ಸಿದ್ಧಾರೂಢರ ಅನುಗ್ರಹದಿಂದ ತಮಣ್ಣಶಾಸ್ತ್ರೀ 13ಕೋಟಿ ರಾಮ ಜಪ ಮಾಡಿಸಿ 10 ಸಾವಿರ ಜನಕ್ಕೆ ಪ್ರಸಾದ ವಿತರಣೆ
🌳ತಮ್ಮಣ್ಣಶಾಸ್ತ್ರಿಗೆ ಸಿದ್ಧರ ಬೋಧನೆಯ ನಾಮಜಪದಿಂದ ಶ್ರೀರಾಮ ದರ್ಶನವಾದದ್ದು. ಸಿದ್ಧರಾಯರ ಅನುಗ್ರಹದಿಂದ 13ಕೋಟಿ ರಾಮ ಜಪ ಮಾಡಿಸಿ ಸಾವಿರ ಸಾವಿರ ಜನಕ್ಕೆ ಪ್ರಸಾದ ಕೊಟ್ಟಿದು,
ಸರ್ವ ಭಕ್ತರಲ್ಲಿ ಅಗ್ರಗಣಿಯಾಗಿಯೂ, ಸಂತರೊಳಗೆ ಮುಕುಟಮಣಿಯಾಗಿಯೂ, ಜ್ಞಾನಿಗಳಲ್ಲಿ ಶಿರೋಮಣಿಯಾಗಿಯೂ, ಗುಣಖಣಿಯಾದ ತಮ್ಮಣ್ಣ ಶಾಸ್ತ್ರಿ ಇರುವನು. ಈತನ ಮೂಲ ಸ್ಥಾನವು ನವಲಗುಂದ ಗ್ರಾಮವು, ಹುಬ್ಬಳ್ಳಿಯೊಳಗೆ
ಬಂದು ಮಹಾ ಪ್ರೇಮೋದ್ದೀಪನವಾಗುವ ರೀತಿಯಿಂದ ಪುರಾಣ ಹೇಳುತ್ತಾ ಅಸಂಖ್ಯ ಜನರನ್ನು ಇವನು ಉದ್ಧರಿಸುತ್ತಿರುವನು. ಇಂಥಾ ಅಭಂಗವಾದ ಪ್ರೇಮ ಉಳ್ಳ ತಮ್ಮಣ್ಣ ಶಾಸ್ತ್ರಿಯು ಪುರಾಣ ನಿರೂಪಣೆ ಮಾಡುತ್ತಿರುವಾಗ ಪ್ರೇಮರಂಗವೇ ಉದ್ಭವಿಸಿ, ಭೋಳೆ ಭಾವಿಕ ಜನರಿಗೆ ಈ ಪುರಾಣ ಶ್ರವಣವು ಉತ್ತಮ ರೀತಿಯಿಂದ ತಾರಕವಾಗುತ್ತಿರುವದು, ನಿರಭಿಮಾನವೇ ಮೂರ್ತಿಮಂತವೆಂಬಂತೆ ಆತನಿದ್ದು ಅಖಂಡಿತವಾದ ವೈರಾಗ್ಯಯುಕ್ತನಾಗಿ ಸಮಸ್ತ ವಾಸನೆಗಳನ್ನು ಸುಟ್ಟಿರುವನು. ಆದರೂ ಲೋಕದಲ್ಲಿ ವಿರಕ್ತಿ ಪ್ರಕಟ ಮಾಡುವದಕ್ಕೋಸ್ಕರ ಶಾಸ್ತ್ರಿಯು ವೈರಾಗ್ಯಭರಿತನಾಗಿ ಒಮ್ಮೆ ಶ್ರೀ ಸಿದ್ದಾರೂಡರ ಬಳಿಗೆ ಬಂಧು, ಬಹು ದೀನ ಭಾವದಿಂದ ಅವರ ಚರಣಕ್ಕೆರಗಿ, - “ಹೇ ಸಿದ್ಧಾರೂಢನೇ ನೀನು ಜ್ಞಾನರಾಶಿ ಇದ್ದಿ. ಮುಮುಕ್ಷು ಜನರಿಗೆ ನೀನು ಆಶ್ರಯ ಸ್ಥಾನವಾಗಿದ್ದು, ನಿನ್ನ ಚರಣಾಶ್ರಯವನ್ನು ಹೊಂದಿ, ಅವರು ಅಭಂಗವಾದ ಪದಕ್ಕೆ ಪ್ರಾಪ್ತರಾಗುವರು. ಸಂಸಾರದಲ್ಲಿ ವಿರತಿಯನ್ನು ಹೊಂದಿದವರಿಗೆ, ನಿನ್ನ ಹೊರತು ಸರ್ವಥಾ ಗತಿ ಇಲ್ಲವೆಂದು ನಿನ್ನ ಅಗಾಧ ಕೀರ್ತಿಯನ್ನು ಕೇಳಿ, ನಾನು ನಿನ್ನ ಚರಣಕ್ಕೆ ಶರಣು ಬಂದಿರುವೆನು. ನಾನು ಸಂಸಾರದೊಳಗೆ ಬಹಳ ತೃಪ್ತನಾದೆ. ಅದರೊಳಗೆ ಕಿಂಚಿತ್ ಮಾತ್ರವಾದರೂ ಸುಖ ಇಲ್ಲವು. ಆದರೆ ಏನು ಮಾಡಿದರೂ ಅದು ಬಿಡುವುದು ಇಲ್ಲ, ಎಂದು ತಿಳಿದು ನಿನ್ನನ್ನೇ ಮೊರೆ ಹೊಕ್ಕಂಥ ನನ್ನನ್ನು ಉದ್ಧರಿಸಬೇಕು', ಎಂದು ಪ್ರಾರ್ಥಿಸಿದನು.
