ಕಾಡನಕೊಪ್ಪದಲ್ಲಿ ಗುರುನಾಥ ಮಳೆ ಸುರಿಸಿದ
ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದಲ್ಲಿ ಆ ವರ್ಷ ಮಳೆಯಾಗಿರಲಿಲ್ಲ, ಅದರಿಂದಾಗಿ ಕೆರೆ ಭಾವಿಗಳು ಬತ್ತಿಹೋಗಿ ಹೊಲದಲ್ಲಿ ಬಿತ್ತನೆಯ ಕೆಲಸ ನಡೆಯಲಿಲ್ಲ, ಕುಡಿಯಲು ನೀರಿಲ್ಲದೆ ಹಾಹಾಕಾರವಾಗಿತ್ತು. ಆದ್ದರಿಂದ ಏನು ಮಾಡಬೇಕೆಂಬುದು ಹೊಳೆಯದೆ ಗ್ರಾಮದ ಸಿದ್ಧಾರೂಢರ ಭಕ್ತರು ಮತ್ತು ಊರ ಪ್ರಮುಖರು ಸಭೆ ಸೇರಿದರು. ಆಗ ಆ ಸಭೆಯಲ್ಲಿ ತೀರ್ಮಾವಾದದ್ದೇನೆಂದರೆ ಊರಿನಲ್ಲಿ ಸಿದ್ದಾರೂಢರ ನಾಮಸ್ಮರಣೆ, ಭಜನೆ ಇತ್ಯಾದಿ ಕಾರ್ಯಕ್ರಮಗಳನ್ನೊಳಗೊಂಡು ಐದು ದಿವಸದ ಸಪ್ತಾಹ ಆಚರಿಸಿ, ಕೊನೆಯ ದಿನ ಶ್ರೀಗುರುನಾಥಾರೂಢರನ್ನು ಕರೆಸಿ ಪಾದ ಪೂಜಿಸಿ ಅವರ ಆಶೀರ್ವಾದದಿಂದ ಮಳೆಯಾದರೆ ಊರು ಸಮೃದ್ಧಿಯಾಗುತ್ತದೆ ಎಂದು ನಿರ್ಣಯ ಕೈಕೊಂಡರು.
ಶ್ರೀ ಗುರುನಾಥರಿಗೆ ಮೊದಲೇ ಆಮಂತ್ರಣ ಕೊಡಬೇಕೆಂದು ಅಲ್ಲಿಯ ರಾಮಪ್ಪ ಕದಂ ಮತ್ತು ಅವರ ಗುರುಗಳಾದ ಬಸವಣ್ಣೆಪ್ಪ ಕಾಳಪ್ಪ ಬಡಿಗೇರ ಇವರು ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಬಂದರು. ಈರ್ವರೂ ಶ್ರೀ ಸಿದ್ದರ ಗದ್ದುಗೆಗೆ ನಮಸ್ಕರಿಸಿ ಅವರಿಗೆ ಮಾಲೆ ತೊಡಿಸಿ ತಾವು ತೆಗೆದುಕೊಂಡು ಬಂದಿರುವ ಒಂದು ತೆಂಗಿನಕಾಯಿಯನ್ನು ಶ್ರೀಗಳ ಪಾದದ ಹತ್ತಿರವಿಟ್ಟು, ಸಾಷ್ಟಾಂಗ ನಮಸ್ಕರಿಸಿ ಎದ್ದು ನಿಂತು ಕೈ ಜೋಡಿಸಿ, ಸದ್ಗುರುಗಳೇ ನಮ್ಮೂರಲ್ಲಿ ಮಳೆಯಾಗದೆ ಪ್ರಜೆಗಳಿಗೆ ಬಹಳ ಕಷ್ಟವಾಗಿದೆ. ಅದಕ್ಕಾಗಿ ಐದು ದಿವಸಗಳ ಸಪ್ತಾಹ ಆಚರಿಸಬೇಕೆಂದಿದ್ದೇವೆ. ದಯವಿಟ್ಟು ಕೊನೆಯದಿನ ನಮ್ಮೂರಿಗೆ ಬಂದು ತಮ್ಮ ಪವಿತ್ರ ಪಾದ ಪೂಜೆ ಸ್ವೀಕರಿಸಿ, ನಮ್ಮನ್ನು ಉದ್ಧರಿಸಬೇಕು ತಂದೆ ಎಂದು ಬೇಡಿಕೊಂಡರು.
