ಶ್ರೀ ಸಿದ್ಧಾರಾಢ ಕೃಪಾಪೋಷಿತ ಭಸ್ಮದ ಮಹಿಮೆ
🌺 ಶ್ರೀ ಸಿದ್ಧಾರಾಢ ಕೃಪಾಪೋಷಿತ ಭಸ್ಮದ ಮಹಿಮೆ 🌺
ಶ್ರೀ ಗುರು ಸಿದ್ಧಾರೂಢರಿದ್ದ ಕಾಲದಲ್ಲಿ ಮಠದ ಹಿಂದಿನ ಭಾಗದಲ್ಲಿ ಶ್ರೀಗಳು ವಾಯು ವಿಹಾರಕ್ಕಾಗಿ ತಮ್ಮ ಶಿಷ್ಯರೊಂದಿಗೆ ಹೋಗುತ್ತಿದ್ದು, ಆ ಜಾಗೆಯು ಇಂದು ಆರೂಢ ನಗರವಾಗಿದೆ. ಅಲ್ಲಿ ಶ್ರೀಗಳ ಅನನ್ಯ ಭಕ್ತರಾದ ಶ್ರೀ ವಿಠಲರಾವ ಏಕಬೋಟೆಯವರಿಗೆ ಶ್ರೀ ಗುರುಕೃಪೆಯಿಂದಲೇ ಒಂದು ಮನೆ ದೊರಕಿತು ಎಂದು ನಂಬಿದ ಅವರು ಅಲ್ಲಿಯೇ ವಾಸವಾಗಿದ್ದು, ದಿನಾಲು ತಪ್ಪದೆ ಮಠಕ್ಕೆ ಬಂದು ಶ್ರೀಗಳ ಗದ್ದುಗೆಯ ದರ್ಶನ ತೆಗೆದುಕೊಂಡು ಪಾಠಶಾಲೆಯಲ್ಲಿ ನಿತ್ಯ ನಡೆಯುವ ಶಾಸ್ತ್ರ ಪ್ರವಚನ ಕೇಳಿ ಮನೆಗೆ ಹೋಗುವುದು ಅವರ ದಿನಚರಿ.
ಅವರ ಮಗಳು ಶ್ರೀಮತಿ ಪುಷ್ಪಾ ಅವರ ಅಳಿಯ ರಾಜು ಕೊಲ್ಲಾಪುರದಲ್ಲಿ ವಾಸವಾಗಿದ್ದು, ಅವರಿಗೆ ಗೋವಿಂದನೆಂಬ ಓರ್ವ ಮಗನಿದ್ದನು. ಆ ಮಗುವಿಗೆ ಏಕಾಏಕಿ ವಾಂತಿ ಭೇದಿ ಪ್ರಾರಂಭವಾಗಿದ್ದರಿಂದ ದವಾಖಾನೆಯಲ್ಲಿ ಭರ್ತಿ ಮಾಡಿದ್ದರು. ಎಂಟು ದಿವಸ ವಾಂತಿ ಭೇದಿ ನಿಲ್ಲದ ಕಾರಣ ೨೮ ಸಲಾಯಿನ್ ಬಾಟ್ಟಿ ಇಂಜಕ್ಷನ್ ಕೊಟ್ಟರೂ ಗುಣವಾಗಲಿಲ್ಲ. ಆದಕಾರಣ ಪುಷ್ಪಾ ಅವರು ಗಾಬರಿಯಾಗಿ ತಂದೆ ವಿಠಲರಾವ ಅವರಿಗೆ ಫೋನ್ ಮಾಡಿ ಮಗುವಿನ ಕರುಣಾಜನಕ ಸ್ಥಿತಿಯ ಬಗ್ಗೆ ತಿಳಿಸಿದರು.