ಈ ಪ್ರಕಾರ ಕರುಣಾ ವಚನವನ್ನು ಕೇಳಿ, ಆ ಸಿದ್ದ ದಯಾಘನನು ಕೃಪೆಯಿಂದ ದ್ರವಿಸುವಂಥವನಾಗಿ, 'ತಮ್ಮಣ್ಣ ಶಾಸ್ತ್ರಿಯನ್ನು ಕುರಿತು ಈ ಪ್ರಕಾರ ಅಮೃತ ವಚನವನ್ನು
ವರ್ಷಿಸುವಂಥವನಾದನು, - “ಕೇಳಪ್ಪ ತಮ್ಮಣ್ಣ ಶಾಸ್ತ್ರಿಯೇ, ನೀನು ಈ ಧರಿತ್ರಿಯಲ್ಲಿ ವೈರಾಗ್ಯದ ಮೂರ್ತಿಯೇ ಇರುವಿ. ಅಂತರದೊಳಗೆ ನಿತ್ಯ ಜ್ಞಾನರೂಪನಾಗಿ ವರ್ತಿಸುತ್ತಿದ್ದರೂ, ಬಾಹ್ಯದಲ್ಲಿ ನರವೇಷ ಇರುವುದರಿಂದ ಆ ವೇಷಕ್ಕೆ ತಕ್ಕ
ಆಚರಣೆ ಇರಬೇಕೆಂದು, ಜನರಿಗೆ ದಾರಿ ತೋರಿಸಿ ತಾನು ನಡೆದು, ಈ ಪ್ರಕಾರ ಜನರನ್ನು ಉದ್ಧರಿಸಬೇಕೆಂದೂ, ಉಭಯ ಉದ್ದೇಶದಿಂದ ವೈರಾಗ್ಯವನ್ನು ಕೈಕೊಂಡಿರುತ್ತಿ. ಶ್ರೀರಾಮನು ವಸಿಷ್ಠನನ್ನು ಗುರು ಮಾಡಿಕೊಂಡನು. ಹಾಗೆಯೇ ಶ್ರೀ ಕೃಷ್ಣನಾದರೂ ಸಾಂದೀಪನನ್ನು ಗುರು ಮಾಡಿಕೊಂಡನು. ಮಹಾ ಪುರುಷರಿಗಾದರೂ ಗುರು ಬೇಕೇ ಬೇಕು ಎಂದು
ತೋರಿಸುವಂಥವರಾದರು. ಜನರ ಉದ್ಧಾರಕ್ಕೊಸ್ಕರ ವೈರಾಗ್ಯವನ್ನು ಆಚರಿಸಿ ತೋರಿಸುತ್ತಿ, ಎಂದು ನನಗೆ ಬಹಳ ಆನಂದವಾಗುತ್ತದೆ. ಆಚರಣೆಗಿಂತ ಅಧಿಕ ಉಪದೇಶವೇ ಇಲ್ಲ. ಈಗ ನಾನು ಹೇಳುವ ಪ್ರಕಾರ ಮಾಡು, ಗೊಂದವಲೆ ಪುರದಲ್ಲಿ ಬ್ರಹ್ಮಚೈತನ್ಯ ಮಹಾರಾಜರಿರುವರು. ಧರಿತ್ರಿಯೊಳಗೆಲ್ಲಾ ಕೀರ್ತಿಯಿಂದ ತುಂಬಿದಂಥ ಆ ಮಹಾತ್ಮರಿಗೆ ನೀನು ಶರಣು ಹೋಗು . ನಾನು ತಿರಸ್ಕಿರಿಸಿದೆನೆಂದು ತಿಳಿಯಬಾರದು. ಲೋಕ ಸಂಗ್ರಹಾರ್ಥವಾಗಿ ಹೀಗೆ ಹೇಳಿರುವೆನು. ಯಾಕೆಂದರೆ ಅಜ್ಞಾನಿ ಜನರ ವರ್ತನವನ್ನು ಬಲ್ಲವರು ರಕ್ಷಿಸತಕ್ಕದೆಂತ ಶ್ರೀ ಕೃಷ್ಣನು ಗೀತೆಯೊಳಗೆ ಹೇಳಿರುತ್ತಾನೆ'. ಇಂಥಾ ಅಮೃತ
ವಚನವನ್ನು ಕೇಳಿ, ಶಾಸ್ತ್ರಿಗೆ ಮನಸ್ಸಿನಲ್ಲಿ ಬಹಳ ಆನಂದವಾಯಿತು. ಅನಂತರ ಸಿದ್ಧ ಚರಣವನ್ನು ಮಸ್ತಕದಿಂದ ವಂದಿಸಿ, ಆಶೀರ್ವಾದವನ್ನು ಪಡೆದುಕೊಂಡು ಹೋಗುವಂಥವನಾದನು.
