ಬನವಾಸಿಯ ದತ್ತನಿಗೆ ಸಿದ್ಧರ ಉಪದೇಶ

 🌺 ಬನವಾಸಿಯ ದತ್ತನಿಗೆ ಸಿದ್ಧರ ಉಪದೇಶ 🌺


ಪೌರಾಣಿಕವಾಗಿಯೂ ಐತಿಹಾಸಿಕವಾಗಿಯೂ ಪಾರಮಾರ್ಥಿಕವಾಗಿಯೂ ಪ್ರಸಿದ್ಧ ಬನವಾಸಿ ಪಟ್ಟಣದಲ್ಲಿ ಗಿರಿಯಪ್ಪ ಶರ್ಮ ಎಂಬವರು ಮನೆತನದ ಪರಂಪರೆಯಂತೆ ಮಧುಕೇಶ್ವರ ದೇವಸ್ಥಾನದ ಮುಖ್ಯ ವ್ಯವಸ್ಥಾಪಕರಾಗಿದ್ದರು. ಅವರಿಗೆ ಕೆಲವು ಕಾಲ ಮಕ್ಕಳಾಗದ್ದರಿಂದ ಪತ್ನಿ ಸಹಿತ ಮಧುಕೇಶ್ವರ ಸೇವಾ ತಪಸ್ಸು ಆಚರಿಸಿದ್ದರಿಂದ ಇವರ ಗರ್ಭದಲ್ಲಿ ಒಂದು ಸಂತಾನವಾಯಿತು. ಅವನೇ ಗುಂಡಪ್ಪನು. ಇವನ ಪತ್ನಿ ಭಾಗೀರಥಿಬಾಯಿಯು ಎಷ್ಟೋ ವರ್ಷ ಕಳೆದರೂ ಪುತ್ರ ಸಂತಾನವಾಗಲಿಲ್ಲ. ಆದ್ದರಿಂದ ಚಿಂತೆಯಾಗಿ ಮಧುಕೇಶ್ವರ ಅರ್ಚಕರಾದ ಮಧುಲಿಂಗ ದೀಕ್ಷಿತರಿಂದ ಗೌರೀ ಪಂಚಾಕ್ಷರಿ ಮಂತ್ರದೀಕ್ಷೆ ಪಡೆದಳು. ಒಂದು ದಿವಸ ಭಾಗೀರಥಿಬಾಯಿಯು ನಿದ್ರಿಸುತ್ತಿದ್ದಾಗ ಕನಸಿನಲ್ಲಿ ಓರ್ವ ಯುವತಿ ಬಂದು `ಮಗಳೇ ನಿನಗೆ ಸುಖಕರವಾದ ಭೋಜನ ಬೇಕೋ ಸುಪುತ್ರನು ಬೇಕೋ?' ಇದರಲ್ಲಿ ಒಂದು ವರವನ್ನು ಬೇಡು' ಎಂದಾಗ ಭಾಗೀರಥಿ ಬಾಯಿಯು 'ದೇವಾ, ಲೋಕಪೂಜ್ಯನಾದ ಸುಪುತ್ರನನ್ನು ಕೊಡು' ಎಂದು ಬೇಡಿಕೊಂಡಳು. ಆಗ ಯತಿಗಳು ಅವಳ ಮಸ್ತಕದ ಮೇಲೆ ಹಸ್ತವನ್ನಿರಿಸಿ ಒಂದು ಫಲವನ್ನು ಕೊಟ್ಟು ಅದೃಶ್ಯನಾದನು. ಆಗ ಎಚ್ಚರಾಗಿ ಪತಿ ಗುಂಡಪ್ಪನಿಗೆ ಕನಸಿನ ವಿಚಾರ ತಿಳಿಸಿದಾಗ ಅವನೂ ಸಂತೋಷಗೊಂಡನು. ಮುಂದೆ ಯತಿಗಳ ಆಶೀರ್ವಾದದಂತೆ ಭಾಗೀರಥಿಬಾಯಿಯು ಶಾ.ಶ. ಹದಿನೇಳುನೂರಾ ತೊಂಭತ್ತುಮೂರರಲ್ಲಿ (ಕ್ರಿ.ಶ. ೧೮೭೧ರಲ್ಲಿ) ಗಂಡು ಮಗುವನ್ನು ಹೆತ್ತಳು. ಮುಂದೆ  ಅವನಿಗೆ ತೊಂಭಕವೆಂಬ ನಾಮಕರಣ ಮಾಡಿದರು.
ತ್ರೈ0ಬಕ  ಎಂಬ ಸಂಸ್ಕೃತ ನಾಮವು ಉಚ್ಚಾರಣೆಗೆ ಕಠಿಣವಾದ್ದರಿಂದ ತಿರುಕಪ್ಪ ಎಂಬ ಹೆಸರು ಬಂದಿತು. ಅವನು ನಿತ್ಯ ದೇವತಾರ್ಚನೆಗೆ ದೀಕ್ಷಿತರಿಂದ ದತ್ತಮೂರ್ತಿಯನ್ನು ಪಡೆದಿದ್ದನು. ಹದಿನೈದು ವರ್ಷದೊಳಗಾಗಿ ಭಕ್ತಿ ಸಾಧನೆ ಬೆಳೆದು ದತ್ತಾತ್ರಯನನ್ನು ಪ್ರತ್ಯಕ್ಷ ಕಾಣಬೇಕೆಂಬ ತೀವ್ರ ಇಚ್ಚೆಯಾಯಿತು.
ಶಾಲಾಭ್ಯಾಸದಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಪಾಸಾದನು. ವಿರಾಮ ಕಾಲದಲ್ಲಿ ಚಿದಾನಂದವಧೂತರ ಜ್ಞಾನಸಿಂಧು ಗ್ರಂಥವನ್ನು ಓದುತ್ತಿದ್ದನು. ಮುಂದೆ ಧಾರವಾಡದಲ್ಲಿ ಕುಲಕರ್ಣಿ ಪರೀಕ್ಷೆಗೆ ಕುಳಿತು ಪಾಸಾದನು. ಮುಂದೆ ಬೆಳೆದು ತರುಣನಾದ ತ್ರೈ0ಬಕನಿಗೆ (ತಿರುಕಪ್ಪ) ಸುಬ್ರಹ್ಮಣ್ಯ ಜೋಯಿಸರ ಪುತ್ರಿ ನಾಗಮ್ಮನನ್ನು ವಧುವಾಗಿ ನಿಶ್ಚಯಿಸಿದರು. ಸಂಸಾರ ಬಂಧನದಲ್ಲಿ ಸಿಲುಕುವುದು ತಿರುಕಪ್ಪನಿಗೆ ಇಷ್ಟವಿಲ್ಲವಾದರೂ ತಂದೆ ತಾಯಿಗಳ ಸಂತೋಷಕ್ಕಾಗಿ ಪ್ರಾರಬ್ಬದಂತೆ ಲಗ್ನವಾದನು. ನಿತ್ಯ ಜ್ಞಾನಸಿಂಧು ಓದುತ್ತಿರುವುದರಿಂದ ಏಕಾಂತದಲ್ಲಿ ಯೋಗಾಭ್ಯಾಸ ಮಾಡಿ ಎಂದಿಗೆ ಸಿದ್ದನಾದೇನು? ಎಂಬ ಉತ್ಕಟ ಇಚ್ಚೆಯಾಗಿ ವ್ಯವಹಾರದಲ್ಲಿ ಉದಾಸೀನನಾದನು, ಇದರಿಂದ ತಂದೆ ತಾಯಿಗಳು ಅವನನ್ನು ಆಹಾರ ವಿಹಾರಗಳಲ್ಲಿ ಹೆಚ್ಚು ಉತ್ಸಾಹದಿಂದಿರಲು ಬಲಾತ್ಕಾರ ಪಡಿಸಿದರಾದರೂ ಅವನಲ್ಲಿ ವೈರಾಗ್ಯ ಬೆಳೆಯತೊಡಗಿತು.
