ಮುತ್ಯಾನ ಮನೆಯಲ್ಲಿ ಸಿದ್ದರ ಊಟ
🌺 ಮುತ್ಯಾನ ಮನೆಯಲ್ಲಿ ಸಿದ್ದರ ಊಟ 🌺
ಮಠದಲ್ಲಿ ಎಲ್ಲ ಜಾತಿಯ ಜನರು ಬರುತ್ತಿದ್ದರು. ಅವರೆಲ್ಲರನ್ನು ಸಿದ್ದರು ಸಮಾನ ದೃಷ್ಟಿಯಿಂದ ನೋಡಿಕೊಳ್ಳುತ್ತಿದ್ದರು. ಹಳೇಹುಬ್ಬಳ್ಳಿಯಲ್ಲಿ ಮುತ್ಯಾ ಎಂಬ ಒಬ್ಬ ಮಾದಿಗನಿದ್ದನು. ಆರೂಢರ ಮೇಲೆ ಅವನ ಅಪಾರ ಭಕ್ತಿಯಿತ್ತು. ಅವನು ದಿನಾಲು ಮಠದ ಅಂಗಳದ ಕಸಗೂಡಿಸುವ ಕೆಲಸ ಮಾಡುತ್ತಿದ್ದನು. ಅವನ ಮುಖದಲ್ಲಿ ಯಾವಾಗಲೂ ಓಂ ನಮಃ ಶಿವಾಯ ಮಂತ್ರ ಮಿಡಿಯುತ್ತಿತ್ತು. ಯಾರಾದರೂ ಏನಾದರೂ ಪ್ರಶ್ನಿಸಿದರೆ ಅವನು ಮೊದಲು ಶಿವಾಯನಮಃ ಮಂತ್ರ ನುಡಿದ ನಂತರವೇ ಅವರಿಗೆ ಉತ್ತರ ಕೊಡುತ್ತಿದ್ದನು. ಯಾರು ಭೇಟಿಯಾದರೂ ಮಂತ್ರ ಉಚ್ಚರಿಸಿ ಕೈ ಮುಗಿಯುತ್ತಿದ್ದನು.
ಒಂದು ದಿವಸ ಮಧ್ಯಾಹ್ನ ಸಮಯ ಮುತ್ಯಾನು ಮಠದ ಹತ್ತಿರದ ಗುಡ್ಡದ ಬುಡದಲ್ಲಿ ಕುಳಿತು ಜೋರಾಗಿ ಅಳಹತ್ತಿದನು. ಅವನ ಆರ್ತನಾದವು ಶಯನ ಗೃಹದಲ್ಲಿದ್ದ ಸಿದ್ಧರಿಗೆ ಕೇಳಿದ ತಕ್ಷಣ ಎದ್ದು ಅವನ ಹತ್ತಿರ ಹೋಗಿ `ಮುತ್ಯಾ, ಈ ರೀತಿ ಅಳಲು ನಿನಗೇನಾಯಿತೋ?' ಎಂದು ಪ್ರಶ್ನಿಸಿದಾಗ ಅವನೆಂದನು 'ತಂದೆ, ತಮ್ಮ ಕೃಪೆಯಿಂದ ನನಗೆ ಯಾವುದಕ್ಕೂ ಕೊರತೆಯಿಲ್ಲ. ಆದರೆ ಒಂದೇ ಒಂದು ವಿಷಯದಲ್ಲಿ ದುಃಖವಾಗುತ್ತದೆ. ಅದೇನೆಂದರೆ ಎಲ್ಲರೂ ನಿನ್ನನ್ನು ಹತ್ತಿರದಿಂದ ದರ್ಶನ ಪಡೆಯುತ್ತಾರೆ. ಕೆಲವರು ನಿನ್ನನ್ನು ಊಟಕ್ಕೆ ಆಮಂತ್ರಿಸಿ ನೈವೇದ್ಯ ಅರ್ಪಿಸುತ್ತಾರೆ. ನಾನು ಪಾಪಿಯಿದ್ದುದರಿಂದ ನನ್ನ ಜನ್ಮವು ಮಾದಿಗರ ಕುಲದಲ್ಲಾಯಿತು. ಇದು ನನ್ನ ಕರ್ಮದ ಫಲವೇ ಆಗಿದೆ. ಯಾರಿಗೂ ದೋಷ ಕೊಡಲು ಬರುವುದಿಲ್ಲ. ಮುಂದಿನ ಜನ್ಮದಲ್ಲಾದರೂ ಒಳ್ಳೆಯ ಕುಲದಲ್ಲಿ ಹುಟ್ಟಿಸು ಎಂದು ದೇವರಲ್ಲಿ ಬೇಡಿಕೊಳ್ಳುತ್ತ ಅಳುತ್ತಿದ್ದೇನೆ' ಎಂದನು.