ಹರಿಭಕ್ತ ಪರಾಯಣನಾದ ತಮ್ಮಣ್ಣ ಶಾಸ್ತ್ರಿಯು ಗೊಂದವಲೆ ಕ್ಷೇತ್ರಕ್ಕೆ ಹೋಗಿ, ಆ ಮಹಾರಾಜರಿಗೆ ಭೇಟಿಯಾಗಿ ದಿನ ಭಾವದಿಂದ ನಮನ ಮಾಡಿದನು. ತನ್ನ ವೃತ್ತಾಂತವನ್ನೆಲ್ಲ ನಿವೇದಿಸಿ, - 'ಹೇ ದಯಾಳುವಾದ ಸದ್ಗುರುವೇ ನಿನ್ನನ್ನೇ
ಕುರಿತು ಶರಣು ಬಂದಿದ್ದೇನೆ. ದೀನನಾಥನಾಗಿ, ಸದ್ಗುರು ರಾಜನಾದಂಥ ನೀನೇ ನನ್ನ ಹಿತ ಏನೆಂಬುವದನ್ನು ನನಗೆ ತಿಳಿಸಬೇಕು,” ಎಂದು ನಮ್ರ ಭಾವದಿಂದ ಅಂದ ಕರುಣಾವಚನವನ್ನು ಕೇಳಿ, ಆ ಕೃಪಾಕರನು ಆತನ ಅಧಿಕಾರ ತಿಳಿದು, ಶಾಸ್ತ್ರಿಯನ್ನು ಕುರಿತು ಅಮೃತತುಲ್ಯವಾದ ವಾಣಿಯಿಂದ - ''ನಿನ್ನ ಸ್ಥಾನವಾದ ಹುಬ್ಬಳ್ಳಿಯಲ್ಲಿ ಸಿದ್ದಾರೂಢ ಮಹಾರಾಜರು ಇರುತ್ತಾರೆ. ಅವರೇ ನಿನ್ನನ್ನು ಇಲ್ಲಿಗೆ ಕಳುಹಿಸಿರುವರು. ಹಾಗಾದರೆ, -"ಶ್ರೀರಾಮ ಜಯ ರಾಮ ಜಯ ಜಯ ರಾಮ" ಎಂಬ ಈ ತ್ರಯೋದಶಾಕ್ಷರೀ ಮಂತ್ರವನ್ನು ಹದಿಮೂರು ಲಕ್ಷ ಸರ್ತಿ ಜಪಿಸುವ ನೇಮ ಮಾಡಿದರೆ, ಭವ ಭ್ರಮವು ನಿರಸನವಾಗುವುದು ಎಂದು ಉಪದೇಶಿಸಿದರು. ಕೂಡಲೇ ಶಾಸ್ತ್ರಿಯು ಏಕಾಂತದಲ್ಲಿ ಹೋಗಿ ಏಕಾಗ್ರ ಚಿತ್ರದಿಂದ ಆ ಮಂತ್ರದ ಪುನಶ್ಚರಣೆಯನ್ನು ಆರಂಭ ಮಾಡಿದನು. ಜಪಾಂತ್ಯದಲ್ಲಿ ಪ್ರತ್ಯಕ್ಷ ಶ್ರೀರಾಮನೇ ಬಂದು ಶಾಸ್ತ್ರಿಗೆ ದರ್ಶನವನ್ನು ಕೊಡುವಂಥವನಾದನು. ಕೋಟಿ ಸೂರ್ಯ ಪ್ರಕಾಶದಂಥ ದಿವ್ಯಜ್ಯೋತಿಯಿಂದ ವ್ಯಾಪಿಸಿರುವಂತೆ ಆ ರಾಮಮೂರ್ತಿಯು ಕಾಣಿಸುತ್ತಿತ್ತು. ತತ್ಕಾಲ ಶಾಸ್ತ್ರಿ ದೇಹಭಾನವು ತಪ್ಪಿ ಸಮಾಧಿ ಸ್ಥಿತಿಯನ್ನು ಹೊಂದಿದನು. ಶ್ರೀರಾಮ ದೇವರನ್ನು ನೋಡುತ್ತ ನೋಡುತ್ತ ಒಂದು ಘಳಿಗೆ ಪರ್ಯಂತ ದೇಹವನ್ನು ಮರೆತನು. ಆಮೇಲೆ
- “ಇದೇ ಪ್ರಕಾರ ನಿತ್ಯದಲ್ಲಿಯೂ ದರ್ಶನ ಲಾಭವಾಗಬೇಕು. ನನ್ನ ಜೀವಕ್ಕೆ ಮತ್ತೇನು ಒಲ್ಲೆ " ಎಂದು ಅಂದಿದ್ದಕ್ಕೆ ಶ್ರೀರಾಮನು - “ನನ್ನ ನಾಮದಿಂದಲೆ ದರ್ಶನ ಪ್ರಾಪ್ಯವು '' ಎಂದು ಆಶ್ವಾಸನವನ್ನಿತ್ತನು. ಆಗ ಶಾಸ್ತ್ರಿಯು ಆ ದೇವನಿಗೆ ನಮಸ್ಕಾರ ಮಾಡಿದನು. ಕೂಡಲೆ ಆ ರಾಮ ಮೂರ್ತಿ ಅಂತರ್ಧಾನವಾಯಿತು. ಸದ್ಗುರು ಕೃಪೆಯಿಂದ ಸಾಕ್ಷಾತ್ಕಾರವನ್ನು ಹೊಂದಿ, ಆ ಮಹಾರಾಜರ ಚರಣಗಳಲ್ಲಿ ಶಿರವನ್ನಿಟ್ಟು ನಮಸ್ಕರಿಸುವಾಗ್ಗೆ, ಶಾಸ್ತ್ರೀಯ ಹೃದಯದಲ್ಲಿ ಅಪಾರ ಪ್ರೇಮವು ಉಂಟಾಗಿ, ನೇತ್ರಗಳಿಂದ
ಜಲಧಾರಗಳು ಸುರಿಯುವಂಥವುಗಳಾದವು. ಆಗ್ಗೆ ಶಾಸ್ತ್ರಿಯನ್ನು ಕುರಿತು ಬ್ರಹ್ಮಚೈತನ್ಯ ಮಹಾರಾಜರು - “ನಿನ್ನನ್ನು ಸಚ್ಚಿದಾನಂದರಾದ ಸಿದ್ಧಾರೂಢರು ಇಲ್ಲಿಗೆ ಕಳುಹಿಸಿದರು. ಆದ್ದರಿಂದ ನಿನಗಾದರೂ “ಸಚ್ಚಿದಾನಂದ' ಈ ನಾಮವನ್ನು
ಕೊಟ್ಟಿರುತ್ತೆನೆ. ಈಗ ಹೋಗು, ಜನರನ್ನು ಉದ್ಧರಿಸುವವನಾಗು,'' ಎಂದು ಹೇಳಿದರು.