ಇವನು ಕುಲಕರ್ಣಿ ವ್ಯವಹಾರಸ್ಥನಾಗಬೇಕೆಂದು ತಂದೆ ತಾಯಿಗಳು ಅರಿಸಿನಗುಪ್ಪಾ ಎಂಬ ಗ್ರಾಮಕ್ಕೆ ಕಳಿಸಿದರು. ಅಲ್ಲಿ ತ್ರೈ0ಬಕನಿಗೆ ವಿರಕ್ತ ಜೀವನದ ಧ್ಯಾನ ಸಾಧನೆಗೆ ಸಂಪೂರ್ಣ ಸ್ವಾತಂತ್ರ ಬಂದಂತಾಯಿತು. ಅಲ್ಲಿ ಆಂಜನೇಯ ದೇವಸ್ಥಾನದಲ್ಲಿದ್ದು ರಾತ್ರಿಯೆಲ್ಲಾ ಸಾಧನೆ ಮಾಡುತ್ತಿದ್ದನು. ಅದಲ್ಲದೆ ಕುಲಕರ್ಣಿ ವ್ಯವಹಾರವನ್ನು ಮಾಡುತ್ತಿದ್ದನು. ಸಪ್ಪೆಯಾದ ಆಹಾರ ಸೇವಿಸುತ್ತ ವಿರಾಮ ಕಾಲದಲ್ಲಿ ಜ್ಞಾನಸಿಂಧು ಓದುತ್ತಿದ್ದನು. ಊರಿನ ಒಂದು ಮೈಲೂ ದೂರ ಗುಡ್ಡದಲ್ಲಿದ್ದ ಸಿದ್ಧನ ಗುಹೆಯಲ್ಲಿ ರಾತ್ರಿಯಲ್ಲಿ ಕುಳಿತು ಷಣ್ಮುಖಿ ಮುದ್ರಾಸಹಿತ ಪ್ರಾಣಾಯಾಮ ಮಾಡುತ್ತಿದ್ದನು. ಅದರಂತೆ ದತ್ತಮೂರ್ತಿಯ ಧ್ಯಾನವನ್ನು ಮಾಡುತ್ತಿದ್ದನು. ಇದರಿಂದ ಕೆಲವು ದಿವಸಗಳಲ್ಲಿಯೇ ಅವನ ನಾಡಿಗಳು ಶುದ್ಧವಾಗಿ ಕಿವಿಯಲ್ಲಿ ನಾದ ಮೊಳಗಿ ಕಣ್ಣುಗಳಲ್ಲಿ ಪ್ರಕಾಶ ತುಂಬಿ ಚಿತ್ತಚಾಂಚಲ್ಯ ದೂರವಾಯಿತು. ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡುವಾಗ ಭೂಮಧ್ಯದ ಅಜ್ಞಾಚಕ್ರದಲ್ಲಿ ಬೆಳಗುತ್ತಿದ್ದ ದತ್ತನ ಮೂರ್ತಿಯಲ್ಲಿ ಮನಸ್ಸು ಕರಗಿ ಎರಡು ಮೂರು ಗಂಟೆ ಅಲ್ಲಾಡದೇ ನಿಲ್ಲುತ್ತಿತ್ತು. ಈ ಪ್ರಕಾರ ಸಾಧನೆ ಮಾಡುವಾಗ ಅವನ ಇಪ್ಪತ್ತನೇ ವಯಸ್ಸಿನಲ್ಲಿ ಅಮಾವಾಸ್ಯೆಯ ಮಧ್ಯರಾತ್ರಿಯಲ್ಲಿ ತ್ರೈ0ಬಕನ ಚಿತ್ತವು ದತ್ತಮೂರ್ತಿಯಲ್ಲಿ ಪೂರ್ಣಲೀನವಾಗಿ ಗಾಢವಾದ ಸಮಾಧಿ ಸ್ಥಿತಿ ಪಡೆಯಿತು.
ದೀರ್ಘ ಕಾಲದ ನಂತರ ಕಣ್ಣು ತೆರೆದು ನೋಡಿದಾಗ ಪ್ರಪಂಚವೆಲ್ಲವೂ ದತ್ತಮಯವಾಗಿ ಕಾಣುತ್ತಿತ್ತು. ಈ ವಿಲಕ್ಷಣವಾದ ಆನಂದದಿಂದ ಉನ್ಮತ್ತನಾಗಿ ಗಹಗಹಿಸಿ ನಕ್ಕು ಇನ್ನು ಎರಡನೆಯ ವಸ್ತುವೇ ಇಲ್ಲವೆಂದು ಉಡಿಗೆಗಳನ್ನೆಲ್ಲ ಕಿತ್ತೆಸೆದು ಉಪಾಸ್ಯದೇವನಂತೆ ತಾನು ದಿಗಂಬರನಾದನು. ದಿಗಂಬರ ದಿಗಂಬರತಾನೇ ದಿಗಂಬರ ದತ್ತನೆಂದು ಅಮಲೇರಿದ ಹುಚ್ಚನಂತೆ ಕುಣಿದು ತಾಳ ಹಾಕಿ ಹಾಡತೊಡಗಿದನು. ಜನರು ಏಳುವುದರೊಳಗೆ ತನ್ನ ವಾಸಸ್ಥಳಕ್ಕೆ ಹೋಗಿ ಮೈಮರೆತು ಸಮಾಧಿ ಸ್ಥಿತಿಯಲ್ಲಿ ಕುಳಿತಿದ್ದನು. ಮತ್ತೆ ಮನಸ್ಸು ಅದೇ ರಾತ್ರಿಯಲ್ಲಿ ಬಹಿರ್ಮುಖವಾದಾಗ ಈ ಸಾಧನೆಗೆ ಕಾರಣವಾದ ಜ್ಞಾನಸಿಂಧುವನ್ನು ಕೊಟ್ಟು ಪ್ರೋತ್ಸಾಹಿಸಿದ ತನ್ನ ಹಿರಿಯ ಮಿತ್ರ ನಾರಾಯಣ ಮಾಸ್ತರರಿಗೆ ತನ್ನ ಅನುಭವ ತಿಳಿಸಬೇಕೆಂದು ರಾತ್ರಿಯೇ ಬನವಾಸಿಗೆ ಹೊರಟನು.
ದತ್ತನು ಮುಂಜಾನೆ ಬನವಾಸಿಗೆ ಸೇರಿ ನಾರಾಯಣ ಮಾಸ್ತರರ ಮನೆಗೆ ಹೋದನು. ಆಗ ಮಾಸ್ತರರು ಪೂಜೆ ಮಾಡುತ್ತಿರುವುದರಿಂದ ದತ್ತನು ಅಲ್ಲಿಯೇ ಒಂದು ಕಂಬಕ್ಕೆ ಒರಗಿ ಮೈಮರೆತು ಸಮಧಿಸ್ಥನಾಗಿ ಕುಳಿತನು. ನಾರಾಯಣ ಮಾಸ್ತರರು ನಡುಮನೆಗೆ ಬಂದಾಗ ಕಂಬಕ್ಕೆ ಒರಗಿ ಬೆತ್ತಲೆ ಕುಳಿತಿದ್ದ ಗಡ್ಡಧಾರಿ ಇವನನ್ನು ಕಂಡು ಗುರ್ತಿಸಿ ಎಷ್ಟು ಸಲ ಮಾತಾಡಿಸಿದರೂ ಉತ್ತರವಿಲ್ಲ. ಕಣ್ಣನ್ನೂ ಬಿಚ್ಚಲಿಲ್ಲ. ಅವರು ಗಾಬರಿಗೊಂಡು ಅಲ್ಲಾಡಿಸಿದರು. ಭೂಮಿಗೆ ಉರುಳಾಡಿಸಿದರು. ಆಗ ಅವನಿಗೆ ಎಚ್ಚರ ಬಂದು ಮಾಸ್ತರರನ್ನು ಅಪ್ಪಿಕೊಂಡು ಮುನ್ನಿನ ತನ್ನ ಅನುಭವವನ್ನು ಹೇಳಿದರು. ಆದರೆ ಅವರಿಗೆ ಇವನ ಮಾತಿನ ಅರ್ಥವಾಗಲಿಲ್ಲ. ಇದರಿಂದಾಗಿ ತ್ರ್ಯಂಬಕನು ಖಿನ್ನಮನಸ್ಕನಾಗಿ ಅಲ್ಲಿಂದ ತನ್ನ ಮನೆಗೆ ಬಂದನು. ಅವನನ್ನು ನೋಡಿದ ಜನರು ಹೌಹಾರಿದರು. ತಿರುಕ ಹುಚ್ಚನಂತೆ ಹೀಗೆ ಬತ್ತಲೆ ತಿರುಗುವುದಕ್ಕೆ ನಿನಗೆ ಬುದ್ದಿ ಕೆಟ್ಟಿದೆಯೇ? ಎಂದು ಜನರೂ ತಾಯಿಯೂ ಕೇಳಿದಳು. ಅದಕ್ಕೆ ತ್ರೈ0ಬಕನು `ಅಮ್ಮಾ, ನೀನು ನಾನು ಸಕಲ ಜಗತ್ತು ಬತ್ತಲೆಯ ದತ್ತನೇ ಆಗಿದ್ದೇವೆ. ಈ ಸತ್ಯವನ್ನು ತಿಳಿಸಲು ಬಂದಿದ್ದೇನೆ' ಎಂದು ಹೇಳಿ ಭಾವಸಮಾಧಿ ಹೊಂದಿದನು.