ಇದನ್ನು ಕೇಳಿದ ವಿಠಲರಾವ ಅವರಿಗೆ ಚಿಂತೆಯಾಗಿ ಕೊಲ್ಲಾಪುರಕ್ಕೆ ಹೋಗಬೇಕೆಂದು ನಿಶ್ಚಯಿಸಿ ರವಿವಾರ ದಿನಾಂಕ ೨೦.೫.೨೦೦೭ರಂದು ನಿತ್ಯದ ಪ್ರಕಾರ ಪ್ರವಚನ ಕೇಳಿ ಶ್ರೀ ಸಿದ್ಧಾರೂಢರ ಗದ್ದುಗೆಗೆ ಬಂದು ಒಂದು ಕಾಗದದಲ್ಲಿ ಶ್ರೀ ಗುರುವಿನ ಭಸ್ಮ ತೆಗೆದುಕೊಂಡು ಅದನ್ನು ಸಮಾಧಿಯ ಮೇಲಿಟ್ಟು ಕೈ ಜೋಡಿಸಿ ಸದ್ಗುರುವೇ ಕೊಲ್ಲಾಪುರದ ನನ್ನ ಮೊಮ್ಮಗ ಕಾಯಿಲೆಯಿಂದ ಬಳಲುತ್ತಿದ್ದು, ಅವನನ್ನು ನೀನೇ ಕಾಪಾಡು ತಂದೆ. ನಾಳೆ ಊರಿಗೆ ಹೋಗುವವನಿದ್ದು, ನಿತ್ಯ ನಿನ್ನ ದರ್ಶನ ತಪ್ಪಿದಂತಾಗುತ್ತದೆ. ಆದಷ್ಟು ಬೇಗ ನಿನ್ನ ದರ್ಶನಕ್ಕೆ ಬರುವಂತೆ ಆಶೀರ್ವದಿಸು ಎಂದು ಬೇಡಿಕೊಂಡು ಭಸ್ಮದ ಚೀಟಿ ತೆಗೆದುಕೊಂಡು ಮರುದಿವಸ ಕೊಲ್ಲಾಪುರಕ್ಕೆ ಹೋದರು. ಮಗಳು ಮನೆಯಲ್ಲಿದ್ದು ತಂದೆಯನ್ನು ನೋಡಿ ವಿಷಯ ತಿಳಿಸಿ ತಾನು ಮಾಡಿದ ಅಡುಗೆಯನ್ನು ತೆಗೆದುಕೊಂಡು ಅಪ್ಪಾ, ಮೊದಲು ದವಾಖಾನೆಗೆ ಹೋಗಿ ಮಗುವನ್ನು ನೋಡಿ ಅಲ್ಲಿಯೇ ಊಟ ಮಾಡೋಣ ನಡೆಯಿರಿ ಎಂದು ಹೇಳಿ ತಂದೆಯನ್ನು ಕರೆದುಕೊಂಡು ದವಾಖಾನೆಗೆ ಹೋದರು.
ಅಲ್ಲಿ ಮಗು ಗೋವಿಂದನ ಸ್ಥಿತಿ ನೋಡಿ ಬಹಳ ಕಳವಳವಾಯಿತು. ಡಾಕ್ಟರರೆ ಚಿಕಿತ್ಸೆ ವಿಫಲವಾಗಿತ್ತು. ಮಗುವಿನ ಕಣ್ಣುಭಾಗ ಕಪ್ಪಾಗಿ ಒಳಗೆ ಹೋಗಿದ್ದವು. ಮೈಯಲ್ಲಿ ಎಲಬು ಚರ್ಮ ಉಳಿದಿದ್ದು, ವಿಠ್ಠಲರಾವ ಚಿಂತೆಗೊಳಗಾದರು. ಮಗುವಿಗೆ ಸಲಾಯಿನ್ ಬಾಟ್ಲಿ ಹಚ್ಚಿದ್ದರು. ಆಗ ವಿಠ್ಠಲ್ ರಾವ ನಿಧಾನವಾಗಿ ಮಗುವಿನ ಬೆನ್ನಿಗೆ ತಲೆದಿಂಬು ಕೊಟ್ಟು ಕೂಡಿಸಿ ಗೋವಿಂದಾ, ನಾಲಿಗೆ ತೋರಿಸು ಎಂದಾಗ ಮಗು ನಾಲಿಗೆ ತೋರಿಸಿತು. ಆಗ ಅವನ ನಾಲಿಗೆಗೆ ಮತ್ತು ಹಣೆಗೆ ಶ್ರೀ ಸಿದ್ಧಾರೂಢರ ಭಸ್ಮ ಹಚ್ಚಿ ಓಂ ನಮಃ ಶಿವಾಯ ಮಂತ್ರ ನುಡಿಯಲು ಹೇಳಿದಾಗ, ಮಗು ಮಂತ್ರ ನುಡಿಯತೊಡಗಿತು. ನಂತರ ಮಗುವನ್ನು ಮಲಗಿಸಿ ಅವನ ಮೈಮೇಲೆ ಕೈಯ್ಯಾಡಿಸಿದಾಗ ಮಗುವಿಗೆ ಎಷ್ಟೋ ಸಮಾಧಾನವಾಯಿತು.