ಅನಂತರ ಸದ್ಗುರು ಆಜ್ಞೆಯನ್ನು
ಪಡೆದುಕೊಂಡು ಶಾಸ್ತ್ರಿಯು ಹುಬ್ಬಳ್ಳಿಗೆ ತಿರುಗಿ ಬಂದು, ಅನನ್ಯ ಭಾವದಿಂದ ಸಿದ್ಧಾರೂಢರ ಚರಣಗಳಿಗೆ ನಮಸ್ಕರಿಸಿ, - ''ಹೇ ದಯಾಳನೇ ನಿನ್ನಾಜ್ಞೆಯಿಂದ ಹೋದ ಕೂಡಲೇ ಸದ್ಗುರುಗಳು ನನಗೆ ತ್ರಯೋದಶಾಕ್ಷರೀ ಮಂತ್ರವನ್ನು ಉಪದೇಶಿಸಿದರು. ಅದರಿಂದ ನಾನು ಕೃತಕೃತ್ಯನಾದೆನು. ನಿನ್ನವೆ ಎಲ್ಲ ರೂಪಗಳಿರುವವು ಎಂದು ನನಗೆ ಪ್ರತೀತಿಯಾಗಿರುತ್ತದೆ. ಈಗ ಚಿತ್ತದಲ್ಲಿ ನಿರಭಿಮಾನ ಸ್ಥಿತಿ ಬರುವದಕ್ಕೆ ನನಗೆ ಯುಕ್ತಿಯನ್ನು ತೋರಿಸಬೇಕಾಗಿರುತ್ತದೆ,'' ಎಂದು ಪ್ರಾರ್ಥಿಸಿದನು. ಆಗ ಸಿದ್ಧಾರೂಢರು ನಗುತ್ತಾ - ''ಲೋಕಸಂಗ್ರಹಾರ್ಥ ಏನಾದರೂ ಮಾಡಬೇಕು. ಮನೆ ಮನೆಗೆ ಭಿಕ್ಷಾರ್ಥಿಯಾಗಿ ಹೋಗಿ
ಭಿಕ್ಷೆ ಲಭಿಸಿದ್ದರಿಂದ ಅನ್ನ ಸಂತರ್ಪಣೆ ಮಾಡಿಸಬೇಕು,'' ಎಂದು ಹೇಳಿದರು. ಅದಕ್ಕೆ ಸಚ್ಚಿದಾನಂದನು - “ಹಾಗಾದರೆ
ಭಿಕ್ಷೆ ಬೇಡಿ ಸಂಗ್ರಹ ಮಾಡಿಕೊಂಡು, ಶ್ರೀದಾಸ ನವಮಿ ಉತ್ಸವ ಆರಂಭಿಸಿ, ಆ ಕಾಲದಲ್ಲಿ ಅನ್ನಸಂತರ್ಪಣೆ ನಡೆಸುವೆನು” ಎಂದು ಉತ್ತರ ಕೊಟ್ಟನು. ಸದ್ಗುರು ಆಜ್ಞೆ ಪಡೆದುಕೊಂಡು ಮಹಾ ವೈಭವಯುಕ್ತವಾದ ಮಂಟಪವನ್ನು ನಿಂದಿರಿಸಿ, ಅಲ್ಲಿ ಏಳು ದಿನಗಳ ತನಕ ಕೀರ್ತನ ಮತ್ತು ರಾತ್ರಿ ಹಗಲು ಭಜನೆ ನಡೆಸುವ ವ್ಯವಸ್ಥೆಯಾಯಿತು. ದೂರ ದೂರ
ಪ್ರಾಂತಗಳಿಂದ ಹರಿ ದಾಸರ ಕೀರ್ತನೆಗೋಸ್ಕರ ಬಂದರು. ಅಸಂಖ್ಯ ಜನರ ಆ ಕಾಲದಲ್ಲಿ ಅಲ್ಲಿಗೆ ಬಂದು ಕೀರ್ತನಾನಂದವನ್ನು ಭೋಗಿಸುತ್ತಿದ್ದರು. ಇಂಥಾ ಆನಂದದ ಸಮಾರಂಭವು ಏಳು ದಿನಗಳ ತನಕ ನಡೆಯಿತು.
