ಮುಂಬೈ ಭಕ್ತನ ನೋವು ನಿವಾರಣೆ
ಮುಂಬೈ ನಗರದ ಒಬ್ಬರಿಗೆ ಸೊಂಟ ನೋವಿನಿಂದ ಅಡ್ಡಾಡಲಿಕ್ಕೆ ಬರುತ್ತಿರಲಿಲ್ಲ. ಆ ನಗರದ ಪ್ರಸಿದ್ದ ಡಾಕ್ಟರರ ಔಷಧೋಪಚಾರಗಳಿಂದಲೂ ವಾಸಿಯಾಗಿರಲಿಲ್ಲ.ಹುಬ್ಬಳ್ಳಿಯ ಶ್ರೀ ಸ್ವಾಮಿಯವರ ದರ್ಶನ ಪಡೆಯಲು ಒಬ್ಬರು ಸಲಹೆಯನ್ನಿತ್ತರು. ಅದರಂತೆ ಆ ರೋಗಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಶ್ರೀಮಠಕ್ಕೆ ಬಂದರು. ಇಬ್ಬರು ಸೇರಿ ಆ ರೋಗಿಯನ್ನು ಅನಾಮತ ಎತ್ತಿಕೊಂಡು ಬಂದು ಶ್ರೀ ಗುರುನಾಥರ ಚರಣಗಳಲ್ಲಿ ಹಾಕಿದರು. ಶ್ರೀಗಳು ಚಕ್ಕನೆ ಎದ್ದು ರೋಗಿಯ ಬೆನ್ನ ಮೇಲೆ ಎದ್ದುನಿಂತು ಕಚಕಚನೇ ತುಳಿದರು. ಆಗ ಆ ರೋಗಿಯ ನೋವು ಮಾಯವಾಗಿ ತಾನೇ ಎದ್ದು ನಿಂತು ಸ್ವಾಮಿಗಳಿಗೆ ನಮಸ್ಕರಿಸಿದನು. ಕೆಲವು ದಿವಸಗಳವರೆಗೆ ಶ್ರೀಗಳು ಸನ್ನಿಧಿಯಲ್ಲಿದ್ದು, ಅವರ ತೀರ್ಥ ಪ್ರಸಾದ ಸ್ವೀಕರಿಸುತ್ತ ಪೂರ್ಣ ಗುಣ ಹೊಂದಿದನು.
🌺 ಬಡಭಕ್ತನ ಭಕ್ತಿಗೆ ಮೆಚ್ಚಿದ 🌺
ಶ್ರೀಗುರುನಾಥಾರೂಢ ಸ್ವಾಮಿಯವರು ಕೈಲಾಸ ಮಂಟಪದಲ್ಲಿ ಆಲಂಕೃತವಾದ ಸಿಂಹಾಸನದ ಮೇಲೆ ಮುದ್ದಾಗಿ ಕುಳಿತಿದ್ದರು. ನಗರದಿಂದ ಸಾವಿರಾರು ಭಕ್ತರು ಈ ಸಂತೋಷ ಸಮಯದಲ್ಲಿ ಭಾಗವಹಿಸಲು ಶುಚಿರ್ಭೂಷಿತರಾಗಿ ಮಡಿ ಬಟ್ಟೆಗಳನ್ನು ಉಟ್ಟುಕೊಂಡು ತಂಡ ತಂಡವಾಗಿ ಶ್ರೀಮಠಕ್ಕೆ ಬರುತ್ತಿದ್ದರು. ಶ್ರೀಮಂತರು ತಮ್ಮ ತಮ್ಮ ವಾಹನಗಳಲ್ಲಿ ಬಂದರು, ಸಾಮಾನ್ಯರು ಸಿಂಗರಿಸಿಕೊಂಡು ಕಾಲು ನಡುಗೆಯಿಂದಲೇ ಬರುತ್ತಿದ್ದರು. ಆಗ ಸಮಯ ಮುಂಜಾನೆ ಹತ್ತುಗಂಟೆಯಾಗಿರಬಹುದು. ಶ್ರೀಮಂತರು ತಮ್ಮ ತಮ್ಮ ಭಕ್ತಿ ಗಳಿಗನುಸರಿಸಿ ದೊಡ್ಡ ದೊಡ್ಡ ಗಾತ್ರದ ಹೂಮಾಲೆಯನ್ನು ತಂದು ಸ್ವಾಮಿಯವರ ಕೊರಳಿಗೆ ಹಾಕಿ ಭಕ್ತಿಯಿಂದ ನಮಸ್ಕರಿಸುತ್ತಿದ್ದರು. ಅ೦ಥ ಸಮಯದಲ್ಲಿಯೂ ಕೂಡ ಸ್ವಾಮಿಯವರು ಎಂದಿನಂತೆ ತಮ್ಮ ಸಹಜಸ್ಥಿತಿಯಲ್ಲಿ ಯಾವ ಭಾವನೆಯಿಲ್ಲದೆ ಶಾಂತರಾಗಿ ಕುಳಿತಿದ್ದರು,