ಆ ತಾಯಿಗೆ ಮಗನ ಮಾತಿನ ಅರ್ಥವಾಗಲಿಲ್ಲ. ಇದನ್ನು ತಿಳಿದ ತ್ರ್ಯಂಬಕನು ತಾನೇ ದತ್ತನೆಂಬ ಭಾವದಿಂದ ಹೊರಟು ಹೋದನು. ಇವನು ಈ ರೀತಿಯಿರುವುದರಿಂದ ಜಗತ್ತಿನ ವ್ಯವಹಾರಕ್ಕೆ ವಿರೋಧವಾಯಿತು. ಊಟದ ಪರಿವೆಯೇ ಇಲ್ಲವಾದ್ದರಿಂದ ಜನರು ಬಲಾತ್ಕಾರದಿಂದ ಉಣಿಸುತ್ತಿದ್ದರು. ತಣ್ಣೀರು ಹಾಕುತ್ತಿದ್ದರು. ಇವನಿಂದ ಅನೇಕ ಪವಾಡಗಳಾದವು. ಈ ಸುದ್ದಿ ಹೆಣ್ಣು ಕೊಟ್ಟ ಮಾವನಿಗೆ ತಿಳಿದು ಬನವಾಸಿಗೆ ಬಂದು ಅಳಿಯನ ಸ್ಥಿತಿಯನ್ನು ಕಂಡು ಅವನಿಗೆ ಹುಚ್ಚು ಹಿಡಿದಿದೆಯೆಂದು ತೀರ್ಮಾನಿಸಿದನು. ಒಂದು ದಿನ ದತ್ತನು ಬತ್ತಲೆ ತಿರುಗಾಡುತ್ತ ಮಧುಕೇಶ್ವರ ದೇವಾಲಯಕ್ಕೆ ಬಂದು ಲಿಂಗದ ಮೇಲೆ ಭಾವಾವಿಷ್ಟನಾಗಿ ಕುಳಿತನು. ಇದನ್ನು ಕಂಡು ಪೂಜಾರಿಗಳು ಬಂದು ಇವನನ್ನು ಎಳೆದು ನೆಲಕ್ಕೆ ಕೆಡವಿ ಹಲ್ಲು ಮುರಿಯುವಂತೆ ಹೊಡೆದರು. ರಕ್ತ ಸುರಿಯುತ್ತಿತ್ತು. ಆದರೂ ಲಕ್ಷ್ಯವಿರಲಿಲ್ಲ. ಅಮಲೇರಿದವನಂತೆ ಕುಣಿಯುತ್ತ ಹೊರಟು ಹೋದನು. ದತ್ತನ ಈ ಬಗೆಯ ನಡುವಳಿಕೆಯಿಂದ ಕೆರಳಿದ ಜನರು ಅವನ ಮಾವನ ಹೇಳಿಕೆಯಂತೆ ಅವನನ್ನು ಹಿಡಿದು ಕಟ್ಟಿ ಒಂದು ಬೋಲಿಯಲ್ಲಿ ಇರಿಸಿದರು.
ಹೀಗೆ ಮೂರು ತಿಂಗಳು ಕಳೆದ ಮೇಲೆ ಸದ್ಗುರು ಕೃಪೆಯಿಂದ ತುರ್ಯಸ್ಥಿತಿಯು ಶಮನಗೊಂಡು ಜನರು ಈ ರೀತಿ ಬಂಧಿಸಲು ಕಾರಣವೇನೆಂದು ಆಲೋಚನೆ ಬಂದು ಸುತ್ತಲ ಪರಿಸರಕ್ಕೂ ಜನರಿಗೂ ಪ್ರಿಯವಾಗುವಂತೆ ಹೊಂದಿಕೊಂಡು ಇರುವುದರಲ್ಲಿ ಶಾಂತಿಯಿದೆಯೆಂದು ತನ್ನೊಳಗೇ ತಿಳಿದು ನಡೆಯುತ್ತಿರುವುದರಿಂದ ಎಲ್ಲರಿಗೂ ಸಂತೋಷವಾಯಿತು. ಜನರ ಈ ಹುಚ್ಚನ್ನು ಕಂಡು ದತ್ತನು ತನ್ನೊಳಗೇ ನಗುತ್ತಿದ್ದನು. ಮುಂದ ಕೆಲವು ಕಾಲ ಕಳೆದ ನಂತರ ದತ್ತನ ಪತ್ನಿ ನಾಗಮ್ಮ ಋತುಮತಿಯಾದಳು. ಶೋಭನದ ಕಾರ್ಯಗಳೂ ಮುಗಿದವು. ಸ್ತ್ರೀ ಭೋಗದಿಂದ ತನ್ನೆಲ್ಲ ತಪಸ್ಸನ್ನು ಕಳೆದುಕೊಳ್ಳುತ್ತೇನೆಂದು ತಿಳಿದು ಪತ್ನಿ ಸಂಗ ಮಾಡುವುದನ್ನು ಬಿಟ್ಟನು. ಇದರಿಂದಾಗಿ ಜನರ ಅಪಹಾಸ್ಯಕ್ಕೆ ಗುರಿಯಾಗಬೇಕಾಯಿತು. ಇಷ್ಟು ವೈರಾಗ್ಯವುಳ್ಳವನು ರತಿಯಂಥ ಕನ್ಯೆಯ ಬಾಳನ್ನೇ ಹಾಳು ಮಾಡಿ ಗೋಳಾಡಿಸಲು ಏಕೆ ಲಗ್ನ ಮಾಡಿಕೊಳ್ಳಬೇಕು? ಇದು ಪಾಪದ ಕೆಲಸವೇ ಸರಿ' ಎಂದು ಗೌರವಸ್ಥರು ಬುದ್ದಿ ಹೇಳಿದರು. ಇದರಿಂದ ಅವನ ಮನಸ್ಸಿನಲ್ಲಿ ಒಂದು ವಿಚಾರ ಹೊಳೆಯಿತು. ಅದೆಂದರೆ ಸಂಸಾರ ತ್ಯಜಿಸಿ ಹಿಮಾಲಕ್ಕೆ ಏಕೆ ಹೋಗಬಾರದು ಎನಿಸಿತು. ಆದರೂ ಯಾವುದೇ ನಿರ್ಣಯಕ್ಕೆ ಬರಬೇಕಾದರೆ ಮಹಾತ್ಮರೊಬ್ಬರ ಅನುಗ್ರಹವಾಣಿಯ ಬಲವನ್ನು ಪಡೆದು ಅವರ ಆಜ್ಞೆಯಂತೆ ನಡೆಯುವುದೇ ಉತ್ತಮವೆಂದು ಅವನಿಗೆ ತೋರಿತು.