ಮುತ್ಯಾನ ಮಾತಿನಿಂದ ಸಿದ್ಧರ ಹೃದಯ ಕರಗಿ ಅವರೆಂದರು `ಮುತ್ಯಾ , ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ. ಈಗಲಾದರೂ ಸಮಾಧಾನವಾಯಿತೆ? ಏಳು ಮನೆಗೆ ಹೋಗು' ಎಂದು ಹೇಳಿ ಸಿದ್ಧರು ಮಠಕ್ಕೆ ಹೋದರು. ನಂತರ ಮುತ್ಯಾನು ತನ್ನ ಹೆಗಲ ಮೇಲಿನ ವಸ್ತ್ರದಿಂದ ಕಣ್ಣೀರೊರೆಸಿಕೊಳ್ಳುತ್ತ ಮನೆಗೆ ಹೊರಟನು. ಆಗ ಅವನ ಸಂತೋಷಕ್ಕೆ ಪಾರವೇ ಇಲ್ಲ. ಮನೆಗೆ ಹೋಗಿ ಹೆಂಡತಿಗೆ ಹೇಳಿದ ತಕ್ಷಣ ಅವಳೂ ಆನಂದಭರಿತಳಾದಳು. ಮರುದಿನ ಅವಳು ಮನೆ ಸಾರಿಸಿ ರಂಗೋಲಿ ಹಾಕಿ ನೈವೇದ್ಯ ಸಿದ್ಧಪಡಿಸಿದಾಗ ಹನ್ನೆರಡು ಗಂಟೆಯಾಗುತ್ತ ಬಂದಿತು. ಮುತ್ಯಾ ಮತ್ತು ಅವನ ಪತ್ನಿ ಪೂಜಾ ಸಾಮಗ್ರಿಗಳನ್ನು ಸಿದ್ದಪಡಿಸಿ ನಾಮಸ್ಮರಣೆ ಮಾಡುತ್ತ ಸಿದ್ಧರ ಬರುವಿಕೆಗಾಗಿ ಕಾಯಹತ್ತಿದರು. ಮಠದಲ್ಲಿ ಪ್ರತಿನಿತ್ಯ ಸಿದ್ಧರು ಸುಮಾರು ಹನ್ನೆರಡು ಗಂಟೆಗೆ ಊಟ ತೀರಿಸಿ ವಿಶ್ರಾಂತಿಗಾಗಿ ಶಯನ ಮಂದಿರಕ್ಕೆ ಹೋಗುತ್ತಿದ್ದರು. ಆಗ ಆನೆ ರಾಮಪ್ಪ ಮತ್ತು ಖಂಡಭೀಮಪ್ಪ ಇಬ್ಬರೂ ಬಾಗಿಲಿನ ಹೊರಗೆ ಪಹರೆ ಮಾಡುತ್ತಿದ್ದರು. ಸಿದ್ದರ ವಿಶ್ರಾಂತಿಯ ನಂತರ ಅವರ ಸೇವೆಯಲ್ಲಿರುತ್ತಿದ್ದನು.