ಈ ಸಮಯದಲ್ಲಿ ಸುಮಾರು ಅರವತ್ತು ವರ್ಷದ ಒಬ್ಬ ಯಜಮಾನನು ಕರಿಬಣ್ಣದ ಎಣ್ಣೆಯ ಹಳೇ ಕೋಟನ್ನು ತೊಟ್ಟು, ತಲೆಗೆ ಕೆಂಪು ಬಣ್ಣದ ರೇಷ್ಮೆಯ ಹಳೆಯ ಜರದ ರುಮಾಲನ್ನು ಸುತ್ತಿಕೊಂಡು ಧೋತರವನ್ನು ಉಟ್ಟುಕೊಂಡು ಕೈಲಾಸ ಮಂಟಪದಲ್ಲಿ ಬಂದನು. ನೋಡಲಿಕ್ಕೆ ಒಬ್ಬ ತೀರಾ ಸಾಮಾನ್ಯ ಮನುಷ್ಯನಾಗಿದ್ದು ಅವನ ಕೈಯ್ಯಲ್ಲಿ ಮಲ್ಲಿಗೆ ಹೂವಿನ ಸಾದಾ ಸಣ್ಣ ಮಾಲೆಯಿತ್ತು. ಅವನು ಭಕ್ತಿಪೂರ್ವಕವಾಗಿ ಶ್ರೀಗುರುನಾಥರ ಹತ್ತಿರಕ್ಕೆ ಬಂದು ಮಂಟಪದ ಕಟ್ಟೆಯ ಮೇಲೆ ನಿಂತು ತಾನು ತಂದಿರುವ ಹೂವಿನ ಮಾಲೆಯನ್ನು ಸ್ವಾಮಿಯವರ ಕೊರಳಿಗೆ ಹಾಕಲೆಂದು ಪೂಜಾರಿ ಹನುಮಂತಪ್ಪ ಸಾಧುವಿನ ಕೈಗೆ ಕೊಟ್ಟನು. ಆದರೆ ಸಿಂಹಾಸನದ ಅಡಿಯಲ್ಲಿ ಕುಳಿತಿದ್ದ ಆ ಪೂಜಾರಿ ಮೇಲೇಳುವ ಪ್ರಯಾಸ ತೆಗೆದುಕೊಳ್ಳಲಾಗದೆ ತಾನು ಕುಳಿತಲ್ಲಿಯೇ ಪಕ್ಕದ ಗುರುಗಳಿಗೆ ಹಾಕಲು ಹೋದಾಗ ಅದು ಅವರ ಹಿಂದೆ ಬಿದ್ದಿತು. ಆಗ ಬಡಭಕ್ತನು ಅದಕ್ಕೆ ನಿರಾಶನಾಗದೆ ತನ್ನ ಕೈಯ್ಯಲ್ಲಿದ್ದ ಮಲ್ಲಿಗೆಯ ಬಿಡಿ ಹೂಗಳನ್ನು ಮೇಲೆ ಕುಳಿತಿದ್ದ ಸ್ವಾಮಿಗಳ ಕಡೆಗೆ ಭಕ್ತಿಪೂರ್ವಕ ತೂರಿದನು.
ಆಗ ಶ್ರೀಗಳವರು ಆತನ ಶುದ್ಧ ಹಾಗೂ ಸರಳವಾಗಿರುವ ಭಕ್ತಿಗೆ ಮಣಿದು, ತಮ್ಮ ಕಡೆಗೆ ತೂರಿ ಬಂದ ಆ ಮಲ್ಲಿಗೆ ಹೂಗಳನ್ನು ತಮ್ಮ ಬಲಗೈಯ್ಯಲ್ಲಿ ಹಿಡಿದರು. ಯಾವಾಗಲೂ ಬಹಿರಂಗದ ವ್ಯವಹಾರಗಳಿಗೆ ವಿಶೇಷ ಲಕ್ಷ್ಯಕೊಡದೆ ಕೇವಲ ಸ್ವರೂಪಾನಂದದಲ್ಲಿಯೇ ನಿಷ್ಠನಾಗಿರುವ ಸ್ವಾಮಿಗಳು ಆ ಹೂಗಳನ್ನು ಹಿಡಿದುಕೊಂಡ ದೃಶ್ಯ ಅಲ್ಲಿ ಸೇರಿದ್ದ ಭಕ್ತಾದಿಗೆಲ್ಲ ಸೋಜಿಗ ಮತ್ತು ಹೃದಯಸ್ಪರ್ಶಿಯಾದದ್ದರಿಂದ ಕೈಲಾಸ ಮಂಟಪದಲ್ಲಿ ಕುಳಿತಿದ್ದವರು ಚಕಿತರಾದರು. ಸಾವಿರಾರು ಭಕ್ತರು ಒಂದೇ ಸಮನೆ ಚಪ್ಪಾಳೆ ತಟ್ಟುತ್ತ ತಮಗೆ ಆದ ಸಂತೋಷವನ್ನು ವ್ಯಕ್ತಪಡಿಸಿದರು ಈ ಸಣ್ಣ ಘಟನೆಯು, ಕೂಡಿದ ಸಾವಿರಾರು ಜನರ ಆನಂದಕ್ಕೆ ಕಾರಣವಾಯಿತು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ದೃಷ್ಟಿ ಕಳೆದುಕೊಂಡವನಿಗೆ ದೃಷ್ಟಿ ನೀಡಿದ ಗುರುನಾಥ
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ದೃಷ್ಟಿ ಕಳೆದುಕೊಂಡವನಿಗೆ ದೃಷ್ಟಿ ನೀಡಿದ ಗುರುನಾಥ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