ಆ ಕಾಲದಲ್ಲಿ ಹುಬ್ಬಳ್ಳಿಯಲ್ಲಿದ್ದ ಲೋಕಪ್ರಸಿದ್ದ ಸಿದ್ದಾರೂಢ ಸ್ವಾಮಿಗಳ ಪ್ರಸಿದ್ಧಿಯನ್ನು ಕೇಳಿ ಹುಬ್ಬಳ್ಳಿಗೆ ಹೋಗಿ ಬರುವುದಾಗಿ ತಂದೆ ತಾಯಿಗಳಿಗೆ ಹೇಳಿ ಹುಬ್ಬಳ್ಳಿ ಸೇರಿದನು. ಮಠದಲ್ಲಿ ಮೂರು ದಿವಸವಿದ್ದು ತಾನಾಗಿಯೇ ಆರೂಢರಿಗೆ ಯಾವ ವಿಚಾರ ತಿಳಿಸದೇ ಇರಬೇಕು. ಆಗ ಆರೂಢರೇ, ನನ್ನ ಸಮಸ್ಯೆಯನ್ನರಿತು ಸಮಾಧಾನವನ್ನು ಹೇಳಬೇಕು ಮತ್ತು ಅನ್ನ ನೀರು ಸೇವಿಸದೆ ದತ್ತನ ಚಿಂತನೆಯಲ್ಲಿರಬೇಕೆಂದು ನಿಶ್ಚಯಿಸಿ ಆರೂಢರ ಮಠದಲ್ಲಿ ಮೂರು ದಿವಸವಿದ್ದನು. ಸ್ವಾಮಿಗಳ ದರ್ಶನಕ್ಕಾಗಿ ಹಗಲಿರುಳೂ ಸಾವಿರಾರು ಜನರು ಬರುತ್ತಿದ್ದರು. ಹೀಗಾಗಿ ಆರೂಢರು ತಾವಾಗಿಯೇ ಬರುವರೆಂಬ ವಿಶ್ವಾಸವಿಲ್ಲದಾಯಿತು. ದತ್ತನು ದೊಡ್ಡ ಮಠದಲ್ಲಿ ಯಾರಿಗೂ ತನ್ನ ಪರಿಚಯವನ್ನು ಹೇಳಲಿಲ್ಲ. ಯಾರೊಡನೆಯೂ ಮಾತಾಡಲಿಲ್ಲ. ಮಠದ ಒಂದು ಕಡೆ ಮೂರು ದಿವಸ ಕಳೆದವು. ಸಿದ್ಧರು  ಬರಲಿಲ್ಲವೆಂದು ನಿರಾಶನಾಗಿ ನಾಲ್ಕನೆಯ ದಿವಸ ಊರಿಗೆ ಹೋಗಬೇಕೆಂದು ಚಿಂತಿಸಿ
ತನ್ನ ಇಷ್ಟಾರ್ಥ ಸಿದ್ಧಿಗಾಗಿ ಮುಂಜಾನೆ ಸ್ವಾಮಿಯಲ್ಲಿ ಅನನ್ಯ ಭಕ್ತಿಯಿಂದ ದೊರೆಯಿಡುತ್ತ ಕಣ್ಣುಮುಚ್ಚಿ ಧ್ಯಾನಸ್ಥನಾಗಿ ಕುಳಿತನು. ಆಗ ಸ್ವಲ್ಪ ಹೊತ್ತಿನಲ್ಲಿ ಯಾರೋ ನಡೆದು ಬರುತ್ತಿರುವ ಪಾದುಕೆಗಳ ಪಟಪಟ ಶಬ್ದ ಕೇಳಿ ದತ್ತನ ಮೈ ಜುಮ್ಮೆಂದಿತು. ಥಟ್ಟನೆ ಕಣ್ಣೆರೆದು ನೋಡಿದನು. ಆಗ ಆನಂದಾಶ್ಚರ್ಯಗಳಿಗೆ ಪಾರವಿಲ್ಲದಾಯಿತು. ದತ್ತನು ಮೂಕವಿಸ್ಮಯನಾಗಿ ಸಿದ್ಧರ ಪಾದಗಳಿಗೆ ಪೊಡಮೊಟ್ಟು ಆನಂದಾಶ್ರುಗಳನ್ನು ಉದುರಿಸಿ ಏಳುತ್ತಿರುವಾಗಲೇ ಸಿದ್ದನು ದತ್ತನನ್ನು ಹಿಡಿದ ನಿಲ್ಲಿಸಿ ಅವನ ಮಸ್ತಕದ ಮೇಲೆ ಹಸ್ತವನ್ನಿರಿಸಿದರು. ನಂತರ ಸಿದ್ದನು ಅವನ ಯೋಗಸಾಧನೆ ಮತ್ತು ಅವನ ಕೌಟುಂಬಿಕ ಜೀವನದ ಆಗು ಹೋಗುಗಳನ್ನು ಆಶ್ಚರ್ಯಕರವಾಗಿ ತಿಳಿಸಿ ಪ್ರೀತಿಯಿಂದ ದತ್ತನನ್ನು ಕುರಿತು ಹೀಗೆ ಹೇಳಿದರು.
'ಬಾಲಕಾ, ಎಳೆಯವನಾದ ನೀನು ನಿನ್ನನ್ನು ಬಹಳ ಜಾಣನೆಂದು ತಿಳಿಯಬೇಡ. ದೈವಾನುಗ್ರಹದಿಂದ ಯೋಗಾನುಭವ ಬಂದಿದ್ದರೂ ಲೋಕಾನುಭವದ ಕೊರತೆಯಿದೆ. ಮತ್ತು ಶಾಸ್ತ್ರದ ಕೊರತೆಯೂ ಇದೆ. ಆದರೂ ವಿರಕ್ತನೂ ಭಕ್ತನೂ ಮುಮುಕ್ಷುವೂ ಆದ ನೀನು ಸದ್ಗುರುವಿನ ಉಪದೇಶಕ್ಕೆ ಉತ್ತಮ ಅಧಿಕಾರಿಯಾಗಿರುವಿ. ಇದರಲ್ಲಿ ಯಾವ ಸಂಶಯವಿಲ್ಲ. ಆದರೂ ನಿನ್ನ ಪ್ರಾರಬ್ಧ ಕರ್ಮದ ಅನಿವಾರ್ಯ ಯೋಗ ಭೋಗಗಳನ್ನು ಗಮನದಲ್ಲಿಟ್ಟುಕೊಂಡು ಲೋಕವಿರೋಧವಾಗದಂತೆ ನಿನ್ನ ವ್ಯಾವಹಾರಿಕ ಜೀವನದ ರೂಪುರೇಷೆಗಳನ್ನು ನಿನ್ನ ಗುರುವು ರೂಪಿಸಬೇಕಾಗಿದೆ. ಆತ್ಮನಿಗೆ ಪ್ರಾರಬ್ಧವಿಲ್ಲದಿದ್ದರೂ ಈಗ ತನಗೆ ಬಂದಿರುವ ಹಿಂದಿನ ಸಂಚಿತಕರ್ಮದ ಫಲವಾಗಿ ಬಂದ ಪ್ರಾರಬ್ಧವಿರುವುದರಿಂದ ಈ ದೇಹವು ಉಸಿರಾಡುತ್ತ ಜೀವಿಸುವವರೆಗೂ ಇದರಲ್ಲಿರುವ ಜೀವಾತ್ಮನು ಆಕರ್ತನಾದ ಪರಮಾತ್ಮನೇ ಇದ್ದಾನೆ. ಪ್ರಾರಬ್ಬವಶದಿಂದ ಬಂದ ತನ್ನ ತಂದೆ ತಾಯಿ ಹೆಂಡತಿ ಮಕ್ಕಳು ಮನ ಆಸ್ತಿ ಮೊದಲಾದ ಋಣಾನುಬಂಧಗಳನ್ನು ಗೌರವಿಸಿ ಧರ್ಮಸಮ್ಮತವಾಗಿ ನಡೆದುಕೊಂಡರೆ ಮಾತ್ರ ಎಲ್ಲರ ಸಂತೋಷಕ್ಕೂ ಕಾರಣನಾಗಿ ಹಿರಿಯರ ಆಶೀರ್ವಾದಕ್ಕೂ ಈಶ್ವರಾನುಗ್ರಹಕ್ಕೂ ಪಾತ್ರನಾಗಿ ಮನಶ್ಯಾಂತಿಯನ್ನು ಸುಖವನ್ನೂ ಪಡೆಯುತ್ತಾನೆ. ನೀನು ಚಿಕ್ಕ ವಯಸ್ಸಿನಲ್ಲಿ ಏಕಾಂಗಿಯಾಗಿ ಹಿಮಾಲಯದಲ್ಲಿ ತಪಸ್ಸು ಮಾಡಿಕೊಂಡಿರಬೇಕೆಂಬುದೇ ಈಶ್ವರ ಇಚ್ಚೆ ಮತ್ತು ನಿನ್ನ ಪ್ರಾರಬ್ಧವೂ ಆಗಿದ್ದರೆ ನೀನು ಶ್ರೀಮಂತರ ಕುಲದಲ್ಲಿ ತಂದೆ ತಾಯಿಗಳಿಗೆ ಒಬ್ಬನೇ ಮಗನಾಗಿ ಹುಟ್ಟುತ್ತಿರಲಿಲ್ಲ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಿರಲಿಲ್ಲ. ಈಗಾಗಲೇ ಯೋಗ ಸಾಧನೆಯಿಂದ ದತ್ತನ ಸಾಕ್ಷಾತ್ಕಾರವಾಗಿ ನಿಜಾನಂದ ನಿನ್ನ ಅನುಭವಕ್ಕೆ ಬಂದಿರುವುದರಿಂದ ಇನ್ನು ಮುಂದೆ ವಿಷಯ ಭೋಗದಿಂದ ಸುಖ ಪಡಬೇಕೆಂಬ ಭ್ರಾಂತಿಗೆ ಕಾರಣವೇ ಇಲ್ಲ. ಆನಂದವೇ ನಮ್ಮ ಸ್ವರೂಪವಾಗಿದೆ. ಆದ್ದರಿಂದ ಸಕಲರಿಗೂ ಗಾಢ ನಿದ್ರೆಯಲ್ಲಿಯೂ, ಯೋಗಿಗೆ ಸಮಾಧಿಯಲ್ಲಿಯೂ ಜ್ಞಾನಿಗೆ ಸಹಜವಾಗಿಯೂ ಇದು ಅನುಭವಕ್ಕೆ ಬರುತ್ತದೆ. ನಿರ್ಮಲ ನಿಶ್ಚಲವಾದ ಮನಸ್ಸು ಸ್ವರೂಪದಲ್ಲಿ ಕರಗಿ ಹೋಗುವುದೇ ಕೃತಕೃತ್ಯತೆಯೆಂದೂ ವಿಷಯೇಂದ್ರಿಯ ಸುಯೋಗದಿಂದ ತೋರುವ ಮೊಹಕ ಸುಖವೂ ಸಹ ಆ ನಿಜಾನಂದ ಸಾಗರದ ಒಂದು ಹನಿ ಮಾತ್ರವೆಂದು ನಿನ್ನ ಅನುಭವಕ್ಕೆ ಬಂದಿರುವುದರಿಂದ ನೀನು ಯಾವುದರಲ್ಲಿಯೂ ಅಭಿಮಾನ ಪಡದೆ ಕರ್ತೃತ್ವ ಭೋಕ್ತ್ತೃತ್ವ ಪುಣ್ಯ ಪಾಪಗಳನ್ನು ಅಂಟಿಸಿಕೊಳ್ಳದೇ ಎಲ್ಲವನ್ನೂ ಸಮದೃಷ್ಟಿಯಿಂದ ನೋಡುತ್ತ ಸ್ವರೂಪ ಸ್ಥಿತಿಯಲ್ಲಿದ್ದು ವ್ಯವಹಾರ ಮಾಡುವುದಕ್ಕೆ ಈಗ ನೀನು ಆತ್ಮ ಬಲವನ್ನು ಪಡೆದಿರುವಿ. ಯಾವ ಅತ್ಯಾಸೆಯಿಲ್ಲದ ಕುಟುಂಬದ ಯೋಗಕ್ಷೇಮಕ್ಕೆ ಹಾನಿ ಬರದಂತೆ ಗ್ರಹಸ್ಥಾಶ್ರಮಕ್ಕೆ ಚ್ಯುತಿ ಬಾರದಂತೆ ಲೋಕ ವ್ಯವಹಾರವನ್ನು ಸಾಧ್ಯವಿದ್ದಷ್ಟು ಕಡಿಮೆ ಮಾಡಿ ಹಗಲಿರುಳೂ ಸ್ವರೂಪಾನಂದದಲ್ಲಿರಲು ಪ್ರಯತ್ನ ಮಾಡು.
ಇದರಿಂದ ಹಿಮಾಲಯದಲ್ಲಿ ಮಾಡಬೇಕೆಂದಿರುವ ತಪಸ್ಸನ್ನು ಮನೆಯಲ್ಲಿಯೇ ಮಾಡಿದಂತಾಗುತ್ತದೆ. ಅದರಿಂದ ನಿನ್ನ ತಪಸ್ಸು ಯಾರಿಗೂ ಬಾಧಕವಾಗುವುದಿಲ್ಲ. ಇಷ್ಟೇ ಅಲ್ಲದೆ ಗಾಢವಾದ ತಪಸ್ಸು ಹಿಮಾಲಯದ ಗುಹೆಯಲ್ಲಿ ನಡೆಯಲಿ ಅಥವಾ ಮನೆಯಲ್ಲಿಯೇ ನಡೆಯಲಿ ಅದರ ದೈವೀಪ್ರಭೆಯು ವಿಶ್ವವನ್ನೇ ವ್ಯಾಪಿಸುತ್ತದೆ ಮತ್ತು ಎಲ್ಲರಿಗೂ ಶುಭವಾಗಲಿ ಎಂಬ ಯೋಗಿಯ ಸರ್ವಾತ್ಮಕಭಾವದ ಸಂಕಲ್ಪ ಬಲದಿಂದ ಜನರಿಗೆ ತಿಳಿಯದಂತೆ ಎಲ್ಲರಲ್ಲಿಯೂ ಪರಸ್ಪರ ಪ್ರೇಮ ಬೆಳೆದು ಲೋಕದಲ್ಲಿ ಶಾಂತಿ ನೆಲೆಸುತ್ತದೆ. ಅವನ ವಿಶ್ವಪ್ರೇಮವು ಎಲ್ಲವನ್ನೂ ಮೀರಿ ಅಮರವಾಗಿರುತ್ತದೆ. ಇದನ್ನು ಇನ್ನೂ ಸುಲಭವಾಗಿ ತಿಳಿಸುತ್ತೇನ. ಲೋಕದಲ್ಲಿ ಪರಸ್ಪರ ಎರಡು ಮಾರ್ಗಗಳಿವೆ. ಒಂದು ಪ್ರೇಯೋಮಾರ್ಗ ಇನ್ನೊಂದು ಶ್ರೇಯೋಮಾರ್ಗ, ಸಾಧನೆಯ ಪ್ರಾರಂಭದಲ್ಲಿ ಸುಖಕರವಾಗಿ ತೋರುವುದೇ ಸಾಮಾನ್ಯರಿಗೆ ಪ್ರಿಯವಾಗಿರುತ್ತದೆ. ಆದರೆ ಕೊನೆಗೆ ಪರಿಣಾಮವೇನಾಗಬಹುದೆಂದು ಸಾಮಾನ್ಯರಿಗೆ ಗೊತ್ತಿರದ ತಾವೇ ದುಃಖವನ್ನು ತಂದುಕೊಂಡು ಪೇಚಾಡುತ್ತಾರೆ. ಅತ್ಯಾಸೆ ದುರಾಸೆಯುಳ್ಳ ಅವಿವೇಕಿ ಸಂಸಾರಿಗಳಿಗೆ ಸಿಕ್ಕುವ ಫಲವೇ ಇದು.