ಇದೇ ರೀತಿ ಭದ್ರ ಕಾವಲಿರುತ್ತಿದ್ದರೂ ಮುತ್ಯಾನಿಗೆ ವಚನಕೊಟ್ಟ ಪ್ರಕಾರ ಮುತ್ಯಾನ ಮನೆಗೆ ಹೋದರು. ಸಿದ್ಧನನ್ನು ನೋಡಿದ ಕೂಡಲೇ ಆ ಭಾವಿಕ ದಂಪತಿಗಳಿಗೆ ಅಪಾರ ಆನಂದವಾಯಿತು. ಆಮೇಲೆ ಸಿದ್ಧರನ್ನು ಆಸನದಲ್ಲಿ ಕೂಡಿಸಿ ಷೋಡಶೋಪಚಾರದಿಂದ ಪೂಜಿಸಿ ನೈವೇದ್ಯ ಅರ್ಪಿಸಿದರು. ಭೋಜನ ಮುಗಿದ ಮೇಲೆ ಸಿದ್ದರು ಕೈತೊಳೆದುಕೊಳ್ಳಲು ಹೊರಗೆ ಬಂದಾಗ ಸಿದ್ಧರ ಭಕ್ತನಾದ ಸಿದ್ದಪ್ಪನೆಂಬವನು ಊರಲ್ಲಿ ಭಿಕ್ಷೆ ಬೇಡಿಕೊಂಡು ಮಠಕ್ಕೆ ಹೊರಟಾಗ ಸಿದ್ಧರನ್ನು ನೋಡಿದಂತಾಯಿತು. ಆದರೂ ಮುಂದೆ ನಡೆಯುತ್ತಿರುವಾಗ ಸಂಶಯ ಬಂದು ನಿಜಾಂಶ ತಿಳಿಯಬೇಕೆಂದು ಮುತ್ಯಾನ ಮನೆಗೆ ಬಂದು ಅವನಿಗೆ ಕೇಳಿದನು `ಮುತ್ಯಾ ಸಿದ್ದರು ಈಗ ನಿಮ್ಮ ಮನೆಗೆ ಬಂದಿದ್ದರೇನು?' ಎಂದಾಗ ಮುತ್ಯಾ ಹೇಳಿದ ಹೌದು, ಗುರುನಾಥನು ಈ ಬಡವನ ಮನೆಗೆ ಬಂದು ನೈವೇದ್ಯ ಸ್ವೀಕರಿಸಿ ಹೋದನು' ಎಂದು ನಿಜ ಸಂಗತಿ ಹೇಳಿದನು.
ನಂತರ ಭಕ್ತ ಸಿದ್ಧಪ್ಪನು ಮಠಕ್ಕೆ ಬಂದು ತಾನು ನೋಡಿದ ಸಂಗತಿಯನ್ನು ಎಲ್ಲರಿಗೂ ಹೇಳಿದಾಗ, ರಾಮಪ್ಪ ಮತ್ತು ಭೀಮಪ್ಪ ಭಕ್ತ ಸಿದ್ಧಪ್ಪನ್ನು ಕುರಿತು `ಸಿದ್ಧಪ್ಪಾ, ಆರೂಢರು ವಿಶ್ರಾಂತಿ ಪಡೆಯುತ್ತಿದ್ದು, ಬಾಗಿಲು ಮುಚ್ಚಿದೆ . ನಾವಿಬ್ಬರೂ ಕಾವಲು ಇದ್ದೇವೆ. ನೀನು ಹೇಳುವುದು ಶುದ್ಧ ಸುಳ್ಳು, ಮೂರ್ಖತನದಿಂದ ಏನೋ ಹೇಳುತ್ತಿರುವಿ' ಎಂದರು. ಆಗ ಸಿದ್ಧಪ್ಪನು ತನ್ನ ಮನದಲ್ಲಿ ಇದೆಲ್ಲ ಸದ್ಗುರುವಿನ ಮಹಿಮೆಯಾಗಿದ್ದು ಎಲ್ಲರಿಗೂ ತಿಳಿಯಲಾರದು' ಎಂದುಕೊಂಡು ತನ್ನ ಸೇವೆಗೆ ನಡೆದನು
.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