ಆಗ ಶ್ರೀ ಗುರುನಾಥ ಸ್ವಾಮಿಗಳು, ಅವರು ಇಟ್ಟ ತೆಂಗಿನಕಾಯಿ ತೆಗೆದುಕೊಂಡು ರಾಮಪ್ಪನ ಕೈಯಲ್ಲಿಟ್ಟು ತಲೆ ಅಲ್ಲಾಡಿಸಿ ಮೌನ ಸಮ್ಮತಿ ವ್ಯಕ್ತಪಡಿಸಿದರು. ನಂತರ ಶ್ರೀಗಳಿಗೆ ಮತ್ತೊಮ್ಮೆ ವಂದಿಸಿ ಭಕ್ತರು ಸಂತೋಷದಿಂದ ಊರಿಗೆ ಹೋದರು.
ಇತ್ತ ಕಾಡನಕೊಪ್ಪದಲ್ಲಿ ಒಂದು ಶುಭ ಮುಹೂರ್ತದಲ್ಲಿ ಸಪ್ತಾಹ ಪ್ರಾರಂಭಿಧನ ಕೀರ್ತನೆ, ಪ್ರವಚನಗಳನ್ನು ಹಗಲು ರಾತ್ರಿ ನಾಲ್ಕು ದಿವಸ ನಡೆಸಿದರು. ಐದನೆಯ ದಿವಸ ಶ್ರೀಗುರುನಾಥರನ್ನು ಕರೆಸಿ ಸಪ್ತಾಹದ ಸ್ಥಳದಲ್ಲಿ ಶ್ರೀಗಳನ್ನು ಉಚಿತಾಸನದಲ್ಲಿ ಕುಡಿಸಿ ಶ್ರೀಪಾದಗಳನ್ನು ಪೂಜಿಸಿದರು. ಆ ವೇಳೆಯಲ್ಲಿ ಶ್ರೀಗುರುನಾಥ ಸ್ವಾಮಿಗಳು ಬಂದದ್ದರಿಂದ ಊರಿನ ಜನ ಸಂತೋಷದಿಂದ ಕೂಡಿದ್ದರು. ನಂತರ ಭಜನೆ ಪ್ರಾರಂಭ ಆಗ ಶ್ರೀಗಳ ಆಕಾಶದತ್ತ ಏಕದೃಷ್ಟಿಯಿಂದ ನೋಡಿ ತೂಷ್ಣ೦ ಸ್ಥಿತಿಯಲ್ಲಿ ಕುಳಿತರು. ಸ್ವಲ್ಪ ಹೊತ್ತಿನಲ್ಲಿ ಬಯಲಾಕಾಶದಲ್ಲಿ ಎಲ್ಲಿಂದಲೋ ಮೋಡಗಳು ಬಂದು ಗುಡುಗು ಸಿಡಿಲು ಪ್ರಾರಂಭ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯಹತ್ತಿತು. ಕೆರೆ ಬಾವಿಗಳು ತುಂಬಿ ಹೊಲಗಳಲ್ಲಿ ನೀರು ಹರಿಯತೊಡಗಿತು. ಆಗ ಭಕ್ತರೆಲ್ಲರೂ ಶ್ರೀ ಸಿದ್ಧಾರೂಢರ ಮತ್ತು ಶ್ರೀಗುರುನಾಥಾರೂಢ ಜಯಜಯಕಾರ ಮಾಡುತ್ತ ಕುಣಿದಾಡಿದರು. ಆಗ ಮಳೆಯಿಂದ ಶ್ರೀಗಳು ತೋಯಿಸಿಕೊಳ್ಳುತ್ತಿದ್ದಾರೆಂದು ಅವರನ್ನು ಊರಲ್ಲಿ ಒಂದೆಡೆ ಮಂಟಪದಲ್ಲಿ ಕೂಡಿದರು.
ಇತ್ತ ಅನ್ನ ಸಂತರ್ಪಣೆ ಮಾಡಲು ಒಂದೆಡೆ ಒಂದು ಕೊಪ್ಪರಿಗೆಯಲ್ಲಿ ಅಕ್ಕಿ ಹಾಕಿ ಒಲೆ ಹಚ್ಚಿದ್ದರು. ಆಗ ಅಡುಗೆಯವರ ಲಕ್ಷ್ಯವೆಲ್ಲ ಶ್ರೀ ಗುರುನಾಥರ ಕಡೆಗಿದ್ದು ಅವರೂ ಅಲ್ಲಿಗೆ ಹೋಗಿದ್ದರು. ಎಲ್ಲ ಕಡೆಗೆ ಮಳೆಯಾಗಿದ್ದರೂ ಕೊಪ್ಪರಿಗೆಯಲ್ಲಿ ಅನ್ನ ಕುದಿದು ತಂತಾನೇ ಅಡುಗೆ ಸಿದ್ಧವಾಗಿತ್ತು. ಆಮೇಲೆ ಅಡುಗೆ ಮಾಡುವವರು ಬಂದು ನೋಡಿ ಇದು ಶ್ರೀಗಳ ಮಹಿಮೆಯೆಂದು ಕೊಂಡಾಡಿದರು. ಆಮೇಲೆ ಅದೇ ಅನ್ನ ಪ್ರಸಾದವನ್ನು ಭಕ್ತರಿಗೆ ಉಣಿಸಿದರು.