ಶಾಸ್ತ್ರದಿಂದಲೂ ಆಚಾರ್ಯರಿಂದಲೂ ಉಪದಿಷ್ಟವಾದ ಮಾರ್ಗವೇ ಶ್ರೇಯೋಮಾರ್ಗ, ಶ್ರದ್ಧಾಭಕ್ತಿಯುಳ್ಳ ಏವೇಕಿಗಳು ಮಾತ್ರ ಶಾಸ್ರೋಪದೇಶ ಪಡೆಯುವುದಕ್ಕೆ ಅಧಿಕಾರಿಗಳು, ಸಾಧನ ದಿಶೆಯಲ್ಲಿ ಎಂಥ ಕಷ್ಟ ಬಂದರೂ ಸಾಧನ ಮಾಡುವ ವಿವೇಕಿಗಳಿಗೆ ಶಾಶ್ವತವಾದ ನಿಜಸುಖ ದೊರೆಯುತ್ತದೆ. ಕಷ್ಟಕರವಾದ ಸಂಸಾರ ಬಿಟ್ಟು ಹೋಗಬೇಕೆಂಬುದೇ ನಿನ್ನ ಪ್ರೇಯೋಮಾರ್ಗವಾಗಿದೆ. ದತ್ತನ ಕೃಪೆಯು ನಿನ್ನ ಮೇಲೆ ಪೂರ್ಣವಿದೆ. ನೀನು ಪೂಣ್ಮಶಾಲಿ, ವಿವೇಕಿಯಾದ್ದರಿಂದ ಹಿಮಾಲಯಕ್ಕೆ ಹೋಗಬೇಕೆಂಬ ಹೇಡಿತನವನ್ನು ಬಿಟ್ಟುಬಿಡು. ಚರಾಚರ ವಸ್ತುಗಳಿಲ್ಲ ಚಿದಾನಂದರೂಪವಾದ ನೀನೇಯಿರುವಾಗ ಯಾವುದನ್ನು ಹಿಡಿಯುತ್ತಿ? ಯಾವುದನ್ನು ಬಿಡುತ್ತಿ? ಶರೀರ ಭೋಗಕ್ಕಾಗಿ ತಾನಾಗಿಯೇ ಬಂದಿರುವ ಪತ್ನಿ ಗ್ರಹ ಸಂಪತ್ತುಗಳನ್ನು ಉದ್ದೇಶಪೂರ್ವಕವಾಗಿ ತ್ಯಾಗ ಮಾಡುವುದು ಧರ್ಮವಲ್ಲ, ಅವಿವೇಕದ ಹಲವು ದುಃಖಕ್ಕೆ ಕಾರಣವಾಗುತ್ತದೆ. ಅಖಂಡಾನಂದ ಸ್ವರೂಪನಾದ ನಿನ್ನಲ್ಲಿ ಭೋಕ್ತ್ತೃ , ಭೂಗ, ಭೋಗ್ಯ ಎಂಬ ತ್ರಿಪುಟಿ ಎಲ್ಲಿಂದ ಬಂತು? ಅತೀಂದ್ರಿಯವಾದ ನಿನ್ನ ಸಚ್ಚಿದಾನಂದ ಸ್ವರೂಪದಲ್ಲಿ ಕರ್ತೃತ್ವವಾದರೂ ಎಲ್ಲಿದೆ? ಧರ್ಮ ಸಮ್ಮತವಾದ ಅರ್ಥ ಕಾಮನೆಗಳ ಸೇವೆಯು ಗ್ರಹಸ್ಥನಾದ ಯೋಗಿಯ ಸ್ವರೂಪ ಜ್ಞಾನಕ್ಕೆ ಬಾಧಕವೇನಲ್ಲ. ಆದ್ದರಿಂದ ಆದರ್ಶವಾದಿಯಾಗಿ ಅಭಿಮಾನ ಆಸಕ್ತಿಯಿಲ್ಲದ ಒಂದು ಪುತ್ರ ಸಂತಾನವಾಗುವವರೆಗೆ ಸಂಸಾರ ನಡೆಸು. ನಿನ್ನ ಪತ್ನಿಯನ್ನು ಅಧ್ಯಾತ್ಮ ಮಾರ್ಗಕ್ಕೆ ಪರಿವರ್ತಿಸುವುದು ನಿನ್ನ ಕರ್ತವ್ಯವಾಗಿದೆ. ಅವಳ ಮನಸ್ಸನ್ನು ನೋಯಿಸಬೇಡ. ಆಕೆಯ ಸರ್ವ ಮಂಗಳ ಮಾಂಗಲ್ಯವೇ ನೀನಲ್ಲವೇ? ನೀನು ಸ್ವರೂಪದಲ್ಲಿಯೇ ಉಳಿಯಬೇಕೆಂದರೆ ಪತ್ನಿ ಪುತ್ರರ ಯೋಗಕ್ಷೇಮದ ವ್ಯವಸ್ಥೆ ಮಾಡಿ ಅವರ ಒಪ್ಪಿಗೆ ಪಡೆದು ವಿದ್ವತ್ ಸನ್ಯಾಸ ತೆಗೆದುಕೊಳ್ಳಬಹುದು. ನಿನ್ನ ತಾಯಿಯು ಎಲ್ಲರಂತೆ ನಿನ್ನನ್ನು ಪಡೆಯಲಿಲ್ಲ. ನಿನಗಾಗಿಯೇ ಹಲವು ಕಾಲ ತಪಸ್ಸು ಮಾಡಿ ನಿನ್ನೊಬ್ಬನನ್ನೇ ಪಡೆದಿದ್ದಾಳೆ. ನೀನು ಸರಿಯಾಗಿ ವಿಚಾರ ಮಾಡಿ ನನ್ನಲ್ಲಿಗೆ ಬಂದೆ. ಹಿಮಾಲಯಕ್ಕೆ ಹೋಗಿದ್ದರೆ ನಿನಗೆಂದಿಗೂ ಶ್ರೇಯಸ್ಸು  ಸಿಗುತ್ತಿರಲಿಲ್ಲ. ಶಾಂತಿಯೂ ದೊರೆಯುತ್ತಿರಲಿಲ್ಲ. ಏಕೆಂದರೆ ಎಲ್ಲಾ ಬಗೆ ಬಗೆಯ ಸಂಸ್ಕಾರ ಸಂಕಲ್ಪಾದಿಗಳುಳ್ಳ ಎಲ್ಲಾ ಮನಸ್ಸುಗಳ ಒಟ್ಟಾದ ಮನಸ್ಸಿನ ಚಿತ್ತ ಸಾಗರದಲ್ಲಿ ಒಬ್ಬೊಬ್ಬ ಜೀವಿಯ ಒಂದೊಂದು ಬಿಡಿ ಮನಸ್ಸು ಒಂದೊಂದು ವಿಶಿಷ್ಟ ಶಕ್ತಿಜನಕವಾದ ಪ್ರಭಾವಶಾಲಿ ಚಕ್ರತೀರ್ಥವಾಗಿದೆ.
ರಾಗದ್ವೇಷಗಳುಳ್ಳ ಜೀವರ ಕರ್ಮಫಲವಾದ ಋಣಾನುಬಂಧಗಳನ್ನು ಅನುಸರಿಸಿ ಒಬ್ಬರ ಮನಸ್ಸು ಇನ್ನೊಬ್ಬರ ಮನಸ್ಸಿನ ಮೇಲೆ ಅವರವರು ಎಷ್ಟು ದೂರವಿದ್ದರೂ ಸಹ ಸಾಧಕವಾಗಿಯೂ ಬಾಧಕವಾಗಿಯೂ ಪರಿಣಾಮ ಮಾಡುತ್ತದೆ.
(ಸಮುದ್ರದ ಒಂದು ಅಲೆಯು ಇನ್ನೊಂದರ ಮೇಲೆ ಪರಿಣಾಮ ಮಾಡುವಂತೆ ) ಎಂದೂ ವ್ಯರ್ಥವಾಗಲು ಶಾಪಾನುಗ್ರಹಗಳ ಪ್ರಭಾವಶಾಲಿ ಪರಿಣಾಮಕ್ಕೆ ಇದುವೇ ವೈಜ್ಞಾನಿಕ ವಿವರಣೆಯಾಗಿದೆ. ಆದ್ದರಿಂದ ತ್ಯಾಗ ತಪಸ್ಸುಗಳ ಹುಚ್ಚಿನಿಂದ ತನ್ನನ್ನು ಬಿಟ್ಟು ಓಡಿಹೋದ ಮಗನ ಅಥವಾ ಪತಿಯ ವರ್ತನೆಯಿಂದ ಅತಿಯಾಗಿ ನೊಂದು ಬೆಂದ ಮನಸ್ಸುಳ್ಳ ತಾಯಿಯ ಅಥವಾ ಪತ್ನಿಯ ನಿಟ್ಟುಸಿರು ನಿನ್ನನ್ನು ದಳ್ಳುರಿಯಂತೆ ಬೆನ್ನಟ್ಟಿ ಬರಬಹುದು. ಹಿಮಾಲಯದಲ್ಲಿ ನೀನು ನಿನ್ನ ಮನಸ್ಸನ್ನು ನಿರ್ವಿಕಲ್ಪ ಸಮಾಧಿಯಲ್ಲಿ ನಿಲ್ಲಿಸಬೇಕೆಂದು ಪ್ರಯತ್ನ ಪಟ್ಟರೂ ಸಹ ಬನವಾಸಿಯಲ್ಲಿಯ ನಿನ್ನ ಅಮ್ಮನು ಅಥವಾ ಹೆಂಡತಿಯು ನಿನ್ನ ದೆಸೆಯಿಂದ ಶೋಕತಪ್ತಳಾಗಿ ಬಿಡುತ್ತಿರುವಬಿಸಿಯುಸಿರು ಸಮಾಧಿಯಲ್ಲಿ ನಿನ್ನ ಮನಸ್ಸಿನ ಬೆಸುಗೆಯನ್ನು ಬಿಚ್ಚಿ ಚಿತ್ತವು ತುರಿಯ ಸ್ಥಿತಿಯಿಂದ ಜರ್ರನೇ ಹೊರಗೆ ಬರುವಂತೆ ಮಾಡುತ್ತದೆ.