ಎಂಟನೇ ದಿನ ಸಮಾರಾಧನೆಯ ಸಲುವಾಗಿ ಸರ್ವ ವರ್ಣದವರಿಗೆ ಆಮಂತ್ರಣ ಕೊಟ್ಟಿತ್ತು. ಹತ್ತು ಸಾವಿರ ಜನರ ದೆಶೆಯಿಂದ ತಯಾರಿ ಮಾಡಿತ್ತು. ಪ್ರಥಮದಲ್ಲಿ ಕುಳಿತ ಎರಡು ಪಂಕ್ತಿಗಳಲ್ಲಿ ಎಂಟು ಸಾವಿರ ಜನರು ಉಂಡು ತೃಪ್ತರಾದರು. ಭೋಜನ ಕಾಲದಲ್ಲಿ ಸಿದ್ದರಾಯರು ಬಂದು ಆ ಮಹತ್ತಾದ ಸಮಾರಂಭವನ್ನು ನೋಡಿ, ಮನಸ್ಸಿನಲ್ಲಿ ಬಹಳ ಸುಖಪಟ್ಟು ಆನಂದ ವಚನವನ್ನು ಅನ್ನುತ್ತಾರೆ, - 'ತಮ್ಮಣ್ಣ ಶಾಸ್ತ್ರಿಯೇ ನೀನು ಧನ್ಯನು, ಧನ್ಯನು. ನೀನು ಧರಿತ್ರಿಯೊಳಗೆ ಖ್ಯಾತಿಯನ್ನು
ಮಾಡಿದಿ. ಭಿಕ್ಷೆಯಿಂದ ಇಂಥಾ ಸಮಾರಾಧನೆಯನ್ನು ಮಾಡಿದ್ದೆಂಬದು ನಿಶ್ಚಯವಾಗಿ ಬಹು ವಿಚಿತ್ರವಾಗಿದೆ. ಇದನ್ನು ಕೇಳಿ ಶಾಸ್ತ್ರಿಯು - 'ಹೇ ಸದ್ಗುರುನಾಥಾ, ಇದೆಲ್ಲಾ ನಿನ್ನದೇ ಕೃತಿ ಇರುವದು. ದೀನನಾದ ನನ್ನನ್ನು ಮುಂದಕ್ಕೆ ಮಾಡಿ, ಸರ್ವ ಕರ್ತೃತ್ವವನ್ನು ನೀನೇ ನಡಿಸುತ್ತಿ." ಎಂದು ಉತ್ತರ ಕೊಟ್ಟನು. ಪ್ರಥಮ ಪಂಕ್ತಿಗಳು ಎದ್ದ ಕೂಡಲೇ ಪುನಃ ಎಂಟು ಸಾವಿರ ಜನರು ಭೋಜನಕ್ಕೆ ಬಂದು ಕುಳಿತರು. ಇಷ್ಟೊಂದು ಜನರನ್ನು ನೋಡಿ ಶಾಸ್ತ್ರೀಯ ಮನಸ್ಸು ಬಹಳ ಖಿನ್ನವಾಗುವಂಥಾದ್ದಾಯಿತು. ಎರಡು ಸಾವಿರ ಜನರ ಸಲುವಾಗಿ ಅನ್ನ ಸಂಗ್ರಹವು ಉಳಿದಿತ್ತು. ಅಧಿಕ ಅನ್ನವನ್ನು
ಕೂಡಲೇ ತಯಾರಿಸಲಿಕ್ಕೆ ಸಾಧ್ಯವೇ ಇದ್ದಿಲ್ಲ. ಈಗ ಏನು ಮಾಡಬೇಕೆಂಬುವ ವಿಚಾರವು ಸೂಚಿಸದೆ, ಶಾಸ್ತ್ರಿಯು -'ಹೇ ಸದ್ಗುರುರಾಯನೇ ನಿನ್ನ ಕಾರ್ಯವನ್ನು ನೀನೇ ಸಂಭಾಳಿಸು' ಎಂದು ಹೇಳಿ, ಸಿದ್ದ ಸದ್ಗುರುಗಳನ್ನು ಕರೆದುಕೊಂಡು ಪಾಕಶಾಲೆಯೊಳಗೆ ಹೋದನು. ಇಲ್ಲಿ ಸದ್ಗುರುನಾಥನು ಏನು ಮಾಡಿದರೆಂದರೆ - ಸರ್ವ ಸಾಹಿತ್ಯವನ್ನು ಕೃಪಾದೃಷ್ಟಿಯಿಂದ
ನೋಡುವಂಥವನಾದನು, ಮತ್ತು - “ನೀಡಲಿಕ್ಕೆ ಬೇಗನೆ ಆರಂಭಮಾಡಿರಿ. ಯಾರೂ ಚಿಂತೆ ಮಾಡಬೇಡಿರೀ. ಸದ್ಗುರು ಸಮರ್ಥನನ್ನು ಹೃದಯದಲ್ಲಿ ಚಿಂತಿಸುವವರಾಗಿರಿ,'' ಎಂದು ನುಡಿದದ್ದು ಕೇಳಿ, ಶಾಸ್ತ್ರಿಗೆ ಬಹಳ ಆನಂದವಾಗಿ, - '' ಸದ್ಗುರುವೇ ಎಲ್ಲಾ ಭಾರವನ್ನು ವಹಿಸಿಕೊಂಡು ನನ್ನ ಹೃತ್ತಾಪವನ್ನು ನಿರಸನ ಮಾಡಿದನು. ಸಹಾಯಕನಾಗಿ ಸದ್ಗುರುನಾಥನು ಬಂದನು. ಬಡಿಸಲಿಕ್ಕೆ ಇನ್ನು ಬೇಗ ಬೇಗನೆ ತಕ್ಕೊಳ್ಳಿರಿ'' ಎಂದು ಅಂದನು. ನೀಡಲಿಕ್ಕೆ ಆರಂಭಿಸಿ, ಕುಳಿತವರೆಲ್ಲರಿಗೂ ಯಥೇಷ್ಟ ಭೋಜನವನ್ನು ನೀಡಿದರು. ಪುನಃ ಅನ್ನಾದಿ ಪದಾರ್ಥಗಳನ್ನು ಬಡಿಸಲಿಕ್ಕೆ ಒಯ್ದರು. ಅಷ್ಟು ಜನರು ಊಟಮಾಡಿ ಎದ್ದರೂ, ಅನ್ನ ಸಂಗ್ರಹವು ಇನ್ನೂ ಉಳಿದಿತ್ತು. ನೀಡುವವರ ಭೋಜನವಾದ ನಂತರ ಎಲ್ಲ ಪದಾರ್ಥಗಳು ತೀರಿದವು. ಈ ಅದ್ಭುತವಾದ ಚಮತ್ಕಾರವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಶಾಸ್ತ್ರಿಗೆ ಅತ್ಯಂತ ಆನಂದವಾಗಿ, ಯಾವಾತನ ಕೃಪೆಯಿರುವದರಿಂದ ಭಕ್ತರೆಲ್ಲರೂ ನಿಶ್ಚಿಂತರಾಗಿರುವರೋ, ಆ ಸದ್ಗುರುವನ್ನು ಸ್ತುತಿಸುವಂಥವರಾದರು. ಅನಂತರ ಸದ್ಗುರುಗಳು ಸಿದ್ಧಾಶ್ರಮಕ್ಕೆ ಹೋದರು. ಭಕ್ತರೆಲ್ಲರೂ ತಮ್ಮ ತಮ್ಮ ಗೃಹಕ್ಕೆ ಹೋಗವಂಥವರಾದರು.