ಇತ್ತ ಶ್ರೀ ಗುರುನಾಥ ಸ್ವಾಮಿಗಳ ಹತ್ತಿರ ಒಬ್ಬ ಭಕ್ತ ಚನ್ನಯ್ಯನ ಪತ್ನಿ ರುದ್ರವ್ವ ಬಂದು ಶ್ರೀಗಳನ್ನು ಕುರಿತು ಅಪ್ಪಾ ಗುರುನಾಥಾ ನನಗೆ ಲಗ್ನವಾಗಿ ಬಹಳ ವರ್ಷಗಳಾದವು. ಮಕ್ಕಳಾಗಿಲ್ಲ, ಮಗುವನ್ನು ದಯಪಾಲಿಸು ಎಂದು ಬೇಡಿಕೊಂಡಳು. ಆಗ ಶ್ರೀಗಳು ನಸುನಗುತ್ತ ಆಶೀರ್ವದಿಸಿದ ಪರಿಣಾಮವಾಗಿ ಮುಂದೆ ರುದ್ರವ್ವಳಿಗೆ ಮಕ್ಕಳಾದವು, ಇದೇ ಸಂದರ್ಭದಲ್ಲಿ ಆ ಊರಿನಲ್ಲಿ ಒಂದು ಬಸವಣ್ಣನ ಮೂರ್ತಿ ಸ್ವಾಮಿಸಬೇಕೆಂದು ಒಬ್ಬ ಶಿಲ್ಪಿಯಿಂದ ತಯಾರಿಸಲ್ಪಟ್ಟ ಮೂರ್ತಿಯಿತ್ತು. ಆಗ ಭಕ್ತರು ಶ್ರೀ ಗುರುನಾಥರನ್ನು ಕುರಿತು ಶ್ರೀಗಳೇ ಈ ಮೂರ್ತಿಯ ಮೇಲೆ ತಾವು ತಮ್ಮ ಪವಿತ್ರ ಪಾದಸ್ಪರ್ಶ ಮಾಡಬೇಕೆಂದು ಕೇಳಿಕೊಂಡಾಗ, ಗುರುಗಳು ಭಕ್ತರ ಇಚ್ಛೆಯಂತೆ ನಂದಿಯ ಮೇಲೆ ಪಾದಸ್ಪರ್ಶ ಮಾಡಿದರು. ಮುಂದೆ ಆ ಮೂರ್ತಿಯನ್ನು ಊರಿನ ಒಂದು ಭಾಗದಲ್ಲಿ ಪ್ರತಿಷ್ಠಾಪಿಸಿದರು. ಆ ಮೇಲೆ ಭಕ್ತರು ಗುರುನಾಥರನ್ನು ಸಿದ್ಧಾರೂಢ ಮಠಕ್ಕೆ ಕಳಿಸಿಕೊಟ್ಟರು. ಶ್ರೀ ಗುರುನಾಥರು ತಮ್ಮ ಪಾದಸ್ಪರ್ಶ ಮಾಡಿದಂದಿನಿಂದ ಆ ಊರಲ್ಲಿ ಯಾವ ಕೊರತೆಯೂ ಆಗಿಲ್ಲ, ಎಲ್ಲರೂ ಭಗವಂತನ ಭಕ್ತಿಯನ್ನು ಶ್ರೀ ಸಿದ್ಧಾರೂಢರ ಮತ್ತು ಶ್ರೀ ಗುರುನಾಥರ ಭಕ್ತಿ ಮಾಡುತ್ತ ಸಂತೋಷದಿಂದಿರುವುದನ್ನು ಇಂದಿಗೂ ನೋಡಬಹುದು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಗುರುನಾಥ ಪಾದವಿಟ್ಟ ಸ್ಥಳ ಚುಳಕಿ ಗ್ರಾಮ ಪುಣ್ಯಕ್ಷೇತ್ರವಾಯಿತು
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಗುರುನಾಥ ಪಾದವಿಟ್ಟ ಸ್ಥಳ ಚುಳಕಿ ಗ್ರಾಮ ಪುಣ್ಯಕ್ಷೇತ್ರವಾಯಿತು
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