ಆದ್ದರಿಂದ ನೀನೀಗ ನಿನ್ನ ಊರಿಗೆ ಹೋಗಿ ಯಾರಿಗೂ ವಿರೋಧವಾಗದಂತೆ ನಿನ್ನ ಅನುಷ್ಠಾನ ಮಾಡುತ್ತ ಎಲ್ಲರೂ ಮೆಚ್ಚುವಂತೆ ಗೃಹ ಧರ್ಮವನ್ನು ಆಚರಿಸುವುದು ಶ್ರೇಯಸ್ಕರವಾಗಿದೆ. ಅಧ್ಯಾತ್ಮಿಕ ಲೋಕದಲ್ಲಿ ನಿನಗೆ ಜನ್ಮಾಂತರ ಋಣಾನು ಸಂಬಂಧವಿರುವ ಸದ್ಗುರುವು ನಿನ್ನ ನಾಲ್ಕತ್ತೂರನೆಯ ವಯಸ್ಸಿನಲ್ಲಿ ನಿನ್ನ ಮನೆಗೆ ಅವನಾಗಿಯೇ ಬಂದು ನಿನ್ನನ್ನು ಅನುಗ್ರಹಿಸಿ ನಿನ್ನ ಮನಸ್ಸಿಗೆ ಪೂರ್ಣಶಾಂತಿಯನ್ನು ನೀಡುತ್ತಾನೆ ಮಗೂ! ಇಷ್ಟು ಹೊತ್ತು ಏಕಾಗ್ರ ಚಿತ್ರದಿಂದ ಬೋಧೆಯನ್ನು ಕೇಳಿರುವೆ. ಇದರಿಂದ ನಿನ್ನ ಸಂಶಯಗಳು ಸಮಸ್ಯೆಗಳು ದೂರವಾದವೇ? ನಿನ್ನ ಸಮಸ್ಯೆಗಳಿಗೆ ಸರಿಯಾದ ಉತ್ತರ ಸಿಕ್ಕಿತೆ ? ಸಮಾಧಾನವಾಯಿತೆ? ತಪ್ಪು ತಿಳುವಳಿಕೆ ಕರಗಿತೆ? ನಿನ್ನ ಮುಂದಿನ ಜೀವನದ ಗತಿಯೇನೆಂದು ನಿಶ್ಚಯ ಮಾಡಿದೆ? ಈ ಬೋಧೆಯನ್ನಲ್ಲಾ ಕೇಳಿದ ಮೇಲೆ ನಿನ್ನ ಇಚ್ಛೆಯಂತೆ ನಡೆದುಕೊಳ್ಳಲು ನೀನು ಸ್ವತಂತ್ರನಾಗಿರುವಿ. ಯಾವುದಕ್ಕೂ ಬದ್ದನಾಗಬೇಕಾಗಿಲ್ಲ. ವಸ್ಸ ಈ ಗುರುಪ್ರಸಾದವನ್ನು ತೆಗೆದುಕೋ, ನಿನಗೆ ಧರ್ಮ ಅರ್ಥ, ಕಾಮ ಮೋಕ್ಷ ಎಂಬೀ ನಾಲ್ಕು ಬಗೆಯ ಪುರುಷಾರ್ಥಗಳು ಸಿದ್ಧಿಯಾಗಲಿ. ನಿನಗೆ ಶುಭವಾಗಲಿ. ಹೀಗೆಂದು ಪ್ರೀತಿಯಿಂದ ಫಲಪುಷ್ಪ ಪ್ರಸಾದಗಳನ್ನು ದತ್ತನಿಗೆ ಕೊಟ್ಟು ಅನುಗ್ರಹಿಸಿದರು. ದತ್ತನು ಸಿದ್ಧನಿಗೆ ದೀರ್ಘದಂಡ ನಮಸ್ಕರಿಸಿ ಎದ್ದು ನಿಂತು ತಾನು ತಂದಿಟ್ಟುಕೊಂಡಿದ್ದ ಫಲಗಳನ್ನು ಗುರುವಿಗೆ ಸಮರ್ಪಿಸಿ ಗದ್ಗದ ಕಂಠದಿಂದ ಹೀಗೆ ಭಿನ್ನವಿಸಿದನು `ಗುರುದೇವ! ಕರುಣಾಳುಗಳಾದ ತಮ್ಮ ಅನುಗ್ರಹದಿಂದ ನನ್ನಲ್ಲಿ ಇಲ್ಲಿಗೆ ಬರಲು ಪ್ರೇರಣೆಯಾಯಿತು. ತಾವು ಊಹಿಸಿದಂತೆ ನಾನೇನಾದರೂ ಹುಚ್ಚೆದ್ದು ಹಿಮಾಲಯಕ್ಕೆ ಹೋಗಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಆ ಅನರ್ಥವನ್ನು ತಪ್ಪಿಸಿ, ನಿಮ್ಮ ಕರುಣೆಯ ಕಂದನಾದ ನನ್ನನ್ನು ಇಲ್ಲಿಗೆ ಬರುವಂತೆ ಕರೆಯಿಸಿಕೊಂಡು ಭೋಧಿಸಿ  ಉದ್ವಾರ ಮಾಡಿದಿರಿ. ತಮ್ಮ ಉಪದೇಶದಿಂದ ನನ್ನ ಸಂದೇಹಗಳು ನಿವಾರಣೆಯಾದವು. ಎಲ್ಲ ಕಾಮನೆಗಳು ಬಿಟ್ಟು ಹೋದವು. ಆದ್ದರಿಂದ ತಮ್ಮಾಜ್ಞೆಯಂತೆ ನಡೆದುಕೊಳ್ಳುವ ಬುದ್ಧಿಶಕ್ತಿಯನ್ನು ದಯಪಾಲಿಸಿರಿ' ಎಂದು ಬೇಡಿಕೊಂಡು ದೀರ್ಘದಂಡ ನಮಿಸಿ ಸಿದ್ಧನನ್ನು ಪ್ರೇಮದ ಕಣ್ಣುಗಳಿಂದ ನೋಡಿ ಅಲ್ಲಿಂದ ಬನವಾಸಿಗೆ ನಡೆದನು.
ಸಿದ್ಧನಿಂದ ಅನುಗ್ರಹ ಪಡೆದು ದತ್ತನು ಬನವಾಸಿಗೆ ಬಂದು ಗುರುವಾಜ್ಞೆ ಪಾಲಿಸುವುದೊಂದೇ ನನ್ನ ಕರ್ತವ್ಯವೆಂದು ತಿಳಿದು ವ್ಯವಹಾರಕ್ಕೆ ತೊಡಗಿದನು. ಸಂಸಾರ ಜೀವನದಲ್ಲಿ ಮತ್ತು ಪಾರಮಾರ್ಥ ಸಾಧನೆಯಲ್ಲಿ ವೈದಿಕ ಅನುಷ್ಠಾನದಲ್ಲಿ ಮತ್ತು ಮಧುಕೇಶ್ವರ ದೇವಸ್ಥಾನದ ಕುಲಕರ್ಣಿಕೆಯು ದತ್ತನ ಮನೆತನಕ್ಕೆ ಸೇರಿದ್ದರಿಂದ ಎಲ್ಲ ಕಾರ್ಯಗಳನ್ನು ದಕ್ಷತೆಯಿಂದ ಮಾಡುತ್ತಿರುವುದರಿಂದ ತಂದೆ ತಾಯಿ ಬಂಧು ಬಳಗ ಮತ್ತು ಊರ ಜನರೂ ಸಂತೋಷಗೊಂಡರು. ಒಂದಾದರೂ ಪುತ್ರ ಸಂತಾನವಾದೊಡನೆ ಸಂಸಾರ ತ್ಯಾಗ ಮಾಡಬಹುದೆಂದು ಸಿದ್ಧಾರೂಢರು ಹೇಳಿದಂತೆ ದತ್ತನಿಗೆ ಮೊದಲೇ ಹೆಣ್ಣು ಮಕ್ಕಳಾದವು. ಕೊನೆಗೆ ಆತನಿಗೆ ಎರಡು ಗಂಡು ಮಕ್ಕಳಾದವು. ಒಮ್ಮೆ ತಂದೆ ತಾಯಿ ಕುಟುಂಬ ಸಹಿತ ಕಾಶಿಯಾತ್ರೆಗೆ ಹೋದರು. ಅಕಸ್ಮಾತ್ ಅಲ್ಲಿ ತಾಯಿ ಭಾಗೀರಥಿ ಬಾಯಿಯು ನಿಧನಳಾದಳು. ಆಗ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಿ ಮನೆಗೆ ಬಂದರು. ಈ ನಡುವೆ ಬಿಡುವು ಮಾಡಿಕೊಂಡು ಹುಬ್ಬಳ್ಳಿಗೆ ಹೋಗಿ ಪೂಜ್ಯ ಸಿದ್ದಾರೂಢರ ದರ್ಶನ ಮಾಡಿಕೊಂಡು ಬರುತ್ತಿದ್ದನು.
ದತ್ತನಿಗೆ ಸಗುಣ ಸಾಕ್ಷಾತ್ಕಾರವಾಗಿ ವಿಶ್ವವಲ್ಲಾ ದತ್ತ ಸ್ವರೂಪವಾಗಿ ಕಂಡರೂ ಸಹ ಒಂದೊಂದು ಸಲ ಸಂಶಯಗಳು ಬರುತ್ತಿರುವುದರಿಂದ ಮನಸ್ಸಿಗೆ ಪೂರ್ಣ ಶಾಂತಿಯಿರಲಿಲ್ಲ. ಒಂದು ದಿವಸ ಬೆಳಗಿನ ಜಾವದಲ್ಲಿ ಸ್ನಾನ ಮಾಡಿ ಸಮಾಧಿನಾದಾಗ `ಇನ್ನು ಮೂರು ದಿವಸಗಳಲ್ಲಿ ನಿನ್ನ ಗುರುವು ಬರುತ್ತಾನೆ' ಎಂದು ಚಿದಾಕಾಶದಲ್ಲಿ ತಾನಾಗಿಯೇ ಸ್ಪುರಣವಾಯಿತು. ಒಂದು ದಿವಸ ದೇವಾಲಯದ ಹೊರಗೆ ಎತ್ತರವಾದ ಕಟ್ಟೆಯ ಮೇಲೆ ಕುಳಿತಿರುವ ದಿವ್ಯಮೂರ್ತಿಯ ದರ್ಶನವಾಯಿತು. ದತ್ತನು ಒಮ್ಮೆಲೇ ಚಕಿತನಾಗಿ ನಿಂತನು. ಆಗ ದತ್ತನ ಚಿತ್ತವು ಆನಂದದಲ್ಲಿ ಮುಳುಗಿತು. ದತ್ತನು ಕೈಮುಗಿದು `ಮಹಾತ್ಮರಾದ ತಾವು ಇಲ್ಲಿಗೆ ಬರುವಿರೆಂದು ದೈವಾನುಗ್ರಹದಿಂದ ಮೊದಲೇ ತಿಳಿದಿದ್ದು ತಮ್ಮನ್ನು ಕುಟೀರಕ್ಕೆ ಕರೆದೊಯ್ಯಲು ಬಂದಿದ್ದೇನೆ. ದಯವಿಟ್ಟು ಬರಬೇಕು' ಎಂದೊಡನೆ ಆ ಯತಿಗಳು ಶಿಷ್ಯನ ಮಂದಿರಕ್ಕೆ ತೆರಳಿದರು. ಅಲ್ಲಿ ಗುರುಗಳಿಗೆ ಸತ್ಕರಿಸಿದನು. ಅವರೇ ದತ್ತನ ಸದ್ಗುರು ಸಹಚಾನಂದರು ಅವರು ತಮ್ಮ ಮಮಾಮನ ಮುರಿದು ದತ್ತನಿಗೆ ಅಧ್ಯಾತ್ಮಿಕ ವ್ಯಕ್ತಿತ್ವದ ಸೂಕ್ಷ್ಮ ಪರಿಚಯ ಮಾಡಿಕೊಟ್ಟರು. ಆಗ ದತ್ತನು ತನ್ನ ಪೂರ್ವಾಶ್ರಮದ ವೃತ್ತಾಂತ ಮತ್ತು ಶ್ರೀ ಸಿದ್ಧಾರೂಢರ ಉಪದೇಶ, ಅವರ ಭವಿಷ್ಯವಾಣಿಯನ್ನು ವಿವರಿಸಿದನು. ಆಗ ಸಹಜಾನಂದರು ಗುರುಕೃಪೆಯಿಂದ ಉತ್ತಮ ಅಧಿಕಾರಿ ದೊರೆತನೆಂದು ತಿಳಿದು ಸಂತೋಷಪಟ್ಟರು. ಮುಂದೆ ದತ್ತನು ತನ್ನ ಮನೆಯ ಹಿಂದಿನ ವಿಸ್ತಾರವಾದ ಹಿತ್ತಲ ತುದಿಯಲ್ಲಿ ತನ್ನ ಗುರು ಸಹಜಾನಂದರಿಗೆ ಒಂದು ಕುರ ಕಟ್ಟಿಸಿಕೊಟ್ಟನು.
ಅಲ್ಲಿ ಸಹಜಾನಂದರು ದತ್ತನನ್ನು ನಾನಾ ರೀತಿಯಿಂದ ಪರೀಕ್ಷಿಸಿ ಅತ ತತ್ವದ ಸೂಕ್ಷಾಂಶಗಳನ್ನು ಎಳೆಎಳೆಯಾಗಿ ಬಿಡಿಸಿ ಬೋಧ ಮಾಡಿದರು. ಆಗ ಅವನ ಕಣ್ಣುಗಳು ಮುಚ್ಚಿದವು. ದೇಹವು ನಿಷ್ಪಂದನವಾಯಿತು. ಚಿತ್ತವು ಸ್ವರೂಪದಲ್ಲಿ ಮುಳುಗಿ ದತ್ತನು ಮೈಮರೆತು ಕುಳಿತನು. ಬಳಿಕ ಮೆಲ್ಲನೇ ಎದ್ದು ಗುರುವಿಗೆ ನಮಸ್ಕರಿಸಿದನು. ಹೀಗೆ ಗುರುಬೋಧೆಯಿಂದ ದತ್ತನು ಧನ್ಯನಾದನು. ಮುಂದೆ ದತ್ತನು ಗುರುವಿನ ಉಪದೇಶವನ್ನು ಮನ್ನಿಸಿ ತನ್ನ ತಪೋಮಂದಿರದಲ್ಲಿ ವೇದಾಂತ ಗ್ರಂಥಗಳನ್ನಿಟ್ಟುಕೊಂಡು ವ್ಯಾಖ್ಯಾನ ಮಾಡಲು ಪ್ರಾರಂಭಿಸಿದನು. ಕೆಲವು ವರ್ಷ ನಿಜಗುಣರ ಪರಮಾನುಭವ ಬೋಧೆ, ಪರಮಾರ್ಥಗೀತೆ, ಯೋಗವಾಶಿಷ್ಟ ಮುಂತಾದ ಗ್ರಂಥಗಳನ್ನು ಬೋಧ ಮಾಡುತ್ತ ಲೋಕೋದ್ಧಾರ ಕಾರ್ಯ ಮಾಡತೊಡಗಿದನು. ಮುಂದೆ ತನ್ನ ಪುತ್ರ ಗುರುನಾಥರಾಯರಿಗೆ ಮನೆತನದ ವ್ಯವಹಾರ ವಹಿಸಿಕೊಟ್ಟು ನಿಸ್ಸಂಗನಾದನು.


ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