ಇರಲಿ, ಲೋಕೋದ್ಧಾರ ಕರ್ತವ್ಯಗಳು ಏನೇನು ಮಾಡತಕ್ಕವವೆ, ಎಂದು ತಮ್ಮಣ್ಣ ಶಾಸ್ತಿಯು ಚಿಂತಿಸುತ್ತಿರುವನು. ಒಂದಾನೊಂದು ದಿವಸ ಸಿದ್ಧಾರೂಡರ ಬಳಿಗೆ ಬಂದು, - "ಸದ್ಗುರುನಾಥನೇ ನನ್ನ ಬುದ್ಧಿಗೆ ಒಂದು ಯುಕ್ತಿ ಸೂಚಿಸಿಯದೆ. ಅನೇಕರಿಗೆ ನಾಮಸ್ಮರಣೆ ಮಾಡಲಿಕ್ಕೆ ಹಚ್ಚುವದೇ ಅದರ ಉದ್ದೇಶವಾಗಿರುತ್ತದೆ. ಹದಿಮೂರು ಕೋಟಿ ನಾಮ ಜಪ ನಡೆಯುವ ಸಂಕಲ್ಪ ಮಾಡಿ, ಪ್ರತಿ ಒಬ್ಬ ಭಕ್ತರು ಸ್ವಲ್ಪ ಸ್ವಲ್ಪ ಮಾಡುತ್ತ ನಡೆದರೆ ಎಲ್ಲರದೂ ಕೂಡಿ ವರ್ಷಾಂತ್ಯದಲ್ಲಿ
ಸಂಖ್ಯೆ ಪೂರ್ಣವಾದೀತು,'' ಎಂದು ಹೇಳಿದ ಲೋಕೋದ್ಧಾರಕ ಉಪಾಯವನ್ನು ಕೇಳಿ, ಸದ್ಗುರುನಾಥನಿಗೆ ಆನಂದವಾಯಿತು.
ಆಗ ಸಿದ್ಧರ ಆಜ್ಞೆಯನ್ನು ಪಡೆದುಕೊಂಡು ಶಾಸ್ತ್ರಿಯು ತಮ್ಮಲ್ಲಿ ಶ್ರವಣಕ್ಕೆ ಬರುವ ಸದ್ಭಕ್ತರನ್ನು ಕುರಿತು, - ತ್ರಯೋದಶಾಕ್ಷರೀ ತಾರಕ ಮಂತ್ರವನ್ನು ನಿತ್ಯದಲ್ಲಿಯೂ ಶಕ್ತ್ಯಾನುಸಾರ ಜಪಿಸಿ, ಪ್ರತಿ ಒಬ್ಬರ ಸಂಖ್ಯೆಯನ್ನು ಹಚ್ಚಿಕೊಂಡು ಎಲ್ಲರದೂ ಕೂಡಿ, ಹದಿಮೂರು ಕೋಟಿ ಮಾಡಬೇಕು,'' ಎಂದು ಹೇಳಿದ್ದು ಕೇಳಿ, ಭಕ್ತರೆಲ್ಲರು ತಮ್ಮ ತಮ್ಮ ಹೆಸರುಗಳನ್ನು ಕೊಟ್ಟರೂ. ಶಾಸ್ತ್ರಿಯು ಅವನ್ನು ಬರೆದುಕೊಂಡನು. ಪ್ರತಿದಿನ ಬೆಳಿಗ್ಗೆ ಬಂದು ಪೂರ್ವ ದಿವಸದ ಜಪಸಂಖೆಯನ್ನು ಶಾಸ್ತ್ರಿಗೆ ನಿವೇದಿಸುವರು. ಅತ್ಯಾದರದಿಂದ ಪ್ರತಿ ಒಬ್ಬ ಭಕ್ತನು ಮಾಲೆಯನ್ನು ಕೈಯಲ್ಲಿ ಧರಿಸಿ, ಜಪವನ್ನು ಮಾಡುತ್ತಿದ್ದನು. ವೇಳೆ ವ್ಯರ್ಥವಾಗಿ ಕಳೆಯದೆ, ಸರ್ವರೂ ದಿನೇ ದಿನೇ ಸಂಖ್ಯೆಯನ್ನು ಬೆಳೆಸುತ್ತಾ ನಡೆಯುವರು. ಎಲ್ಲರ ಸಂಖ್ಯೆಯನ್ನು