ಆಗ ಮಗು ತನ್ನಜ್ಜನಿಗೆ, ಅಜ್ಞಾ, ನನಗೆ ಕಥೆ ಹೇಳು ಎಂದಾಗ ವಿಠಲರಾವ ಅವರು ಶ್ರೀಕೃಷ್ಣನ ಜನ್ಮ ಮತ್ತು ಬಾಲಲೀಲ ಹೇಳುತ್ತಿದ್ದಂತೆ ಸಾಯಂಕಾಲವಾದರೂ ಮಗುವಿಗೆ ವಾಂತಿಯಾಗಲಿಲ್ಲ. ಸಾಯಂಕಾಲ ಮತ್ತೊಮ್ಮೆ ಅವನ ನಾಲಿಗೆಗೆ ಹಣೆಗೆ ಭಸ್ಮ ಹಚ್ಚಿ ಮಂತ್ರ ಜಪ ಮಾಡಿಸಿದರು. ಡಾಕ್ಟರರು ಬಂದು ನೋಡಿಕೊಂಡು ಹೋಗುತ್ತಿದ್ದು ನರ್ಸರು ಉಪಚಾರ ಮಾಡಿ ಹೋಗುತ್ತಿದ್ದರು.
ಕಳೆದ ಎಂಟು ದಿವಸಗಳಿಂದ ಹೊಟ್ಟೆಯಲ್ಲಿ ಏನೂ ಇಲ್ಲದ ಮಗು ಗೋವಿಂದನು ನನಗೆ ಹಸಿವೆಯಾಗಿದೆ. ಊಟ ಮಾಡುತ್ತೇನೆ. ಚಪಾತಿ ಕೊಡಿರಿ ಎಂದು ಹಟ ಹಿಡಿದನು. ಅವನ ಹಟಕ್ಕೆ ಮಣಿದು ಚಪಾತಿ, ಬೊಬ್ಬರಿ ಚಟ್ಟಿ ಕೊಟ್ಟಾಗ, ಅವನು ಚಪಾತಿ ತಿಂದು ಇನ್ನೂ ಬೇಕೆಂದಾಗ ಹೆಚ್ಚಿಗೆ ಚಪಾತಿ ತಿಂದರೆ ಪಚನವಾಗುವುದಿಲ್ಲ ಎಂದು ಅವರು ಕೊಡಲಿಲ್ಲ. ಮರುದಿವಸ ಮಂಗಳವಾರ ಅವನಿಗೆ ಶ್ರೀ ಗುರುಸ್ಮರಣೆ ಮಾಡಿ ಭಸ್ಮ ಹಚ್ಚಿದಾಗ ಅವನಿಗಾಗುವ ಭೇದಿ ಪೂರ್ಣ ನಿಂತಿತು. ಡಾಕ್ಟರರು ಬಂದು ತಪಾಸಣೆ ಮಾಡಿದಾಗ ಮಗು ಪೂರ್ಣ ಗುಣವಾಗಿದ್ದನ್ನು ಕಂಡು ಆಶ್ಚರ್ಯಚಕಿತರಾಗಿ ನೀವು ನಂಬಿದ ದೇವರ ಕೃಪೆಯಿಂದ ಮಗು ಆರಾಮ ಆಗಿದ್ದಾನೆ. ಮನೆಗೆ ಕರೆದುಕೊಂಡು ಹೋಗಿರಿ ಎಂದರು. ಆಗ ಮಗುವನ್ನು ಕರೆದುಕೊಂಡು ಮನೆಗೆ ಬಂದರು.
ಆಗ ಇಷ್ಟು ಬೇಗ ಮಗು ಗುಣವಾಗಲು ಶ್ರೀ ಗುರುವಿನ ಕೃಪಾಪೂರಿತ ಭಸ್ಮವೇ ಕಾರಣವೆಂದು ಎಲ್ಲರಿಗೂ ಮನವರಿಕೆಯಾಯಿತು. ಶ್ರೀ ವಿಠ್ಠಲ್ ರಾವ ಏಕಬೋಟೆಯವರು ಮಗುವಿನ ಆರೋಗ್ಯ ಸುಧಾರಿಸಿದ ಬಗ್ಗೆ ಸಂತೋಷಪಟ್ಟು ಹುಬ್ಬಳ್ಳಿಗೆ ಬಂದು ಶ್ರೀ ಗುರು ಸಿದ್ದಾರೂಢರ ದರ್ಶನ ಮಾಡಿಕೊಂಡು ಅವರಿಗೆ ಅನಂತ ನಮಸ್ಕಾರ ಸಲ್ಲಿಸಿ ಮನೆಗೆ ಹೋಗಿ ಮನೆಯವರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿ ಶ್ರೀಗಳ ಮಹಿಮೆಯನ್ನು ಕೊಂಡಾಡಿದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಶ್ರೀ ಸಿದ್ಧರ ಕರುಣೆಯಿಂದ ಶಿವರಾಮನ ಮುರಿದ ಕಾಲು ನೆಟ್ಟಗಾಯಿತು
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
