿಲ್ಲ. ನಾನು ಹೇಗೆ ಮಾಡಲಿ ಎಂದಾಗ ಸಿದ್ದರು ಹೇಳಿದರು ಲಕ್ಷ್ಮಿ ಈ ಚರಿತ್ರೆಯನ್ನು ತೆಗೆದುಕೊಂಡು ಹೋಗಿ ಪೂಜಿಸಿ ನಿತ್ಯ ರಾತ್ರಿ ಮಲಗುವಾಗ ಚರಿತ್ರೆಯನ್ನು ತಲೆದಿಂಬಿಗೆ ಇಟ್ಟು ಮಲಗಿಕೊ. ಮರುದಿನ ಎದ್ದು ಪೂಜಿಸಿ ಓದಲು ಪ್ರಾರಂಭಿಸು. ಆಗ ಸದ್ಗುರುವಿನ ಮಹತ್ವ ನಿನಗೆ ತಿಳಿಯುತ್ತದೆ ಎಂದು ಆಶೀರ್ವದಿಸಿ ಕಳಿಸಿದರು. ಆಗ ಸಿದ್ಧರ ಆಜ್ಞೆಯನ್ನು ಶಿರಸಾವಹಿಸಿ ಚರಿತ್ರೆಯನ್ನು ತೆಗೆದುಕೊಂಡು ಮುಂಬಯಿಯ ತನ್ನ ಮನೆಗೆ ಹೋಗಿ ಸಿದ್ಧರು ಹೇಳಿದಂತೆ ಮಾಡಿದಾಗ ಅವಳಿಗೆ ಚರಿತ್ರೆ ಓದಲು ಬರಲಾರಂಭಿಸಿತು. ಕೆಲವೇ ದಿನಗಳಲ್ಲಿ ಅದು ಕಂಠಪಾಠವಾಯಿತು. ಕೇವಲ ಚರಿತ್ರ ಮಾತ್ರ ಓದಲು ಬರುತ್ತಿತ್ತೇ ಹೊರತು ಬೇರೆ ಪತ್ರಿಕೆ ಕಥೆ ಕಾದಂಬರಿ ಇತ್ಯಾದಿ ಏನೂ ಓದಲು ಬರುತ್ತಿರಲಿಲ್ಲ. ಇಂಥ ಲಕ್ಷ್ಮೀಬಾಯಿ, ನಾರಾಯಣ ಚೌದರಿಯವರು ಸತ್ಯಭಾಮಾ ಬಾಯಿಯವರ ನಂತರ ಸಪ್ತಾಹವನ್ನು ಸತತ ಸುಮಾರು ಮೂವತ್ತೈದು ವರ್ಷ ಅಖಂಡವಾಗಿ ನಡೆಸುತ್ತ ಬಂದರು. ಈ ಸಪ್ತಾಹದಿಂದ ಲಕ್ಷಾಂತರ ಜನರಿಗೆ ಸಿದ್ಧಾರೂಢರ ಭಕ್ತಿಯ ಮಾರ್ಗದರ್ಶನ ಮಾಡಿದಳು. ಇವರು ಕಾಲವಾದ ನಂತರ ಇವರ ವೃತವನ್ನು ಶ್ರೀಮತಿ ವನಮಾಲಾಬಾಯಿ ಜೌದರಿಯವರು ನಡೆಸುತ್ತ ಬಂದರು. ಮುಂದೆ ಹತೊಂಬತ್ತನೂರಾ ತೊಂಬತೈದರಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ಶ್ರದ್ಧಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಈ ಸಂಸ್ಥೆಯನ್ನು ಸ್ಥಾಪಿಸಿ ಅದರ ವತಿಯಿಂದ ಸಪ್ತಾಹವನ್ನು ನಡೆಸುತ್ತ ಬಂದರು. ಮುಂಬೈಯ ಗ್ರಾಂಟ್‌ರೋಡ ಚಿಲಕವಾಡಿ ಭಾಗೀರಥಿಬಾಯಿ ಕಂಪೌಂಡಿನಲ್ಲಿ ಉತ್ಸವವು ವಿಜೃಂಭಣೆಯಿಂದ ನಡೆಯುತ್ತಿರುವುದನ್ನು ಇಂದಿಗೂ ಅಲ್ಲಿ ನೋಡಬಹುದು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