ಕೂಡಿಸಿ, ನೋಡಿದಾಗ, ಆರು ತಿಂಗಳೊಳಗೆ ಹದಿಮೂರು ಕೋಟಿ ಸಂಖ್ಯಾ ಪೂರ್ಣವಾಯಿತು. ಆದರೂ ಜಪ ಮಾಡುವವರು ಯಾರು ಬಿಡಲಿಲ್ಲ. ಪುನಃ ಹದಿಮೂರು ಕೋಟಿ ಜಪದ ಸಂಕಲ್ಪ ಮಾಡಿ ಜಪವನ್ನು ನಡಿಸಿದರು. ಎಲ್ಲಾ ಜನರೊಳಗೆ
ಜಪ ಮಾಡುವ ಪ್ರೇಮವು ಅನುಪಮವಾಗಿ ಬೆಳೆಯುತ್ತಾ ನಡೆಯಿತು. ಸ್ತ್ರೀ, ಪುರುಷ, ಬಾಲಕರ ಕೈಯಲ್ಲಿ ಎಲ್ಲಿ ನೋಡಿದರೂ ಮಾಲೆಯು ಶೋಭಿಸುವದು, ಕಾಲವನ್ನು ವ್ಯರ್ಥವಾಗಿ ಹಾಳುಮಾಡಿದೆ ಕೇವಲ ಮಂತ್ರವನ್ನೇ ಜಪಿಸುತ್ತಿರುವನು. ಎಲ್ಲರಿಗೂ ಈ ಪರಿಪಾಠ ಹತ್ತಿತು. ಅತ್ಯಾನಂದದಿಂದ ಸ್ಪಷ್ಟವಾಗಿ ನಾಮ ಜಪಿಸುವರು. ಈ ಪ್ರಕಾರ ಜನರೊಳಗೆ ನಾಮ ಸ್ಮರಣೆಯಲ್ಲಿ ಉತ್ಕಟ ಪ್ರೇಮವು ಉಂಟಾಯಿತು.
ಈ ರೀತಿಯಿಂದ ತಮ್ಮಣ್ಣ ಶಾಸ್ತ್ರಿಯು ಲೋಕೋದ್ಧಾರ ಕಾರ್ಯವನ್ನು ಮಾಡುತ್ತಿರುವಾಗ ಸಿದ್ಧ ಕೃಪೆಯಿಂದ ನಡಿಯುತ್ತದೆಂತ ಹೇಳಿ ತಾನೂ ಯಾವದರದು ಅಭಿಮಾನವನ್ನು ಪಡಲಿಲ್ಲ. ಸಿದ್ಧ ಸದ್ಗುರುಗಳ ಮೇಲೆ ಅದ್ಭುತ ಪ್ರೇಮವನ್ನು ತಾನೇ ಪ್ರಕಟಮಾಡಿ, ಲೋಕಕ್ಕೆ ಉಪದೇಶಿಸುವನು. ಆತನ ಪುರಾಣ ಶ್ರವಣಕ್ಕೆ ಅಸಂಖ್ಯ ;
ಭಕ್ತರು ಪ್ರೇಮದಿಂದ ಬರುತ್ತಾರೆ. ಸದ್ಗುರುರಾಜನು ಪ್ರೇಮಸಾಗರನಿದ್ದು, ಆತನಲ್ಲಿ ಭಕ್ತರೆಂಬ ಅಪಾರ ರತ್ನಗಳಿರುವವು. ಒಂದರಕ್ಕಿಂತ ಒಂದು ಸ್ವತೇಜದಿಂದ ಸುಂದರ ಆಗಿದ್ದು, ಸದ್ಗುರುವರನು ಇವನ್ನು ರಕ್ಷಿಸುವನು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ನಾರಾಯಣನ ಮಗಳಾದ ಚಂಪೂಬಾಯಿಯ ಜ್ವರವನ್ನು ಸದ್ಗುರುಗಳು ಗುಣಪಡಿಸಿ ನಿಚ್ಚಯ ಮಾಡಿದ ವರನ ಜೊತೆ ಲಗ್ನ ಮಾಡಿಸಿದ್ದರು.
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
